Sunday, September 8, 2024

ವಾರಾಹಿ ಮೂಲ ಯೋಜನೆಯಲ್ಲಿರುವ ಎಲ್ಲ ಗ್ರಾಮಗಳಿಗೂ ನೀರು ಸಿಗಲೇಬೇಕು- ಕೆ.ಪ್ರತಾಪಚಂದ್ರ ಶೆಟ್ಟಿ


ಕುಂದಾಪುರ, ಎ.10: ನೀರಾವರಿ ಯೋಜನೆಯ ಉದ್ದೇಶ ರೈತರಿಗೆ ನೀರು ಕೊಡುವುದು. ಮೂಲ ಯೋಜನೆಯಲ್ಲಿರುವಂತೆ ನೀರು ಆರ್ಹ ರೈತರನ್ನು ತಲುಪಬೇಕು. ಇನ್ನೂ ಕೂಡಾ ರೈತರ ತಾಳ್ಮೆಯನ್ನು ಪರೀಕ್ಷೆ ಮಾಡುವುದು ಸರಿಯಲ್ಲ. ಅದಷ್ಟು ಬೇಗ ಮೂಲ ಯೋಜನೆಯಲ್ಲಿರುವ ಎಲ್ಲ ಗ್ರಾಮಗಳಿಗೂ ನೀರು ಕೊಡುವ ಕೆಲಸ ಆಗಬೇಕು ಎಂದು ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷರಾದ ಕೆ.ಪ್ರತಾಪಚಂದ್ರ ಶೆಟ್ಟಿ ಹೇಳಿದರು.
ಅವರು ಜಪ್ತಿ ಗ್ರಾಮದ ಸುಣ್ಣಾರಿಯ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಉಡುಪಿ ಜಿಲ್ಲಾ ರೈತ ಸಂಘದ ನೇತೃತ್ವದಲ್ಲಿ ವಾರಾಹಿ ಎಡದಂಡೆ ನೀರಾವರಿ ಯೋಜನೆ ಅಚ್ಚುಕಟ್ಟು ಪ್ರದೇಶದ ರೈತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.


2015ರಲ್ಲಿ ರೈತ ಸಂಘ ಧರಣಿ ಸತ್ಯಾಗ್ರಹ ನಡೆಸಿ ಆರು ವರ್ಷವಾಯಿತು. ಇನ್ನೂ ಕೂಡಾ ಎಡದಂಡೆ ಯೋಜನೆಯೇ ಪೂರ್ಣವಾಗಿಲ್ಲ. ತಾಂತ್ರಿಕ ಸಮಸ್ಯೆಗಳು, ಹಣಕಾಸು, ಇಂಜಿನಿಯರ್, ಭೂಸ್ವಾಧೀನ ಇತ್ಯಾದಿ ಸಮಸ್ಯೆಗಳು ನಮಗೂ ಅರಿವಿರುವುದರಿಂದ ಇಷ್ಟು ವರ್ಷ ಕಾದಿದ್ದೇವೆ. ಇನ್ನು ಅದೆಷ್ಟು ಬೇಗ ಕೆಲಸ ಪೂರ್ಣಗೊಳಿಸಿ. ಇವತ್ತು ಎಲ್ಲರಿಗೂ ವಾರಾಹಿ ನೀರಾವರಿ ಯೋಜನೆಯ ಮೇಲೆ ಕಣ್ಣಿದೆ. ಮೊದಲು ಯೋಜನೆಯಲ್ಲಿರುವ ಗ್ರಾಮಗಳಿಗೆ ನೀರು ಕೊಟ್ಟು ಬಳಿಕ ಎಲ್ಲಿಗೆ ಬೇಕಾದರೂ ತಗೆದುಕೊಂಡು ಹೋಗಿ ಎಂದರು.


ವಾರಾಹಿ ಯೋಜನೆಗೆ ಭೂಮಿ ನೀಡಿದ ರೈತರು ಪರಿಹಾರ ಮೊತ್ತದ ಬಗ್ಗೆ ಚಿಂತೆ ಮಾಡದೆ ಕಾಮಗಾರಿ ನಡೆಸಲು ಒತ್ತು ನೀಡಬೇಕಾಗಿದೆ. ಮೊದಲು ನೀರು ಬರಲಿ, ನಂತರ ಹಣ ಪಡೆಯೋಣ ಎಂದ ಅವರು, ಎಲ್ಲೆಲ್ಲಿ ಅವಶ್ಯಕತೆ ಅಲ್ಲಿಗೆ ಸೇರಿಸಲು ಅವಕಾಶವಿದೆ. ವಾರಾಹಿ ಯೋಜನೆ ಆರಂಭವಾಗಿ 41 ವರ್ಷಗಳು ಆದವು. ಇನ್ನಾದರೂ ಯೋಜನೆ ನಿರ್ದಿಷ್ಟ ದಿಕ್ಕಿನಲ್ಲಿ ಸಾಗಲಿ, ರೈತರ ಅನುಕೂಲತೆಗೆ ತಕ್ಕಂತೆ ಹೊಸ ಅಳವಡಿಕೆಗಳನ್ನು ಮಾಡಿಕೊಂಡು ರೈತಸ್ನೇಹಿಯಾಗಿ ಯೋಜನೆಗೆ ಮುಂದುವರಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.


