Saturday, October 12, 2024

ಸಂಘರ್ಷವನ್ನು ಚಾಲ್ತಿಯಲ್ಲಿಡುವ ಪ್ರಯತ್ನದ ನಡುವೆ ಸಿಲುಕಿದ ಸಮಾಜ !

ಮನಸ್ಸಿನ ನಿಷ್ಕಲ್ಮಶ ಭಾವದ ಭಾಷೆಯೇ ಸ್ವರ್ಗದ ಭಾಷೆ   

ಬಹುಶಃ ಯಾವ ಭಾಷೆಯೂ ಭವಿಷ್ಯಕ್ಕೂ, ಸ್ವರ್ಗಕ್ಕೂ ತೊಡಕಾಗುವುದಿಲ್ಲ. ಭಾಷೆಯ ಕಾರಣದಿಂದಲೇ ಭವಿಷ್ಯ ಹಾಳಾದ ಉದಾಹರಣೆ ಎಲ್ಲಿಯೂ ಇಲ್ಲ. ಭಾಷೆ ಒಂದು ಸಂಕೀರ್ಣ ಸಂವಹನ ಮಾಧ್ಯಮ. ತಲುಪಿಸುವ ರೀತಿ ಸರಿಯಾಗಿದ್ದರೇ ಎಲ್ಲಿಯೂ ಭಾಷೆಯ ಕಾರಣದಿಂದ ತೊಡಕಾಗುವುದಿಲ್ಲ. ತಲುಪಿಸುವ ರೀತಿ ಸರಿಯಾಗಿರಬೇಕು ಎನ್ನುವುದು ಸುಮ್ಮನೆ ಅಲ್ಲ. ಬಹುಶಃ ಒಂದೇ ಸಿದ್ಧ ಮಾದರಿಯಲ್ಲಿ ಯಾವುದೇ ಒಂದು ಭಾಷೆ ಸುದೀರ್ಘ ಕಾಲದವರೆಗೆ ಬಳಕೆಯಾದ ಉದಾಹರಣೆ ಇಲ್ಲವೇನೋ.

ಭಾರತದಲ್ಲಿರುವ ಎಲ್ಲಾ ಪ್ರಮುಖ ಭಾಷೆಗಳು, ಪ್ರಾದೇಶಿಕ ಭಾಷೆಗಳು ಅತ್ಯುತ್ತಮ ಮನಸ್ಸು, ಪ್ರತಿಭೆ, ಬೆಲೆಕಟ್ಟಲಾಗದ ಚಿಂತನೆ, ಚಿಂತನಶೀಲತೆ, ವಿವೇಚನೆ, ಸೃಜನಶೀಲತೆ, ವೈಚಾರಿಕ ಬುದ್ಧಿವಂತಿಕೆಯನ್ನು ಅಪಾರವಾಗಿ ಧಾರೆ ಎರೆದಿವೆ. ಎಲ್ಲಾ ಭಾಷೆಗಳಿಂದಲೂ  ವ್ಯಾವಹಾರಿಕವಾಗಲಿ, ವೈಯಕ್ತಿಕವಾಗಲಿ ಸಂವಹನದ ಪ್ರವಾಹ ನಿತ್ಯ ನಿರಂತರ ಹರಿಯುತ್ತಲೇ ಇದೆ.

