Thursday, November 21, 2024

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ವಂಡ್ಸೆ ನಾರಾಯಣ ಗಾಣಿಗ ನಿಧನ


ಕುಂದಾಪುರ, ಫೆ.1: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದ ವಂಡ್ಸೆ ನಾರಾಯಣ ಗಾಣಿಗ (84) ಅಲ್ಪಕಾಲದ ಅಸೌಖ್ಯದಿಂದ ವಂಡ್ಸೆಯ ಸ್ವಗೃಹದಲ್ಲಿ ಫೆ.1ರಂದು ನಿಧನರಾದರು.
ಮೃತರು ಪತ್ನಿ, ಮೂವರು ಪುತ್ರರು, ಪುತ್ರಿ, ಅಳಿಯ, ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.

40 ವರ್ಷಗಳ ಕಾಲ ರಂಗಸ್ಥಳದಲ್ಲಿ ತಿಟ್ಟು ಬೇಧವಿಲ್ಲದೇ ಕಲಾವ್ಯವಸಾಯ ಮಾಡಿದ ಕಲಾ ‘ಕೃಷಿಕ’ ವಂಡ್ಸೆ ನಾರಾಯಣ ಗಾಣಿಗರ ಕಲಾ ಸಾಧನೆಯ ಕಿರೀಟಕ್ಕೆ 2014ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತ್ತು.


ತನ್ನ 12ನೇ ವಯಸ್ಸಿಗೆ ಬಣ್ಣದ ಲೋಕಕ್ಕೆ ಕಾಲಿಟ್ಟ ನಾರಾಯಣ ಗಾಣಿಗರು ಬಹುಬೇಗ ಪ್ರಸಿದ್ಧಿಯ ಪಥವೇರಿದವರು. ಸ್ತ್ರೀ ಭೂಮಿಕೆಯಲ್ಲಿ ಹಲವಾರು ಪೌರಾಣಿಕ ಪ್ರಸಂಗಗಳ ಪಾತ್ರಕ್ಕೆ ಸುಭದ್ರವಾದ ತಳಹದಿ ಒದಗಿಸಿದ ಕೀರ್ತಿ ಇವರದ್ದು. ತನ್ನ ಜೀವಿತದ ಕೊನೆಯ ತನಕ ಯಕ್ಷಗಾನವೆಂದಾಗ ಚುರುಕಾಗುತ್ತಿದ್ದ ಗಾಣಿಗರು ಚಿರನಿದ್ರೆಗೆ ಜಾರಿದ್ದಾರೆ.


ಶೇಷಗಾಣಿಗ-ಪಣಿಯಮ್ಮ ದಂಪತಿಗಳ ಪುತ್ರರಾಗಿ 1937ನೇ ಇಸವಿಯ ಜೂನ್ 6ರಂದು ಜನಿಸಿದ ನಾರಾಯಣ ಗಾಣಿಗರು ಪ್ರಾಥಮಿಕ ಶಿಕ್ಷಣ ಪಡೆದರು. ಅವರ ಅಣ್ಣ ಮುತ್ತ ಗಾಣಿಗರು ಅವಾಗಲೇ ಪ್ರಸಿದ್ಧ ಕಲಾವಿದರಾಗಿದ್ದರು. ಅಣ್ಣ ಪ್ರೋತ್ಸಾಹ ಇವರಿಗೆ ಕಲಾದಾರಿಯಾಯಿತು. ಮಾರಣಕಟ್ಟೆ ಮೇಳದಲ್ಲಿ ಕೋಡಂಗಿಯಾಗಿ ಕುಣಿದರು. ಗುರು ವೀರಭದ್ರ ನಾಯಕರು ಹಾಗೂ ಮಟಪಾಡಿ ಶ್ರೀನಿವಾಸ ನಾಯಕರ ಗುರುತನ ಪಡೆದ ಇವರು ಮೂರು ತಿಟ್ಟುಗಳಲ್ಲಿ ಪ್ರಧಾನ ಸ್ತ್ರೀವೇಷಧಾರಿಯಾಗಿ ಮೆರೆದರು. ಮಟ್ಟಾಡಿ ಶೈಲಿಯಲ್ಲಿಯೇ ಪ್ರವರ್ಧಮಾನಕ್ಕೆ ಬಂದರು. ಸ್ವರದ ಮಾರ್ಧವತೆ ಮೂಲಕ ಹಾವ-ಭಾವ, ಒನಪು-ಒಯ್ಯಾರದ ಪ್ರಕಾಷ್ಠ ಪ್ರತಿಭೆ. ಶೃಂಗಾರ, ಕರುಣಾ, ಭಕ್ತಿ ರಸಗಳಲ್ಲಿ ಇವರ ಅಭಿನಯ ಅನುಪಮ. ಮೋಹಿನಿ, ಶಿವೆ, ಸುಶೀಲೆ, ರೂಪರೇಖಾ, ಪ್ರಭಾವತಿ ಪಾತ್ರಗಳು ಹೆಣ್ಣನ್ನೇ ನಾಚಿಸಿವೆ. ಆಧುನಿಕ ಕಾವ್ಯಗಳನ್ನು ಯಕ್ಷಗಾನಕ್ಕೆ ಪರಿವರ್ತಿಸಿಕೊಂಡು ಇವರು ಕುಣಿದಾಗ ಅದೆಷ್ಟೊ ಜನ ಹೆಣ್ಣೆಂದೆ ಭಾವಿಸಿದ್ದರಂತೆ.

