spot_img
Tuesday, March 17, 2026
spot_img

ಗಾಣಿಗ ಪ್ರತಿಷ್ಠಾನ ಬೈಂದೂರು ವತಿಯಿಂದ ಪ್ರತಿಭಾ ಪುರಸ್ಕಾರ, ಕೊಡೆ, ಕಲಿಕಾ ಸಾಮಾಗ್ರಿ ವಿತರಣೆ | ಶಿಕ್ಷಣಕ್ಕೆ ಪ್ರೋತ್ಸಾಹಿಸಿದವರನ್ನು ಮರೆಯಬೇಡಿ-ಸಂದೀಪ ಗಾಣಿಗ

ಬೈಂದೂರು, ಜೂ.7: ವಿದ್ಯಾರ್ಥಿವೇತನ, ಪ್ರತಿಭಾ ಪುರಸ್ಕಾರ ವಿದ್ಯಾರ್ಥಿಯ ಮುಂದಿನ ಶಿಕ್ಷಣ ಸಾಧನೆಗೆ ಉತ್ತೇಜನ ನೀಡುತ್ತದೆ. ವಿದ್ಯಾರ್ಥಿವೇತನ ಪಡೆದುಕೊಳ್ಳುವಾಗ ಆಗುವ ಖುಷಿಯೇ ವಿಶಿಷ್ಟವಾದುದು. ಮುಂದೆ ಈ ವಿದ್ಯಾರ್ಥಿಗಳು ಸಾಧನೆಯ ಪಥಕ್ಕೇರಿದ ಬಳಿಕ ಪ್ರೋತ್ಸಾಹಿಸಿದ ಸಂಸ್ಥೆಗಳನ್ನು ಮರೆಯಬಾರದು, ಸಮಾಜಕ್ಕೆ ಸ್ಪಂದಿಸುವ ಸಮಾಜಮುಖಿತ್ವ ಮೈಗೂಡಿಸಿಕೊಳ್ಳಬೇಕು ಎಂದು ಕುಂದಾಪುರ ಶ್ರೀ ವೆಂಕಟರಮಣ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಂದೀಪ್ ಗಾಣಿಗ ಹೇಳಿದರು.

ಗಾಣಿಗ ಪ್ರತಿಷ್ಠಾನ ರಿ., ಬೈಂದೂರು ವತಿಯಿಂದ ಬೈಂದೂರು ವತ್ತಿನಕಟ್ಟೆಯ ಮಹಾಸತಿ ಅಮ್ಮನವರ ದೇವಸ್ಥಾನದ ವಠಾರದಲ್ಲಿ ನಡೆದ ಎಸ್.ಎಸ್.ಎಲ್.ಸಿ., ಪಿಯುಸಿ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಉಚಿತ ನೋಟ್ ಪುಸ್ತಕ, ಕಲಿಕೋಪಕರಣ, ಕೊಡೆ ವಿತರಣೆ, ಸಮಾಜದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿವೇತನ ವಿದ್ಯಾರ್ಥಿಗಳಿಗೆ ನೀಡುವ ಪ್ರೋತ್ಸಾಹ. ಇಲ್ಲಿ ನೀಡುವ ಮೊತ್ತ ಮುಖ್ಯವಲ್ಲ. ಸಮಾಜದ ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸುವುದು ಮುಖ್ಯ. ನಾನು ಕೂಡಾ ತಾಲೂಕು ಗಾಣಿಗ ಸಂಘದಿಂದ ವಿದ್ಯಾರ್ಥಿವೇತನ ಪಡೆದುಕೊಂಡವನು. ಪರಿಶ್ರಮದಿಂದ ಈ ಹಂತಕ್ಕೆ ಬಂದಿದ್ದೇನೆ. ಸಮಾಜದಿಂದ ಪಡೆದಿರುವುದನ್ನು ಮರಳಿ ಸಮಾಜಕ್ಕೆ ನೀಡುವ ಕನಸಿದೆ. ಮುಂದಿನ ದಿನಗಳಲ್ಲಿ ನಾನು ಕೂಡಾ ನಿಮ್ಮೊಂದಿಗೆ ಸಹಕಾರ ನೀಡುತ್ತೇನೆ ಎಂದರು.

