spot_img
Friday, April 25, 2025
spot_img

ನಿದ್ದೆಗೆಡಿಸುವ ರೋಚಕ ಆಟ ‘ಐಪಿಎಲ್‌ ‘


ಕೆಕೆಆರ್ – ಆರ್​ಸಿಬಿ ನಡುವೆ ಉದ್ಘಾಟನಾ ಪಂದ್ಯ:     ಮಾರ್ಚ್ -22ರಂದು ನಡೆಯುವ  ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ. ಆರ್​ಸಿಬಿ ಹಾಗೂ ಕೆಕೆಆರ್ ಕಳೆದ ಆವೃತ್ತಿಯಲ್ಲಿ ಎರಡು ಬಾರಿ ಮುಖಾಮುಖಿಯಾಗಿದ್ದವು. ಈ ಎರಡೂ ಪಂದ್ಯಗಳಲ್ಲೂ ಕೆಕೆಆರ್ ಜಯ ಸಾಧಿಸಿತ್ತು. ಮೊದಲ ಪಂದ್ಯದಲ್ಲಿ 7 ವಿಕೆಟ್​ಗಳಿಂದ ಆರ್​ಸಿಬಿಯನ್ನು ಮಣಿಸಿದ್ದ ಕೆಕೆಆರ್, ಎರಡನೇ ಪಂದ್ಯವನ್ನು 1 ರನ್​ಗಳಿಂದ ಗೆದ್ದಿಕೊಂಡಿತ್ತು. ಹೀಗಾಗಿ ಕಳೆದ ಬಾರಿಯ ಹೀನಾಯ ಸೋಲಿಗೆ ಸೇಡು ತೀರಿಸಿಕೊಳ್ಳುವ ಇರಾದೆಯಲ್ಲಿ ಆರ್​ಸಿಬಿ ಇದ್ದರೆ, ಇತ್ತ ತನ್ನ ಗೆಲುವಿನ ಓಟವನ್ನು ಮುಂದುವರೆಸಲು ಕೆಕೆಆರ್ ಎದುರು ನೋಡುತ್ತಿದೆ. ಹಾಗಾಗಿ ಈ ಮಹತ್ವದ ಪಂದ್ಯವನ್ನು ಕಣ್ತುಂಬಿಸಿಕೊಳ್ಳಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ.

