Friday, November 8, 2024

ಸರ್ಕಾರಿ ಶಾಲೆಗಳಲ್ಲಿನ ದೇವರುಗಳ ಧ್ವನಿ ಕೇಳಿಸಿಕೊಳ್ಳುವವರು ಯಾರು ?

ಬಾಗಿಲು ತೆರೆಯುವ ಭಾಗ್ಯ ಕಳೆದುಕೊಂಡ ಕುಂದಾಪುರ ವಲಯದ 14 ಶಾಲೆಗಳು

ಶ್ರೀರಾಜ್‌ ವಕ್ವಾಡಿ.
ಸರ್ಕಾರಿ ಶಾಲೆಗಳನ್ನು ಉಳಿಸಿ ಎನ್ನುವ ಕೂಗು ಸರ್ಕಾರಕ್ಕೆ ಎಂದೂ ತಲುಪುವುದಿಲ್ಲ ಎನ್ನುವುದಕ್ಕೆ ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಸರ್ಕಾರಿ ಶಾಲೆಗಳು ಮುಚ್ಚುತ್ತಿರುವುದೇ ಸಾಕ್ಷಿ. ಶೂನ್ಯ ದಾಖಲಾತಿ, ಮಕ್ಕಳ ದಾಖಲಾತಿ ಕೊರತೆ, ಶಿಕ್ಷಕರ ಕೊರತೆಯ ನೆಪವೊಡ್ಡಿ ಶಾಲೆಗಳನ್ನು ಸದ್ದಿಲ್ಲದೆ ಒಂದೊಂದಾಗಿ ಮುಚ್ಚುವ ಪ್ರಯತ್ನ ಸರ್ಕಾರ ಮಟ್ಟದಲ್ಲಿಯೇ ನಡೆಯುತ್ತಿದೆ ಎಂದರೇ ತಪ್ಪಿಲ್ಲ. ಶಾಲೆಗಳನ್ನು ಮುಚ್ಚುವುವಲ್ಲಿ ಆಸಕ್ತಿಯನ್ನು ತೋರುವ ಸರ್ಕಾರ, ಶಾಲಾಭಿವೃದ್ಧಿಗೆ ಬೇಕಾಗಿ ಅನುದಾನ ನೀಡುವುದಾಗಲಿ ಅಥವಾ ಅಲ್ಲಿ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸುವುದರ ಬಗ್ಗೆ, ಶಿಕ್ಷಕರನ್ನು ನೇಮಿಸುವ ಬಗ್ಗೆ, ಮಕ್ಕಳನ್ನು ಸೆಳೆಯುವಲ್ಲಿ ಆಕರ್ಷಕ ಶಿಕ್ಷಣ ಪದ್ಧತಿಯನ್ನು ಅಳವಡಿಸುವತ್ತ ಗಮನ ನೀಡುವುದಿಲ್ಲ ಎನ್ನುವುದು ದುರಂತವೇ ಸರಿ.

ಶಾಲಾ ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್ ನಲ್ಲಿ ದೊರಕುವ ಮಾಹಿತಿಯ ಪ್ರಕಾರ ಕಳೆದ ವರ್ಷಕ್ಕಿಂತ 2023-24ರ ಸಾಲಿನಲ್ಲಿ ಬರೋಬ್ಬರಿ 567 ಶಾಲೆಗಳು ಮುಚ್ಚಿವೆ. 2022-23ರ ಸಾಲಿನಲ್ಲಿ ರಾಜ್ಯದಲ್ಲಿ 48,066 ಸರ್ಕಾರಿ ಶಾಲೆಗಳಿದ್ದರೆ ಈ ವರ್ಷ ಶಾಲೆಗಳ ಸಂಖ್ಯೆ 47,449ಕ್ಕೆ ಕುಸಿದಿದೆ ಎನ್ನುವುದು ಇಲ್ಲಿ ಉಲ್ಲೇಖಾರ್ಹ.

