Sunday, September 8, 2024

ಕುಂದಗನ್ನಡದ ಹಾಸ್ಯ ಪ್ರತಿಭೆ ಮಂಜುನಾಥ್ ಕುಂದೇಶ್ವರ್


ಕುಂದಾಪುರ: ಕನ್ನಡ ಭಾಷೆಯ ಸಂಕ್ಷೀಪ್ತೀಕರಣ ಮತ್ತು ಅದರಲ್ಲಿರುವ ಆಪ್ತ ಭಾವ ಸಂವೇದನೆಯಿಂದಲೇ ಕುಂದಾಪ್ರ ಕನ್ನಡ ಪ್ರಾದೇಶಿಕ ಭಾಷೆಗಳಲ್ಲಿಯೇ ವಿಶಿಷ್ಠ ಸ್ಥಾನ ಪಡೆದಿದೆ. ಕುಂದಾಪ್ರ ಕನ್ನಡ ಇವತ್ತಿನ ಆಧುನೀಕೃತ ದಿನಗಳಲ್ಲಿಯೂ ಕೂಡಾ ತನ್ನ ಮಾನ್ಯತೆ ಉಳಿಸಿಕೊಂಡಿದೆ. ಕುಂದಾಪ್ರ ಕನ್ನಡ ಕಿವಿಗಿಂಪು. ಭಾಷೆಯನ್ನು ಬಳಸುವಲ್ಲಿ ದೊರೆಯುವ ಹಿತವಾದ ಅನುಭೂತಿ ಮನಸ್ಸನ್ನು ಪ್ರಪುಲ್ಲಗೊಳಿಸುತ್ತದೆ. ಇಲ್ಲಿ ಹಾಸ್ಯಾಭಿವ್ಯಕ್ತಿ ಶುದ್ದ ಹಾಸ್ಯದ ಶ್ರೇಷ್ಠ ಪರಂಪರೆಯನ್ನು ಎತ್ತಿ ಹಿಡಿಯುತ್ತದೆ.ಭಾಷೆಯ ಬಳಕೆಯಲ್ಲಿ ಪ್ರಕಟವಾಗುವ ಭಾವಸಂವೇದನೆ, ಅನುಭೂತಿ ಬಹುಬೇಗ ಮನಸನ್ನು ತಟ್ಟುತ್ತದೆ. ಕುಂದಾಪ್ರ ಭಾಷೆ ಇವತ್ತು ಜಾಗತಿಕವಾಗಿ ಕಂಪು ಮೂಡಿಸುತ್ತಿದೆ. ಆಟಿ ಅಮಾವಾಸ್ಯೆಯಂದು ವಿಶ್ವ ಕುಂದಾಪ್ರ ಕನ್ನಡ ದಿನವನ್ನಾಗಿ ಕೂಡಾ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಭಾಷೆಯನ್ನು ಸಾಂಸ್ಕೃತಿಕ ಪಸರಿಸುವಲ್ಲಿ ಸಾಕಷ್ಟು ಮಂದಿ ಶ್ರಮಸಿದ್ದಾರೆ. ಸಾಂಸ್ಕೃತಿಕ, ಸಾಹಿತ್ಯಿಕ, ಕಲೆಯ ಮೂಲಕ ಭಾಷೆಯ ಕಂಪು-ಪೆಂಪನ್ನು ಪಸರಿಸದ ಹಲವು ಮಹನೀಯರ ಪೈಕಿ ದಶಕಗಳ ಹಿಂದೆಯೇ ಕಿರುತೆರೆಯ ಮೇಲೆ ಸರಣಿ ಕಾರ್ಯಕ್ರಮವಾಗಿ ಒಂದು ಪಾತ್ರರೂಪಿಸಿ, ಅದನ್ನು ಪ್ರದೇಶ, ಕಸುಬು, ಸನ್ನಿವೇಶಕ್ಕನುಗುಣವಾಗಿ ಅಭಿನಯಿಸಿ ಜನಪ್ರಿಯವಾದ ಮಂಜುನಾಥ ಕುಂದೇಶ್ವರ್ ಅವರೂ ಒಬ್ಬರು.


