spot_img
Wednesday, December 4, 2024
spot_img

ಏಳು ದಶಕಗಳ ನೆನಪು ಮೆಲುಕು ಹಾಕುತ್ತಿದೆ ಕೋಡಿಯಲ್ಲಿರುವ ದೋಣಿ ಪ್ರಯಾಣಿಕರ ತಂಗುದಾಣ !

-ಶ್ರೀರಾಜ್‌ ವಕ್ವಾಡಿ
ಜನಪ್ರತಿನಿಧಿ (ಕುಂದಾಪುರ) : ʼಕೋಡಿಗ್‌ ಹ್ವಾಪತಿಗೆ ಕಡಿನ್‌ ದೋಣಿ ಕಾವತಿಗೆ ಇಲ್ಲೇ ಕೂಕಂಬುದಿದ್ದಿತ್.‌ ಕೋಡಿ ಎರಡೂ ಗೆಂಡದ್‌ ಹಬ್ಬದ್‌ ಸುರಿಗೆ ದೋಣಿಯಂಗೆ ಸವಾರಿ. ಅದೆಲ್ಲಾ ಈಗ ಎಲ್‌ ಇತ್‌, ಈಗ ಬರೀ ಹಂಬ್ಲ್‌ ಅಷ್ಟೇʼ ಎಂದು ಕುಂದಾಪುರದ ಕೋಡಿಯಲ್ಲಿರುವ ದೋಣಿ ಪ್ರಯಾಣಿಕರ ನಿರೀಕ್ಷೆ ತಂಗುದಾಣ ʼಮುಸಾಪುರಿʼಯನ್ನು ನೆನಪಸಿಕೊಂಡು ಆ ಭಾಗದ ಸ್ಥಳಿಯರು ಮಾತನಾಡುತ್ತಾರೆ.

1956-57ರ ಸ್ಥಳೀಯಾಭಿವೃದ್ದಿ ಯೋಜನೆಯಡಿಯಲ್ಲಿ ಅಂದಿನ‌ ಕುಂದಾಪುರ ಪಂಚಾಯತ್ ವತಿಯಿಂದ ನಿರ್ಮಿಸಲಾದ ಈ ಮುಸಾಪುರಿ ಇನ್ನೂ ಕೋಡಿ ಸೇತುವೆಯ ಬಳಿ ಇದೆ ಎನ್ನುವುದು ಅಚ್ಚರಿಯ ವಿಷಯ.

ಹಿಂದೆ ಮಳೆಗಾಲ ಮಾತ್ರವಲ್ಲ ವರ್ಷದ 365 ದಿನಗಳು ಸಹ ಇಲ್ಲಿನ ಜನರಿಗೆ ದೋಣಿ ಮೂಲಕವೇ ನದಿ ದಾಟಿ, ಬದುಕು ಕಟ್ಟಿ ಕೊಳ್ಳಬೇಕಾದ ಅನಿವಾರ್ಯ ಇದ್ದಿತ್ತು. ಶಾಲೆ, ಪೇಟೆ, ಅಗತ್ಯ ವಸ್ತುಗಳ ಖರೀದಿ, ಕಚೇರಿ ಕೆಲಸ, ಇನ್ನಿತರ ದೈನಂದಿನ ಕಾರ್ಯಗಳಿಗೆ ಈ ಭಾಗದ ಜನರಿಗೆ ದೋಣಿಯೊಂದೇ ಆಸರೆಯಾಗಿದ್ದ ಕಾಲವಿತ್ತು. ಆ ಸಂದರ್ಭದಲ್ಲಿ ದೋಣಿಯೇ ಒಂದೂರಿಂದ ಇನ್ನೊಂದೂರಿಗೆ, ಅಂದರೇ ಕೋಡಿಯಿಂದ ಕುಂದಾಪುರಕ್ಕೆ ಸಂಪರ್ಕ ಕಲ್ಪಿಸುವ ಸಾರಿಗೆ. ದೋಣಿ ಹಾಯದೇ ಇದ್ದರೆ ಬದುಕು ನಡೆಯುತ್ತಿರಲಿಲ್ಲ.