ಮಾರಣಕಟ್ಟೆ ಮೇಳ ಗಾಣಿಗರ ಮೊದಲ ಪ್ರವೇಶ, ಹತ್ತು ವರ್ಷ ಸೇವೆ ಮತ್ತೆ ಮಂದಾರ್ತಿ, ಕಮಲಶಿಲೆ, ಕೊಲ್ಲೂರು, ಕೂಡ್ಲು, ಸಾಲಿಗ್ರಾಮ ಮೇಳಗಳಲ್ಲಿ ಮೆರೆದು ತೆಂಕಿನ ಇರಾ, ಸುರತ್ಕಲ್, ಧರ್ಮಸ್ಥಳ ಮೇಳಗಳಲ್ಲಿ ರಂಗ ವೈಭವೀಕರಿಸಿದರು. ಉತ್ತರ ಕನ್ನಡದ ಇಡಗುಂಜಿ ಮೇಳದಲ್ಲಿಯೂ ಕಲಾ ವ್ಯವಸಾಯ ಮಾಡಿದರು.


ರಷ್ಯಾಕ್ಕೆ ಅಂದೇ ಹೋಗಿದ್ದರು!
ಶಿವರಾಮ ಕಾರಂತರು ಯಕ್ಷಗಾನವನ್ನು ಅಂದು ಸಾಗರದಾಚೆಗೆ ಕೊಂಡೋಯ್ಯುವ ಸಂದರ್ಭ ಯಕ್ಷಗಾನ ಬ್ಯಾಲೆಯಲ್ಲಿ ಸ್ಥಾನ ಪಡೆದ ಗಾಣಿಗರು ಅಂದೇ ರಷ್ಯಾ ಮೊದಲಾದ ರಾಷ್ಟ್ರಗಳಲ್ಲಿ ಪ್ರವಾಸ ಮಾಡಿದ್ದರು. ನಿಷ್ಠೂರವಾದಿ ಕಾರಂತರು ಕೂಡಾ ಗಾಣಿಗರ ಕಲಾತ್ವವನ್ನು ಎಷ್ಟೊ ಸಂದರ್ಭಗಳಲ್ಲಿ ಮೆಚ್ಚಿ ಕೊಂಡಾಡಿದ್ದಾರೆ. ನಳ, ಅಶ್ವತಾಮದಂತಹ ಪಾತ್ರಗಳನ್ನು ನಿರ್ವಹಣೆ ಮಾಡುವ ಮೂಲಕ ಕಾರಂತರ ಮೆಚ್ಚುಗೆಗೆ ಪಾತ್ರರಾಗಿದ್ದರು.


ಕಲೆಗೆ ತಲೆ ಬಿಟ್ಟರು:
ಗಾಣಿಗರು ಸಂಪ್ರದಾಯಬದ್ಧ ಕಲಾವಿದರು ಎನ್ನುವುದಕ್ಕೆ ಅವರು ಅಂದು ಕಲೆಗೆ ಸಮರ್ಪಿತವಾಗಿ ಬಿಟ್ಟ ಕೇಶಕ್ಕೆ ಕೊನೆಯ ತನಕವೂ ಕತ್ತರಿ ತಾಗಿಸಿಲ್ಲ. ಅಂದು ಸ್ತ್ರೀವೇಷ ಮಾಡುವಾಗ ಸ್ವತಃ ಕೇಶದಿಂದ ಜಡೆ ಹಾಕಿ ರಂಜಿಸುತ್ತಿದ್ದ ಗಾಣಿಗರು ಚೌರಿ ಬಳಸಿದ್ದೇ ಅಪರೂಪ. ಅಂದಿನ ಪರಂಪರೆ ಇಂದು ಕೂಡಾ ಗಾಣಿಗರಲ್ಲಿ ಕಾಣಲು ಸಾಧ್ಯವಿದೆ.


ಅಣ್ಣ-ತಮ್ಮ ಮತ್ತು ಚಂದ್ರಾವಳಿ:
ನಾರಾಯಣ ಗಾಣಿಗರು ಸೋದರ ಮುತ್ತಗಾಣಿಗ, ಮೊಳಹಳ್ಳಿ ಹೆರಿಯನೊಂದಿಗೆ ಅಭಿನಯಿಸಿದ ಚಂದ್ರಾವಳಿ ಪಾತ್ರ ಇಂದೂ ಸ್ಮರಣಾರ್ಹವಂತೆ. ಶ್ವೇತಕುಮಾರ ಚರಿತ್ರೆಯಲ್ಲಿ ಇವರ ಶಿವೆಯ ಪಾತ್ರದ ತನ್ಮಯತೆ ಗಮನಿಸಿದ ಕೆರೆಮನೆ ಮಹಾಬಲ ಹೆಗಡೆಯವರು ಪ್ರಸಂಗಕ್ಕೆ ಹೊಸ ಪದ್ಯಗಳ ಅಳವಡಿಕೆ ಮಾಡಿ ಕುಣಿಸಿದ್ದು ಗಾಣಿಗರ ಪ್ರತಿಭೆಯ ಪ್ರಭೆಯೇ ಸರಿ.

