Sunday, September 8, 2024

18ನೇ ಲೋಕಸಭೆ ಏಕೆ ಭಿನ್ನ ? ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಜವಾಬ್ದಾರಿ ಏನು ?

ಕಳೆದ ಎರಡು ಅವಧಿಗಳಿಂದ ಲೋಕಸಭೆಗೆ ವಿರೋಧ ಪಕ್ಷದ ನಾಯಕರೇ ಇರಲಿಲ್ಲ. ಯಾವುದೇ ವೈಯಕ್ತಿಕ ಪಕ್ಷವು ಒಟ್ಟು ಸ್ಥಾನಗಳಲ್ಲಿ ಶೇ. 10 ರಷ್ಟು ಗಳಿಸದಿರುವುದು ಈ ಹಿಂದಿನ ಕಾರಣ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಎರಡನೇ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದ ಪಕ್ಷವಾಗಿ ಹೊರಹೊಮ್ಮಿತು. ಆದರೆ ವಿರೋಧ ಪಕ್ಷದ ನಾಯಕನನ್ನು ನಾಮನಿರ್ದೇಶನ ಮಾಡಲು ಬೇಕಾದ ಕನಿಷ್ಠ ಸ್ಥಾನಗಳಿಗಿಂತ ಕಡಿಮೆಯಿತ್ತು.

18ನೇ ಲೋಕಸಭೆಯ ಅಧಿವೇಶನದಲ್ಲಿ, ಕೆಳಮನೆಯ ಪ್ರತಿಪಕ್ಷ ನಾಯಕನಾಗಲು ಬೇಕಾದ ಸೂಕ್ತ ಸಂಖ್ಯೆಯ ಸ್ಥಾನಗಳನ್ನು ಕಾಂಗ್ರೆಸ್ ಹೊಂದಿದೆ. ವಿಪಕ್ಷ ನಾಯಕ ಯಾರಾಗಬೇಕು ಎಂಬ ಚರ್ಚೆಗೆ ಉತ್ತರ ಸಿಕ್ಕಿದೆ. ಎಸ್,‌ ರಾಹುಲ್‌ ಗಾಂಧಿ ಈಗ ಲೋಕಸಭೆಯ ವಿರೋಧ ಪಕ್ಷದ ನಾಯಕ.

ದಶಕಗಳಿಂದ ವಿಪಕ್ಷ ನಾಯಕರಿಲ್ಲದ ಲೋಕಸಭೆಯಲ್ಲಿ ಈಗ ವಿಪಕ್ಷ ನಾಯಕರಾಗಿ ರಾಹುಲ್‌ ಗಾಂಧಿ ಆಯ್ಕೆಯಾಗಿದ್ದಾರೆ,  ಈ ಹುದ್ದೆಯೊದಿಗೆ ಸಿಬಿಐ, ಇಡಿ, ಇಸಿ ಮುಖ್ಯಸ್ಥರಂತ ಪ್ರಮುಖರ ನೇಮಕದಲ್ಲಿಯೂ ರಾಹುಲ್‌ ಗುರುತರ ಪಾತ್ರ ವಹಿಸಲಿದ್ದಾರೆ.

ಲೋಕಸಭೆಯ ವಿರೋಧ ಪಕ್ಷದ ನಾಯಕನ ಜವಾಬ್ದಾರಿ ಏನು ?

ಲೋಕಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನವು ಅನೇಕ ಜವಾಬ್ದಾರಿಗಳನ್ನು ಒಳಗೊಂಡಿದೆ. ಆರೋಗ್ಯವಂತ ಸರ್ಕಾರಕ್ಕೆ ಬಲವಾದ ವಿರೋಧವನ್ನು ಹೊಂದಿರುವುದು ಮುಖ್ಯವಾಗಿದೆ, ಅವರು ಸರ್ಕಾರವನ್ನು ಅದರ ನಿರ್ಧಾರಗಳು ಮತ್ತು ನೀತಿಗಳಿಗೆ ಹೊಣೆಗಾರರನ್ನಾಗಿ ಮಾಡಬಹುದು.

