spot_img
Monday, March 23, 2026
spot_img

ಪಾದಾರ್ಪಣೆಯಲ್ಲೇ ಚೊಚ್ಚಲ ಟೆಸ್ಟ್ ಶತಕ

ಎಸ್.ಜಗದೀಶಚಂದ್ರ ಅಂಚನ್
ಸೂಟರ್ ಪೇಟೆ


ಟೆಸ್ಟ್ ಕ್ರಿಕೆಟ್ ರಂಗಕ್ಕೆ ಪ್ರವೇಶಿಸುವ ಪ್ರತಿಯೊಬ್ಬ ಆಟಗಾರರು ತಮ್ಮ ಚೊಚ್ಚಲ ಪಂದ್ಯವನ್ನು ಸ್ಮರಣೀಯವನ್ನಾಗಿಸುವ ಕನಸನ್ನು ಕಾಣುತ್ತಾರೆ. ಬೌಲರ್ ಗರಿಷ್ಠ ವಿಕೆಟ್ ಕಬಳಿಸುವ ಕನಸು ಕಂಡರೆ, ಬ್ಯಾಟ್ಸ್ ಮನ್ ಶತಕ ಬಾರಿಸುವ ಮಹತ್ವಾಕಾಂಕ್ಷೆಯನ್ನು ಮೊದಲ ಪಂದ್ಯದಲ್ಲೇ ಹೊಂದಿರುತ್ತಾರೆ. ಹಾಗಾಗಿ ಟೆಸ್ಟ್ ಕ್ರಿಕೆಟಿನ ಪಾದಾರ್ಪಣೆ ಪಂದ್ಯದ ಶತಕಕ್ಕೆ ವಿಶೇಷ ಗೌರವ ಇದೆ. ಅಂತಹ ಅದೃಷ್ಟಶಾಲಿ ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟಿನಲ್ಲಿ ಕಾಣಿಸಿಕೊಂಡದ್ದು ಕೆಲವರು ಮಾತ್ರ. ಹೌದು, ಈ ಪೀಠಿಕೆ ಇಲ್ಲಿ ಅಗತ್ಯವಿದೆ. ಆಂಗ್ಲರ ನಾಡಿನಲ್ಲಿ ಈಚೆಗೆ ಮುಕ್ತಾಯಗೊಂಡ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಈ ಪೀಠಿಕೆಗೆ ಸಂಬಂಧಿಸಿದ ದಾಖಲೆಯೊಂದು ನಿರ್ಮಾಣವಾಗಿದೆ. ಲಾರ್ಡ್ಸ್ ನಲ್ಲಿ ಆರಂಭ ಕಂಡಿದ್ದ ಈ ಟೆಸ್ಟ್ ಪಂದ್ಯದ ಮೊದಲ ದಿನವೇ (ಜುಲೈ-2ರಂದು) ನ್ಯೂಜಿಲೆಂಡ್ ತಂಡದ ಆರಂಭಿಕ ಆಟಗಾರ ಡೆವೊನ್ ಕಾನ್ವೇ ಶತಕ ಬಾರಿಸಿ ದಾಖಲೆ ಬರೆದಿದ್ದಾರೆ.


ಪಾದಾರ್ಪಣೆ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿದ ಪ್ರತಿಯೊಬ್ಬರನ್ನು ಅಮೋಘ ಆಟಗಾರ ಎಂದು ಆಟೋಮ್ಯಾಟಿಕ್ ಆಗಿ ಘೋಷಿಸಲಾಗುವುದಿಲ್ಲ. ಆದರೂ ಈ ಶತಕದ ಬಗ್ಗೆ ಚರ್ಚೆ ನಡೆದಾಗಲೆಲ್ಲ ಆ ಶತಕದ ಔನತ್ಯ ಹೆಚ್ಚಾಗುತ್ತದೆ. ಇಂಗ್ಲೆಂಡ್ ವಿರುದ್ಧ ಡೆವೊನ್ ಕಾನ್ವೇ ದಾಖಲಿಸಿದ ಅಜೇಯ ದ್ವಿಶತಕ ಅಚ್ಚರಿ ಮೂಡಿಸುದವುದರ ಜೊತೆಗೆ ಆಟದಲ್ಲಿ ಅವರಿಗಿರುವ ಕೌಶಲ ಮತ್ತು ಧೋರಣೆಗೆ ದ್ಯೋತಕವಾಗಿದೆ. 29 ವರ್ಷದ ಎಡಗೈ ಆರಂಭಿಕ ಆಟಗಾರ ಡೆವೊನ್ ಕಾನ್ವೇ ತನ್ನ ಸಂವೇದನಾಶೀಲ ಬ್ಯಾಟಿಂಗ್ ನಿಂದ ಮಹತ್ತರದ ಸಾಧನೆಯನ್ನು ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ದಾಖಲಿಸಿರುವುದು ಅವರ ಕ್ರಿಕೆಟ್ ಜೀವನದ ವಿಶೇಷ.


