Saturday, October 12, 2024

ದೇಶದ ಮುಂದಿದೆ ಉದ್ಯೋಗ ಸೃಷ್ಟಿಯ ಜರೂರು !

ನಿರುದ್ಯೋಗ ಹೆಚ್ಚಳ : ಮೌನಂ ಪ್ರಧಾನಿ ಮೋದಿ ಲಕ್ಷಣಂ

ನಮ್ಮ ದೇಶ ಕಳೆದ ಕೆಲವು ವರ್ಷಗಳಿಂದ ಗಂಭೀರ ಸವಾಲಾಗಿ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ನಿರುದ್ಯೋಗ ಸಮಸ್ಯೆ ಮುಂಪಂಕ್ತಿಯ ಸಾಲಿನಲ್ಲಿದೆ. ದೇಶದಲ್ಲಿ ಜ್ವಲಂತ ಸಮಸ್ಯೆಯಾಗಿ ಕಾಡುತ್ತಿರುವ ʼನಿರುದ್ಯೋಗʼವನ್ನೇ ರಾಜಕೀಯ ದಾಳವಾಗಿಟ್ಟುಕೊಂಡು ಚುನಾವಣೆಗಳಲ್ಲಿ ಪ್ರಚಾರ ಪಡೆದುಕೊಂಡ ಮೋದಿ, ದೇಶದಲ್ಲಿ ವರ್ಷಕ್ಕೆ ಬರೋಬ್ಬರಿ 2 ಕೋಟಿ ಉದ್ಯೋಗಳನ್ನು ಸೃಷ್ಠಿ ಮಾಡುವುದಾಗಿ ಭರವಸೆ ನೀಡಿ ದೇಶದ ಜನರನ್ನು ಭ್ರಮಾಲೋಕದಲ್ಲಿ ತೇಲಿಸಿ ಮೂರು ಭಾರಿ ಪ್ರಧಾನಿಯಾಗಿ ಮೆರೆದರು. ಆದರೆ, ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಯುವಕರಿಗೆ ಉದ್ಯೋಗ ಒದಗಿಸುವಲ್ಲಿ ವಿಫಲವಾಯಿತು. ಉದ್ಯೋಗ ಕೇಳಿದ ಯುವಕರಿಗೆ ಇದೇ ಪ್ರಧಾನಿ ನರೇಂದ್ರ ಮೋದಿ ಅವರು ಪಕೋಡ ಮಾರಿ ಎಂದಿರುವುದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು. ಈಗ ಕಳೆದ 45-50 ವರ್ಷಗಳಲ್ಲಿಯೇ ಅಧಿಕ ನಿರುದ್ಯೋಗ ಸಮಸ್ಯೆ ಈ ದೇಶ ಅನುಭವಿಸುತ್ತಿದೆ ಎಂದರೇ ನೀವು ಅಚ್ಚರಿ ಪಡಬೇಕಿಲ್ಲ. ನಿರುದ್ಯೋಗ ಸಮಸ್ಯೆ ಭಾರತದಲ್ಲಿ ಗಂಭೀರವಾಗಿದೆ ಎಂದು ಅಂತರಾಷ್ಟ್ರೀಯ ಕಾರ್ಮಿಕ ಸಂಘಟನೆ(ಐಎಲ್‌ಒ) ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯೊಂದರಲ್ಲಿ ಹೇಳಿರುವುದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