ಮೊದಲ ಟೂರ್ನಿಯೇ ರೋಚಕ :  ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಪಂದ್ಯಾಟ ವಿಶ್ವದ ಅತ್ಯಂತ ಯಶಸ್ವೀ ಕ್ರಿಕೆಟ್ ಲೀಗ್ . ಯುವ ಆಟಗಾರರಿಗೆ ವೇದಿಕೆ, ತಂಡದಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವ ಛಾನ್ಸ್ ,ಆದಾಯ ಸೇರಿದಂತೆ ಎಲ್ಲಾ ರೀತಿಯಲ್ಲೂ ‘ ಐಪಿಎಲ್ ‘  ಇತರ ಲೀಗ್ ಕ್ರಿಕೆಟ್ ಪಂದ್ಯಾಟಗಳಿಂದ ಮುಂದಿದೆ. ಲಲಿತ್ ಮೋದಿಯ ಕನಸಿನ ಕೂಸಾಗಿದ್ದ ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಪಂದ್ಯಾಟ ಅಬ್ಬರದ ಪ್ರಚಾರದೊಂದಿಗೆ ಕ್ರಿಕೆಟ್ ಜಗತ್ತಿಗೆ 2008ರಲ್ಲಿ ಕಾಲಿಟ್ಟಾಗ ಅದೊಂದು ಹುಚ್ಚಾಟವೆಂದು ಎಲ್ಲರೂ ಭಾವಿಸಿದ್ದರು.  ಆದರೆ , ರೋಚಕ ರೋಮಾಂಚನದಿಂದ ಅನಿರೀಕ್ಷಿತ ಫಲಿತಾಂಶಗಳು ಬಂದಾಗ ಅಭಿಮಾನಿಗಳ ‘ ದಿಲ್ ‘ ಖುಷಿ ಪಟ್ಟಿತ್ತು . ಇದಕ್ಕೆ ಮೊದಲ ಐಪಿಎಲ್ ಟ್ವೆಂಟಿ-20 ಪಂದ್ಯಾಟದಲ್ಲಿ  ರಾಜಸ್ಥಾನ ರಾಯಲ್ಸ್ ಚಾಂಪಿಯನ್ ಆಗಿದ್ದೇ ಭಾರೀ ಕುತೂಹಲ. ಸಾಕಷ್ಟು ಬಲಾಢ್ಯ ತಂಡಗಳು 2008ರ ಮೊದಲ ಐಪಿಎಲ್ ಪಂದ್ಯಾಟದಲ್ಲಿ ಆಡಿದ್ದರೂ ಚಾಣಾಕ್ಷ ನಾಯಕತ್ವದಿಂದ ಆಸ್ಟ್ರೇಲಿಯಾದ ಸ್ಪಿನ್ ಮಾಂತ್ರಿಕ  ಶೇನ್ ವಾರ್ನ್ ರಾಜಸ್ಥಾನ ರಾಯಲ್ಸ್ ತಂಡವನ್ನು ಚೊಚ್ಚಲ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿಸಿದ್ದು ಒಂದು ಅದ್ಭುತವೇ . ಯುವ ಪಡೆಯನ್ನೇ ಕಟ್ಟಿಕೊಂಡ ಶೇನ್‌ ವಾರ್ನ್‌ ಬಲಿಷ್ಠ ತಂಡಗಳಿಗೆ ಮಣ್ಣು ಮುಕ್ಕಿಸಿ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಐಪಿಎಲ್ ಪ್ರಶಸ್ತಿಯ ಗರಿ ಮುಡಿಸಿದರು.  2008ರಿಂದ ಆರಂಭಗೊಂಡ ಐಪಿಎಲ್ ಪಯಾಣ ಇದೀಗ  ಸತತ 18ನೇ ಆವೃತ್ತಿಯನ್ನು ಕಾಣುತ್ತಿರುವುದು ಕೂಡ ಒಂದು ಇತಿಹಾಸ.