ಎರಡು ವಾದಗಳು ಮುಖಾಮುಖಿಯಾದಾಗ ಅಥವಾ ಈ ಮುಖಾಮುಖಿಯ ಸಂಘರ್ಷದಿಂದ ಹುಟ್ಟುವ ಸಮಸ್ಯೆಗಳನ್ನು ನಾವು ಭಾಷೆಯ ಮೂಲಕವೇ ಗ್ರಹಿಸುವುದು ಅನಿವಾರ್ಯವಾದರೂ, ಇಲ್ಲಿ ನಾವು ಗುರುತಿಸುತ್ತಿರುವ ಸಮಸ್ಯೆಗಳು ಭಾಷೆಯಲ್ಲಿಲ್ಲ, ಬದಲಾಗಿ, ಸಾಂಸ್ಕೃತಿಕ ಭಿನ್ನತೆ ಹಾಗೂ ವಾದಗಳ ಭಿನ್ನತೆಯ ಮೂಲಕ ಜನಿಸುವ ತೊಡಕುಗಳಲ್ಲಿವೆ. ಇದರ ಒಳಿತು ಕೆಡುಕುಗಳ ಬಗ್ಗೆ ಈಗಾಗಲೇ ಅನೇಕ ಚರ್ಚೆಗಳು ಎದ್ದು ಪ್ರಯೋಜನಕ್ಕೆ ಬಾರದೆ ಸೋತಿವೆ. ಇಂತಹ ಚರ್ಚೆಗಳಲ್ಲಿ ಬಹುತೇಕ ಎಲ್ಲಾ ಸಂದರ್ಭಗಳಲ್ಲಿಯೂ ಸಾಮಾನ್ಯವಾಗಿ ಭಿನ್ನ ಮನಸ್ಥಿತಿಗಳಿವೆ, ಭಿನ್ನ ಆಚರಣೆಗಳಿವೆ, ಭಿನ್ನ ಸಂಸ್ಕೃತಿಗಳಿವೆ, ಈ ಭಿನ್ನತೆಗಳೇ ಅನೇಕ ತೊಡಕುಗಳನ್ನು ಸೃಷ್ಟಿ ಮಾಡುತ್ತಿವೆ ಎನ್ನುವ ವಿಚಾರಗಳೇ ಮುಂದೆ ಬಂದಿವೆ. ಹಾಗಾದರೇ ಯಾವ ವಾದ, ಯಾವ ವಾದದ ಮೇಲೆ ತನ್ನ ನಿಲುವನ್ನು ಹೇರುತ್ತಿದೆ ? ಎನ್ನುವ ಪ್ರಶ್ನೆ ಸಹಜವಾಗಿ ಮುನ್ನೆಲೆಗೆ ಬಂದು ಕಾಡುತ್ತದೆ. ಇದು ಈ ʼಭಾಷೆʼಯ ವಿಷಯದಲ್ಲಿ ಬಹಳಷ್ಟು ಕಾಡುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ.  ಮತ್ತು ಈ ಭಿನ್ನತೆಗಳು ಈ ಎರಡು ವಾದಗಳ ನಡುವೆ ನಡೆಯಬೇಕಾದ ವಿಚಾರ, ವಿಷಯ ವಿನಿಮಯಕ್ಕೆ ಅಡೆತಡೆಯಾಗುತ್ತದೆ ಎನ್ನುವುದೇ ಚರ್ಚೆಯ ಮೂಲ ಬಿಂದು.

ಸಂಸ್ಕೃತ ಭಾಷೆ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಪುರಾತನ ಭಾರತೀಯ ಸಂಸ್ಕೃತಿ, ಸಾಹಿತ್ಯ, ವಿಜ್ಞಾನ ಹಾಗೂ ತತ್ವಶಾಸ್ತ್ರಗಳಲ್ಲಿ ವಿಪುಲವಾಗಿ ಉಪಯೋಗಿಸಲ್ಪಟ್ಟಿರುವ ಭಾಷೆ ಎಂಬ ಕೀರ್ತಿಯೂ ಸಂಸ್ಕೃತ ಭಾಷೆಗಿದೆ. ಆಧುನಿಕ ಭಾರತೀಯ ಭಾಷೆಗಳಲ್ಲಿನ ಅನೇಕ ಪದಗಳು ಸಂಸ್ಕೃತದಿಂದ ಎರವಲು ಪಡೆದವುಗಳೇ ಆಗಿವೆ ಎನ್ನುವ ನಂಬಿಕೆಯೂ ಇದೆ. ಹೀಗೆ ಪ್ರತಿ ಭಾಷೆಯೂ ಒಂದಲ್ಲಾ ಒಂದು ಭಾಷೆಯಿಂದ ಅನೇಕ ಪದಗಳನ್ನು ಎರವಲು ಪಡೆದುಕೊಂಡೆ ಪರಿಪೂರ್ಣತೆಯನ್ನು ಕಂಡುಕೊಂಡಿದೆ. ಸದ್ಯ ಈ ಸಂಸ್ಕೃತ ಭಾಷೆಯ ಶ್ರೇಷ್ಠತೆಯ ವಾದ ಮತ್ತು ಪ್ರತಿವಾದ ಮೇಲೆದ್ದಿದೆ. ಉಡುಪಿಯ ಪರ್ಯಾಯ ಶ್ರೀ ಸುಗುಣೇಂದ್ರ ಸ್ವಾಮೀಜಿ ಅವರು ಸಭಾ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ‘ಸಂಸ್ಕೃತ ಭಾಷೆ ಗೊತ್ತಿಲ್ಲದೇ ಇರುವವರು ಸ್ವರ್ಗಕ್ಕೆ ಹೋಗಲು ಸಾಧ್ಯವಿಲ್ಲ’ ಎಂದು ಹೇಳಿಬಿಟ್ಟರು. ಸುಗುಣೇಂದ್ರ ತೀರ್ಥರ ಬೇರೆ ವಿವಾದವನ್ನು ಬಿಟ್ಟು ಮಾತಾಡುವುದಾದರೇ, ಈ ವಿಷಯದಲ್ಲಿ ಬಹುಶಃ ಸ್ವಾಮಿಜಿ ಅವರಿಗೆ ಇನ್ನೊಂದು ಭಾಷೆಯನ್ನು ದೂಷಿಸುವ ಯಾವ ಉದ್ದೇಶವೂ ಇದ್ದಿರಲಿಕ್ಕಿಲ್ಲ‌. ಅವರು ಮಾತನಾಡಿರುವ ವೀಡಿಯೋ ಅನ್ನು ಗಮನಿಸಿಸರೇ, ಅವರು ಸಂಸ್ಕೃತ ಭಾಷೆಯ ಮಹತ್ವವನ್ನು ಹೇಳುತ್ತಿದ್ದರು, ಸಂಸ್ಕೃತ ಭಾಷೆಯಲ್ಲಿನ ವಿದ್ವತ್ತು ಅಪರಾವಾದದ್ದು, ಅದನ್ನು ಕಲಿಯಬೇಕು ಎಂಬ ಅರ್ಥದಲ್ಲಿಯೇ ಮಾತಾಡಿದ್ದು ಅಂತ ತೀರಾ ಸಾಮಾನ್ಯನಿಗೂ ತಿಳಿಯುತ್ತದೆ. ಆದರೇ, ಇಲ್ಲಿ ಚರ್ಚೆಗೆ ಗ್ರಾಸವಾದ ಶಬ್ದ ‘ಸ್ವರ್ಗ’.

