spot_img
Thursday, November 5, 2026
spot_img

ಹೆಮ್ಮಾಡಿ ಜನತಾ ಪಿಯು ಕಾಲೇಜಿನಲ್ಲಿ ವ್ಯವಹಾರ ಮೇಳ ಜನತಾ ಆವಿಷ್ಕಾರ್ 2026 ಉದ್ಘಾಟನೆ

ಕಲಿಕೆ ಜೊತೆಯಲ್ಲಿ ವಿದ್ಯಾರ್ಥಿಗಳಲ್ಲಿ ವ್ಯವಹಾರ ಕೌಶಲ್ಯ ವೃದ್ದಿಸುವುದು ಶ್ಲಾಘನೀಯ-ಆನಂದ ಸಿ.ಕುಂದರ್

ಹೆಮ್ಮಾಡಿ: ಶಿಕ್ಷಣವೆಂದರೆ ಅಂಕಗಳಿಗಷ್ಟೇ ಸೀಮಿತವಲ್ಲ, ಶಿಕ್ಷಣದ ಜೊತೆಜೊತೆಗೆ ಮಾನವೀಯ ಮೌಲ್ಯಗಳು, ಜೀವನ ಮೌಲ್ಯಯುಳ್ಳ ಸಂಸ್ಕಾರ ಪೂರಿತವಾದ ಶಿಕ್ಷಣ ಪಡೆಯಬೇಕು. ಸ್ಪರ್ಧಾತ್ಮಕ ಜಗತ್ತನ್ನು ಎದುರಿಸಲು ವಿದ್ಯಾರ್ಥಿ ಶಕ್ತನಾಗಿರಬೇಕು. ಆ ಹಿನ್ನೆಲೆಯಲ್ಲಿ ಜನತಾ ಕಾಲೇಜು ನಡೆಸುತ್ತಿರುವ ವ್ಯವಹಾರ ಮೇಳ ವಿದ್ಯಾರ್ಥಿಗಳಲ್ಲಿ ಕೌಶಲ್ಯ ಬೆಳೆಸುತ್ತದೆ. ವ್ಯವಹಾರಿಕ ಜ್ಞಾನವನ್ನು ವೃದ್ಧಿಸುತ್ತದೆ ಎಂದು ಕೋಟದ ಗೀತಾನಂದ ಫೌಂಡೇಶನ್ ಪ್ರವರ್ತಕರಾದ ಆನಂದ್ ಸಿ. ಕುಂದರ್ ಹೇಳಿದರು.

ಹೆಮ್ಮಾಡಿಯ ಜನತಾ ಪಿಯು ಕಾಲೇಜಿನಲ್ಲಿ ನಡೆದ ವ್ಯವಹಾರ ಮೇಳ ಜನತಾ ಆವಿಷ್ಕಾರ್ 2026 ವಿಜ್ಞಾನ, ವ್ಯವಹಾರ, ಸಾಂಸ್ಕೃತಿಕ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳಲ್ಲಿ ಐ‌ಎ‌ಎಸ್, ಐಪಿ‌ಎಸ್, ಕೆ‌ಎ‌ಎಸ್ ನಂತಹ ಸ್ಪರ್ಧಾತ್ಮಕ ಪರೀಕ್ಷೆಯ ಬಗ್ಗೆಯೂ ಆಸಕ್ತಿ ಮೂಡಿಸಬೇಕು. ಆಡಳಿತ ಸೇವೆಗೆ ಈ ಭಾಗದವರು ಪ್ರವೇಶ ಮಾಡಬೇಕು. ಶಿಕ್ಷಣ ಕ್ಷೇತ್ರದಿಂದ ಹೊರ ಬಂದ ಕೂಡಲೇ ವಿದ್ಯಾರ್ಥಿಗಳು ನೀರಿನಿಂದ ಹೊರಬಿದ್ದ ಮೀನಿನಂತಾಗಬಾರದು, ನೀರಿನ ಹೊರಗೂ ಈಜುವುದು ಗೊತ್ತಿರಬೇಕು ಎಂದರು.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ವಿ.ವಿ.ವಿ. ಮಂಡಳಿ ಹೆಮ್ಮಾಡಿ ಇದರ ಅಧ್ಯಕ್ಷರಾದ ಮಾಜಿ ಶಾಸಕರಾದ ಕೆ. ಗೋಪಾಲ ಪೂಜಾರಿ ವಹಿಸಿದ್ದರು.

