Wednesday, September 11, 2024

ಟ್ವೆಂಟಿ-20 ವಿಶ್ವಕಪ್ ಸಮರ : ಸೂಪರ್ -8ರ ಸುತ್ತಿನಲ್ಲಿ  ಗೆಲ್ಲಬೇಕು  ಟೀಂ ಇಂಡಿಯಾ

@ಎಸ್. ಜಗದೀಶ್ಚಂದ್ರ ಅಂಚನ್ , ಸೂಟರ್ ಪೇಟೆ

ಟ್ವೆಂಟಿ-20 ಕ್ರಿಕೆಟ್ ಎನ್ನುವುದು ಥ್ರಿಲ್ಲರ್ ಗೇಮ್. ಈ ಥ್ರಿಲ್ಲಿಂಗ್ ಗೇಮ್ಸ್‌ನ ‘ಮಾಯೆ’ ಯೊಳಗೆ ಜಾಗತಿಕ ವಿಶ್ವ ಕ್ರಿಕೆಟ್ ಸಮರ ನಡೆಯುತ್ತಿದೆ. ಜಗತ್ತಿನ ಕ್ರಿಕೆಟ್ ಆಡುವ 20 ತಂಡಗಳು ಭಾಗವಹಿಸಿದ್ದ ಟ್ವೆಂಟಿ-20 ವಿಶ್ವಕಪ್ ಪಂದ್ಯಾಟದಲ್ಲಿ ಈಗಾಗಲೇ ಲೀಗ್ ಹಂತದ 40 ಪಂದ್ಯಗಳು ಮುಗಿದಿವೆ. ಇದೀಗ ದ್ವಿತೀಯ ಹಂತದ ಸೂಪರ್ – 8 ಪಂದ್ಯಗಳಿಗೆ ಜೂನ್ -19ರಂದು ಚಾಲನೆ ಸಿಕ್ಕಿದೆ. ಹಾಗಾಗಿ ಕ್ರಿಕೆಟ್ ಅಭಿಮಾನಿಗಳ ಕುತೂಹಲ ಪ್ರತಿಕ್ಷಣವೂ ರೋಚಕತೆಯನ್ನು ಹೆಚ್ಚಿಸಿದೆ.

ಟ್ವೆಂಟಿ -20 ವಿಶ್ವಕಪ್ ಪಂದ್ಯಾಟದ ಸೂಪರ್ -8  ಸುತ್ತಿನಲ್ಲಿ  8 ತಂಡಗಳು  ಕಾದಾಟ ನಡೆಸಲಿದೆ. ಗುಂಪು -1ರಲ್ಲಿ ಭಾರತ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ ತಂಡಗಳು ಇದ್ದು, ಗುಂಪು -2ರಲ್ಲಿ  ಯುಎಸ್‌ಎ, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ತಂಡಗಳು ಸೆಣಸಾಟ ನಡೆಸಲಿವೆ. ಸೂಪರ್ – 8ರ 12 ಪಂದ್ಯಗಳು ವೆಸ್ಟ್ ಇಂಡೀಸ್‌ನ ಆಂಟಿಗುವಾ, ಬಾರ್ಬಡೋಸ್, ಸೇಂಟ್ ಲೂಸಿಯಾ ಮತ್ತು ಸೇಂಟ್ ವಿನ್ಸೆಂಟ್ ಮೈದಾನದಲ್ಲಿ ನಡೆಯಲಿದೆ. ಸೂಪರ್- 8 ಸುತ್ತಿನ ಪ್ರತಿ ತಂಡಗಳು ತಲಾ 3 ಪಂದ್ಯಗಳನ್ನು ಆಡಲಿದ್ದು, ಈ ಮೂರು ಪಂದ್ಯಗಳಲ್ಲಿ 2 ಪಂದ್ಯ ಗೆಲ್ಲುವ ತಂಡ ಸೆಮಿಫೈನಲ್​ಗೇರಲಿದೆ. ನಂತರ ಸೆಮಿಫೈನಲ್‌ ಸುತ್ತು ನಾಕೌಟ್ ಆಗಲಿದೆ. ಸೆಮಿಫೈನಲ್ ಪಂದ್ಯಗಳು ಜೂನ್ -26 ಮತ್ತು 27ರಂದು ನಡೆಯಲಿವೆ. ಈ ಸುತ್ತಿನಲ್ಲಿ ಸೋತ ತಂಡದ ಪಯಣ ಅಲ್ಲಿಗೆ ಕೊನೆಗೊಳ್ಳಲಿದೆ. ಉಳಿದಂತೆ ವಿಜೇತ ತಂಡಗಳು ಫೈನಲ್ ತಲುಪಲಿದ್ದು, ಜೂನ್ 29ರಂದು ಬಾರ್ಬಡೋಸ್​ನಲ್ಲಿ ಫೈನಲ್ ಪಂದ್ಯವನ್ನು ಆಡಲಿವೆ.

