spot_img
Friday, September 18, 2026
spot_img

ಪಂಚಗ್ಯಾರಂಟಿ ಯೋಜನೆ ಆಗಸ್ಟ್ ತಿಂಗಳಲ್ಲಿ ರೂ.27,73,03,609 ಬಿಡುಗಡೆ-ಎಚ್.ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ

ಕುಂದಾಪುರ: ಅಗಸ್ಟ್ ತಿಂಗಳಲ್ಲಿ ಪಂಚಗ್ಯಾರಂಟಿ ಯೋಜನೆಯಿಂದ ಕುಂದಾಪುರ ತಾಲೂಕಿಗೆ ರೂ.27,73,03,609 ಅನುದಾನ ಬಿಡುಗಡೆಯಾಗಿದೆ. ಅನ್ನಭಾಗ್ಯ ಇಕೆವೈಸಿ ಮಾಡಲು ಅಕ್ಟೋಬರ್ 20ರ ತನಕ ವಿಸ್ತರಣೆ ಮಾಡಿ ಸಚಿವರಾದ ರಿಜ್ವಾನ್ ಅರ್ಷದ್ ಆದೇಶ ಮಾಡಿದ್ದಾರೆ. ಅದೇ ರೀತಿ ಅಕ್ಟೋಬರ್‍ನಿಂದ ಪಡಿತರ ಅಂಗಡಿಗಳನ್ನು ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 12 ಗಂಟೆಯ ತನಕ, ಸಂಜೆ 4 ಗಂಟೆಯಿಂದ ರಾತ್ರಿ 8 ಗಂಟೆಯ ತನಕ ತೆರೆಯಬೇಕೆಂದು ಆದೇಶ ಮಾಡಿದ್ದಾರೆ. ಗೃಹಜ್ಯೋತಿ ಯೋಜನೆಯ ಪರಿಷ್ಕರಣೆಯನ್ನು ತಾಲೂಕಿನಲ್ಲಿ ಯಶಸ್ವಿಯಾಗಿ ಮಾಡಲಾಗಿದೆ. ಇಲಾಖೆ ಗ್ರಾಹಕಸ್ನೇಹಿಯಾಗಿ ಪರಿಷ್ಕರಣೆ ಪ್ರಕ್ರಿಯೆ ನಡೆಸಿದ್ದಾರೆ. ಗೃಹಲಕ್ಷ್ಮೀ ಯೋಜನೆಯ ಪರಿಷ್ಕರಣೆ ಬಗ್ಗೆ ಇಲಾಖೆ ಸಿದ್ಧತೆಗಳನ್ನು ಮಾಡಿಕೊಂಡಿದೆ. ಯಾವುದೇ ಆರ್ಹ ಫಲಾನುಭವಿಗೆ ತೊಂದರೆಯಾಗದಂತೆ ಪರಿಷ್ಕರಣೆ ನಡೆಸಬೇಕು ಎಂದು ಕುಂದಾಪುರ ತಾಲೂಕು ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷರಾದ ಎಚ್.ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಹೇಳಿದರು.

ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಕುಂದಾಪುರ ತಾಲೂಕು ಮಟ್ಟದ ಗ್ಯಾರಂಟಿ ಅನುಷ್ಟಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅನ್ನಭಾಗ್ಯ ಯೋಜನೆ:
ಅನ್ನಭಾಗ್ಯ ಯೋಜನೆಗೆ ಸಂಬಂಧಪಟ್ಟಂತೆ ಇಕೆವೈಸಿ ಪ್ರಕ್ರಿಯೆ ನಡೆಯುತ್ತಿದ್ದು ತಾಲೂಕಲ್ಲಿ ಈಗಾಗಲೇ 25% ಆಗಿದೆ. ಆಧಾರ್ ಕಾರ್ಡ್, ಪಡಿತರ ಚೀಟಿಯೊಂದಿಗೆ ಬೆರಳಚ್ಚು ನೀಡುವ ಮೂಲಕ ಇಕೆವೈಸಿ ಮಾಡಿಕೊಳ್ಳಬಹುದು. ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ಗ್ಯಾರಂಟಿ ಸಮಿತಿ ಸದಸ್ಯ ಅಭಿಜಿತ್ ಪೂಜಾರಿ ಮಾತನಾಡಿ ಇಕೆವೈಸಿ ಗ್ರಾಮ ಒನ್ ಕೇಂದ್ರಗಳಲ್ಲಿ ಮಾಡಲು ಅವಕಾಶ ನೀಡಲಾಗಿದೆಯೇ ಎಂದು ಪ್ರಶ್ನಿಸಿದರು. ಗ್ರಾಮ ಒನ್ ಕೇಂದ್ರಗಳಲ್ಲಿಯೂ ಅವಕಾಶ ನೀಡಲಾಗಿದೆ. ಅಲ್ಲಿ ಶುಲ್ಕ ಪಾವತಿಸಿಬೇಕಾದ್ದರಿಂದ ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಆಸಕ್ತರು ಅಲ್ಲಿಯೂ ಮಾಡಬಹುದು ಎಂದರು. ಪಡಿತರ ಅಂಗಡಿಗಳಲ್ಲಿ ಸರ್ವರ್ ಸಮಸ್ಯೆಯ ಬಗ್ಗೆ ಗ್ಯಾರಂಟಿ ಸಮಿತಿ ಜಹೀರ್ ಅಹಮದ್ ಸಭೆಯ ಗಮನ ಸಳೆದರು. ಸದಸ್ಯೆ ವಾಣಿ ಆರ್.ಶೆಟ್ಟಿ ಮಾತನಾಡಿ, ಪಡಿತರ ಚೀಟಿಯ ಯಜಮಾನಿ ಅನಾರೋಗ್ಯ ಪೀಡಿತರಾಗಿದ್ದರೆ, ಪಡಿತರ ಅಂಗಡಿಗೆ ಹೋಗಲು ಆಗದಿದ್ದರೆ ಇಕೆವೈಸಿ ಪ್ರಕ್ರಿಯೆ ಹೇಗೆ ಎಂದು ಪ್ರಶ್ನಿಸಿದರು. ಕುಟುಂಬ ಸದಸ್ಯರು ಸೂಕ್ತ ದಾಖಲೆ ಸಲ್ಲಿಸಿ ಬೆರಳಚ್ಚು ನೀಡಿ, ಓಟಿಪಿ ಮೂಲಕ ಮಾಡಲು ಅವಕಾಶವಿದೆ ಎಂದರು.

ಇಕೆವೈಸಿ ದಿನಾಂಕ ವಿಸ್ತರಣೆ, ಪಡಿತರ ಅಂಗಡಿಗಳ ಸಮಯ ಬದಲಾವಣೆ ಬಗ್ಗೆ ಫಲಕಗಳನ್ನು ಅಳವಡಿಸಿ ಮಾಹಿತಿ ನೀಡಬೇಕು ಎಂದು ಎಚ್.ಹರಿಪ್ರಸಾದ್ ಶೆಟ್ಟಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗೃಹಲಕ್ಷ್ಮಿ ಯೋಜನೆ:
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆಗೆ ಇಲಾಖೆ ಸಿದ್ಧತೆಗಳನ್ನು ಮಾಡಿಕೊಂಡಿದೆ. 212 ಸಮೀಕ್ಷಾದಾರರನ್ನು ನೇಮಕ ಮಾಡಲಾಗಿದೆ. ತರಬೇತಿದಾರರು ಮನೆಮನೆಗೆ ತರಳಿ ಪರಿಷ್ಕರಣೆ ಪ್ರಕ್ರಿಯೆ ನಡೆಸಲಿದ್ದಾರೆ. ಸಮೀಕ್ಷಾದಾರರ ಜೊತೆಗೆ ಸಮೀಕ್ಷೆಗೆ ಗ್ಯಾರಂಟಿ ಸಮಿತಿ ಸದಸ್ಯರಿಗೂ ಅವಕಾಶ ಕಲ್ಪಿಸಲಾಗಿದೆ. ಗಮನಿಸಬೇಕಾದ ಮುಖ್ಯ ವಿಷಯವೆಂದರೆ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಯ ಹೆಸರಿನಲ್ಲಿ ಮೊಬೈಲ್ ನಂಬರ್ ಇರಬೇಕು. ಅದು ಅಧಾರ್ ಕಾರ್ಡು, ಬ್ಯಾಂಕ್ ಖಾತೆಗೆ ಲಿಂಕ್ ಆಗಿರಬೇಕು. ಪರಿಷ್ಕರಣೆ ಆರಂಭವಾಗುವುದರೊಳಗೆ ಫಲಾನುಭವಿಯ ಹೆಸರಿಗೆ ಮೊಬೈಲ್ ನಂಬರ್ ಮಾಡಿಕೊಳ್ಳಬೇಕು. ಕರ್ನಾಟಕದಲ್ಲಿ ಶಾಖೆ ಹೊಂದಿರುವ ಬ್ಯಾಂಕ್ ಖಾತೆ, ಆಧಾರ್, ಮತದಾರರ ಚೀಟಿ, ಪಡಿತರ ಚೀಟಿಯನ್ನು ಸಿದ್ಧ ಮಾಡಿಟ್ಟುಕೊಂಡಿರಬೇಕು. ಫಲಾನುಭವಿ ಹೆಸರಿಗೆ ಇರುವ ಮೊಬೈಲ್ ನಂಬರ್‍ಗೆ ಓಟಿಪಿ ಬರುತ್ತದೆ ಎಂದರು.

ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿ ಮಾತನಾಡಿ, ತರಬೇತಿಗೆ ಹುದ್ದೆ ನೋಡಿ ಆಯ್ಕೆ ಮಾಡಬೇಡಿ, ತಾಂತ್ರಿಕವಾಗಿ ಸರಿಯಾದ ತಿಳುವಳಿಕೆ ಇರುವ ವ್ಯಕ್ತಿಗಳನ್ನು ಆಯ್ಕೆ ಮಾಡಿ, ಸಮೀಕ್ಷಾದಾರರೊಂದಿಗೆ ಗ್ರಾಮ ಮಟ್ಟದ ಗ್ಯಾರಂಟಿ ಸಮಿತಿ ಸದಸ್ಯರು ತೆರಳಬೇಕು. ಆ ಹಿನ್ನೆಲೆಯಲ್ಲಿ ಗ್ರಾಮ ಮಟ್ಟದಲ್ಲಿ ಆರು ಜನರ ಗ್ಯಾರಂಟಿ ಸಮಿತಿ ರಚನೆ ಮಾಡಲಾಗುತ್ತದೆ ಎಂದರು.

ಸದಸ್ಯರಾದ ಗಣೇಶ ಮಾತನಾಡಿ, ಸಮೀಕ್ಷಾದಾರರಿಗೆ ತರಬೇತಿ ನೀಡುವಾಗ ತಾಲೂಕು ಮಟ್ಟದ ಗ್ಯಾರಂಟಿ ಸಮಿತಿ ಸದಸ್ಯರಿಗೂ ಅವಕಾಶ ಕಲ್ಪಿಸಬೇಕು ಎಂದರು. ಅಭಿಜಿತ್ ಪೂಜಾರಿ ಮಾತನಾಡಿ ಗ್ಯಾರಂಟಿ ಸಮಿತಿ ಸದಸ್ಯರು ಫಲಾನುಭವಿಗಳ ಮನೆಗೆ ಸಮೀಕ್ಷಾದಾರರೊಂದಿಗೆ ತೆರಳಿದರೆ ಅನುಕೂಲವಾಗುತ್ತದೆ ಎಂದರು.

ಗೃಹಜ್ಯೋತಿ ಯೋಜನೆ ಪರಿಷ್ಕರಣೆ ಯಶಸ್ವಿಯಾಗಿ ನಡೆದಿದ್ದು, ಶೇ 5ರಷ್ಟು ಬಾಕಿ ಇದೆ. ಈ ತಿಂಗಳ ಕೊನೆಯ ತನಕ ಅವಕಾಶವಿದ್ದು ಎಲ್ಲರನ್ನೂ ಪರಿಷ್ಕರಣೆ ಮಾಡಲು ಪ್ರಯತ್ನ ಮಾಡಲಾಗುತ್ತಿದೆ ಎಂದು ಮೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದರು. ಚಂದ್ರ ಕಾಂಚನ್, ನಾರಾಯಣ ಆಚಾರ್ ಕೋಣಿ, ಜಹೀರ್ ಅಹಮದ್ ಈ ಬಗ್ಗೆ ಮಾತನಾಡಿದರು.