‘ಐಪಿಎಲ್‌’ ಯುವ ಪ್ರತಿಭೆಗಳಿಗೆ ವೇದಿಕೆ  :              ‘ಐಪಿಎಲ್ ‘ ಟ್ವೆಂಟಿ-20 ಪಂದ್ಯಾಟದ ಪ್ರತಿಯೊಂದು ಪಂದ್ಯವೂ ರೋಚಕತೆಯನ್ನು ಕಾಣುತ್ತದೆ. ಈ ರೋಚಕತೆಯ ಆಟ ಕ್ರಿಕೆಟ್ ಪ್ರೇಮಿಗಳನ್ನು ಹೆಚ್ಚು ಪುಳಕಗೊಳಿಸುತ್ತದೆ. ಸೋಲು – ಗೆಲುವುಗಳನ್ನು ಬದಿಗಿಟ್ಟು ನೋಡಿದರೆ ದೊಡ್ಡ ದೊಡ್ಡ ಕನಸುಗಳನ್ನು ಕಟ್ಟಿಕೊಂಡಿರುವ ಯುವ ಆಟಗಾರರಿಗೆ ತಮ್ಮ ಪ್ರತಿಭೆಯನ್ನು ತೋರ್ಪಡಿಸಲು ‘ ಐಪಿಎಲ್ ‘ಅವಕಾಶ ಮಾಡಿ ಕೊಟ್ಟಿದೆ.  ಮೇಲಾಗಿ ಬಡ ಕ್ರಿಕೆಟಿಗರ ಹೊಟ್ಟೆ ತುಂಬಿಸುತ್ತಿರುವುದು ಕೂಡ ಇದೇ ‘ ಐಪಿಎಲ್ ‘. ಹಾಗಾಗಿ, ಐಪಿಎಲ್ ನಲ್ಲಿ ಸ್ಪರ್ಧಾತ್ಮಕ ಆಟವನ್ನು ನೋಡಬಹುದಾಗಿದೆ. ಐಪಿಎಲ್ ಪಂದ್ಯಾಟದಲ್ಲಿ ಪ್ರತಿಬಾರಿಯೂ ಒಬ್ಬೊಬ್ಬ ಕ್ರಿಕೆಟ್ ಆಟಗಾರರು ವಿಶೇಷವಾಗಿ ಗಮನ ಸೆಳೆದಿದ್ದಾರೆ.  ಮನ್ ಪ್ರೀತ್ ಗೋನಿ, ಸ್ವಘ್ನಿಲ್ ಅಸ್ನೋಡಕರ್ , ಮನೀಷ್ ಪಾಂಡೆ, ಪಾಲ್ ವಾಲ್ತಾಟಿ ,  ಅಜಿಂಕ್ಯ ರಹಾನೆ , ರಾಬಿನ್ ಉತ್ತಪ್ಪ ,  ದೀಪಕ್ ಹೂಡಾ ,  ಸಂಜು ಸ್ಯಾಮ್ಸನ್,  ಕೆ.ಎಲ್.ರಾಹುಲ್ , ಮಾಯಾಂಕ್ ಅಗರ್ ವಾಲ್ , ಜಸ್ಪ್ರೀತ್ ಬುಮ್ರಾ , ಶುಬ್ಮನ್ ಗಿಲ್ , ಸೂರ್ಯಕುಮಾರ್ ಯಾದವ್ , ನಟರಾಜನ್ , ಶ್ರೇಯಸ್ ಅಯ್ಯರ್, ಯಶಸ್ವಿ ಜೈಸ್ವಾಲ್ , ರುತುರಾಜ್ ಗಾಯಕ್ವಾಡ್, ರಿಂಕು ಸಿಂಗ್, ತಿಲಕ್ ವರ್ಮಾ, ಸೇರಿದಂತೆ ಅನೇಕ  ಪ್ರತಿಭೆಗಳು ಬೆಳಕಿಗೆ ಬಂದದ್ದು ಕೂಡ ಇದೇ ಐಪಿಎಲ್ ನಲ್ಲಿ.

ಪ್ರಶಸ್ತಿ ಗೆಲುವಿನಲ್ಲಿ ಚೆನ್ನೈ – ಮುಂಬೈ ಸಮಬಲ :     ಐಪಿಎಲ್ ಇತಿಹಾಸದಲ್ಲಿ ಪ್ರಶಸ್ತಿ ಗೆಲುವಿನ ವಿಶೇಷ ಸಾಧನೆಗೈದಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಲಾ ಐದು ಬಾರಿ ಚಾಂಪಿಯನ್‌ಪಟ್ಟವನ್ನು ಅಲಂಕರಿಸಿದೆ.  ರೋಹಿತ್ ಶರ್ಮ ನಾಯಕತ್ವದಲ್ಲಿ  ಮುಂಬೈ ಇಂಡಿಯನ್ಸ್ 2013, 2015 , 2017, 2019, 2020 ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಮಹೇಂದ್ರ ಸಿಂಗ್ ಧೋನಿ ಸಾರಥ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 2010 , 2011, 2018 ,2021 ಮತ್ತು 2023ರಲ್ಲಿ ಚಾಂಪಿಯನ್‌ ಆಗಿತ್ತು.  ಕೋಲ್ಕತ್ತ ನೈಟ್ ರೈಡರ್ಸ್ ಎರಡು ಬಾರಿ ( 2012 , 2014, 2024 ) ಪ್ರಶಸ್ತಿ ಜಯಿಸಿದರೆ,  2008ರಲ್ಲಿ ರಾಜಸ್ಥಾನ ರಾಯಲ್ಸ್ , 2009ರಲ್ಲಿ ಡೆಕ್ಕನ್ ಚಾರ್ಜರ್ಸ್ ಹಾಗೂ 2016ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ಹಾಗೂ 2022ರಲ್ಲಿ ಗುಜರಾತ್‌ ಟೈಟನ್ಸ್  ಐಪಿಎಲ್ ಪ್ರಶಸ್ತಿ ಗೆದ್ದಿದೆ . ಆದರೆ, ಕಳೆದ ಆವೃತ್ತಿಯಲ್ಲಿ ಪ್ಲೇ ಆಫ್ ತಲುಪುವಲ್ಲಿ ಎರಡು ತಂಡಗಳು ವಿಫಲವಾಗಿದ್ದರೂ, 6ನೇ ಟ್ರೋಫಿ ಗೆಲ್ಲುವ ಹುಮ್ಮಸ್ಸಿನಲ್ಲಿವೆ. ಈ ಬಾರಿ  ಎಲ್ಲಾ ತಂಡಗಳು ನವೋಲ್ಲಾಸದಿಂದ  ಜಬರ್ದಾಸ್ತದ ಐಪಿಎಲ್ ಪಂದ್ಯಾಟವನ್ನು ಆಡಲು ಅಣಿಯಾಗಿರುವುದರಿಂದ  ಈ ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸುವ ತಂಡ ಯಾವುದು ಎನ್ನುವ ಕುತೂಹಲದ ಪ್ರಶ್ನೆ ಎದ್ದಿದೆ .

