spot_img
Wednesday, January 22, 2025
spot_img

ಕಡಲ್ಕೊರೆತ : ಸಾಕು ಭರವಸೆ, ಬೇಕು ಶಾಶ್ವತ ಪರಿಹಾರ

ಕಡಲ್ಕೊರೆತ ತಡೆಗಟ್ಟಲು ಜನಪ್ರತಿನಿಧಿಗಳು, ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ

 -ಶ್ರೀರಾಜ್‌ ವಕ್ವಾಡಿ
ಮಳೆಗಾಲ ಬಂತೆಂದರೇ, ಕರಾವಳಿ ತೀರದ ಜನರಿಗೆ ಸಮಸ್ಯೆಯೇ ಸರಿ. ಮಳೆಗಾಲದಲ್ಲಿ ಕಡಲು ಪ್ರಕ್ಷುಬ್ಧಗೊಳ್ಳುವುದು ತೀರಾ ಸಾಮಾನ್ಯ. ಕಡಲತೀರದ ಜನರು ಮಳೆಗಾಲದಲ್ಲಿ ತಮ್ಮ ಬದುಕನ್ನು ಸಾಗಿಸುವುದು ಎದೆಗಾರಿಕೆಯೇ ಸರಿ.

ಮಳೆಗಾಲದಲ್ಲಿ ಸಮುದ್ರ ತೀರದ ಅನೇಕ ಪ್ರದೇಶಗಳನ್ನು ಭೀಮ ಗಾತ್ರದ ಅಲೆಗಳು ಆಪೋಶನ ಪಡೆಯುತ್ತಲೇ ಇವೆ. ಕಡಲ ಅಲೆಗಳು ಬಿರುಸು ಜಾಸ್ತಿಯಾಗಿದೆ. ಕಡಲ್ಕೊರೆತದಿಂದ ಮರಳಿದ ದಿಬ್ಬಗಳು ಕೊರೆದು ಹೋಗುತ್ತಿವೆ. ಕಡಲಿನ ದೈತ್ಯ ಅಲೆಗಳು ಕಿನಾರೆಯಂಚಿಗೆ ಅಸಹಜವಾಗಿ ಬಡಿಯುತ್ತಿದ್ದರೇ ತೀರವಾಸಿಗಳ ಬದುಕು ಮೂರಾಬಟ್ಟೆಯಾಗುವುದು ನಿಶ್ಚಿತ. ಕಡಲಿನ ಕೊರೆತಕ್ಕೆ ಸರ್ಕಾರ ಅನೇಕ ಪರಿಹಾರ ಯೋಜನೆಗಳನ್ನು ಹಾಕಿಕೊಂಡಿದೆಯಾದರೂ ಅವಿನ್ನೂ ಕಡಲ್ಕೊರೆತ ಪ್ರದೇಶಗಳಿಗೆ ತಲುಪದೇ ಇರುವುದು ದುರಂತವೇ ಸರಿ.

ಮಳೆಗಾಲದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಕಡಲ್ಕೊರೆತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆಯ ನಾಟಕವಾಡಿ ಪರಿಹಾರದ ಭರವಸೆ ನೀಡುವುದು ಅನಾದಿಕಾಲದಿಂದ ನಡೆದುಕೊಂಡ ಬಂದ ಮಳೆಗಾಲದ ಸಂಪ್ರದಾಯದಂತಾಗಿದೆ ಬಿಟ್ಟರೇ, ಅದಕ್ಕೊಂದು ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ಕೇಂದ್ರ ,ರಾಜ್ಯ ಸರ್ಕಾರಗಳಾಗಲಿ ಅಥವಾ ಸ್ಥಳೀಯಾಡಳಿತವಾಗಲಿ ಪ್ರಾಥಮಿಕ ಪ್ರಯತ್ನವೂ ಮಾಡಿಲ್ಲ ಎನ್ನುವುದು ವಿಷಾದನೀಯವೇ ಸರಿ.

