Sunday, September 8, 2024

ಕೊಲ್ಲೂರು: ಯಕ್ಷಗಾನ ಅಕಾಡೆಮಿಯ ಪಾರ್ತಿಸುಬ್ಬ ಪ್ರಶಸ್ತಿ, ಗೌರವ ಪ್ರಶಸ್ತಿ ಪ್ರದಾನ

 


ಕೊಲ್ಲೂರು, ನ.7: ಯಕ್ಷಗಾನಕ್ಕೆ ತನ್ನದೇಯಾದ ಗೌರವ, ಮಹತ್ವಿಕೆ ಇದೆ. ಯಕ್ಷಗಾನದ ಸಂಪ್ರದಾಯ, ಪರಂಪರೆ, ಹಿನ್ನೆಲೆಗೆ ತೊಂದರೆಯಾಗಬಾರದು. ಮುಂದಿನ ದಿನಗಳಲ್ಲಿ ಒಂದೊಂದು ದೇವಸ್ಥಾನದಿಂದ ಒಂದೊಂದೇ ಮೇಳ ಮಾಡಿ ಗುಣಮಟ್ಟದ ಕಾಲಮಿತಿ ಯಕ್ಷಗಾನ ಪ್ರದರ್ಶನ ನೀಡುವಂತಾಗಬೇಕು. ಇದರಿಂದ ಕಲೆಗೆ ಒಳಿತಾಗುತ್ತದೆ ಎಂದು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಹೇಳಿದರು.

ನ.7 ಶ್ರೀ ಕ್ಷೇತ್ರ ಕೊಲ್ಲೂರು ಶ್ರೀ ಮೂಕಾಂಬಿಕಾ ಸಭಾಭವನದಲ್ಲಿ ನಡೆದ ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇವರು ನೀಡುವ 2019ನೇ ಸಾಲಿನ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿ, ಗೌರವ ಪ್ರಶಸ್ತಿ, ಯಕ್ಷಸಿರಿ ವಾರ್ಷಿಕ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನ ಪ್ರದಾನ ಸಮಾರಂಭ ಉದ್ಘಾಟಿಸಿ, ಪಾರ್ತಿಸುಬ್ಬ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಯಕ್ಷಗಾನದ ಹಿಂದಿನ ಗತ ವೈಭವ ಮತ್ತೆ ಮರಳಬೇಕು. ಅಂದಿನ ಉತ್ಕೃಷ್ಟ ಮಟ್ಟದ ಪ್ರದರ್ಶನವನ್ನು ನೀಡುವಂತಾಗಬೇಕು. ಪರಂಪರೆಯ ಚೌಕಟ್ಟಿನೊಳಗೆ ಯಕ್ಷಗಾನ ಕಲೆ ಮುಂದುವರಿಯಬೇಕು. ಯಕ್ಷಗಾನ ಕ್ಷೇತ್ರಕ್ಕೆ ಕುಂದಾಪುರ ತಾಲೂಕಿನ ಕೊಡುಗೆ ಮಹತ್ವದ್ದು. ಇಲ್ಲಿ ಸಾಕಷ್ಟು ಪ್ರಸಿದ್ಧ ಕಲಾವಿದರಿದ್ದಾರೆ. ಯಕ್ಷಗಾನ ಆಕಾಡೆಮಿ ಕೊಲ್ಲೂರಿನಲ್ಲಿ ಕಾರ್ಯಕ್ರಮ ಆಯೋಜಿಸಿ, ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ಶ್ಲಾಘನಾರ್ಹ ಎಂದರು.

ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಎಂ.ಎ ಹೆಗಡೆ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಡಾ|ಅತುಲ್ ಕುಮಾರ ಶೆಟ್ಟಿ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಅರ್ಚಕರಾದ ನರಸಿಂಹ ಭಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರಬಾಬು ಬೆಕ್ಕೇರಿ, ಬ್ಯಾರಿ ಅಕಾಡೆಮಿಯ ಆರ್.ಪೂರ್ಣಿಮಾ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕೇಶವ ಶೆಟ್ಟಿಗಾರ್ (ಅಂಬಾತನಯ ಮುದ್ರಾಡಿ) ಅವರಿಗೆ ೨೦೧೯ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿ, ಡಾ|ರಾಮಕೃಷ್ಣ ಗುಂದಿ ಅವರಿಗೆ ಗೌರವ ಪ್ರಶಸ್ತಿ, ನಲ್ಲೂರು ಜನಾರ್ದನ ಆಚಾರ್ ಅವರ ಪರವಾಗಿ ಅವರ ಪತ್ನಿ, ಆರ್ಗೋಡು ಮೋಹನದಾಸ ಶೆಣೈ, ಮಹಮ್ಮದ್ ಗೌಸ್, ಮೂರೂರು ರಾಮಚಂದ್ರ ಹೆಗಡೆ, ಎಂ.ಎನ್.ಹೆಗಡೆ ಹಳವಳ್ಳಿ, ಹಾರಾಡಿ ಸರ್ವೋತ್ತಮ ಗಾಣಿಗ ಅವರಿಗೆ ಯಕ್ಷಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಭಾಗವತ ಸುರೇಶ ಶೆಟ್ಟಿ ಬಳಗದವರು ಪ್ರಾರ್ಥಿಸಿದರು. ಸುಷ್ಮಾ, ಸ್ವಾತಿ, ಕೀರ್ತನ ನಾಡಗೀತೆ ಹಾಡಿದರು. ಕರ್ನಾಟಕ ಯಕ್ಷಗಾನ ಅಕಾಡೆಮಿಯ ರಿಜಿಸ್ಟ್‌ರ್ ಎಸ್.ಹೆಚ್.ಶಿವರುದ್ರಪ್ಪ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಸಂಚಾಲಕ ಕೆ.ಎಂ.ಶೇಖರ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

ನಂತರ ಹಟ್ಟಿಯಂಗಡಿ ಮೇಳದವರಿಂದ ಯಕ್ಷಗಾನ ಪ್ರದರ್ಶನ ‘ಭೀಷ್ಮ ವಿಜಯ’ ಪ್ರದರ್ಶನಗೊಂಡಿತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!