spot_img
Monday, March 16, 2026
spot_img

ಸ್ಥಳೀಯ ಸರ್ಕಾರಗಳ ಅಧಿಕಾರ ಹರಣ-ಗ್ರಾಮ ಸ್ವರಾಜ್ಯಕ್ಕೆ ಗ್ರಹಣ

ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ಬಂದು 3 ದಶಕಗಳು ಕಳೆದಿದೆ. ಸಂವಿಧಾನದ ಒಂದೇ ಆಶಯದಡಿಯಲ್ಲಿದ್ದರೂ ಬೇರೆ ಬೇರೆ ರಾಜ್ಯಗಳಲ್ಲಿ ಇದರ ಜಾರಿಯೂ ಭಿನ್ನತೆಯಿಂದ ಕೂಡಿದೆ. ಹಲವಾರು ಸುಧಾರಣೆಗಳು, ಉತ್ತಮ ಆಡಳಿತ, ಜನ ಭಾಗವಹಿಸುವಿಕೆಯ ಪೆÇ್ರೀತ್ಸಾಹಕ್ಕೆ ನಿರಂತರ ಪ್ರಯತ್ನ, ಜನಪರ ಕಾರ್ಯಗಳ ಜಾರಿ ಹೀಗೆ ವಿವಿಧ ರೀತಿಯಲ್ಲಿ ತನ್ನದೇ ಆದ ಛಾಪನ್ನು ಹೊಂದಿದೆ.

ಕರ್ನಾಟಕದಲ್ಲಿಯೂ ಪಂಚಾಯತ್ ರಾಜ್ ವ್ಯವಸ್ಥೆಯು ಹಲವು ಬದಲಾವಣೆಗಳೊಂದಿಗೆ ಏರಿಳಿತಗಳನ್ನು ಕಾಣುತ್ತಾ ಸಾಗುತ್ತಿದೆ. ಆರಂಭದ
ಕಾಯ್ದೆಗೆ ಆಗಾಗ ತಿದ್ದುಪಡಿಗಳಾಗಿ, ಬೇಕೆಂದಾಗಲೆಲ್ಲಾ ಹೊರಡಿಸುವ ಸುತ್ತೋಲೆ, ಆದೇಶಗಳಂತಹ ಸರ್ಕಾರದ ಅಧಿಕಾರಶಾಹಿ ನೀತಿಗೆ
ಒಳಗಾಗಿ ನಲುಗುತ್ತಲೂ ಮುನ್ನಡೆಯುತ್ತಿದೆ. 2016ರಲ್ಲಿ ಕಾಯ್ದೆಗೆ ಆದ ಕ್ರಾಂತಿಕಾರಕ ತಿದ್ದುಪಡಿಗಳಿಂದ ‘ಗ್ರಾಮ ಸ್ವರಾಜ್ಯಕ್ಕೆ ಹೊಸ ಪಥ’ವನ್ನು ತೋರುವ ಕಾಯ್ದೆಯೆಂತಲೂ ಬಣ್ಣಿಸಲ್ಪಟ್ಟು ವಿಕೇಂದ್ರೀಕರಣದಲ್ಲಿ ನಂಬಿಕೆಯಿಟ್ಟವರಲ್ಲಿ ಹೊಸ ಹುರುಪು, ಉತ್ಸಾಹಗಳಿಂದಲೇ ಭರವಸೆಯನ್ನು ತುಂಬಿತ್ತು. ಬರುಬರುತ್ತಾ ಇದರಲ್ಲಿಯೂ ಸಮರ್ಪಕ ಜಾರಿಗೆ ಅಗತ್ಯವಾದ ನೀತಿ-ನಿಯಮಗಳನ್ನು ರೂಪಿಸುವಲ್ಲಿ, ಕಾಯ್ದೆಯ ಯಥಾವತ್ತ್ ಜಾರಿಗೆ ಪೂರಕವಾದ 3ಎಫ್ ಗಳ(ಹೊಣೆಗಳು, ಹಣಕಾಸು ಮತ್ತು ಹೊಣೆಗಾರರು) ಹಸ್ತಾಂತರ ಮಾಡುವಲ್ಲಿ ಎಡವಿತು. ಅಲ್ಲಲ್ಲಿ ಕೆಲವು ಸಣ್ಣ-ಪುಟ್ಟ ಅಂಶಗಳಿಗೆ ಧನಾತ್ಮಕವಾಗಿ ಸ್ಪಂಧಿಸಿತಾದರೂ, ಅಧಿಕಾರಶಾಹಿಯ ಮುಷ್ಠಿಯಲ್ಲಿ ಸಿಲುಕಿ ಮತ್ತದೇ ಸುತ್ತೋಲೆ, ಆದೇಶಗಳ ಬಲೆಗೆ ಸಿಲುಕಿ ಪರಿಣಾಮಕಾರಿ ಅನುಷ್ಠಾನದ ಮೂಲಕ ಹೊಸ ಭಾಷ್ಯ ಬರೆಯಬೇಕಾದ ಪಂಚಾಯತ್ ರಾಜ್ ವ್ಯವಸ್ಥೆ ಮತ್ತೆ ಸೊರಗತೊಡಗಿತು.

