spot_img
Wednesday, November 19, 2025
spot_img

ಸಾರ್ವಜನಿಕ ಚಿಂತನೆಯೊಂದಿಗೆ ಬದುಕಬೇಕಾದ ಮಾಧ್ಯಮಗಳ ಅಪಾಯಕಾರಿ ಸ್ಥಿತಿ !

ಸತ್ಯ, ಸುಳ್ಳು, ಹೆಸರಿಲ್ಲದ ಪತ್ರಕರ್ತ ಮತ್ತು ಸಾಮಾಜಿಕ ಜವಾಬ್ದಾರಿ  

ಪ್ರತಿ ವರ್ಷ ಜುಲೈ 1 ರಂದು ಕನ್ನಡ ಪತ್ರಿಕಾ ದಿನಾಚರಣೆ. ಈ ವರ್ಷವೂ ಆ ದಿನ ಆಗಿ ಹೋಗಿದೆ. ಪತ್ರಕರ್ತರೆಲ್ಲಾ ಪರಸ್ಪರ ಶುಭಾಶಯ ಕೋರುವುದು, ವಾಟ್ಸ್ಯಾಪ್‌ ಸ್ಟೇಟಸ್‌ ಇಡುವುದು. ಹೆಚ್ಚೆಂದರೇ ಒಂದು ಸಭಾ ಕಾರ್ಯಕ್ರಮ ಮಾಡಿ ಹಿರಿಯ ಪತ್ರಕರ್ತರೊಬ್ಬರಿಗೆ ಶಾಲು-ಹಾರ ಹಾಕಿ, ಒಂದು ಹರಿವಾಣ ತುಂಬಾ ಹಣ್ಣುಗಳನ್ನು ಹಾಕಿ ಸನ್ಮಾನದ ಹೆಸರಿನಲ್ಲಿ ಕೊಟ್ಟುಬಿಟ್ಟರೇ ವರ್ಷದ ಪತ್ರಿಕಾ ದಿನಾಚರಣೆ ಮುಗಿಯಿತು.

ಪತ್ರಿಕೋದ್ಯಮ ಹಿಂದೆ ಇದ್ದ ಹಾಗೆ ಉಳಿದಿಲ್ಲ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಸಾರ್ವಜನಿಕ ಸೇವೆ, ಜವಾಬ್ದಾರಿ ಎಂದೆಲ್ಲಾ ಕರೆಸಿಕೊಳ್ಳುತ್ತಿದ್ದ ಪತ್ರಿಕೋದ್ಯಮ ಇಂದು ವ್ಯಾಪಾರವಾಗಿ ಬದಲಾಗಿದೆ. ಪತ್ರಿಕೋದ್ಯಮ ಪತ್ರಕರ್ತನೋರ್ವನ ಪಾಲಿಗೆ ಅದು ನಿಜಕ್ಕೂ ಪಾಕಶಾಲೆ. ಇಲ್ಲಿ, ರುಚಿ ಸವಿಯುವಷ್ಟು ಪುರಸೊತ್ತಿಲ್ಲದೆ ಮಾಡಿದ್ದನ್ನು ಬಳಸಿಬಿಡುವ ತುರ್ತು ಜವಾಬ್ದಾರಿ. ಚುರುಕು, ತಾಳ್ಮೆ, ಜಾಣ್ಮೆ ಎಲ್ಲವೂ ಬೇಕು. ಪತ್ರಿಕೋದ್ಯಮ ಈಗ ಮೊದಲಿನಂತಿಲ್ಲ ಕಾಲಕ್ಕೆ ಅನುಸಾರವಾಗಿ ಅದು ಬದಲಾಗುತ್ತಾ ಬಂತು‌. ಅದು ಎಲ್ಲಿಯ ತನಕ ಬಂತು ಅಂದರೇ, ಒಬ್ಬ ಹೂಡಿಕೆದಾರ ಒಂದು ಸಿದ್ದಾಂತವನ್ನು ಖರೀದಿಸಿ ಅದರಡಿಯಲ್ಲಿ ಹೆಚ್.ಆರ್(ಹ್ಯೂಮನ್‌ ರಿಸೋರ್ಸ್) ಪ್ರಕ್ರಿಯೆಗಳ ಮೂಲಕ ತಮಗೊಪ್ಪುವ ಪತ್ರಕರ್ತರನ್ನು ಆಯ್ಕೆ ಮಾಡಿಕೊಳ್ಳುವ ಪರಿಸ್ಥಿತಿಯವರೆಗೆ.