ಈ ಸಾಲಿಗೆ ಕುಂದಾಪುರ ವಲಯವು ಹೊರತಾಗಿಲ್ಲ. ಕುಂದಾಪುರ ವಲಯದಲ್ಲಿ ಸರ್ಕಾರಿ ಶಾಲೆಗಳನ್ನು ನಿರಾಕರಿಸಿ ಖಾಸಗಿ ಶಾಲೆಗಳ ಆಕರ್ಷಣೆಗೆ ಒಳಗಾಗಿ ಅಲ್ಲಿ ದಾಖಲಾತಿ ಹೊಂದುವ ಸಂಖ್ಯೆ ಹೆಚ್ಚಳವಾಗಿದೆ ಎನ್ನುವುದಕ್ಕೆ ಕಳೆದ ಐದು-ಹತ್ತು ವರ್ಷಗಳಲ್ಲಿ ಕುಂದಾಪುರ ತಾಲೂಕಿನ ಕ್ಷೇತ್ರ ಶಿಕ್ಷಣ ಇಲಾಖೆಯ ಅಡಿಯಲ್ಲಿ ಬರುವ 14 ಶಾಲೆಗಳು ಮುಚ್ಚಿರುವುದೇ ದೊಡ್ಡ ಸಾಕ್ಷಿ. ಹೌದು, ಇದು ಮುಚ್ಚಿರುವ ಸರ್ಕಾರಿ, ಅನುದಾನಿತ ಶಾಲೆಗಳ ಸಂಖ್ಯೆ.

ಶೂನ್ಯ ಶಿಕ್ಷಕರ ಶಾಲೆಗಳು : ಕುಂದಾಪುರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ನೀಡಿರುವ ಮಾಹಿತಿಯ ಪ್ರಕಾರ, ವಲಯದ ಎರಡು ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ. ಸ.ಕಿ. ಪ್ರಾಥಮಿಕ ಶಾಲೆ ಬೆಚ್ಚಳ್ಳಿ ಹಾಗೂ ಸ.ಕಿ. ಪ್ರಾಥಮಿಕ ಶಾಲೆ ಬಳ್ಮನೆ ಶಾಲೆಗಳು ಶೂನ್ಯ ಶಿಕ್ಷಕರಿರುವ ಶಾಲೆಗಳು. ಹಳ್ಳಿ ಪ್ರದೇಶಗಳಾಗಿರುವ ಬೆಚ್ಚಳ್ಳಿ ಮತ್ತು ಬಳ್ಮನೆಯ ಬಡ ವಿದ್ಯಾರ್ಥಿಗಳ ಪಾಲಿಗೆ ಶಿಕ್ಷಣ ಎಟುಕದ ದ್ರಾಕ್ಷಿ ಎಂಬಂತಾಗುವ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ. ಸದ್ಯ, ಈ ಶಾಲೆಗಳಿಗೆ ಬೇರೆ ಶಾಲೆಗಳಿಂದ ಶಿಕ್ಷಕರ ನಿಯೋಜನೆ ಹಾಗೂ ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗಿದೆಯಾದರೂ ಶೂನ್ಯ ಶಿಕ್ಷಕರಿರುವ ಶಾಲೆಗಳು ಎನ್ನುವುದು ಇಲ್ಲಿ ಉಲ್ಲೇಖಾರ್ಹ.