ಕೊರೋನಾ ಕಾಲದಲ್ಲಿ ಪಂಚಾಯತ್‍ಗಳ ಅವಧಿ ಮುಗಿದಿದ್ದರೂ ಸಕಾಲಕ್ಕೆ ಚುನಾವಣೆ ನಡೆಸದೇ ಪಂಚಾಯತ್ ವ್ಯವಸ್ಥೆಯನ್ನು ಕಗ್ಗತ್ತಲಲ್ಲಿಟ್ಟಿದನ್ನೂ ನೆನಪಿಸಿಕೊಳ್ಳಬಹುದು. ಹೀಗೆ ಅಧಿಕಾರಶಾಹಿ ವ್ಯವಸ್ಥೆಯ ಪ್ರಾಬಲ್ಯ ಹೆಚ್ಚಾದಾಗಲೆಲ್ಲಾ ವಿಕೇಂದ್ರಕೃತ ಆಡಳಿತಕ್ಕೆ ಬೆಂಬಲ ನೀಡುವವರೆಲ್ಲಾ ಸಂಘಟಿತ ಹೋರಾಟಕ್ಕೆ ಇಳಿದಾಗ ಅಧಿಕಾರಶಾಹಿ ವ್ಯವಸ್ಥೆ ತಟಸ್ಥವಾದಂತೆ ಕಂಡರೂ, ನಿರಂತರ ಹೋರಾಟದ ಕೊರತೆಯಿಂದ ಅಧಿಕಾರಶಾಹಿತನವೇ ಮೇಲುಗೈ ಸಾಧಿಸಿರುವ ಉದಾಹರಣೆಗಳು ಅಧಿಕ.

ಆದರೂ ಛಲ ಬಿಡದಂತೆ ಆಗಾಗ ಅಲ್ಲಲ್ಲಿ ಇಂತಹ ಪ್ರಯತ್ನಗಳು ನಡೆಯುತ್ತಿರುವುದು ಸ್ವಾಗತಾರ್ಹ. ಈಗ ಅಂತಹ ಇನ್ನೊಂದು ಪ್ರಯತ್ನ ಉಡುಪಿ ಜಿಲ್ಲೆಯಲ್ಲಿ ನಡೆಯುತ್ತಿದೆ. ಇದೇ ಮಾರ್ಚ್ 4ರಂದು ಉಡುಪಿ ಜಿಲ್ಲಾಡಳಿತ ಭವನದಲ್ಲಿ ಸ್ಥಳೀಯ ಸ್ವಯಂ ಸರ್ಕಾರದ ಉಳಿವಿಗಾಗಿ ಗ್ರಾಮ ಪಂಚಾಯತ್ ಚುನಾಯಿತ ಪ್ರತಿನಿಧಿಗಳ ಪ್ರಮುಖ ಹಕ್ಕೊತ್ತಾಯಗಳು ಮಂಡಿಸಿ ಸರ್ಕಾರದ ಗಮನ ಸೆಳೆಯಲು ಪ್ರತಿಭಟನೆಯನ್ನು
ಹಮ್ಮಿಕೊಂಡಿದ್ದಾರೆ. ಗ್ರಾಮ ಪಂಚಾಯತ್‍ಗಳು ಸ್ಥಳೀಯ ಸರ್ಕಾರಗಳಾಗಿ ಕಾರ್ಯನಿರ್ವಹಿಸುವಲ್ಲಿ ಇರುವ ಪ್ರಮುಖ ಅಡೆತಡೆಗಳತ್ತ ಸರ್ಕಾರದ ಗಮನ ಸೆಳೆದು ಅಗತ್ಯ ಕ್ರಮಗಳ ಕುರಿತಾದ ವಿವರವಾದ ದಾಖಲೆಯ ಮೂಲಕ ಹಕ್ಕೊತ್ತಾಯ ಮಾಡಿ, ಸ್ಥಳಿಯ ಸ್ವಯಮಾಡಳಿತಕ್ಕೆ ಚಾಲನೆ ನೀಡುವತ್ತ ಕಾರ್ಯಪ್ರವೃತ್ತರಾಗಿದ್ದಾರೆ.

