Sunday, September 8, 2024

ವಿಧಾನಪರಿಷತ್ ಚುನಾವಣೆ ಮತ್ತು ಮತದಾರರ ಪಟ್ಟಿ ತಯಾರಿ ಅತ್ಯಂತ ಅವೈಜ್ಞಾನಿಕ ಕ್ರಮ

ವಿಧಾನಪರಿಷತ್ ಎನ್ನುವ ಮೇಲ್ಮನೆ ಬೇಕೊ ಬೇಡವೊ ಎನ್ನುವ ಚರ್ಚೆಯ ಕಾಲ ಘಟ್ಟದಲ್ಲಿ ಇರುವಾಗಲೇ ಇಂದಿನ ವಿಧಾನಪರಿಷತ್ ಮತದಾರರ ನೊಂದಾಣಿ ಅಂಕೆ ಸಂಖ್ಯೆ ನೇೂಡುವಾಗ ಇಂತಹ ಕನಿಷ್ಠ ಸಂಖ್ಯೆಯಲ್ಲಿರುವ ಮತದಾರರಿಗೂ ಸದನದಲ್ಲಿ ಪ್ರಾತಿನಿಧ್ಯ ನೀಡಬೇಕೆನ್ನುವ ಪ್ರಶ್ನೆ ಸಹಜವಾಗಿ ಹುಟ್ಟಿಕೊಳ್ಳುವಂತಾಗಿದೆ.

ವಿಧಾನಪರಿಷತ್  ಶಿಕ್ಷಕರ ಕ್ಷೇತ್ರದಲ್ಲಿ ತೀರ ಕಡಿಮೆ ಅಂದರೆ 20 ಸಾವಿರದಿಂದ 25 ಸಾವಿರದೊಳಗೆ ಮತದಾರರು ತಮ್ಮ  ಹೆಸರನ್ನು ನೊಂದಾಯಿಸಿಕೊಂಡಿದ್ದಾರೆ ಅಂದರೆ ಇಲ್ಲಿ ಹತ್ತು  ಹಲವು ಪ್ರಶ್ನೆಗಳು  ಹುಟ್ಟಿ ಕೊಳ್ಳುತ್ತದೆ. ಹಾಗಾದರೆ ಸರಿ ಸುಮಾರು 32 ವಿಧಾನಸಭಾ ವ್ಯಾಪ್ತಿಯಲ್ಲಿ ಅಂದರೆ ಐದು ಜಿಲ್ಲೆಗಳ ವ್ಯಾಪ್ತಿಯಲ್ಲಿ ಕೇವಲ ಇಪ್ಪತ್ತೈದು ಸಾವಿರ ಅರ್ಹ ಶಿಕ್ಷಕರು ಮಾತ್ರ ಅರ್ಹ ಮತದಾರರೇ ? ಅಥವಾ ಉಳಿದ ಸಾವಿರಾರು ಶಿಕ್ಷಕರು ಅಥವಾ ಪದವಿಧರರು ಹೆಸರು ನೊಂದಾಯಿಸಿಕೊಂಡಿಲ್ಲವೇ? ಹಾಗಾದರೆ ಇವರನ್ನು ಮತದಾರರ ಪಟ್ಟಿಯಲ್ಲಿ ನೊಂದಾಯಿಸಬೇಕಾದ ಜವಾಬ್ದಾರಿ ಯಾರದು ? ಚುನಾವಣಾ ಆಯೇೂಗದ ಜವಾಬ್ದಾರಿಯೇ ? ಅಥವಾ ಇಂದು ನಡೆಯುತ್ತಿರುವ ಹಾಗೆ ಯಾರು ಚುನಾವಣೆಗೆ ಸ್ಪರ್ಧೆ ಮಾಡುತ್ತಾರೊ ಅವರ ಜವಾಬ್ದಾರಿಯೇ? ಈ ರೀತಿಯಲ್ಲಿ ಮತದಾರರ ಪಟ್ಟಿ ತಯಾರಿಸಿ ಅವರವರ ಅನುಕೂಲದ ದೃಷ್ಟಿಯಿಂದ ಮತದಾರರ ಪಟ್ಟಿ ತಯಾರಿಸಿ ಮತದಾರರನ್ನು ಮತ ಕಟ್ಟೆಗೆ ಅವರೇ ಎಳೆದು ತಂದು ಮತದಾನ ಮಾಡಬೇಕಾಗಿದೆ ಎನ್ನುವ ಪರಿಸ್ಥಿತಿ ಬರುವುದಾದರೆ ಇಂತಹ ಚುನಾವಣೆಯಾಗಲಿ ವಿಧಾನಪರಿಷತ್ ಆಗಲಿ ನಮಗೆ ಬೇಕಾ? ಗೆದ್ದು ಬಂದು ಸಕಲ ಸವಲತ್ತುಗಳು ಅನುಭವಿಸಲು ನಮ್ಮ ರಾಜಕೀಯ  ಪಕ್ಷಗಳು ಮತ್ತು ರಾಜಕಾರಣಿಗಳು ಅವರ ಅನುಕೂಲಕ್ಕೆ ಮಾಡಿಕೊಂಡಿರುವ ಸದನ ಎನ್ನುವ ಅಪಖ್ಯಾತಿಗೆ ಒಳಗಾದರೂ ಆಶ್ಚರ್ಯ ಪಡಬೇಕಾಗಿಲ್ಲ.

