Sunday, September 8, 2024

ಟ್ವೆಂಟಿ-20 ವಿಶ್ವಕಪ್ :ಟೀಂ ಇಂಡಿಯಾಕ್ಕೆ ಟ್ರೋಫಿ ಗೆಲುವಿಗೆ ಇನ್ನೂ ಎರಡು ಹೆಜ್ಜೆ

-ಎಸ್. ಜಗದೀಶ್ಚಂದ್ರ ಅಂಚನ್

ಐಸಿಸಿ ಟ್ವೆಂಟಿ -20 ವಿಶ್ವಕಪ್ ಟೂರ್ನಿಯು ಇದೀಗ ನಿರ್ಣಾಯಕ ಘಟ್ಟ ತಲುಪಿದ್ದು, ಸೆಮಿಫೈನಲ್ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಟೂರ್ನಿಯ ಸೂಪರ್- 8 ಹಂತದ ಪಂದ್ಯಗಳು ರೋಚಕವಾಗಿ ಮುಕ್ತಾಯವಾಗಿದ್ದು, ಇದೀಗ ಹಾಲಿ ಚಾಂಪಿಯನ್ ಇಂಗ್ಲೆಂಡ್, ಮಾಜಿ ಚಾಂಪಿಯನ್ ಭಾರತ ಸೇರಿದಂತೆ ದಕ್ಷಿಣ ಆಫ್ರಿಕಾ ಹಾಗೂ  ಆಫ್ಘಾನಿಸ್ತಾನ ತಂಡಗಳು ಸೆಮಿಫೈನಲ್ ಪ್ರವೇಶಿಸಿವೆ. ಗ್ರೂಪ್‌ -1ರಿಂದ ಮಾಜಿ ಚಾಂಪಿಯನ್ ಭಾರತ ಹಾಗೂ ಆಫ್ಘಾನಿಸ್ತಾನ ತಂಡಗಳು ಸೆಮಿಫೈನಲ್ ಪ್ರವೇಶಿಸಿದರೆ, ಗ್ರೂಪ್ -2 ವಿಭಾಗದಿಂದ ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಸೆಮಿಫೈನಲಿಗೆ ಎಂಟ್ರಿ ಕೊಟ್ಟಿವೆ.ರೋಹಿತ್ ಶರ್ಮ ನೇತೃತ್ವದ ಟೀಂ ಇಂಡಿಯಾ, ಸೂಪರ್ -8 ಹಂತದಲ್ಲಿ ತಾನಾಡಿದ 3 ಪಂದ್ಯಗಳಲ್ಲೂ ಭರ್ಜರಿ ಗೆಲುವು ಸಾಧಿಸುವ ಮೂಲಕ 6 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿ ಸೆಮಿಫೈನಲಿಗೆ ಪ್ರವೇಶಿಸಿದೆ. ಟೀಂ ಇಂಡಿಯಾ ಜೂನ್ 27ರಂದು ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.

