Monday, September 9, 2024

ವಕ್ವಾಡಿ : ಮಾರಕಾಯುಧಗಳಿಂದ ಹಲ್ಲೆ | ಗಾಂಜಾ ತಡೆಗಟ್ಟಲು ಆಗ್ರಹ : ಡಿವೈಎಸ್‌ಪಿ ಗೆ ಮನವಿ.

ಜನಪ್ರತಿನಿಧಿ (ಕುಂದಾಪುರ) :  ತಾಲೂಕಿನ ಕಾಳಾವಾರ ಗ್ರಾಮ ಪಂಚಾಯತ್‌ ವ್ಯಾಪ್ತಿಗೆ ಒಳಪಡುವ ವಕ್ವಾಡಿಯ ಖಾಸಗಿ ಬಾರೊಂದರಲ್ಲಿ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ತಂಡವೊಂದು ವ್ಯಕ್ತಿಗಳ ಮೇಲೆ ಮಾರಕಾಯುಧಗಳಿಂದ ಹಲ್ಲೆ ನಡೆಸುವಲ್ಲಿಯವರೆಗೆ ಬಂದು ತಲುಪಿತ್ತು. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದು, ಎರಡು ರಿಕ್ಷಾಗಳ ಗಾಜು ಜಖಂಗೊಂಡಿವೆ. ಈ ಪ್ರಕರಣ ಜಿಲ್ಲೆಯಾದ್ಯಂತ ಆತಂಕಕ್ಕೆ ಕಾರಣವಾಗಿತ್ತು.

ಗಾಂಜಾ ಸೇವಿಸಿ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ ಎಂದು ದೂರುದಾರರು ನೀಡಿರುವ ಹೇಳಿಕೆಯ ಬೆನ್ನಲ್ಲೇ ವಕ್ವಾಡಿ ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಮತ್ತು ಕುಂದಾಪುರವನ್ನೂ ಒಳಗೊಂಡು ಗೋಪಾಡಿ, ಕುಂಭಾಶಿ, ಕೋಟೇಶ್ವರ, ಬೀಜಾಡಿ, ಕೋಟೇಶ್ವರ ಸೇರಿ ಇನ್ನೂ ಅನೇಕ ಕಡೆಗಳಲ್ಲಿ ಗಾಂಜಾ ಹಾವಳಿ ಹೆಚ್ಚಾಗುತ್ತಿದೆ, ಗಾಂಜಾ ಮಾರಾಟವೂ ಎಗ್ಗಿಲ್ಲದೇ ನಡೆಯುತ್ತಿದೆ, ಯುವಕರು ಈ ಕಾರಣದಿಂದ ದಾರಿ ತಪ್ಪುತ್ತಿದ್ದಾರೆ. ಇದನ್ನು ತಡೆಗಟ್ಟಬೇಕು, ಗಾಂಜಾ ಜಾಲವನ್ನು ನಿರ್ಮೂಲನೆ ಮಾಡಬೇಕು ಎಂದು ವಕ್ವಾಡಿ ಗ್ರಾಮಸ್ಥರು, ಕಾಳಾವಾರ ಗ್ರಾಮ ಪಂಚಾಯತ್‌, ಜನಸೇವಾ ಟ್ರಸ್ಟ್‌ ಮೂಡುಗಿಳಿಯಾರು, ಟೀಂ ಅಭಿಮತ, ಲಯನ್ಸ್‌ ಕ್ಲಬ್‌ ವತಿಯಿಂದ ಕುಂದಾಪುರ ಡಿವೈಎಸ್‌ಪಿ ಕೆ.ಯು. ಬೆಳ್ಳಿಯಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.

