spot_img
Friday, December 27, 2024
spot_img

ಸಡಿಲ ನಾಲಿಗೆ ತಂದಿಟ್ಟ ರಾದ್ಧಾಂತ !

ಲಕ್ಷ್ಮೀ ವರ್ಸಸ್‌ ರವಿ | ವ್ಯಕ್ತಿವಿರೋಧದ ಸ್ವರೂಪ ಪಡೆದುಕೊಂಡ ಚರ್ಚೆ

ಬಾಯಿ ಮತ್ತು ಕಚ್ಚೆಯ ಮೂಲಕವೇ ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ನಿರ್ಧರಿಸಬಹುದೆಂಬ ಮಾತಿದೆ. ಅಂದರೇ, ಆಡುವ ಮಾತಿನಿಂದ, ಹಾಕುವ ಬಟ್ಟೆಯಿಂದ ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಗುರಿತಿಸಬಹುದಂತೆ. ಮಾತು ಹಾಗೂ ಇರುವಿಕೆಯಿಂದ ನಮ್ಮ ಸಂಸ್ಕಾರವನ್ನೂ ಅಳೆಯಬಹುದು. ಆಚಾರ – ಸಂಸ್ಕೃತಿ ನಮ್ಮ ಹೃದಯ ಮತ್ತು ಆತ್ಮದ ನಡುವೆ ಇರುವ ಸೇತು. ಮಾತು ಮತ್ತು ಇರುವಿಕೆ ಹಿತವಾದ ಭಾವವನ್ನೂ ಮೂಡಿಸುತ್ತದೆ, ಸುನಾಮಿಯನ್ನೂ ಎಬ್ಬಿಸುತ್ತವೆ. ಲೋಕದ ಬದುಕು ಬಯಸುವುದು ಸರಿಯಾದ ಮಾತು ಮತ್ತು ಇರುವಿಕೆಯನ್ನಷ್ಟೇ ಹೊರತು ಮತ್ತೇನನ್ನೂ ಅಲ್ಲ. ತಾವಾಡುವುದಕ್ಕೆ ಹೊರಡುವ ಮಾತು ಮತ್ತು ತಾವಾಡಿದ ಮಾತಿನ ಬಗ್ಗೆ ಯಾರೂ ಪರಾಮರ್ಶೆ ಮಾಡಿಕೊಳ್ಳುವುದಕ್ಕೆ ಮುಂದಾಗುವುದೇ ಇಲ್ಲ. ಹಾಗಾಗಿಯೇ ಒಮ್ಮೊಮ್ಮೆ ಅಲ್ಲೋಲ ಕಲ್ಲೋಲ ಸೃಷ್ಟಿಯಾಗುತ್ತದೆ.

ರಾಜಕೀಯ, ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಬಹುತೇಕ ಎಲ್ಲಾ ಸಂದರ್ಭಗಳಲ್ಲಿ ಕೋಲಾಹಲ ಸೃಷ್ಟಿಗೆ ಕಾರಣವಾಗುವುದೇ ಲಂಗು ಲಗಾಮಿಲ್ಲದ ನಾಲಿಗೆಯಿದಿಂದಲೇ ಎನ್ನುವುದರಲ್ಲಿ ಸಂಶಯವಿಲ್ಲ. ಸಂಸದೀಯ ವ್ಯವಸ್ಥೆಯಲ್ಲಿ ಹಿರಿಯರ ಸದನವೆಂದು ಕರೆಸಿಕೊಳ್ಳುವ ವಿಧಾನ ಪರಿಷತ್ತಿನಲ್ಲಿ ಬಿಜೆಪಿಯ ಸದಸ್ಯ ಸಿ.ಟಿ. ರವಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ದೂಷಿಸಿ ಆಡಿದರೆನ್ನಲಾದ ʼಆʼ ಮಾತು ರಾಜಕೀಯ ವಲಯದಲ್ಲಿ ಬಾರಿ ಚರ್ಚೆಗೆ ಕಾರಣವಾಗಿದೆ. ರಾಜ್ಯ ರಾಜಕಾರಣದಲ್ಲಿ ಹಿರಿಯವರೆನ್ನಿಸಿಕೊಂಡವರ ತೀರಾ ಸಣ್ಣತನವಿದು.

ಮಹಿಳೆಯೊಬ್ಬರ ಬಗ್ಗೆ ಅಸಭ್ಯ ಭಾಷೆ ಬಳಸಿ ನಿಂದಿಸಿದ್ದಾರೆಂದು ರವಿ ವಿರುದ್ಧ ಕ್ರಿಮಿನಲ್ ಪ್ರಕರಣವೂ ದಾಖಲಾಗಿದೆ. ಬಂಧನ, ಕೋರ್ಟು, ಜಾಮೀನು, ತನಿಖೆಯ ಸುತ್ತ ಪ್ರಕರಣ ರಾಜಕೀಯ ವಾದ ಪ್ರತಿವಾದಗಳ ಸುತ್ತಲೇ ಸುತ್ತುತ್ತಿದೆ. ಹಿರಿಯರ ಸದನದಲ್ಲಿ ಇಂತಹದ್ದೊಂದು ಪ್ರಮಾದವಾಗಿರುವುದು ನಿಜಕ್ಕೂ ವಿಷಾದನೀಯ. ಸಂವಾದಗಳು, ಚರ್ಚೆಗಳು ನಡೆಯಬೇಕಾದ ಚಾವಡಿ ಹೀಗೆ ಮೌಲ್ಯ ಕಳೆದುಕೊಳ್ಳುತ್ತಿರುವುದು ದುರಂತ.

ಶಿಕ್ಷಣ, ಕಲೆ, ಸಂಸ್ಕೃತಿ, ಸಂಸದೀಯ ಪರಂಪರೆ ಹಾಗೂ ಬೇರೆ ಬೇರೆ ಕ್ಷೇತ್ರಗಳಲ್ಲಿ ಅಪಾರ ಅನುಭವ ಹೊಂದಿರುವ ಹಿರಿಯ ರಾಜನೀತಿ ತಜ್ಞರ ಚಿಂತನೆಯ ಚಾವಡಿ ಪರಿಷತ್ತು ಇಂದು ರಾಜಕೀಯ ಕೆಸರೆರಚಾಟಕ್ಕಷ್ಟೇ ಸೀಮಿತವಾಗಿ ಪರಿವರ್ತನೆಯಾದಂತಿದೆ. ಡಾ. ಬಿ.ಆರ್.‌ ಅಂಬೇಡ್ಕರ್‌ ಅವರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸಂಸತ್‌ ಅಧಿವೇಶನದಲ್ಲಿ ಪ್ರತಿಪಕ್ಷದ ಸದಸ್ಯರನ್ನು ಉದ್ದೇಶಿಸಿ ನೀಡಿರುವ ಹೇಳಿಕೆಯ ವಿರುದ್ಧ ವಿಧಾನ ಪರಿಷತ್ತಿನಲ್ಲೂ ರಾಜ್ಯ ಕಾಂಗ್ರೆಸ್‌ ಸರ್ಕಾರದ ಸದಸ್ಯರು ಪ್ರತಿಭಟನೆ ನಡೆಸಿದ್ದರು. ತಮ್ಮ ನಾಯಕ ಶಾ ಅವರನ್ನು ಸಮರ್ಥಿಸಿಕೊಳ್ಳುವುದಕ್ಕೆ ಹೋಗಿ ಬಿಜೆಪಿ ನಾಯಕರು ವಿಫಲರಾದರು. ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳ ನಡುವೆ ಉಂಟಾದ ಮಾತಿನ ಚಕಮಕಿಯೇ ಈ ಅನಗತ್ಯ ರಾದ್ದಾಂತಕ್ಕೆ ಮೂಲ ಕಾರಣ.

