Thursday, November 21, 2024

ಸರಕಾರಕ್ಕೆ ಕೊನೆಗೂ ಗ್ರಾಮ ಪಂಚಾಯಿತಿ ನೆನಪಾಯಿತು


ಸುಬ್ರಹ್ಮಣ್ಯ ಪಡುಕೋಣೆ
ಸಂಪಾದಕ


ಕೊರೊನಾ ನಿಯಂತ್ರಿಸುವಲ್ಲಿ ವಿಫಲವಾದ ಸರಕಾರಗಳು ಕೊನೆಕೊನೆಗೆ ಮನ ಬಂದಂತೆ ವರ್ತಿಸಿದ್ದನ್ನು ನೋಡಬಹುದಾಗಿದೆ. ದಿನಕ್ಕೊಂದು ಆದೇಶ, ಗಂಟೆಗೊಂದು ಹೇಳಿಕೆಗಳು ಆಳುವ ವರ್ಗದಿಂದ ಹೊರಬಿದ್ದು ಜನರನ್ನು ಗೊಂದಲದಲ್ಲಿ ಮುಳುಗಿಸಿದ್ದು ಎಲ್ಲರಿಗೂ ತಿಳಿದಿದೆ. ಆಳುವ ವರ್ಗಗಳು ಎಲ್ಲವನ್ನು ಕೂಡ ತನ್ನ ಹಿಡಿತದಲ್ಲೆ ಇಟ್ಟುಕೊಂಡು ಅಧಿಕಾರ ಚಲಾಯಿಸಿ ಅದರಲ್ಲಿ ಎಡವಟ್ಟು ಮಾಡಿಕೊಂಡು ಸಾರ್ವಜನಿಕ ಟೀಕೆಗೆ ಒಳಗಾಗಿದೆ. ಬ್ರಿಟಿಷ್ ವಶಾಹತುಶಾಹಿಯಂತಿರುವ ಜಿಲ್ಲಾಧಿಕಾರಿಗಳು ಎಂಬ ಸರ್ವಾಧಿಕಾರಿಗಳಿಂದ ಕೊರೊನಾ ನಿಯಂತ್ರಿಸಬಹುದೆಂದು ಸರಕಾರದ ಅಲೋಚನೆಯಲ್ಲಿದ್ದಿತ್ತು. ಅದರ ಪರಿಣಾಮವೆನಾಯಿತು ಎಂಬುದನ್ನು ರಾಜ್ಯದ ಜನತೆ ನೋಡಿದ್ದಾರೆ. ಮಾತೆತ್ತಿದರೆ ಕಾನೂನಿನ ಮೂಲಕ ಹೆದರಿಸಿ ಜನರನ್ನು ಬೆಚ್ಚಿ ಬೀಳಿಸಿದ ಆಳುವ ವರ್ಗಗಳು ದಂಡದಿಂದ ಕೊರೊನಾ ನಿಯಂತ್ರಿಸುತ್ತೇನೆಂಬ ಭ್ರಮೆಯನ್ನು ಬಿಟ್ಟು ಬಿಡಬೇಕಾಯಿತು. ಪ್ರತಿಯೊಂದನ್ನು ಕೂಡ ಸ್ಥಳೀಯಾಡಳಿತವನ್ನು ಹೊರಗಿಟ್ಟು ಆಡಳಿತ ನೆಡೆಸುವ ಆಡಳಿತಶಾಹಿಗಳು ಕೊರೊನಾ ನಿಯಂತ್ರಿಸುವಲ್ಲಿ ಆರಂಭದಿಂದಲೂ ಎಡವುತ್ತಲೇ ಬಂದಿವು. ಲಕ್ಷಾಂತರ ಮಂದಿಯನ್ನು ಹಸಿವಿನಿಂದ ಸಾಯಿಸಿ, ಜನರನ್ನು ಬೀದಿಬಿಕಾರಿಗಳಾಗುವಂತೆ ನೋಡಿಕೊಂಡ ಸರಕಾರ ಕೊನೆಗೆ ತನ್ನೆಲ್ಲಾ ಜವಬ್ದಾರಿಗಳನ್ನು ಸ್ಥಳೀಯಾಡಳಿತದ ಮೇಲೆ ಹಾಕಲು ಯೋಚಿಸಿತು. ಜಿಲ್ಲಾಧಿಕಾರಿಗಳ ತಾಳಕ್ಕೆ ಕುಣಿಯಬೇಕಾದ ಸ್ಥಳೀಯಾಡಳಿತ ವ್ಯವಸ್ಥೆ ಸಾಕಷ್ಟು ಗೊಂದಲಕಾರಿ ತೀರ್ಮಾನಗಳನ್ನು ತಗೆದುಕೊಳ್ಳುವಂತಾಯಿತು. ಸ್ಥಳೀಯ ಸಮಸ್ಯೆಗಳು ಸರಿಯಾಗಿ ಗೊತ್ತಿರುವುದು ಸ್ಥಳೀಯಾಡಳಿಕ್ಕೆ ಮಾತ್ರ. ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತ ಜಿಲ್ಲಾಧಿಕಾರಿಗಳಿಗೆ ಆಯಾ ಗ್ರಾಮೀಣ ಭಾಗದ ಜನರಿಗೆ ಆಯಾ ಸಮಸ್ಯೆಗಳು ತಿಳಿದಿರುವುದಿಲ್ಲ. ಅದು ಗೊತ್ತಿರುವುದು ಸ್ಥಳೀಯ ಜನರಿಗೆ. ಸರಕಾರ ಕೊರೊನಾ ನಿಯಂತ್ರಿಸುವಲ್ಲಿ ಕಂಡುಕೊಂಡ ಏಕೈಕ ಮಾರ್ಗವೆಂದರೆ ಅದು ಲಾಕ್‌ಡೌನ್ ಅದಕ್ಕಿಂತ ಹೆಚ್ಚಾಗಿ ಬೇರೆನು ಯೋಚನೆ ಮಾಡಿಲ್ಲ. ಆದುದರಿಂದಲೇ ಜನ ಹೆಚ್ಚಾಗಿ ಸಮಸ್ಯೆಯಲ್ಲಿ ಸಿಕ್ಕುವಂತಾಯಿತು. ಕೊರೊನಾ ಬಂದ ಸಂದರ್ಭದಲ್ಲಿಯೇ ಗ್ರಾಮ ಪಂಚಾಯತುಗಳಿಗೆ ಅಧಿಕಾರ ನೀಡಿದ್ದರೆ, ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವ ಆದೇಶವಿದ್ದಿದ್ದರೆ ಕೊರೊನಾ ನಿಯಂತ್ರಿಸಲು ಸಾಧ್ಯವಾಗುತ್ತಿತ್ತು. ಆದರೆ ಸರಕಾರ ಎಲ್ಲವನ್ನು ಜಿಲ್ಲಾಧಿಕಾರಿಗಳ ಮೂಲಕವೇ ಕೊರೊನಾ ನಿಯಂತ್ರಿಸಲು ಪ್ರಯತ್ನಿಸಿತು. ಇಂಜೆಕ್ಷನ್ ಚುಚ್ಚುವುದೊಂದನ್ನು ಬಿಟ್ಟು ಉಳಿದೆಲ್ಲವನ್ನು ಜಿಲ್ಲಾಧಿಕಾರಿಗಳ ಸರ್ವಾಧಿಕಾರದಲ್ಲಿ ಕೊರೊನಾ ನಿಯಂತ್ರಸುವ ಕಾರ್ಯಕ್ರಮ ಜರುಗಿತು. ಇದರಿಂದಾಗಿ ಕೊರೊನಾ ನಿಯಂತ್ರಣದಲ್ಲಿ ಸಾಕಷ್ಟು ಎಡವಟ್ಟುಗಳಾದವು. ಸರಕಾರದ ಯೋಜನೆಗಳು ಸರ್ವಾಧಿಕಾರಿಗಳ ಕೈಯಲ್ಲಿ ಕುಳಿತುಕೊಂಡಿತು, ಮಾತೆತ್ತಿದರೆ ವಿಪತ್ತು ಕಾಯ್ದೆಯಡಿ ಕ್ರಮಕೈಗೊಳ್ಳುವ ಮಾತುಗಳು ಕೇಳಿಬಂದವು. ಆದರೆ ಇತ್ತೀಚಿಗೆ ಕೊರೊನಾ ನಿಯಂತ್ರಿಸುವಂತೆ ಗ್ರಾಮ ಸಕಾರಗಳನ್ನು ಸರಕಾರ ಕೇಳಿಕೊಂಡಿತು. ಅದು ಕೊನೆಯ ಗಳಿಗೆಯಲ್ಲಿ. ಇದೀಗ ಗ್ರಾಮ ಪಂಚಾಯತುಗಳು ಮುತುವರ್ಜಿ ವಹಿಸಿ ಕೊರೊನಾ ನಿಯಂತ್ರಣಕ್ಕೆ ಮುಂದಾಗಿದೆ. ಗ್ರಾಮದ ಜನರ ಸಮಸ್ಯೆಗಳನ್ನು ಅರಿತ ಗ್ರಾಮ ಪಂಚಯತುಗಳಿಗೆ ಮುತುವರ್ಜಿ ವಹಿಸಿ ಕೆಲಸ ಮಾಡುವುದನ್ನು ನೋಡ ಬಹುದಾಗಿದೆ. ಗ್ರಾಮ ಪಂಚಾಯತುಗಳು ಜನರ ಆರೋಗ್ಯ ಕಾಪಾಡುವಲ್ಲಿ ಮತ್ತು ಜನರ ಸಂಕಷ್ಟದಿಂದ ದೂರವುಳಿಯುವಂತೆ ಮಾಡಲು ತನ್ನ ಶಾಸನಬದ್ದ ಕ್ರಮಗಳ ಮೂಲಕ ಮುತುವರ್ಜಿ ವಹಿಸಿ ಕೆಲಸ ನಿರ್ವಹಿಸಿದಾಗ ಕೊರೊನಾ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸ ಬಹುದಾಗಿದೆ. ಆ ನಿಟ್ಟಿನಲ್ಲಿ ಗ್ರಾಮ ಸರಕಾರಗಳು ಕೆಲಸ ನಿರ್ವಹಿಸಲಿ. ಸರಕಾರ ಗ್ರಾಮ ಪಂಚಾಯತುಗಳಿಗೆ ಇನ್ನಷ್ಟು ಕಾರ್ಯಕ್ರಮ ಅನುದಾನಗಳನ್ನು ಬಿಡುಗಡೆ ಮಾಡಲಿ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!