ವಕ್ವಾಡಿಯ ಭಾಗದಲ್ಲಿ ಈಗಾಗಲೇ ಗಾಂಜಾ, ಬೆಟ್ಟಿಂಗ್ ಧಂದೆ, ಇಸ್ಪೀಟ್ ಹಾಗೂ ಅನೇಕ ಕಾನೂನು ಬಾಹಿರ ಹಾಗೂ ಜನರ ಜೀವಕ್ಕೆ ಆಪತ್ತು ತರುವ ಚಟುಚಟಿಕೆಗಳು ನಡೆಯುತ್ತಿವೆ. ದಿನಾಂಕ 18/08/2024ರ ಸಂಜೆ ನಡೆದ ಪ್ರಕರಣವು ಅದರ ತೀವ್ರತೆಗೆ ಸಾಕ್ಷಿ ಆಗಿದೆ. ಪ್ರಕರಣದಲ್ಲಿ ಈಗಾಗಲೇ ಕೆಲವು ವ್ಯಕ್ತಿಗಳ ಬಂಧನ ಆಗಿದೆ ಆದರೆ FIR ನಲ್ಲಿ ದಾಖಲಿಸಿರುವಂತೆ ನಿಜವಾದ ನಟೋರಿಯಸ್‌ ಕ್ರಿಮಿನಲ್ ಗಳಾದ A2 ಆರೋಪಿ ಕುಂಭಾಶಿಯ ಗಣೇಶ ಮತ್ತು A1 ಆರೋಪಿ ವಕ್ವಾಡಿಯ ಎಡ್ವರ್ಡ್ ಹಾಗೂ A5 ಅರೋಪಿ ಇಲಿಯಾಸ ಹಾಗೂ ಇತರರನ್ನು ಬಂಧಿಸಿಲ್ಲ. ಇದು ಇಡೀ ವಕ್ವಾಡಿಯ ಜನರು ಚಿಂತೆಗೀಡಾಗುವಂತೆ ಮಾಡಿದೆ. ಕುಂಭಾಶಿಯ ಗಣೇಶ ಈಗಾಗಲೇ ಹಲವಾರು ಪ್ರಕರಣಗಳಲ್ಲಿ ಇದ್ದು, ವಕ್ವಾಡಿಯಲ್ಲಿ ಹಲವಾರು ಗಲಾಟೆಗಳನ್ನು ಮಾಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾನೆ ಹಾಗೂ ಎಡ್ವರ್ಡ್ ತಲವರು ಉಪಯೋಗಿಸಿದ್ದಾನೆ. ಅಲ್ಲದೇ ಇವರುಗಳು ದೂರು ಕೊಟ್ಟವರು ಮತ್ತು ಅದಕ್ಕೆ ಸಹಕರಿಸಿದ ಸಾರ್ವಜನಿಕರಿಗೆ ಬೆದರಿಕೆಯನ್ನೂ ಹಾಕಿರುತ್ತಾನೆ. ಮಚ್ಚುಗಳನ್ನು ಸಾರ್ವಜನಿಕವಾಗಿ ಪ್ರದರ್ಶನ ಮಾಡುತ್ತಾ ಬೈಕಿನಲ್ಲಿ ಕುಳಿತು ಹೋಗುತ್ತಿರುದನ್ನು ಸಾರ್ವಜನಿಕರು ನೋಡಿದ್ದು, ಮುಖ್ಯವಾಗಿ ಅವರ ಬಂಧನ ಆಗಿಲ್ಲದೇ ಇರುವುದು ಚಿಂತೆಗೀಡು ಮಾಡಿದೆ. ಇಲಾಖೆಯು ಇವರನ್ನು ಕೂಡಲೇ ಬಂಧಿಸಿ ಸೂಕ್ತ ಶಿಕ್ಷೆ ವಿಧಿಸುವಂತೆ ಮಾಡಬೇಕು ಮತ್ತು ಗಾಂಜಾದ ಹಾವಳಿಯ ಸಂಪೂರ್ಣ ನಿಯಂತ್ರಣಕ್ಕೆ ಕ್ರಮ ವಹಿಸಬೇಕು ಎಂದು ವಕ್ವಾಡಿಯ ಸಮಸ್ತ ಜನರು ಮನವಿ ಪತ್ರದ ಮೂಲಕ ಆಗ್ರಹಿಸಿದ್ದಾರೆ.

ಗಾಂಜಾ ತಡೆಗಟ್ಟುವಲ್ಲಿ ಆಗ್ರಹಿಸಿ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಈ ಗಾಂಜಾ ಹಾವಳಿಯಿಂದ ಸಾರ್ವಜನಿಕರು ಶಾಂತಿಯಿಂದ ಜೀವನ ಮಾಡುವುದೇ ಕಷ್ಟವಾಗುತ್ತಿದೆ. ಆದ್ದರಿಂದ ಇದನ್ನು ತಡೆಗಟ್ಟಬೇಕು. ಗಾಂಜಾ ಸೇವನೆ ಮಾಡಿ ದುಷ್ಕರ್ಮಿಗಳು ಏನನ್ನು ಮಾಡುವುದಕ್ಕೂ ಹಿಂಜರಿಯುವುದಿಲ್ಲ. ಈ ಭಯದಿಂದಲೇ ಗ್ರಾಮದ ಹಾಗೂ ಸುತ್ತಮುತ್ತಲಿನ ಪರಿಸರದ ಸಾರ್ವಜನಿಕರು ಮುಂದೆ ಬಂದು ಈ ಬಗ್ಗೆ ಹೇಳುವುದಕ್ಕೆ ಹಿಂಜರಿಯುತ್ತಿದ್ದು, ಗಾಂಜಾ ಹಾವಳಿಯಿಂದ ಊರು ಕೇರಿಯ ಜನರು ಭಯದಿಂದ ಬದುಕುವಂತಾಗಿದೆ. ಗಾಂಜಾ ತಡೆಗಟ್ಟುವಲ್ಲಿ ಪೊಲೀಸ್‌ ಇಲಾಖೆ ಮುತುವರ್ಜಿ ವಹಿಸಿ ಕಾರ್ಯನಿರ್ವಹಿಸಬೇಕೆಂದು ಹಾಗೂ ರಾತ್ರಿ ವೇಳೆ ಅಗತ್ಯವಾಗಿ ಪೊಲೀಸ್‌ ಗಸ್ತು ಮಾಡುವಂತೆ ಮನವಿದಾರರು ತಿಳಿಸಿದರು.