ದೇಶದಲ್ಲಿ ಕಳೆದ ಕೆಲವು ವರ್ಷಗಳಿಂದೀಚೆಗಿನ ನಿರುದ್ಯೋಗ ಪ್ರಮಾಣದ ದರವನ್ನು ಗಮನಿಸುವುದಾದರೇ, 2012ರಲ್ಲಿ(ಮೋದಿ ಮೊದಲ ಬಾರಿಗೆ ಅಧಿಕಾರ ಸ್ವೀಕಾರ ಮಾಡುವುದಕ್ಕೂ ಮೊದಲು) ಶೇ. 2.1 ರಷ್ಟಇತ್ತು. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ(ಸಿಎಂಐಇ) ವರದಿಯ ಪ್ರಕಾರ ಜೂನ್ 2024ರ ಹೊತ್ತಿಗೆ, ಭಾರತದ ನಿರುದ್ಯೋಗ ದರ ಶೇ. 9.2 ರಷ್ಟಕ್ಕೆ ತಲುಪಿದೆ. ಈ ಮಟ್ಟಿಗೆ ಏರಿಕೆಯಾಗಿರುವ ನಿರುದ್ಯೋಗ ಪ್ರಮಾಣ 2023ರಲ್ಲಿ ಶೇ. 8.03, 2021ರಲ್ಲಿ ಶೇ. 5.98, 2020ರಲ್ಲಿ ಶೇ. 8.0, 2019ರಲ್ಲಿ ಶೇ. 5.27, 2018ರಲ್ಲಿ ಶೇ. 5.33, 2017ರಲ್ಲಿ ಶೇ. 5.36, 2016ರಲ್ಲಿ ಶೇ. 5.42, 2015ರಲ್ಲಿ ಶೇ. 5.44, 2014ರಲ್ಲಿ ಶೇ. 5.44 ರಷ್ಟಿತ್ತು ಎನ್ನುವುದು ಇಲ್ಲಿ ಉಲ್ಲೇಖಾರ್ಹ. ಗಮನಾರ್ಹವಾಗಿ, 2018ರ ಬಳಿಕ ದೇಶದಲ್ಲಿ ನಿರುದ್ಯೋಗದ ಸಮಸ್ಯೆ  ಕಳೆದ 45-50 ವರ್ಷಗಳಲ್ಲಿಯೇ ಅತ್ಯಂತ ಕೆಟ್ಟ ಪರಿಸ್ಥಿತಿಗೆ ತಲುಪಿತ್ತು. ಬಹುಶಃ ನಿರುದ್ಯೋಗ ಸಮಸ್ಯೆಯ ಬಗ್ಗೆ ಗಮನ ನೀಡಬೇಕಾದ ಸರ್ಕಾರ ಏನೂ ಆಗಿಲ್ಲ ಎಂಬಂತೆ ಕೈಕಟ್ಟಿ ಕೂತಿತ್ತು. ಇನ್ನು, ಸಮಸ್ಯೆಗಳ ಬಗ್ಗೆಯೆಲ್ಲಾ ಮೋದಿಯವರಿಗಂತೂ ದಿವ್ಯ ಮೌನ ತಾಳುವುದೇ ಅಭ್ಯಾಸವಾಗಿಬಿಟ್ಟಿದೆ.

ಬಹುಶಃ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ದೇಶಲ್ಲಿಯೂ, ವಿದೇಶದಲ್ಲಿಯೂ ದೇಶದ ಇಂತಹ ಸಮಸ್ಯೆಗಳ ಬಗ್ಗೆಯಷ್ಟೇ ಮಾತನಾಡಿದ್ದಾರೆ ಹೊರತು, ದೇಶಕ್ಕೆ ಅಪಕೀರ್ತಿ ಬರುವಂತೆ ಮಾತನಾಡಿಲ್ಲ ಎನ್ನುವ ನೆಲೆಯಲ್ಲಿ ಇಲ್ಲಿ ಯಾರೂ ಯೋಚಿಸುವವರಿಲ್ಲ ಅಥವಾ ಚಿಂತಿಸುವವರಿಲ್ಲ. ಅಮೇರಿಕಾದಲ್ಲಿ ಇತ್ತೀಚೆಗೆ ರಾಗಾ ಒಂದು ಸಂವಾದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುವಾಗ, ಭಾರತ ದೇಶ ಉತ್ಪಾದನೆಯನ್ನು ವೃದ್ಧಿಸುವ ನೆಲೆಯಲ್ಲಿ ಯೋಚಿಸಬೇಕು. ಇಲ್ಲದಿದ್ದರೆ ಉತ್ಪಾದನೆ ಕೇತ್ರ ಚೀನಾ, ಬಾಂಗ್ಲಾ ದೇಶದವರ ಸಂರಕ್ಷಣೆಯ ಕ್ಷೇತ್ರವೆನ್ನಿಸಿಕೊಳ್ಳಲಿದೆ. ಉತ್ಪಾದನೆಯಲ್ಲಿ ಚೀನಾ ಪ್ರಾಬಲ್ಯ ಹೊಂದಿದೆ ಎನ್ನುವುದನ್ನೇ ಇಲ್ಲಿನ ಬಹುತೇಕ ಮಾಧ್ಯಮಗಳು ದೇಶದ ಬಗ್ಗೆ ರಾಹುಲ್‌ ಗಾಂಧಿ ಟೀಕೆ ಮಾಡಿದರು ಎಂಬುವುದಾಗಿ ಬಿಂಬಿಸಿದವು. ರಾಹುಲ್‌ ಇಲ್ಲಿನ ಸಮಸ್ಯೆಗಳನ್ನು ಧ್ವನಿಸಿದರು ಎನ್ನುವುದಾಗಿ ಬಿಂಬಿಸಿದ ಯಾವ ಮಾಧ್ಯಮಗಳೂ ಇಲ್ಲ.

