Sunday, September 8, 2024

ನೆರೆ ಹಾವಳಿ : ನಾವುಂದ, ಸಾಲ್ಬುಡ ತತ್ತರ | ಹೈರಾಣಾದ ಜನಜೀವನ | ಸಂಪರ್ಕ ರಸ್ತೆ ನೆರೆಯಿಂದ ಮುಳುಗಡೆ

ಜನಪ್ರತಿನಿಧಿ (ನಾವುಂದ) : ಮಳೆಗಾಲದಲ್ಲಿ ಬೈಂದೂರು ತಾಲೂಕಿನ ನಾವುಂದ, ಸಾಲ್ಬುಡ, ಬಡಾಕೆರೆ ಸೇರಿದಂತೆ ಸುತ್ತಮುತ್ತಲಿನ ಜನರದ್ದು ತಪ್ಪದ ಗೋಳು. ಮಳೆಗಾಲದಲ್ಲಿ ಇಲ್ಲಿನ ಸುತ್ತಮುತ್ತಲಿನ ನೂರೈವತ್ತಕ್ಕೂ ಹೆಚ್ಚು ಮನೆಗಳು ನೆರೆ ಸೃಷ್ಟಿಯಾಗಿ ಮುಳುಗಡೆಯಾಗುವುದು ಖಚಿತ.

ಕಳೆದ ನಾಲ್ಕೈದು ದಶಕಗಳಿಂದಲೂ ಈ ಸಮಸ್ಯೆ ಇಲ್ಲಿ ಕಟ್ಟಿಟ್ಟಬುತ್ತಿ. ಸೌಪರ್ಣಿಕಾ ನದಿ ದಡದಲ್ಲೇ ಇರುವ ನಾವುಂದ, ಸಾಲ್ಬುಡ ಹಾಗೂ ಅರೆಹೊಳೆ ಪ್ರದೇಶಗಳು ಮಲೆನಾಡಿನಲ್ಲಿ ಮಳೆ ಹೆಚ್ಚಾದಾಗ ಸೌಪರ್ಣಿಕಾ ನದಿ ನೀರಿನ ಮಟ್ಟ ಏರಿ ಇಲ್ಲಿ ಬಹುತೇಕ ಮುಳುಗಡೆಯಾಗುತ್ತದೆ. ಕಳೆದ ಕೆಲವು ದಿನಗಳಿಂದ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ನೆರೆ ಬಂದು ಸುಮಾರು ನೂರೈವತ್ತಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿವೆ.

