spot_img
Monday, March 16, 2026
spot_img

ಕುಂದಾಪುರ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿನೋದ್‌ ಕ್ರಾಸ್ಟೋ ಅವರೊಂದಿಗೆ ವಿಶೇಷ ಸಂದರ್ಶನ

ಯಾವುದೇ ಅನುಮೋದನೆ ವಿಳಂಬವಾಗುತ್ತಿಲ್ಲ | ಎಲ್ಲಾ ಅರ್ಜಿಗಳ ವಿಲೇವಾರಿ ವಿಳಂಬವಿಲ್ಲದೆ ನಡೆಯುತ್ತಿದೆ.
ವಿವಾದ ಸೃಷ್ಟಿಸುವುದರಲ್ಲಿ ಬಿಜೆಪಿಯವರು ಮಾಸ್ಟರ್ಸ್‌ !
  • ನಗರ ಯೋಜನಾ ಪ್ರಾಧಿಕಾರದಲ್ಲಿ ಯಾವುದೇ ಅನುಮೋದನೆ ವಿಳಂಬವಾಗುತ್ತಿಲ್ಲ. ಒಂದು ತಿಂಗಳಲ್ಲಿ ಅನುಮೋದನೆ ನೀಡಲಾಗುತ್ತಿದೆ. ಕಚೇರಿಯಲ್ಲಿ ಸಿಬ್ಬಂದಿಗಳ ಕೊರತೆ ಇಲ್ಲ. ನಗರ ಯೋಜನಾ ಪ್ರಾಧಿಕಾರ, ನಗರ ಅಭಿವೃದ್ಧಿ ಪ್ರಾಧಿಕಾರವಾದಲ್ಲಿ ಇನ್ನಷ್ಟು ಯೋಜನೆಯನ್ನು ರೂಪಿಸಬಹುದಾಗಿದೆ.
  • ರಾಜಕಾರಣಕ್ಕಾಗಿ ಗಲಾಟೆ, ಗೌಜು ಮಾಡಿದ ಪಕ್ಷ ಕಾಂಗ್ರೆಸ್‌ ಅಲ್ಲ. ಕೋಮು ದ್ವೇಷಗಳನ್ನು ಹಬ್ಬಿಕೊಂಡು ಬಿಜೆಪಿ ಪಕ್ಷ ಸಂಘಟನೆ ಮಾಡುತ್ತಿದೆ. ನಾವು ಸಂವಿಧಾನದ ಮೂಲಕ ಜನರನ್ನು ತಲುಪುತ್ತಿದ್ದೇವೆ. ಬಿಜೆಪಿಯಂತೆ ಕಾಂಗ್ರೆಸ್‌ ಎಂದೂ ಸುಳ್ಳು ಹೇಳಿ ರಾಜಕಾರಣ ಮಾಡಿಲ್ಲ.
    -ವಿನೋದ್ ಕ್ರಾಸ್ಟೋ
    ಅಧ್ಯಕ್ಷರು, ಕುಂದಾಪುರ ನಗರ ಯೋಜನಾ ಪ್ರಾಧಿಕಾರ ಮತ್ತು
    ಕಾರ್ಯದರ್ಶಿ, ಕುಂದಾಪುರ ಬ್ಲಾಕ್‌ ಕಾಂಗ್ರೆಸ್‌

ಕರ್ನಾಟಕ ಯೋಜನಾ ಪ್ರಾಧಿಕಾರಗಳ ನಿಯಮಗಳು, ೧೯೯೬ರನ್ವಯ ಯೋಜನಾ ಪ್ರಾಧಿಕಾರ ತನ್ನ ಕಾನೂನಾತ್ಮಕ ಕಾರ್ಯವ್ಯಾಪ್ತಿಯೊಳಗೆ ಕಾರ್ಯನಿರ್ವಹಿಸುತ್ತಿದೆ. ಯೋಜನೆಗಳನ್ನು ತಯಾರಿಸುವುದು ಮತ್ತು ಅದನ್ನು ಅನುಷ್ಟಾನಗೊಳಿಸುವುದು ಯೋಜನಾ ಪ್ರಾಧಿಕಾರದ ಮುಖ್ಯ ಕರ್ತವ್ಯವಾಗಿರುತ್ತದೆ. ಏಕ ವಿನ್ಯಾಸ ನಕ್ಷೆಯ ಅನುಮೋದನೆಯನ್ನು ಈ ಹಿಂದೆ ಗ್ರಾಮ ಪಂಚಾಯತ್‌ ನೀಡುತ್ತಿತ್ತು. ಆದರೇ, ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರ್ಕಾರ ಕಳೆದ ವರ್ಷದ ಆಗಸ್ಟ್‌ ನಿಂದ ನಗರ ಯೋಜನಾ ಪ್ರಾಧಿಕಾರಕ್ಕೆ ಅದರ ಜವಾಬ್ದಾರಿಯನ್ನು ನೀಡಿದ್ದು, ಈ ಕಾರಣದಿಂದ ಗ್ರಾಮೀಣ ಭಾಗದ ಜನರಲ್ಲಿ ಕೆಲವು ಗೊಂದಲಗಳು ಉಂಟಾಗಿತ್ತು. ಸ್ಥಳೀಯ ಗ್ರಾಮ ಪಂಚಾಯತ್‌ ಮಟ್ಟದಲ್ಲೇ ಸುಲಭವಾಗಿಯೆ ಆಗುತ್ತಿದ್ದ ಅನುಮೋದನೆಯನ್ನು ನಗರ ಯೋಜನಾ ಪ್ರಾಧಿಕಾರದ ಜವಾಬ್ದಾರಿಗೆ ಒಪ್ಪಿಸಿರುವುದು ಭಿನ್ನಾಭಿಪ್ರಾಯಗಳಿಗೂ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ, ಎಲ್ಲಾ ಗೊಂದಲಗಳನ್ನು ನಿವಾರಿಸುವ ದೃಷ್ಟಿಯಿಂದ ಈ ಬಗ್ಗೆ ಮಾಹಿತಿ ನೀಡಬೇಕು ಎನ್ನುವ ಉದ್ದೇಶದಿಂದ ಕುಂದಾಪುರ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಹಾಗೂ ಕುಂದಾಪುರ ಬ್ಲಾಕ್‌ ಕಾಂಗ್ರೆಸ್‌ನ ಕಾರ್ಯದರ್ಶಿ ಆಗಿರುವ ವಿನೋದ್‌ ಕ್ರಾಸ್ಟೋ ಅವರನ್ನು ಜನಪ್ರತಿನಿಧಿ ಯೂಟ್ಯೂಬ್‌ ವಾಹಿನಿ ಇತ್ತೀಚೆಗೆ ಸಂದರ್ಶಿಸಿತ್ತು. ಆ ಸಂದರ್ಶನದ ಮುಖ್ಯ ಸಾರಾಂಶ ಇಲ್ಲಿದೆ.

ಸರ್ಕಾರ ನಿಮ್ಮನ್ನು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಿಸಿರುವುದರ ಬಗ್ಗೆ ಎಷ್ಟು ಸಂತಸವಿದೆ ?
ತುಂಬಾ ಸಂತಸವಿದೆ. ನಮ್ಮ ಪಕ್ಷ, ನಮ್ಮ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ  ಸರ್ಕಾರ ನನ್ನನ್ನು ಕುಂದಾಪುರ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಮಾಡಿರುವುದು ಅತೀವ ಸಂತಸವಿದೆ. ಕಾಂಗ್ರೆಸ್‌ನ ಸಾಮಾನ್ಯ ಕಾರ್ಯಕರ್ತನಾಗಿದ್ದು, ಬೇರೆ ಬೇರೆ ಹಂತಗಳಲ್ಲಿ ಪಕ್ಷದಲ್ಲಿ ಬೇರೆ ಬೇರೆ ಜವಾಬ್ದಾರಿಗಳನ್ನು ಹೊಂದಿ ಕಾರ್ಯ ನಿರ್ವಹಿಸಿದ್ದೆ. ಈಗ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿರುವುದು ಸಂತಸವಿದೆ. ಸರ್ಕಾರ ಹೊಸ ಜವಾಬ್ದಾರಿ ನೀಡಿದೆ.