ಉತ್ಪಾದನೆಯನ್ನು ಉತ್ತೇಜಿಸುವ ಅಗತ್ಯವನ್ನು ರಾಹುಲ್ ಒತ್ತಿ ಹೇಳಿದರು. ಉತ್ಪಾದನಾ ಕ್ಷೇತ್ರವನ್ನು ಉತ್ತೇಜಿಸುವವರೆಗೆ, ನಿರುದ್ಯೋಗ ಸಮಸ್ಯೆ ಇರುತ್ತದೆ. ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ಮತ್ತು ಯುರೋಪ್‌ ಗಳಲ್ಲಿ ಎದುರಿಸುತ್ತಿರುವ ಸಮಸ್ಯೆಗಳು ನಮ್ಮ ರಾಜಕೀಯದ ಧ್ರುವೀಕರಣಕ್ಕೆ ಕಾರಣವಾಗಿದೆ ಎಂದು ಹೇಳಿರುವುದು ದೇಶದ ಬಗ್ಗೆ ಇರುವ ಕಾಳಜಿ ಎಂದು ಯಾಕೆ ತಿಳಿದುಕೊಳ್ಳಬಾರದು ? ನಿಜಕ್ಕೂ ಈ ದೇಶದ ಬಗ್ಗೆ ಅಪಾರವಾದ ಪ್ರೀತಿ ಇದ್ದವನಲ್ಲಿ ರಾಹುಲ್‌ ಅಮೇರಿಕಾದಲ್ಲಿ ಹೇಳಿರುವ ವಿಷಯಗಳು ಈ ದೇಶದ ಬಗೆಗಿನ ಕಾಳಜಿ ಎಂದೇ ಬಹುಶಃ ಕಾಣಿಸುತ್ತದೆ ಎಂದನ್ನಿಸುತ್ತದೆ. ಇನ್ನು, ರಾಹುಲ್‌ ಗಾಂಧಿ ಭಾರತದಲ್ಲಿಯೂ ಅಮೇರಿಕಾದಲ್ಲಿ ಪ್ರಸ್ತಾಪಿಸಿದ ವಿಚಾರಗಳನ್ನೇ ಅನೇಕ ಬಾರಿ ಧ್ವನಿಸಿದ್ದರು ಎನ್ನುವುದು ಉಲ್ಲೇಖಾರ್ಹ.

ರಾಜಕೀಯದಲ್ಲಿ ಪರ ವಿರೋಧ ಇರುವುದು ಸಹಜ. ಆದರೇ, ರಾಹುಲ್‌ ಹೇಳಿದ್ದನ್ನೆಲ್ಲಾ ತಪ್ಪು ಎಂದು ಹೇಳುವ ವರ್ಗ ರಾಜಕೀಯ ವಲಯದಲ್ಲಿದೆ. ಅಥವಾ ರಾಹುಲ್‌ ಹೇಳಿದ್ದನ್ನೆಲ್ಲಾ ಸರಿ ಎನ್ನುವ ವರ್ಗವೂ ಇದೆ. ರಾಜಕೀಯ ಅಂದ ಮೇಲೆ ಇದು ಸಹಜ. ಈ ಧೋರಣೆಯೇ ಇಲ್ಲಿನ ಸಮಸ್ಯೆಗಳು ಗೌಣವಾಗಿ ಉಳಿಯುವುದಕ್ಕೆ ಮೂಲ ಕಾರಣವಾಗುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ.

ನಿರುದ್ಯೋಗ ದೇಶದ ಆರ್ಥಿಕತೆಯ ಆರೋಗ್ಯವನ್ನು ಹದಗೆಡಿಸುತ್ತದೆ. ಸುಸ್ಥಿರತೆಯನ್ನು ಕಾಯ್ದುಕೊಂಡು ಉತ್ಪಾದನಾ ವಲಯಕ್ಕೆ ಉತ್ತೇಜನ ನೀಡುವಂತೆ ಸರ್ಕಾರ ಮಾಡಿದಾಗಲೇ, ಅಲ್ಲೊಂದಿಷ್ಟು ಉದ್ಯೋಗ ಸೃಷ್ಟಿಯಾಗುವುದಕ್ಕೆ ಸಾಧ್ಯವಿದೆ. ಇದನ್ನೇ ರಾಹುಲ್‌ ಸ್ವಲ್ಪ ಕಟುವಾಗಿ ಹೇಳಿರಬಹುದು ಅಷ್ಟೆ. ರಾಹುಲ್‌ ಹೇಳಿರುವ ವಿಷಯದ ಬಗ್ಗೆ ಚರ್ಚಿಸುವುದನ್ನು ಬಿಟ್ಟು ರಾಹುಲ್ ಅವರು ಎಲ್ಲಿ ಹೇಳಿದ್ದಾರೆ ಎನ್ನುವುದೇ ದೊಡ್ಡ ಚರ್ಚೆಯ ವಿಷಯವಾಗಿರುವುದು ವಿರೋಧಿಸಿದ ವರ್ಗದ ಬೌದ್ಧಿಕ ಬಡಸ್ಥಿಕೆ ಎಂದು ತಿಳಿಯಬೇಕೆನೋ ಗೊತ್ತಿಲ್ಲ.