ಆಸ್ಟ್ರೇಲಿಯಾದಲ್ಲಿ ನಡೆದ 2022ರ ಟ್ವೆಂಟಿ-20 ವಿಶ್ವಕಪ್ ಸೆಮಿಫೈನಲ್‌ನ ಸೋಲಿಗೆ ಈ ಬಾರಿ ರೋಹಿತ್ ಶರ್ಮ ನಾಯಕತ್ವದ ಟೀಮ್ ಇಂಡಿಯಾ ಜೋಸ್ ಬಟ್ಲರ್ ನಾಯಕತ್ವದ ಇಂಗ್ಲೆಂಡ್ ತಂಡದ ವಿರುದ್ಧ ಸೇಡು ತೀರಿಸಿಕೊಳ್ಳುವ ಅವಕಾಶವಿದೆ. 2024ರ ಟ್ವೆಂಟಿ-20 ವಿಶ್ವಕಪ್ ಫೈನಲ್‌ಗೆ ಮುನ್ನಡೆಯುವ ಅವಕಾಶಕ್ಕಾಗಿ ಟೀಂ ಇಂಡಿಯಾ  ನೆಚ್ಚಿನ ತಂಡವಾಗಿದ್ದು, ಹಾಲಿ ಚಾಂಪಿಯನ್ ಇಂಗ್ಲೆಂಡ್‌ ತಂಡಕ್ಕೆ ಮುಖಭಂಗ ತಪ್ಪಿಸಿಕೊಳ್ಳಲು ಇದು ರೋಚಕ ಪಂದ್ಯವಾಗಿರಲಿದೆ. 2022ರ ನವೆಂಬರ್ 10ರಂದು ಅಡಿಲೇಡ್ ಓವಲ್‌ನಲ್ಲಿ  ಟೀಂ ಇಂಡಿಯಾ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಿತ್ತು .ಟೀಂ ಇಂಡಿಯಾ ನೀಡಿದ್ದ 169 ರನ್‌ಗಳ ಗುರಿಯನ್ನು ಕೇವಲ 16 ಓವರ್‌ಗಳಲ್ಲಿ ಬೆನ್ನಟ್ಟಿದ ಇಂಗ್ಲೆಂಡ್ 10 ವಿಕೆಟ್ ಗಳ  ಜಯಭೇರಿ ಮೊಳಗಿಸಿತ್ತು. ನಾಯಕ ಜೋಸ್ ಬಟ್ಲರ್ ಮತ್ತು ಅಲೆಕ್ಸ್ ಹೇಲ್ಸ್ ಸ್ಪೋಟಕ ಬ್ಯಾಟಿಂಗ್ ಮಾಡಿದ್ದರು. ಇದೀಗ ಆ ಸೋಲಿಗೆ ಸೇಡು ತೀರಿಸಿಕೊಳ್ಳಲು ರೋಹಿತ್ ಪಡೆ ಸಜ್ಜಾಗಿದೆ

ನಾಕೌಟ್ ಹಂತದಲ್ಲಿ ಟೀಂ ಇಂಡಿಯಾದ ದಾಖಲೆ : ಐಸಿಸಿ ಟ್ವೆಂಟಿ-20 ವಿಶ್ವಕಪ್ ಪಂದ್ಯಾವಳಿಯ ಉದ್ಘಾಟನಾ ಋತುವಿನ ಮೊದಲ ಪ್ರಶಸ್ತಿ ವಿಜೇತ ಟೀಂ ಇಂಡಿಯಾ 2007ರಿಂದ ಯಾವುದೇ ಟ್ವೆಂಟಿ-20 ವಿಶ್ವಕಪ್ ಆವೃತ್ತಿಯನ್ನು ಗೆದ್ದಿಲ್ಲ. 2007ರ ಹೊರತಾಗಿ ಈವರೆಗೆ ಎರಡು ಬಾರಿ ಸೆಮಿಫೈನಲ್‌ಗೆ ತಲುಪಿದ್ದ ಟೀಂ ಇಂಡಿಯಾ ಒಮ್ಮೆ ಮಾತ್ರ ಫೈನಲ್‌ನಲ್ಲಿ ಆಡಿತ್ತು. ಕಳೆದ ಬಾರಿ ಇಂಗ್ಲೆಂಡ್ ವಿರುದ್ಧ ಭಾರತ ತಂಡ ಸೆಮಿಫೈನಲ್‌ನಲ್ಲಿ ಸೋತು ಹೊರಬಿದ್ದಿತ್ತು. ಟೀಂ ಇಂಡಿಯಾ 2014ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಸೆಮಿಫೈನಲ್ ಪಂದ್ಯವನ್ನು ಮಾತ್ರ ಗೆದ್ದಿತ್ತು. ನಂತರ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ 6 ವಿಕೆಟ್‌ಗಳಿಂದ ಸೋಲು ಅನುಭವಿಸಿತ್ತು.

ಇಂಡಿಯಾ – ಇಂಗ್ಲೆಂಡ್‌ ಮುಖಾಮುಖಿ: ಟೀಂ ಇಂಡಿಯಾ ಮತ್ತು ಇಂಗ್ಲೆಂಡ್ ತಂಡಗಳು ಇದು ಏಳನೇ ಬಾರಿ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಮುಖಾಮುಖಿಯಾಗುತ್ತಿವೆ. ಈವರೆಗೆ ಇಂಡಿಯಾ ಆಂಗ್ಲರ ವಿರುದ್ಧ 4 ಪಂದ್ಯಗಳನ್ನು ಗೆದ್ದು ಬಲಾಢ್ಯ ಮೆರೆದರೆ, ಇಂಗ್ಲೆಂಡ್ 2  ಪಂದ್ಯಗಳನ್ನು ಮಾತ್ರ ಗೆದ್ದಿದೆ. ಇನ್ನೂ  ಉಭಯ ತಂಡಗಳು ಟ್ವೆಂಟಿ -20 ಕ್ರಿಕೆಟ್​ನಲ್ಲಿ 23 ಬಾರಿ ಮುಖಾಮುಖಿಯಾಗಿದ್ದು, ಟೀಂ ಇಂಡಿಯಾ 12 ಪಂದ್ಯ​ಗಳಲ್ಲಿ ಜಯ ಸಾಧಿಸಿದರೆ, ಇಂಗ್ಲೆಂಡ್ ತಂಡ 11 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಇಲ್ಲೂ ಮೇಲ್ನೋಟಕ್ಕೆ ಟೀಂ ಇಂಡಿಯಾ ಬಲಿಷ್ಠವಾಗಿದ್ದರೂ, ಅಂಕಿ ಅಂಶಗಳ ಪ್ರಕಾರ ಉಭಯ ತಂಡಗಳು ಸಮಬಲ ಹೊಂದಿದೆ ಎನ್ನಬಹುದು. ಆದರೂ ಕಳೆದ 2 ವರ್ಷಗಳಿಂದ ಇಂಗ್ಲೆಂಡ್​ ವಿರುದ್ಧ ಭಾರತ ಗೆಲುವು ಕಂಡಿಲ್ಲ

ಸತತ 6 ಗೆಲುವು ಕಂಡಿರುವ ಟೀಂ ಇಂಡಿಯಾ : 2024ರ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಸತತ 6 ಗೆಲುವು ಸಾಧಿಸಿದೆ. ಗುಂಪು ಹಂತದಲ್ಲಿ ಭಾರತ 3 ಪಂದ್ಯಗಳನ್ನು ಗೆದ್ದು ಸೂಪರ್-8ಗೆ ಲಗ್ಗೆ ಇಟ್ಟಿತ್ತು. ಇದರ ನಂತರ, ಸೂಪರ್-8 ಸುತ್ತಿನಲ್ಲಿಯೂ ರೋಹಿತ್ ಪಡೆ ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಆಸ್ಟ್ರೇಲಿಯಾ ತಂಡಗಳನ್ನು ಸೋಲಿಸಿತ್ತು. ಈಗ ಟೀಂ ಇಂಡಿಯಾ ಸೆಮಿಫೈನಲ್ ಮತ್ತು ಫೈನಲ್‌ನಲ್ಲಿಯೂ ಗೆಲುವಿನ ಓಟವನ್ನು ಕಾಯ್ದುಕೊಳ್ಳಲು ಬಯಸಿದೆ. ಗಯಾನಾದಲ್ಲಿ ನಡೆಯಲಿರುವ ಸೆಮಿಫೈನಲ್ ಪಂದ್ಯಕ್ಕೆ ಮುನ್ನ ಟೀಂ ಇಂಡಿಯಾ ಇಲ್ಲಿ ಒಟ್ಟು 3 ಟ್ವೆಂಟಿ-20 ಪಂದ್ಯಗಳನ್ನು ಆಡಿದೆ. ಅದರಲ್ಲಿ ಟೀಂ ಇಂಡಿಯಾ 2 ಪಂದ್ಯಗಳನ್ನು ಗೆದ್ದು ಬೀಗಿದ್ದು, 1ರಲ್ಲಿ ಸೋಲು ಕಂಡಿದೆ. ವೆಸ್ಟ್‌ ಇಂಡೀಸ್‌ ವಿರುದ್ಧ ಟೀಂ ಇಂಡಿಯಾ 2019ರಲ್ಲಿ ಗಯಾನದಲ್ಲಿ ತನ್ನ ಮೊದಲ ಟ್ವೆಂಟಿ-20 ಪಂದ್ಯವನ್ನು ಆಡಿತು. ಈ ಪಂದ್ಯದಲ್ಲಿ ಟೀಂ ಇಂಡಿಯಾ ಆತಿಥೇಯ ವೆಸ್ಟ್ ಇಂಡೀಸ್ ತಂಡವನ್ನು 5 ವಿಕೆಟ್ ಗಳಿಂದ ಸೋಲಿಸಿತು. ಬಳಿಕ ಕಳೆದ ವರ್ಷ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿದ್ದ ಟೀಂ ಇಂಡಿಯಾ ಎರಡು ಟ್ವೆಂಟಿ-20 ಪಂದ್ಯಗಳನ್ನು ಆಡಿತ್ತು. ವೆಸ್ಟ್ ಇಂಡೀಸ್ ಒಂದು ಪಂದ್ಯದಲ್ಲಿ ಟೀಂ ಇಂಡಿಯಾವನ್ನು 2 ವಿಕೆಟ್ ಗಳಿಂದ ಸೋಲಿಸಿದರೆ, ನಂತರದ ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್ ಗಳಿಂದ ಆತಿಥೇಯ ವಿಂಡೀಸರನ್ನು ಬಗ್ಗು ಬಡಿದಿತ್ತು.

