spot_img
Wednesday, December 4, 2024
spot_img

ಆರೋಪಿ ಅದಾನಿಗೆ ಕೇಂದ್ರದ ಅಭಯ !?

ಪ್ರಧಾನಿ ಮತ್ತು ಉದ್ಯಮಿ ನಡುವಿನ ನಿಕಟ ಸಂಬಂಧ | ʼಮೋದಾನಿʼ ಸತ್ಯ ಬಯಲಾಗಲಿ

ಮೋದಿ ವಿಶ್ವಾಸಾರ್ಹತೆಯನ್ನು ಸಂಪೂರ್ಣ ಕಳೆದುಕೊಂಡಿದ್ದಾರೆ. ಅದಾನಿ ಮತ್ತು ಮೋದಿ ಇಬ್ಬರೂ ಒಂದೇ ಎಂದು ಪ್ರತಿಯೊಬ್ಬ ಭಾರತೀಯ ಯುವಕರಿಗೆ ಸಾಬೀತುಪಡಿಸುವಲ್ಲಿ ನಾವು ಯಶಸ್ವಿಯಾಗುತ್ತಿದ್ದೇವೆ. ಅದಾನಿಯನ್ನು ಶೀಘ್ರದಲ್ಲೇ ಬಂಧಿಸಬೇಕು, ಸೆಬಿ ಅಧ್ಯಕ್ಷೆಯ ವಿರುದ್ಧ ತನಿಖೆ ನಡೆಸಬೇಕು ಎಂದು ವಿಪಕ್ಷ ನಾಯಕ ರಾಹುಲ್‌ ಗಾಂಧಿ ಹೇಳಿರುವುದು ದೇಶದಲ್ಲಿ ಪ್ರಸ್ತುತ ಚರ್ಚೆ. ಇದೇ ವಿಷಯದ ಚರ್ಚೆಯಿಂದಾಗಿ ಸಂಸತ್ತಿನ ಉಭಯ ಸದನಗಳನ್ನು ಮುಂದೂಡಲಾಯಿತು. ಅದಾನಿಯನ್ನು ಕೇಂದ್ರ ಸರ್ಕಾರ ರಕ್ಷಿಸುತ್ತಿದೆ ಎಂದು ರಾಹುಲ್ ಪುನರುಚ್ಚರಿಸಿದರು.

ಅದಾನಿ ಎಂಟರ್‌ಪ್ರೈಸಸ್‌ನ ಅಧ್ಯಕ್ಷ ಗೌತಮ್ ಅದಾನಿ ಮತ್ತು ಏಳು ಹಿರಿಯ ಅಧಿಕಾರಿಗಳ ವಿರುದ್ಧ ಅಮೇರಿಕದ ಪ್ರಾಸಿಕ್ಯೂಟರ್ ಕ್ರಿಮಿನಲ್ ದೋಷಾರೋಪಣೆಯನ್ನು ಹೊರಡಿಸಿದ್ದಾರೆ ಮತ್ತು ನ್ಯೂಯಾರ್ಕ್‌ನ ಯುನೈಟೆಡ್ ಸ್ಟೇಟ್ಸ್ ಡಿಸ್ಟ್ರಿಕ್ಟ್ ಕೋರ್ಟ್‌ನಲ್ಲಿ ಸಿವಿಲ್ ದೂರು ದಾಖಲಾಗಿರುವುದು ಈಗ ಚರ್ಚೆಯ ವಿಚಾರ. ಲೋಕಸಭೆಯಲ್ಲಿ ವಿಪಕ್ಷದ ನಾಯಕ ರಾಹುಲ್ ಗಾಂಧಿ, ಗೌತಮ್ ಅದಾನಿ ಮತ್ತು ಮುಕೇಶ್ ಅಂಬಾನಿಯವರನ್ನು ನೆನಪಿಸಿಕೊಳ್ಳದ ದಿನವಿಲ್ಲ ಎಂದರೆ ತಪ್ಪಿಲ್ಲ. ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಇಬ್ಬರು ʼಆನಿʼ(ಅದಾನಿ, ಅಂಬಾನಿ)ಗಳಿಗೋಸ್ಕರವಷ್ಟೇ ಮಾತ್ರ ಕೆಲಸ ಮಾಡುತ್ತಿದೆ ಎಂದು ದಿನನಿತ್ಯ ಆರೋಪಿಸುತ್ತಲೇ ಬಂದಿದ್ದಾರೆ.

