spot_img
Wednesday, January 22, 2025
spot_img

ಹಿರಿಯ ಯಕ್ಷಗಾನ ಕಲಾವಿದ, ಅಪ್ರತಿಮ ವಾಕ್ಪಟು ಮಲ್ಪೆ ವಾಸುದೇವ ಸಾಮಗ ಇನ್ನಿಲ್ಲ

 


ಕುಂದಾಪುರ, ನ.7 :ಹಿರಿಯ ಯಕ್ಷಗಾನ ಕಲಾವಿದ, ತಾಳಮದ್ದಲೆಯ ಪ್ರಸಿದ್ಧ ಅರ್ಥದಾರಿ, ಅಪ್ರತಿಮ ವಾಕ್ಪಟು ಮಲ್ಪೆ ವಾಸುದೇವ ಸಾಮಗ (71 ವ) ನ.7ರ ಬೆಳಿಗ್ಗೆ ನಿಧನ ಹೊಂದಿದ್ದಾರೆ.

ಯಕ್ಷಗಾನ ಕೂಟಗಳ ಮಾತಿನಮಲ್ಲ, ಪ್ರತ್ಯುತ್ಪನ್ನ ಮತಿಯ ಚಾಣಕ್ಯ ಸಾಮಗರು ತೆಂಕು-ಬಡಗು ಯಕ್ಷಭೂಮಿಯಲ್ಲಿ ತಿಟ್ಟುಬೇಧವಿಲ್ಲದೇ ತಿರುಗಾಟ ಮಾಡಿ ಪರಂಪರೆಯ ಕೊಂಡಿಯಾಗಿ ಯಕ್ಷಗಾನವನ್ನು ಮುಂದುವರಿಸಿಕೊಂಡು ಬಂದವರು. ತನ್ನ 70 ವಯಸ್ಸಿನಲ್ಲಿಯೂ ಕೂಡಾ ವೇಷ ಮಾಡುತ್ತಿದ್ದ, ತಾಳಮದ್ದಲೆ ಕೂಟಗಳಲ್ಲಿ, ಯಕ್ಷಗಾನಕ್ಕೆ ಸಂಬಂಧಪಟ್ಟ ಗೋಷ್ಠಿ, ಸಮ್ಮೇಳನಗಳಲ್ಲಿ ಯಕ್ಷಗಾನದ ಬಗ್ಗೆ ವಿದ್ವತ್ತು ಪ್ರದರ್ಶಿಸುತ್ತಿದ್ದರು. ಯಕ್ಷಗಾನಕ್ಕೆ ತನ್ನನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡಿದ್ದ ಅವರು ಕೋಟೇಶ್ವರದಲ್ಲಿ ನೆಲೆಸಿದ್ದರು.

ಅಮೃತೇಶ್ವರಿ ಮೇಳದಲ್ಲಿ ವೃತ್ತಿರಂಗಕ್ಕೆ ಕಾಲಿಟ್ಟ ಸಾಮಗರು, ನಾರಣಪ್ಪ ಉಪ್ಪೂರರ ಒಡನಾಟದದಲ್ಲಿ ಪರಿಪೂರ್ಣ ಕಲಾವಿದರಾಗಿ ಆ ಮೇಳದಲ್ಲಿ ಗುರುತಿಸಿಕೊಂಡರು. ಅಲ್ಲಿ ದೊಡ್ಡ ಸಾಮಗರು, ಚಿಟ್ಟಾಣಿಯವರು, ಕೋಟ ವೈಕುಂಠ, ಎಂ.ಎ.ನಾಯಕ್, ನಗರ ಜಗನ್ನಾಥ ಶೆಟ್ಟಿ, ಗೋಡೆ ನಾರಾಯಣ ಹೆಗಡೆಯವರಂತ ಘಟಾನುಘಟಿಗಳ ಸಾಂಗತ್ಯದಿಂದ ಪ್ರಬುದ್ದ, ಪ್ರಸಿದ್ಧ ಕಲಾವಿದರಾಗಿ ರೂಪುಗೊಂಡರು.

ಧರ್ಮಸ್ಥಳ, ಕದ್ರಿ, ಕರ್ನಾಟಕ ಸುರತ್ಕಲ್, ಸಾಲಿಗ್ರಾಮ, ಪೆರ್ಡೂರು, ಬಗ್ವಾಡಿ, ಸೌಕೂರು ಮೇಳಗಳಲ್ಲಿಯೂ ಯಶಸ್ವಿ ತಿರುಗಾಟ ಮಾಡಿದ್ದಾರೆ. ಮೇಳದ ಯಜಮಾನರಾಗಿಯೂ ಅನುಭವ ಪಡೆದವರು. ಸುಂದರ ನಾಟ್ಯ ಮತ್ತು ಮತ್ತೆ ಮತ್ತೆ ಕೇಳಬೇಕೆನಿಸುವ ಅವರ ಮಾತುಗಾರಿಕೆ ಚೆಂದ ಪ್ರೇಕ್ಷಕರನ್ನು ತನ್ಮಯಗೊಳಿಸುತ್ತಿತ್ತು.