ಭಾರತೀಯ ಸಂಸದೀಯ ವ್ಯವಸ್ಥೆಯು ಪ್ರಧಾನ ಮಂತ್ರಿ ಕುರ್ಚಿಯ ಮೇಲೆ ಕುಳಿತುಕೊಳ್ಳುವ ವಿಜೇತ ಪಕ್ಷದ ನಾಯಕ ಮತ್ತು ವಿರೋಧ ಪಕ್ಷದ ನಾಯಕನನ್ನು ಒಳಗೊಂಡಿರುತ್ತದೆ. ಸರ್ಕಾರದ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಲು ವಿರೋಧ ಪಕ್ಷದ ನಾಯಕನಿಗೆ ಅಧಿಕಾರವಿದೆ. ಆಡಳಿತಾರೂಢ ಸರ್ಕಾರವನ್ನು ಹೊಣೆಗಾರರನ್ನಾಗಿಸುವುದು ವಿರೋಧ ಪಕ್ಷದ ನಾಯಕನ ಪ್ರಾಥಮಿಕ ಗುರಿಯಾಗಿದೆ.

ವಿರೋಧ ಪಕ್ಷದ ನಾಯಕನ ಜವಾಬ್ದಾರಿಯು ಆಡಳಿತ ಪಕ್ಷದ ನಾಯಕನ ಜವಾಬ್ದಾರಿಗಿಂತ ಭಿನ್ನ. ಯಾವುದೇ ಸರ್ಕಾರದಲ್ಲಿ ಪ್ರತಿಪಕ್ಷಗಳು ನಿರ್ವಹಿಸಬೇಕಾದ ಪ್ರಮುಖ ಪಾತ್ರವೆಂದರೆ ಪರಿಣಾಮಕಾರಿ ಟೀಕೆ. ಸರ್ಕಾರದ ಸುಗಮ ಕಾರ್ಯನಿರ್ವಹಣೆಯಲ್ಲಿ ವಿರೋಧ ಪಕ್ಷವು ಪ್ರಮುಖ ಪಾತ್ರ ವಹಿಸುತ್ತದೆ. ಅವರು ಸರ್ಕಾರದ ನೀತಿಗಳಿಗೆ ಒಂದು ಥರದಲ್ಲಿ ಗೇಟ್ ಕೀಪರ್ ಆಗಿ ಕಾರ್ಯನಿರ್ವಹಿಸುತ್ತಾರೆ. ಪ್ರಸ್ತುತ ಸರ್ಕಾರವನ್ನು ಅದರ ನೀತಿಗಳಿಗೆ ಹೊಣೆಗಾರರನ್ನಾಗಿ ಮಾಡಲು ಅವರು ಜವಾಬ್ದಾರರಾಗಿರುತ್ತಾರೆ. ದುರ್ಬಲ ಪ್ರತಿಪಕ್ಷವಿದ್ದರೆ, ಆಡಳಿತ ಪಕ್ಷವು ಶಾಸಕಾಂಗದ ಮೇಲೆ ಮುಕ್ತ ಆಳ್ವಿಕೆಯನ್ನು ಹೊಂದಿರುತ್ತದೆ, ಇದು ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ ಎನ್ನುವುದು ಕೂಡ ಉಲ್ಲೇಖಾರ್ಹ.

ಸಿಬಿಐ, ಇಡಿ, ಚುನಾವಣಾ ಆಯೋಗ ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಮುಖ್ಯಸ್ಥರು, ಮುಖ್ಯ ವಿಚಕ್ಷಣ ಆಯುಕ್ತರ ನೇಮಕ ಸಮಿತಿಯಲ್ಲಿ ಪ್ರಧಾನಿ ಹಾಗೂ ಕೇಂದ್ರದ ಒಬ್ಬರು ಸಚಿವರು ಇರಲಿದ್ದಾರೆ. ಮಾತ್ರವಲ್ಲದೇ ವಿಪಕ್ಷ ನಾಯಕರಾಗಿ ರಾಹುಲ್‌ ಗಾಂಧಿಯೂ ಇರಲಿದ್ದು ನೇಮಕ ವಿಚಾರದಲ್ಲಿ ಇನ್ನು ಅವರ ಮಾತಿಗೂ ಮನ್ನಣೆ ನೀಡಬೇಕಾಗುವುದು ಅನಿವಾರ್ಯ.