ಮಳೆಗಾಲದಲ್ಲಿ ಕಡಲು ಸೇರುವ ತವಕದಲ್ಲಿರುವ ನದಿಗಳು ಕೂಡ ಉಕ್ಕೇರಿ ಬಿಡುತ್ತವೆ. ಕರ್ನಾಟಕದ ಕರಾವಳಿ ಉದ್ದಕ್ಕೂ ಇರುವ ಕರವಾಳಿ ತೀರ ಪ್ರದೇಶಗಳಲ್ಲಿ ಮಳೆಗಾಲದಲ್ಲಿ ನೆಲ ಜಲ ಒಂದೇ ಆಗಿ ಬಿಡುವ ಪರಿಸ್ಥಿತಿ ಇದೆ. ದಕ್ಷಿಣ ಕನ್ನಡ, ಉಡುಪಿ, ಕಾರವಾದರವರೆಗೂ ವಿವಿಧ ಪ್ರದೇಶಗಳಲ್ಲಿ ಪ್ರತಿ ಮಳೆಗಾಲದಲ್ಲಿ ಸಾಮಾನ್ಯವಾಗಿ ಕಡಲ್ಕೊರೆತ ಸಂಭವಿಸುತ್ತದೆ. ಅದರಲ್ಲೂ ಬೈಂದೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಮರವಂತೆ, ಕಂಚುಗೋಡು, ಕಿರಿಮಂಜೇಶ್ವರದ ಹೊಸಹಿತ್ಲು, ತಾರಪತಿ, ತ್ರಾಸಿ, ಗುಜ್ಜಾಡಿ, ಶಿರೂರು ಕಳಿಹಿತ್ಲು, ಉಪ್ಪುಂದ ಅಳಿವೆಕೋಡಿ, ನಾಗೂರು ಪ್ರದೇಶಗಳಲ್ಲಿ ಹೆಚ್ಚಾಗಿ ಕಡಲ್ಕೊರೆತ ಕಾಣಿಸಿಕೊಳ್ಳುತ್ತದೆ. ಇದರ ತಡೆಗೆ ಈಗಾಗಲೇ ಕೋಟ್ಯಾಂತರ ರೂಪಾಯಿಗಳನ್ನು ವಿನಿಯೋಗಿಸಿದರೂ ಅವೆಲ್ಲವೂ ಕಡಲ ಪಾಲಾಗಿವೆ.

ಉಡುಪಿ ಜಿಲ್ಲೆಯಲ್ಲಿ ಸುಮಾರು ೯೮ ಕಿ.ಮೀ ಕರಾವಳಿ ತೀರವನ್ನು ಹೊಂದಿದ್ದು, ೧೮ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಪ್ರತಿವರ್ಷ ಕಡಲ್ಕೊರೆತ ಉಂಟಾಗುತ್ತದೆ. ಎಲ್ಲೆಲ್ಲಿ ಕಡಲ್ಕೊರೆತ ಹೆಚ್ಚಾಗಿ ಸಂಭವಿಸುತ್ತದೆ ಅದಕ್ಕೆ ಕೈಗೊಳ್ಳಬೇಕಾದ ಯೋಜನೆಗಳ ಬಗ್ಗೆ ಬಂದರು ಹಾಗೂ ಮೀನುಗಾರಿಕಾ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದರೂ ಅದು ಪ್ರಯೋಜನಕ್ಕೆ ಬರುತ್ತಿಲ್ಲ. ಕಡಲ್ಕೊರೆತ ಸಂಭವಿಸಿದಾಗ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಕಡಲ್ಕೊರೆತ ಪ್ರದೇಶಗಳು ಪ್ರವಾಸಿ ತಾಣಗಳ ಹಾಗಾಗಿವೆ ಎಂದು ಆಕ್ರೋಶ ವ್ಯಕ್ತ ಪಡಿಸುತ್ತಾರೆ ಬೈಂದೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಕಂಚುಗೋಡು ಎಂಬ ಕಡಲ್ಕೊರೆತ ಉಂಟಾಗಿರುವ ಪ್ರದೇಶದ ಸ್ಥಳೀಯರೊಬ್ಬರು.