ಮೋದಿ ನೇತೃತ್ವದ ಸರ್ಕಾರ 10 ವರ್ಷಗಳ ಹಿಂದೆ ಅಧಿಕಾರಕ್ಕೆ ಬಂದಾಗಿನಿಂದ, ವಿದೇಶಿ ವ್ಯಾಪಾರ ಸಂಬಂಧವನ್ನು ಉತ್ತೇಜಿಸುವ, ಆರ್ಥಿಕ ಬೆಳವಣಿಗೆ, ಭದ್ರತೆ ಮತ್ತು ರಾಜತಾಂತ್ರಿಕತೆ ವಿಚಾರಕ್ಕೆ ಸಂಬಂಧಿಸಿದಂತೆ ಸದೃಢವಾದ ಪ್ರಗತಿ ಸಾಧಿಸುತ್ತಿದೆ ಎಂಬ ಅಭಿಪ್ರಾಯಗಳ ನಡುವೆ, ಪಾಶ್ಚಿಮಾತ್ಯ ಏಜೆನ್ಸಿಗಳು ತಯಾರಿಸಿದ ವರದಿಗಳು, ಭಾರತದ ಪ್ರಗತಿಯನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿವೆ ಎಂಬ ಆರೋಪವೂ ಇಲ್ಲಿ ಚರ್ಚೆಯ ವಿಷಯ. ವಿದೇಶಿ ಏಜೆನ್ಸಿಗಳಿಂದ ಅಥವಾ ಭಾರತದಲ್ಲಿರುವ ತಮ್ಮ ಪ್ರಾಕ್ಸಿಗಳ ಮೂಲಕ ಭಾರತದ ವಿರುದ್ಧ ವರದಿಗಳು ಬರುತ್ತಿರುವುದು ದೇಶದ ಪ್ರಗತಿಯ ವರ್ಚಸ್ಸಿಗೆ ಧಕ್ಕೆ ಎನ್ನುವ ವಾದವಿದೆ. ಇಷ್ಟೆಲ್ಲದರ ನಡುವೆ ಆರೋಪಕ್ಕೆ ಗ್ರಾಸವಾಗಿರುವುದು ಕೂಡ ತಪ್ಪು ಎಂಬ ವಾದವನ್ನು ಅಲ್ಲಗಳೆಯುವಂತಿಲ್ಲವಲ್ಲ!?

ಭಾರತದ ಆರ್ಥಿಕ ಪ್ರಗತಿಗೆ ಅಡ್ಡಿ ಮಾಡುವುದು, ಹೂಡಿಕೆದಾರರಲ್ಲಿ ಗೊಂದಲವನ್ನು ಬಿತ್ತುವುದು, ಸಾಮಾಜಿಕ ಅಶಾಂತಿಯನ್ನು ಸೃಷ್ಟಿಸುವುದು ಈ ಎಲ್ಲಾ ವಿದೇಶ ಮೂಲಗಳಿಂದ ಬರುತ್ತಿರುವ ದೂರುಗಳ ಗುರಿ ಎಂದು ಹೇಳುವ ಒಂದು ವರ್ಗವಿದೆ. ಮೋದಿ ನೇತೃತ್ವದ ಸರ್ಕಾರವನ್ನು ಅಸ್ಥಿರಗೊಳಿಸುವುದು ಇದರ ಗುರಿ ಎನ್ನುವ ವಾದ ಬಾಲಿಶ. ಇನ್ನು, ಪೆಗಾಸಸ್, ರಫೇಲ್ ಆರೋಪ, ರೈತರ ಅನಿರ್ದಿಷ್ಟಾವಧಿ ಪ್ರತಿಭಟನೆಗಳು, ಸಿಎಎ ಪ್ರತಿಭಟನೆಗಳು, ಹಿಂಡೆನ್‌ಬರ್ಗ್ ವರದಿ ಇತ್ಯಾದಿಗಳಿಂದ ದೇಶದ ಪ್ರಗತಿಯ ವರ್ಚಸ್ಸನ್ನು ನಾಶ ಮಾಡುವುದಕ್ಕೆ ಬೇರೆ ಬೇರೆ ರೀತಿಯ ಪ್ರಯತ್ನಗಳು ನಡೆದಿವೆ ಎಂಬ ವಾದವೂ ಇದೆ.