ಆರೋಪ, ಪ್ರತ್ಯಾರೋಪ, ಸಮರ್ಥನೆ ಎಲ್ಲವೂ ಇಂತಹ ಸಂದರ್ಭದಲ್ಲಿ ತೀರಾ ಸಹಜ.  ಮಾತು ಆಡುವಲ್ಲಿಗೆ ಅವರ ಅನುಭವ, ವಿವೇಕ ಎಲ್ಲಿ ಹೋಯ್ತು ಎನ್ನುವುದು ಇಲ್ಲಿ ಮುಂದಿರುವ ಪ್ರಶ್ನೆ. ಎಷ್ಟೇ ಸಮರ್ಥಿಸಿಕೊಂಡರೂ ಆಡಿದ್ದು ನಿಜವೇ ಆಗಿದ್ದರೆ ಅದು ನೀಚ ಬುದ್ಧಿಯ ಅಭಿವ್ಯಕ್ತಿಯಲ್ಲದೇ ಮತ್ತಿನ್ನೇನು? ರಾಜಕಾರಣದಲ್ಲಿ ಈ ʼಸಡಿಲ ನಾಲಿಗೆʼ ಪ್ರತಾಪಗಳು ಇದೇ ಮೊದಲೇನಲ್ಲ. ಉದಾಹರಿಸಬಹುದಾದರೇ, ಅನೇಕ ಪ್ರಸಂಗಳನ್ನು ಉಲ್ಲೇಖಿಸಬಹುದು. ಎಷ್ಟೇ ನಿರ್ಬಂಧಗಳು ಹೇರಿದರೂ ಮುಂದೆಯೂ ಇದು ಚಾಲ್ತಿಯಲ್ಲಿರುತ್ತದೆ. ಇದರ ಹೊರತಾಗಿ ರಾಜಕೀಯ ಬೆಳೆಯುತ್ತದೆ ಎಂದರೆ ಅದು ಸತ್ಯಕ್ಕೆ ದೂರದ ಮಾತು.