ಲೋಕಸಭೆಯ ವಿರೋಧ ಪಕ್ಷದ ನಾಯಕನನ್ನು ಛಾಯಾ ಪಿಎಂ ಎಂದೂ ಕೂಡ ಕರೆಯಲಾಗುತ್ತದೆ. ಸರ್ಕಾರದ ನೀತಿ ನಿರ್ಣಯಗಳನ್ನು ಪ್ರಶ್ನಿಸುವ ಸರ್ಕಾರದ ಹೆಜ್ಜೆಗಳ ಮೇಲೆ ಕಣ್ಣಿಡುವ ಸರಕಾರ ಪತನವಾದರೆ ಮತ್ತೊಂದು ಸರ್ಕಾರವನ್ನು ಮುನ್ನಡೆಸುವ ಹೊಣೆಯೂ ವಿರೋಧ ಪಕ್ಷದ ನಾಯಕನಿಗಿದೆ. ದಶಕಗಳ ನಂತರ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಈಗ ಪವರ್‌ ಬಂದಿದೆ. ಇನ್ನು ಮುಂದೆ ವಿರೋಧ ಪಕ್ಷದ ನಾಯಕನ ಮಾತನ್ನೂ ಗಣನೆಗೆ ತೆಗೆದುಕೊಂಡು ಮುನ್ನಡೆಯಬೇಕಾಗುತ್ತದೆ ಎನ್ನುವುದು ಇಲ್ಲಿ ಉಲ್ಲೇಖಾರ್ಹ.

18ನೇ ಲೋಕಸಭೆಯನ್ನು ಉದ್ದೇಶಿಸಿ ವಿರೋಧ ಪಕ್ಷದ ನಾಯಕನಾಗಿ ಮೊದಲ ಬಾರಿಗೆ ಮಾತನಾಡುವಾಗ ರಾಹುಲ್‌ ಗಾಂಧಿ,  ಈ ಸದನವು ಭಾರತದ ಜನರ ಧ್ವನಿಯನ್ನು ಪ್ರತಿನಿಧಿಸುತ್ತದೆ. ಆಡಳಿತ ಸರ್ಕಾರಕ್ಕೆ ಖಂಡಿತವಾಗಿ ರಾಜಕೀಯ ಶಕ್ತಿಯಿದೆ, ಆದರೆ ವಿರೋಧ ಪಕ್ಷಗಳು ಭಾರತದ ಜನರ ಧ್ವನಿಯನ್ನು ಪ್ರತಿನಿಧಿಸುತ್ತದೆ” ಎನ್ನುವುದನ್ನು ಅವರು ಒತ್ತಿ ಹೇಳಿದ್ದಾರೆ.

ಚುನಾವಣೆಯುದ್ದಕ್ಕೂ ಈ ಬಾರಿ ವಿಶೇಷವಾಗಿ ಸಂವಿಧಾನವನ್ನು ಮುಖ್ಯ ವಿಷಯವನ್ನಾಗಿ ಇಟ್ಟುಕೊಂಡು ಪ್ರತಿಪಕ್ಷ ಎದುರಿಸಿತ್ತು. ಅಷ್ಟೇಕೆ ಸಂಸದರಾಗಿ ಪ್ರಮಾಣ ವಚನ ಸ್ವೀಕಿಸುವಾಗ ರಾಹುಲ್‌ ಸೇರಿದಂತೆ ಪ್ರಮುಖ ವಿರೋಧ ಪಕ್ಷದ ನಾಯಕರೂ ಕೂಡ ಸಂವಿಧಾನದ ಪ್ರತಿಯನ್ನು ಹಿಡಿದುಕೊಂಡಿದ್ದು ವಿರೋಧ ಪಕ್ಷ ಈ ಬಾರಿ ಇನ್ನಷ್ಟು ಪವರ್‌ಫುಲ್‌ ಆಗಿದೆ ಎನ್ನುವುದನ್ನು ಸೂಚಿಸಿದಂತಿದೆ. ಹೌದು, ಈ ಹಿಂದೆ, ಅಂದರೇ ಈ ಹಿಂದಿನ ಎರಡು ಲೋಕಸಭಾ ಅವಧಿಯಲ್ಲಿ ಯಾವುದೇ ವೈಯಕ್ತಿಕ ಪಕ್ಷವು ಒಟ್ಟು ಸ್ಥಾನಗಳಲ್ಲಿ ಶೇ. 10 ರಷ್ಟು ಗಳಿಸದೇ ಇದ್ದ ಕಾರಣ ಪವರ್‌ಫುಲ್‌ ವಿರೋಧ ಪಕ್ಷ ಎಂದಿರಲಿಲ್ಲ. ಆದರೇ ಈ 18ನೇ ಲೋಕಸಭೆಯಲ್ಲಿ ಆ ಪರಿಸ್ಥಿತಿ ಇಲ್ಲ. ಕಾಂಗ್ರೆಸ್‌ ವಿರೋಧ ಪಕ್ಷದ ಸ್ಥಾನದಲ್ಲಿದೆ. ಅದರ ನೇತೃತ್ವದ ಇಂಡಿಯಾ ಮೈತ್ರಿಕೂಟ ಪ್ರಬಲವಾಗಿಯೇ ಈಗಾಗಲೇ ಧ್ವನಿ ಎತ್ತುವುದಕ್ಕೆ ಆರಂಭಿಸಿದೆ. ಇನ್ನು ಮುಂದೆ ಸರ್ಕಾರ ಏನೇ ನೀತಿ ನಿಯಮಗಳನ್ನು ತೆಗೆದುಕೊಳ್ಳುವ ಮುನ್ನ ವಿರೋಧ ಪಕ್ಷದ ನಾಯಕನ ಸಕ್ರಿಯವಾಗಿ ಭಾಗವಹಿಸಲು ಅಧಿಕಾರವಿದೆ. ಹಾಗಾಗಿ ಇನ್ನು ಮುಂದೆ ವಿಪಕ್ಷಗಳನ್ನು ಕಡೆಗಣಿಸಿ ಆಡಳಿತ ಪಕ್ಷ ಮುನ್ನಡೆಯುವುದಕ್ಕೆ ಸಾಧ್ಯವಿಲ್ಲ. ರಾಹುಲ್‌ ಗಾಂಧಿ ಅಭಿಪ್ರಾಯವೂ ಇಲ್ಲಿ ಮುಖ್ಯವಾಗುತ್ತದೆ.

