spot_img
Friday, October 2, 2026
spot_img

ಮದ್ಯವರ್ಜನ ಶಿಬಿರದಂತೆ ಮಾದಕ ವ್ಯಸನ ವಿಮುಕ್ತಿ ಶಿಬಿರವೂ ನಡೆಯಲಿ-ಶಾಸಕ ಕಿರಣ್ ಕೊಡ್ಗಿ| ಕುಂದಾಪುರದಲ್ಲಿ ಜನಜಾಗೃತಿ ಜಾಥಾ, ಗಾಂಧಿ ಸ್ಮೃತಿ ಕಾರ್ಯಕ್ರಮ

ಕುಂದಾಪುರ, ಅ.2: ನಿರಂತರವಾಗಿ ಸಮಾಜವನ್ನು ತಿದ್ದುವ ಕೆಲಸ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಜನಜಾಗೃತಿ ವೇದಿಕೆ ಮಾಡುತ್ತಿದೆ. ಸ್ವಾಸ್ಥ್ಯ ಸಮಾಜ ನಿರ್ಮಾಣದಲ್ಲಿ ಮಹತ್ತರವಾದ ಪಾತ್ರ ವಹಿಸುತ್ತಿದೆ. ಮದ್ಯವರ್ಜನ ಶಿಬಿರದಂತೆ ಸಮಾಜದಲ್ಲಿ ವ್ಯಾಪಕವಾಗುತ್ತಿರುವ ಮಾದಕ ವ್ಯಸನವನ್ನು ವಿಮುಕ್ತಿಗೊಳಿಸುವ ಶಿಬಿರಗಳು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಆಗಬೇಕು ಎಂದು ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಹೇಳಿದರು.
ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ರಿ., ಕುಂದಾಪುರ ಮತ್ತು ಬೈಂದೂರು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ರಿ., ತಾಲೂಕು ಜನಜಾಗೃತಿ ವೇದಿಕೆ ಕುಂದಾಪುರ ಮತ್ತು ಬೈಂದೂರು ಇದರ ವತಿಯಿಂದ ಕುಂದಾಪುರದ ಸರಕಾರಿ ಪದವಿಪೂರ್ವ ಕಾಲೇಜಿನ ಕಲಾ ಮಂದಿರದಲ್ಲಿ ನಡೆದ ಜನಜಾಗೃತಿ ಜಾಥಾ, ಗಾಂಧಿ ಸ್ಮೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎಲ್ಲ ಸ್ತರದಲ್ಲಿಯೂ ಕೂಡಾ ಗ್ರಾಮಾಭಿವೃದ್ಧಿ ಯೋಜನೆಯ ಪಾತ್ರ ಗಮನಿಸಬಹುದು. ವಾತ್ಸಲ್ಯ ಕಾರ್ಯಕ್ರಮದ ಮೂಲಕ ಮಾಸಾಸನ, ಕಿಟ್, ಮನೆ ನಿರ್ಮಾಣ, ಸುಜ್ಞಾನ ನಿಧಿ, ಜ್ಞಾನದೀಪ ಶಿಕ್ಷಕರು, ಶಾಲೆಗಳಿಗೆ ಪೀಠೋಪಕರಣ, ಕೆರೆಕಟ್ಟೆಗಳು ಪುನಶ್ಚೇತನ ಹೀಗೆ ಸಮಾಜಕ್ಕೆ ವಿಶೇಷವಾದ ಕೊಡುಗೆ ನೀಡುತ್ತಿದೆ. ಮದ್ಯವರ್ಜನ ಶಿಬಿರಗಳ ಮೂಲಕ ಪಾನಮುಕ್ತಗೊಳಿಸಿ ನವ ಜೀವನ ಕಲ್ಪಿಸಿಕೊಡುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಸುಬ್ರಹ್ಮಣ್ಯ ಶೆಟ್ಟಿ ಮಾತನಾಡಿ, ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಪ್ರತಿಯೊಂದು ಯೋಜನೆ, ಯೋಚನೆಯಲ್ಲಿ ಸಾಕಷ್ಟು ದೂರದೃಷ್ಟಿತ್ವವಿದೆ. ಭವಿಷ್ಯದ ದೃಷ್ಟಿಯಿಂದ ರೂಪಿಸಿದ ಯೋಜನೆಗಳು ಇವತ್ತು ರಾಜ್ಯದ್ಯಂತ ಜನರನ್ನು ತಲುಪಿವೆ. ದುಡಿದು ಬದುಕುವ ಸ್ವಾಭಿಮಾನ, ಸಬಲೀಕರಣ, ಸ್ವಾಸ್ಥ್ಯ ಜೀವನವನ್ನು ಗ್ರಾಮಾಭಿವೃದ್ಧಿ ಯೋಜನೆ ಕಲಿಸಿದೆ. ಮದ್ಯವರ್ಜಿಸಿ ನವಜೀವನ ಕಂಡುಕೊಳ್ಳುವ ದಾರಿ ಹೇಳಿ ಕೊಟ್ಟಿದೆ. ಅದೆಷ್ಟೋ ಕುಟುಂಬ ಅರಳಿ ಬೆಳಗುತ್ತಿವೆ. ಶಿಕ್ಷಣ, ಧಾರ್ಮಿಕ, ಕೃಷಿ ಹೀಗೆ ಪ್ರತಿಯೊಂದು ರಂಗದಲ್ಲಿಯೂ ಕೂಡಾ ಹೆಗ್ಗಡೆಯವರ ಕೊಡುಗೆ ಗಮನಿಸಬಹುದು. ಮುಂದಿನ ಪೀಳಿಗೆ ಸುಶಿಕ್ಷಿತವಾಗಿ, ಯಾವುದೇ ದುಶ್ಚಟಗಳಿಗೆ ಒಳಗಾಗದೆ ಸ್ವಾಭಿಮಾನದಿಂದ ಬದುಕಬೇಕು. ಅದಕ್ಕೆ ಇಂಥಹ ಕಾರ್ಯಕ್ರಮಗಳು ಪ್ರೇರಣೆ ಆಗಬೇಕು ಎಂದರು.
ಶ್ರೀ ಕ್ಷೇ.ಧ.ಗ್ರಾ.ಯೋಜನೆ, ಬಿಸಿ ಟ್ರಸ್ಟ್ ಜಿಲ್ಲಾ ನಿರ್ದೇಶಕ ನಾಗರಾಜ್ ಶೆಟ್ಟಿ ಆಶಯ ಮಾತುಗಳನ್ನಾಡಿ, ಜನಜಾಗೃತಿ ಮೂಡಿಸುವ ಕಾರ್ಯ ನಾಲ್ಕು ದಶಕಗಳ ಹಿಂದೆ ಆರಂಭಗೊಂಡಿತು. ಗಾಂಧಿ ಜಯಂತಿ ಅಂಗವಾಗಿ ಹತ್ತು ದಿನಗಳ ಅವಧಿಯಲ್ಲಿ ರಾಜ್ಯದ ವಿವಿಧೆಡೆ 150ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಗಾಂಧಿ ತತ್ವ, ಆದರ್ಶ ನಮಗೆ ಆದರ್ಶವಾಗಬೇಕು, ದುಶ್ಚಟಗಳಿಂದ ಮುಕ್ತವಾಗಿ ಸ್ವಸ್ಥ ಸಮಾಜವನ್ನು ಕಟ್ಟಬೇಕು, ಸ್ವಾಭಿಮಾನವನ್ನು ಮೈಗೂಡಿಸಿಕೊಂಡು ಬದುಕಬೇಕು, ನಮ್ಮ ಬದುಕು ಇತರರಿಗೆ ಮಾರ್ಗದರ್ಶಿಯಾಗಬೇಕು. ಗ್ರಾಮಾಭಿವೃದ್ಧಿ ಯೋಜನೆ ನಿರಂತರವಾಗಿ ಜನಜಾಗೃತಿಗೊಳಿಸುವ ಕಾರ್ಯ ಮಾಡುತ್ತಲೇ ಇದೆ ಎಂದರು.