ವಾರಾಹಿ ಬಲದಂಡೆ ಯೋಜನೆಯ ಚರ್ಚೆಗಳು ನಡೆಯುತ್ತಿದೆ. ಶಂಕರನಾರಾಯಣ, ಅಂಪಾರು, ಹಳ್ನಾಡು ಗ್ರಾಮಗಳಿಗೆ ಸಂಬಂಧಪಟ್ಟಂತೆ ಸಭೆಯೂ ನಡೆಸಲು ರೈತರು ಉತ್ಸುಕರಾಗಿದ್ದಾರೆ. ವಾರಾಹಿ ಅಧಿಕಾರಿಗಳ ಸ್ಪಂದನವೂ ಉತ್ತಮವಾಗಿದೆ ಎಂದರು.


ವಾರಾಹಿ ಎಡದಂಡೆ ನೀರಾವರಿ ಯೋಜನೆಯ ತೆಕ್ಕಟ್ಟೆ, ಉಳ್ತೂರು, ಕೆದೂರು, ಬೇಳೂರು, ವಕ್ವಾಡಿ, ಅಸೋಡು, ಹೆಸ್ಕತ್ತೂರು, ಕೊರ್ಗಿ, ಕಾಳಾವರ, ಕಂದಾವರ, ಜಪ್ತಿ, ಹೊಂಬಾಡಿ ಮಂಡಾಡಿ, ಮೊಳಹಳ್ಳಿ, ಯಡಾಡಿ ಮತ್ಯಾಡಿ, ಹಾರ್ದಳ್ಳಿ ಮಂಡಳ್ಳಿ, 76 ಹಾಲಾಡಿ, 28 ಹಾಲಾಡಿ, ಹಳ್ಳಾಡಿ ಹರ್ಕಾಡಿ, ಬಿಲ್ಲಾಡಿ, ಕಕ್ಕುಂಜೆ, ಶಿರಿಯಾರ ಗ್ರಾಮದ ಅಂದಾಜು 10,987 ಹೆಕ್ಟೇರ್ ಕೃಷಿ ಜಮೀನಿಗೆ ನೀರಾವರಿ ಸೌಲಭ್ಯವನ್ನು ಒದಗಿಸುವ ಯೋಜನೆ ಇದಾಗಿದ್ದು, ಈ ಎಡದಂಡೆ ನೀರಾವರಿ ಯೋಜನೆಯ ಕಾಲುವೆ ಮತ್ತು ಉಪಕಾಲುವೆಗಳು ಯಾವ ಸರ್ವೇ ನಂಬರ್‍ಗಳ ಮೂಲಕ ಹಾದು ಹೋಗುತ್ತದೆ ಮತ್ತು ಯಾವ ಸರ್ವೇ ನಂಬರ್‍ಗಳ ಅಚ್ಚುಕಟ್ಟು ಪ್ರದೇಶಗಳಿಗೆ ನೀರನ್ನು ಒದಗಿಸಲಾಗುತ್ತದೆ ಎನ್ನುವ ಅನಿಶ್ಚಿತತೆ ರೈತರ ಮನದಲ್ಲಿದ್ದು ಯೋಜನೆಯ ವಿನ್ಯಾಸ, ಅಚ್ಚುಕಟ್ಟು ಪ್ರದೇಶದ ರೈತರಿಗೆ ಸಿಗಬೇಕಾದ ಪರಿಹಾರ ಧನದ ಬಗ್ಗೆ ಸಮಗ್ರ ಚರ್ಚೆ ನಡೆಯಿತು.


ಕೆದೂರು ಸದಾನಂದ ಶೆಟ್ಟಿ ಮಾತನಾಡಿ ಕೆದೂರು ಭಾಗದಲ್ಲ್ಲಿ 1500 ಹೆಕ್ಟೇರ್ ಕೃಷಿ ಭೂಮಿ ಇದ್ದು, ಸರ್ವೇ ಆಗಿದ್ದು ಕಾಲುವೆ ಆಗಬೇಕಿದೆ ಎಂದರು. ಎಡದಂಡೆ ಕಾಲುವೆಯೂ ಎಷ್ಟು ಕಾಲುವೆ, ಉಪಕಾಲುವೆಗಳನ್ನು ಹೊಂದಿದೆ ಎನ್ನುವ ಮಾಹಿತಿ ನೀಡುವಂತೆ ಆಗ್ರಹಿಸಿದರು.