ಮೋದಿ ಪ್ರಮಾಣ ವಚನ ಸ್ವೀಕರಿಸುತ್ತಿರುವಾಗಲೂ ರಾಹುಲ್‌ ಪ್ರಧಾನಿಗೆ ಸಂವಿಧಾನದ ಪ್ರತಿ ತೋರಿಸಿ, ವಿಪಕ್ಷಗಳ ಧ್ವನಿ ಅಡಗಿಸುವುದಕ್ಕೆ ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ ಎನ್ನುವುದನ್ನು ಪರೋಕ್ಷವಾಗಿ ಹೇಳಿದ್ದರು. ಅವರ ಭಾಷಣದಲ್ಲಿಯೂ ಕಳೆದ ಬಾರಿಗಿಂತ ಈ ಬಾರಿ ಪ್ರತಿಪಕ್ಷಗಳು ಭಾರತೀಯರ ಧ್ವನಿಯನ್ನು ಪರಿಣಾಮಕಾರಿಯಾಗಿ ಪ್ರತಿನಿಧಿಸಲಿದೆ. ವಿರೋಧದ ಧ್ವನಿಯನ್ನು ಅಡಗಿಸುವ ಮೂಲಕ ನೀವು ಸದನವನ್ನು ಸಮರ್ಥವಾಗಿ ನಡೆಸಬಹುದು ಎಂಬ ಕಲ್ಪನೆಯು ಪ್ರಜಾಸತ್ತಾತ್ಮಕವಲ್ಲದ ಕಲ್ಪನೆಯಾಗಿದೆ. ಪ್ರತಿಪಕ್ಷಗಳು ಈ ದೇಶದ ಸಂವಿಧಾನವನ್ನು ರಕ್ಷಿಸಬೇಕೆಂದು ಭಾರತದ ಜನರು ನಿರೀಕ್ಷಿಸುತ್ತಾರೆ ಎನ್ನುವುದನ್ನು ಈ ಬಾರಿಯ ಲೋಕಸಭಾ ಚುನಾವಣೆ ತೋರಿಸಿದೆ ಎಂದು ಒತ್ತಿ ಹೇಳಿದ್ದರು.

ಹೌದು, ಇನ್ನುಮುಂದೆ ವಿಪಕ್ಷಗಳ ಸಂಸದರು ರಾಹುಲ್‌ ಜೊತೆ ಅಂದರೇ, ವಿರೋಧ ಪಕ್ಷದ ನಾಯಕನ ಜೊತೆಗೆ ಕೈ ಜೋಡಿಸಿ ಮೋದಿ ಸರ್ಕಾರದ ವಿರುದ್ಧದ ರಚನಾತ್ಮಕ ಹೋರಾಟದಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಒಟ್ಟಾರೆಯಾಗಿ ಈ ಬಾರಿ ಸಂಸತ್ತಿನಲ್ಲಿ ಅಧಿಕೃತ ವಿರೋಧ ಪಕ್ಷದ ನಾಯಕ ದೊರಕಿರುವುದು ದೇಶದ ಪ್ರಜಾಪ್ರಭುತ್ವದ ವ್ಯವಸ್ಥೆಗೆ ಸಿಕ್ಕಿರುವ ದೊಡ್ಡ ಮುನ್ನಡೆ ಎನ್ನುವುದು ಅಕ್ಷರಶಃ ಸತ್ಯ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!