Sunday, September 8, 2024

NEET-UG 2024 : ಪ್ರಶ್ನೆ ಪತ್ರಿಕೆ ಕಳವಾಗಿಲ್ಲ : ಸುಪ್ರೀಂ ಕೋರ್ಟ್‌ ಎದುರು ಎನ್‌ಟಿಎ ಪ್ರತಿಪಾದನೆ

ಜನಪ್ರತಿನಿಧಿ (ನವ ದೆಹಲಿ) : ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗೆ ನಡೆಸಲಾಗುವ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯ (ನೀಟ್) ಯಾವುದೇ ಪ್ರಶ್ನೆ ಪತ್ರಿಕೆ ಕಾಣೆಯಾಗಿಲ್ಲ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಪ್ರತಿಪಾದಿಸಿದೆ.

ಬಿಹಾರದ ಪಾಟ್ನಾದಲ್ಲಿ ಪ್ರಶ್ನೆ ಪತ್ರಿಕೆ ಇಡಲಾಗಿದ್ದ ಲಾಕರ್‌ಗಳ ಬೀಗ ಒಡೆದಿಲ್ಲ ಎಂದು ಸುಪ್ರೀಂ ಕೋರ್ಟ್‌ನಲ್ಲಿ ಎನ್‌ಟಿಎ ಹೇಳಿದೆ.

ಎನ್‌ಟಿಎ ಸುಪ್ರೀಂಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿತ್ತು, ಸಂಬಂಧಿಸಿದ ನಗರ ಸಮನ್ವಯಕಾರರು, ಕೇಂದ್ರದ ಮೇಲ್ವಿಚಾರಕರು ಹಾಗೂ ವೀಕ್ಷಕರು ಸಲ್ಲಿಸಿದ ವರದಿಗಳನ್ನು ಪರಿಶೀಲಿಸಲಾಗಿದೆ ಎಂದು ತಿಳಿಸಿದೆ.

“ಯಾವುದೇ ಲಾಕರ್‌ ಹಾಗೂ ಟ್ರಂಕ್ನಿಂದ ಪ್ರಶ್ನೆಪತ್ರಿಕೆಗಳು ನಾಪತ್ತೆಯಾಗಿಲ್ಲ. ಪ್ರತಿ ಪ್ರಶ್ನೆ ಪತ್ರಿಕೆಯೂ ಸೀರಿಯಲ್ ನಂಬರ್ ಹೊಂದಿದ್ದು, ಅವುಗಳನ್ನು ನಿರ್ದಿಷ್ಟ ವಿದ್ಯಾರ್ಥಿಗೆ ನೀಡಲಾಗಿದೆ. ಯಾವುದೇ ಬೀಗ ಒಡೆದಿರುವುದು ಕಂಡುಬಂದಿಲ್ಲ. ಎನ್‌ಟಿಎ ವೀಕ್ಷಕರು ಕೊಟ್ಟ ವರದಿಯಲ್ಲಿ ಸಹ ಯಾವುದೇ ಅಕ್ರಮದ ಮಾಹಿತಿ ಇಲ್ಲ. ಕಮಾಂಡ್ ಸೆಂಟರ್‌ನಲ್ಲಿನ ಸಿಸಿಟಿವಿ ಕವರೇಜ್ ಅನ್ನು ನಿರಂತರವಾಗಿ ಗಮನಿಸಲಾಗಿದೆ. ಯಾವುದೇ ಅಹಿತಕರ ಘಟನೆ ಅಥವಾ ಪತ್ರಿಕೆ ಸೋರಿಕೆಯನ್ನು ಸೂಚಿಸುವ ಘಟನೆ ಕಂಡುಬಂದಿಲ್ಲ” ಎಂದು ಹೇಳಿದೆ.

“ಪ್ರಶ್ನೆ ಪತ್ರಿಕೆ ಸೋರಿಕೆ ನಡೆದಿರುವುದು ಸ್ಪಷ್ಟವಾಗಿದೆ. ಪರೀಕ್ಷೆ ಪಾವಿತ್ರ್ಯತೆ ಕಳೆದುಕೊಂಡರೆ ಮರು ಪರೀಕ್ಷೆಗೆ ಆದೇಶ ನೀಡಬೇಕಾಗುತ್ತದೆ. ಯಾರು ತಪ್ಪಿತಸ್ಥರು ಎಂಬುದನ್ನು ಗುರುತಿಸುವುದು ನಮಗೆ ಸಾಧ್ಯವಾಗದೆ ಹೋದರೆ ಮರು ಪರೀಕ್ಷೆಗೆ ಆದೇಶಿಸಬೇಕಾಗುತ್ತದೆ” ಎಂದು ಸಿಜೆಐ ಡಿವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ನ್ಯಾಯಪೀಠ ಸೋಮವಾರ ಅಭಿಪ್ರಾಯ ಪಟ್ಟಿತ್ತು.