ಯಾರೋ ಒಬ್ಬ ಸಾಮಾನ್ಯ ಈ ಮಾತನ್ನು ಹೇಳಿದ್ದರೇ ಇಷ್ಟೊಂದು ವಿವಾದಕ್ಕೆ ಈ ವಿಷಯ ಗ್ರಾಸವಾಗುತ್ತಿರಲಿಲ್ಲವೇನೋ. ಆದರೇ ಸ್ವಾಮೀಜಿ ಆದವರೊಬ್ಬರು ಹೇಳಿರುವ ಕಾರಣಕ್ಕೆ ವಿವಾದ ಸೃಷ್ಟಿಯಾಗಿದೆ. ಒಬ್ಬ ಸಾಮಾಜಿಕವಾಗಿ ಜವಾಬ್ದಾರಿಯುತ ಸ್ಥಾನದಲ್ಲಿ ಬದುಕುತ್ತಿರುವವ ಇಂತೆಲ್ಲಾ ಸೂಕ್ಷ್ಮ ವಿಚಾರಗಳಲ್ಲಿ ಬಹಳ ಜಾಗೃತೆಯಿಂದಿರಬೇಕು ಎನ್ನುವುದು ಸುಮ್ಮನೆ ಅಲ್ಲ ಎನ್ನುವುದು ಈಗ ಮತ್ತೆ ಹೌದಂತನ್ನಿಸಿಕೊಂಡಿದೆ.

