spot_img
Thursday, December 5, 2024
spot_img

ರೇಣುಕಾಸ್ವಾಮಿ ಹತ್ಯೆ ಪ್ರಕರಣ : ಎಸ್‌ಪಿಪಿ ಬದಲಾವಣೆ ಮಾಡುವ ಬಗ್ಗೆ ಸರ್ಕಾರದ ಮೇಲೆ ಯಾವುದೇ ಒತ್ತಡಗಳಿಲ್ಲ : ಸಿಎಂ ಸಿದ್ದರಾಮಯ್ಯ

ಜನಪ್ರತಿನಿಧಿ (ಬೆಂಗಳೂರು) : ನಟ ದರ್ಶನ್‌ ಆರೋಪ ಪಟ್ಟಿಯಲ್ಲಿರುವ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎಸ್‌ಪಿಪಿ ಬದಲಾವಣೆ ಮಾಡುವ ಬಗ್ಗೆ ಸರ್ಕಾರದ ಮೇಲೆ ಯಾವುದೇ ಒತ್ತಡಗಳಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು(ಬುಧವಾರ) ಹೇಳಿದ್ದಾರೆ.

ವರದಿಗಾರರಿಗೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸರ್ಕಾರ ನೇಮಿಸಿರುವ ಎಸ್‌ಪಿಪಿ ಪ್ರಸನ್ನಕುಮಾರ್‌ ಅವರನ್ನು ಬದಲಿಸುವಂತೆ ಯಾವುದೇ ಒತ್ತಡಗಳೂ ಬರುತ್ತಿಲ್ಲ. ಯಾವುದೇ ಒತ್ತಡಕ್ಕೂ ನಾವು ಮಣಿಯುವುದೂ ಇಲ್ಲ. ಕಾನೂನು ರೀತಿಯಲ್ಲಿಯೇ ಎಲ್ಲಾ ಪ್ರಕ್ರಿಯೆಗಳು ನಡೆಯಲಿವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ಸಂಬಂಧಿಸಿದಂತೆ ಗೃಹ ಮಂತ್ರಿ ಡಾ. ಪರಮೇಶ್ವರ್ ಅವರೂ ಕೂಡ ಚರ್ಚಿಸಿದ್ದು, ಆರೋಪಿ ದರ್ಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಪರ ವಕೀಲ ​ಎಸ್​ಪಿಪಿ ಪ್ರಸನ್ನಕುಮಾರ್ ಅವರನ್ನು ಬದಲಾವಣೆ ಮಾಡಿದರೂ ತಪ್ಪಿಲ್ಲ. ಎಸ್​ಪಿಪಿ ಬದಲಾವಣೆ ಆಗಬೇಕಾದರೂ ಒಂದು ಕಾರಣ ಇರಲಿದೆ. ಮುಖ್ಯಮಂತ್ರಿಗಳಾಗಲಿ ಅಥವಾ ನಾನಾಗಲಿ, ಕಾನೂನು ಸಲಹೆ ಪಡೆದು ನಿರ್ಧಾರ ತೀರ್ಮಾನಿಸುತ್ತೇವೆ. ಯಾರನ್ನೇ ನೇಮಿಸಿದರೂ ಕಾನೂನು ಪ್ರಕಾರವೇ ಮಾಡಬೇಕು ಎಂದು ಅವರು ತಿಳಿಸಿದರು.

ʼನಟ ದರ್ಶನ್‌ ತಪ್ಪೊಪ್ಪಿಕೊಂಡಿದ್ದಾರಂತಲ್ಲಾ..ʼ ಎಂದು ವರದಿಗಾರರೊಬ್ಬರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ, ದರ್ಶನ್ ತಪ್ಪೊಪ್ಪಿಕೊಂಡಿರುವುದರ ಬಗ್ಗೆ ನನಗೆ ಗೊತ್ತಿಲ್ಲ. ನಾವು ಪ್ರಕರಣವನ್ನು ಯಾವುದೇ ಕಾರಣಕ್ಕೂ ಸಡಿಲ ಮಾಡುವುದಿಲ್ಲ. ಅಂತಹ ಚಿಂತನೆ ಕೂಡ ಸರ್ಕಾರಕ್ಕಿಲ್ಲ. ಯಾವುದೇ ಮುಲಾಜು, ಒತ್ತಡ ಇಲ್ಲದೆ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ. ದರ್ಶನ್ ಮ್ಯಾನೇಜರ್ ನಾಪತ್ತೆ ಬಗ್ಗೆ ಯಾವ ಮಾಹಿತಿ ಬಂದಿಲ್ಲ. ದರ್ಶನ್ ಇದರಲ್ಲಿ ಭಾಗಿಯಾಗಿದ್ದರೆ ಅದಕ್ಕೆ ಸರ್ಕಾರ ಕೂಡ ತನಿಖೆಗೆ ಅನುಮತಿ ಕೊಡಲಿದೆ. ಏನು ‌ಕ್ರಮ ತೆಗೆದುಕೊಳ್ಳಬೇಕು ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

