Tuesday, October 8, 2024

 ʼಇಂಡಿಯಾ ಶೈನಿಂಗ್‌ʼ ಮುಂದುವರಿದ ಭಾಗ ʼಮೋದಿ ಗ್ಯಾರಂಟಿʼ !?

1984 ಅಥವಾ 2004 ಅಥವಾ 2019

ಕೇಂದ್ರ ಚುನಾವಣಾ ಆಯೋಗದ ಮಾಹಿತಿಯ ಪ್ರಕಾರ, ದೇಶದಲ್ಲಿ 96.88 ಕೋಟಿ ಮತದಾರರಿದ್ದಾರೆ. ಅವರಲ್ಲಿ 49.72 ಕೋಟಿ ಪುರುಷರು, 47.15 ಕೋಟಿ ಮಹಿಳೆಯರು, 48 ಸಾವಿರ ಲಿಂಗತ್ವ ಅಲ್ಪಸಂಖ್ಯಾತರು, 1.84 ಕೋಟಿ ಮೊದಲ ಬಾರಿಗೆ ಮತದಾರರು, 19.74 ಕೋಟಿ ಯುವ ಮತದಾರರು (ಏಪ್ರಿಲ್ 1ಕ್ಕೆ 18 ವರ್ಷ ತುಂಬುವವರ ಸಹಿತ), 19.1 ಲಕ್ಷ ಸೇವಾ ವಲಯದ ಮತದಾರರು (ಸೇನಾ ಪಡೆಗಳು ಇತ್ಯಾದಿ), 85 ವರ್ಷ ದಾಟಿದ 82 ಲಕ್ಷ ಮತದಾರರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಬೇಕು. ಈವರೆಗೆ ಒಟ್ಟು ಐದು ಹಂತದ ಮತದಾನ ಮುಗಿದಿದ್ದು, ಇನ್ನೆರಡು ಹಂತಗಳು ಮುಗಿದರೇ, ಲೋಕಸಭಾ ಚುನಾವಣೆಯ ಈ ಬಾರಿಯ ಸುತ್ತು ಮುಕ್ತಾಯಗೊಳ್ಳಲಿದೆ. ಈವರೆಗೆ ನಡೆದ ಎಲ್ಲಾ ಮತದಾನದ ಹಂತಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಮತದಾನವಾಗಿದೆ ಎಂಬ ವರದಿಗಳಿವೆ. ಇದಕ್ಕೆ ರಾಜಕೀಯವಾಗಿಯೂ ಹಲವು ಆಯಾಮಗಳಲ್ಲಿ ವಿಶ್ಲೇಷಣೆಗಳು ಹೊರಬಂದಿವೆ. ಅವೆಲ್ಲವನ್ನು ಹೊರತಾಗಿ ನೋಡುವುದಾದರೇ, ಈ ಸುತ್ತಿನ ಲೋಕಸಭಾ ಚುನಾವಣೆ ಹಲವು ವಿಷಯಗಳನ್ನು ಮುಂದಿಟ್ಟಿದೆ. ಆಡಳಿತರೂಢ ಪಕ್ಷಕ್ಕೆ ಅಧಿಕಾರವನ್ನು ಉಳಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಹಾಗೂ ವಿರೋಧ ಪಕ್ಷಗಳಿಗೆ ಆಡಳಿತ ಪಕ್ಷವನ್ನು ಕೆಳಗಿಳಿಸಿ ಅಧಿಕಾರಕ್ಕೆ ಏರುವ ಹಂಬಲ.

