spot_img
Wednesday, March 25, 2026
spot_img

ಅಂಬೇಡ್ಕರ್ ಸಾಮಾಜಿಕ ನ್ಯಾಯದಿಂದ ವಂಚಿತರಾದವರೆಲ್ಲರ ನಾಯಕರಾಗಿದ್ದರು : ಸಿಎಂ ಸಿದ್ದರಾಮಯ್ಯ

ಜನಪ್ರತಿನಿಧಿ (ಬೆಂಗಳೂರು) : ಸಂವಿಧಾನದ ರಕ್ಷಣೆಯಾದರೆ ನಮ್ಮ ಹಕ್ಕುಗಳೂ ರಕ್ಷಣೆಯಾಗುತ್ತವೆ. ಸಂವಿಧಾನ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಸಂವಿಧಾನಕ್ಕೆ ಯಾವುದೇ ಧಕ್ಕೆಯಾಗದಂತೆ ನೋಡಿಕೊಳ್ಳವುದು ನಮ್ಮೆಲ್ಲರ ಕರ್ತವ್ಯ. ನಮ್ಮ ದೇಶ, ನಮ್ಮ ಸಮಾಜಕ್ಕೆ ಅವಶ್ಯವಾಗಿದ್ದಂತಹ ಅತ್ಯುತ್ತಮ ಸಂವಿಧಾನವನ್ನು ನೀಡಿದವರು ಬಾಬಾ ಸಾಹೇಬ್ ಅಂಬೇಡ್ಕರರು. ಈ ದೇಶದ ಸಾಮಾಜಿಕ ಪರಿಸ್ಥಿತಿ, ಜಾತಿ ವ್ಯವಸ್ಥೆ ಅಂಬೇಡ್ಕರ್ ಅವರಿಗೆ ಅರ್ಥ ಆದಷ್ಟು ಬೇರೆಯವರಿಗೆ ಆಗಿರಲಿಲ್ಲವೆಂದರೆ ಅದು ಅತಿಶಯೋಕ್ತಿಯಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಯಲಹಂಕದಲ್ಲಿ 14 ಅಡಿಗಳ ಬಾಬಾ ಸಾಹೇಬ್ ಅಂಬೇಡ್ಕರ್ ಕಂಚಿನ ಪ್ರತಿಮೆಯ ಲೋಕಾರ್ಪಣೆ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಜಾತಿ ವ್ಯವಸ್ಥೆ ಇದ್ದಷ್ಟೂ ಕಾಲ ಮೀಸಲಾತಿ ಇರಲೇಬೇಕು ಎಂಬುದನ್ನು ಅವರು ಬಲವಾಗಿ ನಂಬಿದ್ದರು. ನಮ್ಮ ದೇಶದ ಜಾತಿ ವ್ಯವಸ್ಥೆಗೆ ಚಲನೆ ಇಲ್ಲ. ಆದರೆ ವರ್ಗಕ್ಕೆ ಚಲನೆಯಿದೆ. ನಮ್ಮ ಸಮಾಜದಲ್ಲಿ ಶ್ರೀಮಂತ ಬಡವನಾದರೂ, ಬಡವ ಶ್ರೀಮಂತನಾದರೂ  ಕಡೆಯವರೆಗೂ ಉಳಿದು ಕೊಳ್ಳುವುದು ಹುಟ್ಟಿದ  ಜಾತಿಯಲ್ಲಿ ಮಾತ್ರ. ಆದ್ದರಿಂದ ಈ ಜಾತಿ ವ್ಯವಸ್ಥೆ ನಿಂತ ನೀರಿನಂತಿದೆ. ಇದನ್ನು ಮನಗಂಡಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸ್ವಾತಂತ್ರ್ಯ ಯಶಸ್ಸನ್ನು ಕಾಣಬೇಕಾದರೆ ಈ ದೇಶದ ಅವಕಾಶ ವಂಚಿತರು, ಶೋಷಿತರು, ದೌರ್ಜನ್ಯಕ್ಕೆ ಒಳಗಾದವರಿಗೆಲ್ಲರಿಗೂ ಸಮಾನ ಅವಕಾಶಗಳು ದೊರೆತು ಅವರೆಲ್ಲರೂ ಸಾಮಾಜಿಕವಾಗಿ, ಆರ್ಥಿಕವಾಗಿ ಸಬಲರಾಗಬೇಕು ಎಂದಿದ್ದರು ಎಂದು ಅವರು ಹೇಳಿದರು.

