spot_img
Thursday, October 8, 2026
spot_img

ನಾನು ಯಾವುದೇ ತಪ್ಪು ಮಾಡಿಲ್ಲ. ಆದ್ದರಿಂದ, ಕ್ಷಮೆ, ವಿಷಾಧವೂ ಇಲ್ಲ, ಇದೆಲ್ಲಾ ಪೂರ್ವ ದ್ವೇಷದ ಸಂಚು-ಎ.ಎಸ್.ಎನ್ ಹೆಬ್ಬಾರ್

ಕುಂದಾಪುರ, ಅ.8: ಸಾಸ್ತಾನದಲ್ಲಿ ನಡೆದ ಬ್ರಹ್ಮಾವರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನನ್ನ ಭಾಷಣದಲ್ಲಿ ಹಳೆಯ ಹಾಸ್ಯದ ತುಣುಕೊಂದನ್ನು ಎತ್ತಿಕೊಂಡು ಅದನ್ನು ತಪ್ಪಾಗಿ ಗ್ರಹಿಸಿಕೊಂಡು ತಮ್ಮ ಸಮುದಾಯಕ್ಕೆ ಅನ್ವಯಿಸಿಕೊಂಡ ವಿಶ್ವಕರ್ಮ ಸಮಾಜದ ಕೆಲವರು, ತಮ್ಮ ಸಮುದಾಯಕ್ಕೆ ನಿಂದನೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ನನ್ನ ಅವಮಾನಿಸಿ, ನಿಂದಿಸಿದ್ದು ವ್ಯಥೆಯ ಅನುಭವ. ಇದೊಂದು ವ್ಯವಸ್ಥಿತ ಷಡ್ಯಂತ್ರ, ಕೆಲವೊಂದು ವ್ಯಕ್ತಿಗಳು ವೈಯಕ್ತಿಕವಾಗಿ ನನ್ನನ್ನೇ ಕೇಂದ್ರವಾಗಿಸಿಕೊಂಡು ಮಾಡಿದ ತಂತ್ರ ಎನ್ನುವುದನ್ನು ಖಚಿತವಾಗಿ ಬಲ್ಲೆ. ನಾನು ಈ ತನಕ ಸಾವಿರಾರು ಭಾಷಣ ಮಾಡಿದ್ದೇನೆ. ಯಾವುದೇ ಸಮುದಾಯದ ವ್ಯಕ್ತಿಗಳು ನೋವಾಗಿದೆ ಎಂದು ಹೇಳಿದ ಉದಾಹರಣೆಗಳಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ, ಕ್ಷಮೆಯನ್ನೂ ಕೇಳಿಲ್ಲ, ಕೇಳುವುದು ಇಲ್ಲ ಎಂದು ಹಿರಿಯ ನ್ಯಾಯವಾದಿ, ಸಾಹಿತಿ, ಉಡುಪಿ ಜಿಲ್ಲಾ ಕಸಾಪ ಸ್ಥಾಪಕಧ್ಯಕ್ಷ ಎ.ಎಸ್.ಎನ್.ಹೆಬ್ಬಾರ್ ತಿಳಿಸಿದರು.
ಅವರು ಕುಂದಾಪುರದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಈ ಎಲ್ಲ ವಿದ್ಯಮಾನಗಳನ್ನು ವಿಶ್ಲೇಷಿಸಿ ನೋಡುವಾಗ ಹಳದಿ ಕನ್ನಡಕ ಹಾಕಿಕೊಂಡ ಕೆಲವೊಂದು ಜನಗಳಿಂದ ಇದು ಆಗಿದೆ ಎನ್ನುವುದು ಸ್ಪಷ್ಟ. ಹಿಂದೊಂದು ಪ್ರಕರಣದಲ್ಲಿ ನ್ಯಾಯಾಲಯದಿಂದ ಶಿಕ್ಷೆ ಅನುಭವಿಸಿದ ವ್ಯಕ್ತಿ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಅಂದು ನಾನು ನನ್ನ ಕಕ್ಷಿದಾರನ ಪರವಾಗಿ ನನ್ನ ವೃತ್ತಿಧರ್ಮವನ್ನು ಪಾಲಿಸಿದ್ದೆ. ಅದರಿಂದ ಆ ವ್ಯಕ್ತಿಗೆ ಹಿನ್ನೆಡೆಯಾಗಿತ್ತು. ಇದರ ದ್ವೇಷವನ್ನು ಈಗ ತೀರಿಸಿಕೊಳ್ಳಲು ಸಮಾಜವನ್ನು ಎತ್ತಿಕಟ್ಟುವ ಪ್ರಯತ್ನ ಮಾಡುತ್ತಿದ್ದಾನೆ. ನನ್ನನ್ನು ವೈಯಕ್ತಿಕವಾಗಿ ತುಳಿಯುವುದೇ ಈ ಸಂಚಿನ ಉದ್ದೇಶ. ಇತ್ತೀಚೆಗೆ ಕೋಟ ಗ್ರಾಮ ಪಂಚಾಯತ್ ನೀಡುವ ಕೋಟ ಶಿವರಾಮ ಕಾರಂತ ಪ್ರಶಸ್ತಿಗೆ ನನ್ನನ್ನು ಆಯ್ಕೆ ಮಾಡಿರುವುದನ್ನು ಸಹಿಸಿಕೊಳ್ಳದ ಆ ವ್ಯಕ್ತಿ ಈ ಷಡ್ಯಂತ್ರ ರೂಪಿಸಿರುವುದು ಸ್ಪಷ್ಟ ಎಂದು ತಿಳಿಸಿದರು.
ನಾನು ಯಾವುದೇ ಸಮಾಜಕ್ಕೆ ನೋವು ಮಾಡುವ ಮಾತನ್ನು ಹೇಳಿಲ್ಲ. ಆವತ್ತು ನಾನು ಪ್ರಸ್ತಾಪ ಮಾಡಿದ್ದು ಹಳೆಯ ಹಾಸ್ಯ ತುಣುಕು. ಇದು ವಿಶ್ವಕರ್ಮ ಸಮಾಜಕ್ಕೆ ಸಂಬಂಧಿಸಿದ್ದೇ ಅಲ್ಲ, ಈ ಹಾಸ್ಯ ತುಣುಕಿನ ಬಗ್ಗೆ ಈಗಾಗಲೇ ಆಳವಾದ ಅಧ್ಯಯನ, ವಿಶ್ಲೇಷಣೆಗಳು ಆಗಿವೆ. ಎಂದು ಹೇಳಿದ ಎ.ಎಸ್.ಎನ್.