ಒಂದು ಅನುದಾನಿತ ಶಾಲೆಯಲ್ಲಿಯೂ ಶಿಕ್ಷಕರಿಲ್ಲ ಎನ್ನುವುದು ಕೂಡ ಗಮನಾರ್ಹ. ವಿವೇಕೋದಯ ಹಿ. ಪ್ರಾ ಶಾಲೆ ಹೊಂಬಾಡಿ ಮುಂಡಾಡಿ ಶಾಲೆಯಲ್ಲಿ ಶಿಕ್ಷಕರಿಲ್ಲ. ಆದರೇ ಬೇರೆ ಅನುದಾನಿತ ಶಾಲೆಯಿಂದ ಒಬ್ಬರು ಶಿಕ್ಷಕರನ್ನು ನಿಯೋಜಿಸಲಾಗಿದೆ ಎಂಬ ಮಾಹಿತಿ ಇದೆ. ಅನುದಾನಿತ ಪ್ರಾಥಮಿಕ ಶಾಲೆಗಳು ಗ್ರಾಂಟ್‌ ಇನ್‌ ಏಯ್ಡ್‌ ಸ್ಕೂಲ್‌ ಎಜುಕೇಶನ್‌ ಅಡಿಯಲ್ಲಿ ಬರುವುದರಿಂದ ಪಾಲಿಸ್‌ ಮ್ಯಾಟರ್‌ ಮುಂದೆ ಬರುತ್ತದೆ. ಅನುದಾನಿತ ಶಾಲೆಗಳಿಗೆ ಶಿಕ್ಷಕರ/ಅತಿಥಿ ಶಿಕ್ಷಕರ ನೇಮಕಾತಿ ಮಾಡಲು ಸಾಧ್ಯವಿಲ್ಲ. ಶಾಲೆಗಳನ್ನು ನಡೆಸುವ ಸಂಸ್ಥೆಗಳೇ ನೋಡಿಕೊಳ್ಳಬೇಕು. ಆಡಳಿತ ಸಂಸ್ಥೆಗಳು ಕೂಡ ಈ ಬಗ್ಗೆ ಹೆಚ್ಚು ಆಸ್ತೆ ನೀಡುತ್ತಿಲ್ಲ ಎಂಬಂತೆ ಕಾಣಿಸುತ್ತಿದೆ.

ಏಕೋಪಾಧ್ಯಾಯ ಶಾಲೆಗಳು : ವಲಯದಲ್ಲಿ ಒಟ್ಟು ಐದು ಪ್ರಾಥಮಿಕ ಶಾಲೆಗಳಲ್ಲಿ ಏಕೋಪಾಧ್ಯಾಯರಿದ್ದಾರೆ. ಸ. ಕಿ. ಪ್ರಾ ಶಾಲೆ ಕೆಲ, ಸ.ಕಿ. ಪ್ರಾ ಶಾಲೆ ಕೆಳಸುಂಕ, ಸ.ಕಿ. ಪ್ರಾ ಶಾಲೆ ಗಂಟುಬೀಳು, ಸ.ಹಿ. ಪ್ರಾ ಶಾಲೆ ಆನಗಳ್ಳಿ, ಸ.ಹಿ.ಪ್ರಾ ಶಾಲೆ ಗುಳ್ಳಾಡಿಯಲ್ಲಿ ಮಕ್ಕಳ ಸಂಖ್ಯೆ ಸಾಕಷ್ಟಿದ್ದರೂ ಏಕೋಪಾಧ್ಯರಿಂದ ನಡೆಯುತ್ತಿವೆ. ಅಗತ್ಯಕ್ಕೆ ಅನುಗುಣವಾಗಿ ಶಿಕ್ಷಕರ ನಿಯೋಜನೆ ಆಗಿಲ್ಲ. ಸದ್ಯ ಅತಿಥಿ ಶಿಕ್ಷಕರನ್ನು ನೀಡಲಾಗಿದೆ ಎಂಬ ಮಾಹಿತಿ ಇದೆ. ಇನ್ನು, ತಾಲೂಕಿನಲ್ಲಿ ಒಟ್ಟು ಏಳು ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿ ಏಕೋಪಾಧ್ಯಾಯರಿದ್ದಾರೆ.

