spot_img
Monday, March 16, 2026
spot_img

ಕಾಂಗ್ರೆಸ್‌ ನಾಯಕತ್ವ ಮತ್ತು ಕಳಪೆ ತಂತ್ರಗಾರಿಕೆ

ʼನಾಯಕತ್ವʼ ಜನರನ್ನು ತಲುಪುವ ಮಾದರಿಯಲ್ಲಿ ಬದಲಾಯಿಸಿಕೊಳ್ಳುವುದೇ ಕಾಂಗ್ರೆಸ್‌ ?  

 ಒಂದು ರಾಷ್ಟ್ರೀಯ ಪಕ್ಷ ರಾಷ್ಟ್ರ ರಾಜಧಾನಿಯಲ್ಲಿಯೇ ತನ್ನ ಅಸ್ತಿತ್ವವನ್ನು ಸಂಪೂರ್ಣವಾಗಿ ಕಳೆದುಕೊಂಡಿರುವುದರ ಬಗ್ಗೆ ಇಂದಿನ ಸ್ಪಾಟ್‌ಲೈಟ್. ದೆಹಲಿ ಎಲ್ಲಾ ರಾಷ್ಟ್ರೀಯ ಪಕ್ಷಗಳಿಗೆ ಮಹತ್ತರವಾದದ್ದು. ರಾಷ್ಟ್ರ ರಾಜಧಾನಿಯಾಗಿರುವುದರಿಂದ ಕೇಂದ್ರದಲ್ಲಿ ಅಧಿಕಾರಲ್ಲಿರುವ ಪಕ್ಷಕ್ಕೂ, ವಿಪಕ್ಷಗಳಿಗೂ ದೆಹಲಿಯನ್ನು ತಮ್ಮ ವಶಕ್ಕೆ ಪಡೆದುಕೊಳ್ಳಬೇಕು ಎನ್ನುವುದೇ ಗುರಿ. ಕ್ಯಾಪಿಟಲ್‌ ಸಿಟಿಯಲ್ಲೇ ಅಧಿಕಾರ ಕಳೆದುಕೊಂಡರೆ, ಕೇಂದ್ರದಲ್ಲಿ ಸರ್ಕಾರ ನಡೆಸುತ್ತಿದ್ದರೂ, ಅಧಿಕಾರದ ಗತ್ತು ಗಾಂಭೀರ್ಯ ಇಲ್ಲದಿರುವಂತೆಯೆ ಸರಿ. ಅಥವಾ ಕ್ಯಾಪಿಟಲ್‌ ಕಳೆದುಕೊಂಡು ಅಧಿಕಾರ ನಡೆಸುವುದೆಂದರೆ ಅದೊಂಥರ ಹಿಂದಿನ ಎಲುಬನ್ನೆ ಕಳೆದುಕೊಂಡಂತೆ. ಕಳೆದ ಹತ್ತು ವರ್ಷಗಳಲ್ಲಿ ದೆಹಲಿಯನ್ನು ಆಳಿದ್ದು ಕೇಜ್ರೀವಾಲ್ ನೇತೃತ್ವದ ಆಮ್‌ ಆದ್ಮಿ ಪಾರ್ಟಿ. ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಿದ್ದರೂ ದೆಹಲಿಯ ರಾಜಕಾರಣವನ್ನು ಹಿಡಿಯುವುದಕ್ಕೆ ಸಾಧ್ಯವಾಗಿರಲಿಲ್ಲ. ಅಂತಿಮವಾಗಿ ಬಿಜೆಪಿ ಈ ಬಾರಿ ಅಧಿಕಾರಕ್ಕೇರಿದೆ. ಇನ್ನು, ಕಾಂಗ್ರೆಸ್‌ ಅಂತೂ ಆಮ್‌ ಆದ್ಮಿ ಪಾರ್ಟಿ ಅಸ್ತಿತ್ವಕ್ಕೆ ಬಂದ ಮೇಲೆ ದೆಹಲಿಯಲ್ಲಿ ಅಕ್ಷರಶಃ ನಿಶ್ಯಕ್ತಿಯಿಂದ ಬಳಲಿದೆ.

ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ಎಂದು ಹೇಳಿಕೊಳ್ಳುವ ಕಾಂಗ್ರೆಸ್‌, ರಾಷ್ಟ್ರ ರಾಜಧಾನಿ ದೆಹಲಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸತತ ಮೂರನೇ ಬಾರಿಯೂ ಶೂನ್ಯ ಬರೆದಿದೆ. ಹಾಗಾಗಿ ದೆಹಲಿ ರಾಜಕಾರಣದಲ್ಲಿ ಕಾಂಗ್ರೆಸ್‌ ಈ ಬಾರಿಯೂ ಕಳೆದುಕೊಂಡಿದ್ದು ಏನೂ ಇಲ್ಲ. ರಾಷ್ಟ್ರ ರಾಜಧಾನಿಯಲ್ಲೇ ಕಳೆದ ಹತ್ತು ವರ್ಷಗಳಿಂದೀಚೆಗೆ ಒಂದೇ ಒಂದು ಶಾಸಕ ಸ್ಥಾನ ಗಿಟ್ಟಿಸಿಕೊಳ್ಳದ, ಒಂದೇ ಒಂದು ಸಂಸತ್ ಸ್ಥಾನವನ್ನು ಪಡೆದುಕೊಳ್ಳದ ಕಾಂಗ್ರೆಸ್, ಈ ಬಾರಿ ಮರ್ಯಾದೆಗೂ ಅಂಜದೆ ಚುನಾವಣೆಗೆ ಸ್ಪರ್ಧಿಸಿದ್ದೆ ದೊಡ್ಡದು. ಇದನ್ನು ಕಾಂಗ್ರೆಸ್‌ನ ದುರಿತ ಕಾಲ ಎನ್ನಬೇಕೋ ಅಥವಾ ಕಾಂಗ್ರೆಸ್‌ ನಾಯಕತ್ವದ ದಾರಿದ್ರ್ಯ ಎನ್ನಬೇಕೋ ತಿಳಿಯುತ್ತಿಲ್ಲ.

ಬಹುಶಃ ಕಾಂಗ್ರೆಸ್‌ನಂತಹ ದೇಶದ ಅತ್ಯಂತ ಹಿರಿಯ ಪಕ್ಷ ದೇಶದ ರಾಜಧಾನಿಯಲ್ಲೇ ಒಂದೇ ಒಂದು ಕ್ಷೇತ್ರ ಪಡೆದುಕೊಳ್ಳದೆ ಹೀನಾಯ ಸೋಲನುಭವಿಸುತ್ತದೆ ಎಂದರೆ, ಅದರ ನಾಯಕತ್ವ ಮತ್ತು ಅದರ ಸೈದ್ಧಾಂತಿಕ ಗೊಂದಲವನ್ನೇ ಎತ್ತಿ ಹಿಡಿಯುತ್ತದೆ. ಕಳೆದ ಹತ್ತು ವರ್ಷಗಳಿಂದ ಕಾಂಗ್ರೆಸ್‌ ಪುನರುಜ್ಜೀವನವನ್ನು ಕಾಣುವುದಕ್ಕೂ ಸಾಧ್ಯವಾಗದಷ್ಟರ ಮಟ್ಟಿಗೆ ಕೃಶವಾಗಿದೆ. ಕಾಂಗ್ರೆಸ್‌ ರಾಜಕಾರಣವನ್ನು ಮಣ್ಣು ಮುಕ್ಕಿಸಬೇಕು ಎಂದು ಹಠ ತೊಟ್ಟ ಪಕ್ಷವನ್ನು ಚೂರು ಅಲುಗಾಡಿಸುವುದಕ್ಕೆ ಸ್ವತಂತ್ರವಾಗಿ ಕಾಂಗ್ರೆಸ್‌ ಪಕ್ಷಕ್ಕೆ ಇದುವರೆಗೆ ಸಾಧ್ಯವಾಗಿಲ್ಲ ಎನ್ನುವುದೇ ಬಹುಶಃ ಕಳೆದೊಂದು ದಶಕದ ರಾಜಕೀಯದ ದೊಡ್ಡ ದುರಂತವೆಂದೇ ಹೇಳಬಹುದು.