ಹೆಬ್ಬಾರ್, ಮಂಗಳವಾರ ನನ್ನ ಪರಿಚಿತರಾದ ಸುಬ್ರಾಯ ಆಚಾರ್ ಅವರು ನನಗೆ ದೂರವಾಣಿ ಕರೆ ಮಾಡಿ, “ನೀವು ಒಂದು ಗಳಿಗೆ ಸಭೆಗೆ ಬಂದು, ನಮ್ಮ ಸಮುದಾಯದ ಕುರಿತು ನೀವು ಏನೂ ಹೇಳಿಲ್ಲ ಎಂದು ಸಮಾಧಾನದ ಮಾತು ಹೇಳಿದರೆ ಎಲ್ಲವೂ ಮುಕ್ತಾಯವಾಗುತ್ತದೆ” ಎಂದು ವಿನಂತಿಸಿದ್ದರು. ನಾನು ಮರುದಿನ ತಾ. ೫ರಂದು ಬೆಳಿಗ್ಗೆ ಪತ್ನಿಯೊಂದಿಗೆ ಕಾಸರಗೋಡಿಗೆ ತೆರಳಬೇಕಾಗಿರುವುದರಿಂದ ಬರಲು ಅನಾನುಕೂಲವಿದೆ ಎಂದು ತಿಳಿಸಿದೆ. ಆದರೆ, “ಬರೇ ಎರಡು ನಿಮಿಷ ಮಾತ್ರ. ಬೇರೆ ಯಾರೂ ಮಾತನಾಡುವುದಿಲ್ಲ. ನೀವು ಎರಡು ನಿಮಿಷ ಮಾತನಾಡಿ ಮುಂದೆ ಸಾಗಬಹುದು” ಎಂದು ಅವರು ಒತ್ತಾಯಿಸಿದ ಕಾರಣ, ಹೊರಟೆ. ಆ ಸಂದರ್ಭದಲ್ಲಿ ಹಿತಚಿಂತಕರೊಬ್ಬರು ದೂರವಾಣಿ ಮಾಡಿ, ಪೊಲೀಸ್ ರಕ್ಷಣೆ ಇಲ್ಲದೆ ಅಲ್ಲಿಗೆ ಬರಬೇಡಿ ಎಂದು ಎಚ್ಚರಿಸಿದರು. ಆದರೆ, “ಅದೆಲ್ಲ ಬೇಡ. ಬರೇ ಎರಡು ನಿಮಿಷ ಸಮಾಧಾನ ಮಾಡುವುದಷ್ಟೇ. ಅಧ್ಯಕ್ಷ ಸುಬ್ರಾಯ ಆಚಾರ್ ಅವರು ಭರವಸೆ ನೀಡಿದ್ದಾರೆ” ಎಂದು ಹೇಳಿ ಅಲ್ಲಿಗೆ ಹೋದೆ. ಸಾಲಿಗ್ರಾಮದಲ್ಲಿರುವ ಅವರ ಕಟ್ಟಡದ ಎದುರು ಕಾರು ನಿಲ್ಲಿಸಿ, ಪತ್ನಿಗೆ ಕಾರಿನಲ್ಲೇ ಇರುವಂತೆ ತಿಳಿಸಿ, “ಎರಡು ನಿಮಿಷದಲ್ಲಿ ಬರುತ್ತೇನೆ” ಎಂದು ಹೇಳಿ ಒಳಗೆ ಹೋದೆ. ನನ್ನನ್ನು ಬರಮಾಡಿಕೊಂಡ ಅಧ್ಯಕ್ಷರು ಕೂಡ “ಎರಡು ನಿಮಿಷ ಸರ್, ಕೂಡಲೇ ನೀವು ಹೋಗಬಹುದು. ಇನ್ಯಾವುದೇ ಕಾರ್ಯಕ್ರಮ ಇರುವುದಿಲ್ಲ” ಎಂದು ಪುನರುಚ್ಚರಿಸಿದರು. ಬಳಿಕ ನನ್ನನ್ನು ವೇದಿಕೆಗೆ ಕರೆದೊಯ್ದು ತಮ್ಮ ಪಕ್ಕದಲ್ಲಿ ಕುಳ್ಳಿರಿಸಿದರು. ಆ ನಂತರ ಅಲ್ಲಿ ನಡೆದದ್ದು ಮಾತ್ರ ಸಂಪೂರ್ಣವಾಗಿ ಬೇರೆಯಾಗಿತ್ತು. ಒಬ್ಬರ ನಂತರ ಒಬ್ಬರು ಮಾತನಾಡುತ್ತಾ ನನ್ನ ವಿರುದ್ಧ ತೀವ್ರವಾಗಿ ನಿಂದಿಸಿದರು. ಅಧ್ಯಕ್ಷರ ಬಳಿ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರೂ ಅವರು ಮೌನವಾಗಿ ಕುಳಿತಿದ್ದರು. ವೇದಿಕೆಯ ಹಿಂಭಾಗದಲ್ಲಿ ನನ್ನ ಕ್ಷಮೆಯಾಚನೆಯನ್ನು ಸೂಚಿಸುವ ಬ್ಯಾನರ್ ಕೂಡ ಅಳವಡಿಸಲಾಗಿತ್ತು. ಅದಕ್ಕೂ ನಾನು ಆಕ್ಷೇಪಿಸಿದರೂ ಸುಬ್ರಾಯ ಆಚಾರ್ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಆಗ ಇದು ಪೂರ್ವನಿಯೋಜಿತವಾದ ಷಡ್ಯಂತ್ರವಿರಬಹುದೆಂಬ ಅನುಮಾನ ನನಗೆ ಮೂಡಿತು.ಅಂತಿಮವಾಗಿ ನನ್ನನ್ನು ಮಾತನಾಡಲು ಕರೆದರು. ನಾನು ಮಾತನಾಡಲು ಎದ್ದು ನಿಂತ ತಕ್ಷಣ “ಧಿಕ್ಕಾರ, ಧಿಕ್ಕಾರ” ಎಂಬ ಘೋಷಣೆಗಳು ಮೊಳಗಿದವು. “ನಿಮ್ಮ ಜಯಕಾರಕ್ಕೆ ಧನ್ಯವಾದಗಳು” ಎಂದು ಹೇಳಿ ಮಾತು ಆರಂಭಿಸಿ, “ನಿಮ್ಮ ಸಮಾಜದ ಬಗ್ಗೆ ಗೌರವ ಹೊಂದಿರುವ ನಾನು, ಈ ವಯಸ್ಸಿನಲ್ಲಿ ನಿಮ್ಮ ಸಮುದಾಯವನ್ನು ನಿಂದಿಸುವ ಅಥವಾ ಅವಮಾನಿಸುವ ಕೆಲಸ ಮಾಡುತ್ತೇನೆಯೇ? ನಿಮ್ಮ ಸಮುದಾಯದ ಬಗ್ಗೆ ನಾನು ಏನೂ ಹೇಳಿಲ್ಲ” ಎಂದು ಹೇಳುತ್ತಿರುವಾಗಲೇ, ಕೆಂಪಂಗಿ ಧರಿಸಿದ್ದ ವ್ಯಕ್ತಿಯೊಬ್ಬರು ಎದ್ದು, “ನಿಮ್ಮ ಭಾಷಣ ಬೇಡ, ಈ ಕೂಡಲೇ ಕ್ಷಮೆ ಕೇಳಿ” ಎಂದು ಜೋರಾಗಿ ಕೂಗಾಡಿದರು. ಅದಕ್ಕೆ ಚಪ್ಪಾಳೆಯೂ ಕೇಳಿಬಂತು. ವಾತಾವರಣ ಮತ್ತಷ್ಟು ಬಿಸಿಯಾಗುತ್ತಿರುವುದನ್ನು ಕಂಡು, ನನಗೆ ದೂರವಾಣಿ ಮೂಲಕ ಎಚ್ಚರಿಕೆ ನೀಡಿದ್ದ ಹಿತಚಿಂತಕರ ಮಾತು ನೆನಪಾಯಿತು. ನನ್ನ ಮೇಲೆ ಹಲ್ಲೆ ನಡೆಯುವ ಸಾಧ್ಯತೆಯಿದೆ ಎಂಬ ಆತಂಕವೂ ಉಂಟಾಯಿತು. ವೇದಿಕೆಯ ಮೇಲಿದ್ದವರ ಹಾಗೂ ಕೆಳಗಿದ್ದವರ ಒತ್ತಡದ ನಡುವೆ, ಯಾವುದೇ ಅಪಾಯವಾಗದಂತೆ ಅಲ್ಲಿಂದ ಜೀವಸಹಿತ ಹೊರಬರಲು ವಿಷಾದ ವ್ಯಕ್ತಪಡಿಸಿ ತಕ್ಷಣ ನಿರ್ಗಮಿಸುವುದೊಂದೇ ಮಾರ್ಗ ಎಂದು ನಾನು ಗ್ರಹಿಸಿದೆ. ಹೀಗಾಗಿ ವಿಷಾದ ವ್ಯಕ್ತಪಡಿಸಿ ಅಲ್ಲಿಂದ ಹೊರಟೆ. ಆಗ ನನ್ನನ್ನು ಕಳುಹಿಸಲು ಬಂದಿದ್ದ ಪೊಲೀಸ್ ಅಧಿಕಾರಿಯೂ, “ನೀವು ಇಲ್ಲಿಗೆ ಒಬ್ಬರೇ ಬರಬಾರದಿತ್ತು” ಎಂದು ಹೇಳಿದರು. ಅಂದರೆ ಅಲ್ಲಿನ ವಾತಾವರಣ ಆ ರೀತಿ ಇತ್ತು. ವಯಸ್ಸು, ಸಮಾಜದಲ್ಲಿ ಸ್ಥಾನಮಾನ ಯಾವುದನ್ನು ಅಲ್ಲಿದ್ದ ಯಾರೂ ಗಮನಿಸಲಿಲ್ಲ. ಅಲ್ಲಿ ಆಕ್ರೋಶ, ದ್ವೇಷ, ಧಿಕ್ಕಾರ ಮಾತ್ರ ಕೇಳುತ್ತಿತ್ತು. ಇದೆಲ್ಲಾ ಪೂರ್ವ ನಿಯೋಜಿತ. ಸತ್ಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ವಿಶ್ವಕರ್ಮ ಸಮಾಜದ ಒಂದಿಷ್ಟು ಜನ ಈ ರೀತಿ ವರ್ತಿಸಿದ್ದು ಬೇಸರ ಹಾಗೂ ಕಳವಳಕಾರಿಯಾಗಿದೆ ಎಂದರು.
ಅವರ ಸಭೆಗೆ ಕರೆಸಿ ನನಗೆ ಮಾಡಿದ ಅವಮಾನ, ನಿಂದನೆ ಇತ್ಯಾದಿ ವಿಚಾರಗಳು ಆತಂಕ ಮೂಡಿಸಿವೆ. ಈ ಬಗ್ಗೆ ಸೂಕ್ತ ಸಂಬಂಧ ಪಟ್ಟ ಇಲಾಖೆ ಮುಖ್ಯಸ್ಥರೊಂದಿಗೆ ಮಾತನಾಡಿ ಸೂಕ್ತ ನಿರ್ಧಾರ ತಗೆದುಕೊಳ್ಳುತ್ತೇನೆ. ನನಗೆ ಅವಮಾನ ಆಗುತ್ತಿದ್ದಂತೆ ಕನ್ನಡಾಭಿಮಾನಿಗಳು, ವಿಶೇಷವಾಗಿ ಕುಂದಾಪ್ರ ಕನ್ನಡದ ಅಭಿಮಾನಿಗಳು, ಎಲ್ಲರೂ ನನ್ನ ಬೆಂಬಲಕ್ಕೆ ನಿಂತಿರುವುದಕ್ಕೆ ಕೃತಜ್ಞತೆಗಳು ಎಂದರು.
ಹಿರಿಯ ಸಾಹಿತಿ ವೈದೇಹಿ ಮಾತನಾಡಿ ಎ.ಎಸ್.ಎನ್ ಹೆಬ್ಬಾರ್ ನಾಡು ನುಡಿಗಾಗಿ ತನ್ನನ್ನು ಅರ್ಪಿಸಿಕೊಂಡವರು. ಎಲ್ಲಾ ಸಮುದಾಯದರೊಂದಿಗೆ ಅನೋನ್ಯವಾಗಿ ಇರುವ ವ್ಯಕ್ತಿ. ಅವರಿಂದ ಯಾವತ್ತೂ ಇತರ ಸಮಾಜದ ನಿಂದನೆ ಆಗಲು ಸಾಧ್ಯವೇ ಇಲ್ಲ. ಅನವಶ್ಯಕವಾಗಿ ಅವರನ್ನು ಇಲ್ಲಿ ಬಿಂಬಿಸಲಾಗುತ್ತಿದೆ. ಹೆಬ್ಬಾರರು ಯಾವುದೇ ತಪ್ಪು ಮಾಡಿಲ್ಲ ಎಂದರು.