ಕಾನ್ವೇ ಸಾಧನೆಯ ವಿಶೇಷ :
ಡೆವೊನ್ ಕಾನ್ವೇ ಟೆಸ್ಟ್ ಕ್ರಿಕೆಟಿಗೆ ಪಾದಾರ್ಪಣೆಗೈಯುವ ಮೊದಲು ಟ್ವೆಂಟಿ-20 ಹಾಗೂ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನು ನ್ಯೂಜಿಲೆಂಡ್ ಪರ ಆಡಿದ್ದಾರೆ. ಸೀಮಿತ ಓವರ್ ಗಳ ಕ್ರಿಕೆಟ್ ಪಂದ್ಯವನ್ನು ಆಡಿದ ಬಳಿಕ ಇವರು ಟೆಸ್ಟ್ ಪಂದ್ಯವನ್ನು ಆಡಿದ್ದಾರೆ. ತಾನು ಆಡಿದ ಚೊಚ್ಚಲ ಟೆಸ್ಟ್ ಪಂದ್ಯದ ಮೊದಲ ದಿನವೇ ಚೊಚ್ಚಲ ಶತಕ ಬಾರಿಸಿ ವಿಜೃಂಭಿಸಿದ ಡೆವೊನ್ ಕಾನ್ವೇ ಈಗ ಭಾರೀ ಸುದ್ದಿಯಲ್ಲಿರುವ ಆಟಗಾರ. ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಬಾರಿಸಿದ ನ್ಯೂಜಿಲೆಂಡಿನ ಆರನೇ ಬ್ಯಾಟ್ಸ್ ಮನ್ ಇವರು. ದಕ್ಷಿಣ ಆಫ್ರಿಕಾ ಮೂಲದ ಕಾನ್ವೇ ತನ್ನ ಮೊದಲ ಶತಕ ಬಾರಿಸಿ, ಮರುದಿನ ಈ ಶತಕವನ್ನು ದ್ವಿಶತಕವನ್ನಾಗಿ ವಿಸ್ತರಿಸಿಕೊಳ್ಳುವ ಮೂಲಕ ಕ್ರಿಕೆಟ್ ಕಾಶಿ ಎಂದು ಕರೆಸಿಕೊಳ್ಳುವ ಲಾರ್ಡ್ಸ್ ಮೈದಾನದಲ್ಲಿ ತನ್ನ ಕ್ರಿಕೆಟ್ ಬಾಳ್ವೆಯ ಮಹದಾಸೆಯನ್ನು ಈಡೇರಿಸಿಕೊಂಡಿದ್ದಾರೆ.


