Sunday, September 8, 2024

ವ್ಯವಸಾಯ ಸೇವಾ ಸಹಕಾರಿ ಸಂಘಗಳಿಗೂ ಸರಕಾರ ಠೇವಣಿ ನೀಡಲಿ-ಡಾ.ಎಂ.ಎನ್.ರಾಜೇಂದ್ರ ಕುಮಾರ್

ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘದ ನೂತನ ಕಟ್ಟಡ ‘ಸಹಕಾರ ಸಾನಿಧ್ಯ’ ಉದ್ಘಾಟನೆ

ಕುಂದಾಪುರ, ಜೂ.8: (ಜನಪ್ರತಿನಿಧಿ ವಾರ್ತೆ) ಸರಕಾರಗಳು ಸೇವೆ ನೀಡಲು ಮಾತ್ರ ಸಹಕಾರ ವ್ಯವಸ್ಥೆಯನ್ನು ಬಳಸಿಕೊಳ್ಳುತ್ತವೆ. ಠೇವಣಿಯನ್ನು ಮಾತ್ರ ವಾಣಿಜ್ಯ ಬ್ಯಾಂಕುಗಳಲ್ಲಿ ಇಡುತ್ತಾರೆ. ಸರಕಾರ ಸಹಕಾರಿ ಸಂಘಗಳಲ್ಲಿ ಖಾತೆಯನ್ನೇ ತೆರೆಯುವುದಿಲ್ಲ. ಸಹಕಾರ ಕ್ಷೇತ್ರಗಳಲ್ಲಿಯೂ ಸರಕಾರ ಠೇವಣಿ ಇಡುವ ಪರಿಪಾಠ ಬೆಳೆಸಿಕೊಳ್ಳಬೇಕು. ಆಗ ಸೇವೆ ನೀಡಲು ಸಹಕಾರ ವ್ಯವಸ್ಥೆಗೆ ಇನ್ನಷ್ಟು ಹುಮ್ಮಸು ಬರುತ್ತದೆ ಎಂದು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಹೇಳಿದರು.

ಅವರು ಕುಂದಾಪುರ ತಾಲೂಕು ಬಿದ್ಕಲ್ ಕಟ್ಟೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘದ ನೂತನ ಕಟ್ಟಡ ಸಹಕಾರ ಸಾನಿಧ್ಯ ಉದ್ಘಾಟಿಸಿ ಮಾತನಾಡಿದರು.

ಸಹಕಾರ ಕ್ಷೇತ್ರ ಎಲ್ಲ ಕ್ಷೇತ್ರದಲ್ಲೂ ಕೆಲಸ ಮಾಡುತ್ತಿದೆ. ಈಗಾಗಲೇ ಮೂರು ಲಕ್ಷದ ತನಕ ನಿಬಡ್ಡಿ ಸಾಲ ನೀಡುತ್ತಿದೆ. ಇದರಲ್ಲಿ 1.5% ಸಂಘದಿಂದಲೇ ಹೋಗುತ್ತದೆ. ಸರಕಾರ ನೀಡುವ ಹಣ ಮೂರು ವರ್ಷದಿಂದ ಬಾಕಿ ಇದೆ. ರೈತರಿಗೆ ಸಾಲ ನೀಡಿಕೆಯ ಪ್ರಮಾಣ ಹೆಚ್ಚಳ ಮಾಡಬೇಕೆಂದು ಶಾಸಕರು ಹೇಳಿದ್ದಾರೆ. ಅವರು ಕೂಡಾ ಸಹಕಾರ ಹಿನ್ನೆಲೆಯುಳ್ಳವರು. ಸಹಕಾರ ಕ್ಷೇತ್ರ ಎದುರಿಸುವ ಸವಾಲು ಅವರಿಗೂ ಗೊತ್ತಿದೆ. ಈ ಬಗ್ಗೆ ಅವರು ವಿಧಾನಸಭೆಯಲ್ಲಿ ಧ್ವನಿ ಎತ್ತಬೇಕು. ಸಹಕಾರ ಕ್ಷೇತ್ರಕ್ಕೆ ಸರಕಾರದಿಂದ ಇನ್ನೂ ಹೆಚ್ಚಿನ ಪ್ರೋತ್ಸಾಹ ಸಿಗುವಂತಾಗಬೇಕು ಎಂದರು.

ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ಶತಮಾನಗಳ ಇತಿಹಾಸವಿದೆ. 1 ಕೋಟಿ ವೆಚ್ಚದಲ್ಲಿ ಭವ್ಯವಾದ ಹವಾನಿಯಂತ್ರಿತವಾದ ಕಟ್ಟಡ ನಿರ್ಮಿಸಿರುವುದು ಶ್ಲಾಘನೀಯ ಎಂದು ಹೇಳಿದ ಅವರು ಸಂಘಕ್ಕೆ 10 ಲಕ್ಷ ರೂ ನೀಡುವುದಾಗಿ ಘೋಷಿಸಿದರು.
ಇದು ಸ್ಪರ್ಧಾತ್ಮಕ ಯುಗ. ಉತ್ತಮ ಸೇವೆ ನೀಡಿ, ಜನರ ವಿಶ್ವಾಸಗಳಿಸುವುದು ಮುಖ್ಯ. ಬರುವ ವರ್ಷ 1 ಕೋಟಿ ಲಾಭ ಗಳಿಸಬೇಕು ಎಂದು ಡಾ.ಎಂ ಎನ್.ರಾಜೇಂದ್ರ ಕುಮಾರ್ ಹೇಳಿದರು.

ಮೊಳಹಳ್ಳಿ ಶಿವರಾವ್ ಸಭಾಂಗಣವನ್ನು ಶಾಸಕ ಕಿರಣ್ ಕುಮಾರ್ ಕೊಡ್ಗಿ ಉದ್ಘಾಟಿಸಿ ಮಾತನಾಡಿ, ವ್ಯವಸಾಯ ಸೇವಾ ಸಹಕಾರಿ ಸಂಘಗಳ ಮೂಲಕ ರೈತರಿಗೆ ನಿಬಡ್ಡಿ ಸಾಲವನ್ನು 5 ಲಕ್ಷಕ್ಕೆ ಏರಿಸಿಬೇಕು, 3ಶೇ ಬಡ್ಡಿಯಲ್ಲಿ ನೀಡುವ ಸಾಲವನ್ನು 15 ಲಕ್ಕೆ ಹೆಚ್ಚಳ ಮಾಡಿದರೆ ರೈತರಿಗೆ ಅನುಕೂಲವಾಗುತ್ತದೆ. ಈ ಬಗ್ಗೆ ನಾವು ಸರಕಾರವನ್ನು ಒತ್ತಾಯಿಸಿದಾಗ ಈ ಬೇಡಿಕೆ ಬರುತ್ತಿಲ್ಲ ಎನ್ನುವ ಉತ್ತರ ಸರಕಾರ ನೀಡುತ್ತದೆ. ಈ ಬಗ್ಗೆ ಒತ್ತಾಯ ಮಾಡುವ ಕೆಲಸ ಆಗಬೇಕು, ನಾವು ಕೂಡಾ ಈ ಬಗ್ಗೆ ಸರ್ಕಾರಕ್ಕೆ ಒತ್ತಡ ಹಾಕುತ್ತೇವೆ ಎಂದರು.

ಭದ್ರತಾಕೊಠಡಿಯನ್ನು ವಿಧಾನ ಪರಿಷತ್ತಿನ ಮಾಜಿ ಸಬಾಪತಿಗಳಾದ ಕೆ. ಪ್ರತಾಪಚಂದ್ರ ಶೆಟ್ಟಿ ಉದ್ಘಾಟಿಸಿದರು. ಗೋದಾಮನ್ನು ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂದಕರಾದ ಶ್ರೀಮತಿ ಲಾವಣ್ಯ ಕೆ.ಆರ್ ಉದ್ಘಾಟಿಸಿದರು. ನವೀಕೃತ ಶಿವರಾವ್ ಪ್ರತಿಮೆಯನ್ನು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ನಿನ ಅಧ್ಯಕ್ಷರಾದ ಜಯಕರ ಶೆಟ್ಟಿ ಇಂದ್ರಾಳಿಯವರು ನೆರವೇರಿಸಿದರು.

ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಎಂ.ಮಹೇಶ್ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿ, ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘ ಪ್ರಸ್ತುತ 7 ಸಾವಿರಕ್ಕೂ ಮಿಕ್ಕಿ ಸದಸ್ಯರನ್ನು ಹೊಂದಿದೆ. 2 ಕೋಟಿಗೂ ಮಿಕ್ಕಿ ಪಾಲು ಬಂಡವಾಳವನ್ನು ಹೊಂದಿದೆ. 40 ಕೋಟಿಗೂ ಮಿಕ್ಕಿ ಠೇವಣಿಯನ್ನು ಹೊಂದಿದೆ. ಸದಸ್ಯರಿಗೆ 50 ಕೋಟಿಗೂ ಮಿಕ್ಕಿ ಸಾಲವನ್ನು ವಿತರಿಸಿದೆ. 75 ಲಕ್ಷಕ್ಕೂ ಮಿಕ್ಕಿ ಲಾಭವನ್ನು ಹೊಂದಿದ್ದು ಆಡಿಟ್ ವರ್ಗೀಕರಣದಲ್ಲಿ ‘ಎ’ ತರಗತಿಯನ್ನು ಹೊಂದಿದೆ. ಸಂಘದ ವ್ಯಾಪ್ತಿಯಲ್ಲಿ 123 ಸ್ವಸಹಾಯ ಗುಂಪುಗಳಿದ್ದು 5 ರೈತ ಕೂಟಗಳಿವೆ. ನಿರಂತರವಾಗಿ ಪ್ರಗತಿ ಕಾಣುತ್ತ ಬಂದ ಈ ಸಂಘ ಮೊಳಹಳ್ಳಿ, ಹಳ್ಳಾಡಿ ಹರ್ಕಾಡಿ, ಯಡಾಡಿ ಮತ್ಯಾಡಿಯಲ್ಲಿ ಸಂಘ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಹುಣ್ಸೆಮಕ್ಕಿಯಲ್ಲಿ ಮಾತ್ರ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. 4 ಶಾಖೆಗಳಲ್ಲಿ 500 ಟನ್ ಸಾಮಥ್ರ್ಯದ ಗೋದಾಮನ್ನು ಹೊಂದಿದೆ. ಇದೀಗ ಪ್ರಧಾನ ಕಛೇರಿಯನ್ನು ಒಂದು ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಗೋದಾಮು, ಪ್ರಧಾನ ಕಛೇರಿ, ಸಭಾಂಗಣ ನಿರ್ಮಿಸಲಾಗಿದ್ದು ಸಂಪೂರ್ಣ ಹವಾನಿಯಂತ್ರಿತವಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ಎಸ್. ರಾಜು ಪೂಜಾರಿ, ಕುಂದಾಪುರ ಉಪ-ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಅರುಣ್ ಕುಮಾರ ಎಸ್.ವಿ., ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಕುಂದಾಪುರ ಇದರ ಅಧ್ಯಕ್ಷರಾದ ಮಲ್ಯಾಡಿ ಶಿವರಾಮ್ ಶೆಟ್ಟಿ, ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘ ಕುಂದಾಪುರ ಇದರ ಅಧ್ಯಕ್ಷರಾದ ಎಚ್. ಹರಿಪ್ರಸಾದ ಶೆಟ್ಟಿ, ಮೊಳಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಎಂ. ದಿನೇಶ ಹೆಗ್ಡೆ, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಭಾಸ್ಕರ ಕೋಟ್ಯಾನ್, ಅಶೋಕ್ ಕುಮಾರ್ ಶೆಟ್ಟಿ, ಮೊನಪ್ಪ ಶೆಟ್ಟಿ ಎಕ್ಕಾರು, ಜಯರಾಜ್ ಜೈ, ಸ್ಕ್ಯಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ, ಮೊಳಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಎಂ. ಚಂದ್ರಶೇಖರ ಶೆಟ್ಟಿ, ಹೊಂಬಾಡಿ-ಮಂಡಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಯಂತಿ ಶೆಟ್ಟಿ, ಹಾರ್ದಳ್ಳಿ-ಮಂಡಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ದೀಪಾ ಆರ್. ಶೆಟಿ ಆಗಮಿಸಿದ್ದರು.

ಸಂಘದ ಉಪಾಧ್ಯಕ್ಷರಾದ ಸಿ.ಜಗನ್ನಾಥ ಶೆಟ್ಟಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಾರ್ವತಿ ಎಂ. ನಿರ್ದೇಶಕರಾದ ಎಚ್.ದೀನಪಾಲ ಶೆಟ್ಟಿ, ಎಚ್.ಹರಿಪ್ರಸಾದ್ ಶೆಟ್ಟಿ, ಎಂ.ದಿನೇಶ್ ಹೆಗ್ಡೆ, ಲವಕರ ಶೆಟ್ಟಿ, ಎಚ್.ಬಾಲಕೃಷ್ಣ ಹೆಗ್ಡೆ, ಪ್ರಶಾಂತ, ಅನಿತ್ ಕುಮಾರ್ ಶೆಟ್ಟಿ, ಶ್ರೀಮತಿ ಉಷಾ ಶೆಟ್ಟಿ, ಶ್ರೀಮತಿ ಚೈತ್ರಾ ಅಡಪ, ಗಣೇಶ, ರಾಜು, ಉದಯ ಕುಲಾಲ್, ಸಂದೀಪ್ ಕುಮಾರ್ ಶೆಟ್ಟಿ, ಉಪಸ್ಥಿತರಿದ್ದರು.

ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಸಂಘದ ಮಾಜಿ ಅಧ್ಯಕ್ಷರಾದ ಎಂ.ಚಂದ್ರಶೇಖರ ಹೆಗ್ಡೆ, ಶಿವರಾಮ ಶೆಟ್ಟಿ, ದೀನಪಾಲ ಶೆಟ್ಟಿ ಹಾಗೂ ಸಂಘದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಶಂಕರನಾರಾಯಣ ಉಳ್ಳೂರ, ವಾಸುದೇವ ಭಟ್, ಎಸ್.ರತ್ನಾಕರ ಶೆಟ್ಟಿ, ನಿವೃತ್ತ ಸಿಬ್ಬಂದಿಗಳಾದ ಸುಬ್ರಾಯ ಅಡಿಗ, ಗೋವಿಂದ ತಿಂಗಳಾಯ, ಜಯಂತಿ ಸುಂದರ ಶೆಟ್ಟಿ, ಕಲ್ಪನಾ ಎಸ್ ಭಂಡಾರಿ ಅವರನ್ನು ಸನ್ಮಾನಿಸಲಾಯಿತು. ಕಟ್ಟಡದ ಸ್ಥಳದಾನಿ ವಾರೀಸುದಾರರಾದ ಕೆ.ಸಂತೋಷ್ ಶೆಟ್ಟಿ ದಂಪತಿಗಳು, ಕಟ್ಟಡ ಗುತ್ತಿಗೆದಾರರಾದ ಪ್ರಶಾಂತ್  ಬಾಸ್ ಬೈಲು, ಇಂಜಿನಿಯರ್ ತಾರಾನಾಥ, ಶಿವಾನಂದ ಅವರನ್ನು ಸನ್ಮಾನಿಸಲಾಯಿತು.

ಸಂದರ್ಭದಲ್ಲಿ ಸಂಘದ ವ್ಯಾಪ್ತಿಯ ಸಾಧಕ ವಿದ್ಯಾರ್ಥಿಗಳಾದ ಧನುಶ್ರೀ ಎಸ್.ಎಸ್.ಎಲ್.ಸಿ ಪ್ರಥ್ವಿಕಾ ಎಸ್.ಎಸ್.ಎಲ್.ಸಿ ಯಲ್ಲಿ 621 ಅಂಕ, ರೋಶನಿ ಎಂ. ಪಿ. 619 ಅಂಕ, ದ್ವೀತಿಯ ಪಿಯುಸಿಯಲ್ಲಿ 593, ಸಾತ್ವಿಕ್ ವಿ. ಶೆಟ್ಟಿ: ದ್ವಿತೀಯ ಪಿಯುಸಿ-588 ಅಂಕ, ಈಶ ಶೆಟ್ಟಿ ನೀಟ್ ಪರೀಕ್ಷೆ-671 ಅಂಕಇವರಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು.

ಹೊಸ ನವೋದಯ ಸ್ವಸಹಾಯ ಗುಂಪುಗಳಿಗೆ ಚಾಲನೆ ನೀಡಲಾಯಿತು. ಸ್ವಸಹಾಯ ಗುಂಪುಗಳಿಗೆ ಸಾಲಪತ್ರ ವಿತರಣೆ, ಚೈತನ್ಯ ವಿಮಾ ಚೆಕ್ ವಿತರಣೆ ಮಾಡಲಾಯಿತು.

ಗಾಯಕ ಅಶೋಕ ಸಾರಂಗ ಪ್ರಾರ್ಥನೆಗೈದು, ರೈತಗೀತೆ ಹಾಡಿದರು. ಅನುಷಾ ಸನ್ಮಾನಿತರ ಪರಿಚಯಿಸಿದರು. ಸಂಘದ ನಿರ್ದೇಶಕ ದೀನಪಾಲ ಶೆಟ್ಟಿ ವಂದಿಸಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಸಿಬ್ಬಂದಿಗಳು ಕಾರ್ಯಕ್ರಮಕ್ಕೆ ಸಹಕರಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!