ಟೀಂ ಇಂಡಿಯಾ ಅಜೇಯ ಓಟ : ಟೀಂ ಇಂಡಿಯಾ ಈ ಬಾರಿಯ ಟ್ವೆಂಟಿ-20 ವಿಶ್ವಕಪ್ ಪಂದ್ಯಾಟದಲ್ಲಿ  ಇದುವರೆಗೆ ಅದ್ಭುತ ಪ್ರದರ್ಶನ ನೀಡಿದೆ. ರೋಹಿತ್ ಪಡೆ ಲೀಗ್ ಸುತ್ತಿನಲ್ಲಿ ಆಡಿದ ಎಲ್ಲಾ ಪಂದ್ಯಗಳನ್ನು ಗೆದ್ದಿದೆ.  ಟೀಂ ಇಂಡಿಯಾ ಮೊದಲ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಎಂಟು ವಿಕೆಟ್‌ಗಳ ಗೆಲುವು ಪಡೆದ ನಂತರ ಎರಡನೇ ಪಂದ್ಯದಲ್ಲಿ ಬದ್ದವೈರಿಗಳಾದ ಪಾಕಿಸ್ತಾನ ತಂಡವನ್ನು ರೋಚಕ ಕಾದಾಟದಲ್ಲಿ 6 ರನ್‌ಗಳಿಂದ ಸೋಲಿಸಿತು. ಮುಂದೆ ಮೂರನೇ ಪಂದ್ಯದಲ್ಲಿ ಅಮೆರಿಕಾ ತಂಡದ ವಿರುದ್ಧ 7 ವಿಕೆಟ್‌ಗಳಿಂದ ಟೀಂ ಇಂಡಿಯಾ ಗೆದ್ದಿದೆ. ಆದರೆ , ಕೆನಡಾ ವಿರುದ್ಧದ ನಾಲ್ಕನೇ ಪಂದ್ಯ ಮಾತ್ರ ಮಳೆಯಿಂದಾಗಿ ರದ್ದಾಯಿತು.
ಅಫ್ಘಾನ್ ವಿರುದ್ಧ ಇಂಡಿಯಾ ಸೋತಿಲ್ಲ : ಪ್ರಸಕ್ತ ಟ್ವೆಂಟಿ -20 ವಿಶ್ವಕಪ್ ಕ್ರಿಕೆಟ್ ಸಮರದಲ್ಲಿ ಹ್ಯಾಟ್ರಿಕ್ ಗೆಲುವಿನೊಂದಿಗೆ ಸೂಪರ್ -8ರ ಘಟ್ಟಕ್ಕೆ ಗ್ರ್ಯಾಂಡ್ ಎಂಟ್ರಿಕೊಟ್ಟಿರುವ ಟೀಂ ಇಂಡಿಯಾ ಜುಲೈ 20ರಂದು ಅಫ್ಘಾನಿಸ್ತಾನ ತಂಡವನ್ನು ಎದುರಿಸಲಿದೆ.ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ನಲ್ಲಿ ಈ ಕದನ ನಡೆಯಲಿದೆ. ಅಫ್ಘಾನ್ ತಂಡದ ಪ್ರಮುಖ ಅಸ್ತ್ರ  ಸ್ಪಿನ್ನರುಗಳು. ಸ್ಪಿನ್ನರ್ ಗಳಿಂದಲೇ  