ಗ್ರಾಮೀಣ ಭಾಗದ ಜನರಲ್ಲಿ ಈ ನಗರ ಯೋಜನಾ ಪ್ರಾಧಿಕಾರದ ಕಾರ್ಯವ್ಯಾಪ್ತಿಯ ಬಗ್ಗೆ ಅರಿವು ಕಡಿಮೆಯಿದೆ. ಈ ಬಗ್ಗೆ ಹೇಳಿ.
ಏಕ ವಿನ್ಯಾಸ ನಕ್ಷೆಗಳ ಅನುಮೋದನೆಯೂ ನಗರ ಯೋಜನಾ ಪ್ರಾಧಿಕಾರ ನೀಡುತ್ತಿರುವುದರಿಂದ ಗ್ರಾಮೀಣ ಭಾಗದ ಜನರಲ್ಲಿ ಒಂದಿಷ್ಟು ಗೊಂದಲ ಸೃಷ್ಟಿಯಾಗಿದೆ. ನಗರಾಭಿವೃದ್ಧಿ ಇಲಾಖೆಯ ಅಡಿಯಲ್ಲಿ ಬರುವ ಈ ಪ್ರಾಧಿಕಾರ, ಕರ್ನಾಟಕ ಟೌನ್ ಮತ್ತು ಕಂಟ್ರಿ ಪ್ಲಾನಿಂಗ್ ಆಕ್ಟ್ 1961 ರ ಅಡಿಯಲ್ಲಿ ವಿವಿಧ ಸಂಬಂಧಪಟ್ಟ ಇಲಾಖೆಗಳು/ಸಂಸ್ಥೆಗಳಿಗೆ ತಾಂತ್ರಿಕ ಅಭಿಪ್ರಾಯ ಮತ್ತು ಸಹಾಯವನ್ನು ಒದಗಿಸುತ್ತದೆ. ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಗಳಿಗೆ ಪರಿವರ್ತಿಸಲು ಕಂದಾಯ ಇಲಾಖೆಗೆ ತಾಂತ್ರಿಕ ಅಭಿಪ್ರಾಯವನ್ನು ಒದಗಿಸುವುದು. ಕಟ್ಟಡಗಳ ನಿರ್ಮಾಣಕ್ಕಾಗಿ ಅಧಿಕಾರ ವ್ಯಾಪ್ತಿಯಲ್ಲಿರುವ ಸ್ಥಳೀಯ ಸಂಸ್ಥೆಗಳಿಗೆ ಪ್ರಾರಂಭದ ಪ್ರಮಾಣಪತ್ರಗಳನ್ನು ನೀಡಲು ತಾಂತ್ರಿಕ ಅಭಿಪ್ರಾಯವನ್ನು ಒದಗಿಸುವುದು ಸೇರಿ ಹಲವು ಯೋಜನೆಗಳನ್ನು ತಯಾರಿಸುವುದು ಮತ್ತದನ್ನು ಅನುಷ್ಠಾನಗೊಳಿಸುವುದು ಪ್ರಾಧಿಕಾರದ ಕೆಲಸವಾಗಿದೆ.