ಇನ್ನು, ತೈಲ ಬೆಲೆ ಹೆಚ್ಚಳವನ್ನು ಖಂಡಿಸಿ ಬಿಜೆಪಿ ಪ್ರತಿಭಟನೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿಎಂ, ಬಿಜೆಪಿ ಪ್ರತಿಭಟನೆಗೆ ಏನು ಕ್ರಮ ತಗೆದುಕೊಳ್ಳಬೇಕು ತೆಗೆದುಕೊಳ್ಳುತ್ತೇವೆ. ಪ್ರತಿಭಟನೆ ಮಾಡುವುದಕ್ಕೆ ಬೇಡ ಎನ್ನುವುದಿಲ್ಲ, ಪ್ರತಿಭಟಿಸುವ ಹಕ್ಕು ಅವರಿಗಿದೆ. ಆದರೆ ಸಾರ್ವಜನಿಕರಿಗೆ ತೊಂದರೆ ಕೊಟ್ಟರೆ ಲಾಠಿ ಚಾರ್ಜ್ ಮಾಡುತ್ತೇವೆ. ರಸ್ತೆಗೆ ಇಳಿದು ಪ್ರತಿಭಟನೆ ಮಾಡುತ್ತೇವೆ ಎಂದರೆ ಕಾನೂನು ಪ್ರಕಾರವಾಗಿ ಕ್ರಮ ತೆಗೆದುಕೊಳ್ಳುತ್ತೇವೆ. ಪೊಲೀಸರು ಅನುಮತಿ ಕೊಟ್ಟರೆ ಮಾತ್ರ ಪ್ರತಿಭಟನೆ ಮಾಡಬಹುದು ಎಂದು ಎಚ್ಚರಿಕೆಯನ್ನು ಅವರು ನೀಡಿದ್ದಾರೆ.

ಈಗಾಗಲೇ ತೈಲ ದರ ಹೆಚ್ಚಳ ಆದೇಶ ಹೊರಡಿಸಿದ್ದೇವೆ. ಜನರು ಸಹ ಪೆಟ್ರೋಲ್, ಡೀಸೆಲ್ ಹಾಕಿಸಿಕೊಳ್ಳುತ್ತಿದ್ದಾರೆ. ನೆರೆ ರಾಜ್ಯದವರು ನಮ್ಮಲ್ಲಿ ಬಂದು ಹಾಕಿಸಿಕೊಳ್ಳುತ್ತಿದ್ದಾರೆ. ನೀರು, ಬಸ್ ದರ ಏರಿಕೆ ಬಗ್ಗೆ ಆಯ ಇಲಾಖೆ ನಿರ್ಧಾರ ಮಾಡುತ್ತದೆ. ಹೀಗಾಗಿ ಇಲಾಖೆ ಸಚಿವರು ಗಮನಿಸುತ್ತಾರೆ. ನಮಗೆ ದೂರು ಬಂದರೆ, ಆ ಬಳಿಕ ನಾನು ಕ್ರಮ ವಹಿಸುತ್ತೇನೆ ಎಂದು ತಿಳಿಸಿದರು.

ವಾಲ್ಮೀಕಿ ನಿಗಮ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಸಿದ ಮುಖ್ಯಮಂತ್ರಿಗಳು, ವಾಲ್ಮೀಕಿ ನಿಗಮ ಮಂಡಳಿಯ ಭಹಗರಣದಲ್ಲಿ ಸಿಎಂ ಹಸ್ತಕ್ಷೇಪವಿದೆ ಎನ್ನುವ ಆರೋಪವನ್ನು ಬಿಜೆಪಿಯವರು ಸಾಬೀತುಪಡಿಸಲಿ. ಸಿಬಿಐಗೆ ಕೊಡಿ ಅಂತ‌ ಕೂಗಾಡುತ್ತಿದ್ದರು, ಈಗ ಸಿಬಿಐ ಕೂಡ ಪ್ರಕರಣದ ತನಿಖೆ ನಡೆಸುತ್ತಿದೆ. ಬ್ಯಾಂಕ್​ನವರು ದೂರು ನೀಡಿದ ಹಿನ್ನೆಲೆಯಲ್ಲಿ ಸಿಬಿಐ ಪ್ರಕರಣ ತನಿಖೆ ನಡೆಸುತ್ತಿದೆ ಎಂದು ತಿಳಿಸಿದರು.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಸರ್ಕಾರ ನೇಮಿಸಿರುವ ಎಸ್‌ಪಿಪಿ ಪ್ರಸನ್ನಕುಮಾರ್‌ ಅವರು ಖಡಕ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಇವರನ್ನು ಬದಲಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲಾಗುತ್ತಿದೆ ಎಂಬ ಮಾತುಗಳು ಕೇಳಿಬಂದಿದ್ದು, ಈ ಬಗ್ಗೆ ಸರ್ಕಾರ ಕೂಡ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿತ್ತು.

ಎಸ್​ಪಿಪಿ ಪ್ರಸನ್ನಕುಮಾರ್​ ಅವರನ್ನು ಬದಲಿಸಿದರೆ ಅನುಮಾನ ಬರುವ ಸಾಧ್ಯತೆ ಇರುವುದರಿಂದ, ರಾಜ್ಯ ಸರ್ಕಾರ ಅಂತಿಮ ತೀರ್ಮಾನ ಕೈಗೊಂಡಿಲ್ಲ ಎನ್ನಲಾಗಿತ್ತು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!