spot_img
Friday, January 30, 2026
spot_img

Film review : ಭಿನ್ನ ಪ್ರಯೋಗದಲ್ಲಿ ಜಸ್ಟ್‌ ಪಾಸ್‌ ಆದ ʼವೀರ ಚಂದ್ರಹಾಸʼ | ಸಿನೆಮಾದ ಪ್ಲಸ್‌ & ಮೈನಸ್‌ ಏನು ?

ಬೆಳ್ಳಿ ತೆರೆಗೆ ಯಕ್ಷಗಾನ ಪ್ರಸಂಗ | ಹೇಗಿದೆ ಗೊತ್ತಾ ʼವೀರ ಚಂದ್ರಹಾಸʼ ?

ಸಂಗೀತ ನಿರ್ದೇಶಕ ರವಿ ಬಸ್ರೂರು ನಿರ್ದೇಶನದ ವೀರ ಚಂದ್ರಹಾಸ ಇಂದು ರಾಜ್ಯದಾದ್ಯಂತ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಕರಾವಳಿ ಕರ್ನಾಟಕದವರನ್ನು ಹೊರತು ಪಡಿಸಿದರೇ, ಉಳಿದ ಕಡೆಗಳ ಪ್ರೇಕ್ಷಕರಿಗೆ ಇದು ಹೊಸತನ ಎಂದು ಕಾಣಿಸಬಹುದು. ಕರಾವಳಿಗರೂ ಹೊಸತನದ ನಿರೀಕ್ಷೆಯಲ್ಲಿದ್ದರು. ಆದರೇ, ಕರಾವಳಿಗರ ನಿರೀಕ್ಷೆ ಅಷ್ಟಾಗಿ ಮುಟ್ಟಿಲ್ಲ ಎಂದೇ ಕಾಣಿಸುತ್ತದೆ. ʼವೀರ ಚಂದ್ರಹಾಸʼ ಸೆಟ್ಟೇರುತ್ತಿದೆ ಎಂಬ ಸುದ್ದಿ ಹೊರಗೆ ಬಂದಾಗ, ಯಕ್ಷಗಾನ ವಲಯದ ಒಂದು ವರ್ಗದಿಂದ ವಿರೋಧ ಕೇಳಿಬಂದಿತ್ತು, ಜೊತೆಗೆ ಯಕ್ಷಗಾನವನ್ನು ತೆರೆ ಮೇಲೆ ಇದೇ ಮೊದಲ ಬಾರಿಗೆ ತೋರಿಸುತ್ತಿರುವುದರಿಂದ ಇನ್ನೊಂದು ವರ್ಗದದವರಲ್ಲಿ ಹೊಸ ನಿರೀಕ್ಷೆಯೂ ಹುಟ್ಟಿತ್ತು. ಆದರೇ, ಈಗ ವಿರೋಧಿಸಿದ ವರ್ಗಕ್ಕೆ ಈ ಯಕ್ಷ ಸಿನೆಮಾ ಸುಲಭವಾಗಿ ಸಿಕ್ಕ ಗ್ರಾಸವಾಗಿದೆ, ದೊಡ್ಡ ನಿರೀಕ್ಷೆ ಇರಿಸಿಕೊಂಡಿದ್ದ ವರ್ಗಕ್ಕೆ ಸಣ್ಣ ನಿರಾಸೆ ಮೂಡಿಸಿ, ಸಣ್ಣ ಅಸಮಾಧಾನವನ್ನೂ ತರಿಸಿದೆ.

ʼವೀರ ಚಂದ್ರಹಾಸʼ ಹೇಗಿದೆ ?  