ಕಳೆದ ಎರಡು ಲೋಕಸಭಾ ಚುನಾವಣೆಗಳಿಗಿಂತ ಈ ಸುತ್ತಿನ ಚುನಾವಣೆ ಹಲವು ಕುತೂಹಲಗಳನ್ನು ಹುಟ್ಟಿಸಿದೆ. ಎನ್‌ಡಿಎ ಹಾಗೂ ʼಇಂಡಿಯಾʼ ಮೈತ್ರಿಕೂಟಗಳೆರಡೂ ಅಧಿಕಾರ ಹಿಡಿಯುವುದು ನಿಶ್ಚಿತ ಎನ್ನುವ ಹುಮ್ಮಸ್ಸಿನಲ್ಲಿವೆ. ರಾಷ್ಟ್ರೀಯತೆ ಹಾಗೂ ಪ್ರಾದೇಶಿಕತೆ ಈ ಬಾರಿಯ ಚುನಾವಣೆಯಲ್ಲಿ ಪ್ರಮುಖ ಅಂಶಗಳಾಗಿವೆ. ಪ್ರಧಾನಿ ನರೇಂದ್ರ ಮೋದಿ ಎಲ್ಲಾ ಕಡೆ ಎನ್‌ಡಿಎಗೆ ಜನರ ಬೆಂಬಲ ಬಲಗೊಳ್ಳುತ್ತಿದೆ ಎಂಬ ವಿಶ್ವಾಸದ ಮಾತುಗಳನ್ನಾಡುತ್ತಿದ್ದಾರೆ, ಇನ್ನೊಂದೆಡೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ, ರಾಹುಲ್‌ ಗಾಂಧಿ ಸೇರಿ ʼಇಂಡಿಯಾʼ ಮೈತ್ರಿಕೂಟ ದೇಶದಾದ್ಯಂತ ಜನರ ಒಲವು ತಮ್ಮ ಪರವಾಗಿದೆ ಎಂದು ನಂಬಿಕೆಯಲ್ಲಿರುವುದೇ ಈ ಬಾರಿಯ ಲೋಕಸಭಾ ಚುನಾವಣೆಯನ್ನು ಬೆರಗುಗಣ್ಣಿಂದ ನೋಡುವ ಹಾಗೆ ಮಾಡಿದೆ.

ಸಾಮಾಜಿಕ ಮತ್ತು ವೃತ್ತಿಪರ ಮಾಧ್ಯಮಗಳೆರಡೂ ಚುನಾವಣಾ ಲೆಕ್ಕಚಾರದ ಸಮೀಕ್ಷೆಯ ಅಧ್ಯಯನಗಳು ಮತ್ತು ವಿಶ್ಲೇಷಣೆಗಳಿಂದ ತುಂಬಿ ತುಳುಕುತ್ತಿವೆ, ಆದರೂ ಅವೆಲ್ಲದರ ನಡುವಿನ ಸಾಮಾನ್ಯ ಅವಲೋಕನವೆಂದರೆ, ಆರಂಭದಲ್ಲಿ ಏಕ ಪಕ್ಷೀಯ ಚುನಾವಣೆಯಂತೆ ಕಂಡಂತಹ ಈ ಬಾರಿಯ ಲೋಕಸಭಾ ಚುನಾವಣಾ ಸ್ಪರ್ಧೆಯು ನಿರೀಕ್ಷೆಗಿಂತ ಬಿಗಿಯಾಗಿ ಕಾಣಿಸುತ್ತಿದೆ. ರಾಷ್ಟ್ರೀಯತೆಗಿಂತ ಸ್ಥಳೀಯ ಅಂಶಗಳೇ ಪ್ರಮುಖ ಆದ್ಯತೆ ತೆಗೆದುಕೊಂಡ ಹಾಗೆ ಕಾಣಿಸುತ್ತಿದೆ. ರಾಷ್ಟ್ರಾಭಿವೃದ್ಧಿಯ ಮೂಲ ಬೇರು ಸ್ಥಳಿಯಾಭಿವೃದ್ಧಿಯೇ ಆಗಿದೆ ಎಂಬ ಮತದಾರನ ಮನೋಧೋರಣೆ ಮತದಾನ ಪ್ರಕ್ರಿಯೆಯಲ್ಲಿ ಕಾಣಸಿಕ್ಕಿದ್ದು, ರಾಷ್ಟ್ರೀಯತೆಯ ಸಿದ್ದಾಂತವನ್ನೇ ನಂಬಿಕೊಂಡಿದ್ದ ಒಂದು ಪಕ್ಷಕ್ಕೆ ಇದು ಘಾತಕವಾಗಿಯೇ ಪರಿಣಮಿಸಲಿದೆ ಎಂಬ ವಿಶ್ಲೇಷಣೆಗಳು ರಾಜಕೀಯ ವಲಯದಲ್ಲಿವೆ.