ಒಳಗೆ ಸೇರಿದ ಮೇಲೆ ಅಲ್ಲಿನ ಮೇಲಾಟಗಳು, ರಾಜಕೀಯ ಒತ್ತಡ, ಸತ್ಯವನ್ನು ಹಿಚುಕಿ ಸುಳ್ಳನ್ನು ವೈಭವೀಕರಿಸುವ ಈಗಿನ ಕೆಲವು ಮಾಧ್ಯಮಗಳ ಧೋರಣೆಯನ್ನು ಸಹಿಸಿಕೊಳ್ಳಲಾಗದೇ ‘ಸಾಕಪ್ಪ, ಈ ಪತ್ರಿಕೋದ್ಯಮ ವೃತ್ತಿಯ ಸಹವಾಸವೇ ಸಾಕು’ ಅಂತ  ಹೊರಗೆ ಬಂದ ಪರ್ತಕರ್ತರ ಪಟ್ಟಿ ದೊಡ್ಡದಿದೆ‌. ಆ ಪಟ್ಟಿಯಲ್ಲಿ ಆಪ್ತ ಬಳಗದಲ್ಲಿರುವವರೆ ಹಲವರಿದ್ದಾರೆ.

ಹೌದು, ನನ್ನ ಗೆಳೆಯನೊಬ್ಬ ಮೂರು ವರ್ಷಗಳ ಹಿಂದೆ ಒಂದು ಖಾಸಗಿ ಸುದ್ದಿ ಮಾಧ್ಯಮಕ್ಕೆ ವರದಿಗಾರನಾಗಿ ಸೇರ್ಪಡೆಗೊಂಡಿದ್ದ. ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಂಡಿದ್ದ. ಮತ್ತವನ ಪ್ರತಿಭೆಯನ್ನು ಆ ಸಂಸ್ಥೆ ಚೆನ್ನಾಗಿಯೇ ದುಡಿಸಿಕೊಂಡಿತ್ತು. ಅದು ಅವನಿಗೆ ದೊಡ್ಡ ಅನುಭವವನ್ನೇ ಕೊಟ್ಟಿತು ಬಿಡಿ. ಸೇರಿದ ಕೆಲವೇ ಕೆಲವು ತಿಂಗಳಲ್ಲಿ ‘ಇಲ್ಲಿ ಜೀವನ ನಿಭಾಯಿಸಲು ಸಾಧ್ಯವಾಗುತ್ತಿಲ್ಲ, ಕೆಲಸದ ಒತ್ತಡ, ಪತ್ರಿಕೋದ್ಯಮ ಸಾಕೆನ್ನಿಸಿದೆ‌. ಹೊರಗೆ ಬರಲು ನಿರ್ಧರಿಸಿದ್ದೇನೆ, ಇನ್ಮೇಲೆ ಪತ್ರಿಕೋದ್ಯಮವನ್ನು ಪ್ರವೃತ್ತಿಯಾಗಿ ಸ್ವೀಕರಿಸುತ್ತೇನೆ’ ಅಂತಂದ. ಮಾಧ್ಯಮ ಲೋಕದಲ್ಲಿ ಈಗಷ್ಟೇ ಹಸಿ ಹೆಜ್ಜೆಗಳನ್ನು ಇಡಲಾರಂಭಿಸಿದವ ಹೀಗೆ ಹೇಳ್ತಿದ್ದಾನಲ್ಲಾ ಅಂತ ಆಶ್ಚರ್ಯ ಆಯ್ತು.  ಮತ್ತವನ ಆ ಕ್ಷಣದ ಧೈರ್ಯ ಇಷ್ಟ ಆಯ್ತು. ಕೆಲದಿನಗಳ ನಂತರ ತಾನು ಹೇಳಿದಂತೆಯೇ ಪ್ರವೃತ್ತಿಗಾಗಿ ಸ್ವತಂತ್ರ ಪತ್ರಿಕೋದ್ಯಮವನ್ನು ಆರಂಭಿಸಿದ್ದ. ಪತ್ರಿಕೋದ್ಯಮದಲ್ಲಿ ಸತ್ಯ ಶೋಧಿಸುವ ಕೆಲಸ ನಿರಂತರವಾಗಲಿ. ಯಾವುದೇ ಸಂಘಟನೆ, ಪಕ್ಷ, ಸಿದ್ದಾಂತಕ್ಕೆ ಬಲಿಯಾಗದೇ ಬೆಳೆಯಲಿ‌. ಮತ್ತೆ ವೃತ್ತಿ ಪತ್ರಿಕೋದ್ಯಮದತ್ತ ಅದು ಕರೆತರಲಿ ಎಂದು ಆಶಿಸಿದ್ದೆ. ಹಾಗೆಯೇ ಆಗಿದೆ. ಎಲ್ಲಿಂದ ಹೊರಬಂದಿದ್ದಾನೋ ಅಲ್ಲಿಗೆ ಮರಳಿ ಸೇರ್ಪಡೆಗೊಂಡಿದ್ದಾನೆ. ಅಂದರೇ ಆತನ ಅಗತ್ಯ ಆ ಮಾಧ್ಯಮಕ್ಕೂ ಇತ್ತು ಎಂದು ಅರ್ಥೈಸಿಕೊಳ್ಳಬಹುದೇನೋ.