ಅನಾಥನಾದ ಬಾಲಕನೊಬ್ಬ ತನಗಿರುವ ಯೋಗಾನುಯೋಗದಿಂದ ಮುಂದೆ ಚಂದ್ರಹಾಸನಾಗಿ ಭವಿಷ್ಯದಲ್ಲಿ ರಾಜನಾಗುತ್ತಾನೆ ಎಂಬ ವಿಚಾರ ಮಂತ್ರಿ ದುಷ್ಟಬುದ್ಧಿಗೆ ತಿಳಿಯುತ್ತದೆ. ಕುಂತಲ ಸಾಮ್ರಾಜ್ಯದ ಯುವರಾಣಿಯನ್ನು ವರಿಸಿ, ಬಳಿಕ ಆ ಸಾಮ್ರಾಜ್ಯಕ್ಕೆ ಚಂದ್ರಹಾಸ ರಾಜನಾಗುತ್ತಾನೆ ಎಂಬ ಬ್ರಾಹ್ಮಣೋತ್ತಮನ ಭವಿಷ್ಯವಾಣಿಯನ್ನು ಕೇಳಿ ಕ್ರೋಧಗೊಳ್ಳುವ ಮಂತ್ರಿ ದುಷ್ಟಬುದ್ಧಿ, ಕಟುಕರಿಗೆ ಚಂದ್ರಹಾಸನನ್ನು ಕೊಲ್ಲಲು ಹೇಳುತ್ತಾನೆ. ಆ ಕಟುಕರಿಗೂ ಆ ಪುಟ್ಟ ಬಾಲಕನ ಮೇಲೆ ಕರುಣೆ ಬಂದು, ಸಾಯಿಸದೇ ಕಾಡಿನಲ್ಲಿ ಬಿಟ್ಟುಬರುತ್ತಾರೆ. ಮುಂದೆ ಕುಳಿಂದ ಎಂಬ ಕಾಡಿನ ಅರಸನಿಗೆ ಸಿಕ್ಕಿ ಆ ರಾಜಕುಟುಂಬದಲ್ಲಿ ಬೆಳೆದು, ಅಲ್ಲಿನ ಯುವರಾಜನಾಗುತ್ತಾನೆ, ಮುಂದೆ 20 ವರ್ಷಗಳ ಬಳಿಕ ಮತ್ತೆ ದುಷ್ಟಬುದ್ಧಿಗೆ ಎದುರಾಗುತ್ತಾನೆ. ಇದು ದುಷ್ಟಬುದ್ಧಿಗೆ ಮತ್ತೆ ತಳಮಳ ಉಂಟು ಮಾಡುತ್ತದೆ. ತನ್ನ ಲೆಕ್ಕಾಚಾರಗಳೆಲ್ಲಾ ತಲೆಕೆಳಗಾಗಿದ್ದನ್ನು ಅರಿಯುತ್ತಾನೆ. ದುಷ್ಟಬುದ್ಧಿ ಮುಂದೇನು ಕುತಂತ್ರ ಹೆಣೆಯುತ್ತಾನೆ ? ಮುಂದೆ ಆತನ ಭವಿಷ್ಯದಲ್ಲಿ ಏನೆಲ್ಲಾ ಎದುರಾಗುತ್ತವೆ ಎನ್ನುವ ಮೂಲ ಯಕ್ಷಗಾನ ಪ್ರಸಂಗದ ಕಥೆಯನ್ನೇ ತೆಗೆದುಕೊಂಡು ಜೈಮಿನಿ ಭಾರತದಲ್ಲಿ ಇರುವಂತೆ ಚಂದ್ರಹಾಸನ ಹಿನ್ನೆಲೆ, ಮತ್ತೆ ಮುಂದೆ ಎದುರಾಗುವ ರಾಜ ವೈಷಮ್ಯ ಎಲ್ಲವನ್ನು ಇಲ್ಲಿ ಸ್ವಲ್ಪ ಸೇರಿಸಿಕೊಳ್ಳಲಾಗಿದೆ.

ಯಕ್ಷಗಾನಕ್ಕೆ ಚೂರು ಧಕ್ಕೆ ಆಗದೆ ಇರುವಂತೆ ತೆರೆ ಮೇಲೆ ಸಿನೆಮಾದಲ್ಲಿ ತೋರಿಸಲಾಗಿದೆ ಎಂದು ನಿರ್ದೇಶಕ ರವಿ ಬಸ್ರೂರು ಅವರು ಸಿನೆಮಾ ಪ್ರಚಾರಗಳಲ್ಲಿ ಹೇಳಿದ್ದರು. ಈ ಯಕ್ಷ ಸಿನೆಮಾದಲ್ಲಿ ಇರುವ ಫೈಟಿಂಗ್ಸ್‌ ಗಳನ್ನು ನಿರ್ದೇಶಕರು ಹೇಗೆ ಬೇಕಾದರೂ ಸಮಜಾಯಿಸಿ ತೆಗೆದುಕೊಳ್ಳಬಹುದು. ಆದರೇ, ಈ ಯಕ್ಷ ಸಿನೆಮಾದಲ್ಲಿ ಫೈಟಿಂಗ್ಸ್‌ ಸೀಕ್ವೆನ್ಸ್ (ಸ್ಟಂಟ್ಸ್‌)‌ ಶೂಟಿಂಗ್‌ ಮಾಡುವ ಮುನ್ನಾ ʼಹೀಗೆ ಮಾಡಿದರೇ, ಇದು ಯಕ್ಷಗಾನಕ್ಕೆ ಧಕ್ಕೆ ತಂದ ಹಾಗೆ ಆಗುತ್ತದೆಯೇ ?ʼ ಎಂಬ ಸಣ್ಣ ಪ್ರಶ್ನೆ ಅವರಲ್ಲಿ ಮೂಡದೇ ಹೋಗಿರುವುದು ನಿಜಕ್ಕೂ ವಿಷಾದನೀಯ. ಬಹುಶಃ ಆ ಸಣ್ಣ ಪ್ರಶ್ನೆ ಅವರಲ್ಲಿ ಮೂಡಿದ್ದಿದ್ದರೆ, ಯಕ್ಷಗಾನದ ವೃತ್ತಿಪರ ಕಲಾವಿದರೇ ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರಿಂದ ಈ ಸಿನೆಮಾದಲ್ಲಿ ಯಕ್ಷಗಾನದ ಯುದ್ಧ ಕುಣಿತ, ಪ್ರಯಾಣ ಕುಣಿತ ಯಾವುದಾದರೂ ಒಂದನ್ನು ಸ್ವಲ್ಪ ಆದರೂ ತೆರೆ ಮೇಲೆ ತರುವ ಪ್ರಯತ್ನ ಮಾಡಬಹುದಿತ್ತು. ಆದರೇ, ಒಂದೇ ಒಂದು ಯಕ್ಷಗಾನದ ಸಣ್ಣ ಕುಣಿತವನ್ನೂ ಪೂರ್ಣವಾಗಿ ಇಲ್ಲಿ ಬಳಸಿಕೊಳ್ಳದೇ ಇರುವುದರಿಂದ ಯಕ್ಷಗಾನದ ಸಮಷ್ಠಿ ಸೌಂದರ್ಯವನ್ನು ಕಡಿಮೆಗೊಳಿಸಿದಂತೆಯೇ ಆಯಿತು ಹೊರತು, ಜಗತ್ತಿಗೆ ಮೂಲ ಯಕ್ಷಗಾನವನ್ನು ತೋರಿಸಿದಂತೆ ಖಂಡಿತ ಆಗಲಿಲ್ಲ. ಯಕ್ಷಗಾನದ ವೇಷಭೂಷಣಗಳನ್ನು ತೋರಿಸಿದಂತಾಯ್ತು ಅಷ್ಟೆ. ಯಕ್ಷಗಾನದಲ್ಲಿ ತಮ್ಮನ್ನು ತಾವು ದುಡಿಸಿಕೊಂಡಿರುವ ಹೆಸರಾಂತ ಕಲಾವಿದರೂ ಈ ಸಿನೆಮಾದ ಭಾಗವಾಗಿದ್ದರು, ಅವರೂ ಕೂಡ ಈ ಬಗ್ಗೆ ನಿರ್ದೇಶಕರಿಗೆ ಮನದಟ್ಟು ಮಾಡಬಹುದಿತ್ತು. ಅದ್ಯಾವುದೂ ಇಲ್ಲಿ ಆದಂತೆ ಕಾಣಿಸುತ್ತಿಲ್ಲ.