ಕಲ್ಲು ಸುರಿಯುವ ಅವೈಜ್ಞಾನಿಕ ಪದ್ದತಿ : ಕಡಲ್ಕೊರೆತ ಸಂಭವಿಸುವ ಪ್ರದೇಶಗಳಲ್ಲಿ ಕೋಟಿಗಟ್ಟಲೆ ಹಣ ಸುರಿದು ಲೋಡುಗಟ್ಟಲೇ ಕಲ್ಲು ತಂದು ಸುರಿಯುವುದೇ ಅಧಿಕಾರಿಗಳು, ಜನಪ್ರತಿನಿಧಿಗಳ ಪಾಲಿಗೆ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಎಂಬಂತಾಗಿದೆ. ಕಡಲು ಕೊರೆತ ಸಂಭವಿಸುವ ಪ್ರದೇಶಗಳಿಗೆ ಕಲ್ಲುಗಳನ್ನು ಹಾಕುವಾಗ ವೈಜ್ಞಾನಿಕವಾಗಿ ವ್ಯವಸ್ಥಿತವಾಗಿ ಹಾಕಿದರೇ ಪರಿಣಾಮಕಾರಿಯಾಗಬಹುದು. ಇನ್ನು, ಎಲ್ಲಿ ಹೆಚ್ಚು ಕಡಲ್ಕೊರೆತ ಸಂಭವಿಸುತ್ತದೋ ಅಲ್ಲೇ ಕನಿಷ್ಠಪಕ್ಷ ಈ ಕಲ್ಲು ಹಾಕುವುದನ್ನೂ ಮಾಡಿಲ್ಲ ಎನ್ನುವುದನ್ನು ನಾವು ಗಮನಿಸಬಹುದಾಗಿದೆ. ಕಡಲಿಗೆ ತಂದು ಸುರಿದ ಕಲ್ಲುಗಳ ಲೆಕ್ಕವೇ ಇಲ್ಲ. ಕಲ್ಲುಗಳನ್ನು ಪದರಪದರವಾಗಿ ಹಾಕುವ ಕನಿಷ್ಠ ಜ್ಞಾನವಿಲ್ಲದಂತೆ ಮಾಡಿರುವುದು ಮೂರು ಜಿಲ್ಲೆಗಳ ಉದ್ದಕೂ ಇರುವ ಸಮುದ್ರ ತೀರಗಳ ಹೆಚ್ಚಿನೆಡೆ ಕಾಣಬಹುದಾಗಿದೆ.

ಟೆಟ್ರಾಪ್ಯಾಡ್‌ (ತ್ರಿಕೋನ ಆಕೃತಿಯ ಕಾಂಕ್ರೀಟ್‌ ಬ್ಲಾಕ್‌ಗಳು) ಹಾಕಿದರೇ ಕಡಲ್ಕೊರೆತವನ್ನು ಪರಿಣಾಮಕಾರಿಯಾಗಿ ತಡೆಯಬಹುದು. ಇದು ಅನುಷ್ಠಾನವಾಗಬೇಕಾದರೇ ಬಹುಕೋಟಿಯಷ್ಟು ಅನುದಾನ ಬಿಡುಗಡೆಯಾಗಬೇಕಾಗುತ್ತದೆ. ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು ಸಮನ್ವಯದಿಂದ ಇಂತಹ ಯೋಜನೆಗಳನ್ನು ರೂಪಿಸಬಹುದು. ಸಮಸ್ಯೆಯೂ ಪರಿಹಾರವಾಗುತ್ತದೆ. ಕಡಲ ತೀರವಾಸಿಗಳು ಮಳೆಗಾಲದಲ್ಲಿ ತುಸು ಆರಾಮವಾಗಿರಬಹುದಾಗಿದೆ.