ಕಾಳಿಂಗ ನಾವಡ ನಾಗಶ್ರೀಯಲ್ಲಿ ಇವರ ಶುಭ್ರಾಂಗ ಪಾತ್ರ ಹೊಸದೊಂದು ಆಯಾಮವನ್ನೇ ಸೃಷ್ಟಿಸಿತ್ತು. ರಂಗಸ್ಥಳದಲ್ಲಿ ತಂಗಿಗಾಗಿ ವಾದ ಮಾಡುವ, ಬೇಡುವ, ಹತಾಸೆಯಿಂದ ಮರಳುವ ಹೀಗೆ ಅಲ್ಲಿನ ಅದ್ಬುತ ಭಾವಾಭಿವ್ಯಕ್ತಿಗಳು ಈಗಲೂ ಕೂಡಾ ನಾಗಶ್ರೀಯ ಅಂದಿನ ದೃಶ್ಯಮುದ್ರಿಕೆಯಲ್ಲಿ ಹಾಗೆಯೇ ಉಳಿದಿವೆ. ಅದು ಅವರ ಯೌವನದ ಕಾಲ, ಶುಬ್ರಾಂಗ ಸಾಲಿಗ್ರಾಮ ಮೇಳದಲ್ಲಿ ಮನೆಮಾತಾಗಿತ್ತು. ಶಿರಿಯಾರ ಮಂಜು ನಾಯ್ಕರ ನಂತರ ಆ ಪಾತ್ರಕ್ಕೆ ತಕ್ಕ ಚೈತನ್ಯ ನೀಡಿದ್ದುಸಾಮಗರು. ಅಂದರೆ ಪೌರಾಣಿಕದಷ್ಟೇ ಪರಿಪಕ್ವವಾಗಿ ಸಾಮಾಜಿಕ ಪ್ರಸಂಗಕ್ಕೂ ಸಮಾನ ನ್ಯಾಯ ನೀಡಿದ್ದರು.

ಎಲ್ಲ ರೀತಿಯ ಪಾತ್ರಗಳನ್ನು ನಿರ್ವಹಿಸಿದ ಅನುಭವಿ ಸಾಮಗರು ವಿಷಯವನ್ನು ಅದ್ಬುತವಾಗಿ ಪ್ರಸ್ತುತ ಪಡಿಸುವ ಚಾಕಚಕ್ಯತೆ ಹೊಂದಿದ್ದರು. ವಾಸ್ತವಕ್ಕೆ ವೈಚಾರಿಕ ನಿಲುವನ್ನು ಬಿಂಬಿಸುವ, ಪಾತ್ರದ ಅಂತರ್ಯವನ್ನು ಹೊಕ್ಕು, ಸತ್ವವನ್ನು ಹೊರ ಹೊಮ್ಮಿಸುವ ಇವರ ಅಧ್ಯಯನ ಅನುಪಮ. ಕೂಟಗಳಲ್ಲಿ ಇವರ ವಾಗ್ವಿಲಾಸ ಕೇಳುವುದೇ ಖುಷಿ. ಕೃಷ್ಣ, ಪರಶುರಾಮ, ಭೀಷ್ಮ, ರಾಮ, ಲಕ್ಷ್ಮಣ, ದಶರಥ, ಕರ್ಣ, ಶಲ್ಯ ಹೀಗೆ ಯಾವುದೇ ಪಾತ್ರವಾದರೂ ಅದನ್ನು ಸಮರ್ಥವಾಗಿ ನಿರ್ವಹಿಸಿ ಸೈ ಎನಿಸಿಕೊಳ್ಳುತ್ತಿದ್ದರು. ತಾಳಮದ್ದಲೆಯ ವಿಚಾರದಲ್ಲಿ ಅವರ ಶೃದ್ದೆ ಅದ್ಬುತವಾದುದು. ಆಟ-ಕೂಟಗಳಿಗೆ ಕರೆದಾಗ ಪ್ರೀತಿಯಿಂದ ಒಪ್ಪಿ ಸಮಯಕ್ಕೆ ಸರಿಯಾಗಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಡುತ್ತಿದ್ದರು. ಕೂಟದಲ್ಲಿ ಸಾಮಗರು ಇದ್ದರೆಂದರೆ ಅದಕ್ಕೊಂದು ಮೌಲ್ಯ ಮತ್ತು ಶಿಸ್ತು, ಸಮರ್ಥ ನಾಯಕತ್ವ ಇರುತ್ತಿತ್ತು.

ಮಲ್ಪೆ ವಾಸುದೇವ ಸಾಮಗರ ಅಕಾಲಿಕ ಅಗಲುವಿಕೆ ಯಕ್ಷಗಾನ ಕ್ಷೇತ್ರದಲ್ಲಿ ದೊಡ್ಡ ನಷ್ಟವಾಗಿದೆ. ಇನ್ನಷ್ಟು ವರ್ಷ ಅವರ ಅನುಭವದ ಅಗತ್ಯವಿತ್ತು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!