ಭಾರತೀಯ ಜನತಾ ಪಕ್ಷ ನೇತೃತ್ವದ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂದು ಕೆಲವು ವಿಶ್ಲೇಷಕರು ಹೇಳುತ್ತಾರೆ. ಮಿತ್ರಪಕ್ಷಗಳ ಸಹಾಯವಿಲ್ಲದೆ ಬಿಜೆಪಿ ಏಕಾಂಗಿಯಾಗಿ ಮ್ಯಾಜಿಕ್‌ ನಂಬರ್ 272 ತಲುಪಲು ಯಾವುದೇ ಕಾರಣಕ್ಕೂ ಸಾಧ್ಯವಾಗುವುದಿಲ್ಲ ಎಂದು ಇನ್ನು ಕೆಲವರು ಭವಿಷ್ಯ ನುಡಿದಿದ್ದಾರೆ. ಮತ್ತೆ ಮರಳಿ ಮೋದಿ ನೇತೃತ್ವದ ಸರ್ಕಾರವೇ ಅಧಿಕಾರ ಹಿಡಿಯುತ್ತದೆ ಎಂಬ ವಿಶ್ಲೇಷಣೆಗಳೂ ಇವೆ. ಆದರೇ, ಉಭಯ ಮೈತ್ರಿ ಪಕ್ಷಗಳಿಗೂ ಮತದಾನದ ಪ್ರಮಾಣವು ಕಡಿಮೆಯಾಗಿರುವುದು ಒಳಗೊಳಗೆ ಆತಂಕವನ್ನು ಹೆಚ್ಚಿಸಿದೆ ಮತ್ತು ಎನ್‌ಡಿಎ ಮತ್ತು ʼಇಂಡಿಯಾʼ ಮೈತ್ರಿಕೂಟಗಳ ಬೆಂಬಲಿಗರು ಇದೇ ಕಾರಣಕ್ಕೆ ಫಲಿತಾಂಶದ ವಿಚಾರದಲ್ಲಿ ತುಸು ಗೊಂದಲಕ್ಕೀಡಾಗಿದ್ದಾರೆ. ಈ ನಡುವೆ ದೇಶಾದ್ಯಂತ ಬಿಜೆಪಿಯನ್ನು ಮಣಿಸಲು ಕಸರತ್ತು ನಡೆಸುತ್ತಿರುವ ‘ಇಂಡಿಯಾ’ ಮೈತ್ರಿಕೂಟಕ್ಕೆ ಈ ಲೋಕಸಭಾ ಚುನಾವಣೆ ಬಹುಮುಖ್ಯವಾಗಿದ್ದು, ಹೇಗಾದರೂ ಮಾಡಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂಬ ಪಣ ತೊಟ್ಟಿವೆ.

ಅಯೋಧ್ಯೆಯ ಶ್ರೀರಾಮ ಮಂದಿರದ ಹೆಸರಿನಲ್ಲಿ ಮತ್ತೆ ದೇಶದಾದ್ಯಂತ ಹಿಂದುತ್ವದ ಉನ್ಮಾದ ಸೃಷ್ಟಿಸಿ ಹೆಚ್ಚು ಕ್ಷೇತ್ರಗಳನ್ನು ಗೆಲ್ಲಲು ಯೋಜನೆ ರೂಪಿಸಿದ್ದ ಬಿಜೆಪಿಗೆ ದುರಾದೃಷ್ಟವಶಾತ್‌ ಅಷ್ಟಾಗಿ ರಾಮ ಮಂದಿರದ ವಿಚಾರ ಬಿಜೆಪಿಯ ಕೈಹಿಡಿಯುತ್ತಿಲ್ಲ ಎಂಬಂತೆ ಕಾಣಿಸುತ್ತಿದೆ. ರಾಮ ಮಂದಿರಕ್ಕೆ ಪ್ರತಿಯಾಗಿ ನಿತ್ಯ ಜೀವನೋಪಾಯಕ್ಕೆ ಧಕ್ಕೆ ತಂದ ವಿಷಯಗಳನ್ನೇ ಅಂದರೆ, ನಿರುದ್ಯೋಗ, ಬೆಲೆ ಏರಿಕೆ, ಹಣದುಬ್ಬರ, ಆರ್ಥಿಕ ಬಿಕ್ಕಟ್ಟು, ಆಡಳಿತ ವೈಫಲ್ಯದಂತಹ ವಿಚಾರಗಳನ್ನೇ ಮುನ್ನೆಲೆಗೆ ತಂದಿರುವ ವಿಪಕ್ಷಗಳ ಚುನಾವಣಾ ವಿಷಯವನ್ನಾಗಿಸಿವೆ.