ಪದವಿಧರರ ಮತದಾರರ ಪಟ್ಟಿಯನ್ನು ಪ್ರತಿ ಐದು ವರುಷಕ್ಕೊಮ್ಮೆ ಹೊಸದಾಗಿ ತಯಾರಿಸುವ ಕ್ರಮವಿದೆಯೇ ಹೇಗೆ? ಗೊತ್ತಿಲ್ಲ ? ಯಾಕೆಂದರೆ ಕಳೆದ ಚುನಾವಣಾ ಕಾಲದಲ್ಲಿ  ನೊಂದಾಯಿಸಿಕೊಂಡ ಪದವಿಧರರ ಹೆಸರು ಈ ಬಾರಿ ಇಲ್ಲ ಅಂದರೆ ಕಥೆ ಏನು ? ಶಿಕ್ಷಕರ ಕ್ಷೇತ್ರದಲ್ಲಿ ಸ್ವಲ್ಪ ಸಮಸ್ಯೆ ಬರಬಹುದು ನಿವೃತ್ತರಾಗುವವರ ಸಂಖ್ಯೆ ಜಾಸ್ತಿ ಇರುವ ಕಾರಣ. ಹಾಗಾಗಿ  ಪರಿಷ್ಕರಣೆ ಮಾಡಬೇಕಾದ ಅನಿವಾರ್ಯತೆ ಇದೆ. ಇದಕ್ಕೂ ವ್ಯವಸ್ಥೆ ಮಾಡಬಹುದು ಆದರೆ ನಮ್ಮ ಚುನಾವಣಾ ಆಯೇೂಗಕ್ಕೆ ಚುನಾವಣೆ ಮಾಡುವಷ್ಟು ಇರುವ ಸಿರಿಯಸ್ ನೆಸ್..ಮತದಾರರ ಪಟ್ಟಿ  ತಯಾರಿಸುವಲ್ಲಿ  ಇಲ್ಲ ಎನ್ನುವುದು ಮೊದಲಿನಿಂದಲೂ ಕೇಳಿ ಬಂದ ಟೀಕೆಯೂ ಹೌದು. ಆದರೆ ಇಲ್ಲಿ ಒಬ್ಬ ಪದವಿಧರ ಮತದಾರ ಪದವಿಗಳಿಸಿದ ಅರ್ಹ ತರದಲ್ಲಿ ಮತದಾರರ ಪಟ್ಟಿಗೆ ಸೇರಿರುವಾಗ ಮತ್ತೆ ಪದೇ ಪದೇ ಆತ ನೊಂದಾಯಿಸಿಕೊಳ್ಳುವ ಅಗತ್ಯತೆ ಏನಿದೆ. ಗಳಿಸಿದ ಡಿಗ್ರಿ ಬದಲಾಗುವುದಿಲ್ಲ ತಾನೆ?. ಹೊಸದಾಗಿ ಸೇರಿಸಿಕೊಳ್ಳುವ ಪದವಿಧರರಿಗೆ ಆಯಾಯ ಕಾಲೇಜುಗಳಲ್ಲಿ  ಕೂಡಾ ಇದಕ್ಕೆ ವ್ಯವಸ್ಥೆ ಕಲ್ಪಿಸಿಕೊಡಬಹುದು ಅದನ್ನು ಕೂಡಾ ಚುನಾವಣಾ ಆಯೇೂಗ ಮಾಡಬಹುದು. ಆದರೆ ಮಾಡದೆ ಉಳಿಯುವುದು ದುರಂತ. ಇದನ್ನು  ಕೂಡ ಚುನಾವಣೆಗೆ ನಿಂತ ಅಭ್ಯರ್ಥಿಗಳ ಕೈಯಿಂದಲೇ ಮಾಡುವ ಚಿಂತನೆಯಲ್ಲಿ ಚುನಾವಣಾ ಆಯೇೂಗವಿದೆ. ಇದು ನಮ್ಮ ಪ್ರಜಾಪ್ರಭುತ್ವದ ದುರಂತ.

