Sunday, September 8, 2024

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಮನ್ಮಹಾರಥೋತ್ಸವ ಸಂಪನ್ನ

ಕೊಲ್ಲೂರು: ಪುರಾಣ ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಮನ್ಮಹಾರಥೋತ್ಸವ ಮಾರ್ಚ್ 25 ಶುಕ್ರವಾರ ಸಂಭ್ರಮದಿಂದ ಜರುಗಿತು.

ಕ್ಷೇತ್ರದ ಅಧಿದೇವತೆಯಾದ ಶ್ರೀ ಮೂಕಾಂಬಿಕೆಯ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಮಾರ್ಚ್ 18 ರಂದು ಧ್ವಜಾರೋಹಣದೊಂದಿಗೆ ಚಾಲನೆ ನೀಡಲಾಗಿತ್ತು. ರಥೋತ್ಸವದ ಪ್ರಯುಕ್ತ ಊರಿನ ಅಂಗಡಿ ಮುಂಗಟ್ಟು, ಮನೆ, ಬೀದಿಗಳನ್ನು ವಿಶೇಷವಾದ ವಿದ್ಯುದ್ದೀಪಗಳಿಂದ ಅಲಂಕರಿಸಿದ್ದರು.ಬೆಳಿಗ್ಗೆ ನಡೆದ ರಥಾರೋಹಣ ಹಾಗೂ ಸಂಜೆ ನಡೆದ ಮನ್ಮಹಾರಥೋತ್ಸವದ ಸಂದರ್ಭದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಊರ, ಪರವೂರಿನ ಹಾಗೂ ಅನ್ಯರಾಜ್ಯದ ಭಕ್ತರು ಜಮಾಯಿಸಿದ್ದರು. ದೇವಳದಲ್ಲಿ ಬೆಳಿಗ್ಗೆನಿಂದಲೇ ಅಪಾರ ಭಕ್ತರು ನೆರೆದಿದ್ದು, ಶ್ರೀ ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು.ಬೆಳಿಗ್ಗೆ ೯:೩೦ಕ್ಕೆ ದೇಗುಲದ ಅರ್ಚಕ ರಾಮಚಂದ್ರ ಅಡಿಗರ ನೇತೃತ್ವದಲ್ಲಿ ಮುಹೂರ್ತ ಮಂಗಳಾರತಿ, ಪಂಚಾಮೃತ ಅಭಿಷೇಕ, ಕ್ಷಿಪ್ರಬಲಿ, ವಿಶೇಷ ಭೂತಬಲಿ ನಂತರದಲ್ಲಿ ದೇವರನ್ನು ದೇವಳದ ಹೊರತಂದು ಬಲಿ ಉತ್ಸವ, ಬಳಿಕ ೧೧:೫೦ಕ್ಕೆ ಮಿಥುನ ಲಗ್ನದಲ್ಲಿ ರಥಾರೋಹಣ ಧಾರ್ಮಿಕ ವಿಧಿವಿಧಾನ ನಡೆಯಿತು. ಮಧ್ಯಾಹ್ನ ದೇವಳದ ಭೋಜನಾಲದಲ್ಲಿ ವಿವಿಧ ಭಾಗಗಳಿಂದ ಕ್ಷೇತ್ರಕ್ಕೆ ಆಗಮಿಸಿದ ಸಹಸ್ರಾರು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.ದೇವರಿಗೆ ಹರಕೆ ರೂಪದಲ್ಲಿ ಬಂದ ಸೀರೆಯನ್ನು ಮಹಿಳೆಯರು ಪ್ರಸಾದ ರೂಪದಲ್ಲಿ ಖರೀದಿಸಿದರು. ಸಂಜೆ ೫:೦೦ ಗಂಟೆಗೆ ನಡೆದ ಮನ್ಮಹಾರಥೋತ್ಸವ ಸಂದರ್ಭದಲ್ಲಿ ವಿಶೇಷ ಆಕರ್ಷಣೆಯಾಗಿ ತಟ್ಟಿರಾಯ ಕುಣಿತ, ಡೋಲು ವಾದನಗಳು, ವಾದ್ಯಘೋಷಗಳು ನೆರೆದ ಅನೇಕರನ್ನು ರಂಜಿಸಿತು. ವಾರ್ಷಿಕ ಉತ್ಸವದ ಪ್ರಯುಕ್ತ ಕಳೆದ ಒಂದು ವಾರದಿಂದ ರಾಜ್ಯ-ಹೊರ ರಾಜ್ಯದ ಕಲಾವಿದರಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

ರಥೋತ್ಸವದಲ್ಲಿ ಬೈಂದೂರು ಕ್ಷೇತ್ರದ ಶಾಸಕರಾದ ಬಿ.ಎಮ್ ಸುಕುಮಾರ್ ಶೆಟ್ಟಿ, ಮಾಜಿ ಶಾಸಕರಾದ ಕೆ.ಗೋಪಾಲ ಪೂಜಾರಿ, ದೇವಳದ ಕಾರ್ಯನಿರ್ವಹಣಾಧಿಕಾರಿ ಎಸ್.ಪಿ.ಬಿ ಮಹೇಶ್, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಗೋವಿಂದ ನಾಯ್ಕ್, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಕೆರಾಡಿ ಚಂದ್ರಶೇಖರ್ ಶೆಟ್ಟಿ, ಸಮಿತಿಯ ಸದಸ್ಯರಾದ ರತ್ನ ರಮೇಶ್ ಕುಂದರ್, ಸಂಧ್ಯಾ ರಮೇಶ್, ಗಣೇಶ್ ಕಿಣಿ, ಶೇಖರ್ ಪೂಜಾರಿ, ಅತುಲ್ ಕುಮಾರ್ ಶೆಟ್ಟಿ, ಗೋಪಾಲಕೃಷ್ಣ ನಾಡ, ಜಯಾನಂದ ಹೋಬಳಿದಾರ್, ಕೊಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಂತೋಷ್ ಭಟ್ , ಮಾಜಿ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ರಮೇಶ ಗಾಣಿಗ, ವಂಡಬಳ್ಳಿ ಜಯರಾಮ ಶೆಟ್ಟಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಶಂಕರ್ ಪೂಜಾರಿ, ತಾಲೂಕು ಪಂಚಾಯತ್ ಮಾಜಿ ಸದಸ್ಯೆ ಗ್ರೀಷ್ಮಾ ಗಿರಿಧರ ಭಿಡೆ ಉಪಸ್ಥಿತರಿದ್ದರು.
ಜಾತ್ರಾ ಮಹೋತ್ಸವದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಕುಂದಾಪುರ ಡಿವೈ‌ಎಸ್ಪಿ ಕೆ.ಶ್ರೀಕಾಂತ್ ನೇತ್ರತ್ವದಲ್ಲಿ, ಬೈಂದೂರು ವ್ರತ್ತನಿರೀಕ್ಷಕ ಸಂತೋಷ್ ಕಾಯ್ಕಿಣಿ ಅವರ ಮಾರ್ಗದರ್ಶನದಲ್ಲಿ ಕೊಲ್ಲೂರು ಠಾಣೆಯ ಉಪನಿರೀಕ್ಷಕ ಈರಣ್ಣ ಸಿರಗುಂಪಿ ಅವರು ಬಂದೋಬಸ್ತ್ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!