ರಾಷ್ಟ್ರ ರಾಜಧಾನಿಯ ಚುನಾವಣೆಗಳಲ್ಲಿನ ನಿರಂತರ ಸೋಲಿನಲ್ಲಿ ಕಾಂಗ್ರೆಸ್‌ಗೆ ಬಹಳ ದೊಡ್ಡ ಪಾಠವಿದೆ. ಕಾಂಗ್ರೆಸ್‌ ಅದನ್ನು ತುರ್ತಾಗಿ ಅರ್ಥ ಮಾಡಿಕೊಳ್ಳುವ ಅಗತ್ಯವಿದೆ. ದೆಹಲಿಯ ಚುನಾವಣಾ ಫಲಿತಾಂಶದ ಬಳಿಕ ಕಾಂಗ್ರೆಸ್‌ನ ನೈತಿಕ ಸ್ಥೈರ್ಯಕ್ಕೆ ಬಲವಾದ ಪೆಟ್ಟು ಬಿದ್ದಿದ್ದಂತೂ ಸತ್ಯ. ಕಾಂಗ್ರೆಸ್‌ ಕಳೆದ ಕೆಲವು ವರ್ಷಗಳಿಂದ ರಾಷ್ಟ್ರ ಮಟ್ಟದ ರಾಜಕಾರಣದಲ್ಲಿ ಪದೆ ಪದೆ ತಿನ್ನುತ್ತಿರುವ ಬಲವಾದ ಏಟಿನಿಂದ ಚೇತರಿಸಿಕೊಳ್ಳುವುದಕ್ಕೂ ಪ್ರಯತ್ನಿಸದಿದ್ದರೆ ಅದರ ಭವಿಷ್ಯ ಚಿಂತಾಜನಕವಾಗಿದೆ. ಚುನಾವಣಾ ತಂತ್ರ ಹೆಣೆಯುವುದರಲ್ಲಿ, ಪಕ್ಷ ಸಂಘಟನೆ ಮಾಡುವುದರಲ್ಲಿ ಕಾಂಗ್ರೆಸ್ ಸೋಲುತ್ತಿದೆ. ಕಾಂಗ್ರೆಸ್‌ನ ನಾಯಕತ್ವ ತಳಮಟ್ಟದ ರಾಜಕಾರಣಕ್ಕೆ ತಲುಪದೆ ಇರುವುದೆ ಕಾಂಗ್ರೆಸ್‌ ಈಗ ಅನುಭವಿಸುತ್ತಿರುವ ದೊಡ್ಡ ಸಮಸ್ಯೆಗೆ ಮೂಲ ಕಾರಣ.

ಇನ್ನು, ರಾಹುಲ್‌ ಗಾಂಧಿ ಭಾರತ್‌ ಜೋಡೋ ಯಾತ್ರೆ, ಭಾರತ್‌ ಜೋಡೋ ನ್ಯಾಯ್‌ ಯಾತ್ರೆಗಳ ಮೂಲಕ ದೇಶವ್ಯಾಪಿ ತಮ್ಮ ರಾಜಕೀಯ ವರ್ಚಸ್ಸನ್ನು ವೃದ್ಧಿಸಿಕೊಂಡಿರುವುದು ಮತ್ತು ದೇಶದ ಜ್ವಲಂತ ಸಮಸ್ಯೆಗಳ ಬಗ್ಗೆ ರಾಹುಲ್‌ ಧ್ವನಿ ಎತ್ತುತ್ತಿರುವುದರ ಬಗ್ಗೆ ಸ್ವತಃ ಬಿಜೆಪಿಗೂ ಸಣ್ಣ ಭಯ ಇದೆ. ಆದರೇ, ನರೇಂದ್ರ ಮೋದಿ ಅವರಿಗೆ ಬಿಜೆಪಿ ಮತ್ತು ʼಹಿಂದೂ ಧರ್ಮ ರಾಜಕಾರಣʼ ತಂದು ಕೊಟ್ಟ ಚರಿಷ್ಮಾದ ಎದುರಿಗೆ ಸಮನಾಗಿ ರಾಹುಲ್‌ ಗಾಂಧಿ, ಜನರ ಕಣ್ಣಿಗೆ ಕಾಣಿಸುತ್ತಿಲ್ಲವಾದ್ದರಿಂದ ʼರಾಹುಲ್‌ ಗಾಂಧಿಯಂತಹ ನಾಯಕತ್ವದ ಎಲ್ಲಾ ಅರ್ಹತೆʼಯೂ ಬದಿಗೆ ಸರಿಯುತ್ತಿದೆ. ಬಹುಶಃ ಅದು ಕಾಂಗ್ರೆಸ್‌ ಮತ್ತು ರಾಹುಲ್‌ ಅವರ ತಪ್ಪು ಕೂಡ ಹೌದು.

