Sunday, October 13, 2024

ಬಿಜೆಪಿ ಸರ್ಕಾರದ ಅವಧಿಯಲ್ಲಿನ ಹಗರಣಗಳ ಬಗ್ಗೆ ತನಿಖೆ : ಪರಮೇಶ್ವರ್‌ ನೇತೃತ್ವದ ಸಮಿತಿಯಿಂದ ಸರಣಿ ಸಭೆ !

ಜನಪ್ರತಿನಿಧಿ (ಬೆಂಗಳೂರು) : ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿರುವ ಹಗರಣಗಳನ್ನು ತಮ್ಮ ನೇತೃತ್ವದ ಐವರು ಸದಸ್ಯರ ಸಮಿತಿಯು ತಾರ್ಕಿಕ ಘಟ್ಟಕ್ಕೆ ಕೊಂಡೊಯ್ಯಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ಅವಧಿಯಲ್ಲಿನ ಹಗರಣಗಳ ತನಿಖೆಯನ್ನು ತ್ವರಿತಗೊಳಿಸಲು ರಚಿಸಿರುವ ಗೃಹಸಚಿವ ಪರಮೇಶ್ವರ್ ನೇತೃತ್ವದ ಸಮಿತಿಯಲ್ಲಿ ಸಚಿವರಾದ ಕೃಷ್ಣ ಬೈರೇಗೌಡ, ಸಂತೋಷ್ ಲಾಡ್, ಪ್ರಿಯಾಂಕ್ ಖರ್ಗೆ ಮತ್ತು ಎಚ್‌ಕೆ ಪಾಟೀಲ್ ಕೂಡ ಇದ್ದಾರೆ.

ಸಮಿತಿ ನಿನ್ನೆ(ಶುಕ್ರವಾರ) ವಿಧಾನಸೌಧದಲ್ಲಿ ಮೂರು ಗಂಟೆಗಳ ಕಾಲ ನಡೆಸಿದ ಸರಣಿ ಸಭೆಯಲ್ಲಿ ಹಲವು ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು. ಆದರೆ, ಎಚ್.ಕೆ.ಪಾಟೀಲ್ ಗೈರು ಹಾಜರಾಗಿದ್ದರು. ಸಭೆ ಮುಗಿದ ಬಳಿಕ ಸಚಿವರು ಪ್ರತ್ಯೇಕವಾಗಿ ಸಭೆ ನಡೆಸಿದರು. ತನಿಖೆ ಪೂರ್ಣಗೊಂಡ ಪ್ರಕರಣಗಳನ್ನು ನಾವು ಮುಟ್ಟುವುದಿಲ್ಲ, ಆದರೆ ತನಿಖೆ ನಡೆಯುತ್ತಿರುವ ಪ್ರಕರಣಗಳನ್ನು ಮಾತ್ರ ಪರಿಶೀಲಿಸುತ್ತೇವೆ. ಹೊಸ ಹಗರಣಗಳನ್ನು ಸಹ ಪರಿಶೀಲಿಸುತ್ತೇವೆ. ಇಂದು 3-4 ಪ್ರಕರಣಗಳನ್ನು ಚರ್ಚಿಸಿದ್ದೇವೆ ಎಂದು ಡಾ ಪರಮೇಶ್ವರ್ ಹೇಳಿದ್ದಾರೆ.

ಈ ತಂಡ ಇಲಾಖಾವಾರು ಹಗರಣಗಳನ್ನು ಪರಿಶೀಲಿಸಲಿದೆ. ಇನ್ನೂ ಎರಡು ತಿಂಗಳಲ್ಲಿ ಕಾರ್ಯವನ್ನು ಪೂರ್ಣಗೊಳಿಸಲಿದ್ದು, ಅಂತಿಮ ನಿರ್ಧಾರ ತೆಗೆದುಕೊಳ್ಳಲು ಕ್ಯಾಬಿನೆಟ್ ಮುಂದೆ ವರದಿ ಮುಂದಿಡಲಾಗುವುದು ಎಂದರು.

