spot_img
Saturday, May 9, 2026
spot_img

ಕ್ರಿಕೆಟ್ ಬಾಳ್ವೆಯ ಸಂಧ್ಯಾಕಾಲದಲ್ಲಿ ಎಂಎಸ್. ಧೋನಿ

-ಎಸ್.ಜಗದೀಶಚಂದ್ರ ಅಂಚನ್ ಸೂಟರ್ ಪೇಟೆ

ಭಾವನೆಯು ಕ್ರೀಡೆಯಲ್ಲಿ ಅಗಾಧವಾದ ಪಾತ್ರವನ್ನು ವಹಿಸುತ್ತದೆ. ಸಾಮಾಜಿಕ ಜಾಲತಾಣಗಳು ಮತ್ತು ಅಂಕಿಅಂಶಗಳು ಕ್ರೀಡೆಯ ವಿಶ್ಲೇಷಣೆಯನ್ನು ನೀಡಲು ಪ್ರಯತ್ನಿಸುತ್ತಿರುವ ಕಾಲಘಟ್ಟದಲ್ಲಿ ‘ಕ್ರಿಕೆಟ್’ ಎನ್ನುವ ಮೂರುವರೇ ಅಕ್ಷರ ವಿಶ್ವವನ್ನೇ ತನ್ನೆಡೆಗೆ ಸೆಳೆಯುವ ಮಂತ್ರ ಶಕ್ತಿಯನ್ನು ಹೊಂದಿದೆ. ಕ್ರಿಕೆಟ್, ಉತ್ಸಾಹ ಮತ್ತು ಚೈತನ್ಯವನ್ನು ತುಂಬುತ್ತದೆ. ಇಂತಹ ಚೈತನ್ಯಪೂರಿತ ಆಟದಲ್ಲಿ ಅನೇಕ ಕ್ರಿಕೆಟ್ ದಿಗ್ಗಜರು ತಮ್ಮ ಅಧಿಪತ್ಯವನ್ನು ಸ್ಥಾಪಿಸಿದ ಉದಾಹರಣೆಗಳೂ ಕೂಡ ಸಾಕಷ್ಟಿವೆ. ಈ ಅಧಿಪತ್ಯಕ್ಕೂ ಒಂದು ಕಾಲಘಟ್ಟ ಎಂಬುವುದಿದೆ. ಕೆಲವೊಂದು ಬಾರಿ ಆ ಕಾಲಘಟ್ಟದ ಫಲವಾಗಿ ಕೆಲವು ಆಟಗಾರರಿಗೆ ಮುಟ್ಟಿದೆಲ್ಲವೂ ಚಿನ್ನ ಆದದ್ದು ಇದೆ. ಅಂದರೆ ತಮ್ಮೆಲ್ಲ ಇಚ್ಛೆಗೆ ತಕ್ಕಂತೆ ಫಲಿತಾಂಶ ಬಂದಿರುತ್ತದೆ. ಇದಕ್ಕೆ ಒಂದು ಉತ್ತಮ ನಿದರ್ಶನ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ.