ಗಾಣಿಗ ಪ್ರತಿಷ್ಠಾನ ರಿ., ಬೈಂದೂರು ಇದರ ಅಧ್ಯಕ್ಷರಾದ ಕೆ.ರಮೇಶ ಗಾಣಿಗ ಕೊಲ್ಲೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಣದಲ್ಲಿ ಯಾರೂ ಕೂಡಾ ವಂಚಿತರಾಗಬಾರದು. ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿ, ಸಮಾಜದ ಸತ್ಪ್ರಜೆಗಳಾಗಿ ರೂಪಿಸಿ. ಮಕ್ಕಳಿಗೆ ಸಮಾಜಮುಖಿ ಚಿಂತನೆ, ಸಮಯಪ್ರಜ್ಞೆ, ಶಿಸ್ತು, ಶ್ರದ್ದೆಯನ್ನು ಕಲಿಸಿ ಅವರನ್ನು ಸಮಾಜದ ಆಧಾರಸ್ತಂಭಗಳಾಗಿ ಮಾಡಿ ಎಂದು ಹೇಳಿದ ಅವರು, ಹಲವಾರು ಯೋಜನೆಗಳು ನಮ್ಮ ಪ್ರತಿಷ್ಠಾನದ ಮುಂದೆ ಇದೆ. ಪ್ರಮುಖವಾಗಿ ಗಾಣಿಗ ಸಮಾಜ ಧಾರ್ಮಿಕತೆ ಬಗ್ಗೆಯೂ ಒತ್ತು ನೀಡಬೇಕು, ಬೈಂದೂರಿನ ಗೋಪಿನಾಥ ದೇವಸ್ಥಾನ ಅಭಿವೃದ್ಧಿ ಕಾರ್ಯಕ್ಕೆ ತಮ್ಮಲ್ಲರ ಸಹಕಾರ ಬೇಕು ಎಂದು ಹೇಳಿದರು.

ವಿದ್ಯಾರ್ಥಿ ವೇತನ ವಿತರಿಸಿದ ಬೈಂದೂರು ಪಟ್ಟಣ ಪಂಚಾಯತ್ ನಾಮ ನಿರ್ದೇಶಿತ ಸದಸ್ಯರಾದ ಬಿ.ಎಂ ನಾಗರಾಜ ಗಾಣಿಗ ಬಂಕೇಶ್ವರ ಮಾತನಾಡಿ, ಸಮಾಜದ ಶ್ರೇಯೋಭಿವೃದ್ಧಿಯಲ್ಲಿ ರಮೇಶ ಗಾಣಿಗರ ನೇತೃತ್ವದಲ್ಲಿ ಪ್ರತಿಷ್ಠಾನ ಹಲವಾರು ಕಾರ್ಯಕ್ರಮಗಳನ್ನು ಜೋಡಿಸಿಕೊಂಡು ಬರುತ್ತಿದೆ. ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದು, ಶಿಕ್ಷಣದಲ್ಲಿ ಇನ್ನಷ್ಟು ಸಾಧನೆಗಳು ನಡೆದು ಸಮಾಜ ಇನ್ನಷ್ಟು ಬಲಿಷ್ಠವಾಗಬೇಕು ಎಂದರು.

ಕುಂದಾಪುರ ತಾಲೂಕು ಗಾಣಿಗ ಸಂಘದ ಅಧ್ಯಕ್ಷರಾದ ಸತೀಶ ಗಾಣಿಗ ಕುಂದಾಪುರ ಕಲಿಕಾ ಸಾಮಾಗ್ರಿ ವಿತರಿಸಿ ಮಾತನಾಡಿ, ಶಿಕ್ಷಣದಿಂದ ಸಮಾಜ ಸಶಕ್ತವಾಗಿ ಬೆಳೆಯುತ್ತದೆ. ಹಿಂದೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನದ ಕೊರತೆ ಇತ್ತು. ಇವತ್ತು ಸಾಧನೆಗೆ ಸೂಕ್ತ ಮಾರ್ಗದರ್ಶನ ಸಿಗುತ್ತದೆ. ಕಲಿಕೆಯಲ್ಲಿ ಶ್ರದ್ದೆ, ಆಸಕ್ತಿ, ಛಲ, ಏಕಾಗ್ರತೆಯಿಂದ ಸಾಧನೆಯ ಪಥವನ್ನು ಏರಬಹುದು, ಸಾಧಕರ ಜೀವನ ನಮಗೆ ಆದರ್ಶವಾಗಬೇಕು ಎಂದು ಹೇಳಿದರು.

ಚಿಕ್ಕಯ್ಯ ಗಾಣಿಗ ಬಂಕೇಶ್ವರ ವಿದ್ಯಾರ್ಥಿಗಳಿಗೆ ಉಚಿತ ಕೊಡೆ ವಿತರಿಸಿದರು. ಯುಬಿ ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆ ಸಂಯೋಜಕಿ ಪ್ರೇಮ ಗಾಣಿಗ, ಪ್ರಗತಿಪರ ಕೃಷಿಕ ರಾಜು ಗಾಣಿಗ ಹುಳುವಾಡಿ, ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಶಾಖಾ ವ್ಯವಸ್ಥಾಪಕ ಸುದರ್ಶನ ಗಾಣಿಗ, ಆರೋಗ್ಯ ಇಲಾಖೆಯ ನಿವೃತ್ತ ಅಧಿಕಾರಿ ನಾಗಪ್ಪ ಗಾಣಿಗ ಶಿರೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯರಾದ ಆನಂದ ಗಾಣಿಗ ಉಪ್ಪುಂದ, ಉಪ್ಪುಂದ ಗ್ರಾ.ಪಂ.ಉಪಾಧ್ಯಕ್ಷೆ ಮಹಾಲಕ್ಷ್ಮೀ, ರಂಗಕರ್ಮಿ ಗಣೇಶ ಟೈಲರ್ ಅವರನ್ನು ಸನ್ಮಾನಿಸಲಾಯಿತು. ಕುಂದಾಪುರ ವೆಂಕಟರಮಣ ಪಿಯು ಕಾಲೇಜಿನ ಪ್ರಾಂಶುಪಾಲರಾದ ಸಂದೀಪ ಗಾಣಿಗ ಹರೇಗೋಡು ಇವರನ್ನು ಸನ್ಮಾನಿಸಲಾಯಿತು.