ಈ ಸಂದರ್ಭದಲ್ಲಿ ವಕ್ವಾಡಿ, ಕುಂಭಾಶಿ ಗ್ರಾಮಸ್ಥರು ಸೇರಿ ಕಾಳಾವರ ಗ್ರಾಮ ಪಂಚಾಯತ್‌ ಸದಸ್ಯರಾದ ರಮೇಶ್‌ ಶೆಟ್ಟಿ ವಕ್ವಾಡಿ, ರಾಮಚಂದ್ರ ನಾವಡ, ರವಿರಾಜ್‌ ಶೆಟ್ಟಿ ವಕ್ವಾಡಿ, ಚಂದ್ರ ಪೂಜಾರಿ ಅಸೋಡು, ಟೀಂ ಅಭಿಮತ ಮತ್ತು ಜನಸೇವಾ ಟ್ರಸ್ಟ್‌ ಮೂಡುಗಿಳಿಯಾರಿನ  ವಸಂತ್‌ ಗಿಳಿಯಾರ್‌, ಬಿಜೆಪಿಯ ನಿಕಟ ಪೂರ್ವ ಅಧ್ಯಕ್ಷ ಶಂಕರ್‌ ಅಂಕದಕಟ್ಟೆ, ಬಿಜೆಪಿ ಕುಂದಾಪುರ ಘಟಕದ ಅಧ್ಯಕ್ಷ ಸುರೇಶ್‌ ಶೆಟ್ಟಿ ಬೀಜಾಡಿ, ಲೋಕೇಶ್‌ ಅಂಕದಕಟ್ಟೆ, ಸುಧಾಕರ ದೇವಾಡಿಗ ವಕ್ವಾಡಿ ಮೊದಲಾದವರು ಇದ್ದರು.

ಕಾಳಾವರ ಗ್ರಾಮ ಪಂಚಾಯತ್‌ ನಿಂದ ಗಾಂಜಾ ತಡೆಗಟ್ಟಲು ಡಿವೈಎಸ್‌ಪಿ ಗೆ ಮನವಿ.
ಜನಸೇವಾ ಟ್ರಸ್ಟ್‌ ಮೂಡುಗಿಳಿಯಾರು, ಟೀಂ ಅಭಿಮತದಿಂದ ಗಾಂಜಾ ತಡೆಗಟ್ಟಲು ಮನವಿ.
ಲಯನ್ಸ್‌ ಕ್ಲಬ್‌ ನಿಂದ ಗಾಂಜಾ ತಡೆಗಟ್ಟಲು ಮನವಿ.
ಪತ್ರಕರ್ತ ವಸಂತ್‌ ಗಿಳಿಯಾರ್‌ ಡಿವೈಎಸ್‌ಪಿ ಅವರಲ್ಲಿ ಗಾಂಜಾ ತಡೆಗಟ್ಟುವಲ್ಲಿ ಕ್ರಮ ವಹಿಸುವಂತೆ ಮನವಿ ಮಾಡಿಕೊಂಡರು.
ಕಾಳಾವರ ಗ್ರಾಮ ಪಂಚಾಯತ್‌ ಸದಸ್ಯ ರಮೇಶ್‌ ಶೆಟ್ಟಿ ವಕ್ವಾಡಿ ಘಟನೆಯನ್ನು ವಿವರಿಸಿದರು. ಆರೋಪಿಗಳನ್ನು ಶೀಘ್ರವಾಗಿ ಬಂಧಿಸಿ ಶಿಕ್ಷೆ ವಿಧಿಸುವಂತೆ ಮನವಿ ಮಾಡಿಕೊಂಡರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!