ದುಡಿಯುವ, ಪ್ರಶ್ನೆ ಮಾಡುವ, ಸಾರ್ವಜನಿಕವಾಗಿ ಚಿಂತಿಸುವ ಭರವಸೆಗಳನ್ನು ಉಳಿಸಿಕೊಳ್ಳಲಾಗದ ಪರಿಸ್ಥಿತಿ ಹೆಚ್ಚಿನ ಮಾಧ್ಯಮಗಳಿಗೆ ಬಂದಿದೆ. ಸಾರ್ವಜನಿಕ ಚಿಂತನೆಯೊಂದಿಗೆ ಬದುಕುತ್ತಾ ಪತ್ರಿಕೋದ್ಯಮದಲ್ಲಿ ತೊಡಗುವುದಕ್ಕೆ ಮುಂದಾಗುವವನ ಪ್ರಸ್ತುತಿ ಯಾವ ಅನುಭವಿ ಪತ್ರಕರ್ತನಿಗೂ ಕಡಿಮೆ ಇರುವುದಿಲ್ಲ ಎನ್ನುವುದು ಉತ್ಪ್ರೇಕ್ಷೆಯಲ್ಲ. ಯಾವುದೇ ನಿಲುವುಗಳಿಗೆ ಬಲಿಯಾಗದೇ ಒಳ್ಳೆಯ ಪರ್ತಕರ್ತನಾಗಬೇಕೆಂಬ ಕನಸು ಕನಸಾಗಿಯೇ ಸಾಯಿಸಿಕೊಂಡು ಬದುಕುತ್ತಿರುವ ಯುವ ಪತ್ರಕರ್ತರು ಸಾಕಷ್ಟು ಮಂದಿ ಇದ್ದಾರೆ. ಹಿರಿಯ ಪತ್ರಕರ್ತರ ಸಾಲೂ ದೊಡ್ಡದಿದೆ. ಹೂಡಿಕೆದಾರನೋರ್ವನ ʼಅಡಿಯಾಳು ಮಾಧ್ಯಮʼಗಳ ಕಾರಣದಿಂದ ಸತ್ಯವನ್ನು ಸತ್ಯವೆಂದು, ಸುಳ್ಳನ್ನು ಸುಳ್ಳೆಂದು ಹೇಳುವುದಕ್ಕಾಗದೇ ಬದುಕನ್ನು ನಿಭಾಯಿಸುವುದಕ್ಕೋಸ್ಕರ ದುಡಿಯುತ್ತಿದ್ದಾರೆ.