ವಿಪಕ್ಷಗಳ ರಾಜಕೀಯ ಅಸ್ತ್ರ ಬಿಜೆಪಿಗೆ ಅರಗಿಸಿಕೊಳ್ಳಲಾಗದ ತುತ್ತಾಗಿದೆ. ಬಿಜೆಪಿ ಪ್ರತಿನಿಧಿಸುವ ಬಹುತೇಕ ಕ್ಷೇತ್ರಗಳ ರಾಜಕೀಯ ಚಿತ್ರಣವು ಬಿಜೆಪಿ ಸರ್ಕಾರದ ವೈಫಲ್ಯಕ್ಕೆ ಕನ್ನಡಿ ಹಿಡಿದಿದೆ. ಹಾಲಿ ಸಂಸದರ ಬದಲಾವಣೆ, ಆಡಳಿತ ವಿರೋಧಿ ಅಲೆ ಬಿಜೆಪಿಗೆ ನುಂಗಲಾರದ ಬಿಸಿ ತುಪ್ಪದ ಹಾಗೆ ಪರಿಣಮಿಸಿದೆ ಎಂದರೇ ತಪ್ಪಿಲ್ಲ. ಬಿಜೆಪಿಯ ಬಾಯಿ ಮಾತಿನ ಅಭಿವೃದ್ಧಿ ಬಗ್ಗೆ ಮತದಾರರು ಸಹಜವಾಗಿಯೇ ಬೇಸರಗೊಂಡಿದ್ದಾರೆ ಎಂಬ ವಿಪಕ್ಷಗಳ ಪ್ರಚಾರ ಚುನಾವಣೆಯಲ್ಲಿ ಪರಿಣಾಮ ಬೀರಬಹುದು ಕೂಡ. ಮಾತ್ರವಲ್ಲದೆ ಅಭಿವೃದ್ಧಿ ಒಬ್ಬ ನಾಗರಿಕನ ಮೇಲೆ ಸಾಲದ ಹೊರೆ ಹೊರಿಸುವುದಾದರೇ ಅಂತಹ ಅಭಿವೃದ್ಧಿ ಯಾಕೆ ಎಂಬ ಮನಸ್ಥಿತಿ ಮತದಾರರಲ್ಲಿ ಮೂಡಿಸುವಲ್ಲಿ ವಿಪಕ್ಷಗಳು ಯಶಸ್ಸಾಗಿವೆ.