ಭಾರತದ ರಾಜಕೀಯ ಇತಿಹಾಸದಲ್ಲಿ ಪ್ರಧಾನಿ ಮತ್ತು ಉದ್ಯಮಿ ನಡುವಿನ ಸಂಬಂಧ ಮೋದಿ-ಅದಾನಿಯಂತೆ ಹಿಂದೆಂದೂ ಇರಲಿಲ್ಲ. ದೇಶದ ಒಬ್ಬ ಪ್ರಧಾನಿ ಮತ್ತು ಒಬ್ಬ ಉದ್ಯಮಿಯ ನಡುವೆ ಒಂದು ಅಂತರವಿತ್ತು. ಆದರೆ, ಮೋದಿ ಅಧಿಕಾರಕ್ಕೆ ಬಂದ ಬಳಿಕ, ಈ ಅಂತರ ಕಾಣೆಯಾಗಿದೆ ಎಂಬ ಅಭಿಪ್ರಾಯ ವಿರೋಧ ಪಕ್ಷಗಳಲ್ಲಿದೆ. ಮೋದಿಗೆ ಅದಾನಿ ಅತ್ಯಾಪ್ತರಾಗಿದ್ದಾರೆ. ಮೋದಿ-ಅದಾನಿ ನಡುವಿನ ಸಂಬಂಧ, ಅದಾನಿಗಾಗಿ ಮೋದಿ ಕೆಲಸ ಮಾಡುತ್ತಿರುವ ಬಗೆಯನ್ನು ಜನರ ಮುಂದಿಡಲು ವಿಪಕ್ಷಗಳು ‘ಮೋದಾನಿ’ ಎಂದು ಹೇಳಿ ಟೀಕಿಸುತ್ತಿವೆ.

ಹೌದು, ಸರ್ಕಾರಕ್ಕೆ ನವೀಕರಿಸಬಹುದಾದ ವಿದ್ಯುತ್ ಪೂರೈಕೆ ಮಾಡಿ, 20 ವರ್ಷಗಳಲ್ಲಿ ಸುಮಾರು 17,000 ಕೋಟಿ ರೂ. ಲಾಭ ಗಳಿಸುವ ಉದ್ದೇಶ ಅದಾನಿಯದಾಗಿತ್ತು. ಈ ಬಹುಕೋಟಿ ರೂ. ಮೌಲ್ಯದ ಗುತ್ತಿಗೆ ಪಡೆಯಲು ಅದಾನಿ ಭಾರತೀಯ ಅಧಿಕಾರಿಗಳಿಗೆ ಬರೋಬ್ಬರಿ 2,029 ಕೋಟಿ ರೂ. ಲಂಚ ನೀಡಿದ್ದಾರೆ. ಲಂಚ ಪಾವತಿಸಲು ಅಮೆರಿಕದ ಉದ್ಯಮಿಗಳನ್ನು ವಂಚಿಸಿ, ಬಂಡವಾಳ ಸಂಗ್ರಹಿಸಿದ್ದಾರೆ. ಲಂಚಕ್ಕೆ ಹಣ ಪಡೆದು, ಅಮೆರಿಕದ ಹೂಡಿಕೆದಾರರಿಗೆ ವಂಚಿಸಿದ್ದಾರೆ ಎಂದು ಅಮೆರಿಕದ ನ್ಯೂಯಾರ್ಕ್ ಪೂರ್ವ ನ್ಯಾಯಾಲಯದಲ್ಲಿ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. ಅದಾನಿ ಬಂಧನಕ್ಕೆ ನ್ಯಾಯಾಲಯ ವಾರೆಂಟ್ ಹೊರಡಿಸಿದೆ. ವಾರೆಂಟ್ ಜಾರಿಯಾದ ಬೆನ್ನಲ್ಲೇ ‘ಅದಾನಿ-ಮೋದಿ-ಸೆಬಿ’ ಸಂಬಂಧದ ಚರ್ಚೆ ಮೇಲೆದ್ದಿದೆ.