ಈ ನಿಟ್ಟಿನಲ್ಲಿ ಗಮನ ಹರಿಸಬೇಕಾದ ಪ್ರಮುಖ ಸಮಸ್ಯೆಗಳು ಈ ಕೆಳಗಿನಂತಿವೆ:
1. ಸಿಬ್ಬಂದಿ ನೇಮಕ: 31-10-2017ರಿಂದ ಗ್ರಾಮ ಪಂಚಾಯತ್‍ಗಳಲ್ಲಿ ಹೊಸ ಹುದ್ದೆಗಾಗಲೀ ಅಥವಾ ತೆರವಾದ ಸ್ಥಾನಕ್ಕಾಗಲೀ ಯಾವುದೇ ಸಿಬ್ಬಂದಿಗಳ ನೇಮಕ ಆಗಿಲ್ಲ. ಇದರಿಂದ ಪಂಚಾಯತ್ ಆಡಳಿತಕ್ಕೆ ತೊಂದರೆ ಆಗುತ್ತಿದೆ. ಹೀಗಾಗಿ ಅನೇಕ ಯೋಜನೆಗಳನ್ನು ಹಾಕಿಕೊಂಡರೂ ಅವುಗಳ ಅನುಷ್ಠಾನಕ್ಕೆ ಸಾಧ್ಯವಾಗುತ್ತಿಲ್ಲ.

2. ಏಕ ವಿನ್ಯಾಸ ನಕ್ಷೆ ಅನುಮೋದನೆ: ಈ ಹಿಂದೆ ಉಡುಪಿ ಜಿಲ್ಲೆಯಲ್ಲಿ, 25 ಸೆಂಟ್ಸ್ ಜಮೀನಿನವರೆಗೆ ಗ್ರಾಮ ಪಂಚಾಯತಿಗೆ, 25 ಸೆಂಟ್ಸ್ ಇಂದ 1 ಎಕರೆಯ ತನಕ ತಾಲೂಕು ಪಂಚಾಯತಿಗೆ, ಜಿಲ್ಲಾ ಪಂಚಾಯತ್ ಅನುಮೋದಿತ ನೋಂದಾಯಿತ ಖಾಸಗಿ ವಾಸ್ತುಶಿಲ್ಪಿಯವರು ಮಾಡಿದ ಏಕ ನಿವೇಶನ (ಸಿಂಗಲ್ ಲೇ ಔಟ್) ನಕ್ಷೆ/ವಿನ್ಯಾಸಕ್ಕೆ ಅನುಮೋದನೆ ನೀಡುವ ಅಧಿಕಾರ ಇತ್ತು. ಈಗ ತಾಲೂಕು ಮುಖ್ಯ ಕೇಂದ್ರದಲ್ಲಿ ಇದನ್ನು ನಗರ ಮತ್ತು ಗ್ರಾಮಾಂತರ ಯೋಜನಾ ಪ್ರಾಧಿಕಾರಕ್ಕೆ ಪ್ರತ್ಯಾಯೋಜಿಸಿ ಆದೇಶ ಹೊರಡಿಸಲಾಗಿದೆ. ತಾಲೂಕು ಕೇಂದ್ರದಲ್ಲಿಯೂ ಇದಕ್ಕೆ ಸೂಕ್ತ ವ್ಯವಸ್ಥೆ ಇಲ್ಲದಿರುವುದರಿಂದ, ಇಡೀ ಪ್ರಕ್ರಿಯೆ ವಿಳಂಬವಾಗುತ್ತದೆ. ಗ್ರಾಮ ಪಂಚಾಯತ್ ರಸ್ತೆಯ ಕುರಿತು ಸ್ಪಷ್ಟತೆ ಇಲ್ಲದಿರುವುದರಿಂದ ವಿನ್ಯಾಸ ಅನುಮೋದನೆ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ.