ಡೆವೊನ್ ಕಾನ್ವೇ ಅವರದ್ದು ವಿಶಿಷ್ಟ ಬ್ಯಾಟಿಂಗ್ ಶೈಲಿ ಮೂರು ಪ್ರಕಾರದ ಕ್ರಿಕೆಟ್ ಪಂದ್ಯಕ್ಕೆ ಹೊಂದಾಣಿಕೆಯಾಗುವಂತಂಹ ಆಟ ಅವರ ಬ್ಯಾಟಿಂಗ್‍ನಲ್ಲಿ ಕಂಡು ಬಂದಿದೆ. ಟೆಸ್ಟ್ ಕ್ರಿಕೆಟಿನ ತನ್ನ ಮೊದಲ ಇನ್ನಿಂಗ್ಸ್‍ನಲ್ಲೇ ಇಂಗ್ಲೆಂಡ್ ಬೌಲರ್ ಗಳನ್ನು ಬಹುವಾಗಿ ಕಾಡಿರುವ ಇವರು ಎದುರಿಸಿದ 345 ಎಸೆತಗಳಲ್ಲಿ ಭರ್ತಿ 200 ರನ್ ಗಳಿಸಿದರು. ಇದರಲ್ಲಿ 22 ಬೌಂಡರಿ ಮತ್ತು 1 ಸಿಕ್ಸರ್ ಸಿಡಿಸಿ ರನೌಟಾದರು. ವಾಸ್ತವವಾಗಿ ಇಂಗ್ಲೆಂಡ್ ಬೌಲರ್ ಮಾರ್ಕ್‍ವುಡ್ ಬೌಲಿಂಗ್ ನಲ್ಲಿ ಧೈರ್ಯಶಾಲಿ ಸಿಕ್ಸರ್ ಬಾರಿಸುವ ಮೂಲಕ ಡೆವೊನ್ ಕಾನ್ವೇ ದ್ವಿಶತಕದ ಹೆಗ್ಗುರುತು ಬರೆದರು. ಟೆಸ್ಟ್ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದ ಮೊದಲ ಪಂದ್ಯದಲ್ಲಿ ದ್ವಿಶತಕ ಬಾರಿಸಿದ ಮ್ಯಾಥ್ಯೂ ಸಿಂಕ್ಲೇರ್ ಮತ್ತು ಬ್ರೆಂಡನ್ ಮೆಕಲಮ್ ನಂತರ ಡೆವೊನ್ ಕಾನ್ವೇ ನ್ಯೂಜಿಲೆಂಡಿನ 3ನೇ ಆಟಗಾರ ಹಾಗೂ ವಿಶ್ವದ 7ನೇ ಬ್ಯಾಟ್ಸ್ ಮನ್ ಎನ್ನುವ ಶ್ರೇಯಕ್ಕೂ ಪಾತ್ರರಾದರು.


ದಕ್ಷಿಣ ಆಫ್ರಿಕಾದಿಂದ ವಲಸೆ :
ಡೆವೊನ್ ಕಾನ್ವೇ ದಕ್ಷಿಣ ಆಫ್ರಿಕಾ ಮೂಲದ ಆಟಗಾರ. ಕಿರಿಯ ವಯಸ್ಸಿನ ಪಂದ್ಯಗಳೆಲ್ಲವನ್ನು ಇವರು ದಕ್ಷಿಣ ಆಫ್ರಿಕಾದಲ್ಲೇ ಆಡಿದ್ದರು. 1991ರ ಜುಲೈ-8ರಂದು ಜೋಹಾನ್ಸ್ ಬರ್ಗ್ ನಲ್ಲಿ ಜನಿಸಿದ ಇವರು ದಕ್ಷಿಣ ಆಫ್ರಿಕಾದ ದೇಶೀಯ ಕ್ರಿಕೆಟಿನಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರೂ ರಾಷ್ಟ್ರೀಯ ತಂಡದಲ್ಲಿ ಆಡುವ ಸುಯೋಗ ಇವರ ಪಾಲಿಗೆ ಬಂದಿಲ್ಲ. 2017ರ ವರೆಗೆ ದಕ್ಷಿಣ ಆಫ್ರಿಕಾದಲ್ಲೇ ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ ಕಾನ್ವೇ 2018ರಲ್ಲಿ ನ್ಯೂಜಿಲೆಂಡಿಗೆ ವಲಸೆ ಬಂದರು. ವೆಲ್ಲಿಂಗ್ಟನ್ ತಂಡದೊಂದಿಗೆ ಒಪ್ಪಂದ ಮಾಡಿಕೊಂಡ ಇವರು 2018-19ರಲ್ಲಿ ನ್ಯೂಜಿಲೆಂಡ್ ದೇಶೀಯ ತಂಡದಲ್ಲಿ ಕಾಣಿಸಿಕೊಂಡರು. ವೆಲ್ಲಿಂಗ್ಟನ್ ತಂಡವನ್ನು ಪ್ಲಂಕೆಟ್ ಶೀಲ್ಡ್ ಕ್ರಿಕೆಟ್ ಟೂರ್ನಿಯಲ್ಲಿ ಪ್ರತಿನಿಧಿಸಿದ ಇವರು ಒಟಾಗೋ ತಂಡದ ವಿರುದ್ದ ಅಜೇಯ ದ್ವಿಶತಕ ಬಾರಿಸಿ ಗಮನ ಸೆಳೆದರು.