ಮೇಲ್ನೊಟಕ್ಕೆ ಟೀಂ ಇಂಡಿಯಾ ಟ್ವೆಂಟಿ -20 ಮಾದರಿಯ ಕ್ರಿಕೆಟ್‌ನಲ್ಲಿ  ಕಳೆದ ಕೆಲವು ವರ್ಷಗಳಿಂದ ಸ್ಥಿರತೆಯನ್ನು ಕಾಪಾಡಿಕೊಂಡು ಬಂದಿದೆ. ಹಾಲಿ ಚಾಂಪಿಯನ್​ ಇಂಗ್ಲೆಂಡ್​ ತಂಡ ಕೂಡ  ಟ್ವೆಂಟಿ-20 ಪಂದ್ಯಗಳಲ್ಲಿ ಬಲಾಡ್ಯ ತಂಡವಾಗಿ ಹೊರಹೊಮ್ಮಿದೆ. ಇಂಗ್ಲೆಂಡ್​ ನಾಯಕ ಜಾಸ್​ ಬಟ್ಲರ್‌, ಫಿಲ್​ ಸಾಲ್ಟ್​, ಜಾನಿ ಬೇರ್‌ಸ್ಟೊ, ​ಲಿವಿಂಗ್​​ಸ್ಟೋನ್​, ಹ್ಯಾರಿ ಬ್ರೂಕ್​, ಸ್ಯಾಮ್​ ಕರನ್​, ಮೊಯಿನ್​ ಅಲಿ ತಂಡದ ಪ್ರಮುಖ ಬ್ಯಾಟರುಗಳು.ಇನ್ನೂ  ಕಳೆದ ಕೆಲವು ವರ್ಷಗಳಿಂದ ಕ್ರಿಕೆಟ್​ನಿಂದ ದೂರ ಉಳಿದಿದ್ದ ಘಾತಕ ವೇಗಿ ಜೋಫ್ರಾ ಆರ್ಚರ್​ ಕೂಡ ತಂಡಕ್ಕೆ ಮರಳಿದ್ದು ಇಂಗ್ಲೆಂಡ್​ ಬೌಲಿಂಗ್​ ಬಲವನ್ನು ಹೆಚ್ಚಿಸಿದೆ. ಟೀಂ ಇಂಡಿಯಾದ ಕುರಿತು ಅವಲೋಕಿಸುವುದಾದರೆ, ತಂಡ ಸರ್ವಾಂಗೀಣ ಪ್ರದರ್ಶನ ನೀಡುತ್ತಿದೆ. ರೋಹಿತ್ ಶರ್ಮ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯಾ, ಶಿವಂ ದುಬೆ ಇವರೆಲ್ಲರೂ ಟೀಂ ಇಂಡಿಯಾದ ಬ್ಯಾಟಿಂಗ್ ಶಕ್ತಿ. ಬೌಲಿಂಗ್ ನಲ್ಲಿ ಜಸ್ಪ್ರೀತ್ ಬುಮ್ರಾ, ಆರ್ಶದೀಪ್ ಸಿಂಗ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಹಾರ್ದಿಕ್ ಪಾಂಡ್ಯಾ ಹಾಗೂ ರವೀಂದ್ರ ಜಡೇಜ ಇವರೆಲ್ಲ ಈಗಾಗಲೆಲ್ಲ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಹೀಗಾಗಿ ಇತ್ತಂಡಗಳ ನಡುವಿನ ಸೆಮಿಫೈನಲ್ ಕಾದಾಟ ತೀವ್ರ ಕುತೂಹಲ, ರೋಮಾಂಚನ ಸೃಷ್ಟಿಸಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!