16.1 C
New York
Friday, October 22, 2021

Buy now

spot_img

ಐಪಿಎಲ್ : ‘ಈ ಸಲ ಕಪ್ ನಮ್ದೆ’ ಎನ್ನುವ ಆರ್.ಸಿ.ಬಿ ಕನಸು ನನಸಾಗಲಿ …


ಜಗದೀಶ್‍ಚಂದ್ರ ಅಂಚನ್, ಸೂಟರ್ ಪೇಟೆ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ಚೊಚ್ಚಲ ಕಪ್ ಗೆಲುವಿನ ಕನವರಿಕೆಯಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕಳೆದ ಭಾನುವಾರ (ಮಾರ್ಚ್-18) ನಡೆದ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಜಯ ಪಡೆಯುವ ಮೂಲಕ ‘ಹ್ಯಾಟ್ರಿಕ್’ ಗೆಲುವಿನೊಂದಿಗೆ ಮುನ್ನುಗ್ಗುತ್ತಿದೆ. ಐಪಿಎಲ್ 2021ರ ಆವೃತ್ತಿಗೆ ನಡೆದ ಹರಾಜಿನ ಬಗ್ಗೆ ಆರ್‍ಸಿಬಿ ಟೀಮ್ ಮ್ಯಾನೇಜ್‍ಮೆಂಟ್ ಈಗ ಸಂಪೂರ್ಣ ಸಂತೃಪ್ತಿಯನ್ನು ಹೊಂದಿದೆ. ಕಾರಣ , ಈಗಾಗಲೇ ಆಡಿರುವ ಮೂರು ಪಂದ್ಯಗಳಲ್ಲೂ ಸ್ಪರ್ಧಾತ್ಮಕ ಹೋರಾಟ ನೀಡಿರುವ ಬೆಂಗಳೂರು ತಂಡ ಐಪಿಎಲ್-14ನೇ ಆವೃತ್ತಿಯಲ್ಲಿ ಕಪ್ ಗೆಲ್ಲುವ ಫೇವರಿಟ್ ತಂಡ ಎನಿಸಿದೆ.ಆರ್ ಸಿಬಿ ಅಭಿಮಾನಿಗಳಂತೂ ‘ಈ ಸಲ ಕಪ್ ನಮ್ದೆ’ ಎನ್ನುವ ವಿಜಯಘೋಷ ಹಾಡಲು ಪ್ರಾರಂಭಿಸಿದ್ದಾರೆ.


ಆಸ್ಟ್ರೇಲಿಯಾದ ಆಲ್‍ರೌಂಡರ್ ಗ್ಲೆನ್ ಮ್ಯಾಕ್ಸ್‍ವೆಲ್, ನ್ಯೂಜಿಲೆಂಡ್ ವೇಗದ ಬೌಲರ್ ಕೈಲ್ ಜೇಮಿಸನ್ ಸೇರಿದಂತೆ ಪ್ರಮುಖ ಆಟಗಾರರ ಸೇರ್ಪಡೆಯೊಂದಿಗೆ ವಿರಾಟ್ ಕೊಹ್ಲಿ ಬಳಗವು ಈ ಬಾರಿ ಅತ್ಯಂತ ಬಲಾಢ್ಯವಾಗಿ ಕಾಣಿಸುತ್ತಿದೆ. ಕಳೆದ ವರ್ಷ ಯುಎಇನಲ್ಲಿ ನಡೆದ ಐಪಿಎಲ್ ಟೂರ್ನಿಯ 13ನೇ ಆವೃತ್ತಿಯಲ್ಲಿ ಪ್ಲೇ-ಆಫ್ ಹಂತವನ್ನು ತಲುಪಿದ್ದರೂ ನಾಯಕ ವಿರಾಟ್ ಕೊಹ್ಲಿ ಹಾಗೂ ಎಬಿಡಿ ವಿಲಿಯರ್ಸ್ ಗಾಯದ ಸಮಸ್ಯೆಗೊಳಗಾಗಿದ್ದರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹಿನ್ನೆಡೆಗೆ ಕಾರಣವಾಗಿತ್ತು . ಇದರೊಂದಿಗೆ ಎಲಿಮಿನೇಟರ್ ಹಂತದಲ್ಲೇ ಪ್ರಶಸ್ತಿ ಕನಸು ಭಗ್ನಗೊಂಡಿತ್ತು.