ಬಹುಶಃ ರವಿ ಬಸ್ರೂರು ಅವರು ಸಿನೆಮಾ ಪ್ರಚಾರಗಳಲ್ಲಿ ʼಇದೊಂದು ಪುರಾಣ ಕಥೆ, ಅದನ್ನು ಸಿನೆಮಾ ಆಗಿಸಿದ್ದೇವೆ. ಯಕ್ಷಗಾನ ಪದ್ಯಗಳನ್ನು, ಯಕ್ಷಗಾನ ವೇಷಭೂಷಣಗಳನ್ನು, ಯಕ್ಷಗಾನದ ಹಿಮ್ಮೇಳವನ್ನು ಇಲ್ಲಿ ಬಳಸಿಕೊಂಡಿದ್ದೇವೆʼ ಎಂದೇ ಹೇಳಬಹುದಿತ್ತು. ʼಯಕ್ಷಗಾನವನ್ನು ವಿಶ್ವಗಾನವನ್ನಾಗಿʼ ಮಾಡುವ ಪ್ರಯತ್ನ ಎಂದು ಅವರು ಹೋದಲ್ಲೆಲ್ಲಾ ಹೇಳಿದ್ದು ತಪ್ಪಾಯ್ತು ಎಂದು ಈಗ ಅನ್ನಿಸುತ್ತಿದೆ. ಈ ಪ್ರಸಂಗಕ್ಕೆ ತೆರೆ ಮೇಲೆ ದೃಶ್ಯೀಕರಣ ಹೆಣೆದಿದ್ದು ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಆದರೇ, ಯಕ್ಷಗಾನಕ್ಕೆ ಚೂರು ಧಕ್ಕೆ ಬಾರದಿರುವಂತೆ ಸಿನೆಮಾ ಮಾಡಿದ್ದೇವೆ ಎಂಬ ನಿರ್ದೇಶಕರು ಮತ್ತು ಅವರ ತಂಡದ ಸಮರ್ಥನೆಯನ್ನು ಸುತಾರಾಂ ಒಪ್ಪುವುದಕ್ಕೆ ಖಂಡಿತ ಸಾಧ್ಯವಿಲ್ಲ.

ಸಂಸ್ಥಾನಗಳು ಹಾಗೂ ರಾಜಮನೆತನಗಳ ಇತಿಹಾಸವನ್ನು ಸಿಜಿ (ಕಂಪ್ಯೂಟರ್‌ ಗ್ರಾಫಿಕ್ಸ್‌) ಮೂಲಕ ಚೆನ್ನಾಗಿ ತೋರಿಸಲಾಗಿದೆ. ಅರಮನೆಗಳನ್ನು ಎಐ ಮತ್ತು ಗ್ರಾಫಿಕ್ಸ್‌ ಗಳ ಮೂಲಕವೇ ಹೆಚ್ಚಾಗಿ ತೋರಿಸಲಾಗಿದೆ. ಅವು ಅಷ್ಟೇನೂ ಆಕರ್ಷಣೀಯ ಎಂಬಂತ್ತಿಲ್ಲ. ಕರಾವಳಿ ಭಾಗದವರಿಗೆ ಈ ಯಕ್ಷಗಾನ ಪ್ರಸಂಗ ಹೊಸದೇನಲ್ಲ. ಸಿನೆಮಾದಲ್ಲಿ ಬಳಸಿಕೊಳ್ಳಲಾದ ಹಾಸ್ಯ ಸನ್ನಿವೇಶಗಳೂ ಕೂಡ ಯಕ್ಷಗಾನದಲ್ಲಿ ದಿನನಿತ್ಯ ಎಂಬಂತೆ ಬಳಸಿಕೊಂಡವೇ ಆಗಿರುವುದರಿಂದ ಯಕ್ಷಗಾನ ಪ್ರೇಕ್ಷಕರಿಗೆ ಇದು ತೀರಾ ಸಾಮಾನ್ಯ. ಉಳಿದ ಪಾತ್ರಗಳಿಗೆ ಕೆಲವು ಸನ್ನಿವೇಶಗಳಲ್ಲಿ ಬಳಸಿಕೊಂಡ ಸಂಭಾಷಣೆಗಳು ಮೆಚ್ಚುವಂತವು. ಇನ್ನು ಯಕ್ಷಗಾನದ ಹಿಮ್ಮೇಳ ವಾದ್ಯಗಳೊಂದಿಗೆ ರವಿ ಬಸ್ರೂರು ಕೈಚಳಕವನ್ನು ಶರಣಾಗಿ ಒಪ್ಪಬೇಕು. ಇಡೀ ಥಿಯೇಟರ್‌ ವೈಬ್ರೇಟ್‌ ಮಾಡುವ ರವಿ ಅವರ ಹಿನ್ನೆಲೆ ಸಂಗೀತಕ್ಕೆ ಮನಸೋಲದೆ ಯಾರೂ ಹೊರಗೆ ಬರಲಾರರು.

