spot_img
Sunday, February 15, 2026
spot_img

ಯಕ್ಷಗಾನ ವಿದ್ವಾಂಸ ಬಿ. ಗೋಪಾಲಕೃಷ್ಣ ಕುರುಪ್ ನಿಧನ

ಯಕ್ಷಗಾನ ಕ್ಷೇತ್ರದ ವಿದ್ವಜ್ಜನ ಪಂಕ್ತಿ ಭಾಜನರಾಗಿದ್ದ ಮದ್ದಲೆಗಾರ ಬರ್ಗುಳ ಗೋಪಾಲಕೃಷ್ಣ ಕುರುಪ್ (90ವ) ಮಾರ್ಚ್ 19 ರಂದು ನಿಧನರಾದರು.

ಚೆಂಡೆ-ಮದ್ದಲೆ ನುಡಿತಗಳಲ್ಲಿ ಶಾಸ್ತ್ರಜ್ಞಾನವನ್ನು ಪಡೆದುಕೊಂಡಿದ್ದ ಕುರುಪರು ಅದನ್ನು ಅಧಿಕೃತ ಪಠ್ಯರೂಪದಲ್ಲಿ ಪ್ರಕಟಿಸಿದ ಮೊದಲಿಗರಾಗಿದ್ದರು. ಅವರಿಗೆ ಭಾಗವತಿಕೆಯ ಬಗ್ಗೆಯೂ ಆಳವಾದ ಜ್ಞಾನವಿತ್ತು. ೧೯೫೨ ರಲ್ಲಿ ಕೂಡ್ಲು ಮೇಳದಲ್ಲಿ ಪೂರ್ವರಂಗಕ್ಕೆ ಹಾಡುವ ಅವಕಾಶ ದೊರೆತು ಮದ್ಲೆಗಾರ ಕುದ್ರೆಕೂಡ್ಲು ರಾಮಭಟ್ಟರ ಮೆಚ್ಚುಗೆಗಳಿಸಿ, ಮುಂದೆ, ವೃತ್ತಿಪರರಾಗಿ ಯಕ್ಷಗಾನ ಕ್ಷೇತ್ರವನ್ನು ಪ್ರವೇಶಿಸಿದ್ದರು. ಹಿರಿಯ ಬಲಿಪ ನಾರಾಯಣ ಭಾಗವತ, ಹಿರಿಯ ಅಗರಿ ಶ್ರೀನಿವಾಸ ಭಾಗವತ, ಹಿರಿಯ ಕುದ್ರೆಕೂಡ್ಲು ರಾಮ ಭಟ್ಟ, ನಾಂಬಾಡಿ ಸುಬ್ಬಯ ಶೆಟ್ಟಿ, ನೆಡ್ಲೆ ನರಸಿಂಹ ಭಟ್ಟ ಮೊದಲಾದವರ ಗುರುತ್ವದಲ್ಲಿ ಜ್ಞಾನವನ್ನು ಸಿದ್ಧಿಸಿಕೊಂಡು, ಅದೇ ಶ್ರದ್ಧೆಯಲ್ಲಿ ಗುರುಗಳಾಗಿ ಅನೇಕ ಮಂದಿ ಶಿಷ್ಯರನ್ನು ಸಿದ್ಧಗೊಳಿಸಿದ್ದರು. ಮೃದಂಗ ವಿದ್ವಾನ್ ಟಿ. ಆರ್. ಕೃಷ್ಣನ್‌ರಲ್ಲಿ ಮೃದಂಗ ನುಡಿತದ ಸೂಕ್ಷ್ಮಗಳನ್ನು ಕಲಿತಿದ್ದರು. ಅನೇಕ ಯಕ್ಷಗಾನ ಕಮ್ಮಟಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ೮೦ ರ ದಶಕದಲ್ಲಿ ಕು. ಶಿ. ಹರಿದಾಸ ಭಟ್ಟ, ಮುಳಿಯ ಮಹಾಬಲ ಭಟ್ಟರ ನೇತೃತ್ವದಲ್ಲಿ ಎಂಜಿ‌ಎಂ ಕಾಲೇಜಿನ ಆರ್‌ಆರ್‌ಸಿಯಲ್ಲಿ ಜರಗಿದ ಹಿಮ್ಮೇಳದ ದಾಖಲಾತಿ ಕಮ್ಮಟದಲ್ಲಿ ಓರ್ವ ಪ್ರಮುಖ ಆಕರ ವ್ಯಕ್ತಿಯಾಗಿದ್ದರು. ಸುಳ್ಯದ ತೆಂಕುತಿಟ್ಟು ಹಿತರಕ್ಷಣ ವೇದಿಕೆಯ ದಾಖಲಾತಿಯಲ್ಲಿ ಬಲಿಪ ನಾರಾಯಣ ಭಾಗವತರ ಹಾಡುಗಳಿಗೆ ಕುರುಪರು ನೀಡಿದ ಮದ್ದಲೆ ಸಾಥಿಯ ಕೌಶಲ, ಅವರ ತಾಳ-ಲಯಗಳ ಕುರಿತ ಅವರ ತಳಸ್ಪರ್ಶಿ ಅನುಭವವನ್ನು ಅನಾವರಣಗೊಳಿಸುತ್ತದೆ.