ಕಡಲ್ಕೊರೆತಕ್ಕೇ ಏನು ಕಾರಣ ? : ಕಡಲಿನ ಅಲೆಗಳು ನೈಸರ್ಗಿಕ ಚಲನೆಯನ್ನು ಬದಲಿಸಿದ್ದೇ ಕಡಲ್ಕೊರೆತಕ್ಕೆ ಮುಖ್ಯ ಕಾರಣ ಎಂದು ಹೇಳಲಾಗುತ್ತದೆ. ಕಡಲ್ಕೊರೆತದಿಂದ ಕಡಲಿನ ಪಾಲಾಗುವ ಮರಳಿನ ದಿಬ್ಬಗಳು ಸುಮಾರು ಒಂದೂವರೆ ಎರಡು ತಿಂಗಳ ಅವಧಿಯಲ್ಲಿ ಮತ್ತೆ ತುಂಬಿಕೊಳ್ಳುತ್ತವೆ. ಹಿಂದೆಲ್ಲಾ ಮೀನುಗಾರರು ಮಾತ್ರ ಕಡಲ ತೀರಗಳಲ್ಲಿ ವಸತಿ ಮಾಡಿಕೊಂಡಿದ್ದರು. ಕಡಲ್ಕೊರೆತಗಳ ಬಗ್ಗೆ ಅವರಿಗೆ ಅನುಭವವಿತ್ತು. ಕಡಲಿಗಿಂತ ಸುಮಾರು ೩೦೦ ಮೀಟರ್‌ಗಳ ಅಂತರದಲ್ಲೇ ಅವರು ಮನೆಗಳನ್ನು ನಿರ್ಮಿಸಿಕೊಂಡಿರುತ್ತಿದ್ದರು. ಆದರೇ ಈಗ ಸಮುದ್ರ ತೀರಗಳಲ್ಲಿ ಆಧುನೀಕತೆಯ ಭರಾಟೆ. ತಂತ್ರಜ್ಞಾನ, ಪ್ರವಾಸೋದ್ಯಮದಂತಹ ಆಕರ್ಷಣೆಗಳು ಹೆಚ್ಚಾದವು, ಅವೈಜ್ಞಾನಿಕ ತಡೆಗೋಡೆ ನಿರ್ಮಾಣವೇ ಕಡಲ್ಕೊರೆತಕ್ಕೆ ಮುಖ್ಯ ಕಾರಣವಾಗಿದೆ ಎಂದು ಹೇಳಲಾಗುತ್ತದೆ.

ಕಡಲ್ಕೊರೆತಕ್ಕೆ ʼಹಸಿರು ಕವಚʼ ರಕ್ಷೆ ! : ‘೧೪ ವರ್ಷಗಳ ಹಿಂದೆ ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕರಾವಳಿಯಲ್ಲಿ ‘ಹಸಿರು ಕವಚ’ ಯೋಜನೆಯನ್ನು ಜಾರಿ ಮಾಡಲಾಗಿತ್ತು. ೨೦೧೦-೨೦೧೧ರಲ್ಲಿ ಅರಣ್ಯ ಇಲಾಖೆಯ ಮೂಲಕ ಕಡಲ ಸವೆತ ತಡೆಗಟ್ಟಲು ಈ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಸಂಪೂರ್ಣ ವೈಜ್ಞಾನಿಕವಾಗಿದ್ದ ಈ ಯೋಜನೆಯಿಂದ ಕಡಲ್ಕೊರೆತವನ್ನು ಪರಿಣಾಮಕಾರಿಯಾಗಿ ತಡೆಯಬಹುದಾಗಿದೆ’ ಎನ್ನುವುದನ್ನು ವಿಜ್ಞಾನಿಗಳು ಹೇಳುತ್ತಾರೆ.