ನಾವುಂದ, ಮರವಂತೆ, ಸಾಲ್ಬುಡ, ಅರೆಹೊಳೆ ಭಾಗದಲ್ಲಿ ನೆರೆ ಸಮಸ್ಯೆ ಈ ವರ್ಷವೂ ತಪ್ಪಿಲ್ಲ. ಕಳೆದ ನಾಲ್ಕೈದು ದಶಕಗಳಿಂದ ಸ್ಥಳೀಯರು ಮಳೆಗಾಲದಲ್ಲಿ ಮೂರ್ನಾಲ್ಕು ದೋಣಿಗಳನ್ನು ಇಲ್ಲಿಗಾಗಿಯೇ ಮೀಸಲಿಡಬೇಕು ಎಂದು ಒತ್ತಾಯಿಸುತ್ತಲೇ ಬಂದಿದ್ದಾರೆ. ಆಸ್ಕರ್‌ ಫೆರ್ನಾಂಡಿಸ್‌ ಅವರು ಉಡುಪಿ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದಾಗ ಒಂದು ದೋಣಿ, ಜಯಪ್ರಕಾಶ್‌ ಹೆಗ್ಡೆ ಸಂಸದರಾಗಿದ್ದಾಗ ಒಂದು ದೋಣಿ, ಕೋಟ ಶ್ರೀನಿವಾಸ ಪೂಜಾರಿ ಅವರ ಅನುದಾನದಿಂದ ಒಂದು ದೋಣಿ ಹಾಗೂ ಗೋಪಾಲ ಪೂಜಾರಿ ಅವರು ಶಾಸಕರಾಗಿದ್ದಾಗ ಶಾಸಕರ ಅನುದಾನದಿಂದ ಒಂದು ದೋಣಿಯನ್ನು ಈ ಭಾಗದ ಜನರಿಗೆ ನೀಡಿದ್ದಾರೆ. ಅದರ ಹೊರತಾಗಿ ದೋಣಿ ರಿಪೇರಿಗೆ ಬಂದಾಗ ಸಂಬಂಧಪಟ್ಟ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಈ ಕಡೆ ಕಣ್ಣು ಹಾಯಿಸಿಯೂ ನೋಡಿಲ್ಲ. ಗ್ರಾಮ ಪಂಚಾಯತ್‌ನ ಅನುದಾನದಲ್ಲಿ, ಸ್ಥಳೀಯರ ಸಹಕಾರದಲ್ಲೇ ದೋನಿ ರಿಪೇರಿ ಮಾಡಿದ್ದೇವೆ. ಅಧಿಕಾರಿಗಳು, ಜನಪ್ರತಿನಿಧಿಗಳು ಮನಸ್ಸು ಮಾಡಿದರೇ, ಈ ನೆರೆ ಸೃಷ್ಟಿಯಾಗುವುದನ್ನು ನಿಲ್ಲಿಸಬಹುದು, ಜಿಲ್ಲಾಡಳಿತ, ತಾಲೂಕು ಆಡಳಿತ ಇಲ್ಲಿನ ಜನರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ಹೊರ ಹಾಕುತ್ತಾರೆ ಹೆಸರು ಹೇಳಲು ಬಯಸದ ಒಬ್ಬ ಸ್ಥಳೀಯರು.

ಸ್ಥಳೀಯ ಯುವಕರೇ ದೋಣಿ ನಾವಿಕರು :  ಅನಾರೋಗ್ಯ ಪೀಡಿತರು, ಕೆಲಸಕ್ಕೆ ತೆರಳುವವರ, ಶಾಲೆಗೆ ಹೋಗುವ ಮಕ್ಕಳ ಗೋಳು ಹೇಳಿ ತೀರುವಂತದ್ದಲ್ಲ. ಅಗತ್ಯ ದಿನಸಿ ತರಬೇಕಾದರೂ ಕೂಡ ಮಳೆಗಾಲದಲ್ಲಿ ದೋಣಿ ಮೂಲಕವೇ ಪೇಟೆಗೆ ಬರಬೇಕು. ಒಂದು ದಡದಿಂದ, ಇನ್ನೊಂದು ದಡಕ್ಕೆ ಸುಮಾರು ಎರಡುವರೆ ಕಿಲೋಮೀಟರ್‌ ದೋಣಿ ಮೂಲಕ ಸಾಗುವುದು ಹರಸಾಹಸವೇ ಸರಿ. ಆಳೆತ್ತರಕ್ಕೆ ನೀರು ನುಗ್ಗಿ ಸುತ್ತಲಿನ ಗದ್ದೆಗಳು ಜಲಾವೃತಗೊಂಡಿವೆ. ಪ್ರತಿವರ್ಷದ ಮಳೆಗಾಲದಲ್ಲಿ ನಮಗೆ ಇದೊಂದು ಖಾಯಾಂ ಕೆಲಸವಾಗಿಬಿಟ್ಟಿದೆ ಎಂದು ನೀರಿಗೆ ಹುಟ್ಟು ಹಾಕುತ್ತಾ ಬೇಸರ ವ್ಯಕ್ತ ಪಡಿಸುತ್ತಾರೆ ದೋಣಿ ಚಲಾಯಿಸುವ ಸ್ಥಳೀಯ ಯುವಕ ಸಂತೋಷ್‌.