ಒಂದು ಎಕರೆಗಿಂತ ಕಡಿಮೆ ಇರುವ ಪ್ರದೇಶಗಳ ವಿನ್ಯಾಸ ನಕ್ಷೆ ಅನುಮೋದನೆಯ ಜವಾಬ್ದಾರಿಯನ್ನು ಪಂಚಾಯತ್‌ ಗಳಿಗೆ ಮರಳಿ ನೀಡಬೇಕು ಎನ್ನುವ ಅಭಿಪ್ರಾಯ ಕೇಳಿ ಬಂದಿರುವುದರ ಬಗ್ಗೆ ಏನಂತೀರಿ ?ಪಂಚಾಯತ್‌ ಮಟ್ಟದಲ್ಲಿ ಅನುಮೋದನೆ ಸಿಗುತ್ತಿದ್ದಾಗಲೂ ಸಭೆಯಲ್ಲಿ ಅನುಮೋದನೆಯ ಪ್ರಸ್ತಾಪ ಆಗಬೇಕಿತ್ತು. ಸಭೆ ಕರೆಯುವುದು ತಿಂಗಳಿಗೆ ಒಮ್ಮೆ. ಸಭೆಯ ಬಳಿಕ, ಜಾಗದ ಪರಿಶೀಲನೆ, ದಾಖಲೆಗಳನ್ನು ಕ್ರೋಢಿಕರಿಸುವುದು ಎಲ್ಲವೂ ಸೇರಿ ಎರಡು ಮೂರು ತಿಂಗಳು ಕಾಲವಾಗುತ್ತಿತ್ತು. ಜನರಿಗೆ ಪಂಚಾಯತ್‌ ಹತ್ತಿರವಿತ್ತು ಹೊರತು, ಅನುಮೋದನೆ ಬೇಗ ಸಿಗುತ್ತಿತ್ತು ಅಂತ ಹೇಳುವುದಕ್ಕಾಗುವುದಿಲ್ಲ. ಆದರೇ, ಸರ್ಕಾರ ಅನುಮೋದನೆಯ ಜವಾಬ್ದಾರಿಯನ್ನು ನಗರ ಯೋಜನಾ ಪ್ರಾಧಿಕಾರದ ವ್ಯಾಪ್ತಿಗೆ ತರಬೇಕೆಂದು ಕಡ್ಡಾಯ ಮಾಡಿದಾಗ, ಆರಂಭದಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿರುವುದು ಸತ್ಯ. ಆದರೆ, ನಗರ ಯೋಜನಾ ಪ್ರಾಧಿಕಾರದಲ್ಲಿ ಯಾವುದೇ ಅನುಮೋದನೆ ವಿಳಂಬವಾಗುತ್ತಿಲ್ಲ. ಒಂದು ತಿಂಗಳಲ್ಲಿ ಅನುಮೋದನೆ ನೀಡಲಾಗುತ್ತಿದೆ.

ಕುಂದಾಪುರ ತಾಲೂಕಿನ ೪೫ ಪಂಚಾಯತ್‌ಗಳುಬೈಂದೂರು ತಾಲೂಕಿನ ೧೫ ಗ್ರಾಮ ಪಂಚಾಯತ್‌ಗಳ ಏಕ ವಿನ್ಯಾಸ ನಕ್ಷೆ ನೀಡುವ ಜವಾಬ್ದಾರಿ ಈಗ ನಗರ ಯೋಜನಾ ಪ್ರಾಧಿಕಾರದ್ದಾಗಿದೆ. ಸಿಬ್ಬಂದಿಗಳ ಕೊರತೆ ಇದೆಯಲ್ಲವೆ ?
ಒಂದು ಎಕರೆಗಿಂತ ಕಡಿಮೆ ವಿಸ್ತೀರ್ಣಕ್ಕೆ ಏಕ ನಿವೇಶನ ವಿನ್ಯಾಸ ನಕ್ಷೆಗೆ ಅನುಮೋದನೆ ನೀಡುವ, ಕಟ್ಟಡ ನಿರ್ಮಾಣ ಪರವಾನಿಗೆಗೆ ತಾಂತ್ರಿಕ ಅಭಿಪ್ರಾಯ ನೀಡುವ ಹಾಗೂ ಕುಂದಾಪುರ ನಗರ ಯೋಜನಾ ಪ್ರಾಧಿಕಾರದ ವ್ಯಾಪ್ತಿಯ ಸ್ಥಳೀಯ ಯೋಜನಾ ಪ್ರದೇಶಕ್ಕೆ ಮಹಾಯೋಜನೆ ತಯಾರಿಸುವ ಕರ್ತವ್ಯಕ್ಕೆ ಈ ತನಕ ನಿಯೋಜಿತಗೊಂಡಿರುವ ಅಧಿಕಾರಿ ಇತರ ದಿನಗಳಲ್ಲಿ ಅನ್ಯ ಕಾರ್ಯ ನಿಮಿತ್ತ ಇತರ ಕಚೇರಿಯ ಜವಾಬ್ದಾರಿ ನಿಭಾಯಿಸಬೇಕಿದ್ದ ಕಾರಣಕ್ಕಾಗಿ, ಕುಂದಾಪುರ ಕಚೇರಿಯಲ್ಲಿ ವಾರಕ್ಕೆ ಎರಡು ದಿನ ಮಾತ್ರವೇ ಲಭ್ಯವಿದ್ದರು. ಆ ಎಲ್ಲಾ ಕಾರಣದಿಂದಾಗಿ ಸಾರ್ವಜನಿಕ ಅರ್ಜಿ ವಿಲೇವಾರಿಗೆ, ಅಧಿಕಾರಿ ಸಮರ್ಪಕವಾಗಿ ಲಭ್ಯವಿಲ್ಲದಿರುವುದರಿಂದ ಸಾರ್ವಜನಿಕರಿಗೆ ವಿಳಂಬವಾಗಿ ತೊಂದರೆಯಾಗುತ್ತಿತ್ತು.  ನಗರಾಭಿವೃದ್ಧಿ ಪ್ರಾಧಿಕಾರಗಳು ಹಾಗೂ ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತಾಲಯ ವಾರಕ್ಕೆ ಐದು ದಿನಗಳಿಗೆ ಕುಂದಾಪುರ ಕಚೇರಿಗೆ ಸದಸ್ಯ ಕಾರ್ಯದರ್ಶಿ ಅಧಿಕಾರಿ ಕಾರ್ಯನಿರ್ವಹಿಸುವುದಕ್ಕೆ ಆದೇಶವನ್ನು ಇತ್ತೀಚೆಗೆ ಹೊರಡಿಸಿದೆ. ಪೂರ್ಣ ಅವಧಿಗೆ ಕುಂದಾಪುರದ ಯೋಜನಾ ಪ್ರಾಧಿಕಾರದ ಕಚೇರಿಯಲ್ಲಿ ಈಗ ಅಧಿಕಾರಿ ಇದ್ದಾರೆ. ಹಾಗಾಗಿ ಎಲ್ಲಾ ಅರ್ಜಿಗಳ ವಿಲೇವಾರಿ ವಿಳಂಬವಿಲ್ಲದೆ ನಡೆಯುತ್ತಿದೆ. ಕಚೇರಿಯಲ್ಲಿ ಸಿಬ್ಬಂದಿಗಳ ಕೊರತೆ ಇಲ್ಲ.

ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಯಾವ ದೂರದೃಷ್ಟಿ ಹಾಕಿಕೊಂಡಿದ್ದೀರಿ ?
ನಗರ ಯೋಜನಾ ಪ್ರಾಧಿಕಾರದಡಿಯಲ್ಲಿ ಸದ್ಯಕ್ಕೆ ಕುಂದಾಪುರ, ವಡೇರಹೋಬಳಿ ಗ್ರಾಮ, ಹಂಗಳೂರು ಗ್ರಾಮ ಬರುತ್ತವೆ. ಸದ್ಯಕ್ಕೆ ಈ ವ್ಯಾಪ್ತಿಯಲ್ಲಿ ಮಾಸ್ಟರ್‌ ಪ್ಲ್ಯಾನ್‌ ಮಾಡಿ ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ. ೧೭ ಚದರ ಕಿ.ಮೀ ನಲ್ಲಿ ೧೧ ಚದರ ಕಿ.