ಈಗಾಗಲೇ ಮತದಾನ ಮುಗಿದಿರುವ ಕ್ಷೇತ್ರಗಳಲ್ಲಿ ಬಿಜೆಪಿಗೆ ಕ್ಷೇತ್ರಗಳು ದೊರೆಯುವುದಿಲ್ಲ ಎಂಬ ಸಮೀಕ್ಷಾ ವರದಿಗಳ ಜೊತೆಗೆ ಬಿಜೆಪಿ ಈ ಬಾರಿಯೂ ಮರಳಿ ಅಧಿಕಾರ ಹಿಡಿಯಲಿದೆ ಎಂಬ ಸಮೀಕ್ಷೆಯೂ ಬಂದಿವೆ. ಪ್ರಧಾನಿ ಮೋದಿ ಮತ್ತೆ ಪ್ರಧಾನಿ ಆಗುವುದಿಲ್ಲ, ಎನ್‌ಡಿಎ ಅಧಿಕಾರಕ್ಕೆ ಬರುವುದಿಲ್ಲ, ಮಿಗಿಲಾಗಿ ಎನ್‌ಡಿಎ ಈ ಬಾರಿ 195 ಸ್ಥಾನಗಳನ್ನೂ ದಾಟುವುದಿಲ್ಲ ಎಂದು ಹಲವಾರು ಸಮೀಕ್ಷೆಗಳು, ರಾಜಕೀಯ ವಿಶ್ಲೇಷಣೆಗಳಿವೆ. ಇದು, ಬಿಜೆಪಿಯಲ್ಲಿ ಆತಂಕ ಹುಟ್ಟಿಸಿದೆ. ಇನ್ನು, 5ನೇ ಹಂತದವರೆಗೆ ಬಿಜೆಪಿ 310 ಕ್ಷೇತ್ರಗಳನ್ನು ಗೆದ್ದಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಈಗಾಗಲೇ ಹೇಳಿಕೊಂಡಿದ್ದಾರೆ. ಇದು ಅವರ ಮತ್ತು ಬಿಜೆಪಿಯ ವಿಶ್ವಾಸವೇ ಅಂದುಕೊಂಡರೇ, ಈ ನಾಲ್ಕು ಐದು ಹಂತಗಳ ಚುನಾವಣೆಯಲ್ಲಿ ವಿಪಕ್ಷಗಳು ಪ್ರತಿನಿಧಿಸಿದ ಕ್ಷೇತ್ರಗಳ ಕಥೆ ? ಈ ಬಾರಿಯ ಲೋಕಸಭಾ ಚುನಾವಣೆಯಲ್ಲಂತೂ ಹೆಚ್ಚಿನ ಕ್ಷೇತ್ರಗಳಲ್ಲಿ ಬಹಳ ಸುಲಭವಾಗಿ ಬಿಜೆಪಿ ಗೆದ್ದು ಬಿಡುವ ವಾತಾವರಣವೇನೂ ಇಲ್ಲ ಎನ್ನುವುದು ಕೂಡ ಇಲ್ಲಿ ಮುಖ್ಯಾಂಶ.

ಈ ಚುನಾವಣೆಯಲ್ಲಿ ಬಿಜೆಪಿ ಸೋಲಬಹುದು ಎಂದು ನಂಬುವ ವರ್ಗ ಸಾಮಾನ್ಯವಾಗಿ 2004 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರ ಪಡೆದ ಜನಾದೇಶವನ್ನು ಉಲ್ಲೇಖಿಸುತ್ತಾರೆ. ಇನ್ನು, ಬಹುತೇಕ ಎಲ್ಲಾ ಎಕ್ಸಿಟ್ ಪೋಲ್‌ಗಳು ಸಾರ್ವಜನಿಕ ಚಿತ್ತವನ್ನು ಅಳೆಯಲು ವಿಫಲವಾಗಿವೆ. ವೈಜ್ಞಾನಿಕ ತಂತ್ರಗಳ ಮೂಲಕ ನಡೆಸಿದ ಸಮೀಕ್ಷೆಗಳು ತಪ್ಪಾಗಬಹುದಾದರೆ, ಅವೈಜ್ಞಾನಿಕ ಮಾದರಿ ವಿಧಾನಗಳ ಆಧಾರದ ಮೇಲೆ ಮತ್ತು ಕ್ಷೇತ್ರದಲ್ಲಿ ಸಂಗ್ರಹಿಸಿದ ಪ್ರತಿಕ್ರಿಯೆ ಗ್ರೌಂಡ್‌ ರಿಪೋರ್ಟ್‌ಗಳು ಸಹ ತಪ್ಪುದಾರಿಗೆಳೆಯಬಹುದು. ಯಾಕೆಂದರೆ ಇಂತಹ ಸ್ಥಳೀಯ ಸಮೀಕ್ಷಾ ವರದಿಗಳು ಸಾಮಾನ್ಯವಾಗಿ ಚುನಾವಣೆಗಳನ್ನು ‘ಪಿಚ್ಡ್ ಕದನಗಳು’ ಎಂದು ಬಿಂಬಿಸುತ್ತವೆ, ಪ್ರತಿ ಕ್ಷೇತ್ರದಲ್ಲಿ ಆಯಾಯ ಅಭ್ಯರ್ಥಿಯ ಅಥವಾ ಪಕ್ಷದ ಬೆಂಬಲಿಗರು ಗೆಲುವು ತಮ್ಮದೇ ಎಂದು ಹೇಳಿಕೊಳ್ಳುತ್ತಾರೆ. ಹೀಗೆ ಸಂಗ್ರಹವಾದ ಅಭಿಪ್ರಾಯಗಳಿಂದ ಬಂದ ಸಮೀಕ್ಷಾ ವರದಿಗಳನ್ನು ಸುಳ್ಳು ಮಾಡಿದ ಚುನಾವಣೆಗಳು ಅದೆಷ್ಟೋ ಆಗಿ ಹೋಗಿವೆ ಎನ್ನುವುದು ಇಲ್ಲಿ ಉಲ್ಲೇಖಾರ್ಹ.