56 ಕುಟುಂಬಗಳಿಗೆ 12 ವರ್ಷವಾದರೂ ಪರಿಹಾರ ಹಣ ಲಭಿಸಿಲ್ಲ ಎಂದು ರೈತರು ಅಸಮಾಧನ ವ್ಯಕ್ತ ಪಡಿಸಿದರು. ಜನ್ನಾಡಿ ಬಳಿಯ ಮದಗಕ್ಕೆ ನೀರು ಹಾಯಿಸುವಂತೆ ರೈತರು ಆಗ್ರಹಿಸಿದರು. ಮೊಳಹಳ್ಳಿ ಗ್ರಾಮದಲ್ಲಿ ದೊಡ್ಡ ಕೆರೆ ಇದ್ದು ಕೆರೆಗೆ ನೀರು ಹಾಯಿಸುವಂತೆ ಅಲ್ಲಿನ ರೈತರು ಒತ್ತಾಯಿಸಿದರು. ವಾರಾಹಿ ಕಾಲುವೆಯಿಂದ ಉಳಿದ ಜಾಗದಲ್ಲಿ ಮನೆ ನಿರ್ಮಿಸಲು ಬ್ಯಾಂಕಿನಿಂದ ಸಾಲ ಸಿಗುವುದಿಲ್ಲ. ಖಾತೆ ಬದಲಾವಣೆ ಮಾಡಿಕೊಡದೆ ಸಮಸ್ಯೆಯಾಗುತ್ತಿದೆ ಎಂದು ಮಹಿಳೆಯೊಬ್ಬರು ಸಭೆಯ ಗಮನಕ್ಕೆ ತಂದರು. ಇದಕ್ಕೆ ವಾರಾಹಿ ಇಲಾಖೆಯಿಂದ ನಿರಪೇಕ್ಷಣಾ ಪತ್ರ ನೀಡುವ ಭರವಸೆ ನೀಡಲಾಯಿತು. ಕಾಲುವೆ ಮಾಡುವಾಗ ಪ್ರಾರಂಭ ಸ್ಥಳದಿಂದ ಮಾಡದೇ ಯದ್ವತದ್ವಾ ಕಾಮಗಾರಿ ಮಾಡಲಾಗುತ್ತಿದೆ. ವ್ಯವಸ್ಥಿತವಾಗಿಯೇ ಕಾಮಗಾರಿ ನಡೆಸುವಂತೆ ಸಲಹೆ ನೀಡಲಾಯಿತು.


ಉಡುಪಿ ಜಿಲ್ಲಾ ರೈತ ಸಂಘದ ವಕ್ತಾರ ವಿಕಾಸ್ ಹೆಗ್ಡೆ, ಉಡುಪಿ ಜಿಲ್ಲಾ ರೈತ ಸಂಘದ ವಲಯ ಪ್ರಮುಖರಾದ ಕೆದೂರು ಸದಾನಂದ ಶೆಟ್ಟಿ, ಕ್ರಷ್ಣರಾಜ ಶೆಟ್ಟಿ, ಬೋಜ ಕುಲಾಲ ಹೆಬ್ರಿ, ಸತೀಶ್ ಕಿಣಿ, ಮಲ್ಯಾಡಿ ಶಿವರಾಮ ಶೆಟ್ಟಿ, ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಹೆರಿಯಣ್ಣ ಚಾತ್ರಬೆಟ್ಟು, ಮಹೇಶ್ ಹೆಗ್ಡೆ ಮೊಳಹಳ್ಳಿ, ರವಿರಾಜ ಶೆಟ್ಟಿ ಅಸೋಡು, ಬಿ.ಅರುಣ್ ಕುಮಾರ್ ಹೆಗ್ಡೆ, ಗಣೇಶ ಶೆಟ್ಟಿ ಹೊಂಬಾಡಿ ಮಂಡಾಡಿ, ಮೊಳಹಳ್ಳಿ ಗ್ರಾ.ಪಂ.ಉಪಾಧ್ಯಕ್ಷ ಚಂದ್ರಶೇಖರ ಶೆಟ್ಟಿ, ಶ್ರೀನಿವಾಸ ಶೆಟ್ಟಿ ಕೊರ್ಗಿ, ಕಾಳಾವರ ಗ್ರಾ.ಪಂ ಉಪಾಧ್ಯಕ್ಷ ರಾಮಚಂದ್ರ ನಾವಡ ಮೊದಲಾದವರು ಉಪಸ್ಥಿತರಿದ್ದರು.


ವಾರಾಹಿ ನೀರಾವರಿ ಯೋಜನೆಯ ಕಾರ್ಯಪಾಲಕ ಇಂಜಿನಿಯರ್, ಸಹಾಯಕ ಇಂಜಿನಿಯರ್ ಸೇರಿದಂತೆ ವಿವಿಧ ವಿಭಾಗದ ಅಧಿಕಾರಿಗಳು ಉಪಸ್ಥಿತರಿದ್ದು ಮಾಹಿತಿ ನೀಡಿದರು. ಉಡುಪಿ ಜಿಲ್ಲಾ ರೈತ ಸಂಘ ಬೀಜಾಡಿ, ಹಾಲಾಡಿ ಮತ್ತು ಮಂದರ್ತಿ ವಲಯದ ರೈತರು ಭಾಗವಹಿಸಿದ್ದರು.
ಉಡುಪಿ ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ ಕುಮಾರ್ ಶೆಟ್ಟಿ ಬಲಾಡಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!