2023ರ ಕೇಂದ್ರ ಬಜೆಟ್ ಅಧಿವೇಶನದಲ್ಲಿ “ಮೋದಿ-ಅದಾನಿ ಭಾಯಿ-ಭಾಯ್/ದೇಶ್ ಬೆಚ್ ಕೆ ಖಾಯೆ ಮಲೈ” ಮುಂತಾದ ಅನಪೇಕ್ಷಿತ ಘೋಷಣೆಗಳು ಕೇಳಿ ಬಂದಿದ್ದನ್ನು ನಾವಿಲ್ಲಿ ನೆನಪಿಸಿಕೊಳ್ಳಬೇಕಿದೆ. ಹಾಗಾಗಿ, ಅಮೇರಿಕಾ ನ್ಯಾಯಾಲಯದ ಹೇಳಿರುವುದಕ್ಕೆ ಪೂರಕವೆಂಬಂತೆ ಅಧಿಕಾರಿಗಳಿಗೆ ನೀಡಿದ ಲಂಚ, ಒಪ್ಪಂದ ಹಾಗೂ ಬಿಡ್‌ಗಳಲ್ಲಿಯೂ ಮೋದಿ, ಸೆಬಿಯ ಪಾಲೂ ಇರಬಹುದು ಎಂಬ ಸಂಶಯ ಮೂಡುತ್ತಿದೆ.

ಮೋದಿ ಗುಜರಾತ್ ನ ಮುಖ್ಯಮಂತ್ರಿಯಾಗಿರುವಾಗಿಂದಲೂ ಅದಾನಿಯೊಂದಿಗೆ ನಿಕಟ ಸಂಬಂಧ, ಸಂಪರ್ಕ ಹೊಂದಿದ್ದರು ಎನ್ನುವುದು ಲೋಕಸತ್ಯ. ಒಬ್ಬ ಉದ್ಯಮಿ ಹಾಗೂ ದೇಶದ ಪ್ರಧಾನಿಯ ನಡುವೆ ಇರುವ ಈ ರಾಜಕೀಯ ಸಂಬಂಧವನ್ನು ನಿರಂತರವಾಗಿ ಕಾಂಗ್ರೆಸ್ ಅಪವಿತ್ರ ಸಂಬಂಧವೆಂದು ಆರೋಪಿಸುತ್ತಲೇ ಬಂದಿದೆ. ಈ ಆರೋಪವನ್ನು ಬಿಜೆಪಿಗಾಗಲಿ, ಸ್ವತಃ ಪ್ರಧಾನಿ ಮೋದಿಗಾಗಲಿ ಅಲ್ಲಗಳೆಯುವುದಕ್ಕೆ ಸಾಧ್ಯವಾಗಿಲ್ಲ. ಚುನಾವಣೆಯ ಸಂದರ್ಭಗಳಲ್ಲಿ ಕಾಂಗ್ರೆಸ್‌, ಅದರಲ್ಲೂ ರಾಹುಲ್‌ ಗಾಂಧಿ ಅವರು ಮೋದಿ ಮತ್ತು ʼಆನಿʼಗಳ ಸಂಬಂಧವನ್ನು ಗಂಭೀರವಾಗಿ ಟೀಕಿಸುತ್ತಲೇ ಬಂದಿದ್ದರು.