ಯುವಕರು ಸಹಿತ ದೋಣಿ ಚಲಾಯಿಸಲು ತಿಳಿದ ಹಲವರು ಜೀವದ ಹಂಗು ತೊರೆದು ದೋಣಿ ಮೂಲಕ ಸಾರ್ವಜನಿಕರಿಗೆ ನಿಸ್ವಾರ್ಥ ಸೇವೆ ಮಾಡುತ್ತಾರೆ ಎನ್ನುವುದು ನಿಜಕ್ಕೂ ಶ್ಲಾಘನೀಯ.

ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್‌ ಪ್ರದೀಪ್‌ ಅವರ ಮುಂದೆ ಪ್ರತಿ ವರ್ಷದಂತೆ ತಮ್ಮ ಸಮಸ್ಯೆಗಳನ್ನು ಸ್ಥಳೀಯರು ಅವಲತ್ತುಕೊಂಡರು. ಜಾನುವಾರುಗಳನ್ನು ಸ್ಥಳಾಂತರಿಸಿ ಪುನರ್ವಸತಿ ಕಲ್ಪಿಸಲು ಅಗತ್ಯ ಶೆಡ್‌ ನಿರ್ಮಾಣ ಮಾಡಬೇಕು. ದೋಣಿ, ರೋಪ್‌ ಸಹಿತ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿದರು. ನೂರಾರು ಎಕರೆ ಕೃಷಿಭೂಮಿಯಲ್ಲಿ ಮಾಡಿದ ನೇಜಿ ನೆಟ್ಟಿದ್ದೆಲ್ಲಾ ಸಂಪೂರ್ಣ ನೆರೆ ನೀರಿಗೆ ನಾಶವಾಗಿದೆ. ಕೃಷಿ ಭೂಮಿ ನಾಶವಾಗಿರುವುದಕ್ಕೆ ಸರ್ಕಾರ ನೆರೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಅನ್ನಕ್ಕೆ ಕಲ್ಲು ಹಾಕಿದ ನೆರೆ : ವರ್ಷವಿಡೀ ಜೀವನಕ್ಕೆ ಆಧಾರವಾಗಿರುವ ಭತ್ತದ ಕೃಷಿಗೆ ಈ ಬಾರಿ ನೆರೆ ಪ್ರತಿವರ್ಷದಂತೆ ದೊಡ್ಡ ಹೊಡೆತ ನೀಡಿದೆ. ನೂರಾರು ಎಕರೆ ಭತ್ತದ  ಕೃಷಿಭೂಮಿ ಪೂರ್ಣಪ್ರಮಾಣದಲ್ಲಿ ನಾಶವಾಗಿದೆ. ಅಪಾರ ಪ್ರಮಾಣದ ಕಚ್ಚಾ ಮಣ್ಣ ಗದ್ದೆಗೆ ಹರಿದು ಬಂದಿದೆ. ಭತ್ತದ ಗದ್ದೆಗಳು ದುರಸ್ತಿಯಾಗದಷ್ಟು ನಾಶವಾಗಿವೆ.