3. ಅಧ್ಯಕ್ಷರ ಸಹಿ ಅಧಿಕಾರ: ಸ್ವಚ್ಚ ಭಾರತ್ ಮಿಷನ್ ಖಾತೆಗೆ ಸಂಬಂಧಿಸಿದಂತೆ, ಚೆಕ್ ಸಹಿಯನ್ನು ಪಿ.ಡಿ.ಓ. ಜೊತೆಗೆ ಅಧ್ಯಕ್ಷರ ಬದಲಾಗಿ ಲೆಕ್ಕ ಸಹಾಯಕರು/ಕಾರ್ಯದರ್ಶಿ ಎಂದು ಮಾಡಲಾಗಿದೆ.

4. ಗ್ರಾಮ ಆರೋಗ್ಯ, ನೈರ್ಮಲ್ಯ ಹಾಗೂ ಪೌಷ್ಟಿಕಾಂಶ ಸಮಿತಿಯ ಹಣಕಾಸು ನಿರ್ವಹಣೆಗೆ ಆ ಸಮಿತಿಯ ಅಧ್ಯಕ್ಷರು, ಆಶಾ ಕಾರ್ಯಕರ್ತರ ಸಹಿ ಹಾಗೂ ಗ್ರಾಮ ಆರೋಗ್ಯ ಸಮಿತಿ ಅನುದಾನಕ್ಕೆ ಅಧ್ಯಕ್ಷರ ಹಾಗೂ ಆರೋಗ್ಯ ಸಹಾಯಕರ ಜಂಟಿ ಸಹಿ ಮತ್ತು ಆರೋಗ್ಯ ರಕ್ಷಾ ಸಮಿತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ವೈದ್ಯಾಧಿಕಾರಿಗಳ ಜಂಟಿ ಸಹಿ ಈ ಹಿಂದೆ ಕಡ್ಡಾಯವಾಗಿತ್ತು. ಈ ಅಧಿಕಾರವನ್ನು ಹಿಂಪಡೆದು ವೈದ್ಯಾಧಿಕಾರಿಯ ಸಿಂಗಲ್ ನೋಡಲ್ ಅಕೌಂಟ್‍ಗೆ ಹಣ ಜಮಾವಣೆಯಾಗುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ರಕ್ಷಾ ಸಮಿತಿಯ ಹಾಗೂ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯ ಹಣಕಾಸು ನಿರ್ವಹಣೆಯನ್ನು ಕೇವಲ ವೈದ್ಯಾಧಿಕಾರಿಗಳು ಮಾತ್ರ ನಿರ್ವಹಿಸುತ್ತಿದ್ದಾರೆ.