ದೇಶೀಯ ಕ್ರಿಕೆಟಿನಲ್ಲಿ ಸಾಕಷ್ಟು ಭರವಸೆಯ ಬ್ಯಾಟಿಂಗ್ ನಡೆಸಿ ಗಮನಾರ್ಹ ಸಾಧನೆಗೈದ ಡೆವೊನ್ ಕಾನ್ವೇ ಪ್ರತಿಭೆಗೆ ನ್ಯೂಜಿಲೆಂಡ್ ಆಯ್ಕೆ ಸಮಿತಿಯಿಂದ ಕೊನೆಗೂ ಮನ್ನಣೆ ದೊರೆಯಿತು. 2020ರ ನವೆಂಬರ್-27ರಂದು ವೆಸ್ಟ್ ಇಂಡೀಸ್ ವಿರುದ್ಧದ ಟ್ವೆಂಟಿ-20 ಕ್ರಿಕೆಟ್ ಪಂದ್ಯಕ್ಕೆ ಅವರನ್ನು ಆಯ್ಕೆ ಮಾಡಲಾಯಿತು. ಮುಂದೆ 14 ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಕಾನ್ವೇ 59.12ರ ಸರಾಸರಿಯಲ್ಲಿ 473ರನ್ ಬಾರಿಸಿದ್ದಾರೆ. 2021ರ ಮಾರ್ಚ್-20ರಂದು ಬಾಂಗ್ಲಾದೇಶ ವಿರುದ್ದದ ಏಕದಿನ ಅಂತಾರಾಷ್ಟ್ರೀಯ ಪಂದ್ಯವನ್ನು ಆಡುವುದರ ಮೂಲಕ ಏಕದಿನ ಕ್ರಿಕೆಟಿಗೂ ಪಾದಾರ್ಪಣೆಗೈದಿದ್ದರು. ಇದುವರೆಗೆ ಅವರು 3 ಪಂದ್ಯಗಳನ್ನು ಆಡಿರುವ ಇವರು 75.00ರ ಸರಾಸರಿಯಲ್ಲಿ 225 ಗಳಿಸಿದ್ದಾರೆ.


ಲಾರ್ಡ್ಸ್ ಮಿಂಚು:
ಪಾದಾರ್ಪಣೆಯ ಟೆಸ್ಟ್‍ನಲ್ಲೇ ಅಮೋಘ ದ್ವಿಶತಕ ಬಾರಿಸಿರುವ ಡೆವೊನ್ ಕಾನ್ವೇ ಹಲವು ದಾಖಲೆಗಳಿಗೆ ಪಾತ್ರರಾಗಿದ್ದಾರೆ. ಇವರ ಬ್ಯಾಟಿಂಗ್ ವೈಭವದ ಮಿಂಚು ಕ್ರಿಕೆಟ್ ಮೆಕ್ಕಾ ಲಾರ್ಡ್ಸ್ ಮೈದಾನದಲ್ಲಿ ದಾಖಲಾಗಿರುವುದು ಕೂಡ ವಿಶೇಷ. ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟಿಗೆ ಪಾದಾರ್ಪಣೆ ಮಾಡಿದ ಆಟಗಾರರಲ್ಲಿ ಅತಿಹೆಚ್ಚು ರನ್ ಗಳಿಸಿದ ದಾಖಲೆಯೂ ಕೂಡ ಕಾನ್ವೇ ಹೆಸರಿಗೆ ಬರೆಯಲ್ಪಟ್ಟಿದೆ. ಇದಕ್ಕೆ ಮೊದಲು ವೆಸ್ಟ್ ಇಂಡೀಸ್‍ನ ಜಾರ್ಜ್ ಹೆಡ್ಲೀ 1930ರಲ್ಲಿ ಬ್ರಿಜ್‍ಟೌನ್ ಮೈದಾನದಲ್ಲಿ ಬಾರಿಸಿದ 176 ರನ್ ದಾಖಲೆಯಾಗಿತ್ತು. ನ್ಯೂಜಿಲೆಂಡ್‍ನವರೇ ಆಗಿರುವ ರುದರ್‍ಫೆÇೀರ್ಡ್ ಡ್ಯುನೆಡಿನ್‍ನಲ್ಲಿ ಇಂಗ್ಲೆಂಡ್ ವಿರುದ್ಧ ಆಡಿದ ತಮ್ಮ ಚೊಚ್ಚಲ ಟೆಸ್ಟ್ ಮೊದಲ ಪಂದ್ಯದಲ್ಲಿ 171 ರನ್ ಬಾರಿಸಿದ್ದರು. ಹಾಗೆಯೇ, ಇಂಗ್ಲೆಂಡ್‍ನಲ್ಲಿ ಪಾದಾರ್ಪಣೆ ಮಾಡಿದ ಆಟಗಾರರ ಪೈಕಿಯೂ ಕಾನ್ವೇ ಬಾರಿಸಿದ ರನ್ ಅತ್ಯಧಿಕವಾಗಿದೆ.