ಯಕ್ಷಗಾನದ ಹಿಮ್ಮೇಳ ವಿಭಾಗಕ್ಕೊಂದು ಲಕ್ಷಣಗ್ರಂಥವನ್ನು ರಚಿಸುವ ನಿಟ್ಟಿನ ಪ್ರಯತ್ನವಾಗಿ ‘ತೆಂಕುತಿಟ್ಟು-ಪ್ರಾಥಮಿಕ ಯಕ್ಷಗಾನ ಪಾಠಗಳು’ ಕೃತಿಯನ್ನು ಬರೆದು ಪ್ರಕಟಿಸಿದ್ದರು. ಆ ಬಳಿಕ ‘ತೆಂಕುತಿಟ್ಟು ಯಕ್ಷಗಾನದ ಮದ್ದಲೆವಾದನ ಕ್ರಮ’ ಮತ್ತು ‘ತೆಂಕುತಿಟ್ಟು ಯಕ್ಷಗಾನದ ಚೆಂಡೆವಾದನ ಕ್ರಮ’ ಎಂಬ ಪ್ರಮುಖ ಕೃತಿಗಳನ್ನು ರಚಿಸಿದ್ದರು. ಯಕ್ಷಗಾನದ ತಾಳ ಸಂಬಂಧಿ ಅಧ್ಯಯನದ ಭಾಗವಾಗಿ ‘ತ್ತಿತ್ತಿತ್ತೆ’ ಎಂಬ ಪ್ರತ್ಯೇಕ ಕೃತಿ ಬರೆದಿರುವುದು ಅವರ ವಿದ್ವತ್ತಿನ ಪ್ರತೀಕವಾಗಿತ್ತು. ಮೈಸೂರಿನ ಮಹಾಮಹೋಪಾಧ್ಯಾಯ ಡಾ. ರಾ. ಸತ್ಯನಾರಾಯಣ ಅವರು ಕುರುಪರ ಕೃತಿಗಳನ್ನು ಯಕ್ಷಗಾನ ಕ್ಷೇತ್ರದ ಪಾಂಡಿತ್ಯಪೂರ್ಣ ಕೊಡುಗೆಗಳೆಂದು ಶ್ಲಾಘಿಸಿದ್ದರು. ‘ಚೆಂಡೆ-ಮದ್ದಲೆಗಳ ನಡುವೆ’ ಎಂಬ ಶಿ?ರ್ಷಿಕೆಯಲ್ಲಿ ಆತ್ಮಕಥನವನ್ನು ಕೂಡ ಪ್ರಕಟಿಸಿದ್ದಾರೆ.

ಧರ್ಮಸ್ಥಳ, ಕರ್ನಾಟಕ, ಬಳ್ಳಂಬೆಟ್ಟು, ಇರಾ, ಕರ್ನಾಟಕ-ಕಲಾವಿಹಾರ ಮೇಳಗಳಲ್ಲಿ ತಿರುಗಾಟ ನಡೆಸಿರುವ ಕುರುಪ್ ಅವರು ಸುತ್ತಮುತ್ತಲ ಊರುಗಳಲ್ಲಿ ಯಕ್ಷಗಾನ ಹಿಮ್ಮೇಳ ತರಗತಿಗಳನ್ನು ನಡೆಸಿ ಯಕ್ಷಗಾನ ಶಿಕ್ಷಕರಾಗಿ ಹೆಸರು ಪಡೆದವರು. ಆಸಕ್ತರು, ಜಿಜ್ಞಾಸುಗಳು ಸಿಕ್ಕಿದರೆ ಎಲ್ಲೆಂದರಲ್ಲಿ ತಾಳ-ಲಯ-ಛಂದಸ್ಸು ಇತ್ಯಾದಿ ವಿಷಯಗಳ ಬಗ್ಗೆ ಅವಿಶ್ರಾಂತವಾಗಿ ಚರ್ಚಿಸುತ್ತಿದ್ದರು. ಧರ್ಮಸ್ಥಳ ಯಕ್ಷಗಾನ ಕೇಂದ್ರದಲ್ಲಿ ಮೂರು ವರ್ಷ ಹಿಮ್ಮೇಳದ ಗುರುಗಳಾಗಿ ಸೇವೆ ಸಲ್ಲಿಸಿದ್ದರು.

ಕೇರಳಮೂಲದವರಾದ ಕುರುಪ್ ಅವರ ಹಿರಿಯರು ದಕ್ಷಿಣಕನ್ನಡ ಜಿಲ್ಲೆಯ ಶಿಶಿಲದಲ್ಲಿ ನೆಲೆಸಿದವರು. ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಬರ್ಗುಳದಲ್ಲಿ ಬಹುಕಾಲ ವಾಸವಿದ್ದ ಅವರು ಇತ್ತೀಚೆಗಿನ ದಿನಗಳಲ್ಲಿ ಕೇರಳದ ನಿಲೇಶ್ವರದ ಮಕ್ಕಳ ಮನೆಯಲ್ಲಿ ನೆಲೆಸಿದ್ದರು. ಯಕ್ಷಗಾನದ ಕಲಾರಂಗದ ನೇತೃತ್ವದಲ್ಲಿ ಒಂದು ತಿಂಗಳ ಕಾಲ ಜರಗಿದ ಕೋಳ್ಯೂರು ರಾಮಚಂದ್ರ ರಾವ್- ೯೦ ಸಂಭ್ರಮಕ್ಕಾಗಿ ನಿಲೇಶ್ವರದ ಮನೆಯಲ್ಲಿಯೇ ಗೋಪಾಲಕೃಷ್ಣ ಕುರುಪ್ ಅವರ ಅಭಿನಂದನೆಯ ನುಡಿಗಳನ್ನು ದಾಖಲಿಸಿದ್ದು ಇಲ್ಲಿ ಸ್ಮರಣೀಯ. ಯಕ್ಷಗಾನ ಕಲಾರಂಗದ ಪ್ರಶಸ್ತಿಗೂ ಅವರು ಭಾಜನರಾಗಿದ್ದರು.

ಗೋಪಾಲಕೃಷ್ಣ ಕುರುಪ್ ಅವರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಸಂತಾಪ ವ್ಯಕ್ತಪಡಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!