5. ಶಾಸನಬದ್ಧ ಅನುದಾನ: ರಾಜ್ಯ ಸರ್ಕಾರದ ಶಾಸನಬದ್ಧ ಅನುದಾನ ಹಲವು ವರ್ಷಗಳಿಂದ ಏರಿಕೆ ಆಗಿಲ್ಲ. ಜನಸಂಖ್ಯೆ ಮತ್ತು ವಿಸ್ತೀರ್ಣದ ಆಧಾರವನ್ನು ಪರಿಗಣಿಸಿದಾಗ ಶಾಸನಬದ್ದ ಅನುದಾನ ಕಡಿಮೆಯಾಗಿರುತ್ತದೆ. ಕೇಂದ್ರ ಹಣಕಾಸು ಆಯೋಗದ ಅನುದಾನ ಅದಕ್ಕಿಂತ ಗಣನೀಯವಾಗಿ ಹೆಚ್ಚಿದೆ. ಗ್ರಾಮ ಪಂಚಾಯತ್ ಸಿಬ್ಬಂದಿಗಳಿಗೆ ರಾಜ್ಯ ಸರ್ಕಾರವೇ ವೇತನ ನೀಡುತ್ತದೆಂದು ಘೋಷಿಸಲಾಗಿದೆಯೇ ವಿನಃ ಯಾವುದೇ ಹೆಚ್ಚುವರಿ ಅನುದಾನವನ್ನು ಇದಕ್ಕಾಗಿ ನೀಡುತ್ತಿಲ್ಲ.

6. ನರೆಗಾ ಯೋಜನೆ: ಒಂದು ವರ್ಷದಲ್ಲಿ 10 ಸಾವಿರ ಮಾನವದಿನಗಳನ್ನು ಸೃಜಿಸಿದರೆ ನರೆಗಾ ಕೆಲಸಕ್ಕೆ ಪ್ರತ್ಯೇಕ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಬಹುದು ಎಂದಿದೆ. ಆದರೆ 10 ಸಾವಿರಕ್ಕಿಂತ ಜಾಸ್ತಿ ಮಾನವ ದಿನಗಳನ್ನು ಸೃಜಿಸಿ ಕಾಮಗಾರಿ ನಡೆಸಿದರೂ ಅನೇಕ
ಪಂಚಾಯತ್‍ಗಳಲ್ಲಿ ಪ್ರತ್ಯೇಕ ನರೇಗಾ ಸಿಬ್ಬಂದಿ ನೀಡಿಲ್ಲ. ನರೆಗಾ ಯೋಜನೆಯ ಅಡಿಯಲ್ಲಿ ಕೈಗೊಂಡ ಕಾಮಗಾರಿಗಳಿಗೆ (ವೈಯಕ್ತಿಕ,
ಸಾಮುದಾಯಿಕ) ಕೂಲಿ ಪಾವತಿ, ಸಾಮಗ್ರಿ ವೆಚ್ಛಗಳು ತಕ್ಷಣವೇ ಪಾವತಿಯಾಗುತ್ತಿಲ್ಲ. ದೀರ್ಘ ಸಮಯದ ವರೆಗೆ ಹಣಪಾವತಿ ಬಾಕಿ
ಇರುವುದರಿಂದ ನರೇಗಾದ ಅನುಷ್ಟಾನದಲ್ಲಿ ಸಮಸ್ಯೆ ಉಂಟಾಗುತ್ತಿದೆ.

7. ಕಿರಿಯ ಇಂಜಿನಿಯರ್ ನೇಮಕ: ಗ್ರಾಮ ಪಂಚಾಯತ್ ಅಭಿವೃದ್ಧಿಗೆ ಸಂಬಂಧಿಸಿದಂತೆ ಕಿರಿಯ ಇಂಜಿನಿಯರ್ ಅವರಿಗೆ ಒಬ್ಬರಿಗೆ 20ಕ್ಕಿಂತ ಹೆಚ್ಚು ಪಂಚಾಯತ್ ಜವಾಬ್ದಾರಿ ನೀಡಲಾಗಿದೆ. ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಅಭಿವೃದ್ಧಿ ಕಾರ್ಯಗಳ ನಿರ್ವಹಣೆಯೂ
ಅವರದ್ದೇ ಜವಾಬ್ದಾರಿಯಾಗಿರುವುದರಿಂದ, ಪಂಚಾಯತ್‍ಗಳ ಅಭಿವೃದ್ಧಿ ಕಾರ್ಯಗಳನ್ನು ಸಕಾಲಕ್ಕೆ ಮಾಡಲಾಗದೇ ಅನುದಾನವು ಬಾಕಿ
ಉಳಿಯುತ್ತದೆ. ಪಂಚಾಯತ್ ಕಾಮಗಾರಿಗಳ ಪ್ರಗತಿ ಕುಂಠಿತವಾಗುತ್ತದೆ. ಇದರಿಂದಾಗಿ ಮುಂದಿನ ಹಣಕಾಸು ವರ್ಷದ ಅನುದಾನದಲ್ಲಿ
ಕಡಿತವಾಗುತ್ತದೆ.

