spot_img
Monday, June 15, 2026
spot_img

ಎಸ್.ಎನ್.ಡಿ.ಪೂಜಾರಿ ಇಂಗ್ಲಿಷ್ ಗೆ ಅನುವಾದಿಸಿದ ಗಂಗಾಧರ ಕಿದಿಯೂರು ಅವರ ತುಳು ನಾಟಕ ‘ಪಿಂಗಾರದ ಬಾಲೆ ಸಿರಿ’.

 

ಸಿರಿ ಮಹಾಕಾವ್ಯ ಅಥವಾ ಸಿರಿ ಪಾಡ್ದನವು ಇಂದು ತುಳುವಿನಲ್ಲಿ ಲಭ್ಯವಿರುವ ಒಂದು ಪ್ರಮುಖ ಕೃತಿ. 15,683 ಪದ್ಯಗಳನ್ನು ಒಳಗೊಂಡಿರುವ ಈ ಕೃತಿ ತುಳುವರ ಹೆಮ್ಮೆ. ಇದರಲ್ಲಿರುವುದು ಸಿರಿ ಎಂಬ ಬಂಟ ಸಮುದಾಯದ ರಾಜಕುಮಾರಿಯು ತನ್ನ ಸತ್ಯ-ನ್ಯಾಯ-ನಿಷ್ಠೆಗಳ ಪಾಲನೆಯಿಂದ ದೈವತ್ವಕ್ಕೆ ಏರುವ ಕಥೆ. ಪಿತೃಪ್ರಧಾನ ಪದ್ದತಿಯು ಹೆಣ್ಣುಮಕ್ಕಳನ್ನು ತನ್ನ ಕಪಿಮುಷ್ಠಿಯೊಳಗಡೆ ಹಿಡಿದುಕೊಂಡು ನಲುಗಿಸುತ್ತಿದ್ದ ಒಂದು ಕಾಲದಲ್ಲಿ ತನ್ನ ಪತಿ ಸುಳ್ಳು ಹೇಳಿ ವಂಚಿಸಿದಾಗ ಸೆಟೆದು ನಿಂತು ಯಾರಿಗೂ ಹೆದರದೆ ಪ್ರತಿಭಟಿಸಿದ ದಿಟ್ಟ ಹೆಣ್ಣು ಸಿರಿ. ಇಂದು ಅನ್ಯಾಯಕ್ಕೊಳಗಾದ ಸ್ತ್ರೀಯರು ಆಶ್ರಯ ಬೇಡಿ ಬರುವುದು ಸಿರಿ ಎಂಬ ತಮ್ಮ ಆರಾಧ್ಯ ದೇವತೆಯ ಬಳಿಗೇ. ಅಂತಹ ಮಹಾನ್ ಸ್ತ್ರೀಯ ಕುರಿತಾದ ‘ಸಿರಿ ಮಹಾಕಾವ್ಯ’ ಕಥೆಯನ್ನು ಆಧರಿಸಿ ಲೇಖಕ ಗಂಗಾಧರ ಕಿದಿಯೂರು ‘ಪಿಂಗಾರದ ಬಾಲೆ ಸಿರಿ’ ಎಂಬ ಸುಂದರ ನಾಟಕವನ್ನು ತುಳು ಭಾಷೆಯಲ್ಲಿ ರಚಿಸಿದ್ದಾರೆ. ಅದನ್ನು ಗೋವಾದಲ್ಲಿರುವ ಲೇಖಕ ಪ್ರೊ.ಎಸ್.ಎನ್.ಡಿ.ಪೂಜಾರಿಯವರು ಅತ್ಯಂತ ಸಮರ್ಥವಾಗಿ ಇಂಗ್ಲಿಷ್ ಗೆ ಅನುವಾದಿಸಿದ್ದಾರೆ.