ಪ್ರಕರಣದ ಮುಂದುವರಿದ ಭಾಗವಾಗಿ ಲಕ್ಷ್ಮೀ ಹೆಬ್ಬಾಳ್ಕರ್‌ ಬೆಂಬಲಿಗರು ಎಂದು ಹೇಳಲಾಗುತ್ತಿರುವವರಿಂದ ನಡೆದ ದಾಂಧಲೆ, ಸಿ.ಟಿ ರವಿ ಅವರ ಮೇಲೆ ನಡೆದಿದೆ ಎನ್ನಲಾದ ಹಲ್ಲೆ, ಸುವರ್ಣ ಸೌಧದ ಗೇಟುಗಳಿಗೆ ಹಾನಿ ಮಾಡಿದವರ ಬಗ್ಗೆ ಪೊಲೀಸ್‌ ಇಲಾಖೆಯಾಗಲಿ, ಸರ್ಕಾರವಾಗಲಿ ಕ್ರಮಕ್ಕೆ ಮುಂದಾಗದೆ ಇರುವುದು ನಿಜಕ್ಕೂ ಆಶ್ಚರ್ಯವೇ ಸರಿ. ಕಲಾಪದ ಕಡತಗಳಲ್ಲಿ ದಾಖಲಾಗದ ʼಆʼ ಮಾತು ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಯಿತು(ಆರಂಭದಲ್ಲಿ ಬೀಪ್‌ ಬಳಸದೆಯೂ). ಎರಡು ದಿನಗಳ ಬಳಿಕ ಸ್ವತಃ ಲಕ್ಷ್ಮೀ ಹೆಬ್ಬಾಳ್ಕರ್‌ ಅವರೇ ಮಾಧ್ಯಮಗಳ ಮುಂದೆ ʼಆʼ ವಿಡೀಯೋವನ್ನು ರಿಲೀಸ್‌ ಮಾಡಿದರು. ಸಿ.ಟಿ ರವಿ ಅವರು ಮಾಧ್ಯಮಗಳ ಮಂದೆ ಹೇಳಿಕೊಂಡಂತೆ ಜೀವ ಬೆದರಿಕೆ ಆರೋಪ, ಅವರು ನೀಡಿದ ದೂರು ಎಲ್ಲವೂ ಪ್ರಕರಣ ಪರಾಕಾಷ್ಠೆ ತಲುಪುವುದಕ್ಕೆ ಕಾರಣವಾಯಿತು. ಸಂತ್ರಸ್ತೆ ʼಸಚಿವೆʼ ಎನ್ನುವ ಕಾರಣಕ್ಕೆ ಶೀಘ್ರವೇ ದೂರು ದಾಖಲಾಯಿತು. ಕ್ರಮವೂ ಆಯಿತು. ಕೋರ್ಟು, ವಿಚಾರಣೆ, ಜಾಮೀನು, ತನಿಖೆ, ಆಡಳಿತ ಪಕ್ಷ, ವಿಪಕ್ಷಗಳ ಆರೋಪ, ಪ್ರತ್ಯಾರೋಪ ಈ ಪ್ರಕರಣ ಸುತ್ತ ಸುಳಿದಾಡುತ್ತಿರುವ ಗದ್ದಲದ ಪ್ರಸಂಗ. ಇನ್ನು, ಈ ಪ್ರಕರಣದಲ್ಲಿ ದೂರು ದಾಖಲಿಸುವ ಹಂತದಲ್ಲಿ ಅಗತ್ಯ ನಿಯಮಗಳು ಪಾಲನೆ ಆಗಿಲ್ಲ ಎನ್ನುವ ಅಪಸ್ವರವೂ ಕೇಳಿ ಬರುತ್ತಿದೆ. ಆದ್ದರಿಂದ ಕಾನೂನಿನ ದೃಷ್ಟಿಯಿಂದ ನ್ಯಾಯಾಲಯದಲ್ಲಿ ಈ ಪ್ರಕರಣ ಯಾವ ರೀತಿ ಪರಿಗಣಿತವಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಏನೇ ಆದರೂ, ಸಂಯಮ ಮತ್ತು ಸಭ್ಯತೆ ಒಬ್ಬ ವ್ಯಕ್ತಿಗೆ ಬಹಳ ಮುಖ್ಯ. ಸಂಸದೀಯ ಪರಂಪರೆ, ಕಾನೂನಿನ ಚೌಕಟ್ಟನ್ನು ಮೀರಿ ಮಾನವೀಯತೆಯ ದೃಷ್ಟಿಯಲ್ಲಿ ನೋಡುವುದಾದರೇ, ಇಷ್ಟು ಹಗುರಾಗಿ ಮಾತನಾಡುವುದು ಸಹ್ಯವಲ್ಲ. ರಾಜಕೀಯವಾಗಿ ಸೋತಿರುವ ಸಿ.ಟಿ ರವಿ ಕೊನೆಗೂ ಪಕ್ಷದ ಹಿರಿಯರೊಬ್ಬರ ಕ್ರಪಾಶೀರ್ವಾದದಲ್ಲಿ ಪರಿಷತ್‌ ಸದಸ್ಯರಾಗಿದ್ದಾರೆ. ಇದನ್ನು ಬಿಟ್ಟರೇ, ಅವರಿಗೆ ಯಾವುದೇ ಪ್ರಮುಖ ಸ್ಥಾನಮಾನಗಳು ಇಲ್ಲ. ರಾಜಕೀಯವಾಗಿ ಸಂಪೂರ್ಣ ಕೆಳಮುಖದ ದಾರಿಯಲ್ಲಿರುವ ಅವರು, ತಮ್ಮ ಸ್ಥಿತಿಗತಿಯನ್ನು ಅರ್ಥೈಸಿಕೊಳ್ಳಬೇಕಿತ್ತು. ದೆಹಲಿ ನಾಯಕರನ್ನು ಮೆಚ್ಚಿಸುವ ಪ್ರಯತ್ನದಲ್ಲಿ ಈಗ ಏನೋ ಪ್ರಮಾದವಾಗಿರುವುದು ಅವರ ಸೋಲಿನ ರಾಜಕಾರಣಕ್ಕೆ ಮತ್ತೆ ವೇಗ ಸಿಕ್ಕಂತಾಗಿದೆ.

