Wednesday, September 11, 2024

ದಕ್ಷಿಣ ಭಾರತದಲ್ಲಿ ‘ಮಿಷನ್ 50’ ಬೆನ್ನೇರಿದ ಬಿಜೆಪಿ

ಹಿರಿಗೌಡರ ಮೈತ್ರಿಯಿಂದ ಕರ್ನಾಟಕದಲ್ಲಿ ಬಿಜೆಪಿಗೆ ನಷ್ಟ, ಕಾಂಗ್ರೆಸ್‌ಗೆ ಲಾಭ !

ಲೋಕಸಭಾ ಚುನಾವಣೆಯ ವಿಚಾರಕ್ಕೆ ಬಂದರೇ ದಕ್ಷಿಣ ಭಾರತ ಮಹತ್ವ ಕಂಡುಕೊಳ್ಳುವುದು ಸಹಜ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷಕ್ಕೂ ಹಾಗೂ ಅಧಿಕಾರದಲ್ಲಿ ಇಲ್ಲದೇ ಇರುವ ಪಕ್ಷಕ್ಕೂ ದಕ್ಷಿಣ ಭಾರತದ ರಾಜ್ಯಗಳು ಮಹತ್ತರವಾದದ್ದನ್ನು ನೀಡಿವೆ, ಮತ್ತು ಮಹತ್ವದ ರಾಜ್ಯಗಳು ಕೂಡ ಎನ್ನುವುದು ಇದರ ಒಳಾರ್ಥ.

ಈ ಭಾರಿಯ ಲೋಕಸಭಾ ಚುನಾವಣೆ ಸನ್ನಿಹಿತವಾಗುತ್ತಿದ್ದು, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತು ವಿರೋಧ ಪಕ್ಷಗಳ ಮೈತ್ರಿಕೂಟ ʼಇಂಡಿಯಾʼ ಬಣ ದಕ್ಷಿಣ ಭಾರತದಿಂದ ತಮ್ಮ ಪರವಾಗಿ ಬರುವ ಲೋಕಸಭಾ ಕ್ಷೇತ್ರಗಳ ಮೇಲೆ ವಿಶೇಷವಾದ ಕಣ್ಣಿಟ್ಟಿವೆ. ಸಹಜವಾಗಿ ದಕ್ಷಿಣ ಭಾರತದಿಂದ ತಮಗಾಗುವ ಲೋಕಸಭಾ ಕ್ಷೇತ್ರಗಳನ್ನು ವಿಶೇಷ ಗೌರವದಿಂದ ಉಭಯ ಮೈತ್ರಿ ರಾಜಕೀಯ ಪಕ್ಷಗಳು ಕಾಣುತ್ತವೆ. ಅದು ಲೋಕಸಭಾ ಚುನಾವಣೆಯ ಮಹತ್ವದ ವಿಚಾರ. ಈಗ ಮತ್ತೆ ಲೋಕಸಭಾ ಚುನಾವಣೆ ಸನ್ನಿಹಿತವಾಗುತ್ತಿದೆ. ದಕ್ಷಿಣ ಭಾರತದ ಲೋಕಸಭಾ ಕ್ಷೇತ್ರಗಳ ಮೇಲೆ ಎಲ್ಲಾ ಪಕ್ಷಗಳು ಕಣ್ಣಿಟ್ಟಿವೆ.

ವಿಶೇಷವಾಗಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ಕೇಂದ್ರದಲ್ಲಿ ಸದ್ಯ ಅಧಿಕಾರ ಅನುಭವಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷ (ಬಿಜೆಪಿ) 50 ಕ್ಷೇತ್ರಗಳನ್ನು ಗೆಲ್ಲುವ ಗುರಿಯನ್ನು ಹೊಂದಿದೆ. 2019ರ ಲೋಕಸಭೆ ಚುನಾವಣೆಯಲ್ಲಿ, ಬಿಜೆಪಿ 30 ಕ್ಷೇತ್ರಗಳನ್ನು ಗೆದ್ದಿತ್ತು, ಅದರಲ್ಲಿ 25 ಲೋಕಸಭಾ ಕ್ಷೇತ್ರಗಳು ಕರ್ನಾಟಕದ ಲೋಕಸಭಾ ಕ್ಷೇತ್ರಗಳೇ ಆಗಿದ್ದವು ಎನ್ನುವುದು ಇಲ್ಲಿ ಉಲ್ಲೇಖಾರ್ಹ. ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕ ರಾಜ್ಯವನ್ನು ಬಿಜೆಪಿಯ ಭದ್ರಕೋಟೆ ಎಂದು ಪರಿಗಣಿಸಲಾಗಿದೆ. 2004ರಿಂದ 2019ರವರೆಗಿನ ನಾಲ್ಕು ಚುನಾವಣೆಗಳಲ್ಲಿ ಪಕ್ಷವು ಅಲ್ಲಿ ಗರಿಷ್ಠ ಸಂಖ್ಯೆಯ ಕ್ಷೇತ್ರಗಳನ್ನು ಗೆದ್ದುಕೊಂಡಿದೆ ಮತ್ತು ನಿರಂತರವಾಗಿ ಕಾಂಗ್ರೆಸ್‌ಗಿಂತ ಉತ್ತಮ ಸ್ಥಾನದಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಣಿಸಿಕೊಂಡಿದೆ.

ಸದ್ಯ ಹಿರಿಗೌಡರ ಪಕ್ಷದೊಂದಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಬಹಳ ವಿಶ್ವಾಸದಲ್ಲಿದೆಯಾದರೂ, ಈ ಭಾರಿ ಕರ್ನಾಟಕದಲ್ಲಿ ಭಾರಿ ನಷ್ಟ ಅನುಭವಿಸಲಿದೆ ಎಂದೇ ರಾಜಕೀಯ ವಿಶ್ಲೇಷಣೆಗಳಿವೆ. ಇನ್ನೊಂದೆಡೆ ದೇವೇಗೌಡರ ಜನತಾ ದಳ(ಜಾತ್ಯತೀತ) 2024ರಲ್ಲಿ ರಾಜ್ಯವನ್ನು ಮತ್ತೊಮ್ಮೆ ಕ್ಲೀನ್‌ ಸ್ವೀಪ್‌ ಮಾಡಲು ಸಹಾಯ ಮಾಡಲಿದೆ ಎಂದು ಹೇಳಲಾಗುತ್ತಿದೆಯಾದರೂ, ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳು ಜೆಡಿಎಸ್‌-ಬಿಜೆಪಿ ಮೈತ್ರಿಗೆ ಮರ್ಮಾಘಾತ ಉಂಟು ಮಾಡಲಿದೆ ಎಂಬ ವಿಶ್ಲೇಷಣೆಯೂ ಇದೆ.  ಇನ್ನು, ಆಂಧ್ರಪ್ರದೇಶದಲ್ಲಿ ತೆಲುಗು ದೇಶಂ ಪಕ್ಷ (ಟಿಡಿಪಿ) ಮತ್ತು ಜನಸೇನೆಯೊಂದಿಗೆ ಪಕ್ಷ, ಪಟ್ಟಾಲಿ ಮಕ್ಕಳ್ ಕಚ್ಚಿ (ಪಿಎಂಕೆ), ಮಾಜಿ ಮುಖ್ಯಮಂತ್ರಿ ಮತ್ತು ಈಗ ಉಚ್ಚಾಟಿತ ಎಐಎಡಿಎಂಕೆ ನಾಯಕ ಪನ್ನೀರಸೆಲ್ವಂ ಮತ್ತು ತಮಿಳುನಾಡಿನ ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ(ಎಎಂಎಂಕೆ), ಮತ್ತು ತೆಲಂಗಾಣ ಮತ್ತು ಕೇರಳದಲ್ಲಿ ಇತರ ಪಕ್ಷಗಳ ಹೊಸ ಸೇರ್ಪಡೆ ಸಹಾಯದಿಂದ ಸಣ್ಣ ಮಟ್ಟಿಗಿನ ಲಾಭಗಳು ಬಿಜೆಪಿಗೆ ದಕ್ಷಿಣ ಭಾರತದಲ್ಲಿ ‘ಮಿಷನ್ 50’ ಸಾಧಿಸಲು ಸಹಾಯ ಮಾಡಬಹುದು ಎಂದು ಹೇಳಲಾಗುತ್ತಿದೆ. ಆದರೇ, ಕರ್ನಾಟಕದಲ್ಲೇ ಈ ಬಾರಿ ನಿರೀಕ್ಷೆ ಸುಳ್ಳಾಗಬಹುದು ಎಂದು ಹೇಳಲಾಗುತ್ತಿದೆ.