ಶಿಕ್ಷಕರ ಕೊರತೆ : ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಮಾಹಿತಿ ಪ್ರಕಾರ, ವಲಯದಲ್ಲಿ ಒಟ್ಟು ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 54 ಶಿಕ್ಷಕರ ಕೊರತೆ ಇದೆ. ಸದ್ಯ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ. ಇನ್ನು ಪ್ರೌಢ ಶಾಲೆಗಳಲ್ಲಿ 34 ಶಿಕ್ಷಕರ ಕೊರತೆಯಿದೆ. ಅಲ್ಲಿಯೂ ಅತಿಥಿ  ಶಿಕ್ಷಕರಿದ್ದಾರೆ.

ಇನ್ನು, ಶಿಕ್ಷಣ ಇಲಾಖೆ, ಶಿಕ್ಷಕರ ಕೊರತೆ ನೀಗಿಸುವುದಕ್ಕೆ ಬೇಕಾಗಿ ನೇಮಕಾತಿಗೆ ಸಂಬಂಧಿಸಿದಂತೆ ಪ್ರಕ್ರಿಯೆ ಆರಂಭಿಸಿದೆ. ಈ ಕುರಿತು ಹಣಕಾಸು ಇಲಾಖೆ ಅನುಮತಿ ನೀಡಿದ ಕೂಡಲೇ ಅಧಿಸೂಚನೆ ಹೊರ ಬೀಳಲಿದೆ. ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಅನುಗುಣವಾಗಿ ಅತಿಥಿ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗುವುದು, ರಾಜ್ಯದ ಪ್ರಾಥಮಿಕ ಶಾಲೆಗಳಿಗೆ 35,000 ಪ್ರೌಢ ಶಾಲೆಗಳಲ್ಲಿ 10,000 ಸೇರಿ 45 ಸಾವಿರ ಅತಿಥಿ ಶಿಕ್ಷಕರ ನೇಮಕಾತಿಗೆ ಶಿಕ್ಷಣ ಇಲಾಖೆ ವತಿಯಿಂದ ಅನುಮತಿ ನೀಡಲಾಗಿದೆ ಎಂದು ತಿಳಿದು ಬಂದಿದೆ.

ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ ಕನಿಷ್ಠ 50,000 ಪ್ರೌಥಶಾಲೆಗಳಲ್ಲಿ ಕನಿಷ್ಠ 5000 ಶಿಕ್ಷಕರ ಕೊರತೆ ಇದೆ. ಶಿಕ್ಷಣ ಇಲಾಖೆ ಹೊಸದಾಗಿ 10,000 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲಿದೆ ಎಂಬ ಮಾಹಿತಿ ಇದೆ. ಆದರೇ ಅದು ಯಾವಾಗ ಎನ್ನುವ ಪ್ರಶ್ನೆ ಇದೆ. ಆದಷ್ಟು ಬೇಗ ಶಿಕ್ಷಕರನ್ನು ನೇಮಿಸಿಕೊಂಡು ಶಿಕ್ಷಕರು ಕೊರತೆ ಇರುವ ಶಾಲೆಗಳಲ್ಲಿ ನಿಯೋಜಿಸಲಿ ಎನ್ನುವ ಕೂಗು ಇದೆ.