ಬೈಂದೂರು ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಸುಧಾಕರ್ ಆಚಾರ್ಯ, ಕುಂದಾಪುರ ತಾಲೂಕು ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಉಮೇಶ್ ಶೆಟ್ಟಿ ಶಾನ್ಕಟ್ಟು, ಸರಕಾರಿ ಪದವಿ ಪೂರ್ವ ಕಾಲೇಜು ಕುಂದಾಪುರ ಇದರ ಪ್ರಾಚಾರ್ಯರಾದ ಚಂದ್ರಶೇಖರ, ಧ.ಗ್ರಾ.ಯೋಜನೆ ಕೇಂದ್ರ ಸಮಿತಿ ಅಧ್ಯಕ್ಷ ಅಶೋಕ ಕೆರೆಕಟ್ಟೆ, ಕುಂದಾಪುರ-2 ಕೇಂದ್ರ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಆಚಾರ್ಯ, ಬೈಂದೂರು ತಾಲೂಕು ಕೇಂದ್ರ ಸಮಿತಿ ಅಧ್ಯಕ್ಷ ವಾಸು ಮೇಸ್ತ, ಜನಜಾಗೃತಿ ಸಮಿತಿ ಸದಸ್ಯ ರಾಮ್ ಕಿಶನ್ ಹೆಗ್ಡೆ ಬಸ್ರೂರು ಉಪಸ್ಥಿತರಿದ್ದರು.
ಶೇಖರ ಶೆಟ್ಟಿ ಅನಿಸಿಕೆ ಹಂಚಿಕೊಂಡರು. ಪಾನಮುಕ್ತರಾಗಿ ನವಜೀವನ ಆರಂಭಿಸಿದವರಿಗೆ ಪುಷ್ಪ ನೀಡಿ ಅಭಿನಂದಿಸಲಾಯಿತು. ನವಜೀವನೋತ್ಸವದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕುಂದಾಪುರ ತಾಲೂಕು ಜನಜಾಗೃತಿ ವೇದಿಕೆಯ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಸುಬ್ರಹ್ಮಣ್ಯ ಶೆಟ್ಟಿ ಅವರಿಗೆ ನಿಕಟಪೂರ್ವ ಅಧ್ಯಕ್ಷ ಉಮೇಶ ಶೆಟ್ಟಿ ಜವಾಬ್ದಾರಿ ಹಸ್ತಾಂತರಿಸಿದರು.
ಕಛೇರಿ ಸಿಬ್ಬಂದಿಗಳು ಪ್ರಾರ್ಥನೆ ನೆರವೇರಿಸಿದರು. ಬೈಂದೂರು ತಾಲೂಕು ಯೋಜನಾಧಿಕಾರಿ ಸಂಜಯ ನಾಯಕ್ ಸ್ವಾಗತಿಸಿದರು. ಕುಂದಾಪುರ ತಾಲೂಕು ಯೋಜನಾಧಿಕಾರಿ ಉಮೇಶ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ, ಕುಂದಾಪುರ-2 ತಾಲೂಕು ಯೋಜನಾಧಿಕಾರಿ ಸುಧೀರ್ ಹಂಗಳೂರು ವಂದಿಸಿದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ಕುಂದಾಪುರ ಶಾಸ್ತ್ರೀ ವೃತ್ತದಿಂದ ಜಾಥಾ ನಡೆಯಿತು. ಕನ್ನಡ ಸಾಹಿತ್ಯ ಪರಿಷತ್ ಕುಂದಾಪುರ ತಾಲೂಕು ಘಟಕದ ಅಧ್ಯಕ್ಷ ಡಾ.ಉಮೇಶ ಪುತ್ರನ್ ಹಾಗೂ ಸಂಚಾರ ಪೊಲೀಸ್ ಠಾಣಾಧಿಕಾರಿ ಸುಧಾ ಪ್ರಭು ಜಾಥಾಕ್ಕೆ ಚಾಲನೆ ನೀಡಿದರು. ಜನಜಾಗೃತಿ ಸ್ತಬ್ದಚಿತ್ರ, ಕುಣಿತ ಭಜನೆ ಮೂಲಕ ಜಾಥಾ ಕುಂದಾಪುರ ನಗರದಲ್ಲಿ ಸಾಗಿ ಬಂತು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!