ಕೆಲವು ಡೇಟಾವನ್ನು ಗಮನಿಸೋಣ. 1999ರ ಸಾರ್ವತ್ರಿಕ ಚುನಾವಣೆಯಲ್ಲಿ, ಬಿಜೆಪಿ ಶೇ.24ರಷ್ಟು ಮತಗಳ ಹಂಚಿಕೆಯೊಂದಿಗೆ 182 ಕ್ಷೇತ್ರಗಳನ್ನು ಗೆದ್ದಿತು, ಆದರೆ ಕಾಂಗ್ರೆಸ್ ಶೇ.28ರಷ್ಟು ಮತಗಳ ಹಂಚಿಕೆಯೊಂದಿಗೆ 114 ಕ್ಷೇತ್ರಗಳನ್ನು ಗೆದ್ದಿತು. ಎರಡೂ ಪಕ್ಷಗಳ ಮತ ಹಂಚಿಕೆಗಳ ನಡುವಿನ ಅಂತರ ಕೇವಲ 4 ಶೇಕಡಗಳಷ್ಟಿದ್ದರೂ, ಎನ್‌ಡಿಎ ಮಿತ್ರಪಕ್ಷಗಳ ಬೆಂಬಲದೊಂದಿಗೆ ಬಿಜೆಪಿ ಸರ್ಕಾರ ರಚಿಸುವಲ್ಲಿ ಯಶಸ್ವಿಯಾಯಿತು.

2004ರ  ಸಾರ್ವತ್ರಿಕ ಚುನಾವಣೆಯಲ್ಲಿ, ಬಿಜೆಪಿ ಶೇ.22ರಷ್ಟು ಮತ ಹಂಚಿಕೆಯೊಂದಿಗೆ 138 ಕ್ಷೇತ್ರಗಳನ್ನು ಗೆದ್ದುಕೊಂಡಿತು, ಆದರೆ ಕಾಂಗ್ರೆಸ್ ಶೇ.27ರಷ್ಟು ಮತ ಹಂಚಿಕೆಯೊಂದಿಗೆ 145 ಕ್ಷೇತ್ರಗಳನ್ನು ಗೆದ್ದಿತ್ತು. ಕಾಂಗ್ರೆಸ್ ತನ್ನ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) ಮಿತ್ರಪಕ್ಷಗಳೊಂದಿಗೆ ಸರ್ಕಾರವನ್ನು ರಚಿಸಿತು. ‘ಭಾರತ ಪ್ರಕಾಶಿಸುತ್ತಿದೆ'(ಇಂಡಿಯಾ ಶೈನಿಂಗ್) ಪ್ರಚಾರದ ಹೊರತಾಗಿಯೂ ಬಿಜೆಪಿ ಆಘಾತಕಾರಿ ಸೋಲನ್ನು ಕಾಣಬೇಕಾಯಿತು. 1999 ರಲ್ಲಿ, ಬಿಜೆಪಿ ಗಳಿಸಿದ ಕ್ಷೇತ್ರಗಳಲ್ಲಿ ಸರಾಸರಿ ಮತ ಹಂಚಿಕೆ ಮತ್ತು ಗೆಲುವಿನ ಅಂತರ(60,000) ಹೇಳುವಷ್ಟೇನು ದೊಡ್ಡದ್ದಾಗಿರಲಿಲ್ಲ. ಇದೇ ಕಾರಣದಿಂದಾಗಿ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ ವಿರುದ್ಧ ಬಿಜೆಪಿ ಸೋಲು ಕಾಣಬೇಕಾಯಿತು.