ಉಡುಪಿ-ಕುಂದಾಪುರ-ಕೊಲ್ಲೂರು ಕೆಎಸ್.ಆರ್.ಟಿ.ಸಿ ಬಸ್ ಓಡಾಟಕ್ಕೆ ಅವಕಾಶವಿಲ್ಲ, ಹಾಗೆಯೇ ಗಂಗೊಳ್ಳಿ-ಬೈಂದೂರು ಬಸ್ ಓಡಾಟಕ್ಕೂ ಕೂಡಾ ಅವಕಾಶವಿಲ್ಲ, ಹಕ್ಲಾಡಿ-ಆಲೂರು ಮಾರ್ಗದಲ್ಲಿ ಬಸ್ ಓಡಾಟಕ್ಕೆ ಸರ್ವೇ ಆಗಿದೆ ಎಂದು ಕೆಎಸ್.ಆರ್.ಟಿಸಿ ಡಿಪೋ ಮೆನೇಜರ್ ಮಾಹಿತಿ ನೀಡಿದರು.

ಕೊಲ್ಲೂರಿನಿಂದ ಹುಣಸೂರು ಡಿಪೋದಿಂದ ಬರುವ ಬಸ್‍ಗಾದರೂ ಅವಕಾಶ ಕಲ್ಪಿಸಲು ಸಾಧ್ಯವೆ ಎಂದು ಪರಿಶೀಲಿಸಿ, ಹಾಗೆಯೇ ಭಟ್ಕಳ ಡಿಪೋದ ಬಸ್ ಬೈಂದೂರು-ಗಂಗೊಳ್ಳಿಗೆ ಸಂಪರ್ಕಿಸಲು ಸಾಧ್ಯವೇ ಎಂದು ಹರಿಪ್ರಸಾದ್ ಶೆಟ್ಟಿ ಪ್ರಶ್ನಿಸಿದರು. ಈ ಬಗ್ಗೆ ನಾರಾಯಣ ಆಚಾರ್ ಕೋಣಿ, ಜಹೀರ್ ಅಹಮದ್ ಚರ್ಚಿಸಿದರು.

ಯುವನಿಧಿ ಯೋಜನೆಯಲ್ಲಿ 39 ಹೊಸ ಅರ್ಜಿಯನ್ನು ಆಗಸ್ಟ್ ಮಾಹೆಯಲ್ಲಿ ಸ್ವೀಕರಿಸಲಾಗಿದೆ. ಕಾಲೇಜುಗಳಲ್ಲಿ ಮಾಹಿತಿ ಕಾರ್ಯಕ್ರಮ ಆಯೋಜಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ತನಕ ಒಟ್ಟು 1208 ಜನ ನೊಂದಣಿ ಮಾಡಿಕೊಂಡಿದ್ದಾರೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ತಿಳಿಸಿದರು.

ಸಮಿತಿಯ ಸದಸ್ಯ ಕಾರ್ಯದರ್ಶಿ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಮಹೇಶ ಕೆ.ಜಿ ಸ್ವಾಗತಿಸಿ ವಂದಿಸಿದರು.

ಪಂಚಗ್ಯಾರಂಟಿ ಯೋಜನೆಯಲ್ಲಿ ಆಗಸ್ಟ್ 2026ರ ಮಾಹೆಯ ಅಂತ್ಯಕ್ಕೆ ಗೃಹಲಕ್ಷ್ಮೀ ಯೋಜನೆಯಲ್ಲಿ 17,28,32,000 ಗೃಹಜ್ಯೋತಿಯಲ್ಲಿ 4,57,91,357 ಅನ್ನಭಾಗ್ಯ ಯೋಜನೆಯಲ್ಲಿ 2,47,32,838 ಯುವನಿಧಿಯಲ್ಲಿ 11,02500, ಶಕ್ತಿಯೋಜನೆಯಲ್ಲಿ ರೂ.3,28,44,914 ಒಟ್ಟು ರೂ.27,73,03,609 ತಾಲೂಕಿಗೆ ಲಭಿಸಿದೆ. ಒಟ್ಟು ಇಲ್ಲಿಯ ತನಕ ಒಟ್ಟು 639,82,33,593 ಬಿಡುಗಡೆಯಾಗಿದೆ -ಎಚ್.ಹರಿಪ್ರಸಾದ್ ಶೆಟ್ಟಿ, ಅಧ್ಯಕ್ಷರು, ಕುಂದಾಪುರ ತಾಲೂಕು ಗ್ಯಾರಂಟಿ ಅನುಷ್ಟಾನ ಸಮಿತಿ

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!