ಯಕ್ಷಗಾನದ ಪ್ರೇಕ್ಷಕರಿಗೆ ಈ ಸಿನೆಮಾ ಬಹಳ ದೊಡ್ಡ ಪ್ರಯೋಗ ಅಂತೇನು ಅನ್ನಿಸದೇ ಇರಬಹುದು. ಯಕ್ಷಗಾನದ ಬಗ್ಗೆ ಏನೂ ಗೊತ್ತಿಲ್ಲದೇ ಇರುವವರಿಗೆ ವಿಭಿನ್ನ ಅನ್ನಿಸಬಹುದು, ಅಸಮಾಧಾನವನ್ನೂ ಹುಟ್ಟಿಸಬಹುದು.

ಯಕ್ಷಗಾನ ಕಲಾವಿದರ ಹೆಚ್ಚುಗಾರಿಕೆ :

ಈ ಸಿನೆಮಾದಲ್ಲಿ ಇರುವ ಎಪ್ಪತ್ತು ಯಕ್ಷ ಪದ್ಯಗಳನ್ನು ಬರೆದಿರುವ ಪ್ರಸಂಗಕರ್ತ, ಯಕ್ಷಕವಿ ಪ್ರಸಾದ್‌ ಮೊಗೆಬೆಟ್ಟು ಅವರ ಸಾಹಿತ್ಯಕ್ಕೆ ಮೆಚ್ಚಲೇ ಬೇಕು. ಭಾಗವತರಾದ ಜನ್ಸಾಲೆ ರಾಘವೇಂದ್ರ ಆಚಾರ್ಯ, ಸತೀಶ್‌ ಶೆಟ್ಟಿ ಪಟ್ಲ, ಗಣೇಶ್‌ ಆಚಾರ್ಯ ಬಿಲ್ಲಾಡಿ, ಚಿನ್ಮಯ್‌ ಭಟ್‌ ಕಲ್ಲಡ್ಕ ಅವರ ಸುಸ್ವರದ ಭಾಗವತಿಕೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ. ಚಂಡೆ, ಮದ್ದಲೆಯಲ್ಲಿ ಶ್ರಮಿಸಿದ ಹಿಮ್ಮೆಳ ಕಲಾವಿದರೂ ಶ್ಲಾಘನೀಯ. ಚಂದ್ರಹಾಸನ ಪಾತ್ರ ನಿರ್ವಹಿಸಿದ ಶಿಥಿಲ್‌ ಶೆಟ್ಟಿ ಐರ್ಬೈಲ್‌, ದುಷ್ಟಬುದ್ಧಿ ಪಾತ್ರ ನಿರ್ವಹಿಸಿರುವ ಪ್ರಸನ್ನ ಶೆಟ್ಟಿಗಾರ್‌ ಮಂದಾರ್ತಿ ಅವರ ನಟನೆ ಮನೋಜ್ಞ. ವಿಷಯೆ ಪಾತ್ರ ನಿರ್ವಹಿಸಿದ ನಾಗಶ್ರೀ, ವಿರಸಿಂಹನ ಪಾತ್ರ ನಿರ್ವಹಿಸಿದ ನವೀನ್‌ ಶೆಟ್ಟಿ ಐರ್ಬೈಲ್‌, ಮದನನ ಪಾತ್ರ ನಿರ್ವಹಿಸಿದ ಉದಯ್‌ ಹೆಗಡೆ ಕಡಬಾಳ, ಹಾಸ್ಯ ಕಲಾವಿದರಾದ ರವೀಂದ್ರ ದೇವಾಡಿಗ ಕಮಲಶಿಲೆ, ಶ್ರೀಧರ್‌ ಭಟ್‌ ಕಾಸರಕೋಡ್, ಶೇಖರ್‌ ಶೆಟ್ಟಿ ಯಳಬೇರು ಹಾಗೂ ಮತ್ತಿತರರ ನಟನೆ ಸ್ತುತ್ಯಾರ್ಹ.

