Sunday, September 8, 2024

ಒಲಿಂಪಿಕ್ಸ್ ಪದಕಗಳ ಇತಿಹಾಸ: ಆಲಿವ್ ಎಲೆಗಳ ಕಿರೀಟದಿಂದ ಚಿನ್ನದ ಪದಕದತ್ತ…


(ಲೇಖಕರು-ಎಸ್.ಜಗದೀಶಚಂದ್ರ ಅಂಚನ್ ಸೂಟರ್ ಪೇಟೆ)

‘ಒಲಿಂಪಿಕ್ಸ್‍ನಲ್ಲಿ ಭಾಗವಹಿಸುವುದು ಮುಖ್ಯವೇ ಹೊರತು ಪದಕ ಗೆಲ್ಲುವುದಲ್ಲ’ – ಇದು ಆಧುನಿಕ ಒಲಿಂಪಿಕ್ಸ್ ಜನಕ ಬ್ಯಾರನ್ ಪಿಯರಿ ಡಿ.ಕ್ಯುಬರ್ತಿ ಅವರ ಧ್ಯೇಯವಾಕ್ಯ. ಅಂದರೆ ಪದಕವೇ ಮುಖ್ಯವಲ್ಲ, ಎಲ್ಲರೂ ಈ ಮಹಾನ್ ಕ್ರೀಡಾಕೂಟದಲ್ಲಿ ಸಹೋದರತೆ ಮನೋಭಾವದಲ್ಲಿ ಭಾಗವಹಿಸು ವಂತಾಗಬೇಕು ಎನ್ನುವುದು ಕ್ಯುಬರ್ತಿ ಅವರ ಆಶಯವಾಗಿತ್ತು. ಹಾಗಾಗಿ ಒಲಿಂಪಿಕ್ಸ್ ಗೆ ಮಹಾಯುದ್ಧವನ್ನೇ ಮೆಟ್ಟಿ ನಿಲ್ಲುವ ಶಕ್ತಿ ಬಂತು. ಕ್ರೀಡಾಕೂಟ ಎಂದ ಮೇಲೆ ಪದಕ ಗೆಲ್ಲಲೇ ಬೇಕಲ್ಲವೇ..? ಅದರಲ್ಲೂ ಪ್ರತಿಯೊಬ್ಬ ಕ್ರೀಡಾಪಟು ತನ್ನ ಕ್ರೀಡಾ ಸಾಮರ್ಥ್ಯವನ್ನು ಪ್ರದರ್ಶಿಸಲು ಈ ಒಲಿಂಪಿಕ್ಸ್ ಕ್ರೀಡಾ ಸಮರವನ್ನುಎದುರು ನೋಡುತ್ತಾರೆ. ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆಲ್ಲುವುದು ಭಾಗವಹಿಸುವ ಆಟಗಾರರೆಲ್ಲರ ಕನಸು. ಏಕೆಂದರೆ ಈ ಒಲಿಂಪಿಕ್ಸ್ ಚಿನ್ನದ ಪದಕಕ್ಕೆ ಬೆಲೆ ಕಟ್ಟಲಾಗದು. ಒಲಿಂಪಿಕ್ಸ್ ಚಿನ್ನದ ಪದಕ ಗೆದ್ದವ ಕ್ರೀಡಾಜಗತ್ತಿನ ‘ ಹೀರೋ’ ಆಗಿ ಮೆರೆಯುತ್ತಾನೆ ಆದರೆ, ಪ್ರಾಚೀನ ಒಲಿಂಪಿಕ್ಸ್‍ನಲ್ಲಿ ಆಲಿವ್ ಎಲೆಗಳ ಕಿರೀಟ ಗೆದ್ದ ಕ್ರೀಡಾಪಟುಗಳ ಶಿರವನ್ನು ಅಲಂಕರಿಸುತ್ತಿತ್ತು. ಇದು ಅವರ ಸರ್ವಸ್ವವೂ ಆಗಿತ್ತು. ಆಧುನಿಕ ಒಲಿಂಪಿಕ್ಸ್ ನಲ್ಲಿ ಕ್ರೀಡಾಪಟುಗಳು ಚಿನ್ನ, ಬೆಳ್ಳಿ, ಕಂಚಿನ ಪದಕಗಳಿಗೆ ಕೊರಳೊಡ್ಡುತ್ತಾರೆ. ಇದು ಕ್ರೀಡಾಪಟುಗಳ ಆರ್ಥಿಕ ಭವಿಷ್ಯವನ್ನು ಭದ್ರ ಪಡಿಸುತ್ತಿದೆ. ಹಾಗಾಗಿ ಇಂದು ಕ್ಯುಬರ್ತಿ ಅವರ ಧ್ಯೇಯವಾಕ್ಯಕ್ಕೆ ಅರ್ಥ ಉಳಿದಿಲ್ಲ. ಇಂದು ‘ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲುವುದೇ ಮುಖ್ಯ’ ಎಂಬುದೇ ಧ್ಯೇಯವಾಕ್ಯವಾಗಿದೆ. 19ನೇ ಶತಮಾನದ ಕೊನೆಯಲ್ಲಿ ಆರಂಭವಾಗಿ ಈಗ 21ನೇ ಶತಮಾನದ ಆಧುನಿಕ ಒಲಿಂಪಿಕ್ಸ್ ಕ್ರೀಡೆಗಳ ಇತಿಹಾಸ ಒಂದು ದಿನದಲ್ಲಿ, ಒಂದು ತಿಂಗಳಲ್ಲಿ ಮುಗಿಯುವ ಕಥೆಯಲ್ಲ.