ಮೀ ಡ್ರೈ ಲ್ಯಾಂಡ್‌, ಉಳಿದ ಆರು ಚದರ ಕಿ. ಮೀ ನೀರು(ನದಿ, ಸಮುದ್ರ) ಇದೆ. ಆ ಆರು ಚದರ ಕಿ. ಮೀ ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ ಮಾಡುವುದಕ್ಕೆ ನಮ್ಮ ಪ್ರಾಧಿಕಾರಕ್ಕೆ ಅಧಿಕಾರ ಇಲ್ಲ. ನಮ್ಮ ಕಾರ್ಯವ್ಯಾಪ್ತಿ ವಿಸ್ತರಣೆಗೊಂಡಲ್ಲಿ ಇನ್ನೂ ಉತ್ತಮವಾದ ಯೋಜನೆಗಳನ್ನು ನಾವು ಹಾಕಿಕೊಳ್ಳಬಹುದಾಗಿದೆ. ಕನಿಷ್ಠ ೪೦ ಚದರ ಕಿ. ಮೀ ನಮ್ಮ ಪ್ರಾಧಿಕಾರದ ವ್ಯಾಪ್ತಿಯೊಳಗೆ ಬಂದರೆ ಇನ್ನಷ್ಟು ಯೋಜನೆಗಳನ್ನು ಮಾಡಬಹುದಾಗಿದೆ. ಹಾಗಾಗಬೇಕಾದರೇ, ಕುಂದಾಪುರದೊಂದಿಗೆ ಗಡಿ ಹೊಂದಿಕೊಂಡಿರುವ ಯಾವುದಾದರೂ ಮೂರು ಗ್ರಾಮ ಪಂಚಾಯತ್‌ಗಳು ನಮ್ಮ ವ್ಯಾಪ್ತಿಯಲ್ಲಿ ಬರುವಂತಾಗಬೇಕು. ಹಾಗಾಗಬೇಕಾದಲ್ಲಿ ಪಂಚಾಯತ್‌ ನವರು ಒಪ್ಪಬೇಕು. ಇಲಾಖಾ ಮಟ್ಟದಲ್ಲಿ ಇದು ಆಗಬೇಕಿದೆ. ನಗರ ಯೋಜನಾ ಪ್ರಾಧಿಕಾರ ಎನ್ನುವುದು ಒಂದು ರೆಗ್ಯುಲೇಟರಿ ಬೋರ್ಡ್‌ ಅಷ್ಟೇ ಆಗಿದೆ.  ನಮ್ಮಲ್ಲಿನ ನಿಧಿ ಬಳಕೆಯಾಗಬೇಕಾದರೇ ನಗರ ಅಭಿವೃದ್ಧಿ ಪ್ರಾಧಿಕಾರ ಅಂತ ಬದಲಾಗಬೇಕಿದೆ. ಆಗ ಉದ್ಯಾನವನ, ತೋಟಗಾರಿಕೆ ಸೇರಿ ಇನ್ನಿತರ ಕಾರ್ಯಯೋಜನೆಯನ್ನು ಹಾಕಿಕೊಳ್ಳಬಹುದಾಗಿದೆ. ಅಲ್ಲಿಯವರೆಗೆ ನಮ್ಮಲ್ಲಿನ ನಿಧಿಯನ್ನು ನಾವು ಅಭಿವೃದ್ಧಿಗಾಗಿ ಬಳಸಿಕೊಳ್ಳುವುದಕ್ಕೆ ಅಧಿಕಾರ ನಮಗಿಲ್ಲ. ನಗರ ಯೋಜನಾ ಪ್ರಾಧಿಕಾರ, ನಗರ ಅಭಿವೃದ್ಧಿ ಪ್ರಾಧಿಕಾರವಾದಲ್ಲಿ ಇನ್ನಷ್ಟು ಯೋಜನೆಯನ್ನು ರೂಪಿಸಬಹುದಾಗಿದೆ.

ಬ್ಲಾಕ್‌ ಕಾಂಗ್ರೆಸ್‌ ಬಣಗಳಾಗಿ ಒಡೆದು ಹೋಗಿದೆಯಲ್ವೆ ಪಕ್ಷದ ಆಂತರಿಕ ಗೊಂದಲಗಳಿಗೆ ಕಾರಣ ?ಇದು ನೂರಕ್ಕೆ ನೂರು ಸುಳ್ಳು. ಕುಂದಾಪುರ ಬ್ಲಾಕ್‌ ಕಾಂಗ್ರೆಸ್‌ನಲ್ಲಿ ಯಾವುದೇ ಗೊಂದಲಗಳಿಲ್ಲ. ಯಾವುದೇ ಬಣಗಳಿಲ್ಲ. ನಾವೆಲ್ಲರೂ ಒಗ್ಗಟ್ಟಿನಲ್ಲಿದ್ದೇವೆ. ನಮ್ಮ ನಾಯಕತ್ವ ಕಾರ್ಯಕರ್ತರನ್ನು ತಲುಪುವುದರಿಂದಾದಿಯಾಗಿ ಎಲ್ಲವೂ ವ್ಯವಸ್ಥಿತವಾಗಿ ಪಕ್ಷದ ಪ್ಯಾಟರ್ನ್‌ ಅಲ್ಲಿಯೇ ನಡೆಯುತ್ತಿದೆ.