ಇನ್ನು, ದತ್ತಪೀಠದ ಹೋರಾಟದ ಮೂಲಕ ಹೆಸರು ಗಳಿಸಿದ್ದ ರವಿ ಬಿಜೆಪಿಯಲ್ಲಿ ಬಹುಶಃ ಬಹಳ ಕಡಿಮೆ ಅವಧಿಯಲ್ಲಿಯೇ ಭರವಸೆಯ ನಾಯಕನಾಗಿ ಗುರುತಿಸಿಕೊಂಡಿದ್ದರು. ರಾಜ್ಯ ಸಚಿವ ಸ್ಥಾನ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿಯೂ ದುಡಿದ ಅನುಭವ ಹೊಂದಿದ್ದ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲುವ ಮೂಲಕ ತಮ್ಮ ರಾಜಕೀಯ ಜೀವನದಲ್ಲಿ ಕೆಳಮುಖವಾಗಿ ಹಾದಿ ಹಿಡಿದರು. ವಿಧಾನ ಪರಿಷತ್ ಸದಸ್ಯ ಸ್ಥಾನ ಬಿಟ್ಟರೆ ಪ್ರಮುಖವಾಗಿ ಯಾವುದೇ ರಾಜಕೀಯ ಸ್ಥಾನಮಾನಗಳು ಅವರಲ್ಲಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಪದಚ್ಯುತಿಯಾಗುವ ಸಂದರ್ಭದಲ್ಲಿ ಮುಂದಿನ ಸಿಎಂ ಸ್ಥಾನಕ್ಕೆ ಯಾರು ಎಂಬ ಪ್ರಶ್ನೆ ಬಂದಾಗ ಕೇಳಿಬಂದ ಹೆಸರುಗಳ ಪೈಕಿಯಲ್ಲಿ ಸಿ.ಟಿ ರವಿ ಅವರ ಹೆಸರೂ ಇದ್ದಿತ್ತು. ಪ್ರಭಾವಿ ನಾಯಕರಾಗಿಯೂ ಅವರು ಗುರುತಿಸಿಕೊಂಡಿದ್ದರು. ಈಗ ರಾಜಕೀಯ ಇಳಿಜಾರಿನಲ್ಲಿರುವ ರವಿ, ಮತ್ತೆ ಉದಯಿಸುವುದಕ್ಕೆ ಪ್ರಯತ್ನಿಸಿ ಮುಗ್ಗರಿಸಿದ್ದಾರೆ. ಹೌದು, ಪಕ್ಷದಲ್ಲಿ ಪ್ರಮುಖ ನಾಯಕತ್ವಕ್ಕಾಗಿ ಪ್ರಯತ್ನಿಸುತ್ತಿದ್ದ ಅವರು, ದಿಲ್ಲಿ ನಾಯಕರನ್ನು ಒಲಿಸಿಕೊಳ್ಳುವುದಕ್ಕೆ ನಿರಂತರ ಪ್ರಯತ್ನದಲ್ಲಿದ್ದರು. ದಿಲ್ಲಿ ನಾಯಕರ ಸಮರ್ಥನೆಗೆ ಇಳಿದು ಈಗ ವಿವಾದಕ್ಕೀಡಾಗುವಂತಾಗಿದೆ. ಇನ್ನು, ಸದನದ ಸದಸ್ಯರಲ್ಲದವರ ಹೆಸರನ್ನು ಪ್ರಸ್ತಾಪಿಸಿ ಟೀಕೆ ಮಾಡಬಾರದೆಂಬ ನಿಯಮವೂ ಇದೆ. ಈ ವಿಚಾರದಲ್ಲಿ ರವಿ ಜಾಣ ಮರೆವಿನ ಪ್ರದರ್ಶನ ಮಾಡಿದ್ದಾರೆ ಎಂದೇ ಹೇಳಬಹುದು.