ಹೌದು, ಮಹೇಂದ್ರ ಸಿಂಗ್ ಧೋನಿ ತನ್ನ ಕ್ರಿಕೆಟ್ ಬದುಕಿನಲ್ಲಿ ಸಂಪಾದಿಸಿದ ಕೀರ್ತಿ ಹಾಗೂ ಪಡೆದ ಪ್ರಶಸ್ತಿಗಳು ಅಂತಾರಾಷ್ಟ್ರೀಯ ಕ್ರಿಕೆಟಿನಲ್ಲಿ ಯಾವ ನಾಯಕರಿಗೂ ದಕ್ಕಿರಲಿಕ್ಕಿಲ್ಲ. ಅಂತಹ ಅದ್ಭುತ ಸಾಧನೆಯನ್ನು ಕ್ರಿಕೆಟ್ ಜಗತ್ತಿನಲ್ಲಿ ಧೋನಿ ಮಾಡಿದ್ದಾರೆ. ಅವರೊಬ್ಬ ಕ್ರಿಕೆಟ್ ಜಗತ್ತಿನ ಅಜಾತಶತ್ರು. ಆದರೆ, ಅವೆಲ್ಲವೂ ಸುದೀರ್ಘ ಅವಧಿಯನ್ನು ಹೊಂದಲು ಸಾಧ್ಯವಿಲ್ಲ. ಮಹೇಂದ್ರ ಸಿಂಗ್ ಧೋನಿಯ ಸದ್ಯದ ಪರಿಸ್ಥಿತಿಯನ್ನು ಗಮನಿಸಿದಾಗ ಅವರು ಕ್ರಿಕೆಟ್ ಬದುಕಿನ ಸಂಧ್ಯಾಕಾಲದಲ್ಲಿದ್ದರೆ ಎನ್ನುವ ಭಾವನೆ ಸಹಜವಾಗಿಯೇ ಮೂಡಿದೆ. ಧೋನಿ ಯಾವುದೇ ತಂಡವನ್ನು ಮುನ್ನಡೆಸಿದರೂ ಕೂಡ ನಿರ್ದಿಷ್ಟವಾದ ಗುರಿಯನ್ನು ಹೊಂದಿರುತ್ತಾರೆ. ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿ ಆರಂಭವಾದಾಗಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಇವರದ್ದೇ ನಾಯಕತ್ವ. 14 ಆವೃತ್ತಿಯನ್ನು ಕಂಡಿರುವ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮೂರು ಬಾರಿ ಪ್ರಶಸ್ತಿಯನ್ನು ಗೆದ್ದು ಬೀಗಿದೆ. ಮಾತ್ರವಲ್ಲ ಹಲವು ಬಾರಿ ಸ್ಪರ್ಧಾತ್ಮಕವಾಗಿ ತಂಡವನ್ನು ಮುನ್ನಡೆಸಿದ ಹೆಗ್ಗಳಿಕೆ ಕೂಡ ಇವರದ್ದು. ಆದರೆ, ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಧೋನಿ ಬ್ಯಾಟಿಂಗ್ ಸದ್ದು ಮಾಡುತ್ತಿಲ್ಲ. ಯಾವಾಗಲೂ ಭರ್ಜರಿ ಬ್ಯಾಟಿಂಗ್ ನಡೆಸುವ ಇವರು ಈ ಯಾಕೋ ಸಪ್ಪೆಯಾಗಿದ್ದಾರೆ.


ಕಳೆದ ಐಪಿಎಲ್ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ತೋರಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಈ ಬಾರಿ ಹೇಗಾದರೂ ಮಾಡಿ ಮೇಲೆತ್ತಬೇಕೆಂಬ ಪಣತೊಟ್ಟಿರುವ ಎಂಎಸ್ ಧೋನಿಗೆ ಮೊದಲ ಪಂದ್ಯದ ಸೋಲು ಭಾರೀ ಆಘಾತವನ್ನೇ ನೀಡಿದೆ. ‘ಕ್ಯಾಪ್ಟನ್ ಕೂಲ್’ ಎಂದೇ ಹೆಸರು ಮಾಡಿರುವ ಎಂಎಸ್ ಧೋನಿ ಅವರ ನಾಯಕತ್ವದ ಬಗ್ಗೆ ಎರಡು ಮಾತಿಲ್ಲ. ಐಪಿಎಲ್ ಕ್ರಿಕೆಟ್ ಇತಿಹಾಸ ಕಂಡ ಅತ್ಯದ್ಭುತ ಮತ್ತು ಅತ್ಯುತ್ತಮ ನಾಯಕ ಯಾರು ಎಂದು ಕೇಳಿದರೆ ಎಲ್ಲರ ಉತ್ತರ ಎಂಎಸ್ ಧೋನಿ. ಆದರೆ, ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಿಕೊಂಡು ಬಂದಿರುವ ಧೋನಿ ಅವರ ವಿರುದ್ಧ ಕಳೆದ ಆವೃತ್ತಿಯ ವೇಳೆ ಸಾಕಷ್ಟು ಟೀಕೆಗಳು ಕೇಳಿ ಬಂದಿದ್ದವು.