ಎಸ್.ಎಸ್.ಎಲ್.ಸಿಯಲ್ಲಿ ರಾಜ್ಯಕ್ಕೆ ದ್ವಿತೀಯ ರ್‍ಯಾಂಕ್ ಪಡೆದ ಸುಶ್ಮೀತಾ ಎಸ್ ಗಾಣಿಗ ಗಂಗೊಳ್ಳಿ, ಪಿಯುಸಿಯಲ್ಲಿ ೮ನೇ ರ್‍ಯಾಂಕ್ ಪಡೆದ ಸಂಜನಾ ಗಾಣಿಗ ತಗ್ಗರ್ಸೆ ಇವರನ್ನು ಸನ್ಮಾನಿಸಲಾಯಿತು.

ಎಸ್.ಎಸ್.ಎಲ್.ಸಿಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿಲಾಸ ವೇಣುಗೋಪಾಲ, ಭವ್ಯ ನಾಗರತ್ನ ಗಾಣಿಗ, ಅಣ್ಣಪ್ಪ ಮಂಜುನಾಥ ಗಾಣಿಗ ಹಳಗೇರಿ, ಸಿದ್ಧಿವಿನಾಯಕ ಯಡೇರಿ, ಶರಣ್ಯ ಬೈಂದೂರು, ರೂಪಿಕಾ ಆರ್ ಉಪ್ಪುಂದ, ಭಾವನಾ ವೀರೇಂದ್ರ ಗಾಣಿಗ ಆಜ್ರಿ, ಸುಶೇಂದ್ರ ಎಸ್.ಬೈಂದೂರು, ಅಂಜಲಿ ವೀರಭದ್ರ ಗಾಣಿಗ ತಗ್ಗರ್ಸೆ, ಆಶ್ಲೇಷ ಶೆಟ್ಟಿ ಶಿರೂರು, ಆದಿತ್ಯ ಎಸ್.ಗಾಣಿಗ ಉಪ್ಪುಂದ ಇವರುಗಳಿಗೆ ಪ್ರತಿಭಾಪುರಸ್ಕಾರ ನೀಡಲಾಯಿತು.

ದ್ವಿತೀಯ ಪಿಯುಸಿಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸಿದ ರನ್ವಿತಾ ಶಿರೂರು, ಸಂಜನಾ ತಗ್ಗರ್ಸೆ, ನವ್ಯ ತಗ್ಗರ್ಸೆ, ಅಮೂಲ್ಯ ಅಲಂದೂರು ಶಿರೂರು, ವಿಭಾ ಶಿರೂರು, ಅನನ್ಯ ಹೇರಂಜಾಲು, ಅನಘ ಉಪ್ಪುಂದ,  ಸ್ಪೂರ್ತಿ ಶಿರೂರು, ಅರ್ಜುನ್ ಹೆಮ್ಮಾಡಿ, ಆಯುಷ್ ಆಲೂರು, ಸಂಜನಾ ಗಾಣಿಗ ನೂಜಾಡಿ ಇವರುಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.

ಸುಮನಾ ಪಡುಕೋಣೆ, ಸ್ವಾತಿ, ಗಂಗಮ್ಮ ಸನ್ಮಾನಿತರ ಪರಿಚಯಿಸಿದರು. ಸತ್ಯನಾರಾಯಣ ಗಾಣಿಗ ನಾವುಂದ ಪ್ರಾರ್ಥನೆ ಮಾಡಿದರು. ಗಾಣಿಗ ಪ್ರತಿಷ್ಠಾನ ರಿ., ಬೈಂದೂರು ಇದರ ಸಂಘಟನಾ ಕಾರ್ಯದರ್ಶಿ, ಪ್ರತಿಭಾ ಪುರಸ್ಕಾರ ಸಮಿತಿಯ ಪ್ರಮುಖರಾದ ಶಿವಾನಂದ ಗಾಣಿಗ ಸ್ವಾಗತಿಸಿದರು. ನಾಗೇಂದ್ರ ಗಾಣಿಗ ವಂದಿಸಿದರು.

 

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!