spot_img
Monday, February 16, 2026
spot_img

ಸಕಲ ಸರ್ಕಾರಿ, ಸೇನಾ ಗೌರವಗಳೊಂದಿಗೆ ಹವಾಲ್ದಾ‌ರ್ ಅನೂಪ್ ಪೂಜಾರಿ ಅಂತ್ಯಕ್ರಿಯೆ | ಪತ್ನಿ ಮಂಜುಶ್ರೀಗೆ ಸೇನಾ ಮುಖ್ಯಸ್ಥರಿಂದ ರಾಷ್ಟ್ರಧ್ವಜ ಹಸ್ತಾಂತರ

ಜನಪ್ರತಿನಿಧಿ (ಕುಂದಾಪುರ) : ಕುಂದಾಪುರ ತಾಲೂಕಿನ ಬೀಜಾಡಿ ಗ್ರಾಮದ ಮೃತ ಯೋಧ ಅನೂಪ್ ಪೂಜಾರಿ ಅವರ ಅಂತ್ಯಕ್ರಿಯೆ ಇಂದು(ಗುರುವಾರ) ಸಕಲ ಸರ್ಕಾರಿ, ಸೇನೆಯ ಗೌರವಗಳೊಂದಿಗೆ ಬೀಜಾಡಿಯ ಸಮುದ್ರ ತೀರದಲ್ಲಿ ನಡೆಯಿತು.

ನಿನ್ನೆ(ಬುಧವಾರ) ತಡರಾತ್ರಿ 3:15ರ ಸುಮಾರಿಗೆ ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಯೋಧ ಅನೂಪ್ ಅವರ ಪಾರ್ಥಿವ ಶರೀರವನ್ನು ಸೇನೆಯಿಂದ ಸ್ವೀಕಾರ ಮಾಡಿದರು.

ಇಂದು (ಗುರುವಾರ) ಬೆಳಗ್ಗೆ 8 ಗಂಟೆ ಸುಮಾರಿಗೆ ಪಾರ್ಥಿವ ಶರೀರವನ್ನು ಉಡುಪಿಯಲ್ಲಿ ಉಡುಪಿ ಜಿಲ್ಲಾಡಳಿತದಿಂದ ಸ್ವೀಕಾರ ಮಾಡಿಕೊಂಡು, ಅಂತಿಮ ನಮನ ಸಲ್ಲಿಸಲಾಯಿತು. ಬಳಿಕ ತೆಕ್ಕಟ್ಟೆಯಲ್ಲಿ ಸುಮಾರು 10 ಗಂಟೆಗೆ ಕುಂದಾಪುರ ತಾಲೂಕು ಆಡಳಿತದಿಂದ ಪಾರ್ಥಿವ ಶರೀರವನ್ನು ಸ್ವೀಕಾರ ಮಾಡಿಕೊಂಡು, ತಾಲೂಕು ಆಡಳಿತದಿಂದ ಅಂತಿಮ ನಮನ, ಪುಷ್ಪಾರ್ಚನೆ ಸಲ್ಲಿಸಲಾಯಿತು. ನಂತರ ಕೋಟೇಶ್ವರ, ಬೀಜಾಡಿಯ ಮಾರ್ಗವಾಗಿ ಫಿಶರೀಸ್ ರಸ್ತೆಯ ಮೂಲಕ ಮನೆಯವರೆಗೆ ಮೆರವಣಿಗೆ ನಡಯಿತು. ಬೀಜಾಡಿ ಊರಿಗೆ ಊರೇ ಸ್ಮಶಾನ ಮೌನ ಆವರಿಸಿತ್ತು. ರಸ್ತೆ ಇಕ್ಕೆಲಗಳಲ್ಲಿ ಸಾವಿರಾರು ಮಂದಿ ಸೇರಿದ್ದರು, ಕಂಬನಿ ಮಿಡಿದರು. ಅಲ್ಲಿಂದಲೇ ಮೃತ ಯೋಧನಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಮನೆಯವರ ಆಕ್ರಂದನ ಮುಗಿಲು ಮುಟ್ಟಿತ್ತು. ಮೆರವಣಿಗೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿ ಮೃತಯೋಧನಿಗೆ ಶೃದ್ಧಾ ಗೌರವ ಸಲ್ಲಿಸಿದರು.