ಬಿಜೆಪಿ ಆಡಳಿತ ಮತ್ತು ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನಡೆದಿರುವ ಎಲ್ಲಾ ಅಕ್ರಮಗಳ ಬಗ್ಗೆ ತನಿಖೆ ನಡೆಸುವುದಿಲ್ಲ. ಪೊಲೀಸ್ ಸೇರಿದಂತೆ ವಿವಿಧ ಇಲಾಖೆಗಳಲ್ಲಿನ ಹಗರಣಗಳು ಮತ್ತು ಅವುಗಳ ಪ್ರಗತಿಯ ಬಗ್ಗೆ ಚರ್ಚಿಸಲಾಗಿದೆ. ಆದರೆ ಇದು ಮೊದಲ ಸಭೆಯಾಗಿರುವುದರಿಂದ ಸಮಿತಿಯು ಯಾವುದೇ ತೀರ್ಮಾನಕ್ಕೆ ಬಂದಿಲ್ಲ ಎಂದು ಅವರು ತಿಳಿಸಿದರು.

ಹಳೆಯ ಪ್ರಕರಣಗಳನ್ನು ಕೆದಕುವ ಮೂಲಕ ಕಾಂಗ್ರೆಸ್ ಸೇಡಿನ ರಾಜಕಾರಣ ಮಾಡುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ ಪರಮೇಶ್ವರ್, ಹಳೆಯ ಹಗರಣಗಳ ಬಗ್ಗೆ ತನಿಖೆ ನಡೆಸಿ ಸತ್ಯಾಂಶವನ್ನು ಜನರ ಮುಂದಿಡಬೇಡವೇ ಎಂದು ಪ್ರಶ್ನಿಸಿದರು.

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಬಿಜೆಪಿಯವರು ಗೃಹ ಸಚಿವರಾಗಲು ಅರ್ಹರಲ್ಲ ಎಂದು ಟ್ರೋಲ್ ಮಾಡುತ್ತಿರುವ ಬಗ್ಗೆ ತಿರುಗೇಟು ನೀಡಿದ ಡಾ.ಪರಮೇಶ್ವರ್, ನಾನು ಮೂರನೇ ಬಾರಿಗೆ ಗೃಹ ಸಚಿವನಾಗಿದ್ದೇನೆ, ರಾಜ್ಯದ ಜನತೆ ಮತ್ತು ಅಧಿಕಾರಿಗಳಿಗೆ ನನ್ನ ಸಾಮರ್ಥ್ಯ ಗೊತ್ತು. ಯಾವುದೇ ಖಾತೆಯಲ್ಲಿದ್ದರೂ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಎಂದು ಹೇಳಿದರು.

ಕಾಂಗ್ರೆಸ್ ಕಾರ್ಯಕರ್ತರನ್ನು ವಿವಿಧ ಮಂಡಳಿಗಳು ಮತ್ತು ನಿಗಮಗಳಿಗೆ ಉಪಾಧ್ಯಕ್ಷರು ಮತ್ತು ನಿರ್ದೇಶಕರನ್ನಾಗಿ ಆಯ್ಕೆ ಮಾಡಲು ಸಮಿತಿಯ ಮೊದಲ ಸಭೆಯನ್ನು ಪರಮೇಶ್ವರ್ ನಡೆಸಿದರು. ಒಂದು ಅಥವಾ ಎರಡು ತಿಂಗಳಲ್ಲಿ 1,000 ಕ್ಕೂ ಹೆಚ್ಚು ಸ್ಥಾನಗಳನ್ನು ಭರ್ತಿ ಮಾಡಲಾಗುವುದು ಎಂದು ಬಲ್ಲ ಮೂಲಗಳು ತಿಳಿಸಿವೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!