ಕಳೆದ 125 ವರ್ಷಗಳಿಂದ ಒಲಿಂಪಿಕ್ಸ್ ಜಾಗತಿಕ ಕ್ರೀಡಾಸಮರವಾಗಿ ಮುಂದುವರಿದಿದೆ. ಜುಲೈ-23ರಂದು ಆರಂಭಗೊಂಡಿರುವ ಟೋಕಿಯೋ ಒಲಿಂಪಿಕ್ಸ್‍ನಲ್ಲಿ ಕ್ರೀಡಾಪಟುಗಳಂತೂ ತಮ್ಮ ರಾಷ್ಟ್ರಗಳ ಭಿನ್ನಾಭಿಪ್ರಾಯಗಳನ್ನು ಮರೆತು ಪದಕಗಳಿಗೆ ಹೊರಾಡುತ್ತಿದ್ದಾರೆ. , ಈ ಮಹಾನ್ ಕ್ರೀಡಾಕೂಟ 17 ದಿನಗಳವರೆಗೆ ನಡೆಯುತ್ತಿರುವುದರಿಂದ ಸದ್ಯ ಪದಕದ ರೇಸ್ ನಲ್ಲಿ ಅಮೇರಿಕಾ, ಚೀನಾ ಹಾಗೂ ಆತಿಥೇಯ ಜಪಾನ್ ರಾಷ್ಟ್ರ ಗಳು ಮುಂಚೂಣಿಯಲ್ಲಿದೆ. ಭಾರತ ಏಕೈಕ ಬೆಳ್ಳಿ ಪದಕವನ್ನು ಗೆದ್ದಿರುವುದು ಇದುವರೆಗಿನ ಸಾಧನೆಯಾಗಿದೆ. ಒಲಿಂಪಿಕ್ಸ್‍ನಲ್ಲಿ ಪದಕ ಗೆಲ್ಲುವುದು ಸುಲಭದ ಮಾತಲ್ಲ. ಕಠಿಣ ಪರಿಶ್ರಮದ ಫಲದಿಂದಲೇ ಒಲಿಂಪಿಕ್ಸ್ ಪದಕ ಗೆಲ್ಲಲು ಸಾಧ್ಯ. ಅಂದಹಾಗೆ ಈ ಒಲಿಂಪಿಕ್ಸ್ ಪದಕ ಗೆಲುವಿನ ಇತಿಹಾಸದತ್ತ ಬೆಳಕು ಚೆಲ್ಲುವ ಪ್ರಯತ್ನವನ್ನು ಈ ಲೇಖನದಲ್ಲಿ ಮಾಡಲಾಗಿದೆ.