ಕಸಾಪ ಜಿಲ್ಲಾ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ ಕಸಾಪ ಸ್ಥಾಪಕಧ್ಯಕ್ಷರು, ೮೭ವರ್ಷದ ಹಿರಿಯರು ಆಗಿರುವ ಎ.ಎಸ್.ಎನ್ ಹೆಬ್ಬಾರರನ್ನು ಈ ರೀತಿ ನಡೆಸಿಕೊಂಡಿರುವುದನ್ನು ಕನ್ನಡ ಸಾಹಿತ್ಯ ಪರಿಷತ್ ಬಲವಾಗಿ ಖಂಡಿಸುತ್ತದೆ. ಆದಿತ್ಯವಾರ ಸಾಲಿಗ್ರಾಮದಲ್ಲಿ ಖಂಡಿಸಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭೆ ಜಿಲ್ಲಾಧ್ಯಕ್ಷ ಸಂದೀಪ್ ಕುಮಾರ್ ಮಂಜ, ‘ಆಚಾರ್’ ಎಂಬುದು ಒಂದು ಜಾತಿಯನ್ನು ಸೂಚಿಸುವ ಪದವಲ್ಲ. ಬ್ರಾಹ್ಮಣರು ಸೇರಿದಂತೆ ವಿವಿಧ ಸಮುದಾಯಗಳಲ್ಲಿಯೂ ಈ ಪದ ಬಳಕೆಯಲ್ಲಿದೆ. ಹೀಗಿರುವಾಗ ಒಂದು ಪದದ ಬಳಕೆಯನ್ನು ಮುಂದಿಟ್ಟುಕೊಂಡು ಹೆಬ್ಬಾರ್ ಅವರನ್ನು ಸಭೆಗೆ ಆಹ್ವಾನಿಸಿ ಅವಮಾನಿಸುವ ರೀತಿಯಲ್ಲಿ ನಡೆದುಕೊಂಡಿರುವುದು ಖಂಡನೀಯ. ಹೆಬ್ಬಾರ್ ಅವರನ್ನು ಸಭೆಗೆ ಆಹ್ವಾನಿಸಿ ಅವಮಾನಿಸಿದ ಘಟನೆಗೆ ಸಂಬಂಧಿಸಿದಂತೆ, ಸಭೆ ಆಯೋಜಿಸಿದವರು ಬ್ರಾಹ್ಮಣ ಸಮಾಜದ ಮುಂದೆ ಬಹಿರಂಗ ಕ್ಷಮೆಯಾಚಿಸಬೇಕು ಎಂದರು.
ಪತ್ರಿಕಾಗೋಷ್ಟಿಯಲ್ಲಿ ಕಾರ್ಕಳ ತಾಲೂಕು ಕಸಾಪ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ, ಕುಂದಾಪುರ ವಲಯ ದ್ರಾವಿಡ ಬ್ರಾಹ್ಮಣ ಪರಿಷತ್ ಅಧ್ಯಕ್ಷರಾದ ಕೃಷ್ಣಾನಂದ ಚಾತ್ರ, ವಾದಿರಾಜ ಹೆಬ್ಬಾರ್, ಶ್ರೀಧರ ಪಿ.ಎಸ್ ಮಾತನಾಡಿದರು. ಕಲಾಕ್ಷೇತ್ರದ ಅಧ್ಯಕ್ಷ ಕಿಶೋರ್ ಕುಮಾರ್ ಸ್ವಾಗತಿಸಿ, ವಂದಿಸಿದರು,

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!