ಸ್ವಾತಂತ್ರ್ಯಾನಂತರ ಒಬ್ಬ ವ್ಯಕ್ತಿ , ಒಂದು ಮತ ಜಾರಿಗೆ ಬಂದಿದೆ. ಇದು ಈ ದೇಶದ ರಾಷ್ಟ್ರಪತಿಗಳಿಗೂ ಒಂದೇ ಮತ, ಒಬ್ಬ ಪೌರಕಾರ್ಮಿಕನಿಗೂ ಒಂದೇ ಮತ. ಬಸವಣ್ಣನವರು ಹೇಳಿದ್ದು ಇದನ್ನೇ. ಅಂಬೇಡ್ಕರ್ ಅವರು ಕೂಡಾ ಬಸವಣ್ಣನವರ ವಚನಗಳನ್ನು ಓದಿದ್ದರು ಎಂಬುದು ಅವರ ಬರಹಗಳಿಂದ ತಿಳಿದು ಬರುತ್ತದೆ. ಸಮಾಜದಲ್ಲಿ ಯಾವ ಕೆಲಸವೂ ಮೇಲೂ ಅಲ್ಲ, ಕೀಳೂ ಅಲ್ಲ. ಎಲ್ಲವೂ ಸಮಾನ ಎಂದೇ ಪ್ರತಿಪಾದಿಸಿದರು. ನಮಗೆ ರಾಜಕೀಯ ಸ್ವಾತಂತ್ರ್ಯ ಸಿಕ್ಕಿದೆ ಆದರೆ ಸಾಮಾಜಿಕ ಆರ್ಥಿಕ ಸಿಕ್ಕಿಲ್ಲ. ಎಲ್ಲಿವರೆಗೂ ಇದು ಸಿಗುವುದಿಲ್ಲ ಅಲ್ಲಿಯವರೆಗೆ ಸಮಾಜದಲ್ಲಿ ಸಮಾನತೆ ಕಾಣಲು ಸಾಧ್ಯವಿಲ್ಲ. ನಮ್ಮ ಸರ್ಕಾರವು ಇದನ್ನೇ ನಂಬಿದ್ದು,   ನಾವು ರೂಪಿಸುತ್ತಿರುವ ಕಾರ್ಯಕ್ರಮಳೂ ಇದೇ  ಹಿನ್ನೆಲೆಯಿಂದ ಮೂಡಿಬಂದಿವೆ ಎಂದು ಹೇಳಿದರು.

ಜನರನ್ನು ಹಿಂದಕ್ಕೆ ಮಾತ್ರ ತಳ್ಳಬೇಡಿ. ಮುಂದಕ್ಕೆ ಎಳೆಯಲು ಪ್ರಯತ್ನ ಮಾಡಬೇಕು. ಮುಂದಕ್ಕೆ ಎಳೆಯಲು ಸಾಧ್ಯವಾಗದಿದ್ದರೆ ಅಲ್ಲೇ ಬಿಡಿ. ಆದರೆ ಹಿಂದಕ್ಕೆ ಮಾತ್ರ ತಳ್ಳಬೇಡಿ ಎಂದು ಅಂಬೇಡ್ಕರ್ ಹೇಳಿದ್ದರು. ಅವರು ಓದಿಕೊಂಡಿರುವುದು ಸ್ವಾರ್ಥಕ್ಕಾಗಿ ಅಲ್ಲ, ಅಸಮಾನತೆಯನ್ನು ಹೋಗಲಾಡಿಸಲು ಎಂದು ತಿಳಿಸಿದ್ದರು. ನಾವು ಸಾಧ್ಯವಾದಷ್ಟರ ಮಟ್ಟಿಗೆ ಅವರ ತತ್ವಗಳನ್ನು ಅಳವಡಿಸಿಕೊಳ್ಳಬೇಕು.

ನಮ್ಮ ಸರ್ಕಾರ ಆರ್ಥಿಕವಾಗಿ, ಸಾಮಾಜಿಕವಾಗಿ ಜನರಲ್ಲಿ ಶಕ್ತಿ ತುಂಬಲು ಪಂಚ ಗ್ಯಾರಂಟಿಗಳನ್ನು ಜಾರಿ ಮಾಡಿದೆ. ಆರ್ಥಿಕವಾಗಿ ಶಕ್ತಿ ತುಂಬದಿದ್ದರೆ ಅಸಮಾನತೆ ಹೋಗಲಾಡಿಸಲು ಸಾಧ್ಯವಿಲ್ಲ. ಎಲ್ಲರನ್ನೂ ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಬೇಕು. ಒಂದೇ ಬಾರಿಗೆ ಎಲ್ಲರನ್ನೂ ಮುಖ್ಯವಾಹಿನಿಗೆ ತರಲು ಸಾಧ್ಯವಾಗದಿದ್ದರೂ ಕ್ರಮೇಣವಾಗಿ ಮಾಡಲು ಪ್ರಯತ್ನ ಮಾಡಬೇಕು.