ಮಾತ್ರವಲ್ಲದೇ, ಶಿಕ್ಷಕರ ನೇಮಕಾತಿ ಪರೀಕ್ಷೆ ಬರೆಯಲು 1.25 ಲಕ್ಷ ಮಂದಿ ಟಿಇಟಿ ಉತ್ತೀರ್ಣರಾಗಿ ಅರ್ಹತೆ ಪಡೆದಿದ್ದಾರೆ. ಅಲ್ಲದೇ ಜೂ. 30ರಂದು ಟಿಇಟಿ ನಡೆಸಲಾಗಿದ್ದು, 2.5 ಲಕ್ಷ ಮಂದಿ ಟಿಇಟಿ ಬರೆದಿದ್ದಾರೆ. ಕನಿಷ್ಠ 1.5 ಲಕ್ಷ ಮಂದಿ ಅರ್ಹ ಅಭ್ಯರ್ಥಿಗಳಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರವು ಪ್ರತಿ ವರ್ಷ 10 ಸಾವಿರ ಶಿಕ್ಷಕರನ್ನು ನೇಮಕ ಮಾಡುವುದಾಗಿ ತಿಳಿಸಿತ್ತು. ಆದರೆ, 2023-24ನೇ ಸಾಲಿನಲ್ಲಿ ಶಿಕ್ಷಕರ ನೇಮಕಾತಿಯಾಗದ ಕಾರಣ ಆಕಾಂಕ್ಷಿಗಳ ಸಂಖ್ಯೆಯೂ ಸಹ ಹೆಚ್ಚಳವಾಗಿದೆ. ಸರ್ಕಾರ ಅರ್ಹ ಶಿಕ್ಷಕರನ್ನು ನೇಮಿಸಿಕೊಳ್ಳದೇ ಅತಿಥಿ ಶಿಕ್ಷಕರಿಂದಲೇ ಶಾಲೆಗಳನ್ನು ನಡೆಸುವ ಧೋರಣೆಯಿಂದ ಹೊರಬಂದು ಅರ್ಹ ಶಿಕ್ಷಕರನ್ನು ನೇಮಿಸಿಕೊಳ್ಳುವುದರ ಬಗ್ಗೆ ಶೀಘ್ರಮುಖವಾಗಿ ಕಾರ್ಯೋನ್ಮುಖವಾಗಬೇಕಿದೆ.

ಇನ್ನು, ಬಡ ವರ್ಗದ ಮಕ್ಕಳ ಪಾಲಿಗೆ ಸರ್ಕಾರಿ ಶಾಲೆಗಳೇ ಅವರ ಬದುಕಿನ ವಿಕಾಸಕ್ಕೆ ದಾರಿ. ಮಕ್ಕಳ ದಾಖಲಾತಿ ಕಡಿಮೆ ಆಗುವುದಕ್ಕೆ ಸರ್ಕಾರವೇ ನೇರ ಕಾರಣ. ಗುಣಮಟ್ಟದ ಶಿಕ್ಷಣ, ವ್ಯವಸ್ಥಿತ ಮೂಲಭೂತ ಸೌಕರ್ಯಗಳನ್ನು ಒದಗಿಸಿದರೇ ಸರ್ಕಾರಿ ಶಾಲೆಗಳಲ್ಲೂ ವಿದ್ಯಾರ್ಥಿಗಳು ತುಂಬಿ ತುಳುಕಾಡುತ್ತಾರೆ. ಸರ್ಕಾರಿ ಶಾಲೆಗಳಿಗೆ ಬೀಗ ಹಾಕಿಸುವ ಬದಲು ಮರು ಜೀವ ನೀಡಿ ಹಳ್ಳಿ ಭಾಗದ ಬಡ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮುಂದುವರಿಸಬಹುದು. ಸರ್ಕಾರದ  ನಿರ್ಲಕ್ಷ್ಯದಿಂದಾಗಿ  ವರ್ಷದಿಂದ ವರ್ಷಕ್ಕೆ ಶಾಲೆಗಳು ಬಾಗಿಲು ಹಾಕುವ ಸಂಖ್ಯೆ ಹೆಚ್ಚುತ್ತಲೇ ಇದೆ. ಸರ್ಕಾರಿ ಶಾಲೆಗಳಿಗೆ ಅಗತ್ಯತೆಗಳನ್ನು ಪೂರೈಸಲು ಸರ್ಕಾರವೇ ಮನಸ್ಸು ಮಾಡದೆ ಇದ್ದರೇ ಶಾಲೆಗಳು ಉಳಿಯುವುದು ಹೇಗೆ ? ಶ್ರೀಮಂತ ವರ್ಗದ ಮಕ್ಕಳು ಖಾಸಗಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಬಹುದು, ಆದರೇ ಬಡ ವಿದ್ಯಾರ್ಥಿಗಳು ? ಬಡವರ ಪಾಲಿಗಾಗಬೇಕಾದ ಸರ್ಕಾರ ಹೀಗೆ ಪರೋಕ್ಷವಾಗಿ ಬಡವರ ವಿರುದ್ಧದ ಧೋರಣೆ ಮೆರೆಯುತ್ತಿರುವುದು ವಿಷಾದನೀಯ. ವಲಯವೊಂದರಲ್ಲೇ ಇಷ್ಟು ಶಾಲೆಗಳು ಮುಚ್ಚಿವೆ ಎಂದರೇ ? ಜಿಲ್ಲೆಯಲ್ಲಿ, ರಾಜ್ಯದಲ್ಲಿ ಎಷ್ಟು ಶಾಲೆಗಳು ಮುಚ್ಚಿಲ್ಲ ? ಬಡ ವಿದ್ಯಾರ್ಥಿಗಳು ಶಿಕ್ಷಣ ವಂಚಿತರಾಗುವಂತೆ ಮಾಡಲು ಸರ್ಕಾರದ ಕೊಡುಗೆಯೇ ಹೆಚ್ಚಿದೆಯೆ ಎನ್ನುವ ಪ್ರಶ್ನೆ ಮುಂದಿದೆ. ಇನ್ನಾದರೂ ಸರ್ಕಾರಿ ಶಾಲೆಗಳಲ್ಲಿನ ದೇವರುಗಳ ಧ್ವನಿಯನ್ನು ಸರ್ಕಾರ ಕೇಳಿಸಿಕೊಳ್ಳಲಿ.