ದೇಶ ಇಂದು ಜಗತ್ತಿನಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರಗಳಲ್ಲಿ ಮೊದಲ ಸ್ಥಾನದಲ್ಲಿದೆ. ದೇಶದ ಸಂಪನ್ಮೂಲಗಳನ್ನು, ಮಾನವ ಸಂಪನ್ಮೂಲಗಳನ್ನು ಸರಿಯಾಗಿ ಬಳಕೆ ಮಾಡಿಕೊಳ್ಳದೇ ಇರುವುದು ಕೂಡ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಳವಾಗುವುದಕ್ಕೆ ಕಾರಣ. ದೇಶದಲ್ಲಿ ಯುವ ಸಮುದಾಯವನ್ನು ಅತೀವ ಸಂಕಷ್ಟಕ್ಕೆ ತಳ್ಳಿರುವ ನಿರುದ್ಯೋಗ ಸಮಸ್ಯೆ ನಿವಾರಿಸುವಲ್ಲಿ ಮೋದಿ ನೇತೃತ್ವದ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎನ್ನುವುದನ್ನು ದೇಶ ಒಪ್ಪಿಕೊಳ್ಳಲೇ ಬೇಕಿದೆ. ಕಳೆದೊಂದೆರಡು ವರ್ಷಗಳ ಹಿಂದೆ ಪ್ರಧಾನಿ ಮೋದಿ ಅವರ ಜನ್ಮದಿನದಂದು ಮೈಕ್ರೋ ಬ್ಲಾಗಿಂಗ್‌ ಜಾಲತಾಣ ಟ್ವೀಟರ್‌(ಈಗ ಎಕ್ಸ್‌)ನಲ್ಲಿ ʼರಾಷ್ಟ್ರೀಯ ನಿರುದ್ಯೋಗ ದಿನʼ ಎಂದು ಟ್ರೆಂಡ್‌ ಆಗಿರುವುದು ಈ ದೇಶದ ವಾಸ್ತವ ಸ್ಥಿತಿಯನ್ನು ಎತ್ತಿ ಹಿಡಿಯುತ್ತದೆ.

ಔದ್ಯೋಗಿಕ ಕೌಶಲ್ಯಗಳ ಕೊರತೆ ಅಥವಾ ದುಡಿಯುವ ಜನಸಂಖ್ಯೆಯ ಕಡಿಮೆ ಶೈಕ್ಷಣಿಕ ಗುಣಮಟ್ಟ, ವಿಶೇಷವಾಗಿ ನೋಟು ಅಮಾನ್ಯೀಕರಣದ ಬಳಿಕ ಖಾಸಗಿ ಹೂಡಿಕೆಯಲ್ಲಿನ ಮಂದಗತಿಯ ಬೆಳವಣಿಗೆ, ಕಾನೂನು ಸಂಕೀರ್ಣತೆಗಳು, ರಾಜ್ಯಗಳ ಅಸಮರ್ಪಕ ಬೆಂಬಲ, ಕಡಿಮೆ ಮೂಲ ಸೌಕರ್ಯ, ಸಣ್ಣ ಉದ್ಯಮ ಕ್ಷೇತ್ರಗಳಿಗೆ ಅಥವಾ ವ್ಯವಹಾರಗಳಿಗೆ ಹಣಕಾಸು ಹಾಗೂ ಮಾರುಕಟ್ಟೆ ಸಂಪರ್ಕಗಳಿಗೆ ಬೇಕಾಗಿ ಪೂರಕ ವಾತಾವರಣ ಇಲ್ಲದೇ ಇರುವುದು ಮತ್ತು ಶಿಕ್ಷಣ ಹಾಗೂ ಕೌಶಲ್ಯಗಳ ಕೊರತೆಯಿಂದಾಗಿ ದೇಶದ ಬೃಹತ್‌ ಸಂಖ್ಯೆಯ ಉದ್ಯೋಗಿಗಳ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರಿವೆ. ಇವೆಲ್ಲಾ ಅಡಚಣೆಗಳನ್ನು ನೀಗಿಸಬೇಕಿರುವ ಸರ್ಕಾರ ಮೌನವಹಿಸಿರುವುದು ನಿಜಕ್ಕೂ ಆಶ್ಚರ್ಯದ ಸಂಗತಿ ಒಂದೆಡೆಯಾದರೇ, ಇನ್ನೊಂದೆಡೆಯಲ್ಲಿ ಇಡೀ ದೇಶಕ್ಕೆ ದೇಶವೇ ಸಂಕಷ್ಟ ಪಡುತ್ತಿರುವ ನಿರುದ್ಯೋಗದ ಸಮಸ್ಯೆ ಬಗ್ಗೆ ಧ್ವನಿ ಎತ್ತುವುದನ್ನೇ ತಪ್ಪು ಎಂದು ಬಿಂಬಿಸುವ ವಾತಾವರಣ ಸೃಷ್ಟಿಯಾಗಿರುವುದು ಪ್ರಜಾಪ್ರಭುತ್ವಕ್ಕೆ ಧಕ್ಕೆಯೇ ಸರಿ.