ಅದೇ ರೀತಿಯಲ್ಲಿ ಶಿಕ್ಷಕರ ಕ್ಷೇತ್ರದಲ್ಲಿ ಮತದಾರರಾಗುವ ಎಲ್ಲಾ ಅರ್ಹತೆಯನ್ನು ಹೊಂದಿರುವ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಯಾಕೆ ಅರ್ಹತೆ ನೀಡಬಾರದು. ಕೇವಲ ಹೈಸ್ಕೂಲು ಪದವಿ ಪೂರ್ವ ಪದವಿ ಕಾಲೇಜು ತಾಂತ್ರಿಕ ಕಾಲೇಜಿನ ಶಿಕ್ಷಕರಿಗೆ ಮಾತ್ರ ಮತದಾರರಾಗುವ ಅವಕಾಶ ಕೊಟ್ಟಿರುವ  ಹಿಂದಿನ ಗುಟ್ಟಿನ ಕಥೆ ಏನು ? ನಾನು ತಿಳಿದ ಪ್ರಕಾರ ಇದರ ಹಿಂದೊಂದು  ರಾಜಕಾರಣಿಗಳ ಬುದ್ಧಿವಂತಿಕೆಯೂ ಇದೆ. ಅದೇನೆಂದರೆ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಮತದಾರರಾಗಿ ಸೇರಿಸಿ ಬಿಟ್ಟರೆ ಅವರೇ ಚುನಾವಣೆಗೆ ಸ್ಪರ್ಧಿಸಿದರೆ ತಮಗೆ ಸುಲಭವಾಗಿ ಸಿಗುವ ಅವಕಾಶ ಕೈ ತಪ್ಪಿಹೇೂಗುವ ಪರಿಸ್ಥಿತಿ  ಖಂಡಿತವಾಗಿಯೂ ಬರುತ್ತದೆ ಎನ್ನುವ ಭೀತಿ ನಮ್ಮ ಎಲ್ಲಾ ರಾಜಕೀಯ ಪಕ್ಷ ಗಳ ಧುರೀಣರಲ್ಲೂ ಇದೆ. ಆದ ಕಾರಣ ಕಡಿಮೆ ಸಂಖ್ಯೆಯಲ್ಲಿ ಇರುವ ಕಾಲೇಜಿನ ಶಿಕ್ಷಕರನ್ನೆ ಮತದಾರರನಾಗಿ ಬಿಟ್ಟರೆ ನಿರಾಯಾಸವಾಗಿ ಪರಿಷತ್ತಿನಲ್ಲಿ ಶಾಸಕರಾಗಿ ಸಂಬಳ, ಸಾರಿಗೆ, ಭತ್ಯೆ ಪಿಂಚಣಿ ಒಂದೇ ಎರಡೇ.. ಅದೃಷ್ಟ ಖುಲಾಯಿಸಿದರೆ ಸಚಿವರು ಆಗ ಬಹುದು ಎನ್ನುವ ಮಹಾದಾಸೆಯಲ್ಲಿರುವ ರಾಜಕಾರಣಿಗಳನ್ನು ಪ್ರಬುದ್ಧ ಮತದಾರರು ಎನ್ನುವ ಪೀಠ ಅಲಂಕರಿಸಿರುವ ಶಿಕ್ಷಕರಿಗಾಗಲಿ ಪದವಿಧರರಿಗಾಗಲಿ ಕಟ್ಟಿ ಹಾಕಲು ಸಾಧ್ಯವಿಲ್ಲ ಎನ್ನುವುದೇ ಪರಿಷತ್ತಿಗೆ ನಡೆಯುವ ಮಹಾ ಪವಿತ್ರ ಚುನಾವಣಾ ನೀತಿ ಎಂದರೂ ತಪ್ಪಾಗಲಾರದು.

ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!