8. ಗ್ರಾಮ ಪಂಚಾಯತ್ ಮಟ್ಟದ ಕೆ.ಡಿ.ಪಿ.ಸಭೆಗಳು: ಗ್ರಾಮ ಪಂಚಾಯತ್ ಕೆ.ಡಿ.ಪಿ. ಸಭೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು,
ಉಪಾಧ್ಯಕ್ಷರು ಮತ್ತು ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷರಿಗೆ ಮಾತ್ರ ಅವಕಾಶವಿದೆ. ಆದರೆ ತಾಲೂಕು ಹಾಗೂ ಜಿಲ್ಲಾ ಮಟ್ಟದ
ಕೆ.ಡಿ.ಪಿ.ಗೆ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರೊಂದಿಗೆ ನಾಮನಿರ್ದೇಶಿತ ಸದಸ್ಯರು ಭಾಗವಹಿಸಲು ಅವಕಾಶವಿದೆ. ಕೆ.ಡಿ.ಪಿ.ಸಭೆಗಳಿಗೆ ಸಂಬಂಧ ಪಟ್ಟ ಜವಾಬ್ದಾರಿಯುತ ಅಧಿಕಾರಿಗಳು ಬರುತ್ತಿಲ್ಲ. ಅಲ್ಲದೇ ಬರುವ ಅಧಿಕಾರಿಗಳು/ಸಿಬ್ಬಂದಿಗಳು ಅಭಿವೃದ್ಧಿಯ ಪ್ರಗತಿಯ ಕುರಿತಾದ ಸೂಕ್ತ ಮಾಹಿತಿ ಪಡೆದುಕೊಂಡು ಸಭೆಗೆ ಹಾಜರಾಗುವುದಿಲ್ಲ. ಕೆ.ಡಿ.ಪಿ. ಸಭೆಯ ನಿರ್ಣಯಗಳಿಗೆ ಇತರ ಇಲಾಖೆಯ ಅಧಿಕಾರಿಗಳು ಉತ್ತರದಾಯಿಗಳಾಗುತ್ತಿಲ್ಲ. ಯಾವುದೇ ಇಲಾಖೆಗಳು ಗ್ರಾಮ ಪಂಚಾಯತ್ ಬರೆದ ಪತ್ರಕ್ಕೆ ಉತ್ತರ ಸಹ ನೀಡುವಷ್ಟು ಬದ್ಧತೆ
ತೋರುವುದಿಲ್ಲ. ಕೆ.ಡಿ.ಪಿ. ಸಭೆಗಳಲ್ಲಿ ನಿಗದಿತ ನಮೂನೆಯಲ್ಲಿ ಮಾತ್ರ ಅಂಕಿ-ಅಂಶಗಳನ್ನು ಭರ್ತಿ ಮಾಡಿಕೊಡಲು ಅವಕಾಶವಿದ್ದು, ಸಮಗ್ರ
ಅಭಿವೃದ್ಧಿಯನ್ನು ಗಮನದಲ್ಲಿರಿಸಿಕೊಂಡು ಮಾಡಲಾದ ಮತ್ತು ಮಾಡಬೇಕಾದ ಅಭಿವೃದ್ಧಿಗಳ ಹಾಗೂ ಸಮಸ್ಯೆಗಳ ಕುರಿತಾದ ವಾಸ್ತವ
ಚರ್ಚೆ ನಡೆಯುತ್ತಿಲ್ಲ. ಇದರಿಂದಾಗಿ ಸಮಗ್ರ ಅಭಿವೃದ್ದಿಯ ಕುರಿತಾದ ಪ್ರಗತಿಯ ಬಗ್ಗೆ ವಿವರಗಳ ವರದಿ, ಮಾಹಿತಿ ಸರಿಯಾಗಿ ಸಿಗುವುದಿಲ್ಲ.