ಮಳೆಗಾಲವಿರಲಿ, ಬೇಸಗೆಯೇ ಇರಲಿ. ದೋಣಿಯೊಂದೇ ಇಲ್ಲಿನ ವಾಸಿಗಳಿಗೆ ನದಿ ದಾಟಲು ಊರುಗೋಲು ಎಂಬಂತಿದ್ದ ಕಾಲದಲ್ಲಿದ್ದ ʼಮುಸಾಪುರಿʼ ಈಗ ಒಂದು ಐತಿಹಾಸಿಕ ಸ್ಮಾರಕವಾಗಿ ನಿಂತಿದೆ. ಮಳೆಗಾಲದಲ್ಲೂ ತುಂಬಿ ಹರಿಯುವ ನದಿ ದಾಟಿ ಶಾಲೆಗೆ ಬರಬೇಕಾದ ಅನಿವಾರ್ಯತೆ ಮಕ್ಕಳು, ಯಾರಿಗಾದರೂ ಅನಾರೋಗ್ಯ ಉಂಟಾದರೆ, ಕೆಲಸಕ್ಕೆ ಹೋಗುವವರೆಲ್ಲಾ ಇಲ್ಲಿ ದೋಣಿಗಾಗಿ ಕಾಯುತ್ತಿರುವುದನ್ನು ಈ ಮುಸಾಪುರಿ ನೆನಪು ಮಾಡಿಕೊಡುತ್ತದೆ.

ʼಇಂತಹದ್ದೇ ಮುಸಾಪುರಿ ಕಟ್ಟಡ ಕೋಡಿಯ ಇನ್ನೊಂದು ದಿಕ್ಕಿನ ನದಿ ತೀರ ಕುಂದಾಪುರ ಭಾಗದಲ್ಲೂ ಇತ್ತು. ಹಿಂದೆ ಈ ತಂಗುದಾಣದಲ್ಲಿ ಕುಳಿತು ದೋಣಿಗೆ ಜನರು ಕಾಯುತ್ತಿದ್ದರು. ಕೋಡಿಗೂ ಕುಂದಾಪುರಕ್ಕೂ ಸಂಪರ್ಕಿಸುವ ಸೇತುವೆ ನಿರ್ಮಾಣವಾದ ನಂತರ ಕುಂದಾಪುರ ಭಾಗದ ತಂಗುದಾಣ ನೆಲಸಮವಾಯಿತು. ಕೋಡಿಯಲ್ಲಿ ಇರುವ ಈ ಮುಸಾಪುರಿ ಇನ್ನೂ ಆ ಹಳೆ ನೆನಪುಗಳನ್ನು ಮೆಲುಕು ಹಾಕುತ್ತದೆ.

ಹೌದು, ಕೋಡಿ ನದಿ ತೀರದಲ್ಲಿ ದೋಣಿ ಪ್ರಯಾಣಿಕರ ತಂಗುದಾಣ ಮುಸಾಪುರಿ ಸದ್ಯ ಶಿಥಿಲಾವಸ್ಥೆಯಲ್ಲಿದೆ. ಈ ಮುಸಾಪುರಿ ನಿರ್ಮಾಣವಾಗಿ ಸುಮಾರು ಏಳು ದಶಕಗಳು ಕಳೆದರೂ(68  ವರ್ಷಗಳು) ಇದರೊಂದಿಗಿದ್ದ ನಂಟು  ಹಿರಿಯ ದೋಣಿ ಪ್ರಯಾಣಿಕರ ಮನಸ್ಸಿನಲ್ಲಿ ಮಾಸದೆ ಉಳಿದಿದೆ.

ʼನಾವ್‌ ಆಗಳಿಕ್ಕೆಲ್ಲಾ ಅಪ್ಪಯನ್‌ ಮನಿಯಿಂದ ಅಬ್ಬಿ ಮನಿಗ್‌ ಹೋಯ್‌ ಬಪ್ಪತಿಗೆ ಇದೇ ಮುಸಾಪುರಿಯಂಗ್‌ ಕೂಕಂಡ್‌ ʼಕೋ…ಹೋಹೋಯ್‌…ʼ ಅಂದೇಳಿ ಕೂಗಿ ದೋಣಿ ಕರದ್ದೆಲ್ಲಾ ನೆನ್ಪಾತ್‌. ಚಕ್ರೇಶ್ವರಿ ಅಮ್ಮನ್‌ ಗೆಂಡಕ್‌ ಇದೇ ಮುಸಾಪುರಿಯಂಗೆ ದೋಣಿಗೋಸ್ಕರ ಕಾದ್‌ ಹೊಳಿ ದಾಟಿ ಹ್ವಾದ್‌ ನೆನ್ಪ್‌ ಬಾರಿ ಲಾಯ್ಕ್‌. ಆಗಳಿಕ್‌ ದೋಣಿಯಂಗ್‌ ಹ್ವಾಪುಕೂ ಕಷ್ಟ, ಆರೂ, ಅದೇ ಆಗಳಿಕ್‌ ಒಂದ್‌ ನಮ್ನಿ ಖುಷಿʼ ಎಂದು ಸ್ಥಳೀಯರು ಹಳೆಯ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.