2019 ರಲ್ಲಿ, ಬಿಜೆಪಿಯ ಜಯಸಾಧಿಸಿದ ಕ್ಷೇತ್ರಗಳಲ್ಲಿ ಸರಾಸರಿ ಗೆಲುವಿನ ಅಂತರ ಸುಮಾರು 2.32 ಲಕ್ಷ ಮತಗಳು ಆಗಿತ್ತು ಎನ್ನುವುದು ಇಲ್ಲಿ ಉಲ್ಲೇಖಾರ್ಹ. ಇದೇ ಧೈರ್ಯದಲ್ಲಿ ಬಿಜೆಪಿ ಮರಳಿ ಅಧಿಕಾರ ಹಿಡಿಯುವ ವಿಶ್ವಾಸದಲ್ಲಿದೆ. ಆದರೇ 2024ರ ಅಂದರೇ ಈ ಸುತ್ತಿನ ಚುನಾವಣೆಯಲ್ಲಿಯೂ, ಆಡಳಿತ ವಿರೋಧಿ ಅಲೆಯ ನಡುವೆಯೂ ಮತ್ತು ವಿಪಕ್ಷಗಳ ಗೆಲ್ಲುವ ವಿಶ್ವಾಸ ಮಟ್ಟ ಹೆಚ್ಚಿರುವುದರ ನಡುವೆ ಕಳೆದ ಚುನಾವಣೆಯಲ್ಲಿ ಗಳಿಸಿದ ದೊಡ್ಡ ಅಂತರವನ್ನು ಬಿಜೆಪಿ ಪಡೆಯಬಹುದೇ ? ಪ್ರಶ್ನೆ ಮುಂದಿದೆ.

1984 ರ ಚುನಾವಣೆಯಲ್ಲಿ, ರಾಜೀವ್‌ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ 414 ಕ್ಷೇತ್ರಗಳನ್ನು ಗೆದ್ದರೂ, 1989 ರ ಚುನಾವಣೆಯಲ್ಲಿ ಸೋಲನುಭವಿಸಿತ್ತು. ಗಮನಾರ್ಹವಾಗಿ, 1984 ರಲ್ಲಿ ಇಂದಿರಾ ಗಾಂಧಿಯವರ ಹತ್ಯೆಯ ಕಾರಣದಿಂದ ಕಾಂಗ್ರೆಸ್‌ ಪರವಾದ ಅನುಕಂಪದ ಅಲೆ ಸೃಷ್ಟಿಯಾಗಿತ್ತು. ಮುಂದಿನ ಚುನಾವಣೆಯ ಹೊತ್ತಿಗೆ ಅದು ಕ್ಷೀಣಿಸಿತು ಮತ್ತು ಗಾಂಧಿ ಕುಟುಂಬದ ವಿರುದ್ಧದ ಬೋಫೋರ್ಸ್ ಹಗರಣ ಮತ್ತು ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿತ್ತು, ಕಾಂಗ್ರೆಸ್‌ ಸೋಲೊಪ್ಪಿಕೊಳ್ಳಬೇಕಾಯ್ತು. ಉಳಿದಿದ್ದು ಗೊತ್ತೇ ಇದೆ.

ಆದರೇ, ಭಾರತದಲ್ಲಿ ಇಂದು ರಾಜಕೀಯ ವಾತಾವರಣ 1984 ಅಥವಾ 2004 ಅಥವಾ 2019ರ ಲೋಕಸಭಾ ಚುನಾವಣೆಯಂತೆಯೇ ಇದೆಯೇ? ನೀವೂ ಯೋಚಿಸಿ.

-ಶ್ರೀರಾಜ್‌ ವಕ್ವಾಡಿ

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!