ಕಾರ್ಯಕ್ರಮದ ಉದ್ದೇಶ ವಿವರಿಸಿದ ಆಡಳಿತ ಮಂಡಳಿಯ ಅಧ್ಯಕ್ಷರಾದ ಗಣೇಶ್ ಮೊಗವೀರ ಅವರು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಕಾಲೇಜಿನ ಶಿಕ್ಷಣದ ನಡುವೆಯೇ ವ್ಯವಹಾರ ಕೌಶಲ್ಯ ಬೆಳೆಸಿಕೊಳ್ಳುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರತಿವರ್ಷ ವ್ಯವಹಾರ ಮೇಳ ಜನತಾ ಆವಿಷ್ಕಾರ್ ಕಾರ್ಯಕ್ರಮ ರೂಪಿಸುತ್ತಿದ್ದೇವೆ. ಈ ಬಾರಿ ದಾಖಲೆ ಸಂಖ್ಯೆಯ ಸುಮಾರು ೧೫೦ಕ್ಕೂ ಹೆಚ್ಚು ಮಳಿಗೆಗಳನ್ನು ವಿದ್ಯಾರ್ಥಿಗಳೆ ನಡೆಸುತ್ತಿದ್ದಾರೆ. ಇದಕ್ಕೆ ಬೇಕಾದ ಎಲ್ಲಾ ತಯಾರಿಗಳನ್ನು ಅವರೇ ಮಾಡಿಕೊಂಡಿದ್ದಾರೆ. ಪ್ರಚಾರ ಕಲೆಯನ್ನೂ ಕಲಿತಿದ್ದಾರೆ. ಎಲ್ಲಿಂದ ವಸ್ತುಗಳನ್ನು ಖರೀದಿಸಿ ತರಬೇಕು ಎನ್ನುವ ಹೊರ ಪ್ರಪಂಚದ ಜ್ಞಾನವನ್ನು ತಿಳಿದುಕೊಂಡಿದ್ದಾರೆ. ಇದೊಂದು ರೀತಿ ಇಂಟರ್ನಶಿಫ್ ಇದ್ದಂತೆ ಎಂದರು.

ಇವತ್ತಿನ ಕಾಲಘಟ್ಟದಲ್ಲಿ ನಿಂತು ಅವಲೋಕಿಸಿದರೆ ಕಂಪ್ಯೂಟರ್ ಸೈನ್ಸ್ ಬೇಡಿಕೆ ಕಳೆದುಕೊಳ್ಳುತ್ತಿದೆ. ಬಯೋಲಜಿ ಬಗ್ಗೆ ವಿದ್ಯಾರ್ಥಿಗಳು ಹೆಚ್ಚು ಆಸಕ್ತರಾಗುತ್ತಿದ್ದಾರೆ. ಎ.ಐ ತಂತ್ರಜ್ಞಾನದಿಂದಾಗಿ ಇಂಜಿನಿಯರ್ ಕ್ಷೇತ್ರದಲ್ಲಿಯೂ ಬೇಡಿಕೆ ಕುಸಿಯುತ್ತಿದೆ. ಆ ಹಿನ್ನೆಲೆಯಲ್ಲಿ ಮುಂದೆ ವಾಣಿಜ್ಯ ವಿಭಾಗವೇ ದೇಶವನ್ನು ಮುನ್ನೆಡೆಸುವ ವಿಭಾಗ ಆಗಲಿದೆ. ವಾಣಿಜ್ಯ ಕ್ಷೇತ್ರದಲ್ಲಿ ವಿಫುಲವಾದ ಅವಕಾಶಗಳು ಇವೆ ಎಂದರು.
ಜನತಾ ಶಿಕ್ಷಣ ಸಂಸ್ಥೆಯಿಂದ ಈಗಾಗಲೇ ಹೊರ ಹೋದ ವಿದ್ಯಾರ್ಥಿಗಳು ಬೇರೆ ಬೇರೆ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಿದ್ದಾರೆ. ಇದು ನಿರಂತರವಾಗಿ ನಡೆಯುತ್ತದೆ. ಆ ಹಿನ್ನೆಲೆಯಲ್ಲಿ ಸುಸಜ್ಜಿತವಾದ ಹಾಸ್ಟೆಲ್‌ನ್ನು ಆರಂಭಿಸಿದ್ದೇವೆ. ನಮ್ಮ ಕುಂದಾಪುರ, ಬೈಂದೂರು ತಾಲೂಕಿನಿಂದ ಪ್ರತಿವರ್ಷ ಕನಿಷ್ಠ ೧೫-೨೦ ವೈದ್ಯರು ತಯಾರಾಗಬೇಕು, ಆ ಹಿನ್ನೆಲೆಯಲ್ಲಿ ವಿಶೇಷ ತರಬೇತಿಯನ್ನು ನೀಡುತ್ತಿದ್ದೇವೆ ಎಂದರು.