ನ್ಯೂಜಿಲೆಂಡ್ ತಂಡವನ್ನು ಸೋಲಿಸಿದ್ದ ಅಫ್ಘಾನಿಸ್ತಾನ, ವೆರಿ ಡೇಂಜರರ್ಸ್ ಟೀಮ್. ಹಾಗಾಗಿ ಈ ಪಂದ್ಯ ಟೀಂ ಇಂಡಿಯಾದ ಬ್ಯಾಟರುಗಳು ಹಾಗೂ ಅಫ್ಘಾನಿಸ್ತಾನದ ಸ್ಪಿನ್ನರುಗಳ  ನಡುವೆ ಬಿಗ್ ಪೈಟ್ ಏರ್ಪಡಲಿದೆ. ಟೀಂ ಇಂಡಿಯಾ ಮತ್ತು ಅಫ್ಘಾನಿಸ್ತಾನ 9ನೇ ಬಾರಿ ಟ್ವೆಂಟಿ20 ಕ್ರಿಕೆಟ್‌ನಲ್ಲಿ ಮುಖಾಮುಖಿಯಾಗಲಿವೆ. ಟೀಂ ಇಂಡಿಯಾ ಇದಕ್ಕೂ ಮೊದಲು ಆಡಿದ 8 ಪಂದ್ಯಗಳ ಪೈಕಿ  6ರಲ್ಲಿ ಗೆಲುವು ಸಾಧಿಸಿದೆ. 1 ಪಂದ್ಯ ಟೈ ಆಗಿದ್ದರೆ 1 ಪಂದ್ಯ ಫಲಿತಾಂಶವಿಲ್ಲದೆ ಕೊನೆಗೊಂಡಿದೆ.ಅಂದರೆ ಅಫ್ಘಾನಿಸ್ತಾನ ತಂಡ ಇದುವರೆಗೆ ಟೀಂ ಇಂಡಿಯಾದ ವಿರುದ್ಧ ಯಾವುದೇ ಟಿ20 ಪಂದ್ಯವನ್ನು ಗೆದ್ದಿಲ್ಲ.
ಬಾಂಗ್ಲಾ ವಿರುದ್ಧವೂ ಇಂಡಿಯಾ ಮೇಲುಗೈ :ಟೀಂ ಇಂಡಿಯಾ ಸೂಪರ್ -8 ಸುತ್ತಿನ ಎರಡನೇ ಪಂದ್ಯವನ್ನು  ಜುಲೈ 22ರಂದು ಬಾಂಗ್ಲಾದೇಶ ವಿರುದ್ಧ ಆಡಲಿದೆ.ಇದು ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಉಭಯ ತಂಡಗಳ 14ನೇ ಸೆಣಸಾಟ ಆಗಿದೆ. ಈ ಮೊದಲು ಆಡಿದ 13 ಪಂದ್ಯಗಳಲ್ಲಿ ಟೀಂ ಇಂಡಿಯಾ 12 ಪಂದ್ಯಗಳಲ್ಲಿ ಗೆದ್ದಿದೆ. ಉಳಿದಂತೆ 1 ಪಂದ್ಯದಲ್ಲಿ ಬಾಂಗ್ಲಾದೇಶ ಗೆದ್ದಿದೆ. ಹಾಗಾಗಿ ಟ್ವೆಂಟಿ-20 ಕ್ರಿಕೆಟಿನಲ್ಲಿ ಬಾಂಗ್ಲಾ ತಂಡಕ್ಕಿಂತ ಟೀಂ ಇಂಡಿಯಾ ಮೇಲುಗೈ ಸಾಧಿಸಿದೆ.