ನೀವು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕಗೊಂಡಿರುವುದಕ್ಕೆ ಕೆಲವು ಹಿರಿಯ ನಾಯಕರು ಅಸಮಾಧಾನ ವ್ಯಕ್ತಪಡಿಸಿರುವುದರ ಬಗ್ಗೆ.
ಆ ರೀತಿ ಯಾರೂ ಅಸಮಾಧಾನ ವ್ಯಕ್ತಪಡಿಸಿಲ್ಲ. ಒಂದು ಹುದ್ದೆಗಾಗಿ ಆಕಾಂಕ್ಷೆ ಇಟ್ಟುಕೊಳ್ಳುವುದು ತಪ್ಪಲ್ಲ. ಮೂರ್ನಾಲ್ಕು ಮಂದಿ ಈ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳಾಗಿದ್ದರು. ಆಕಾಂಕ್ಷಿಗಳೆಲ್ಲರೂ ಯೋಗ್ಯರೇ ಆಗಿದ್ದರು. ಅಂತಿಮವಾಗಿ ಒಂದು ಒಳ್ಳೆಯ ಮಾನದಂಡ ಮುಂದಿಟ್ಟುಕೊಂಡು ನನ್ನನ್ನು ಸರ್ಕಾರ ಅಧ್ಯಕ್ಷನನ್ನಾಗಿ ನೇಮಿಸಿದೆ. ಸರ್ಕಾರದ ತೀರ್ಮಾನಕ್ಕೆ ಒಪ್ಪಲೇಬೇಕು. ಅದನ್ನು ಹೊರತಾಗಿ ಬೇರೆ ಯಾವ ಅಸಮಾಧಾನವೂ ಇಲ್ಲ.

ಬ್ಲಾಕ್‌ ಕಾಂಗ್ರೆಸ್‌ ಸಂಘಟನಾತ್ಮಕವಾಗಿ ಸೋಲುತ್ತಿರುವುದಕ್ಕೆ ಕಾರಣ ಕಾರ್ಯಕರ್ತರನ್ನು ಕಾಂಗ್ರೆಸ್‌ ತಲುಪುತ್ತಿಲ್ಲ ಎನ್ನುವ ಅಭಿಪ್ರಾಯವಿದೆ.
ಉಡುಪಿ ಜಿಲ್ಲೆಯಲ್ಲೇ ಅತಿ ಹೆಚ್ಚು ಕಾಂಗ್ರೆಸ್‌ ಬೆಂಬಲಿತ ಪಂಚಾಯತ್‌ ಸದಸ್ಯರು ಗೆದ್ದಿರುವುದೇ, ಕುಂದಾಪುರ ಬ್ಲಾಕ್‌ ನಲ್ಲಿ. ಕಾಂಗ್ರೆಸ್‌ ತಳಮಟ್ಟದಲ್ಲಿ ಗಟ್ಟಿಯಾಗಿದೆ. ಕೆಪಿಸಿಸಿ ನಿರ್ದೇಶನದಲ್ಲೇ ಬ್ಲಾಕ್‌ ಕಾಂಗ್ರೆಸ್‌ ಕೆಲಸ ಮಾಡುತ್ತಿದೆ. ನಮ್ಮ ನಾಯಕತ್ವ ಕಾರ್ಯಕರ್ತರನ್ನು ವಿಶ್ವಾಸದಲ್ಲಿಟ್ಟುಕೊಂಡಿದೆ. ಬಿಜೆಪಿಯಂತಹ ರೀಚೆಬಲ್‌ ತಂತ್ರವನ್ನು ಕಾಂಗ್ರೆಸ್‌ ಪಾಲಿಸುತ್ತಿಲ್ಲ. ಕೋಮು ದ್ವೇಷಗಳನ್ನು ಹಬ್ಬಿಕೊಂಡು ಬಿಜೆಪಿ ಪಕ್ಷ ಸಂಘಟನೆ ಮಾಡುತ್ತಿದೆ. ನಾವು ಸಂವಿಧಾನದ ಮೂಲಕ ಜನರನ್ನು ತಲುಪುತ್ತಿದ್ದೇವೆ. ಕಾರ್ಯಕರ್ತರನ್ನು ತಲುಪುತ್ತಿದ್ದೇವೆ.