ಪ್ರಾಚೀನ ಒಲಿಂಪಿಕ್ಸ್‍ನ ಮೊಟ್ಟ ಮೊದಲ ಚಾಂಪಿಯನ್ ಎಂದು ದಾಖಲಾಗಿರುವ ಎಲಿಸ್ ನಗರದ ಕೊರಿಯೋಬಸ್ ಎಂಬವನಿಂದ ಹಿಡಿದು ಆಧುನಿಕ ಒಲಿಂಪಿಕ್ಸ್‍ನ ಸರ್ವಶ್ರೇಷ್ಠ ಕ್ರೀಡಾಪಟುಗಳಾದ ಕಾರ್ಲ್ ಲೂಯಿಸ್, ಉಸೇನ್ ಬೋಲ್ಟ್ ವರೆಗೆ ಗೆದ್ದವರು ಸಾವಿರಾರು ಮಂದಿ. ಸೋತವರು ಲಕ್ಷಾಂತರ ಮಂದಿ. ಪ್ರತಿಯೊಬ್ಬನದೂ ವೀರಗಾಥೆಯೇ. ವೃತ್ತಿಯಲ್ಲಿ ಆಡುಗೆಯವನಾದ ಕೊರಿಯೋಬಸ್ ಪ್ರಾಚೀನ ಒಲಿಂಪಿಕ್‍ನ ಮೊದಲ ವಿಜಯಿ. ‘ಫುಟ್ ರೇಸ್’ ಸ್ಪರ್ಧೆಯಲ್ಲಿ ವಿಜಯಿಯಾದ ಕೊರಿಯೋಬಸ್ ನಿಂದಲೇ ಒಲಿಂಪಿಕ್ಸ್ ವಿಜಯಿಗಳ ಶಕೆ ಆರಂಭವಾಯಿತು. ಆಗ ಗೆದ್ದವರಿಗೆ ಆಲಿವ್ ಎಲೆಗಳ ಕಿರೀಟ ಕೊಡುತ್ತಿದ್ದರಾದರೂ ನಂತರ ಅವರಿಗೆ ಎಲ್ಲ ರೀತಿಯ ರಾಜಮಾನ್ಯತೆ ದೊರೆಯುತ್ತಿತ್ತು. ಮೂರು ಸ್ಪರ್ಧೆಗಳಲ್ಲಿ ವಿಜೇತರಾದವರ ಪ್ರತಿಮೆಯನ್ನು ಅಂದು ಅನಾವರಣ ಗೊಳಿಸಲಾಗುತ್ತಿತ್ತು.

ಆಧುನಿಕ ಒಲಿಂಪಿಕ್ಸ್‍ನಲ್ಲಿ ಪದಕಗಳನ್ನು ಕೊಡಲಾರಂಭಿಸಿದ ನಂತರ ಪದಕ ವಿಜೇತರಿಗೆ ಬಹುಮಾನಗಳ ಜೊತೆ ಅಪಾರ ಹಣದ ಪ್ರಾಯೋಜಕತ್ವವೂ ಲಭಿಸುತ್ತಿದೆ. 1896ರಲ್ಲಿ ಅಥೆನ್ಸ್ ನಲ್ಲಿ ಜರುಗಿದ ಮೊದಲ ಆಧುನಿಕ ಒಲಿಂಪಿಕ್ಸ್ ನಲ್ಲಿ ಮೊದಲ ಸ್ಥಾನ ಪಡೆದವರಿಗೆ ಚಿನ್ನದ ಪದಕ ನೀಡಲು ಸಂಘಟಕರಿಗೆ ಸಾಧ್ಯವಾಗಲಿಲ್ಲ. ಅಂದು ಮೊದಲ ಸ್ಥಾನಿಗಳಿಗೆ ಬೆಳ್ಳಿಯ ಪದಕದ ಜೊತೆ ಆಲಿವ್ ಎಲೆಗಳ ಗುಚ್ಛವನ್ನು ಹಾಗೂ ದ್ವಿತೀಯ ಸ್ಥಾನಿಗೆ ಕಂಚಿನ ಪದಕದೊಂದಿಗೆ ಆಲಿವ್ ಎಲೆಗಳ ಗುಚ್ಛ ನೀಡಲಾಗಿದೆ. ಆದರೆ, 1900ರ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ವಿಜೇತರಿಗೆ ಪದಕಗಳ ಬದಲಾಗಿ ಖ್ಯಾತ ಚಿತ್ರ ಕಲಾವಿದರು ರಚಿಸಿದ ಚಿತ್ರ ಕಲಾಕೃತಿಗಳನ್ನು ನೀಡಲಾಗಿತ್ತು. 1904ರ ಸೈಂಟ್ ಲೂಯಿ ಒಲಿಂಪಿಕ್ಸ್‍ನಲ್ಲಿ ಮೊದಲ ಬಾರಿಗೆ ವಿಜೇತರಿಗೆ ಚಿನ್ನ, ಬೆಳ್ಳಿ, ಕಂಚಿನ ಪದಕ ನೀಡುವ ಪದ್ಧತಿ ಜ್ಯಾರಿಗೆ ಬಂತು.