2020ರ ಐಪಿಎಲ್ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ತೋರಿದ ಎಂಎಸ್ ಧೋನಿ ಅವರ ನಾಯಕತ್ವದ ವಿರುದ್ಧ ಅಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆಗಳು ಎದುರಾದವು. ಅಂತಹ ಟೀಕೆಗಳಿಗೆ ಎಂಎಸ್. ಧೋನಿ 2021ರ ಐಪಿಎಲ್ ಟೂರ್ನಿಯಲ್ಲಾದರೂ ದಿಟ್ಟ ಉತ್ತರ ನೀಡುವರೆಂಬ ಭರವಸೆಯನ್ನು ಕ್ರಿಕೆಟ್ ಅಭಿಮಾನಿಗಳು ಹೊಂದಿದ್ದಾರೆ. ಆದರೆ, ಅಂತಹ ಭರವಸೆ ಮೊದಲ ಪಂದ್ಯದಲ್ಲೇ ಠುಸ್ ಆಗಿದೆ. ಮುಂಬೈ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಈ ಆವೃತ್ತಿಯ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 7 ವಿಕೆಟ್ ಅಂತರದಲ್ಲಿ ಸೋತಿತ್ತು. ಚೆನ್ನೈ ಸೂಪರ್ ಕಿಂಗ್ಸ್ ಸರಾಗವಾಗಿ ರನ್ ಬಿಟ್ಟುಕೊಟ್ಟ ಕಾರಣ ಡೆಲ್ಲಿ ಕ್ಯಾಪಿಟಲ್ಸ್ ಸುಲಭವಾಗಿ ಗೆಲುವು ದಾಖಲಿಸಿತು ಎಂದು ಧೋನಿ ಪಂದ್ಯದ ನಂತರ ಹೇಳಿಕೊಂಡರು. ಆದರೆ, ಈ ಸೋಲಿನಿಂದ ಧೋನಿ ಬೇಗನೆ ಎಚ್ಚೆತ್ತು ಕೊಂಡಿದ್ದಾರೆ. ಈ ಲೇಖನ ಬರೆಯುವ ಹೊತ್ತಿಗೆ ಚೆನ್ನೈ ಸೂಪರ್ ಕಿಂಗ್ಸ್ 5 ಪಂದ್ಯಗಳನ್ನು ಆಡಿ 1ರಲ್ಲಿ ಸೋಲು 4 ರಲ್ಲಿ ಗೆಲುವು ಪಡೆದು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ನಾಯಕತ್ವದಲ್ಲಿ ತನ್ನ ಛಾಪನ್ನು ಮೂಡಿಸಿದರೂ ಕೂಡ ಬ್ಯಾಟಿಂಗ್‍ನಲ್ಲಿ ಮಾತ್ರ ಇವರಿಂದ ಉತ್ತಮ ಆಟ ಮೂಡಿ ಬಂದಿಲ್ಲ. ಇದು ಅವರನ್ನು ಹೆಚ್ಚು ಮುಜುಗರಕ್ಕೀಡು ಮಾಡಿದೆ.


ಐಪಿಎಲ್‍ನಲ್ಲಿ ಶ್ರೇಷ್ಠ ನಾಯಕತ್ವ:
ಧೋನಿ ಇದೀಗ ನಾಯಕತ್ವದ ಸಂಧ್ಯಾಕಾಲದಲ್ಲಿರಬಹುದು. ಆದರೆ, ಅವರು ಐಪಿಎಲ್ ಕ್ರಿಕೆಟ್ ಇತಿಹಾಸದಲ್ಲಿ ಸ್ಥಾಪಿಸಿರುವ ದಾಖಲೆಗಳನ್ನು ಯಾರು ಮರೆಯಲು ಸಾಧ್ಯವಿಲ್ಲ. ಧೋನಿ ನಾಯಕನಾಗಿ ಐಪಿಎಲ್ ಟೂರ್ನಿಯಲ್ಲಿ ನಿರ್ಮಿಸಿರುವ ದಾಖಲೆಗಳನ್ನು ಮುರಿಯುವುದು ಸುಲಭದ ಮಾತಲ್ಲ. ಇದುವರೆಗೂ ನಡೆದಿರುವ ಐಪಿಎಲ್ ಟೂರ್ನಿಯಲ್ಲಿ ಅತಿಹೆಚ್ಚು ಗೆಲುವು ಸಾಧಿಸಿರುವ ನಾಯಕ ಎಂಬ ಹೆಗ್ಗಳಿಕೆಯನ್ನು ಧೋನಿ ಹೊಂದಿದ್ದಾರೆ. ಧೋನಿ ತನ್ನ ನಾಯಕತ್ವದಲ್ಲಿ 110 ಐಪಿಎಲ್ ಪಂದ್ಯಗಳನ್ನು ಗೆಲ್ಲಿಸಿದ್ದಾರೆ. ಇದು ಐಪಿಎಲ್ ಇತಿಹಾಸದಲ್ಲಿಯೇ ನಾಯಕನೊಬ್ಬ ಗೆಲ್ಲಿಸಿರುವ ಅತಿ ಹೆಚ್ಚು ಪಂದ್ಯ. ಇಷ್ಟು ಪಂದ್ಯಗಳನ್ನು ಗೆಲ್ಲಿಸುವ ಸಾಹಸವನ್ನು ಇದುವರೆಗೂ ಬೇರೆ ಯಾವ ನಾಯಕನೂ ಮಾಡಿಲ್ಲ. ಈ ದಾಖಲೆಯನ್ನು ಮುರಿಯುವುದಿರಲಿ ಇದರ ಹತ್ತಿರಕ್ಕೂ ಸಹ ಯಾರೂ ಬಂದಿಲ್ಲ.