ಮೋದಿ ಗುಜರಾತ್‌ನಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಎಸ್‌ಇಝಡ್ ನಿರ್ಮಿಸಲು ಅದಾನಿಗೆ ಮೋದಿ ಅಗ್ಗದ ಬೆಲೆಗೆ (ಪ್ರತಿ ಚ ಮೀ.ಗೆ 1 ರೂ.ನಿಂದ 32 ರೂ.) ಭೂಮಿ ನೀಡಿದ್ದಾರೆ. ಇದೇ ಕಾರಣಕ್ಕೆ ಕಾರ್ಪೊರೇಟ್ ಹೌಸ್ ಮೋದಿಯನ್ನು ಉತ್ತಮ ಆಡಳಿತಗಾರನೆಂದು ಬಿಂಬಿಸುವ ಪ್ರಯತ್ನ ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿರುವುದನ್ನೂ ನಾವು ಗಮನಿಸಬಹುದಾಗಿದೆ. ʼಮೋದಾನಿʼ ಸಂಬಂಧದ ಬಗ್ಗೆ ಸದಾ ಟೀಕಿಸುವ ರಾಹುಲ್, ‘ದೇಶವನ್ನು ನಾಲ್ಕು ಮಂದಿ ಆಳುತ್ತಿದ್ದಾರೆ – ನರೇಂದ್ರ ಮೋದಿ ಮತ್ತು ಅಮಿತ್ ಶಾ, ಗೌತಮ್ ಅದಾನಿ ಮತ್ತು ಮುಖೇಶ್ ಅಂಬಾನಿ- ಇವರದ್ದು ನಾವಿಬ್ಬರು ನಮಗಿಬ್ಬರು ಸೂತ್ರ’ವೆಂದು 2021ರಲ್ಲಿ ಲೋಕಸಭೆಯಲ್ಲೊಮ್ಮೆ ರಾಹುಲ್ ಗಂಭೀರವಾಗಿ ಟೀಕಿಸಿದ್ದರು.

ಮೋದಿ ಪ್ರಧಾನಿಯಾದ ನಂತರ ಉದ್ಯಮಿ ಅದಾನಿಯ ಆಸ್ತಿ ನಾಲ್ಕೈದು ಪಟ್ಟು ಹೆಚ್ಚಳವಾಗಿದೆ. 2022ರ ಏಪ್ರಿಲ್ ಹೊತ್ತಿಗೆ ಅದಾನಿ ವಿಶ್ವದ 2ನೇ ಅತೀದೊಡ್ಡ ಶ್ರೀಮಂತರ ಪಟ್ಟಿಯಲ್ಲಿ ಗುರುತಿಸಿಕೊಂಡರು. ಅದಾನಿ ಆಸ್ತಿ 900 ಕೋಟಿ ಡಾಲರ್‌ಗೆ ಹೆಚ್ಚಳವಾಯಿತು. ಕಾಂಗ್ರೆಸ್‌ ವ್ಯಾಖ್ಯಾನದಂತೆ ʼಮೋದಿಯ ಅಭಯ ಹಸ್ತʼದ ಅಡಿಯಲ್ಲಿ ಅದಾನಿ ಕಂಡ ಈ ಬದಲಾವಣೆಯ ಬಗ್ಗೆ ರಾಹುಲ್ ಗಾಂಧಿ, ಟಿಎಂಸಿ ಸಂಸದೆ ಮೊಹುವಾ ಮೊಯಿತ್ರಾ ಸಂಸತ್‌ನಲ್ಲಿ ಚರ್ಚೆಗೆ ಎಳೆದರು. ಭಾರತ ಮತ್ತು ವಿದೇಶಗಳಲ್ಲಿ ತನ್ನ ಸ್ನೇಹಿತ ಅದಾನಿಯನ್ನು ಬೆಳೆಸಲು ಮೋದಿ ಪ್ರಧಾನ ಮಂತ್ರಿ ಕಚೇರಿಯನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು. ಇದೇ ಕಾರಣಕ್ಕೆ ರಾಹುಲ್‌ ಹಾಗೂ ಮೊಯಿತ್ರಾ ಅವರನ್ನು ಸಂಸತ್‌ನಿಂದ ಮೋದಿ ಸರ್ಕಾರ ಅಮಾನತುಗೊಳಿಸಿರುವುದನ್ನು ಇಡೀ ದೇಶ ಕಂಡಿದೆ.