ಡಾ. ಶಿವರಾಜ್‌ ಕುಮಾರ್‌, ಗರುಡ ರಾಮ್‌, ಚಂದನ್‌ ಶೆಟ್ಟಿ, ಪುನೀತ್‌ ರುದ್ರನಾಗ್‌ ಅವರೆಲ್ಲಾ ಸಿನೆಮಾದ ಪ್ರಚಾರಕರಾಗಿ ಅಷ್ಟೇ ಕಾಣಿಸಿಕೊಳ್ಳುತ್ತಾರೆ ಹೊರತು ಅವರಿಗೆ ಸಿನೆಮಾದಲ್ಲಿ ಹೆಚ್ಚಿನ ಸ್ಕ್ರೀನ್‌ ಸ್ಪೇಸ್‌ ಕೂಡ ಇಲ್ಲ, ಕಥೆಗೂ ಅವರು ಬೇಕೆಂದಿರಲಿಲ್ಲ.

ತಾಂತ್ರಿಕವಾಗಿ ಸಿನೆಮಾ ಹೇಗಿದೆ ? ‌

ಕೆಲವು ಸನ್ನಿವೇಶಗಳಲ್ಲಿ ಫೂಟೇಜ್‌ ಟು ಫೂಟೇಜ್‌ ಕಲರ್‌ ಮ್ಯಾಚ್‌ ಇಲ್ಲ. ಎಡಿಟಿಂಗ್‌ (ಸಂಕಲನ) ಕಟ್ಟಿಂಗ್‌ ಹೆಚ್ಚಾದಂತೆ ಕಾಣಿಸುತ್ತದೆ, ಮೂಮೆಂಟ್ ಫ್ರೇಮಿಂಗ್‌ ಗಳನ್ನೇ ಹೆಚ್ಚಿನ ಸನ್ನಿವೇಶಗಳಲ್ಲಿ ಬಳಸಿಕೊಂಡಿರುವುದರಿಂದ ಪ್ರೇಕ್ಷಕರ ಕಣ್ಣಿಗೆ ತ್ರಾಸಾಗುವಂತಿದೆ. ಡೈಲಾಗ್‌ ಡೆಲಿವರಿ ಸಂದರ್ಭಗಳಲ್ಲಿ ಪ್ರೇಕ್ಷಕರು ನಟರ ಭಾವನೆಗಳನ್ನು ಅರ್ಥೈಸಿಕೊಳ್ಳುವುದಕ್ಕೂ ಮುನ್ನವೇ  ಫ್ರೇಮ್‌ ಬದಲಾಗುವುದು ಹೆಚ್ಚಿನ ಕಡಗಳಲ್ಲಿವೆ. ಲಿಪ್‌ ಲಿಂಕಿಂಗ್‌ ಆಗದೆ ಇರುವುದು ಸುಮಾರು ಕಡೆಗಳಲ್ಲಿ ಸಾಮಾನ್ಯನೂ ಗ್ರಹಿಸುವಂತೆ ಇದೆ. ಹೀಗೆ ಒಂದಿಷ್ಟು ತಾಂತ್ರಿಕ ವಿಷಯಗಳಲ್ಲಿ ಸಿನೆಮಾ ಪ್ರೇಕ್ಷಕರಿಗೆ ಅಸಮಧಾನ ಹುಟ್ಟಿಸುತ್ತದೆ.

ಒಂದು ವಿಭಿನ್ನ ಪ್ರಯತ್ನಕ್ಕೆ ಜನರಂತೂ ತಲೆಬಾಗಿದ್ದಾರೆ. ಸಿನೆಮಾದಲ್ಲಿ ರಿಚ್ನೆಸ್‌ ಇದೆ. ಆದರೇ, ಯಕ್ಷಗಾನದ ದೃಷ್ಟಿಯಲ್ಲಿ ನೋಡುವುದಾದರೇ ಈ ಸಿನೆಮಾ ʼಮಾದರಿʼ ಆಗದೆ ಇರುವುದೆ ಒಳ್ಳೆಯದು. ಸಿನೆಮಾ ಖಂಡಿತ ಮನರಂಜನೆ ನೀಡುತ್ತದೆ. ನೋಡಿ ಆನಂದಿಸಬಹುದು. ಸಿನೆಮಾ ತಂಡಕ್ಕೆ ಯಶಸ್ಸು ಸಿಗಲಿ.

 -ಶ್ರೀರಾಜ್‌ ವಕ್ವಾಡಿ
ತಾಂತ್ರಿಕ ಅಭಿಪ್ರಾಯ : ರಕ್ಷಿತ್‌ ಕುಮಾರ್‌ ಕೋಟೇಶ್ವರ 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!