ಎಂಎಸ್ ಧೋನಿ ನಾಯಕನಾಗಿ 189 ಪಂದ್ಯಗಳನ್ನಾಡಿದ್ದು ಇದರಲ್ಲಿ 110ರಲ್ಲಿ ಜಯ ಗಳಿಸಿದರೆ, 78ರಲ್ಲಿ ಸೋಲು ಕಂಡಿದ್ದಾರೆ. ಧೋನಿಯನ್ನು ಬಿಟ್ಟರೆ ಗೌತಮ್ ಗಂಭೀರ್ ನಾಯಕನಾಗಿ ಅತಿಹೆಚ್ಚು ಐಪಿಎಲ್ ಪಂದ್ಯಗಳನ್ನು ಗೆದ್ದಿದ್ದಾರೆ. 129 ಪಂದ್ಯಗಳನ್ನು ನಾಯಕನಾಗಿ ಆಡಿರುವ ಗಂಭೀರ್ 71 ಪಂದ್ಯಗಳಲ್ಲಿ ಗೆದ್ದು, 57 ಪಂದ್ಯಗಳಲ್ಲಿ ಸೋಲನುಭವಿಸಿದ್ದಾರೆ. ಇನ್ನೂ ಐಪಿಎಲ್ ಕ್ರಿಕೆಟ್ ಇತಿಹಾಸದಲ್ಲಿ ಐದು ಬಾರಿ ಪ್ರಶಸ್ತಿ ಗೆದ್ದಿರುವ ದಾಖಲೆ ಹೊಂದಿರುವ ರೋಹಿತ್ ಶರ್ಮ 116 ಪಂದ್ಯಗಳಲ್ಲಿ ನಾಯಕನಾಗಿ ಆಡಿದ್ದಾರೆ. ಇದರಲ್ಲಿ 68 ಪಂದ್ಯಗಳನ್ನು ಜಯಿಸಿರುವ ರೋಹಿತ್ 44 ಪಂದ್ಯಗಳಲ್ಲಿ ಸೋಲನ್ನುಂಡಿದ್ದಾರೆ. ನಾಯಕನಾಗಿ ಅತಿಹೆಚ್ಚು ಐಪಿಎಲ್ ಪಂದ್ಯ ಗೆದ್ದಿರುವ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿಗೆ ನಾಲ್ಕನೇ ಸ್ಥಾನ. ಇದುವರೆಗೂ 125 ಐಪಿಎಲ್ ಪಂದ್ಯಗಳನ್ನಾಡಿರುವ ಕೊಹ್ಲಿ 55 ಪಂದ್ಯಗಳಲ್ಲಿ ಜಯಗಳಿಸಿ, 63 ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿದ್ದಾರೆ. (ಅಂಕಿ ಅಂಶಗಳು ಮಾರ್ಚ್-10ರ ವರೆಗೆ)