ಈ ಬಾರಿಯ ಐಪಿಎಲ್ ಹರಾಜಿನಲ್ಲಿ 10 ಆಟಗಾರರನ್ನು ಕೈಬಿಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ , ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗವನ್ನು ಹೆಚ್ಚು ಬಲಪಡಿಸುವುದರಲ್ಲಿ ಗಮನ ಕೇಂದ್ರಿಕರಿಸಿತ್ತು. ಮೇಲ್ನೋಟಕ್ಕೆ ಆರ್‍ಸಿಬಿ ಬ್ಯಾಟಿಂಗ್ ಪಡೆಯು ಅತ್ಯಂತ ಬಲಿಷ್ಠವಾಗಿದೆ. ಈ ಬಾರಿ ಬೆಂಗಳೂರು ತಂಡವು ಹೊಡಿಬಡಿಯ ದಾಂಡಿಗರ ಪಡೆಯನ್ನೇ ಹೊಂದಿದೆ. ಯಾವುದೇ ಬೃಹತ್ ಮೊತ್ತವನ್ನು ಚೇಸ್ ಮಾಡುವ ಆತ್ಮವಿಶ್ವಾಸವನ್ನು ಆರ್‍ಸಿಬಿ ಹೊಂದಿದೆ . ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‍ವೆಲ್ , ನ್ಯೂಜಿಲೆಂಡಿನ ಫಿನ್ ಅಲೆನ್, ಡ್ಯಾನಿಯಲ್ ಕ್ರಿಶ್ಚಿಯನ್, ದೇವದತ್ತ ಪಡಿಕ್ಕಲ್, ವಾಷಿಂಗ್ಟನ್ ಸುಂದರ್ ಜೊತೆಗೆ ನಾಯಕ ವಿರಾಟ್ ಕೊಹ್ಲಿ ಹಾಗೂ ಎಬಿಡಿ ವಿಲಿಯರ್ಸ್ ನಿರ್ವಹಣೆಯು ಅತ್ಯಂತ ನಿರ್ಣಾಯಕವೆನಿಸಲಿದೆ.


ಕಳೆದ ಹಲವಾರು ವರ್ಷಗಳಿಂದ ವಿರಾಟ್ ಕೊಹ್ಲಿ – ಎಬಿಡಿ ವಿಲಿಯರ್ಸ್ ಆರ್‍ಸಿಬಿ ತಂಡದ ಆಧಾರ ಸ್ತಂಭವಾಗಿದ್ದಾರೆ. ಈ ಬಾರಿ ಕಪ್ ಗೆಲ್ಲಬೇಕಾದರೆ ಕೊಹ್ಲಿ ಹಾಗೂ ವಿಲಿಯರ್ಸ್ ಉತ್ತಮ ನಿರ್ವಹಣೆ ನೀಡಬೇಕಾಗುತ್ತದೆ. ಯಾವತ್ತಿಗೂ ಇವರಿಬ್ಬರೂ ಅಪಾಯಕಾರಿ ಎಂಬುದು ಕ್ರಿಕೆಟ್ ಅಭಿಮಾನಿಗಳಿಗೂ ತಿಳಿದಿರುವ ಸಂಗತಿ .ಹಾಗಾಗಿ ಈ ವಿಷಯ ಇತರೆ ಆಟಗಾರರ ಮೇಲೂ ಪರಿಣಾಮ ಬೀರಬೇಕಾಗಿದೆ. ಒಂದಿಬ್ಬರು ಆಟಗಾರರನ್ನು ಮಾತ್ರ ನೆಚ್ಚಿಕೊಳ್ಳದೇ ಒಂದು ತಂಡವಾಗಿ ಆರ್‍ಸಿಬಿ ಆಡುತ್ತಿದೆ. ಮೇಲ್ನೋಟಕ್ಕೆ ಆರ್ ಸಿಬಿ ಬ್ಯಾಟಿಂಗ್ ಭವಿಷ್ಯ ಗ್ಲೆನ್ ಮ್ಯಾಕ್ಸ್ ವೆಲ್, ಎಬಿಡಿ ವಿಲಿಯರ್ಸ್ ಹಾಗೂ ನಾಯಕ ವಿರಾಟ್ ಕೊಹ್ಲಿ ಮೇಲೆಯೇ ಹೆಚ್ಚು ಅವಲಂಬಿತವಾಗಿದೆ.