ರಾಜಸ್ಥಾನದ ಸವಾಯಿ ಮಾಧೋಪುರದಲ್ಲಿ ತಪ್ಪಾದ ಪ್ರಶ್ನೆ ಪತ್ರಿಕೆ ವಿತರಣೆಯಾಗಿತ್ತು. ಇದರ ವಿರುದ್ಧ ಪ್ರತಿಭಟನೆ ನಡೆಸಿದ ಕೆಲವು ಅಭ್ಯರ್ಥಿಗಳು, ಪರೀಕ್ಷೆ ಬರೆಯದೆ ಪ್ರಶ್ನೆ ಪತ್ರಿಕೆ ಸಹಿತ ಕೇಂದ್ರದಿಂದ ನಿರ್ಗಮಿಸಿದ್ದರು. ಇದರ ನಂತರ ಪ್ರಶ್ನೆ ಪತ್ರಿಕೆಯ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಪತ್ರಿಕೆ ಸೋರಿಕೆಯಾಗಿದೆ ಎಂದು ಆರೋಪಿಸಲಾಗಿದೆ” ಎಂದು ಎನ್‌ಟಿಎ ವಿವರಣೆ ನೀಡಿದೆ.

ಮುಚ್ಚಿದ ಲಕೋಟೆಯಲ್ಲಿ ಸಿಬಿಐ ವರದಿ
ನೀಟ್-ಯುಜಿ 2024 ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ತನಿಖೆ ನಡೆಸಿರುವ ಸಿಬಿಐ, ಗುರುವಾರ ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂ ಕೋರ್ಟ್‌ಗೆ ಸ್ಥಿತಿಗತಿಯ ವರದಿ ಸಲ್ಲಿಕೆ ಮಾಡಿದೆ.
ಬಿಹಾರದ ಒಂದು ಪರೀಕ್ಷಾ ಕೇಂದ್ರದಲ್ಲಿ ಮಾತ್ರ ಸೋರಿಕೆ ಉಂಟಾಗಿದ್ದು, ಅದು ಕೆಲವು ವಿದ್ಯಾರ್ಥಿಗಳ ಮೇಲೆ ಮಾತ್ರ ಪರಿಣಾಮ ಬೀರಿದೆ ಎಂದು ಸಿಬಿಐ ಪ್ರತಿಪಾದಿಸಿರುವುದಾಗಿ ಮೂಲಗಳು ತಿಳಿಸಿವೆ.
ಪ್ರಶ್ನೆ ಪತ್ರಿಕೆ ಸಾಮಾಜಿಕ ಮಾಧ್ಯಮದಲ್ಲಿ ಪ್ರಸರಣವಾಗಿದೆ ಎಂಬ ಆರೋಪಗಳಿಗೆ ವಿರುದ್ಧವಾದ ಅಭಿಪ್ರಾಯವನ್ನು ಅದು ವ್ಯಕ್ತಪಡಿಸಿದೆ.
ಪರೀಕ್ಷೆ ಬರೆದ ಎಲ್ಲ 23 ಲಕ್ಷ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಸುವುದಕ್ಕೆ ಕೇಂದ್ರ ಸರ್ಕಾರ ವಿರೋಧ ವ್ಯಕ್ತಪಡಿಸಿತ್ತು. ಅದಕ್ಕೆ ಪೂರಕವಾಗಿ ಸಿಬಿಐ ತನ್ನ ವಾದ ಮಂಡಿಸಿದೆ. ಐಐಟಿ ಮದ್ರಾಸ್ ನಡೆಸಿರುವ ನೀಟ್ ಪರೀಕ್ಷಾ ಫಲಿತಾಂಶದ ಡೇಟಾ ವಿಶ್ಲೇಷಣೆಯನ್ನು ಉಲ್ಲೇಖಿಸಿರುವ ಕೇಂದ್ರ, ಒಂದು ಪ್ರದೇಶದಲ್ಲಿ ಮಾತ್ರ ನೀಟ್ ಅಭ್ಯರ್ಥಿಗಳು ಅಸಹಜ ಎನಿಸುವ ಅಂಕ ಪಡೆದಿದ್ದಾರೆ ಎಂದಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!