Wednesday, September 11, 2024

NEET ರದ್ದುಗೊಳಿಸಿ, ಹಳೆಯ ವ್ಯವಸ್ಥೆ ಮರುಸ್ಥಾಪಿಸಲು ಕೇಂದ್ರಕ್ಕೆ ಮಾಯಾವತಿ ಒತ್ತಾಯ !

ಜನಪ್ರತಿನಿಧಿ (ಲಖನೌ) : ವೈದ್ಯಕೀಯ ಶಿಕ್ಷಣ ಪ್ರವೇಶ ಪರೀಕ್ಷೆ ನೀಟ್  ಪರೀಕ್ಷೆ(NEET)ಯನ್ನು ರದ್ದುಪಡಿಸಬೇಕು ಹಾಗೂ ವೈದ್ಯಕೀಯ ಪ್ರವೇಶದ “ಹಳೆಯ ಪದ್ಧತಿ”ಯನ್ನೇ ಮರು ಜಾರಿಗೊಳಿಸಬೇಕು ಎಂದು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಇಂದು(ಗುರುವಾರ) ಒತ್ತಾಯಿಸಿದ್ದಾರೆ.

ನೀಟ್‌ ಪರೀಕ್ಷೆಯಲ್ಲಿ ಅಕ್ರಮಗಳು ನಡೆಸಿರುವ ಬಗ್ಗೆ ರಾಷ್ಟ್ರದಾದ್ಯಂತ ದೊಡ್ಡ ಮಟ್ಟದಲ್ಲಿ ವಿರೋಧ ವ್ಯಕ್ತವಾಗಿತ್ತು. ವಿರೋಧ ಪಕ್ಷಗಳು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದವು.

ಈ ಬಗ್ಗೆ ತಮ್ಮ ಅಧಿಕೃತ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಮಾಯಾವತಿ, “ಅಖಿಲ ಭಾರತ NEET-UG ವೈದ್ಯಕೀಯ ಪರೀಕ್ಷೆಯಲ್ಲಿನ ಅಕ್ರಮಗಳು ಅತ್ಯಂತ ಗಂಭೀರ ವಿಷಯವಾಗಿದ್ದು, ಈ ಪ್ರಕರಣ ಸಂಸತ್ತು ಮತ್ತು ಸುಪ್ರೀಂ ಕೋರ್ಟ್‌ಗೂ ತಲುಪಿದೆ. ಫಲಿತಾಂಶ ಏನೇ ಇರಲಿ, ಲಕ್ಷಾಂತರ ಅಭ್ಯರ್ಥಿಗಳು ಮತ್ತು ಅವರ ಕುಟುಂಬಗಳಿಗೆ ತೊಂದರೆ ಆಗಿದೆ ಮತ್ತು ಮಾನಸಿಕ ಸಂಕಟ ಅನುಭವಿಸಿದ್ದಾರೆ” ಎಂದು ಹೇಳಿದ್ದಾರೆ.

”ಇಂತಹ ಮಹತ್ವದ ಪರೀಕ್ಷೆಯನ್ನು ಸಮರ್ಥವಾಗಿ ನಡೆಸುವುದಾಗಿ ಜನರಿಗೆ ಭರವಸೆ ನೀಡುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಸಮಸ್ಯೆಯನ್ನು ಇನ್ನಷ್ಟು ಗಂಭೀರಗೊಳಿಸಿದೆ. ಆದ್ದರಿಂದ ಕೇಂದ್ರೀಕೃತ NEET ಯುಜಿ-ಪಿಜಿ ಪರೀಕ್ಷೆಯನ್ನು ಯಾಕೆ ರದ್ದುಗೊಳಿಸಬಾರದು? ಹಳೆಯ ವ್ಯವಸ್ಥೆಯನ್ನು ಯಾಕೆ ಮರುಸ್ಥಾಪಿಸಬಾರದು? ಇದು ಹಲವು ರಾಜ್ಯಗಳ ಬೇಡಿಕೆಯಾಗಿದೆ” ಎಂದು ಮಾಯಾವತಿ ಅವರು ಹಿಂದಿಯಲ್ಲಿ ಪೋಸ್ಟ್‌ ಮಾಡಿದ್ದಾರೆ. (ಇದು ಹಿಂದಿಯಿಂದ ಕನ್ನಡಕ್ಕೆ ತರ್ಜುಮೆ ಮಾಡಿರುವುದಾಗಿದೆ).

ಎಂಬಿಬಿಎಸ್, ಬಿಡಿಎಸ್, ಆಯುಷ್ ಹಾಗೂ ಇತರ ಸಂಬಂಧಿತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ಮೇ 5 ರಂದು ನಡೆದ NEET-UG ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಹಾಗೂ ಇಡೀ ಪರೀಕ್ಷಾ ಪ್ರಕ್ರೀಯೆಯಲ್ಲೇ ಅಕ್ರಮಗಳು ನಡೆದಿದೆ ಎಂಬ ಆರೋಪಗಳು ರಾಷ್ಟ್ರದಾದ್ಯಂತ ದೊಡ್ಡ ಪ್ರಮಾಣದಲ್ಲಿ ಕೇಳಿ ಬಂದಿದ್ದು, ಈ ಕುರಿತು ಸಿಬಿಐ ತನಿಖೆ ಮುಂದುವರಿಸಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!