ಇನ್ನು, ಈ ನಡುವೆ ಅದಾನಿ ಗ್ರೂಪ್‌ನ ದೊಡ್ಡ ಹಗರಣವನ್ನು ಹಿಂಡೆನ್ ಬರ್ಗ್‌ನ ತನಿಖಾ ವರದಿ ಬಟಾಬಯಲುಗೊಳಿಸಿತ್ತು. ಹಿಂಡನ್‌ ಬರ್ಗ್‌ ತನಿಖಾ ವರದಿಯನ್ನು ಆಧರಿಸಿ ʼಮೋದಾನಿʼ ಸಂಬಂಧದ ಬಗ್ಗೆ ಜಂಟಿ ಸಂಸದೀಯ ಸಮಿತಿ ತನಿಖೆ ನಡೆಸಬೇಕೆಂದು ವಿಪಕ್ಷಗಳು ಆಗ್ರಹಿಸಿದ್ದವು. ಮೋದಿ ಸರ್ಕಾರ ವಿಪಕ್ಷಗಳ ಆಗ್ರವಹವನ್ನು ಸಾರಾಸಗಟಾಗಿ ತಿರಸ್ಕರಿಸಿತ್ತು. ಚುನಾವಣಾ ಪ್ರಚಾರ ಸಭೆಗಳಲ್ಲಾಗಲಿ, ಅಥವಾ ಸಂಸತ್ತಿನಲ್ಲಾಗಲಿ, ಬೇರೆಡೆಯಲ್ಲಾಗಲಿ ಎಲ್ಲಿಯೂ ವಿಪಕ್ಷಗಳು ಹಾಗೂ ರಾಹುಲ್‌ ಗಾಂಧಿ ಹೊರಿಸುತ್ತಿರುವ ಆರೋಪಗಳಿಗೆ ಸ್ಪಷ್ಟನೆ ನೀಡುವುದಕ್ಕೂ ಮೋದಿ ಪ್ರಯತ್ನಿಸಿಲ್ಲ.  ಸಂಸತ್ತಿನಲ್ಲಿ ಈ ಬಗ್ಗೆ ಚರ್ಚೆಗೂ ಅವಕಾಶ ನೀಡಿಲ್ಲ.

ಇನ್ನು, ‘ಪವನ ವಿದ್ಯುತ್‌ ಯೋಜನೆಯನ್ನು ಅದಾನಿಗೆ ನೀಡುವಂತೆ ತಮ್ಮ ಅಧ್ಯಕ್ಷರಿಗೆ ಮೋದಿ ಒತ್ತಡ ಹೇರುತ್ತಿದ್ದಾರೆ’ ಎಂದು ಶ್ರೀಲಂಕಾದ ಅಧಿಕಾರಿಯೊಬ್ಬರು ನೇರವಾಗಿ ಮೋದಿ ವಿರುದ್ಧ ಆರೋಪಿಸಿದ್ದರು. ಬಾಂಗ್ಲಾದೇಶದಲ್ಲಿ ವಿದ್ಯುತ್‌ ಪೂರೈಕೆ ಒಪ್ಪಂದ ಅನ್ಯಾಯವೆಂದು ವ್ಯಾಪಕ ಪ್ರತಿಭಟನೆಗಳು ನಡೆದಿವೆ. ಇಸ್ರೇಲ್ ನಡುವೆ ಅದಾನಿ ರಕ್ಷಣಾ ಒಪ್ಪಂದವೂ ನಡೆದಿದೆ. ಈ ಒಪ್ಪಂದಗಳನ್ನು ಮೋದಿ ನೆರವಿನಿಂದಲೇ ಅದಾನಿಗೆ ನೀಡಲಾಗಿದೆ ಎಂಬ ಆರೋಪವಿದೆ. ʼಮೋದಾನಿʼ ಸತ್ಯ ಹೊರ ಬರಲಿ.

ಈ ನಡುವೆ, ಅಮೇರಿಕಾ ಕೋರ್ಟ್ ಈಗ ಹೊಸ ಆರೋಪ ಮಾಡಿದೆ. ಇನ್ನಾದರೂ ಮೋದಿ ಬಾಯಿ ಬಿಟ್ಟು ಮಾತಾಡಬೇಕಿದೆ. ತಾವು ದೇಶದ ಪ್ರಧಾನಿ ಎಂಬುವುದನ್ನು ಅರಿತು ಕೆಲಸ ಮಾಡಬೇಕಿದೆ. ಕೊನೆಯ ಪಕ್ಷ ಈ ಸಂಬಂಧಿಸಿದಂತೆ ಸಂವಾದಕ್ಕಾದರೂ ಮೋದಿ ಮುಂದಾಗಬೇಕಿದೆ.

ಶ್ರೀರಾಜ್‌ ವಕ್ವಾಡಿ  

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!