ಜುಲೈ 1 ಕನ್ನಡ ಪತ್ರಿಕೋದ್ಯಮ ದಿನಾಚರಣೆ. ಹೀಗೆ ಆಯಾಯ ಭಾಷೆಗಳಲ್ಲಿ ಒಂದೊಂದು ದಿನ ಆಚರಣೆಗೆ ನಿಗದಿಯಾಗಿರಬಹುದು. ಪತ್ರಿಕಾ ಸ್ವಾತಂತ್ರ್ಯ ದಿನ, ರಾಷ್ಟ್ರೀಯ ಪತ್ರಿಕಾ ದಿನ… ಹೀಗೆ ಇಂತಹ ದಿನಗಳು, ಆಚರಣೆಗಳು ಎಷ್ಟು ಬಂದರೇನು, ಆ ಆಚರಣೆಯ ಮೂಲ ಉದ್ದೇಶ ಮತ್ತು ಅದರಿಂದ ತಿಳಿಯಬೇಕಾದ ಮೂಲ ಆದರ್ಶವನ್ನು ಮೂಲೆಗೆ ಸರಿಸಿ ಪತ್ರಿಕೋದ್ಯಮ ನಡೆಯುತ್ತಿರುವಾಗ ? ಹೀಗೆಲ್ಲಾ ಬರಿದೇ ಆಚರಣೆ ಕಾಣುವ ದಿನಗಳು ನಿರರ್ಥಕ ಎಂದೇ ಕಾಣಿಸುತ್ತವೆ.

ಪತ್ರಕರ್ತ ಮಾಧ್ಯಮದಲ್ಲಿ ಸರಿಯಾದದ್ದನ್ನು, ನಿಖರವಾದದ್ದನ್ನು ನಿಷ್ಠುರವಾಗಿಯೇ ಹೇಳುವ ಸ್ವತಂತ್ರನಾಗಿರಬೇಕು ಎಂಬ ಮಾತಿದೆ. ಹಾಗೆಂದ ಮಾತ್ರಕ್ಕೆ ಪತ್ರಕರ್ತ ಸರ್ವಸ್ವತಂತ್ರನಾಗಿ ಇರುವುದಕ್ಕೆ ಸಾಧ್ಯವಿಲ್ಲ. ಆತನಿಗೂ ಒಂದು ಚೌಕಟ್ಟಿದೆ. ಆ ವ್ಯಾಪ್ತಿಯೊಳಗೆ ಆತ ಸಾರ್ವಜನಿಕವಾಗಿ ಜವಾಬ್ದಾರನಾಗಿರಬೇಕಾಗುತ್ತದೆ. ಈ ಸಹಜ ಚೌಕಟ್ಟನ್ನು ಮೀರಿ ಸೃಷ್ಟಿಸಿರುವ ʼಹೂಡಿಕೆ ಮೂಲದ ನಿಯಮಗಳುʼ ಇಂದು ಪತ್ರಿಕೋದ್ಯಮ ಅಸಹಜವಾಗಿ ನಡೆಯುವಂತಹ ವಾತಾವರಣವನ್ನು ಸೃಷ್ಟಿ ಮಾಡಿವೆ ಎಂದರೇ ತಪ್ಪಿಲ್ಲ. ಪತ್ರಿಕೋದ್ಯಮ ಇಂದು ಒಂದು ವಿಶ್ವಾಸಾರ್ಹ ಸುದ್ದಿಗಳನ್ನು ಬಿತ್ತರಿಸುವುದಕ್ಕೆ ಸಾಧ್ಯವಾಗದೇ ಇರುವುದಕ್ಕೆ ಮೂಲ ಕಾರಣವೇ ʼಹೂಡಿಕೆಯ ನಿಯಂತ್ರಣ ಹೇರಿಕೆʼ.