ಆಸ್ಟ್ರೇಲಿಯಾಕ್ಕಿಂತ ಇಂಡಿಯಾ ಬಲಾಢ್ಯ: ಜುಲೈ 24ರಂದು ಇಂಡಿಯಾ – ಆಸ್ಟ್ರೇಲಿಯಾ ನಡುವೆ ಸೂಪರ್ -8 ಸುತ್ತಿನ ಬಿಗ್ ಮ್ಯಾಚ್ ನಡೆಯಲಿದೆ. ಇದು ಟ್ವೆಂಟಿ -20 ಕ್ರಿಕೆಟ್‌ನಲ್ಲಿ ಉಭಯ ತಂಡಗಳ 32ನೇ ಕಾದಾಟ. ಇದಕ್ಕೂ ಮೊದಲು  ಆಡಿದ 31 ಪಂದ್ಯಗಳಲ್ಲಿ ಟೀಂ ಇಂಡಿಯಾ19 ಪಂದ್ಯಗಳನ್ನು ಗೆದ್ದಿದ್ದರೆ, ಆಸ್ಟ್ರೇಲಿಯಾ 11 ಪಂದ್ಯಗಳನ್ನು ಗೆದ್ದಿದೆ. 1 ಪಂದ್ಯ ಫಲಿತಾಂಶ
ಇಲ್ಲದೆ ಅಂತ್ಯಗೊಂಡಿದೆ. ಟ್ವೆಂಟಿ -20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವೆ ಇಲ್ಲಿಯವರೆಗೆ ನಡೆದ 5 ಮುಖಾಮುಖಿಗಳಲ್ಲಿ ಟೀಂ ಇಂಡಿಯಾ ಇಲ್ಲಿಯೂ 3-2 ರಿಂದ ಮೇಲುಗೈ ಸಾಧಿಸಿದೆ. ಆದರೂ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಭಾರತದ ಮೈನಸ್ ಪಾಯಿಂಟ್ ಎಂದರೆ ಅದು ಈ ಪಂದ್ಯ ನಡೆಯುತ್ತಿರುವುದು ವೆಸ್ಟ್ ಇಂಡೀಸ್ ನೆಲದಲ್ಲಿ.
ಸೂಪರ್-8ರಲ್ಲಿ ಟೀಂ ಇಂಡಿಯಾಕ್ಕೆ ಕಠಿಣ ಎದುರಾಳಿ ಅಂದರೆ ಆಸ್ಟ್ರೇಲಿಯನ್ ತಂಡವೇ. ಇದು  ಹೆಚ್ಚು ಕುತೂಹಲ ಕೆರಳಿಸಿರುವ ಪಂದ್ಯ ಕೂಡ .ಮಾಜಿ ಚಾಂಪಿಯನ್ಸ್ ಆಸ್ಟ್ರೇಲಿಯಾ, ಈ ಬಾರಿ  ಚಾಂಪಿಯನ್ ಆಗೋ ಕನಸು ಕಾಣುತ್ತಿದೆ. ಹಾಗಾಗಿ ಸೂಪರ್-8ರಲ್ಲಿ ಟೀಂ ಇಂಡಿಯಾಕ್ಕೆ ಆಸ್ಟ್ರೇಲಿಯಾ ಕಠಿಣ ಎದುರಾಳಿ ಎನ್ನಲಾಗುತ್ತಿದೆ.