ಒಟ್ಟಿನಲ್ಲಿ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಉದ್ಯೋಗ ಖಾತರಿ ಯೋಜನೆ, ಪ್ರಧಾನ ಮಂತ್ರಿ ಉದ್ಯೋಗ ಉತ್ಪಾದನಾ ಕಾರ್ಯಕ್ರಮ, ಪಂಡಿತ್‌ ದೀನ್‌ ದಯಾಳ್‌ ಉಪಾಧ್ಯಾಯ ಗ್ರಾಮೀಣ ಕೌಶಲ ಯೋಜನೆ, ದೀನ್‌ ದಯಾಳ್‌ ಅಂತ್ಯೋದಯ ಯೋಜನೆ, ರಾಷ್ಟ್ರೀಯ ನಗರ ಜೀವನೋಪಾಯ ಮಿಷನ್‌, ಪ್ರಧಾನ ಮಂತ್ರಿ ಮುದ್ರಾ ಯೋಜನೆಗಳು, ಪ್ರಧಾನ ಮಂತ್ರಿ ಕೌಶಲ್‌ ವಿಕಾಸ್‌ ಯೋಜನೆ, ಸ್ಟ್ಯಾಂಡ್‌ ಅಪ್‌ ಇಂಡಿಯಾ ಯೋಜನೆ, ಸ್ಟಾರ್ಟ್‌ ಅಪ್‌ ಇಂಡಿಯಾ, ಮೇಕ್‌ ಇನ್‌ ಇಂಡಿಯಾ ಯೋಜನೆಗಳು ಸೇರಿ ಇನ್ನೂ ಹಲವು ಈ ಸಂಬಂಧಿ ಯೋಜನೆಗಳು ಇದ್ದೂ ಇಲ್ಲದೇ ಇರುವಂತಾಗಿರುವ ಸ್ಥಿತಿಗೆ ತಂದಿರಿಸಿದ ಸರ್ಕಾರದ ಅಸಮರ್ಥತೆ ಈ ದೇಶದ ನಿರುದ್ಯೋಗ ಸಮಸ್ಯೆ ಏರಿಕೆಯಾಗುವುದಕ್ಕೆ ಮೂಲ ಕಾರಣವಾಗಿದೆ. ಇವೆಲ್ಲದಕ್ಕೂ ಉತ್ತರವನ್ನು ಅಧಿಕಾರದಲ್ಲಿರುವ ಸರ್ಕಾರದಿಂದ ನಿರೀಕ್ಷಿಸದೇ ಮತ್ತ್ಯಾರಿಂದ ನಿರೀಕ್ಷಿಸಬೇಕು? ಈ ಸಮಸ್ಯೆಯಿಂದ ಹೊರಬರಲು ಸರ್ಕಾರ ಉದ್ಯೋಗ ಸೃಷ್ಟಿ ಆಧಾರಿತ ಪ್ರಗತಿಯ ಬಗ್ಗೆ ಕಾರ್ಯೋನ್ಮುಖವಾಗಲೇ ಬೇಕಿದೆ. ಈಗ ಎಚ್ಚರಗೊಳ್ಳದೇ ಇದ್ದರೇ, ಮುಂದೆ ಬಹಳ ಕಷ್ಟವಿದೆ.

-ಶ್ರೀರಾಜ್‌ ವಕ್ವಾಡಿ

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!