ಆರ್‍ಸಿಬಿ ಹ್ಯಾಟ್ರಿಕ್ ಗೆಲುವಿನ ಪಯಾಣದಲ್ಲಿ ಬೌಲಿಂಗ್ ವ್ಯೂಹ ಮುಖ್ಯವೆನಿಸಿದೆ. ಇದುವರೆಗಿನ ಗೆಲುವಿನ ಪಂದ್ಯಗಳನ್ನು ಗಮನಿಸಿದಾಗ ವೇಗಿ ಹರ್ಷಲ್ ಪಟೇಲ್ ಆರ್‍ಸಿಬಿ ಪಾಲಿಗೆ ‘ಟ್ರಂಪ್ ಕಾರ್ಡ್’. ಪ್ರತಿ ಪಂದ್ಯದಲ್ಲೂ ಹರ್ಷಲ್ ಪಟೇಲ್ ವಿಕೆಟ್ ಪಡೆದಿದ್ದಾರೆ . ಈಗಾಗಲೇ ಆಡಿರುವ 3 ಪಂದ್ಯಗಳಲ್ಲಿ 72 ರನ್ನಿಗೆ 9 ವಿಕೆಟ್ ಹರ್ಷಲ್ ಪಟೇಲ್ ಪಡೆದಿದ್ದಾರೆ. ಇನ್ನೂ ಕೈಲ್ ಜಾಮಿಸನ್ ಕೂಡ 5 ವಿಕೆಟ್ ಪಡೆದಿದ್ದು, ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್ ಕೈಚಳಕ ಮಾತ್ರ ಇನ್ನೂ ಶುರು ಆಗಬೇಕಾಗಿದೆ. ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಪವರ್ ಪ್ಲೇನಲ್ಲಿ ಪರಿಣಾಮಕಾರಿಯೆನಿಸಿಕೊಂಡಿದ್ದಾರೆ. ಜೊತೆಗೆ ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ ತಂಡದಲ್ಲಿದ್ದು ವೇಗದ ಪಡೆಯನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ.

ಆದರೆ, ತಂಡದ ಸಂಯೋಜನೆಯನ್ನು ಸಮರ್ಥವಾಗಿ ನಿಭಾಯಿಸುವ ಹೊಣೆಗಾರಿಕೆ ನಾಯಕ ವಿರಾಟ್ ಕೊಹ್ಲಿ ಮೇಲಿದೆ. ಈ ಹಿಂದಿನ ಆವೃತ್ತಿಯಲ್ಲಿ ಪದೇ ಪದೇ ತಂಡದ ಸಂಯೋಜನೆಯನ್ನು ಬದಲಾಯಿಸಿದರ ಪರಿಣಾಮ ಆರ್‍ಸಿಬಿ ಕಪ್ ಗೆಲ್ಲುವ ಆಸೆಗೆ ಹಿನ್ನಡೆಯಾಗಿತ್ತು. ಒಂದೆರಡು ಅವಕಾಶಗಳ ಬಳಿಕ ಪಂದ್ಯ ಹೊಂದಾಣಿಕೆಯನ್ನು ಬದಲಾಯಿಸುವುದು ಟೀಕೆಗೆ ಗುರಿಯಾಗಿಸಿತ್ತು. ಈ ಬಾರಿ ಮಾತ್ರ ಆರ್‍ಸಿಬಿ ತಂಡವು ಸೀಮಿತ ಆಯ್ಕೆಯನ್ನು ಹೊಂದಿದೆ. ಯುವ ಹಾಗೂ ಅನುಭವಿ ತಂಡವನ್ನು ಆರ್‍ಸಿಬಿ ಕಟ್ಟಿಕೊಂಡಿದೆ. ಯಾವುದೇ ಪರಿಸ್ಥಿತಿಗೆ ಹೊಂದಿಕೊಂಡು ಆಡುವಂತಹ ಸಾಮರ್ಥ್ಯವುಳ್ಳ ಆಟಗಾರರನ್ನು ಆರ್‍ಸಿಬಿ ಈಗಾಗಲೇ ಆರಿಸಿಕೊಂಡು ಸ್ಥಿರ ಪ್ರದರ್ಶನವನ್ನು ನೀಡುತ್ತಿದೆ.