ಅಂದಹಾಗೆ , ಸೂಪರ್-8ರಲ್ಲಿ ಟೀಂ ಇಂಡಿಯಾದ  ಎದುರಾಳಿಗಳು ಬಲಿಷ್ಠರೇ. ಆದರೆ, ಟೀಂ ಇಂಡಿಯಾಕ್ಕೆ  ಹೋಲಿಸಿದರೆ ಅಫ್ಘಾನಿಸ್ತಾನ, ಬಾಂಗ್ಲಾದೇಶ ದುರ್ಬಲ ತಂಡವೇ. ಇನ್ನೂ ಆಸ್ಟ್ರೇಲಿಯಾ ವಿರುದ್ಧ ಸೋತರೂ ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳ ವಿರುದ್ದ ಪಂದ್ಯವನ್ನು ಗೆದ್ದರೆ  ಸೆಮಿಫೈನಲ್ ಪ್ರವೇಶಿಸಬಹುದು. 2010ರಲ್ಲಿ ವೆಸ್ಟ್ ಇಂಡೀಸ್ ನಲ್ಲೇ ನಡೆದ ಟ್ವೆಂಟಿ-20 ವಿಶ್ವಕಪ್‌ ಪಂದ್ಯಾಟದ  ಸೂಪರ್-8ರಲ್ಲಿ ಒಂದೂ ಪಂದ್ಯವನ್ನು  ಗೆಲ್ಲದೇ  ಟೀಂ ಇಂಡಿಯಾ ನಿರಾಸೆ ಅನುಭವಿಸಿತ್ತು. ಈ ಬಾರಿಯೂ ವೆಸ್ಟ್ ಇಂಡೀಸ್ ನಲ್ಲೇ ಟ್ವೆಂಟಿ-20 ವಿಶ್ವಕಪ್ ನಡೆಯುತ್ತಿರುವುದರಿಂದ ಕ್ರಿಕೆಟ್ ಅಭಿಮಾನಿಗಳಲ್ಲಿ ಸ್ವಲ್ಪ ಆತಂಕವಿದೆ. ಆದರೆ, ರೋಹಿತ್ ಶರ್ಮ ನಾಯಕತ್ವದ ಟೀಂ ಇಂಡಿಯಾ ವೆಸ್ಟ್‌ಇಂಡೀಸ್‌ ನೆಲದಲ್ಲಿ ವಿಶ್ವರೂಪ ತೋರಿಸಲಿ ಎನ್ನುವುದೇ ಕ್ರಿಕೆಟ್ ಅಭಿಮಾನಿಗಳ ಆಶಯವಾಗಿದೆ.

ಟೀಂ ಇಂಡಿಯಾ ಸೂಪರ್ – 8 ಸುತ್ತಿನಲ್ಲಿ 3 ಬಾರಿ ಎಡವಿದೆ : ಈ ಬಾರಿಯ ಟ್ವೆಂಟಿ -20 ವಿಶ್ವಕಪ್‌ನಲ್ಲಿ ಅಜೇಯ ತಂಡವಾಗಿ ಸೂಪರ್ -8ರ ಸುತ್ತಿಗೆ ಎಂಟ್ರಿಕೊಟ್ಟಿರುವ ಟೀಂ ಇಂಡಿಯಾ ಯಾವ ರೀತಿ ಪ್ರದರ್ಶನ ನೀಡಲಿದೆ ಎಂಬ ಪ್ರಶ್ನೆ ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಸದ್ಯ  ಮೂಡಿದೆ. ಏಕೆಂದರೆ ಈ ಮೊದಲು ಸೂಪರ್-8 ಸುತ್ತಿನಲ್ಲಿ ಟೀಂ ಇಂಡಿಯಾ 3ಬಾರಿ ಮುಗ್ಗರಿಸಿರುವ ಕಹಿ ಅನುಭವವನ್ನು ಹೊಂದಿದೆ. ಇದು ಟೀಂ ಇಂಡಿಯಾಕ್ಕೆ ಆಘಾತಕ್ಕಾರಿ ಸಂಗತಿಯಾಗಿದೆ.

2009ರಲ್ಲಿ ಹ್ಯಾಟ್ರಿಕ್  ಸೋಲು : 2007ರಲ್ಲಿ ನಡೆದಿದ್ದ ಟ್ವೆಂಟಿ-20 ವಿಶ್ವಕಪ್‌ ಪಂದ್ಯಾಟದ ಮೊದಲ ಆವೃತ್ತಿಯಲ್ಲಿ ಟೀಂ ಇಂಡಿಯಾ ದಾಯಾದಿ ತಂಡ  ಪಾಕಿಸ್ತಾನವನ್ನು ಸೋಲಿಸುವ ಮೂಲಕ ಚೊಚ್ಚಲ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು. ಇದರ ನಂತರ 2009ರಲ್ಲಿ ಎರಡನೇ ಆವೃತ್ತಿಯಲ್ಲೂ ಟೀಂ ಇಂಡಿಯಾ ಸೂಪರ್-8 ಸುತ್ತಿಗೆ ಪ್ರವೇಶಿಸಿತ್ತು. ಈ ಸುತ್ತಿನಲ್ಲಿ ಟೀಂ ಇಂಡಿಯಾ , ಎದುರಾಳಿ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್  ತಂಡಗಳನ್ನು ಎದುರಿಸಿತ್ತು. ಆದರೆ ಈ ಮೂರೂ ತಂಡಗಳ ವಿರುದ್ಧವೂ ಟೀಂ ಇಂಡಿಯಾ ಸೋತಿತ್ತು. ಇದರೊಂದಿಗೆ ಗುಂಪಿನಲ್ಲಿ ಕೊನೆಯ ಸ್ಥಾನ ಪಡೆಯುವ ಮೂಲಕ ಟೀಂ ಇಂಡಿಯಾ ಟೂರ್ನಿಯಿಂದ ಹೊರಬಿತ್ತು.