ವಿಶ್ವದಾದ್ಯಂತ ಕಡಲತೀರಗಳ ಸಂರಕ್ಷಣೆಗೆ ಇಂಥದ್ದೇ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಕಡಲಿನ ಮರಳಿನ ದಿಬ್ಬಗಳ ಮೇಲೆ ಮೊದಲು ಇದ್ದ ಸ್ಥಳೀಯ ಸಸ್ಯಗಳನ್ನು ನೆಟ್ಟು ಬೆಳೆಸುವುದು ಯೋಜನೆಯ ಪ್ರಮುಖ ಹಂತ. ಅವು ಗಾಳಿಯ ವೇಗವನ್ನು ಕಡಿಮೆ ಮಾಡುತ್ತವೆ. ಆಗ ತೆರೆಗಳ ಅಬ್ಬರವೂ ಕಡಿಮೆಯಾಗುತ್ತದೆ. ಇದರಿಂದ ಕಡಲ್ಕೊರೆತ ಕಡಿಮೆಯಾಗುತ್ತದೆ’ ಎಂಬುವುದೂ ಕೂಡ ವಿಜ್ಞಾನಿಗಳ ಅಭಿಪ್ರಾಯ.

ಹಸಿರು ಕವಚ ಯೋಜನೆಯನ್ನು ರಾಜ್ಯದ ಎಲ್ಲಾ ಭಾಗಗಳಲ್ಲಿ ಆರಂಭಿಸಲಾಗಿತ್ತು. ಕಾರವಾರದ ವಿಜ್ಞಾನ ಕೇಂದ್ರ ಹಾಗೂ ಕೋಡಿಬಾಗದ ಭಾಗದಲ್ಲಿ ಈ ಯೋಜನೆಯಡಿ ಸ್ಥಳೀಯ ಬಳ್ಳಿ (ಬಾಂಗ್ಡೆ ಬಳ್ಳಿ) ನೆಡಲಾಗಿತ್ತು. ಇದರಿಂದ ಕೊರೆತ ಕಡಿಮೆಯಾಗಿರುವುದು ಒಂದು ಉತ್ತಮ ಉದಾಹರಣೆ.

ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ದಕ್ಷಿಣ ಕನ್ನಡ, ಕಾರವಾರ, ಕುಂದಾಪುರ ಹಾಗೂ ಹೊನ್ನಾವರ ಅರಣ್ಯ ವಿಭಾಗಗಳಲ್ಲಿ ಪ್ರಾರಂಭಿಸಲಾಗಿತ್ತು. ಕರಾವಳಿಯ ಭಾಗದ ಎಲ್ಲಾ ಪ್ರದೇಶಗಳಲ್ಲಿ ಈ ಯೋಜನೆ ಅನುಷ್ಠಾನಕ್ಕೆ ತರುವ ಉದ್ದೇಶವನ್ನು ಈ ಯೋಜನೆ ಹೊಂದಿತ್ತು. ಇದಲ್ಲದೇ ಈ ಯೋಜನೆ ಕರಾವಳಿಯುದ್ದಕ್ಕೂ ಹತ್ತು ಮೀಟರ್‌ ಅಗಲದ ಹಸಿರು ಗೋಡೆಯನ್ನು ಅಭಿವೃದ್ಧಿಪಡಿಸುವ ಉದ್ದೇಶವನ್ನು ಹೊಂದಿತ್ತು. ಕಾರವಾರದಲ್ಲಿ ಈ ಯೋಜನೆಯನ್ನು ಅನುಷ್ಠಾನಕ್ಕೆ ತಂದು ಉತ್ತಮ ಪರಿಣಾಮ ಉಂಟಾಗಿದೆ. ದಕ್ಷಿಣ ಕನ್ನಡದಲ್ಲಿ ಕಳೆದ ವರ್ಷ ಕಡಲ್ಕೊರೆತ ತಡೆಗಟ್ಟಲು ಪ್ರಾಕೃತಿಕ ರಕ್ಷಾ ಕವಚ ಯೋಜನೆಯನ್ನು ಉಪ ಅರಣ್ಯ ಇಲಾಖೆಯಿಂದ ಅನುಷ್ಠಾನಕ್ಕೆ ತರಲಾಗಿತ್ತು. ಇಂತಹ ಯೋಜನೆಗಳನ್ನು ರಾಜ್ಯದ ಸುಮಾರು ೩೨೦ ಕಿಮೀ ಉದ್ದದ ಕಡಲ ತೀರದಲ್ಲಿ ಅನುಷ್ಠಾನಕ್ಕೆ ತರುವ ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡಿದರೇ ಕಡಲ್ಕೊರೆತವನ್ನು ತಡೆಯುವಲ್ಲಿ ಯಶಸ್ವಿಯಾಗಬಹುದು.