ನಮ್ಮ ಹೋರಾಟ ನಿರಂತರವಾಗಿರಬೇಕು. ಅದಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ಶಿಕ್ಷಣ, ಸಂಘಟನೆ ಹಾಗೂ ಹೋರಾಟ ಎಂಬ ಮೂರು ಮಂತ್ರಗಳನ್ನು ಬಿಟ್ಟು ಹೋಗಿದ್ದಾರೆ. ಅಕ್ಷರ ಸಂಸ್ಕೃತಿಯಿಂದ ವಂಚಿತರಾದವರು ಶಿಕ್ಷಣವನ್ನು ಪಡೆದುಕೊಳ್ಳಲೇಬೇಕು. ಆಗ ಮಾತ್ರ ಸ್ವಾಭಿಮಾನ, ಜ್ಞಾನ ಬರಲು, ಸಂಘಟಿತರಾಗಲು ಸಾಧ್ಯವಾಗುತ್ತದೆ. ಅಂಬೇಡ್ಕರ್ ಅವರು ಅಂದಿನ ಕಾಲದಲ್ಲಿಯೇ ಎಷ್ಟೇ ಕಷ್ಟವಾದರೂ, ಮಾನಸಿಕ ತೊಂದರೆಯಾದರೂ ಶಿಕ್ಷಣವನ್ನು ಬಿಡಲಿಲ್ಲ. ಅಂಬೇಡ್ಕರ್ ಅವರೊಬ್ಬ ದೂರದೃಷ್ಟಿಯಿದ್ದ ನಾಯಕರು. ಅಂಥವರಿಗೆ ಮಾತ್ರ ನೂರು ವರ್ಷಗಳಲ್ಲಿ ಸಮಾಜದಲ್ಲಿ ಏನಾಗಬಹುದು ಎಂದು ಊಹಿಸಲು ಸಾಧ್ಯವಾಗುತ್ತದೆ.

ವಿಶ್ವನಾಥ್ ಅವರು ಯಲಹಂಕದಲ್ಲಿ ಪಕ್ಷಾತೀತವಾಗಿ ಕೆಲಸ ಮಾಡುವುದಾಗಿ ಹೇಳಿರುವುದನ್ನು ನಾನು ಸ್ವಾಗತಿಸುತ್ತೇನೆ. ಯಲಹಂಕದಲ್ಲಿ ದಲಿತರು ಹಿಂದುಳಿದವರೇ ಹೆಚ್ಚಿದ್ದು, ಎಲ್ಲರಿಗೂ ನ್ಯಾಯ ದೊರಕಿಸುವ ಕೆಲಸವನ್ನು ವಿಶ್ವನಾಥ್ ಮಾಡುತ್ತಿದ್ದಾರೆ. ವಿಶ್ವನಾಥ್ ಅವರ ಕ್ಷೇತ್ರಕ್ಕೆ ಅನುದಾನದ ಬೇಡಿಕೆಯನ್ನು ಪರಿಗಣಿಸಲಾಗುವುದು.

ಸಮಗ್ರ ಸಾಮಾಜಿಕ ವ್ಯವಸ್ಥೆ ಬದಲಾಗಬೇಕು. ಅಂಬೇಡ್ಕರ್ ದಲಿತರಾಗಿ ಹುಟ್ಟಿದರೂ ಸಾಮಾಜಿಕ ನ್ಯಾಯದಿಂದ ವಂಚಿತರಾದವರೆಲ್ಲರ ನಾಯಕರಾಗಿದ್ದರು. ಈ ದೇಶದಲ್ಲಿ ಅವರು ಹುಟ್ಟಿರವುದೇ ಹೆಮ್ಮೆಯ ಸಂಗತಿ. ಅಂಬೇಡ್ಕರ್ ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ, ಪ್ರತಿಮೆಗಳು ಸಂಕೇತಗಳಾದರೂ, ಇವುಗಳಿಂದ  ಅಂಬೇಡ್ಕರ್ ಅವರ ವಿಚಾರಗಳು ಇನ್ನಷ್ಟು ಪಸರಿಸಲಿ ಎಂದು ಹೇಳಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!