ಹೀಗೆ ಆಲಿವ್ ಎಲೆಗಳ ಕಿರೀಟದಲ್ಲಿ ಒಲಿಂಪಿಕ್ಸ್ ವಿಜಯಿಗಳ ಗುರುತಿಸುವಿಕೆ ಪ್ರಾರಂಭವಾಗಿ ಇಂದು ಚಿನ್ನದ ಮೆರುಗನ್ನು ಆಧುನಿಕ ಒಲಿಂಪಿಕ್ಸ್ ಕಂಡಿದೆ. ಗ್ರೀಕ್ ಇತಿಹಾಸವನ್ನು ಸಾಂಕೇತಿಸುವ ಆಲಿವ್ ಎಲೆಗಳ ಕಿರೀಟ ಪರಂಪರೆ, ಪಾಲ್ಗೊಳ್ಳುವಿಕೆ, ಆಚರಣೆ ಮತ್ತು ಮಾನವೀಯ ಗುಣಧರ್ಮಗಳೆಂಬ ನಾಲ್ಕು ಮೌಲ್ಯಗಳನ್ನು ಪ್ರತಿನಿಧಿಸುತ್ತದೆ. ಆಲಿವ್ ಕಿರೀಟದಿಂದ ಚಿನ್ನದ ಪದಕಕ್ಕೆ ಪರಿವರ್ತನೆಯಾದ ಬಳಿಕ ಆಧುನಿಕ ಒಲಿಂಪಿಕ್ಸ್ ಕ್ರೀಡಾಪಟುಗಳ ಬದುಕನ್ನೇ ಉನ್ನತೀಕರಿಸಿದೆ. ಸಾಧನೆಗಳ ಮಜಲನ್ನೇ ಕಂಡಿರುವ ಆಧುನಿಕ ಒಲಿಂಪಿಕ್ಸ್ ಜಗತ್ತಿನ ಎಲ್ಲಾ ಜನಾಂಗ, ವರ್ಣದ ಜನರನ್ನು ತನ್ನತ್ತ ಸೆಳೆದಿರುವ ಸುದೀರ್ಘ ಇತಿಹಾಸವಿದೆ. ಜಗತ್ತಿನ ಜನರೆಲ್ಲ ಒಟ್ಟಾಗಿ ಸಹೋದರ ಭಾವದಿಂದ ಇರಬೇಕೆಂದು ಸಾರುವ ಒಲಿಂಪಿಕ್ಸ್ ಇದೀಗ ಜಪಾನ್ ದೇಶದ ಮಹಾನಗರಿ ಟೋಕಿಯೊದಲ್ಲಿ ಕೊರೊನಾ ಸಂಕಷ್ಟದ ಸಮಯದಲ್ಲೂ ನಡೆಯುತ್ತಿದೆ ಎನ್ನುವುದು ಕ್ರೀಡಾಸ್ಪೂರ್ತಿಯಿಂದ ಮಾತ್ರ. ಈ ನಿಟ್ಟಿನಲ್ಲಿ ಬ್ಯಾರನ್ ಡಿ ಕ್ಯುಬರ್ತಿ ಆರಂಭಿಸಿದ ಒಲಿಂಪಿಕ್ಸ್ ಆಂದೋಲನ ಚಿರಾಯು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!