ಕಾವ್ಯರೂಪದಲ್ಲಿರುವ ಒಂದು ಕಥೆಯನ್ನು ನಾಟಕ ರೂಪಕ್ಕೆ ತರುವುದು ಸುಲಭದ ಕೆಲಸವಲ್ಲ. ನಾಟಕ ಬರೆಯುವುದು ಬೇರೆಯೇ ಅದ ಒಂದು ಪ್ರತಿಭೆ. ಇಲ್ಲಿ ಕಥೆ ಕೈಯಲ್ಲಿದ್ದರೆ ಸಾಲದು. ಕಥೆಯನ್ನು ನೇರವಾಗಿ ನಿರೂಪಿಸುತ್ತ ಹೋಗುವ ಅವಕಾಶ ನಾಟಕಕಾರನಿಗೆ ಇಲ್ಲ. ನಾಟಕದಲ್ಲಿ ಎಲ್ಲವೂ ಸಂಭಾಷಣೆ ಹಾಗೂ ಸಂಭಾಷಣೆಗಳ ನಡುವಣ ಮೌನಗಳ ಮೂಲಕ ಸಂವಹನವಾಗಬೇಕು. ಸಂಭಾಷಣೆಗಳು ಹೇಗಿರಬೇಕು, ಅವುಗಳ ಧ್ವನಿಗಳಲ್ಲಿ ಏರಿಳಿತಗಳು ಹೇಗಿರಬೇಕು ಮತ್ತು ಮೌನಗಳಿಗೆ ಎಲ್ಲೆಲ್ಲಿ ಅವಕಾಶ ನೀಡಬೇಕು, ದೃಶ್ಯಗಳು ಎಷ್ಟಿರಬೇಕು, ದೃಶ್ಯಗಳನ್ನು ಎಲ್ಲಿ ತುಂಡರಿಸಿ ಮುಂದಿನ ದೃಶ್ಯವನ್ನು ಆರಂಭಿಸಬೇಕು ಎಂಬಿತ್ಯಾದಿ ಅಂಶಗಳ ಬಗ್ಗೆ ನಾಟಕಕಾರನ ಸೃಜನ ಶೀಲತೆ ಕೆಲಸ ಮಾಡಬೇಕಾಗುತ್ತದೆ. ‘ಪಿಂಗಾರದ ಬಾಲೆ ಸಿರಿ’ಯಲ್ಲಿ ಗಂಗಾಧರ ಕಿದಿಯೂರು ಈ ಎಲ್ಲ ವಿಷಯಗಳ ಬಗ್ಗೆ ಚಿಂತನೆ ನಡೆಸಿಯೇ ಈ ನಾಟಕ ರಚನೆಯ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಇದರಲ್ಲಿ 34 ದೃಶ್ಯಗಳಿವೆ. ನಾಟಕದುದ್ದಕ್ಕೂ ಸರಳವೂ ಅರ್ಥಪೂರ್ಣವೂ ಸಂದರ್ಭೋಚಿತ ಧ್ವನಿಗಳೂ ಇರುವ ಸಂಭಾಷಣೆಗಳನ್ನು ಅವರು ಬರೆದಿದ್ದಾರೆ. ಮೂಲಕಥೆಯ ಮುಖ್ಯ ಅಂಶಗಳು ಸೋರಿಹೋಗಬಾರದು ಅನ್ನುವ ಉದ್ದೇಶದಿಂದ ದೃಶ್ಯ-ದೃಶ್ಯಗಳ ನಡುವೆ ಒಬ್ಬ ನಿರೂಪಕ ಬಂದು ದೃಶ್ಯಾಂತರದಲ್ಲಿ ಏನು ನಡೆಯಿತು ಅನ್ನುವುದನ್ನು ಚುಟುಕಾಗಿ ಹೇಳುವ ಜಾಣ ತಂತ್ರವನ್ನೂ ಅವರು ಅಳವಡಿಸಿಕೊಂಡಿದ್ದಾರೆ. ನಾಟಕದಲ್ಲಿ ನಿರೂಪಕನೂ ಒಂದು ಪಾತ್ರ.
ಎಸ್.ಎನ್.ಡಿ.ಪೂಜಾರಿಯವರ ಅನುವಾದದ ಬಗ್ಗೆ ಹೇಳುವುದಾದರೆ ಸಾಮಾನ್ಯವಾಗಿ ಅನುವಾದಕರು ತಮಗೆ ಚಿರಪರಿಚಿತವಿರುವ ಒಂದು ಭಾಷೆಯನ್ನು ಲಕ್ಷ್ಯ ಭಾಷೆಯಾಗಿ ಆಯ್ದುಕೊಳ್ಳುತ್ತಾರೆ. ಯಾಕೆಂದರೆ ಪೂರ್ತಿಯಾಗಿ ನಮ್ಮದಲ್ಲದ ಒಂದು ಭಾಷೆಗೆ ಅನುವಾದಿಸುವುದು ಕಷ್ಟ. ಅಪರಿಚಿತ ಅಥವಾ ಕಡಿಮೆ ಪರಿಚಯವಿರುವ ಒಂದು ಭಾಷೆಯ ಸಹಜವಾದ ಶೈಲಿ, ಪದ ವೈವಿಧ್ಯಗಳು, ಪದಪುಂಜಗಳು, ನುಡಿಗಟ್ಟುಗಳು, ಗಾದೆಮಾತುಗಳು, ಆಚರಣೆಗಳು, ನಂಬಿಕೆ- ಸಂಪ್ರದಾಯಗಳ ಪೂರ್ತಿ ಪರಿಚಯ ನಮಗೆ ಇರುವುದಿಲ್ಲ. ಅದರಲ್ಲೂ ಇಂಗ್ಲಿಷ್ ನಂಥ ಒಂದು ಭಾಷೆಯ ವ್ಯಾಕರಣವೇ ಬೇರೆ. ನಮ್ಮ ಪ್ರಾದೇಶಿಕ ಭಾಷೆಯಿಂದ ಇಂಗ್ಲಿಷಿಗೆ ಅನುವಾದಿಸುವಾಗ ಪಾಂಡಿತ್ಯ ಮಾತ್ರವಲ್ಲದೆ ತುಂಬಾ ಎಚ್ಚರಿಕೆಯೂ ಇರಬೇಕು. ಮೂಲ ಕೃತಿಯಲ್ಲಿ ವ್ಯಕ್ತವಾದ ಆಶಯಕ್ಕೆ ಒಂದಿಷ್ಟೂ ಚ್ಯುತಿ ಬಾರದಂತೆ ಜಾಗ್ರತೆ ವಹಿಸಬೇಕು. ಮೂಲ ಕೃತಿಯಲ್ಲಿ ಹೇಳಿದ್ದನ್ನು ಸರಿಯಾಗಿ ಅರ್ಥಮಾಡಿಕೊಂಡು ಲಕ್ಷ್ಯ ಭಾಷೆಯಲ್ಲಿ ಅದಕ್ಕೆ ಅಭಿವ್ಯಕ್ತಿ ನೀಡುವುದು ಹರಸಾಹಸದ ಕೆಲಸ. ಒಬ್ಬ ಸೃಜನಶೀಲ ಬರಹಗಾರನಿಂದ ಮಾತ್ರವೇ ಇದು ಸಾಧ್ಯ. ಪ್ರೊ.ಎಸ್.ಎನ್.ಡಿ.ಪೂಜಾರಿಯವರು ಅತ್ಯಂತ ಯಶಸ್ವಿಯಾಗಿ ಈ ಕೆಲಸವನ್ನು ಮಾಡಿದ್ದಾರೆ. ಅಲ್ಲದೆ, ಮೂಲ ನಾಟಕವು ಜಾನಪದ ಶೈಲಿಯ ಭಾಷೆಯಲ್ಲಿರುವುದು ಇನ್ನೊಂದು ಸಮಸ್ಯೆ. ಜಾನಪದ ಶೈಲಿಯ ಪದಗಳಿಗೆ ಇಂಗ್ಲಿಷ್ ನಲ್ಲಿ ಪರ್ಯಾಯಗಳನ್ನು ಹುಡುಕುವುದು ತುಂಬಾ ಶ್ರಮ ಬೇಡುವ ಕೆಲಸ. ಪ್ರೊ.ಪೂಜಾರಿಯವರು ಅದನ್ನು ಸವಾಲಾಗಿ ತೆಗೆದುಕೊಂಡು ತಮ್ಮ ಸರಳ-ಸುಂದರ ಇಂಗ್ಲಿಷಿನಲ್ಲಿ ‘ಪಿಂಗಾರದ ಬಾಲೆ ಸಿರಿ’ ನಾಟಕವನ್ನು ಅನುವಾದಿಸಿದ್ದಾರೆ. ತುಳು ಭಾಷೆ ತಿಳಿಯದವರಿಗೆ ಸಿರಿ ಎಂಬ ಮಹಾನ್ ಸ್ತ್ರೀಯ ಕಥೆಯನ್ನು ತಿಳಿದುಕೊಳ್ಳುವ ಅವಕಾಶ ಮಾಡಿಕೊಟ್ಟಿದ್ದಾರೆ.

-ಡಾ.ಪಾರ್ವತಿ ಜಿ.ಐತಾಳ್

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!