ಕೆರೆಮನೆ ಮಹಾಬಲ ಹೆಗಡೆ, ದೇವರು ಹೆಗಡೆ, ನಾರ್ಣಪ್ಪ ಉಪ್ಪೂರು, ಅಗರಿ ಶ್ರೀನಿವಾಸ ಭಾಗವತರು, ಶ್ರೇಣಿ ಗೋಪಾಲಕೃಷ್ಣ ಭಟ್, ಕೊಳ್ಯೂರು, ಮರವಂತೆ ನರಸಿಂಹ ದಾಸರು, ಶೀನ ದಾಸರು, ಉಡುಪಿ ಬಸವ, ಅರಾಟೆ ಮಂಜುನಾಥ, ಮಾರ್ಗೋಳಿ ಗೋವಿಂದ ಶೇರುಗಾರ ಮೊದಲಾದರ ಕಲಾವಿದರ ಒಡನಾಟ ಇವರಿಗೆ ಲಭಿಸಿತು.

ಧರ್ಮಸ್ಥಳ ಮೇಳದಲ್ಲಿ ಕುಂಬ್ಳೆ, ಚಿಪ್ಪಾರು, ಪಾತಾಳ, ಪುತ್ತೂರು ಮೊದಲಾದ ಅತಿರಥ ಮಹಾರಥರಂತಹ ಕಲಾವಿದರ ಒಡನಾಟದಲ್ಲಿ ಇನ್ನಷ್ಟು ನೇರ್ಪುಗೊಂಡಿದ್ದರು.


ನೆನಪು ಬಿಡದ ‘ರೂಪರೇಖಾ
ಧರ್ಮಸ್ಥಳ ಮೇಳದಲ್ಲಿ ಇವರು ಪ್ರಧಾನ ಸ್ತ್ರೀವೇಷಧಾರಿಯಾಗಿದ್ದ ಸಂದರ್ಭ ದಾಖಲೆಯ ಪ್ರದರ್ಶನ ಕಂಡ ರಂಭಾ ರೂಪ ರೇಖಾದಲ್ಲಿ ಇವರು ನಿರ್ವಹಿಸಿದ ರೂಪ ರೇಖಾ ಪಾತ್ರಕ್ಕೆ ಪ್ರೇಕ್ಷಕರು ಮಾರು ಹೋಗುತ್ತಿದ್ದರು. ಆ ರೂಪರೇಖಾ ಪಾತ್ರ ಇನ್ನೂ ಗಾಣಿಗರ ಚಿತ್ತಬಿತ್ತಿಯಲ್ಲಿ ಚಿರಸ್ಥಾಯಿಯಾಗಿ ಉಳಿದುಕೊಂಡಿದೆ ಅಂತೆ. ರೂಪಾ ರೇಖಾ ಪಾತ್ರಕ್ಕೆ ಗಾಣಿಗರು ಅಂದು ನೀಡಿದ ನೇರ್ಪು, ರೂಪರೇಖಾ ಹೇಗಿರಬೇಕೇಂಬ ಪರಿಕಲ್ಪನೆ ಗಾಣಿಗರದ್ದೇ ಆಗಿತ್ತು.


ಕೃಷಿಕನಾದ ಪರಿಶ್ರಮಿ:
ತೆಂಕಿನಿಂದ ಬಡಗು ಮಂದಾರ್ತಿಗೆ ಬಂದ ಗಾಣಿಗರು ವೃತ್ತಿಪರ ಮೇಳದಲ್ಲಿ ಕಲಾ ಸೇವೆ ನಿಲ್ಲಿಸಿ, ಕೃಷಿಗೆ ತೊಡಗುತ್ತಾರೆ. ಜೀವಿತದ ಕೊನೆಯ ತನಕವೂ ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಾರೆ.


ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಸಾಲಿಗ್ರಾಮ ಮಕ್ಕಳ ಮೇಳದ ಉಡುಪ ಪ್ರಶಸ್ತಿ, ಯಕ್ಷಮಿತ್ರ ಬಳಗದ ರಂಗಸ್ಥಳ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಪ್ರತಿಷ್ಠಿತ 30ಕ್ಕೂ ಹೆಚ್ಚು ಪ್ರಶಸ್ತಿ, ನೂರಾರು ಸನ್ಮಾನಗಳು, ಗಾಣಿಗ ಸಮಾಜದ ಹಲವು ಗೌರವ ಸನ್ಮಾನಗಳು ಗಾಣಿಗರ ಕಲಾ ಸೇವೆಗೆ ಅರಸಿ ಬಂದಿದ್ದವು.

(ನಾಗರಾಜ್ ವಂಡ್ಸೆ)

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!