9. ಜಿ.ಪಿ.ಡಿ.ಪಿ: ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಸರ್ಕಾರದಿಂದ ವಿವಿಧ ಯೋಜನೆಗಳಿಗೆ ಬಿಡುಗಡೆಯಾಗುತ್ತಿರುವ
ಅನುದಾನವನ್ನು ವಿನಿಯೋಗಿಸುವಾಗ ವಿವಿಧ ಹಂತದಲ್ಲಿ ಜಿ.ಪಿ.ಡಿ.ಪಿ.ಯ ಅಡಿಯಲ್ಲಿ ಗ್ರಾಮ ಪಂಚಾಯತ್ ಯೋಜಿಸಿದ ಯೋಜನೆಗಳನ್ನೇ
ಆಯ್ಕೆ ಮಾಡಿಕೊಳ್ಳುತ್ತಿಲ್ಲ.

10. ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳಲ್ಲಿ ಪಂಚಾಯತ್ ಅಧಿಕಾರ: ಶಾಲಾಭಿವೃದ್ಧಿ ಸಮಿತಿ ಗ್ರಾಮ ಪಂಚಾಯತ್‍ನ
ಉಪಸಮಿತಿಯಾಗಿದ್ದರೂ ಗ್ರಾಮ ಪಂಚಾಯತ್ ಗಮನಕ್ಕೆ ತಾರದೇ ಇದರ ರಚನೆ ಮಾಡುವುದು, ನಿರ್ಣಯಗಳನ್ನು ಪಂಚಾಯತ್‍ಗಳಿಗೆ
ಕಳುಹಿಸದಿರುವುದು ಹಾಗೂ ಹಣಕಾಸಿನ ನಿರ್ವಹಣೆಯ ಲೆಕ್ಕಗಳನ್ನು ಕೊಡದೇ ಇರುವುದು ನಡೆಯುತ್ತಿದೆ. ಈ ಬಗ್ಗೆ, ಗ್ರಾಮ ಪಂಚಾಯತ್‍ಗಳ (ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳು) (ಮಾದರಿ) ಉಪ-ವಿಧಿ ಇದೆ. ಆದರೂ ಪ್ರಸ್ತುತ ಶಿಕ್ಷಣ ಇಲಾಖೆಯು ಈ ಉಪ-ವಿಧಿಯನ್ನು ಅನುಸರಿಸುತ್ತಿಲ್ಲ.

11. ಗ್ರಾಮ ಸಭೆಯ ನಿರ್ಣಯವೇ ಅಂತಿಮ: ಕಾಯಿದೆಯ ಆಶಯದಂತೆ ಗ್ರಾಮ ಸಭೆಯ ನಿರ್ಣಯಗಳಿಗೆ ಎಲ್ಲ ಹಂತದ ಸರ್ಕಾರಗಳು ಹಾಗೂ  ಇಲಾಖೆಗಳು ಬದ್ಧರಾಗಿರಬೇಕು. ವೈಯಕ್ತಿಕ ಫಲಾನುಭವಿಗಳ ಆಯ್ಕೆಯೂ ಸೇರಿದಂತೆ, ಗ್ರಾಮ ಸಭೆಯ ನಿರ್ಣಯವನ್ನು ಉಲ್ಲಂಘಿಸುವ ಪ್ರಯತ್ನಗಳು ನಡೆಯಬಾರದು.

12. ವಿವಿಧ ಇಲಾಖೆಗಳ ಜವಾಬ್ದಾರಿ ನಕ್ಷೆ: ಗ್ರಾಮ ಸ್ವರಾಜ್ ಕಾಯಿದೆಯಲ್ಲಿ ಉಲ್ಲೇಖಿಸಿರುವಂತೆ ಜವಾಬ್ದಾರಿ ನಕ್ಷೆಯನ್ನು ಶಿಕ್ಷಣ ಇಲಾಖೆ
ಮತ್ತು ಆರೋಗ್ಯ ಇಲಾಖೆಯಲ್ಲಿ ಮಾಡಲಾಗಿದೆ. ಆದರೆ ಅನುಷ್ಠಾನವಾಗಿಲ್ಲ.

