Sunday, September 8, 2024

ಸಂಕಷ್ಟಕ್ಕೆ ಸಿಲುಕಿದವರ ಹಸಿವು ನೀಗಿಸುವ ಸಹೃದಯಿ ಕುಂದಾಪುರದ ಸಾಯಿನಾಥ್ ಶೇಟ್


ಕುಂದಾಪುರ: ಕೊರೋನಾ ಒಂದೆಡೆ ಮಾನವೀಯ ಮುಖಗಳನ್ನೇ ಮಸುಕು ಮಾಡಿದರೆ ಇನ್ನೊಂದೆಡೆ ಹಲವಾರು ಮಾನವೀಯ ಮುಖಗಳ ಪರಿಚಯವಾಗುತ್ತಿದೆ. ಕೊರೋನಾ ಇಕ್ಕಟ್ಟಿನಲ್ಲಿ ಸಿಲುಕಿ ತುತ್ತಿಗಾಗಿ ಕಾದಿರುವ ಅದೆಷ್ಟು ಹಸಿದ ಹೊಟ್ಟೆಗಳ ಹಸಿವು ನೀಗಿಸುತ್ತಿರುವ ಸಹೃದಯಿ ಮನಸುಗಳ ನಡುವೆ ಏಕಾಂಗಿಯಾಗಿ ಸೇವೆ ಮಾಡುತ್ತಿರುವ ಆಪತ್ಬಾಂಧವ ಕುಂದಾಪುರ ಚಿಕ್ಕನ್‌ಸಾಲ್ ನಿವಾಸಿ ಸಾಯಿನಾಥ್ ಶೇಟ್ ವಿಶೇಷವಾಗ ಗಮನ ಸಳೆಯುತ್ತಾರೆ.


ತನ್ನ ಸ್ಕೂಟರ್ ಬೈಕ್‌ನಲ್ಲಿ ಊಟ, ಕಾಫಿ, ಚಹಾ, ಬಿಸ್ಕತ್ತು… ಹೀಗೆ ತಿನಿಸುಗಳನ್ನು ಇರಿಸಿಕೊಂಡು ಲಾಕ್ ಡೌನ್ ಸಂಕಷ್ಟಕ್ಕೆ ಸಿಲುಕಿದವರ ನೆರವಿಗೆ ಧಾವಿಸುವ ದೃಶ್ಯ ಸರ್ವೇ ಸಹಜವಾಗಿ ಬಿಟ್ಟಿದೆ. ಇವರ ಬೈಕ್ ಬಂತು ಎಂದರೆ ವಲಸೆ ಕಾರ್ಮಿಕರು, ಭಿಕ್ಷುಕರು ಅವರ ಸುತ್ತಮುತ್ತ ನೆರೆದು ಬಿಡುತ್ತಾರೆ. ಶೇಟ್ ಎಲ್ಲರಿಗೂ ಪ್ರೀತಿಯಿಂದ ತನ್ನಲ್ಲಿರುವುದನ್ನು ಹಂಚಿ ತೃಪ್ತಿ ಕಾಣುತ್ತಾರೆ.
ಇವರ ಸೇವಾಧರ್ಮ ಆರಂಭವಾಗಲು ಕೊರೋನಾ ಬಿಕ್ಕಟ್ಟು ಕಾರಣವಲ್ಲ. ಹಲವಾರು ವರ್ಷಗಳಿಂದ ಅವರು ಹಸಿದವರ ಹಸಿವು ನೀಗಿಸುವ ಕಾರ್ಯ ಸದ್ದಿಲ್ಲದೆ ಮಾಡಿಕೊಂಡು ಬರುತ್ತಿದ್ದಾರೆ. ಕಳೆದ ವರ್ಷ ಲಾಕ್ ಡೌನ್ ನಿಂದಾಗಿ ಹೆಚ್ಚು ಜನರ ಹಸಿವು ನೀಗಿಸಿ ಗಮನ ಸಳೆದರು.