ಟೀಂ ಇಂಡಿಯಾದ ಯಶಸ್ವಿ ನಾಯಕ :
ಟೀಂ ಇಂಡಿಯಾದ ಯಶಸ್ವಿ ನಾಯಕ, ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟಿನಲ್ಲಿ ನಿವೃತ್ತಿ ಹೊಂದಿರುವ ಮಹೇಂದ್ರ ಸಿಂಗ್ ಧೋನಿ ವಿಶ್ವ ಕ್ರಿಕೆಟ್‍ನಲ್ಲಿ ಸಾರ್ವಕಾಲಿಕ ಶ್ರೇಷ್ಠ ನಾಯಕರು. ಅವರು ಅಂತಾರಾಷ್ಟ್ರೀಯ ಕ್ರಿಕೆಟಿನಲ್ಲಿ ನಾಯಕರಾಗಿ ಅದ್ಭುತ ದಾಖಲೆಯನ್ನು ಹೊಂದಿದ್ದಾರೆ. 2007ರಲ್ಲಿ ಐಸಿಸಿ ಟ್ವೆಂಟಿ-20 ವಿಶ್ವಕಪ್, 2011ರ ಐಸಿಸಿ ಏಕದಿನ ವಿಶ್ವಕಪ್ ಮತ್ತು 2013ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಟೀಂ ಇಂಡಿಯಾ ಎಂಎಸ್.ಧೋನಿ ಸಾರಥ್ಯದಲ್ಲಿ ಗೆದ್ದಿದೆ. ಮಾತ್ರವಲ್ಲ ಭಾರತೀಯ ಕ್ರಿಕೆಟ್ ತಂಡವನ್ನು ಮೊದಲ ಬಾರಿಗೆ ಟೆಸ್ಟ್ ಕ್ರಿಕೆಟಿನಲ್ಲಿ ನಂ.1 ಸ್ಥಾನಕ್ಕೇರಿಸಿದ ಮೊದಲ ನಾಯಕ ಮಹೇಂದ್ರ ಸಿಂಗ್ ಧೋನಿ. ಅವರು ಅಂತಾರಾಷ್ಟ್ರೀಯ ಕ್ರಿಕೆಟಿನಿಂದ ವಿರಮಿಸುವ ಮೊದಲು 200 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳು, 60 ಟೆಸ್ಟ್ ಪಂದ್ಯಗಳು ಮತ್ತು 72 ಟ್ವೆಂಟಿ-20 ಪಂದ್ಯಗಳಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಿದ್ದರು. ಹೀಗೆ ಒಟ್ಟು 332 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಟೀಂ ಇಂಡಿಯಾವನ್ನು ಎಂಎಸ್ ಧೋನಿ ಮುನ್ನಡೆಸಿರುವುದು ಕೂಡ ದಾಖಲೆಯಾಗಿದೆ.


ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟಿನಲ್ಲಿ ನಿವೃತ್ತಿ ಹೊಂದಿರುವ ಮಹೇಂದ್ರ ಸಿಂಗ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಈ ಬಾರಿ ಕೊನೆಯ ಐಪಿಎಲ್ ಸೀಸನ್ ಆಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಾರಿಯ ಐಪಿಎಲ್ ಬಳಿಕ ಅವರು ಎಲ್ಲಾ ಫಾರ್ಮ್ಯಾಟ್‍ನ ಕ್ರಿಕೆಟ್‍ನಿಂದ ನಿವೃತ್ತರಾಗಲಿದ್ದಾರೆ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ. 39 ವರ್ಷದ ಧೋನಿ ತನ್ನ ಕ್ರಿಕೆಟ್ ಬಾಳ್ವೆಯ ಕೊನೆಯ ಐಪಿಎಲ್ ಸೀಸನ್‍ನಲ್ಲಿ ನಿವೃತ್ತರಾಗುವ ಮೊದಲು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮತ್ತೊಂದು ಬಾರಿ ಟ್ರೋಫಿ ಗೆಲ್ಲಿಸಿಕೊಡಲಿ ಎನ್ನುವ ಆಶಯ ಕ್ರಿಕೆಟ್ ಅಭಿಮಾನಿಗಳಲ್ಲಿದೆ. ಆದರೆ, ಕ್ರಿಕೆಟ್ ಬಾಳ್ವೆಯ ಸಂಧ್ಯಾಕಾಲದಲ್ಲಿರುವ ಎಂಎಸ್. ಧೋನಿಯಿಂದ ಇದು ಸಾಧ್ಯವೇ ? ಎನ್ನುವ ಪ್ರಶ್ನೆ ಕೂಡ ಎದ್ದಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!