ಇನ್ನು, ಪತ್ರಿಕೋದ್ಯಮದ ಪ್ರಧಾನ ಮೂಲ ಜಾಹೀರಾತು. ಇವುಗಳಲ್ಲಿ ಸರ್ಕಾರಿ ಜಾಹೀರಾತುಗಳು ಹೆಚ್ಚು. ಇನ್ನು, ಪ್ರಭಾವಿಗಳು, ಉಳ್ಳವರು ಹಾಗೂ ಸರ್ಕಾರೇತರ ಸಂಸ್ಥೆಗಳು ಕೂಡ ಪ್ರಚಾರಕ್ಕಾಗಿ ಹೆಚ್ಚಾಗಿ ಮಾಧ್ಯಮಗಳನ್ನೇ ಅವಲಂಭಿಸಿವೆ. ಹಾಗಾಗಿ ಮಾಧ್ಯಮಗಳಿಗೆ ಜಾಹೀರಾತುಗಳನ್ನು ನೀಡುವ ಸರ್ಕಾರ, ಸರ್ಕಾರೇತರ ಸಂಸ್ಥೆಗಳು ತಮಗೆ ಸಂಬಂಧಿಸಿದ ಸುದ್ದಿಗಳ ಮೇಲೆ ಹೆಚ್ಚು ನಿಯಂತ್ರಣ ಹೊಂದಿವೆ. ತಮಗೆ ಅನೂಕಲಕರವಲ್ಲದ ಸುದ್ದಿಗಳಿಗಾಗಿ ಜಾಹೀರಾತುಗಳನ್ನು ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳು ಜಾಹೀರಾತುಗಳನ್ನು ನಿಲ್ಲಿಸಬಹುದು. ʼಉಪಕಾರ ಸ್ಮರಣೆʼಯ ದೃಷ್ಟಿಯಲ್ಲಿ ಮಾಧ್ಯಮಗಳು ಜಾಹೀರಾತು ನೀಡುವವರಿಗೆ ಅನೂಕಲಕರವಾಗಿ ಇರವ ಹಾಗೆ ಸುದ್ದಿಗಳನ್ನು ಬಿತ್ತರಿಸುವ ಅನಿವಾರ್ಯತೆಯಲ್ಲೇ ಕಾರ್ಯನಿರ್ವಹಿಸಬೇಕಾಗುತ್ತದೆ. ಅಂದರೇ ಜಾಹೀರಾತಿನ ಮೂಲಕ ಮಾಧ್ಯಮಗಳನ್ನು ಅಥವಾ ಪತ್ರಿಕೋದ್ಯಮವನ್ನು ʼಕೊಳ್ಳುವ ಸಂಸ್ಕೃತಿʼ ಬಂದಿದೆ. ಈ ಮೂಲಕ ಸುದ್ದಿ ಬಿತ್ತರಿಸುವ ಮಾಧ್ಯಮಗಳ ಮೇಲೆ, ಪತ್ರಕರ್ತರ ಮೇಲೆ ನಿಯಂತ್ರಣ ಸಾಧಿಸುವುದಕ್ಕೆ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳಿಗೆ ಬಹಳ ಸುಲಭ. ಪತ್ರಿಕೋದ್ಯಮದಲ್ಲಿ ಕಾಲಾಂತರದಲ್ಲಿ ಒಂದು ರೀತಿಯ ಸಂಪ್ರದಾಯದಂತೆಯೇ ಆಗಿ ಹೋದ ಈ ʼಕೊಳ್ಳುವ ಪದ್ಧತಿʼ ಮಾಧ್ಯಮಗಳಲ್ಲಿ ದುಡಿಯುವವರ ಹೊಟ್ಟೆ ತುಂಬಿಸಬಹುದು, ಮಾಧ್ಯಮಗಳನ್ನು ಯಾವುದೇ ಆರ್ಥಿಕ ಬಿಕ್ಕಟ್ಟಿಲ್ಲದೇ ಮುನ್ನಡೆಸಬಹುದು ಆದರೇ, ಇದು ಸತ್ಯವನ್ನು ಸುಳ್ಳಾಗಿಸುವ ಅಕ್ರಮ ದಾರಿ ಆಗಿರುವುದರಿಂದ ಇದು ಸಮಾಜಕ್ಕೆ ಹೆಚ್ಚು ಅಪಾಯಕಾರಿಯೇ ಆಗಿದೆ.