ನೆರೆಯಿಂದಾಗಿ ಕೃಷಿಭೂಮಿ, ವಾಸ್ತವ್ಯದ ಮನೆಗಳು, ಕೃಷಿಭೂಮಿ ನಲುಗಿಹೋಗಿವೆ. ಇಲ್ಲಿನ ಜನರಿಗೆ ಮಳೆಗಾಲ ಬಂತೆಂದರೆ ಸಮಸ್ಯೆ ತಪ್ಪಿದ್ದಲ್ಲ. ಕೃಷಿಯನ್ನೇ ನಂಬಿ ಬದುಕು ಕಟ್ಟಿಕೊಂಡಿರುವವರ ಜೀವನ ನೆರೆಯಿಂದಾಗಿ ಕೊಚ್ಚಿ ಹೋಗಿವೆ. ನೂರಾರು ಎಕರೆ ಕೃಷಿಭೂಮಿ ನಾಶವಾಗಿದೆ. ಕೂಡಲೇ ಸಮೀಕ್ಷೆ ನಡೆಸಿ ಗರಿಷ್ಟ ಪರಿಹಾರ ನೀಡುವಂತೆ ಜಿಲ್ಲಾಡಳಿತ ಕ್ರಮ ವಹಿಸಲಿ. ಪ್ರತಿ ಮಳೆಗಾಲದಲ್ಲಿ ಇಲ್ಲಿ ಸೃಷಿಯಾಗುವ ನೆರೆ ಹಾವಳಿಗೆ ಇನ್ನಾದರೂ ಶಾಶ್ವತ ಪರಿಹಾರ ಒದಗಿಸುವಲ್ಲಿ ಆಡಳಿತ ಕ್ರಮ ತೆಗೆದುಕೊಳ್ಳಲಿ.
-ಜಗದೀಶ್‌ ಪೂಜಾರಿ
ಸ್ಥಳೀಯರು

ಜನಪ್ರತಿನಿಧಿಗಳು, ಅಧಿಕಾರಿಗಳು ಇಲ್ಲಿನ ಜನರಿಗೆ ಸರಿಯಾಗಿ ಪ್ರತಿಕ್ರಿಯಿಸುತ್ತಿಲ್ಲ. ಯಾವುದೇ ಸರ್ಕಾರ ಆಡಳಿತದಲ್ಲಿದ್ದಾಗಲೂ ಈವರೆಗೆ ಇಲ್ಲಿನ ಜನರಿಗೆ ಯಾವುದೇ ಪ್ರಯೋಜನವಾಗಿಲ್ಲ. ನೆರೆ ಪರಿಹಾರವನ್ನು ಜಿಲ್ಲಾಡಳಿತ ಸಮರ್ಪಕವಾಗಿ ವಿನಿಯೋಗಿಸಲಿ. ಅಧಿಕಾರಿಗಳು ನಿರ್ಲಕ್ಷ್ಯ ವಹಿಸದೇ ಇದ್ದಲ್ಲಿ ಇಲ್ಲಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು.
– ಗಣೇಶ್‌ ಪೂಜಾರಿ
ಸ್ಥಳೀಯರು

ನಾವುಂದ, ಸಾಲ್ಬುಡ ಪ್ರದೇಶಗಳಲ್ಲಿ ನೆರೆ ಸೃಷ್ಟಿಯಾಗಿರುವುದು, ಕೃಷಿ ನಾಶವಾಗಿರುವುದರ ಬಗ್ಗೆ ಗಮನಕ್ಕಿದೆ. ಕಂದಾಯ ಇಲಾಖೆಯ ಸಹಯೋಗದೊಂದಿಗೆ ನೆರೆಪೀಡಿತ ಪ್ರದೇಶಗಳ ಕೃಷಿ ಹಾನಿ ಸಮೀಕ್ಷೆಯನ್ನು ಶೀಘ್ರದಲ್ಲೇ ಮಾಡಿಸಿ ಸೂಕ್ತ ಪರಿಹಾರ ನೀಡಲಾಗುತ್ತದೆ. ಬೈಂದೂರಿನಲ್ಲಿ ಅಗತ್ಯವಿದ್ದಷ್ಟು ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಈಗಾಗಲೇ ತಾಲೂಕು ಆಡಳಿತಕ್ಕೆ ಸೂಚನೆ ನೀಡಿದ್ದೇವೆ. ಶಾಶ್ವತ ಪರಿಹಾರಕ್ಕೆ ಸಂಬಂಧಿಸಿದಂತೆ ಯೋಜನೆ ರೂಪಿಸಲಾಗುವುದು.

-ಡಾ. ಕೆ. ವಿದ್ಯಾಕುಮಾರಿ
ಜಿಲ್ಲಾಧಿಕಾರಿಗಳು, ಉಡುಪಿ ಜಿಲ್ಲೆ

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!