========
ಆರ್​ಸಿಬಿ ಕಪ್ ಗೆಲ್ಲುತ್ತಾ…
ಪ್ರತಿ ಐಪಿಎಲ್‌ ಪಂದ್ಯಾಟ ನಡೆದಾಗ ಆರ್​ಸಿಬಿ ಗೆಲ್ಲುತ್ತಾ.. ಎನ್ನುವ ಚರ್ಚೆ ನಡೆಯುತ್ತದೆ. ‘ ಕಪ್​ ನಮ್ದೇ’ ಎನ್ನುವ ಘೋಷವಾಕ್ಯದೊಂದಿಗೆ ಸತತ 17 ವರ್ಷಗಳಿಂದ ಪ್ರಶಸ್ತಿ ನಿರೀೆಕ್ಷೆಯಲ್ಲಿರುವ ಅಭಿಮಾನಿಗಳು ಟ್ರೋಫಿ ಗ್ಯಾರಂಟಿ ಎನ್ನುವ ವಿಶ್ವಾಸದಲ್ಲಿದ್ದಾರೆ. ಆರ್​ಸಿಬಿ ತಂಡಕ್ಕೆ ಈ ಬಾರಿ ಹೊಸ ನಾಯಕನ ನೇಮಕವಾಗಿದೆ. ಬದಲಿ ಆಟಗಾರನಾಗಿ ಆರ್​ಸಿಬಿ ತಂಡಕ್ಕೆ ಎಂಟ್ರಿ ನೀಡಿದ್ದ ಬಲಗೈ ಬ್ಯಾಟರ್​ ರಜತ್​ ಪಾಟೀದಾರ್​ ಇದೀಗ ನಾಯಕನ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. ದೇಶೀಯ ಟೂರ್ನಿಯಲ್ಲಿ ಮಧ್ಯಪ್ರದೇಶ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿರುವ ರಜತ್​ ಪಾಟೀದಾರ್​, ಸ್ಟಾರ್​ ಆಟಗಾರರಾದ ವಿರಾಟ್​ ಕೊಹ್ಲಿ, ಫಿಲ್​ ಸಾಲ್ಟ್​, ಹ್ಯಾಸಲ್​ವುಡ್​ ಅವರನ್ನು ಸರಿಯಾಗಿ ಸದುಪಯೋಗಪಡಿಸಿಕೊಳ್ಳುವುದರ ಜತೆಗೆ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆಧಾರವಾಗಬೇಕು. ಜತೆಗೆ ಅಭಿಮಾನಿಗಳ ಬಹು ವರ್ಷಗಳ ಕನಸನ್ನು ನನಸು ಮಾಡುವ ಜವಾಬ್ದಾರಿ ರಜತ್​ ಪಾಟೀದಾರ್ ಮೇಲಿದೆ.

Related Articles

Stay Connected

21,961FansLike
3,912FollowersFollow
22,300SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!