“ಕಾಂಗ್ರೆಸ್‌ ಸಿದ್ದಾಂತ ಕ್ರಾಂತಿಕಾರಿ ಸಿದ್ದಾಂತವಾಗಿದೆ. ಅಹಿಂಸ್ಮಾತಕವಾಗಿ ನಾವು ಬ್ರಿಟೀಷರ ವಿರುದ್ಧ ಹೋರಾಟ ನಡೆಸಿದ್ದೇವು. ಈ ಮೂಲಕ ನಾವು ಬ್ರಿಟೀಷರನ್ನು ಸೋಲಿಸಿದೆವು. ಭಾರತೀಯರ ಹೃದಯದಲ್ಲಿ ಈ ಸಿದ್ದಾಂತವು ಅತ್ಯಂತ ಪ್ರಬಲವಾಗಿದೆ. ಪ್ರಸ್ತುತ ಈ ಸಿದ್ಧಾಂತದ ಮೇಲೆ ಆರ್‌.ಎಸ್‌.ಎಸ್‌ ಸಿದ್ಧಾಂತವು ದಾಳಿ ನಡೆಸುತ್ತಿದೆ. ಆರ್‌.ಎಸ್‌.ಎಸ್‌ ಸಿದ್ಧಾಂತವು ಹಿಂಸಾತ್ಮಕ ಮತ್ತು ಪುರುಷ ದುರಾಭಿಮಾನದ ಸಿದ್ಧಾಂತವಾಗಿದೆ. ಕಾಂಗ್ರೆಸ್ ನ ಮೂಲ ಸಿದ್ಧಾಂತದ ರಕ್ಷಣೆಯಿಂದ ಕಾಂಗ್ರೆಸ್‌ ಅನ್ನು ಬಲಪಡಿಸಬೇಕಿದೆ. ದೇಶದಾದ್ಯಂತ ಎಲ್ಲೆಲ್ಲಿ ಕಾಂಗ್ರೆಸ್‌ ಸಿದ್ಧಾಂತದ ಮೇಲೆ ದಾಳಿ ನಡೆಯುತ್ತಿದೆಯೋ ಅಲ್ಲೆಲ್ಲಾ ಕಾಂಗ್ರೆಸ್‌ ಸಂಘಟನೆಯು ನಮ್ಮ ಮೂಲ ಸಿದ್ಧಾಂತದ ರಕ್ಷಣೆಗೆ ನಿಲ್ಲಬೇಕು” ಎಂದು ರಾಹುಲ್ ಗಾಂಧಿ ಪಕ್ಷವನ್ನು ಉದ್ದೇಶಿಸಿ ಹೇಳಿರುವುದು ರಾಹುಲ್‌ ಅವರಿಗಿರುವ ಸ್ಥಿತಪ್ರಜ್ಞೆ. ಆದರೇ, ರಾಹುಲ್‌ ಮುಖ್ಯ ರಾಜಕಾರಣಕ್ಕೆ ಬರುವುದಕ್ಕೂ ಮೊದಲು ಕಾಂಗ್ರೆಸ್‌ನ ಹಿರಿಯ ತಲೆಮಾರಿನ ನಾಯಕರು ಪಕ್ಷದ ವಿಷಮ ಸ್ಥಿತಿಯಲ್ಲಿ ಏನು ಮಾಡುತ್ತಿದ್ದರು ಎನ್ನುವುದು ಇಲ್ಲಿ ದೊಡ್ಡ ಪ್ರಶ್ನೆ. ರಾಹುಲ್‌ ಹೇಳಿರುವ ಎಲ್ಲಾ ವಿಷಯವೂ ಕಾಂಗ್ರೆಸ್‌ನ ದೃಷ್ಟಿಯಲ್ಲಿ ಸರಿ. ಆದರೇ, ಒಂದು ಸಿದ್ಧಾಂತ, ಇನ್ನೊಂದು ಸಿದ್ಧಾಂತದ ಮೇಲೆ ದಾಳಿ ಮಾಡುವುದು ಅಥವಾ ತನ್ನ ಸಿದ್ಧಾಂತದ ಗೆಲುವಿಗಾಗಿ ಶ್ರಮಿಸುವುದು ಲೋಕದ ಸಹಜ ನಿಯಮ. ಕಾಂಗ್ರೆಸ್‌ ನ ಮೂಲ ಸಿದ್ಧಾಂತದ ಮೇಲೆ ಆರ್‌.ಎಸ್‌.ಎಸ್‌ ಸಿದ್ಧಾಂತ ದಾಳಿ ಮಾಡುತ್ತಿರುವಾಗ ಕಾಂಗ್ರೆಸ್‌ ಎಚ್ಚರ ತಪ್ಪಿತ್ತೇ ?ಅದಕ್ಕೆ ಕಾಂಗ್ರೆಸ್‌ ಸಡಿಲಗೊಂಡಿರುವುದೇ ಕಾರಣ ಅಲ್ಲವೇ ? ಎನ್ನುವುದನ್ನು ಕಾಂಗ್ರೆಸ್‌ ಮತ್ತು ರಾಹುಲ್‌ ಪರಾಮರ್ಶಿಸಿಕೊಳ್ಳಬೇಕಿದೆ. ಇನ್ನು, ರಾಹುಲ್‌ ಹೇಳಿರುವುದನ್ನು ಕಾಂಗ್ರೆಸ್‌ನ ಎಷ್ಟು ನಾಯಕರು ಸ್ವೀಕರಿಸುತ್ತಾರೆ ಅಥವಾ ರಾಹುಲ್‌ ಹೇಳಿರುವುದು ಸ್ಥಳೀಯ ಮಟ್ಟದ ಎಷ್ಟು ಕಾರ್ಯಕರ್ತರಿಗೆ ತಲುಪಿದೆ/ತಲುಪುತ್ತದೆ ಎನ್ನುವುದು ಕೂಡ ಇಲ್ಲಿ ಪ್ರಶ್ನೆಯಾಗಿಯೇ ಉಳಿದಿದೆ.