ಈ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ನ್ಯೂಜಿಲೆಂಡ್ ಗಳಿಸಿದ ಮೊತ್ತ 378 ರನ್. ಇದರಲ್ಲಿ ಡೆವೊನ್ ಕಾನ್ವೇ ಅವರ ಕಾಣಿಕೆ 200 ರನ್. ಅಂದರೆ ತಂಡ ಗಳಿಸಿದ ಒಟ್ಟು ಮೊತ್ತಕ್ಕಿಂತ ಅರ್ಧಕ್ಕಿಂತ ಹೆಚ್ಚು ರನ್ ಅವರ ಬ್ಯಾಟ್‍ನಿಂದ ಬಂದಿದೆ. ಪಾದಾರ್ಪಣೆಯ ಟೆಸ್ಟ್‍ನಲ್ಲಿ ತಂಡಕ್ಕೆ ಅತ್ಯಧಿಕ ಕಾಣಿಕೆ ನೀಡಿದ ಆಟಗಾರರಲ್ಲಿ ಡೆವೊನ್ ಕಾನ್ವೇಗೆ ಎರಡನೇ ಸ್ಥಾನ. 1876-77ರ ಟೆಸ್ಟ್ ಸರಣಿಯ ಮೊದಲ ಟೆಸ್ಟ್‍ನಲ್ಲಿ ಆಸ್ಟ್ರೇಲಿಯಾ 245 ರನ್ ಗಳಿಸಿತ್ತು. ಅದರಲ್ಲಿ ಚಾರ್ಲ್ಸ್ ಬ್ಯಾನರ್‍ಮನ್ ಬಾರಿಸಿದ್ದು ಅಜೇಯ 165 ರನ್. ಇದು ಟೆಸ್ಟ್ ಕ್ರಿಕೆಟ್ ಇತಿಹಾಸದ ಮೊಟ್ಟ ಮೊದಲ ಟೆಸ್ಟ್ ಪಂದ್ಯ ಆಗಿತ್ತು.