13. ಅಧ್ಯಕ್ಷರ ಹಾಗೂ ಪಿ.ಡಿ.ಓ. ಜಂಟಿ ಭಾಗವಹಿಸುವಿಕೆಯಲ್ಲಿ ತಾಲೂಕು ಹಾಗೂ ಜಿಲ್ಲಾ ಮಟ್ಟದ ಸಭೆಗಳು: ಜಿಲ್ಲಾ ಮತ್ತು ತಾಲೂಕು
ಮಟ್ಟದಲ್ಲಿ ನಡೆಯುವ ಗ್ರಾಮ ಪಂಚಾಯತ್‍ಗೆ ಸಂಬಂಧಿಸಿದ ಯಾವುದೇ ಸಭೆಗಳನ್ನು ಪಿ.ಡಿ.ಓ. ಅವರೊಂದಿಗೆ ಮಾತ್ರ ಸಭೆ ನಡೆಸಿ
ತೀರ್ಮಾನ ತೆಗೆದುಕೊಳ್ಳುತ್ತಿದ್ದಾರೆ. ಹೀಗಾಗಿ ಗ್ರಾಮ ಪಂಚಾಯತ್‍ನ ವಾಸ್ತವ ಚಿತ್ರಣ ಸಿಗುವುದಿಲ್ಲವಾದ್ದರಿಂದ ಅಭಿವೃದ್ಧಿ ಕಾರ್ಯದಲ್ಲಿ
ತೊಡಕುಂಟಾಗುತ್ತಿದೆ.

ಒಂದು ಆಶಯ: ಈ ಹಕ್ಕೊತ್ತಾಯ ಸರ್ಕಾರದ ಗಮನ ಸೆಳೆಯಲಿ. ಸುಮಾರು 1 ಲಕ್ಷಕ್ಕೆ ಹತ್ತಿರದ ಸಂಖ್ಯೆಯಲ್ಲಿರುವ ಗ್ರಾಮ ಪಂಚಾಯತ್
ಚುನಾಯಿತ ಪ್ರತಿನಿಧಿಗಳ ಗ್ರಾಮಸ್ವರಾಜ್ಯದ ಕನಸಿಗೆ ಇಂಬು ಕೊಡಲಿ. ನಿರಂತರವಾದ ವಿವಿಧ ವಿಧಾನಗಳಲ್ಲಿ ಸರ್ಕಾರವನ್ನು ತಲುಪುವ
ಪ್ರಯತ್ನಗಳಿಗೆ ಮನ್ನಣೆ ಕೊಡದ, ಮಾತು ತಪ್ಪುವ, ಕೇವಲ ಭರವಸೆಗಳಲ್ಲಿ ಕಾಲ ಕಳೆಯುವ ಸರ್ಕಾರಗಳಿಗೆ ಇಂತಹ ಹಕ್ಕೊತ್ತಾಯಗಳಿಂದ
ಬಿಸಿ ಮುಟ್ಟಲಿ. ತಮ್ಮ ಅಧಿಕಾರಗಳನ್ನು ಪಡೆದುಕೊಳ್ಳುವ ಮೂಲಕ ಜನರ ಹತ್ತಿರದ ಸ್ವಯಂ ಸರ್ಕಾರವನ್ನು ಬಲಪಡಿಸುವ ಪ್ರಯತ್ನಗಳು
ಹೆಚ್ಚಾಗಲಿ. ಗ್ರಾಮ ಸರ್ಕಾರಗಳಿಗೆ ಅಧಿಕಾರ ಸಿಗಲಿ, ಗ್ರಾಮಸ್ಥರು ಭಾಗಿಯಾಗಲಿ, ಗ್ರಾಮಾಭಿವೃದ್ಧಿಯಾಗಲಿ.

ಸುರೇಶ್ ಎಸ್. ಜಿ.
ಕಾರ್ಯಕರ್ತರು
ದಿ ಕನ್ಸರ್ನ್ಡ್ ಫಾರ್ ಫಾರ್ ವರ್ಕಿಂಗ್ ಚಿಲ್ಡ್ರನ್ ಹಾಗೂ
ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನದ ಕಾರ್ಯಾಲಯದ ಸದಸ್ಯರು
9686737747

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!