ಅಪರೂಪದ ದಾಖಲೆ :
ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟೂರ್ನಿಯ ಆರಂಭದ ಮೂರು ಪಂದ್ಯಗಳನ್ನು ಗೆದ್ದಿರುವ ದಾಖಲೆಯಿಲ್ಲ. ಆದರೆ ,ಈ ಬಾರಿ ಈಗಾಗಲೇ ಆಡಿರುವ ಮೂರು ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಐಪಿಎಲ್ ಇತಿಹಾಸದಲ್ಲೇ ಆರ್ ಸಿಬಿ ತಂಡದ ಪ್ರಶಂಸನೀಯ ಪ್ರದರ್ಶನ ಇದು. ಏಪ್ರಿಲ್-9ರಂದು ಐಪಿಎಲ್ ಟೂರ್ನಿಯ ಮೊದಲ ಪಂದ್ಯದಲ್ಲೇ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದೆದುರು 2 ವಿಕೆಟ್ ಅಂತರದಲ್ಲಿ ಗೆದ್ದ ಆರ್ ಸಿಬಿ, ಏಪ್ರಿಲ್-14ರಂದು ನಡೆದ ಎರಡನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು 6ರನ್ ಅಂತರದಲ್ಲಿ ಸೋಲಿಸಿತು. ಏಪ್ರಿಲ್-18ರಂದು ನಡೆದ ಮೂರನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದೆದುರು 38 ರನ್ ಗಳ ಭರ್ಜರಿ ಗೆಲುವನ್ನು ಆರ್ ಸಿಬಿ ಪಡೆದುಕೊಂಡಿದೆ.


ಇನ್ನೂ ಇದುವರೆಗಿನ ಪಂದ್ಯಗಳ ಫಲಿತಾಂಶದ ಆಧಾರವಾಗಿಟ್ಟುಕೊಂಡು ನೋಡಿದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿಭಾಯಿಸಿದವರು ಆಸ್ಟ್ರೇಲಿಯಾ ತಂಡದ ಗ್ಲೆನ್ ಮ್ಯಾಕ್ಸ್ ವೆಲ್. ಈಗಾಗಲೇ ಆಡಿರುವ 3 ಪಂದ್ಯಗಳಲ್ಲಿ 2 ಅರ್ಧಶತಕಗಳ 176 ರನ್ ಬಾರಿಸಿರುವ ಗ್ಲೆನ್ ಮ್ಯಾಕ್ಸ್ ವೆಲ್ ಆರ್ ಸಿಬಿ ಪರ ಅತ್ಯಧಿಕ ರನ್ ಬಾರಿಸಿದ್ದಾರೆ. ಮಾತ್ರವಲ್ಲ ತಂಡದ ಪ್ರಮುಖ ಬೌಲರ್ ಆಗಿ ಹರ್ಷಲ್ ಪಟೇಲ್ ಗುರುತಿಸಿಕೊಂಡಿದ್ದಾರೆ. 3 ಪಂದ್ಯಗಳಲ್ಲಿ 9 ವಿಕೆಟ್ ಪಡೆದಿರುವ ಹರ್ಷಲ್ ಪಟೇಲ್ ಅತ್ಯಧಿಕ ವಿಕೆಟ್ ಗಾಗಿ ಪಡೆಯುವ ಪರ್ಪಲ್ ಕ್ಯಾಪ್ ರೇಸ್ ನಲ್ಲಿದ್ದಾರೆ. ಒಟ್ಟಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಇತಿ ಮಿತಿಯನ್ನು ಗಮನದಲ್ಲಿಟ್ಟುಕೊಂಡು ಆಡಿದರೆ, ಖಂಡಿತವಾಗಿಯೂ ಈ ಬಾರಿ ಕಪ್ ನಮ್ದೆ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಕನ್ನಡಿಗರ ಬಹು ವರ್ಷಗಳ ಕನಸು 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲದರೂ ನನಸಾಗಲಿ.

Related Articles

Stay Connected

21,961FansLike
2,988FollowersFollow
0SubscribersSubscribe
- Advertisement -spot_img
- Advertisement -spot_img

Latest Articles

error: Content is protected !!