ಮೃತ ಯೋಧ ಅನೂಪ್‌ಗೆ ಸಕಲ ಸರ್ಕಾರಿ, ಸೇನಾ ಗೌರವ :

ಮೃತಯೋಧನ ಮನೆಯಲ್ಲಿ ಪೊಲೀಸ್ ಇಲಾಖೆಯಿಂದ ಗೌರವ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಡಳಿತದ ಪರವಾಗಿ ಎಡಿಸಿ, ಜಿಲ್ಲಾ ವರಿಷ್ಠಾಧಿಕಾರಿಗಳ ಪರವಾಗಿ ಎಎಸ್‌ಪಿ ಇದ್ದರು.

ಬಳಿಕ ಸರ್ಕಾರಿ ಶಾಲೆ ಬೀಜಾಡಿ ಪಡುವಿನಲ್ಲಿ ಸಾರ್ವಜನಿಕ ಅನೂಪ್‌ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಯಿತು. ಸೇನಾ ಮುಖ್ಯಸ್ಥರು, ಪೊಲೀಸ್‌ ಇಲಾಖೆಯ ಮುಖ್ಯಸ್ಥರು, ಮಾಜಿ ಸೈನಿಕರು, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಂಸದ ಕೆ. ಜಯಪ್ರಕಾಶ್‌ ಹೆಗ್ಡೆ, ಮಾಜಿ ಶಾಸಕ ಗೋಪಾಲ ಪೂಜಾರಿ, ಸಹಾಯಕ ಆಯುಕ್ತ ಮಹೇಶ್‌ಚಂದ್ರ, ತಹಶೀಲ್ದಾದರ್‌ ಶೋಭಾಲಕ್ಷ್ಮೀ, ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ್‌ ಶೆಟ್ಟಿ ಗಂಟಿಹೊಳೆ, ಸತ್ಯಜಿತ್‌ ಸುರತ್ಕಲ್‌, ಮಾಜಿ ಶಾಸಕ ರಘುಪತಿ ಭಟ್‌ ಸೇರಿ ಬಿಲ್ಲವ ಸಮುದಾಯದ ಮುಖಂಡರು, ಗಣ್ಯರು ಪುಷ್ಪ ಮಾಲೆಯ ಗೌರವ ಸಲ್ಲಿಸಿ, ಅಂತಿಮ ನಮನ ಸಲ್ಲಿಸಿದರು. ಸಹಸ್ರ ಸಂಖ್ಯೆಯಲ್ಲಿ ಬಂದಿದ್ದ ಸ್ಥಳೀಯರು, ಅಭಿಮಾನಿಗಳು ಅಂತಿಮ ದರ್ಶನ ಪಡೆದರು.

ನಂತರ ಬೀಜಾಡಿಯ ಸಮುದ್ರ ತೀರದಲ್ಲಿ ಅಂತ್ಯ ಸಂಸ್ಕಾರ ನೆರವೇರಿತು. ಮರಾಠ ರೆಜಿಮೆಂಟ್ ಯೋಧರು ಮೃತ ಯೋಧನಿಗೆ ಸೇನಾ ಗೌರವ ಸಲ್ಲಿಸಿದರು.

ಪತ್ನಿ ಮಂಜುಶ್ರೀ ಅವರಿಗೆ ಸೇನೆಯ ಮುಖ್ಯಸ್ಥರು ರಾಷ್ಟ್ರಧ್ವಜವನ್ನು ಹಸ್ತಾಂತರಿಸಿದರು. ಗಾಳಿಯಲ್ಲಿ ಕುಶಲ ತೋಪು ಹಾರಿಸಿದರು. ಸೇನೆಯ ಗೌರವದ ಬಳಿಕ ಸಹೋದರರಾದ ಶಿವರಾಮ್‌ ಹಾಗೂ ತಿಮ್ಮಪ್ಪ ಅಂತ್ಯಸಂಸ್ಕಾರ ವಿಧಿವಿಧಾನಗಳನ್ನು ನೆರವೇರಿಸಿದರು. ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ  ಅಶೋಕ್‌ ಪೂಜಾರಿ ಬೀಜಾಡಿ ಮುಂದಾಳತ್ವ ವಹಿಸಿಕೊಂಡು ಎಲ್ಲಾ ಕಾರ್ಯವನ್ನು ನಡೆಸಿಕೊಟ್ಟರು.