ರಾಜ್ಯ ರಾಜಕಾರಣದಲ್ಲಿ ಈ ಪ್ರಕರಣ ಕಾಂಗ್ರೆಸ್, ಬಿಜೆಪಿ ನಡುವೆ ಹೊಸ ರಾಜಕೀಯ ಸಮರಕ್ಕೂ ಮುನ್ನಡಿ ಬರೆಯಬಹುದು. ಸಿ. ಟಿ ರವಿ ಅವರ ರಾಜಕಾರಣಕ್ಕೆ ಬಹಳ ದೊಡ್ಡ ಪರಿಣಾಮವೇ ಬೀರಬಹುದು. ಇತ್ತ, ಲಕ್ಷ್ಮೀ ಹೆಬ್ಬಾಳ್ಕರ್‌ ಕೂಡ ತಮ್ಮ ಪಕ್ಷದ ಹೈಕಮಾಂಡ್‌ ಮಟ್ಟದಲ್ಲಿ ಗುರುತಿಸಿಕೊಳ್ಳುವುದಕ್ಕೆಂದೇ ಪ್ರಯತ್ನಿಸುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ಸಿಎಂ ಬದಲಾವಣೆಯಾದರೇ, ಡಿಕೆಶಿ ಬಣದಲ್ಲಿ ಮೊದಲು ಕಾಣಿಸಿಕೊಳ್ಳುವವರೂ ಕೂಡ ಹೆಬ್ಬಾಳ್ಕರ್‌ ಅವರೇ ಆಗಿದ್ದಾರೆ. ಹಾಗಾಗಿ ಈ ಪ್ರಕರಣದ ಕಾವು ಏರುವುದಕ್ಕೆ ಡಿಕೆಶಿ ಬೆಂಬಲವೂ ಇದೆ ಎಂದು ಹೇಳಲಾಗುತ್ತಿದೆ. ಏನೇ ಆದರೂ, ಮಾತು ಆಡುವುದಕ್ಕೆ ಮೊದಲು ಸಂಯಮ ಕಾಯ್ದುಕೊಳ್ಳಬೇಕಿತ್ತು ಎನ್ನುವುದು ಸತ್ಯಾಂಶ. ಈಗ ಕಾನೂನಿನ ಹೋರಾಟಕ್ಕೆ ಇಬ್ಬರೂ ಧುಮುಕಿದ್ದಾರೆ. ಪ್ರಕರಣ ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ. ಒಟ್ಟಿನಲ್ಲಿ, ಟೀಕೆ, ವಿಮರ್ಶೆಗಳು ವ್ಯಕ್ತಿವಿರೋಧದ ಸಂಘರ್ಷವನ್ನು ಮೀರಿ ತಾತ್ವಿಕ ಸ್ವರೂಪ ಪಡೆದುಕೊಳ್ಳುವವರೆಗೆ ಪ್ರಜಾಪ್ರಭುತ್ವ ಆತಂಕಕಾರಿಯಾಗಿಯೇ ಬೆಳವಣಿಗೆ ಹೊಂದುತ್ತದೆ ಎನ್ನುವುದಂತೂ ಸತ್ಯ.

-ಶ್ರೀರಾಜ್‌ ವಕ್ವಾಡಿ

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!