ಲಕ್ಷ, ಕೋಟಿ ಲೆಕ್ಕಗಳಲ್ಲಿ ಬರುವ ಒಂದು ಜಾಹೀರಾತುಗಳಿಗೆ ಅಸಂಖ್ಯ ಸುಳ್ಳುಗಳನ್ನು ಮಾಧ್ಯಮದ ಮೂಲಕ ಮುಚ್ಚುವ ಸುಲಭ ಮಾರ್ಗ ದಕ್ಕಿ ಬಿಟ್ಟಿದೆ. ಈ ಮೂಲಕ ಸುದ್ದಿ ಮಾಧ್ಯಮಗಳನ್ನು ಮೇಲೆ ಜಾಹೀರಾತು ನೀಡುವ ಸರ್ಕಾರ ಅಥವಾ ಸರ್ಕಾರೇತರ ಸಂಸ್ಥೆಗಳು ಹಿಡಿತ ಸಾಧಿಸಿವೆ. ಮಾಧ್ಯಮ ಸಂಸ್ಥೆ ಈ ಜಾಹೀರಾತಿನ ಕಾರಣಕ್ಕಾಗಿ ಹೇರುವ  ನಿರ್ಬಂಧಗಳನ್ನು ಅಲ್ಲಿ ದುಡಿಯುವ ಹೆಸರಿಲ್ಲದ ಪತ್ರಕರ್ತ ಪಾಲಿಸಲೇಬೇಕಾದ ಅನಿವಾರ್ಯತೆ ಇದೆ. ನಿಜಕ್ಕೂ ಇಂತಹ ವಾತಾವರಣದಲ್ಲಿ ಸಂಕಟ ಅನುಭವಿಸುತ್ತಿರುವವರು ಸತ್ಯವನ್ನು ಹೇಳಲು ಬಯಸುವ, ತಪ್ಪನ್ನು ಮುಲಾಜಿಲ್ಲದೇ ಪ್ರಶ್ನಿಸಲು ಬಯಸುವ ಹೆಸರಿಲ್ಲದ ಪತ್ರಕರ್ತರು.

ಜಾಗತಿಕ ಮಾಧ್ಯಮ ಸ್ವಾತಂತ್ರ್ಯ ಸೂಚ್ಯಂಕ ವರದಿ ಇತ್ತೀಚೆಗಷ್ಟೇ ಮಾಧ್ಯಮ ಸ್ವಾತಂತ್ರ್ಯದ ವಿಚಾರದಲ್ಲಿ ಭಾರತ ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿದೆ ಎಂದು ಹೇಳಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ ಒಳಪಡಿಸಿದ 180 ದೇಶಗಳ ಪೈಕಿ 135 ದೇಶಗಳಲ್ಲಿ ಮಾಧ್ಯಮಗಳನ್ನು ಸರ್ಕಾರಗಳು ಅಥವಾ ಉದ್ಯಮ ಸಂಸ್ಥೆಗಳು ನಿಯಂತ್ರಿಸುತ್ತಿವೆ ಎಂದು ವರದಿ ಹೇಳಿದೆ. ಇವುಗಳಲ್ಲಿ 36 ದೇಶಗಳು ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿವೆ ಎಂದೂ ಹೇಳಿದ್ದು, ಆ ಪೈಕಿ ಭಾರತವೂ ಒಂದು ಎನ್ನುವುದು ಇಲ್ಲಿ ಉಲ್ಲೇಖಾರ್ಹ. ಮಾಧ್ಯಮಗಳು ಅಪಾಯಕಾರಿ ಸ್ಥಿತಿಯಲ್ಲಿವೆ ಎನ್ನುವುದನ್ನು ಇನ್ನೂ ಹೆಚ್ಚು ನಿಖರವಾಗಿ ಹೇಳುವುದಾದರೇ, ಸಮಾಜ ಅಪಾಯದಲ್ಲಿದೆ.

 -ಶ್ರೀರಾಜ್‌ ವಕ್ವಾಡಿ  

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!