ಸದ್ಯ, ಇದು ಕುಂದಾಪುರ ಪುರಸಭೆಯ ವ್ಯಾಪ್ತಿಯಲ್ಲಿ ಬರುತ್ತದೆ. ಅಡಿಪಾಯ, ಗೋಡೆಗಳೆಲ್ಲಾ ಇನ್ನೂ ಗಟ್ಟಿಮುಟ್ಟಾಗಿವೆ. ಸುತ್ತ ಮುತ್ತ ಗಿಡಗಂಟಿಗಳು ಬೆಳೆದುಕೊಂಡಿವೆ. ಹಂಚಿನ ಮಾಡು  ಶಿಥಿಲಾವಸ್ಥೆಯಲ್ಲಿದೆ. ಕೋಡಿ ಕುಂದಾಪುರ ಭಾಗದ ಜನರ ಹಳೆಯ ಜೀವನಗಾಥೆಯನ್ನು ಹೇಳುವ ಈ ಐತಿಹಾಸಿಕ ಕಟ್ಟಡವನ್ನು ದುರಸ್ತಿಗೊಳಿಸುವ ಅಥವಾ ಅದನ್ನು ಸರಿಪಡಿಸಿ ಇನ್ನ್ಯಾವುದೋ ಥರದಲ್ಲಿ  ಸಾರ್ವಜನಿಕ ಉಪಯೋಗ ಬರುವಂತೆ ಮಾಡುವ ಪ್ರಾಥಮಿಕ ಪ್ರಯತ್ನವನ್ನು ಸ್ಥಳೀಯಾಡಳಿತ ಪುರಸಭೆ ಮಾಡಿಲ್ಲ ಎನ್ನುವುದು ವಿಪರ್ಯಾಸವೇ ಸರಿ.

“ದೋಣಿ ಪ್ರಯಾಣಿಕರ ತಂಗುದಾಣವಿದಾಗಿತ್ತು. “ಮುಸಾಪುರಿ” ಈ ಪದ ಹಿಂದಿಯ ಮುಸಾಫಿರ್ ನಿಂದ ಬಂದಿರಬಹುದು. ಹಿಂದೆಲ್ಲಾ ಇಲ್ಲಿನ ಜನರಿಗೆ ದೋಣಿಯೊಂದೆ ಸಾರಿಗೆ ವ್ಯವಸ್ಥೆ. ಕೋಡಿಯಿಂದ ಕುಂದಾಪುರಕ್ಕೆ ಇದೊಂದೇ ಹತ್ತಿರದ ಮಾರ್ಗ. ಸೇತುವೆಯಾದ ಮೇಲೆ ಇಲ್ಲಿನ ಜನರಿಗೆ ಅನುಕೂಲವಾಗಿದೆ. ಮುಸಾಪುರಿಯಲ್ಲಿ ದೋಣಿಯವರಿಗೆ ಇಲ್ಲಿ ಸಣ್ಣ ಶುಲ್ಕವನ್ನೂ ತೆಗೆದುಕೊಳ್ಳಲಾಗುತ್ತಿತ್ತು. ಈಗಿನ ಮಕ್ಕಳಿಗೆ ಇದರ ಬಗ್ಗೆ ಮಾಹಿತಿ ಇಲ್ಲದಿರಬಹುದು‌. ಈ ಮುಸಾಪುರಿಯಲ್ಲಿ ದೋಣಿಗಾಗಿ ಕೂತಿದ್ದು, ದೋಣಿಯಲ್ಲಿ ನದಿ ದಾಟಿ ಹೋಗಿದ್ದು ಎಲ್ಲಾ ಚೆಂದದ ನೆನಪುಗಳು. ಪುರಸಭೆ ಈ ಐತಿಹಾಸಿಕ ಕಟ್ಟಡವನ್ನು ಉಳಿಸಿಕೊಳ್ಳಲಿ.”

-ಜಾಯ್‌ ಕರ್ವಾಲೋ
ಸಮಾಜ ಸೇವಕರು

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!