2010ರಲ್ಲಿ ವೆಸ್ಟ್‌ಇಂಡೀಸ್‌ನಲ್ಲೂ ಸೋಲು : ವೆಸ್ಟ್‌ಇಂಡೀಸ್‌ನಲ್ಲಿ ನಡೆದ 2010ರ ಟ್ವೆಂಟಿ -20  ವಿಶ್ವಕಪ್‌ನಲ್ಲಿ ‘ ಸಿ ‘ಗುಂಪಿನಲ್ಲಿದ್ದ ಟೀಂ ಇಂಡಿಯಾ ತನ್ನ ಎರಡೂ ಪಂದ್ಯಗಳನ್ನು ಗೆದ್ದು ಸೂಪರ್-8 ಪ್ರವೇಶಿಸಿತ್ತು. ಆ ಬಳಿಕ ಸೂಪರ್-8 ಸುತ್ತಿನಲ್ಲಿ ಆಸ್ಟ್ರೇಲಿಯ, ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳನ್ನು ಎದುರಿಸಿದ್ದ ಟೀಂ ಇಂಡಿಯಾ ಆಡಿದ ಮೂರು ಪಂದ್ಯಗಳನ್ನು ಸೋತಿತ್ತು. ಇದರಿಂದ ಟೀಂ ಇಂಡಿಯಾ ಗುಂಪಿನಲ್ಲಿ ಕೊನೆಯ ಸ್ಥಾನ ಗಳಿಸಿತ್ತು.

2012ರಲ್ಲೂ ಟೀಂ ಇಂಡಿಯಾಕ್ಕೆ  ಆಘಾತ : 2009 ಮತ್ತು 2010ರ ಟ್ವೆಂಟಿ- 20 ವಿಶ್ವಕಪ್‌ನಲ್ಲಿ ಆದಂತೆ 2012ರ ವಿಶ್ವಕಪ್‌ನಲ್ಲಿಯೂ ಟೀಂ ಇಂಡಿಯಾ ಮತ್ತೊಮ್ಮೆ ಸೂಪರ್-8ರ ಸುತ್ತಿನಿಂದ ಹೊರಬಿದ್ದಿತ್ತು. ಗ್ರೂಪ್ ಹಂತದಲ್ಲಿ ಎರಡೂ ಪಂದ್ಯಗಳನ್ನು ಗೆಲ್ಲುವ ಮೂಲಕ ಭಾರತ ಸೂಪರ್-8 ಪ್ರವೇಶಿಸಿತ್ತು. ಸೂಪರ್-8 ಸುತ್ತಿನಲ್ಲಿ ಆಸ್ಟ್ರೇಲಿಯಾ, ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಿದ್ದ ಟೀಂ ಇಂಡಿಯಾ 2 ತಂಡಗಳ ವಿರುದ್ಧ ಗೆದ್ದು, ಆಸ್ಟ್ರೇಲಿಯಾ ವಿರುದ್ಧ ಸೋಲನ್ನು ಕಂಡಿತು. ಆದರೆ , ನೆಟ್ ರನ್ ರೇಟ್ ನಲ್ಲಿ  ಪಾಕಿಸ್ತಾನಕ್ಕಿಂತ ಹಿಂದಿದ್ದರಿಂದ ಟೀಂ ಇಂಡಿಯಾ 2012ರಲ್ಲೂ  ಸೂಪರ್-8 ಸುತ್ತಿನಿಂದ ಹೊರಬಿದ್ದಿತ್ತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!