ಸಮಾಜಸೇವಕ ಸತೀಶ್ ಸಾಲ್ಯಾನ್ ಮಣಿಪಾಲ. ಜನಸೇವಾ ಟ್ರಸ್ಟ್ ಪ್ರವರ್ತಕರಾದ ವಸಂತ ಗಿಳಿಯಾರ್, ಬೈಂದೂರು ತಾಲೂಕು ರೈತ ಸಂಘದ ಅಧ್ಯಕ್ಷರಾದ ದೀಪಕ್ ಕುಮಾರ್ ಶೆಟ್ಟಿ, ರಾಜಾರಾಮ ಗುರೂಜಿ, ವಿ.ವಿ.ವಿ. ಮಂಡಳಿ ಉಪಾಧ್ಯಕ್ಷ ರಾಜು ಪೂಜಾರಿ, ಕಾಲೇಜಿನ ಸಲಹೆಗಾರರಾದ ಚಿತ್ರಾ ಕಾರಂತ, ಜನತಾ ಪ್ರೌಢಶಾಲೆ ಮುಖ್ಯಶಿಕ್ಷಕ ಜಗದೀಶ ಶೆಟ್ಟಿ, ನ್ಯೂ ಜನತಾ ಆಂಗ್ಲ ಮಾಧ್ಯಮ ಶಾಲೆ ಕಿರಿಮಂಜೇಶ್ವರ ಇಲ್ಲಿನ ಮುಖ್ಯೋಪಾಧ್ಯಾಯಿನಿ ದೀಪಿಕಾ ಆಚಾರ್ಯ ಉಪಸ್ಥಿತರಿದ್ದರು.

ಉಪ ಪ್ರಾಂಶುಪಾಲರಾದ ರಮೇಶ ಪೂಜಾರಿ ಸ್ವಾಗತಿಸಿದರು. ಉಪನ್ಯಾಸಕ, ಸಾಂಸ್ಕೃತಿಕ ವಿಭಾಗ ಮುಖ್ಯಸ್ಥ ಉದಯ ನಾಯ್ಕ್ ಕಾರ್ಯಕ್ರಮ ನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಸಾಧಕರಿಗೆ ಸನ್ಮಾನ, ರೈತರಿಗೆ ಸನ್ಮಾನ ನೆರವೇರಿತು. ಬೇರೆ ಬೇರೆ ಶಾಲೆಯ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಉಡುಪಿ ಜಿಲ್ಲೆಯ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸಾಮೂಹಿಕ ನೃತ್ಯ ಸ್ಪರ್ಧೆ, ಚಿತ್ರ ಕಲಾ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆ, ವಿಜ್ಞಾನ ಮೇಳ, ಕಿರು ಪ್ರಹಸನ ಸ್ಪರ್ಧೆ ನಡೆಯಿತು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪ್ರತಿಷ್ಠಿತ ಕಲಾತಂಡಗಳಿಂದ ಹೋಳಿ ಕುಣಿತ, ಹೌಂದೇರಾಯನ ವಾಲಗ, ಹುಲಿ ಹೆಜ್ಜೆ, ವಿವಿಧ ನೃತ್ಯ ತಂಡಗಳಿಂದ ನೃತ್ಯ ಪ್ರದರ್ಶನ, ಅಂತರಾಷ್ಟ್ರೀಯ ಖ್ಯಾತಿಯ ಜಾದೂಗಾರ ಸತೀಶ್ ಹೆಮ್ಮಾಡಿ ತಂಡದವರಿಂದ ಜಾದೂ ವಿಸ್ಮಯ ನಡೆಯಿತು.

150ಕ್ಕೂ ಹೆಚ್ಚು ವೈವಿಧ್ಯಮಯ ಮಳಿಗೆಗಳು ಗಮನ ಸಳೆದವು. ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಸಾರ್ವಜನಿಕರು ಹಬ್ಬದೊಪಾದಿಯಲ್ಲಿ ಸಂಭ್ರಮಿಸಿದರು. ಹಳೆಯ ಕಾಲದ ತೊಟ್ಟಿಲು, ಕುದುರೆ ಆಟಗಳ ಜೊತೆಯಲ್ಲಿ ಈ ಕಾಲಘಟ್ಟದ ಮಕ್ಕಳ ಮನೋರಂಜನಾ ಆಟಗಳು ಗಮನ ಸಳೆದವು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!