ಪ್ರಾಕೃತಿಕ ರಕ್ಷಾ ಕವಚ ಕಡಲ್ಕೊರೆತ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ನೈಸರ್ಗಿಕವಾಗಿ ಬೆಳೆಯುವ ರಕ್ಷಾ ಕವಚವೂ ಕಡಲ್ಕೊರೆತವನ್ನು ತಡೆಗಟ್ಟುತ್ತವೆ. ಕೋಟಿಗಟ್ಟಲೇ ರೂ. ಮೌಲ್ಯದ ಅಸಂಖ್ಯ ಕಲ್ಲುಗಳನ್ನು ತಂದು ಅವೈಜ್ಞಾನಿಕವಾಗಿ ಸಮುದ್ರಕ್ಕೆ ಸುರಿಯುವ ಬದಲು ಇಂತಹ ಪ್ರಯೋಗಗಳ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನ ನಡೆಸಿ ರಾಜ್ಯದ ಕರಾವಳಿಯ ಉದ್ದಕ್ಕೂ ಸಂಭವಿಸುವ ಕಡಲ್ಕೊರೆತ ಪ್ರದೇಶಗಳಲ್ಲಿ ಇದನ್ನು ವಿಸ್ತರಣೆ ಮಾಡುವ ಇಚ್ಛಾಶಕ್ತಿಯನ್ನು ರಾಜ್ಯ ಸರ್ಕಾರ, ಅಥವಾ ಸಂಬಂಧಪಟ್ಟ ಇಲಾಖೆ ಕೇಂದ್ರ ಸರ್ಕಾರದೊಂದಿಗೆ ಸಮನ್ವಯದಿಂದ ಮಾಡಬೇಕಿದೆ. ಇದರಿಂದ ಕಡಲ್ಕೊರೆತ ತಡೆಯುವ ಜೊತೆ ಹಸಿರು ಪರಿಸರದ ನಿರ್ಮಾಣವೂ ಆಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.

  • ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ನೀಡಿದ್ದೇವೆ : ಕಡಲ್ಕೊರೆತ ತೀವ್ರವಾದೆಡೆ ತುರ್ತು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಕರಾವಳಿ ತೀರದಲ್ಲಿ ಮಳೆಗಾಲದಲ್ಲಿ ಸಂಭವಿಸುವ ಕಡಲ್ಕೊರೆತ ತಡೆಗಟ್ಟುವ ಉದ್ದೇಶದಿಂದ ಶಾಶ್ವತ ಪರಿಹಾರಕ್ಕಾಗಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆಯನ್ನು ನೀಡಿದ್ದೇವೆ. ಬಂದರು ಇಲಾಖೆಯಿಂದ ಅನುದಾನ ಬಿಡುಗಡೆಯಾಗಬೇಕಿದೆ. ಜಿಲ್ಲೆಯಲ್ಲಿನ ಕಡಲ್ಕೊರೆತ ಸಮಸ್ಯೆಗಳ ಬಗ್ಗೆ ಇಲಾಖೆಯ ಸಚಿವರು ಹಾಗೂ ಮುಖ್ಯಮಂತ್ರಿಗಳ ಗಮನಕ್ಕೂ ತರಲಾಗಿದೆ. ತುರ್ತು ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡುವ ಬಗ್ಗೆ ಈಗಾಗಲೇ ನಿರ್ಧಾರವಾಗಿದೆ. ಆದರೇ ಆದೇಶ ಬಂದಿಲ್ಲ. ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಯೋಜನೆ ರೂಪಿಸಲು ಇನ್ನಷ್ಟು ಅಧ್ಯಯನದ ಅಗತ್ಯವಿದೆ. ಈ ಬಗ್ಗೆಯೂ ಗಮನಹರಿಸಲಾಗುವುದು.
    -ಡಾ. ಕೆ. ವಿದ್ಯಾಕುಮಾರಿ.
    ಜಿಲ್ಲಾಧಿಕಾರಿಗಳು, ಉಡುಪಿ ಜಿಲ್ಲೆ