ಇನ್ನು, ಅನೂಪ್ ಪೂಜಾರಿ ಕಳೆದ 13 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. 11ಮರಾಠ ರೆಜಿಮೆಂಟ್ ಕಾರ್ಯ ನಿರ್ವಹಿಸುತ್ತಿದ್ದ ಅನೂಪ್ ಗೆ ಪತ್ನಿ ಹಾಗೂ ಎರಡು ವರ್ಷದ ಹೆಣ್ಣು ಮಗುವಿದೆ. ರಜೆಯ ಮೇಲೆ ಊರಿಗೆ ಬಂದಿದ್ದ ಅನೂಪ್ ಕಳೆದ ಶನಿವಾರ(ಡಿ.21) ವಷ್ಟೇ ಕೆಲಸಕ್ಕೆ ವಾಪಾಸ್ಸಾಗಿದ್ದರು.


(ಸೇನಾ ಮುಖ್ಯಸ್ಥರು ಮೃತ ಯೋಧ ಅನೂಪ್‌ ಪೂಜಾರಿ ಅವರ ಪತ್ನಿ ಮಂಜುಶ್ರೀಗೆ ರಾಷ್ಟ್ರಧ್ವಜ ಹಸ್ತಾಂತರಿಸಿದರು.)


(ಪತಿಯ ಪಾರ್ಥಿವ ಶರೀರದ ಮುಂದೆ ಮಂಜುಶ್ರೀ ಭಾವುಕ)


(ಸಂಸದ ಕೋಟ ಶ್ರೀನಿವಾಸ ಪೂಜಾರಿ, ಅಶೋಕ್‌ ಪೂಜಾರಿ ಬೀಜಾಡಿ, ಶಾಸಕ ಗಂಟಿಹೊಳೆ ಅವರಿಂದ ಅಂತಿಮ ನಮನ)


(ಸಹೋದರರಾದ ಶಿವರಾಮ್‌ ಹಾಗೂ ತಿಮ್ಮಪ್ಪ ಅವರಿಂದ ಅಂತ್ಯಕ್ರಿಯ ವಿಧಿವಿಧಾನ)


(ಸ್ಥಳೀಯ ಮುಸ್ಲೀಂ ಧಾರ್ಮಿಕ ಮುಖಂಡರಿಂದ ಅಂತಿಮ ನಮನ)


(ಪತಿಯ ಪಾರ್ಥಿವ ಶರೀರದ ಮುಂದೆ ಮಂಜುಶ್ರೀ ಕಂಬನಿ)


(ಅಂತಿಮ ದರ್ಶನಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ ಮಂದಿ)


(ಮಾಜಿ ಸಂಸದ ಕೆ. ಜಯಪ್ರಕಾಶ್‌ ಹೆಗ್ಡೆ, ಮಾಜಿ ಶಾಸಕ ಗೋಪಾಲ ಪೂಜಾರಿ ಅಂತಿಮ ದರ್ಶನ ಪಡೆದರು)


(ಮೃತ ಯೋಧ ಅನೂಪ್‌ಗೆ ಅಂತಿಮ ಸೇನಾ ಗೌರವ)


(ಚಿತೆಯ ಮುಂದೆ ಪತ್ನಿ ಮಂಜುಶ್ರೀ ಅಂತಿಮ ನಮಸ್ಕಾರ)

ಮೃತ ಯೋಧ ಅನೂಪ್‌ ಹೆಸರಿನಲ್ಲಿ ಸ್ಮಾರಕ ನಿರ್ಮಾಣ :