ಕುಂದಾಪ್ರ ಕನ್ನಡದ ಲಕ್ಷಾಂತರ ಶಬ್ದಗಳು ಮಂಜುನಾಥರ ನಾಲಿಗೆಯಲ್ಲಿ ನಲಿದಿದೆ. ಕಾಲಗರ್ಭ ಸೇರಿದ ಕುಂದಗನ್ನಡದ ನಾಣ್ಣುಡಿ, ನುಡಿಗಟ್ಟು, ಗಾದೆ, ಒಗಟು, ಬೈಗುಳ ಪದಗಳು ಮಂಜುನಾಥರು ಹುಡುಕಿ ಹುಡುಕಿ ಅಭಿವ್ಯಕ್ತಿ ಪಡಿಸಿದ್ದಾರೆ. ಗ್ರಾಮ್ಯ ಭಾಷೆ ಸಂಸ್ಕೃತಿಯ ಸೊಗಡನ್ನು ಯಥಾವತ್ತು ಪರಿಣಾಮಕಾರಿಯಾಗಿ ಟಿವಿ ತೆರೆಯ ಮೇಲೆ ಮಂಡಿಸಿದ ಸಾಧಕ ಇವರು. 2006ರಿಂದ ನಮ್ಮ ಟಿವಿಯಲ್ಲಿ ಕುಂದಾಪ್ರ ಕನ್ನಡದ ಹಾಸ್ಯಾಭಿಯಾನ ಆರಂಭಿಸಿದ ಅವರು ಈ ತನಕ 850ಕ್ಕೂ ಹೆಚ್ಚು ಎಪಿಸೋಡ್ ನೀಡಿದ್ದಾರೆ. ಸಂದರ್ಭಕ್ಕೆ ತಕ್ಕಂತೆ ವೇಷ ಮಾಡಿದ್ದಾರೆ. ಅಷ್ಟಕ್ಕೆ ಅವರ ಪ್ರತಿಭೆ ಉಳಿಯಲಿಲ್ಲ. ಸ್ವರಾನುಕರಣೆಯಲ್ಲಿಯೂ ಸಿದ್ಧಿತ್ವ ಪಡೆದ ಅವರು ರಾಜಕಾರಣಿಗಳು, ಸಾಹಿತಿಗಳು, ಚಿತ್ರನಟರು ಸೇರಿದಂತೆ ಖ್ಯಾತನಾಮರ ಸ್ವರಾನುಕರಣೆ ಮಾಡುವ ಮೂಲಕ 1000ಕ್ಕೂ ಹೆಚ್ಚು ಸ್ಟೇಜ್ ಕಾರ್ಯಕ್ರಮ ನೀಡಿದ್ದಾರೆ.


ಭಾಷಾ ಬಳಕೆ ಹಾಗೂ ಭಾವಸ್ಪುರಣ ಇವರ ವಿಶಿಷ್ಠತೆ. ಒಂದು ಪಾತ್ರ ಸಚೇತನತೆ ಕಾಣಬೇಕಿದ್ದರೆ ಭಾವನೆಗಳು ಅಷ್ಟೇ ಪರಿಣಾಮಕಾರಿಯಾಗಿರಬೇಕು. ತೆಂಗಿನ ಕಾಯಿ ಕೀಳುವ ಗ್ರಾಮೀಣ ಕಾರ್ಮಿಕನ ಪಾತ್ರ ಮಾಡಬೇಕಿದ್ದರೆ ಆ ಬಗ್ಗೆ ಒಂದಿಷ್ಟು ಅಧ್ಯಯನ ಮಾಡಿ ತೆಂಗಿನ ಮರ ಏರುವಾಗ ಆತನ ಮುಖಾಭಿವ್ಯಕ್ತಿ, ಸ್ವರ ಪ್ರಕಟ, ನಿಲುವುಗಳು ಹೇಗಿರುತ್ತದೆ ಎನ್ನುವುದನ್ನು ತಿಳಿದುಕೊಳ್ಳಬೇಕಾಗುತ್ತದೆ. ಅದನ್ನು ಮಂಜುನಾಥ ಕುಂದೇಶ್ವರ ಮಾಡುತ್ತಾರೆ.