ಜಗತ್ತಿನ ಎಲ್ಲಾ ಭಾಷೆಗಳೂ ಕೂಡ ಅದರದ್ದೇ ಆದ ವಿದ್ವತ್ತನ್ನು ಹೊಂದಿದೆ. ಸಂಸ್ಕೃತವೂ ಅದರಿಂದ ಹೊರತಾಗಿಲ್ಲ. ಕಲಿಯುವುದಕ್ಕೆ ಸಾಧ್ಯವಾದರೇ ಎಲ್ಲವನ್ನೂ ಕಲಿಯಬಹುದು. ಎಲ್ಲವೂ ʼಸ್ವರ್ಗದ ಭಾಷೆʼಯೇ ಆಗಿದೆ. ಜಿಜ್ಞಾಸೆಯಿಂದ ಆತ್ಮೀಯರೊಬ್ಬರು ನನ್ನಲ್ಲಿ ಈ ಬಗ್ಗೆ ಚರ್ಚಿಸುತ್ತಿರುವಾಗ ‘ದೇವರು ಎಲ್ಲವನ್ನೂ ಬಲ್ಲವ, ದೇವರಿಗೆ ಸಂಸ್ಕೃತ ಬಿಟ್ಟು ಬೇರೆ ಭಾಷೆಗಳ ಜ್ಞಾನವಿಲ್ಲವೇ ಹಾಗಾದರೇ ?’ ಅಂತ ಕೇಳಿದರು. ದೇವರ ಭಾಷೆ ‘ಮನಸ್ಸಿನ ಭಾಷೆ’, ಕನ್ನಡ, ತುಳು ಅಥವಾ ಉಳಿದ ಯಾವ ಭಾಷೆಗಳಲ್ಲಿಯೂ ದೇವರೊಂದಿಗೆ ಸಂವಹನ ಮಾಡಬಹುದು, ನಿಮ್ಮ ಮನಸ್ಸಿನ ನಿಷ್ಕಲ್ಮಶ ಭಾವದ ಭಾಷೆಯೇ ಸ್ವರ್ಗದ ಭಾಷೆ. ಸರಿಯಾದ ಮಾರ್ಗದಲ್ಲಿದ್ದರೇ ಎಲ್ಲವೂ ಸೇರುವುದು ಸ್ವರ್ಗಕ್ಕೆ ಅಂತಂದೆ.‌ ʼಸ್ವರ್ಗ ಎಲ್ಲಿದೆ ಮಾರಾಯರೇ ?ʼ ಅಂತ ಮರು ಪ್ರಶ್ನಿಸಿದರು. ಭಾಷೆ, ಧರ್ಮ, ಜಾತಿ, ಮೇಲು ಕೀಳು ಹಾಗೂ ಅನಗತ್ಯ ಇತರೆ ಕಾರಣಗಳಿಗೆ ದ್ವೇಷ ಮಾಡದೇ ಪ್ರೀತಿಯ ಸಂವಹನ ಮಾರ್ಗದಲ್ಲಿ ಬದುಕಿದರೇ ಅದುವೇ ಸ್ವರ್ಗ. ಸರಿಯಾದ ರೀತಿಯ  ತಲುಪಿಸುವ ಪ್ರೀತಿಯ ಮಾರ್ಗವೇ ʼಸ್ವರ್ಗʼ ಅಂತಂದೆ. ಬದುಕಬೇಕಾಗಿರುವುದೇ ಹೀಗೆ. ಒಂದು ಭಾಷೆ, ಒಂದು ಸಂಸ್ಕೃತಿ, ಒಂದು ಜಾತಿ ಶ್ರೇಷ್ಠ ಎನ್ನುವ ಧ್ವನಿಯನ್ನು ಹೇರುವ ಪ್ರಯತ್ನ ಮಾಡಿದಾಗಲೇ ಚರ್ಚೆಗೆ ಕಾರಣವಾಗುತ್ತದೆ. ಇಲ್ಲಿ ಸ್ವಾಮೀಜಿ ಅವರ ಭಾಷಣವನ್ನು ನೋಡಿದರೇ ಅವರ ಧ್ವನಿಯಲ್ಲಿ ಹೇರುವ ಉದ್ದೇಶ ಕಾಣಿಸುವುದಿಲ್ಲ ಎನ್ನುವುದು ಒಪ್ಪಿತ ವಿಷಯ. ಆದರೇ, ಸಾಮಾಜಿಕವಾಗಿ ಈ ಹೇಳಿಕೆ ದ್ವೇಷದ ಭಾವ ಪಡೆಯಿತು. ಅದು ಸಹಜವೇ ಸರಿ. ಇಲ್ಲಿ ನೂರು ಮನಸ್ಸಿದ್ದರೇ, ನೂರು ಭಾವನೆಗಳಿರುತ್ತವೆ. ಸ್ವಾಮೀಜಿ ಏನೋ ಹೇಳುವ ಭರದಲ್ಲಿ ಏನೋ ಅರ್ಥ ಪಡೆದು ಅದು ಅತಿಗೆ ತಲುಪಿ ಪ್ರಮಾದವಾಗಿ ಹೋಯಿತು ಎನ್ನದೇ ಬೇರೆ ಉಪಾಯವಿಲ್ಲ. ಒಂದು ವೇಳೆ ಹೇರುವ ಉದ್ದೇಶದಿಂದಲೇ ಹೇಳಿದ್ದು ಹೌದಾದರೇ ಅದು‌ ಸ್ವಾಮೀಜಿ ಹೇಳಲಿ ಅಥವಾ ಇನ್ನ್ಯಾರೇ ಹೇಳಲಿ ನಿಜಕ್ಕೂ ಅಕ್ಷಮ್ಯ.