ಬ್ಯಾನರ್ ಮನ್ ಚೊಚ್ಚಲಿಗ:
ಟೆಸ್ಟ್ ಕ್ರಿಕೆಟಿನಲ್ಲಿ ಪಾದಾರ್ಪಣೆಯ ಶತಕದ ಪರಂಪರೆಗೆ ಮೊದಲು ನಾಂದಿ ಹಾಡಿದವರು ಆಸ್ಟ್ರೇಲಿಯಾ ತಂಡದ ಚಾರ್ಲ್ಸ್ ಬ್ಯಾನರ್‍ಮನ್. 1876-77ರಲ್ಲಿ ಮೆಲ್ಬೋರ್ನ್ ನಲ್ಲಿ ನಡೆದ ಟೆಸ್ಟ್ ಕ್ರಿಕೆಟ್ ಇತಿಹಾಸದ ಚೊಚ್ಚಲ ಟೆಸ್ಟ್ ಪಂದ್ಯದ ಮೊದಲ ಎಸೆತವನ್ನು ಚಾರ್ಲ್ಸ್ ಬ್ಯಾನರ್‍ಮನ್( ವಾಸ್ತವವಾಗಿ ಇಂಗ್ಲೆಂಡ್ ನಲ್ಲಿ ಜನಿಸಿದರು) ಎದುರಿಸಿದರು. ಮೊದಲ ರನ್ ಗಳಿಸಿದರು. ಮತ್ತು ಮೊದಲ ದಿನದ ಅಂತ್ಯದ ಮೊದಲು ಶತಕವನ್ನು ಬ್ಯಾನರ್ ಮನ್ ಪೂರೈಸಿದರು. ತನ್ನ ಕೈಗೆ ಗಾಯವಾಗಿ ನಿವೃತ್ತಿ ಹೊಂದುವ ಮೊದಲು ಅವರು ಅಜೇಯ 165ರನ್ ಬಾರಿಸಿ ಟೆಸ್ಟ್ ಶತಕಗಳ ದಾಖಲೆ ಪುಟವನ್ನು ತೆರೆದರು. ಹೀಗೆ ಬ್ಯಾನರ್ ಮನ್ ಅವರಿಂದ ಆರಂಭವಾದ ಟೆಸ್ಟ್ ಪಾದಾರ್ಪಣೆಯ ಶತಕದ ಪರಂಪರೆಯಲ್ಲಿ ಇದುವರೆಗೆ 111 ಆಟಗಾರರು ಗುರುತಿಸಿಕೊಂಡಿರುವರು.


ಡಬ್ಲ್ಯು. ಜಿ. ಗ್ರೇಸ್ (ಇಂಗ್ಲೆಂಡ್):
ಚಾರ್ಲ್ಸ್ ಬ್ಯಾನರ್ ಮನ್ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿದ ನಂತರ ಸುಮಾರು ಮೂರು ವರ್ಷಗಳ ಬಳಿಕ ಇಂಗ್ಲೆಂಡ್ ಪರ ಡಬ್ಲ್ಯು. ಜಿ.ಗ್ರೇಸ್ ಶತಕ ಬಾರಿಸಿದರು. ಒಟ್ಟಾರೆ ಟೆಸ್ಟ್ ಕ್ರಿಕೆಟಿನ ನಾಲ್ಕನೇ ಟೆಸ್ಟ್‍ನಲ್ಲಿ ಇಂಗ್ಲೆಂಡ್ ಆಟಗಾರ ಡಬ್ಲ್ಯು. ಜಿ. ಗ್ರೇಸ್ ಪಾದಾರ್ಪಣೆ ಶತಕವನ್ನು ದಾಖಲಿಸಿದರು. ಈ ಮೂಲಕ ತವರಿನಲ್ಲಿ ಗ್ರೇಸ್ ಬಾರಿಸಿದ ಮೊದಲ ಶತಕ ಕೂಡ. ಆಸ್ಟ್ರೇಲಿಯಾ ವಿರುದ್ಧ 1880ರಲ್ಲಿ ದಿ ಓವಲ್‍ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಗ್ರೇಸ್ 152 ರನ್ ಗಳಿಸಿದರು.


