spot_img
Wednesday, January 22, 2025
spot_img

ಗ್ರಾಮ ಪಂಚಾಯಿತಿ ಅನುದಾನ ಬಳಕೆ ನಿರ್ಬಂಧ ಸಡಿಲಿಸಲು ಆಗ್ರಹ


ಕುಂದಾಪುರ: ಗ್ರಾಮ ಪಂಚಾಯಿತಿಗಳಿಗೆ ಕೇಂದ್ರದ 15ನೆ ಹಣಕಾಸು ಆಯೋಗ ನಿಗದಿಗೊಳಿಸಿದ ಅನುದಾನ ವೆಚ್ಚಕ್ಕೆ ವಿಧಿಸಿದ ನಿರ್ಬಂಧಗಳು ಈ ಅನುದಾನವನ್ನು ಗ್ರಾಮದ ಅಗತ್ಯಗಳಿಗೆ ವೆಚ್ಚಮಾಡಲು ತಡೆಯಾಗುವುದರಿಂದ ಅವುಗಳನ್ನು ಸಡಿಲಿಸಬೇಕು ಎಂದು ಶಿರೂರು ಗ್ರಾಮ ಪಂಚಾಯಿತಿ ಸದಸ್ಯ ನಾಗೇಶ ಅಳ್ವೆಗದ್ದೆ ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.


ಇದು ಗ್ರಾಮ ಪಂಚಾಯಿತಿಗಳ ಜನಸಂಖ್ಯೆ ಆಧರಿಸಿ ನಿಗದಿಯಾಗುವ ದೊಡ್ಡ ಮೊತ್ತದ ಅನುದಾನ. ಈ ಬಾರಿಯ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಇದರ ಶೇ 40 ಅನಿರ್ಬಂಧಿತ ಮತ್ತು ಶೇ 60 ನಿರ್ಬಂಧಿತ ಅನುದಾನ. ನಿರ್ಬಂಧಿತ ಅನುದಾನದ ಶೇ 30ಕುಡಿಯುವ ನೀರು, ಶೇ 30 ನೈರ್ಮಲ್ಯ ಹಾಗೂ ತ್ಯಾಜ್ಯ ನಿರ್ವಹಣೆ ಹೊರತಾಗಿ ಅನ್ಯ ಉದ್ದೇಶಗಳಿಗೆ ವೆಚ್ಚಮಾಡುವಂತಿಲ್ಲ. ಶೇ 40ರ ಅನಿರ್ಬಂಧಿತ ಭಾಗವನ್ನು ಅಗತ್ಯ ಅಭಿವೃದ್ಧಿ ಕಾರ್ಯಗಳಿಗೆ ಬಳಸಬಹುದಾದರೂ ಅದರಲ್ಲಿ ಶೇ 25 ಪರಿಶಿಷ್ಟ ಜಾತಿ, ಪಂಗಡದ ಮೂಲ ಸೌಕರ್ಯ ಅಭಿವೃದ್ಧಿಗೆ ಮೀಸಲಿಡಬೇಕು. ರೂ 50 ಲಕ್ಷ ಅನುದಾನ ಪಡೆಯುವ ಗ್ರಾಮ ಪಂಚಾಯಿತಿ ರೂ 15 ಲಕ್ಷವನ್ನು ಮಾತ್ರ ಗ್ರಾಮದ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ನಿರ್ವಹಣೆಗೆ ಬಳಸಬಹುದು. ಇದು ಯಾತಕ್ಕೂ ಸಾಲುವುದಿಲ್ಲ ಎಂದು ಅವರು ಹೇಳುತ್ತಾರೆ.


ಇನ್ನು ಶೇ 60 ದೊಡ್ಡ ಮೊತ್ತ ಆಗುವುದರಿಂದ ಅದನ್ನು ಕೇವಲ ನೀರು, ನೈರ್ಮಲ್ಯಕ್ಕಷ್ಟೆ ವೆಚ್ಚಮಾಡಲು ಸಾಧ್ಯವಿಲ್ಲ. ಕರಾವಳಿ ಜಿಲ್ಲೆಗಳ ಹಲವು ಪಂಚಾಯಿತಿಗಳು ಈಗಾಗಲೇ ಘನದ್ರವ ತ್ಯಾಜ್ಯ ನಿರ್ವಹಣಾ ಘಟಕಗಳನ್ನು ಸ್ಥಾಪಿಸಿಕೊಂಡು ಅವುಗಳದೇ ಆದಾಯದಲ್ಲಿ ನಿರ್ವಹಿಸುತ್ತಿವೆ. ಕುಡಿಯುವ ನೀರಿಗೆ ಜಲಜೀವನ ಮಿಶನ್ ಮತ್ತು ವಾರಾಹಿ ಮೂಲದ ಯೋಜನೆ ಅನುಷ್ಠಾನವಾಗುತ್ತಿದೆ. ಈ ನಿರ್ಬಂಧದ ಪರಿಣಾಮವಾಗಿ ಅಂತಹ ಪಂಚಾಯಿತಿಗಳಲ್ಲಿ ಅನುದಾನ ಬಳಕೆಯಾಗದೆ ಹಿಂತಿರುಗಿಸಬೇಕಾದ ಅನಿವಾರ್ಯತೆ ಎದುರಾಗಲಿದೆ ಎಂದು ಅವರು ಅತಂಕಿತರಾಗಿದ್ದಾರೆ. ಹಾಗಾಗಿ ಬಳಕೆಯ ಮಾರ್ಗದರ್ಶಿ ಸೂತ್ರಗಳನ್ನು ಬದಲಿಸಿ ಬಂದ ಹಣವನ್ನು ಗ್ರಾಮದ ಅಭಿವೃದ್ಧಿಗೆ ಪೂರಕವಾಗುವಂತೆ ಬಳಸಲು ಅವಕಾಶ ಕಲ್ಪಿಸಬೇಕು. ಹಿಂದೆ ಹೀಗೆ ಬದಲಿಸಿದ ನಿದರ್ಶನಗಳಿವೆ. ಈ ನಿಟ್ಟಿನಲ್ಲಿ ಜಿಲ್ಲೆಯ ಸಚಿವರು, ಸಂಸದರು, ಶಾಸಕರು, ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಒಕ್ಕೂಟ ಗಂಭೀರ ಚಿಂತನೆ ನಡೆಸಿ ಬದಲಾವಣೆ ಆಗುವಂತೆ ನೋಡಿಕೊಳ್ಳಬೇಕು ಎಂದು ವಿನಂತಿಸಿದ್ದಾರೆ.


ಅನುದಾನ ಬಳಕೆಯ ಸೂತ್ರಗಳು ಬದಲಾಗಬೇಕು
ಇದರ ಕುರಿತು ಪ್ರತಿಕ್ರಿಯಿಸಿದ ತಾಲ್ಲೂಕು ಪಂಚಾಯತ್ ರಾಜ್ ಒಕ್ಕೂಟದ ಅಧ್ಯಕ್ಷ ಕೆ. ಉದಯಕುಮಾರ ಶೆಟ್ಟಿ, ಅನುದಾನ ಬಳಕೆಯ ಸೂತ್ರಗಳು ಪ್ರಾದೇಶಿಕ ಅಗತ್ಯಗಳಿಗೆ ಅನುಗುಣವಾಗಿ ಬದಲಾಗಬೇಕು. ಈ ನಿಟ್ಟಿನಲ್ಲಿ ಒಕ್ಕೂಟ ಪ್ರಯತ್ನಿಸಲಿದೆ ಎಂದಿದ್ದಾರೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!