  • ಕಡಲ್ಕೊರೆತ ಸಂಭವಿಸಿರುವ ಪ್ರತಿ ಜಿಲ್ಲೆಗಳಿಗೆ ತಾತ್ಕಾಲಿಕ ಪರಿಹಾರ ನೀಡಲಾಗುವುದು ಎಂದು ರಾಜ್ಯ ಸರ್ಕಾರ ಹೇಳಿದೆ. ಸರ್ಕಾರ ಕಡಲ್ಕೊರೆತ ಪ್ರದೇಶಗಳಲ್ಲಿ ತುರ್ತು ಕಾಮಗಾರಿ ಮಾಡಲು ಅನುದಾನ ಘೋಷಣೆ ಮಾಡಿದರಷ್ಟೇ ಸಾಲದು, ಅದನ್ನು ಬಿಡುಗಡೆಯೂ ಮಾಡಬೇಕು. ಕಡಲ್ಕೊರೆತದಂತಹ ಸಮಸ್ಯೆಗಳು ಕರಾವಳಿ ಜಿಲ್ಲೆಗಳಲ್ಲಿ ನಿರಂತರವಾಗಿದೆ. ಪರಿಹಾರ ಒದಗಿಸುವಲ್ಲಿ ಕೇಂದ್ರದಿಂದ ಅನುದಾನ ತರಲು ಪ್ರಯತ್ನಿಸುತ್ತೇನೆ.
    -ಕೋಟ ಶ್ರೀನಿವಾಸ ಪೂಜಾರಿ.
    ಸಂಸದರು, ಉಡುಪಿ-ಚಿಕ್ಕಮಗಳೂರು.

  • ಮೀನುಗಾರ ಸಚಿವರಲ್ಲಿ ಕಡಲ್ಕೊರೆತ ಸಮಸ್ಯೆಗಳಿಗೆ ಪರಿಹಾರ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಕೊಂಡಿದ್ದೇನೆ. ಈ ವಿಚಾರವನ್ನು ಉಸ್ತುವಾರಿ ಸಚಿವರ ಗಮನಕ್ಕೂ ತಂದಿದ್ದೇನೆ. ಮುಖ್ಯಮಂತ್ರಿಗಳ ಗಮನಕ್ಕೂ ತಂದಿದ್ದೇನೆ. ಕರಾವಳಿಯ ಬಗ್ಗೆ ನಿರ್ಲಕ್ಷ್ಯ ಬೇಡ ಎಂದು ತಿಳಿಸಿದ್ದೇನೆ. ಅನುದಾನ ಬಿಡುಗಡೆಯಾಗದೇ ಇದ್ದಲ್ಲಿ, ಸಚಿವರು ಈ ಬಗ್ಗೆ ಸ್ಪಂದಿಸದಿದ್ದಲ್ಲಿ ಸುದೀರ್ಘ ಹೋರಾಟ ಮಾಡಿ ಇಲಾಖೆಯನ್ನು ಎಚ್ಚರಿಸಿ ಶಾಶ್ವತ ಪರಿಹಾರ ಒದಗಿಸುವುದೇ ನಮ್ಮ ಗುರಿ.
    -ಗುರುರಾಜ್‌ ಶೆಟ್ಟಿ ಗಂಟಿಹೊಳೆ
    ಶಾಸಕರು, ಬೈಂದೂರು ವಿಧಾನಸಭಾ ಕ್ಷೇತ್ರ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!