ಕುಂದಾಪುರ ವಲಯದ ಶಾಲೆಗಳು
ಸರ್ಕಾರಿ ಪ್ರಾಥಮಿಕ ಶಾಲೆಗಳು  – 121
ಸರ್ಕಾರಿ ಪ್ರೌಢ ಶಾಲೆಗಳು   – 20
ಅನುದಾನಿತ ಪ್ರಾಥಮಿಕ ಶಾಲೆಗಳು  – 17
ಅನುದಾನಿತ ಪ್ರೌಢ ಶಾಲೆಗಳು – 7
ಅನುದಾನ ರಹಿತ ಶಾಲೆಗಳು – 29

ಅತಿ ಹೆಚ್ಚು ಮಕ್ಕಳಿರುವ ಸರ್ಕಾರಿ ಪ್ರಾಥಮಿಕ ಶಾಲೆಗಳು :
ಕುವೆಂಪು ಶತಮಾನೋತ್ಸವ ಸ. ಹಿ. ಪ್ರಾ ಶಾಲೆ ತೆಕ್ಕಟ್ಟೆ
ಸರ್ಕಾರಿ ಪ್ರೌಢ ಶಾಲೆ ಸಿದ್ದಾಪುರ
ಸಂತಮೇರಿ ಹಿರಿಯ ಪ್ರಾಥಮಿಕ ಶಾಲೆ ಕುಂದಾಪುರ (ಅನುದಾನಿತ)
ಎಸ್‌. ವಿ ಜೂನಿಯರ್‌ ಕಾಲೇಜು ಗಂಗೊಳ್ಳಿ

ಅತಿ ಕಡಿಮೆ ಮಕ್ಕಳಿರುವ ಶಾಲೆಗಳು :
ಸ.ಕಿ. ಪ್ರಾಥಮಿಕ ಶಾಲೆ ಹಂಜ
ಸ.ಕಿ. ಪ್ರಾಥಮಿಕ ಶಾಲೆ ಬಾಳೆಜಡ್ಡು
ಸರ್ಕಾರಿ ಪ್ರೌಢ ಶಾಲೆ ಕೋಣಿ
ಸಂಜಯ್‌ ಗಾಂಧಿ ಪ್ರೌಢ ಶಾಲೆ ಅಂಪಾರು (ಅನುದಾನಿತ)

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!