ಕುಂದಾಪುರದ ಕುಂದೇಶ್ವರ ಸಮೀಪದ ಲಲಿತಾ ಅಣ್ಣಪ್ಪಯ್ಯ ದಂಪತಿಗಳ ಪುತ್ರರಾಗಿ ಜನಿಸಿದ ಇವರು ಬಾಲ್ಯದಿಂದಲೇ ನಗಿಸುವ ಪ್ರವೃತ್ತಿಯವರು. ಸೈಂಟ್ ಮೇರೀಸ್ ಪ್ರೌಢಶಾಲೆಯಲ್ಲಿ ಓದುತ್ತಿರುವಾಗಲೆ ತನ್ನ ಗುರುಗಳ ಧ್ವನಿ ಅನುಕರಣೆ ಮಾಡುತ್ತಿದ್ದ ಇವರು ಪ್ರಥಮ ಬಾರಿಗೆ 2004ರಲ್ಲಿ ಕುಂದೇಶ್ವರ ಫ್ರೆಂಡ್ಸ್ ವೇದಿಕೆಯಲ್ಲಿ ಮೊದಲ ಕಾರ್ಯಕ್ರಮ ನೀಡಿದರು. ನಂತರ ಇವರು ಕಾಣಿಸಿಕೊಂಡಿದ್ದು ನಮ್ಮ ಟಿವಿಯ ‘ಹ್ವಾಯ್ ನಗ್ಬೇಕು ಮರಾಯ್ರೆ‘ ಕಾರ್ಯಕ್ರಮದಲ್ಲಿ. ಕುಂದಾಪ್ರ ಭಾಷೆಯನ್ನು ಆಧಾರವಾಗಿಟ್ಟುಕೊಂಡು ಅದಕ್ಕೆ ಸಹಜ ನಗೆಯ ಸರಕನ್ನು ಎರಕಹೊಯ್ದು ಜನರ ನಡುವೆ ಇರುವ ಸಹಜ ಸನ್ನಿವೇಶಗಳನ್ನೇ ರಸವತ್ತಾಗಿ ವೀಕ್ಷಕರ ಮುಂದಿಟ್ಟು ಜನಪ್ರಿಯರಾದರು.


ಕಾಮಿಡಿ ಸರ್ಕಸ್‍ನಂತಹ ಹಾಸ್ಯ ಸಂಜೆ, ವೇದಿಕೆ ಕಾರ್ಯಕ್ರಮಗಳ ಮೂಲಕ ಜೆಸಿ, ರೋಟರಿ, ಲಯನ್ಸ್, ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕಾರ್ಯಕ್ರಮಗಳಲ್ಲಿ ಕಾರ್ಯಕ್ರಮ ನೀಡುತ್ತಿದ್ದಾರೆ. ಇವರ ಪ್ರತಿಭಾಸಿರಿಗೆ 50ಕ್ಕೂ ಹೆಚ್ಚು ಕಡೆಗಳಲ್ಲಿ ಸನ್ಮಾನ ಸಂದಿದೆ. ನಮ್ಮ ಟಿ.ವಿಯ ಡಾ|ಶಿವಚರಣ್ ಅವರ ಸಹಕಾರದಿಂದ ‘ಪಲ್ಲಕ್ಕಿ’ ಕನ್ನಡ ಚಲನಚಿತ್ರದಲ್ಲಿಯೂ ಅಭಿನಯಿಸಿದರು. ಮಿಮಿಕ್ರಿ ಕಲಾವಿದರಾಗಿ ಮಿಂಚುವ ಇವರು, ನೃತ್ಯ ಹೆಜ್ಜೆಗಾರಿಕೆಗೂ ಸೈ.
ವಿಳಾಸ: ಮಂಜುನಾಥ್ ಕುಂದೇಶ್ವರ್, ಮಿಮಿಕ್ರಿ ಕಲಾವಿದರು, ಕುಂದಾಪುರ.
ಮೊ: 9880123809

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!