ಅನೂಪ್‌ ಪೂಜಾರಿ ಸ್ಮರಣಾರ್ಥ ಬೀಜಾಡಿ ಕಡಲ ತೀರದಲ್ಲಿ ಸ್ಮಾರಕ ನಿರ್ಮಾಣಕ್ಕೆ ಬೀಜಾಡಿ ಗ್ರಾ.ಪಂ ಅಧ್ಯಕ್ಷ ಪ್ರಕಾಶ್‌ ಜಿ. ಪೂಜಾರಿ, ಗ್ರಾ.ಪಂ ಸದಸ್ಯರು, ಕುಂದಾಪುರ ಬಿಲ್ಲವ ಸಮಾಜದ ಅಧ್ಯಕ್ಷ ಅಶೋಕ್‌ ಪೂಜಾರಿ ಬೀಜಾಡಿ, ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಮಂಜುನಾಥ್‌ ಕುಂದರ್‌ ಚಾತ್ರಬೆಟ್ಟು ಹಾಗೂ ಗ್ರಾಮಸ್ಥರ ಉಪಸ್ಥಿತಿಯಲ್ಲಿ ನಿರ್ಣಯವನ್ನು ನಿನ್ನೆ(ಬುಧವಾರ) ಕೈಕೊಳ್ಳಲಾಗಿದೆ.

ಕಂದಕಕ್ಕೆ ಉರುಳಿ ಐವರು ಸೈನಿಕರ ದುರಂತ ಸಾವು !

ಜಮ್ಮು ಮತ್ತು ಕಾಶ್ಮೀರದ ಪೊಂಛ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಡಿ.24ರಂದು ಸಂಜೆ ಸಂಭವಿಸಿದ ಸೇನಾ ವಾಹನ ಅಪಘಾತದಲ್ಲಿ ಕರ್ನಾಟಕದ 3 ಯೋಧರು ಸೇರಿ ಒಟ್ಟು 5 ಯೋಧರು ಮೃತಪಟ್ಟಿದ್ದಾರೆ. ಸೇನಾ ವಾಹನ ಆಳವಾದ ಕಂದಕಕ್ಕೆ ಉರುಳಿದ್ದು, ದುರಂತದಲ್ಲಿ ಐವರು ಸೈನಿಕರು ಸಾವನ್ನಪ್ಪಿದ್ದಾರೆ. 12 ಮಂದಿ ಗಾಯಗೊಂಡಿದ್ದಾರೆ.

ನಿಲಂ ಪ್ರಧಾನ ಕಛೇರಿಯಿಂದ ಎಲ್‌ಒಸಿ ಮೂಲಕ ಬನೋಯ್ ಘರೋವಾ ಪೋಸ್ಟ್‌ಗೆ ತೆರಳುತ್ತಿದ್ದಾಗ 11 ಮರಾಠಾ ಲೈಟ್ ಇನ್‌ಫೆಂಟ್ರಿಯ ಸೇನಾ ವಾಹನ ಬೃಹತ್ ಆಳದ ಕಂದಕಕ್ಕೆ ಉರುಳಿತು. ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಗಾಯಗೊಂಡಿರುವ ಯೋಧರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ವರದಿಯಾಗಿದೆ.

ದುರಂತದಲ್ಲಿ ಮೃತಪಟ್ಟ ಐವರು ಯೋಧರಲ್ಲಿ, ಮೂವರು ಕರ್ನಾಟಕದವರಾಗಿದ್ದಾರೆ. ಸುಬೇದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬೆಳಗಾವಿಯ ದಯಾನಂದ ತಿರಕಣ್ಣವರ, ಉಡುಪಿ ಮೂಲದ ಹವಾಲ್ದಾ‌ರ್ ಅನೂಪ್ ಪೂಜಾರಿ, ಬಾಗಲಕೋಟೆಯ ಯೋಧ ಮಹೇಶ್ ನಾಗಪ್ಪ ಮರಿಗೊಂಡ ಹುತಾತ್ಮರಾಗಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!