ಟೆಸ್ಟ್ ಕ್ರಿಕೆಟಿನಲ್ಲಿ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳ ಬಳಿಕ ಇತರ ಟೆಸ್ಟ್ ತಂಡದ ಆಟಗಾರನೊರ್ವ ಪಾದಾರ್ಪಣೆಯ ಟೆಸ್ಟ್ ಶತಕ ದಾಖಲಿಸಿದ್ದು 1930ರಲ್ಲಿ . ಟ್ರೆನಿಡಾಡ್‍ನ ಆಕ್ರಮಣಕಾರಿ ಓಪನರ್ ಜಿ.ಎ.ಹೆಡ್ಲೀ ವೆಸ್ಟ್ ಇಂಡೀಸ್ ಪರ ಪಾದಾರ್ಪಣೆ ಟೆಸ್ಟ್ ಶತಕವನ್ನು ಇಂಗ್ಲೆಂಡ್ ವಿರುದ್ಧ ದಾಖಲಿಸಿದರು. 1930ರ ಜನವರಿ-11ರಂದು ಬ್ರಿಡ್ಜ್‍ಟೌನ್ ಟೆಸ್ಟ್ ನಲ್ಲಿ ಇಂಗ್ಲೆಂಡ್ ವಿರುದ್ಧ 176ರನ್ ಬಾರಿಸಿದರು. ನಂತರ ನ್ಯೂಜಿಲೆಂಡ್ ತಂಡದ ಜಾಕಿ ಮಿಲ್ಸ್ 1931ರಲ್ಲಿ ವೆಲ್ಲಿಂಗ್ಟನ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ದ 117 ರನ್ ಸಿಡಿಸಿದರು. ಭಾರತದ ಲಾಲಾ ಅಮರ್ ನಾಥ್ ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿರುವರು. ಅಮರ್ ನಾಥ್ 1933ರ ಡಿಸೆಂಬರ್-13ರಂದು ಇಂಗ್ಲೆಂಡ್ ವಿರುದ್ಧ ಪಾದಾರ್ಪಣೆ ಟೆಸ್ಟ್ ಶತಕ ಬಾರಿಸಿದ್ದರು. ದಕ್ಷಿಣ ಆಫ್ರಿಕಾದ ಅಂಡ್ರೊ ಹಡ್ಸನ್, ಪಾಕಿಸ್ತಾನ ತಂಡದ ಖಾಲಿದ್ ಇಬಾದುಲ್ಲ (166ರನ್), ಶ್ರೀಲಂಕಾ ತಂಡದ ಬ್ರೆಂಡನ್ ಕುರುಪ್ಪು(201ರನ್), ಜಿಂಬಾಬ್ವೆ ತಂಡದ ಡೇವ್ ಹಾಟನ್ (121ರನ್), ಬಾಂಗ್ಲಾದೇಶದ ಅಮಿನುಲ್ ಇಸ್ಲಾಂ (145ರನ್) ಮತ್ತು ಐರ್ಲೆಂಡ್ ತಂಡದ ಕೆವಿನ್ ಓ ಬ್ರಿಯಾನ್ (118ರನ್) ಇವರು ಕೂಡ ತಮ್ಮ ರಾಷ್ಟ್ರ ತಂಡಗಳ ಪರ ಪಾದಾರ್ಪಣೆ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿದ ಚೊಚ್ಚಲಿಗರು.


ಭಾರತದ ಪರ 15 ಮಂದಿ
ಭಾರತ ತಂಡದ ಪರ ಪಾದಾರ್ಪಣೆ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿದ ದಾಖಲೆಗೆ ನಾಂದಿ ಹಾಡಿದವರು ಲಾಲಾ ಅಮರ್ ನಾಥ್. ಈ ಪರಂಪರೆಯಲ್ಲಿ ಇದುವರೆಗೆ ಗುರುತಿಸಿಕೊಂಡ ಆಟಗಾರರು 15 ಮಂದಿ .
ದೀಪಕ್ ಶೋಧನ್ , ಎ.ಜಿ. ಕೃಪಾಲ್ ಸಿಂಗ್, ಅಬ್ಬಾಸ್ ಅಲಿ ಬೇಗ್ , ಹನುಮಂತ್ ಸಿಂಗ್, ಜಿ.ಆರ್. ವಿಶ್ವನಾಥ್ , ಸುರೀಂದರ್ ಅಮರ್ ನಾಥ್, ಮೊಹಮ್ಮದ್ ಅಜರುದ್ದೀನ್, ಪ್ರವೀಣ್ ಆಮ್ರೆ , ಸೌರವ್ ಗಂಗೂಲಿ, ವೀರೇಂದ್ರ ಸೆಹ್ವಾಗ್, ಸುರೇಶ್ ರೈನಾ, ಶಿಖರ್ ಧವನ್, ರೋಹಿತ್ ಶರ್ಮ ಮತ್ತು ಪೃಥ್ವಿ ಶಾ ಇವರೆಲ್ಲರೂ ಪಾದಾರ್ಪಣೆ ಟೆಸ್ಟ್ ಪಂದ್ಯದಲ್ಲೇ ಶತಕ ಬಾರಿಸಿ ಗಮನ ಸೆಳೆದ ಆಟಗಾರರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!