ದೇಶದೆಲ್ಲೆಡೆಯ ಕಾಂಗ್ರೆಸ್‌ನ ಈ ದಯನೀಯ ಸ್ಥಿತಿಗೆ ತಳಮಟ್ಟಕ್ಕೆ ಕಾಂಗ್ರೆಸ್‌ ನಾಯಕತ್ವ ತಲುಪದಿರುವುದೇ ಮೂಲ ಕಾರಣ. ಹಾಗಾಗಿ ಬಹುಶಃ ಕಾಂಗ್ರೆಸ್‌ ತನ್ನ ನಾಯಕತ್ವವನ್ನು ತಲುಪಿಸುವ ಮಾದರಿಯನ್ನು ಅಗತ್ಯವಾಗಿ ಪರಿವರ್ತಿಸಿಕೊಳ್ಳಬೇಕಿದೆ. ಪಕ್ಷ ಸಂಘಟನೆಗಾಗಿ ರಾಹುಲ್‌ ಅವರಂತಹ ಸಮಾನ ಮನಸ್ಸಿನ ನಾಯಕರು, ಯುವಕರು, ಚಿಂತಕರನ್ನು ಕಾಂಗ್ರೆಸ್‌ ಅಗತ್ಯವಾಗಿ ವೃದ್ಧಿಸಿಕೊಳ್ಳಬೇಕಿದೆ. ಈಚೆಗಿನ ವರ್ಷಗಳಲ್ಲಿ ಕಾಂಗ್ರೆಸ್‌ ಅನುಸರಿಸುತ್ತಿರುವ ಯಾವ ಕಾರ್ಯತಂತ್ರವೂ ಮತದಾರರ ಮೇಲೆ ಸುದೀರ್ಘ ಪರಿಣಾಮ ಬೀರುತ್ತಿಲ್ಲ. ಇವೆಲ್ಲವೂ ಕಾಂಗ್ರೆಸ್‌ ದೇಶವ್ಯಾಪಿ ಹಿನ್ನೆಡೆ ಅನುಭವಿಸುತ್ತಿರುವುದಕ್ಕೆ ಮೂಲ ಕಾರಣ. ಇವೆಲ್ಲವನ್ನು ಅರ್ಥ ಮಾಡಿಕೊಳ್ಳುವವರೆಗೆ ಕಾಂಗ್ರೆಸ್‌ ಸುಧಾರಿಸುವುದಿಲ್ಲ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷಗಳ ಗುರುತು ಅವು ಪಾಲಿಸುವ ಸಿದ್ದಾಂತಗಳ ಮೇಲೆ ಆಧಾರವಾಗಿರುತ್ತದೆ. ಬಿಜೆಪಿಯ ಯಾರೇ ಒಬ್ಬ ಕಾರ್ಯಕರ್ತನನ್ನು ಕರೆದು ಕೇಳಿದರೆ, ತಡ ಮಾಡದೆ ನಮ್ಮದು ʼಹಿಂದುತ್ವ ಸಿದ್ಧಾಂತʼ, ʼಹಿಂದುತ್ವವೇ ನಮ್ಮ ರಾಷ್ಟ್ರೀಯತೆʼ ಎಂದು ಹೇಳುತ್ತಾನೆ. ಆದರೇ, ಕಾಂಗ್ರೆಸ್‌ ಕಾರ್ಯಕರ್ತ ಏನು ಹೇಳುತ್ತಾನೆ ? ಕಾಂಗ್ರೆಸ್‌ ಕಾರ್ಯಕರ್ತ ಅಕ್ಷರಶಃ ತಡವರಿಸುತ್ತಾನೆ. ಇದು ಕಾಂಗ್ರೆಸ್‌ ಹಿರಿಯ ನಾಯಕರಲ್ಲಿಯೂ ಇರುವ ಸಮಸ್ಯೆ. ʼಸೆಕ್ಯುಲರಿಸಂʼ ನಮ್ಮ ಸಿದ್ಧಾಂತ ಎಂದು ವಾದಿಸುವುದಾದರೇ, ಹಿಂದುತ್ವ, ಹಿಂದೂ ಧರ್ಮವನ್ನು, ಹಿಂದೂ ಧಾರ್ಮಿಕ ನಂಬಿಕೆಗಳನ್ನು ಯಾಕೆ ಅವಮಾನಿಸುತ್ತೀರಿ ಎನ್ನುವ ವಾದ ಖಂಡಿತ ಎದುರಾಗುತ್ತದೆ. ʼಸಂವಿಧಾನದ ಆಶಯಗಳೇ ನಮ್ಮ ಸಿದ್ಧಾಂತʼ ಎಂದು ಎಷ್ಟು ಮಂದಿ ಕಾಂಗ್ರೆಸ್‌ ಕಾರ್ಯಕರ್ತರು ಧೈರ್ಯ ಮಾಡಿ ಹೇಳುತ್ತಾರೆ ? ಧೈರ್ಯ ಮಾಡಿ ಹೇಳದಿರುವಂತೆ ಆಗಿರುವುದೇ ಕಾಂಗ್ರೆಸ್‌ ನಾಯಕತ್ವದ ಕಾರಣದಿಂದ. ಹಾಗಾಗಿ ದೇಶದಾದ್ಯಂತ ಕಾಂಗ್ರೆಸ್ ನಾಯಕತ್ವ, ಪಕ್ಷದ ಕಾರ್ಯಕರ್ತರನ್ನು ಹಾಗೂ ಜನರನ್ನು ತಲುಪುವ ಮಾದರಿಯಲ್ಲಂತೂ ಅಗತ್ಯವಾಗಿ ಬದಲು ಮಾಡಿಕೊಳ್ಳಬೇಕಿದೆ. ಬಹುಶಃ, ಇದಕ್ಕಾಗಿಯೇ ಕಾಂಗ್ರೆಸ್‌ ಸುದೀರ್ಘ ಕಾಲಾವಧಿಯನ್ನು ತೆಗೆದುಕೊಳ್ಳಬಹುದು. ಬಹುಶಃ ಇದು ಆಗುವವರೆಗೆ ದೆಹಲಿಯ ಅನುಭವ ಮರುಕಳಿಸುತ್ತಲೇ ಇರುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.

ಶ್ರೀರಾಜ್ ವಕ್ವಾಡಿ

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!