ವಿರೋಧ ಪಕ್ಷ ಬಿಜೆಪಿಆಡಳಿತ ಪಕ್ಷದ ವಿರುದ್ಧ ನಿರಂತರ ಆರೋಪ ಮಾಡುತ್ತಿದ್ದರೂ ಕಾಂಗ್ರೆಸ್‌ನಿಂದ ಪ್ರತಿರೋಧ ಕಾಣಿಸುತ್ತಿಲ್ಲವಲ್ಲ ?
ಬಿಜೆಪಿಯವರು ವಿವಾದ ಸೃಷ್ಟಿ ಮಾಡುವುದರಲ್ಲಿ ಮಾಸ್ಟರ್ಸ್‌. ಕಾಂಗ್ರೆಸ್‌ ಎಂದಿಗೂ ಸುಳ್ಳಿನ ವಿರುದ್ಧ ಹೋರಾಟ ಮಾಡುತ್ತಾ ಬಂದಿದೆ. ರಾಜಕಾರಣಕ್ಕಾಗಿ ಗಲಾಟೆ ಗೌಜು ಮಾಡಿದ ಪಕ್ಷ ಕಾಂಗ್ರೆಸ್‌ ಅಲ್ಲ. ವಿರೋಧ ಪಕ್ಷದಲ್ಲಿದ್ದುಕೊಂಡು ಬಿಜೆಪಿ ಆಡಳಿತ ಪಕ್ಷದ ವಿರುದ್ಧ ಆರೋಪ ಮಾಡುವುದು ಸಹಜ. ಅವರು ಆರೋಪ ಮಾಡಲೇ ಬೇಕು. ಜನರು ಅದಕ್ಕಾಗಿಯೇ ಅವರನ್ನು ವಿರೋಧ ಪಕ್ಷದಲ್ಲಿ ಕೂರಿಸಿದ್ದಾರೆ. ಆದರೇ, ಸರಿಯಾದ ರೀತಿಯಲ್ಲಿ ವಿರೋಧ ಮಾಡಲಿ. ಜನರು ನಮ್ಮ ಪಕ್ಷದ ಸಿದ್ದಾಂತವನ್ನು ಒಪ್ಪಿಯೇ ನಮಗೆ ರಾಜ್ಯದಲ್ಲಿ ಅಧಿಕಾರ ಕೊಟ್ಟಿದ್ದಾರೆ. ಮತ ಸೆಳೆಯುದಕ್ಕಾಗಿ ಬಿಜೆಪಿ ಸುಳ್ಳು ಹೇಳುತ್ತಲೇ ಬಂದಿದೆ. ಬಿಜೆಪಿಯಂತೆ ಕಾಂಗ್ರೆಸ್‌ ಎಂದೂ ಸುಳ್ಳು ಹೇಳಿ ರಾಜಕಾರಣ ಮಾಡಿಲ್ಲ. ಬಿಜೆಪಿಯ ಸುಳ್ಳು ಆರೋಪಗಳಿಗೆಲ್ಲಾ ಪ್ರತಿರೋಧ ಮಾಡುತ್ತಾ ಇದ್ದರೇ, ನಾವು ಅದರಲ್ಲೇ ಕಾಲ ಕಳೆಯಬೇಕಾಗುತ್ತದೆ. ನಮ್ಮ ಉದ್ದೇಶ ಜನರಿಗೆ ಒಳ್ಳೆಯ ಆಡಳಿತ ಕೊಡಬೇಕೆಂಬುವುದಾಗಿದೆ. ಒಳ್ಳೆಯ ಆಡಳಿತ ನೀಡುವುದಕ್ಕೆ ಕಾಂಗ್ರೆಸ್‌ ನಿತ್ಯ ನಿರಂತರ ಪ್ರಯತ್ನಿಸುತ್ತಿದೆ.

ಸಂದರ್ಶನ : ಶ್ರೀರಾಜ್‌ ವಕ್ವಾಡಿ 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!