ಕಳೆದ ಬಾರಿ ನಿತ್ಯವೂ ಲಾಕ್ ಡೌನ್ ಮುಗಿಯುವ ತನಕವೂ ಊಟ, ಕಾಪಿ, ಬಿಸ್ಕತ್ತುಗಳನ್ನು ನೀಡಿದರು. ಲಾಕ್ ಡೌನ್ ಮುಗಿದ ಬಳಿಕವೂ ಎಲ್ಲಿಯಾದರೂ ಹಸಿದವರು ಇವರ ಗಮನಕ್ಕೆ ಬಂದರೆ ತಕ್ಷಣ ಸ್ಪಂದಿಸಿದ್ದಾರೆ. ಮತ್ತೆ ಈಗ ಕೊರೋನಾ ೨ನೇ ಅಲೆಗೆ ಈ ವರ್ಷವೂ ಲಾಕ್ ಡೌನ್ ಆಯಿತು. ಕುಂದಾಪುರ, ಕೋಟೇಶ್ವರ, ಹಂಗಳೂರು, ಅಂಕದಕಟ್ಟೆ, ತಲ್ಲೂರು, ಹಟ್ಟಿಯಂಗಡಿ ಹೀಗೆ ಪ್ರತಿನಿತ್ಯ ನೂರಾರು ಮಂದಿಗೆ ಮಧ್ಯಾಹ್ನ ಮತ್ತು ರಾತ್ರಿ ಊಟ, ಸಂಜೆ ಕಾಫಿ, ಚಹಾ, ಬಿಸ್ಕತ್ತು ನೀಡುತ್ತಾರೆ. ಇವರು ಆಹಾರ ಪದಾರ್ಥಗಳನ್ನು ಸಂಗ್ರಹಿಸಿಕೊಂಡು ಬೈಕ್ ಏರಿ ಹೊರಟರೆಂದರೆ ಮಾರ್ಗದಲ್ಲಿ ಯಾರು ಹಸಿವೆಯಿಂದ ಇದ್ದರೋ ಅವರಿಗೆಲ್ಲಾ ನೀಡುತ್ತಾ ಖುಷಿ ಪಡುತ್ತಾರೆ. ಅಕ್ಕರೆಯಿಂದ ಆಹಾರ ಪದಾರ್ಥಗಳನ್ನು ನೀಡಿ ಖುಷಿ ಪಡುತ್ತಾರೆ. ಕೆಲವೊಂದು ಸಂದರ್ಭದಲ್ಲಿ ತನ್ನಲ್ಲಿರುವ ಊಟ ಖಾಲಿಯಾದರೂ ಒಂದಿಬ್ಬರು ಹಸಿವೆ ವ್ಯಕ್ತ ಪಡಿಸಿದರೆ ತನ್ನ ಸ್ನೇಹಿತರ ಮನೆಯಿಂದಾದರೂ ಊಟ ಪಡೆದು ಹಂಚುತ್ತಾರೆ.


ಇಷ್ಟೊಂದು ದಿನಗಳಿಂದ ಹೇಗೆ ಈ ಸೇವೆ ಮಾಡುತ್ತಾರೆ ಎನ್ನುವ ಸಹಜ ಪ್ರಶ್ನೆ ಎಲ್ಲರಲ್ಲೂ ಇರುತ್ತದೆ. ಇವರು ಆರ್ಥಿಕವಾಗಿ ಸ್ಥಿತಿವಂತರಲ್ಲ. ಬ್ಯಾಂಕ್ ಆಫ್ ಬರೋಡಾದಲ್ಲಿ ಸರಾಫರಾಗಿ ಕೆಲಸ ಮಾಡುತ್ತಾರೆ. ಮನೆಯಲ್ಲಿ ಚಿಕ್ಕಪುಟ್ಟ ಚಿನ್ನಬೆಳ್ಳಿ ಕೆಲಸ ಮಾಡುತ್ತಾರೆ. ಇವರ ವೃತ್ತಿಗೂ ಕರೋನಾ ಹೊಡೆತ ನೀಡಿದೆ.


ಇವರಿಗೆ ಹೋಟೆಲ್, ಕಲ್ಯಾಣಮಂಟಪಗಳು, ಶುಭ ಸಮಾರಂಭಗಳ ಆಯೋಜಕರ ಪರಿಚಯವಿದೆ. ಶುಭ ಸಮಾರಂಭಗಳಲ್ಲಿ ಆಹಾರ ಉಳಿದರೆ ಇವರಿಗೆ ಪೋನ್ ಬರುತ್ತದೆ. ಅಲ್ಲಿನ ಉಳಿಕೆ ಆಹಾರವನ್ನು ಸ್ವಚ್ಛವಾಗಿ ಸಂಗ್ರಹಿಸಿ, ಊಟ ಮಾಡಲು ಯೋಗ್ಯವಾಗಿದ್ದರೆ ಅದನ್ನು ತಂದು ಅಸಹಾಯಕರಿಗೆ ನೀಡುತ್ತಿದ್ದಾರೆ. ಕೆಲವು ಹೊಟೇಲ್‌ನವರು ಸಂಜೆ ಆಹಾರ ಪದಾರ್ಥಗಳು ಉಳಿದರೆ ಇವರಿಗೆ ಕರೆ ಮಾಡುತ್ತಾರೆ. ಮತ್ತೆ ಇವರ ಸ್ನೇಹಿತರ ವಲಯ ಕೆಲವೊಂದು ದಿನದ ಊಟಗಳ ವ್ಯವಸ್ಥೆ ಮಾಡುತ್ತಾರೆ. ಹೆಚ್ಚಿನ ದಿನಗಳಲ್ಲಿ ಊಟ ಹಾಗೂ ಚಹಾ, ಕಾಫಿ ಇವರೇ ಸಿದ್ಧ ಪಡಿಸಿ ಹಂಚುತ್ತಾರೆ.


ಹೀಗೆ ಸಾಮಾನ್ಯರಲ್ಲಿ ಸಾಮಾನ್ಯ ಸಾಯಿನಾಥ್ ಶೇಟ್‌ರಂತಹ ಮಾನವೀಯ ಮನಸ್ಸುಗಳು ಸಮಾಜದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮೂಡಿಬರಬೇಕಾಗಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!