ಇನ್ನು, ವಿವಾದ ಸೃಷ್ಟಿಯಾಗುವುದಕ್ಕೆ ಈಗ ವಿಷಯ ಬೇಕಂತಿಲ್ಲ. ಜಾತಿ ಮತ್ತು ವಾದ ಯಾವುದು ಅಂತ ಗೊತ್ತಿದ್ದರೇ ಸಾಕು. ಪ್ರತಿ ಹೇಳಿಕೆಯೂ ವಿವಾದವೇ ಆಗಿ ಸಂಘರ್ಷಕ್ಕೆ ಕಾರಣವಾಗುವ ದುರಂತ ಸ್ಥಿತಿ ನಿರ್ಮಾಣವಾಗಿ ಬಿಟ್ಟಿದೆ. ಹೌದು, ಈ ಸಮಾಜಕ್ಕೆ ಎಂದೂ ಕಡಿಮೆಯಾಗದ ಒಂದು ಅಹಂಕಾರ, ಸೊಕ್ಕು ಇದೆ. ವಾದ ಮತ್ತು ಪ್ರತಿವಾದಗಳನ್ನು ಸಂಘರ್ಷಕ್ಕೆ ತಲುಪಿಸುವುದರಲ್ಲೇ ಸದಾ ಆನಂದ ಬಯಸುತ್ತದೆ ಎಂದರೇ ಇದರಷ್ಟು ದುರಂತ ಮತ್ತೊಂದಿಲ್ಲ. ಈ ಹಿಂದೆ ಸಂಗೀತ ನಿರ್ದೇಶಕ ಹಂಸಲೇಖ, ಸಿನೆಮಾ ನಿರ್ದೇಶಕ, ನಟ ಉಪೇಂದ್ರ ಅವರ ಹೇಳಿಕೆಗಳೂ ಹೀಗೆ ವಿವಾದ ಸೃಷ್ಟಿಸಿ ವಾದ, ಪ್ರತಿವಾದಗಳ ಸಂಘರ್ಷ ಸೃಷ್ಟಿ ಮಾಡಿದ್ದವು ಎನ್ನುವುದನ್ನು ನಾವು ಸ್ಮರಿಸಿಕೊಳ್ಳಬೇಕಿದೆ.

ಹಂಸಲೇಖ, ಉಪೇಂದ್ರರ ಹೇಳಿಕೆ ಒಂದು ಜಾತಿ, ಆಚರಣೆಯ ಬಗ್ಗೆ ನಿಂದನೆ ಎಂಬ ವಾದಕ್ಕೆ ಕಾರಣಯಿತು. ಈಗ ಸುಗುಣೇಂದ್ರ ತೀರ್ಥರ ಈ ಹೇಳಿಕೆ ಭಾಷೆಯ ಆಧಾರದಲ್ಲಿ ಮೇಲು, ಕೀಳು ಎಂಬ ಚರ್ಚೆಗೆ ಕಾರಣವಾಯಿತು. ಇಲ್ಲಿ ತಮಗೆ ಬೇಕಾದದ್ದೇ ಶ್ರೇಷ್ಠ. ಸಮಾಜಕ್ಕೆ ಬೇಕಾಗಿರುವುದರ ಬಗ್ಗೆ ಯಾವ ವಾದವೂ ಚಿಂತಿಸುವುದಿಲ್ಲ ಎನ್ನುವುದು ದುರಂತವೇ ಸರಿ.

ಹೀಗೆ ಜಾತಿ, ಧರ್ಮ, ಭಾಷೆಗಳ ವಿಚಾರಗಳಲ್ಲಿ ವಾದ ಮತ್ತು ಪ್ರತಿವಾದಗಳು ಒಂದಕ್ಕೊಂದು ಎಷ್ಟು ಜರೆದಿಲ್ಲ ? ಎಂದು ಈ ಸಂಘರ್ಷಗಳಿಗೆ ಕೊನೆ ? ಅಥವಾ ಈ ವಾದ ಮತ್ತು ಪ್ರತಿವಾದ  ತನ್ನ ಉಳಿವಿಗಾಗಿ ನಿರಂತರ ಈ ಸಂಘರ್ಷವನ್ನು ಚಾಲ್ತಿಯಲ್ಲಿಡುತ್ತದೆಯೇ ? ಈ ಜಾತಿ, ಧರ್ಮ, ಭಾಷೆಗಳ ಸಂಘರ್ಷ ಹೀಗೆಯೆ ಮುಂದುವರಿದರೇ ಒಂದು ಸ್ವಾಸ್ಥ್ಯ ಸಮಾಜದಲ್ಲಿ ಬದುಕುವುದು ಯಾವಾಗ ? ಯೋಚನೆ ಮಾಡಿ.

ಶ್ರೀರಾಜ್ ವಕ್ವಾಡಿ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!