ಕರ್ನಾಟಕದಲ್ಲಿ ಬಿಜೆಪಿ ಟಿಕೆಟ್ ಘೋಷಣೆ ಬಳಿಕ ಉಂಟಾದ ಅಸಮಾಧಾನ, ಜೆಡಿಎಸ್‌ ಜೊತೆಗಿನ ಮೈತ್ರಿ ಪ್ರಕ್ಷುಬ್ಧತೆಯನ್ನು ಎದುರಿಸುತ್ತಿದೆ. ಮತ್ತು ಕಾಂಗ್ರೆಸ್ ಸರ್ಕಾರ ತನ್ನ ʼಗ್ಯಾರಂಟಿʼ ಭರವಸೆಗಳನ್ನು ಅನುಷ್ಠಾನಗೊಳಿಸಿರುವುದು ಚುನಾವಣೆಯಲ್ಲಿ ಮತದಾರರನ್ನು ಸೆಳೆಯಬಹುದು ಎನ್ನಲಾಗಿದೆ. ಮತ್ತು ಬಿಜೆಪಿ ಮೇಲಿನ ಸಿಟ್ಟಿನಿಂದ ಜೆಡಿಎಸ್‌ ಅನ್ನು ಬೆಂಬಲಿಸುತ್ತಿದ್ದ ಮತದಾರರು (ಮುಸ್ಲೀಮರನ್ನೂ ಒಳಗೊಂಡು) ಕಾಂಗ್ರೆಸ್‌ ಕಡೆ ವಾಲಿದರೇ ಬಿಜೆಪಿ-ಜೆಡಿಎಸ್‌ ಮೈತ್ರಿಗೆ ಆಘಾತ ಉಂಟಾಗುವುದು ನಿಶ್ಚಿತ.

2019ರ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ 25 ಕ್ಷೇತ್ರಗಳನ್ನು ಗೆದ್ದರೆ, ಕಾಂಗ್ರೆಸ್(ಬೆಂಗಳೂರು ಗ್ರಾಮಾಂತರ) ಮತ್ತು ಜೆಡಿಎಸ್ (ಹಾಸನ) ಮತ್ತು ಸ್ವತಂತ್ರ ಅಭ್ಯರ್ಥಿ(ಮಂಡ್ಯ) ತಲಾ ಒಂದು ಕ್ಷೇತ್ರವನ್ನು ಗೆದ್ದಿದ್ದಾರೆ. ಆಗ ಮೈತ್ರಿಕೂಟದಲ್ಲಿದ್ದ ಜೆಡಿಎಸ್ ಮತ್ತು ಕಾಂಗ್ರೆಸ್ ಕ್ರಮವಾಗಿ ಶೇ.9.7 ಮತ್ತು ಶೇ.31.9 ಮತಗಳನ್ನು ಗಳಿಸಿವೆ. ಇದಕ್ಕೆ ವ್ಯತಿರಿಕ್ತವಾಗಿ ಬಿಜೆಪಿ ಶೇ.51.4ರಷ್ಟು ಮತಗಳನ್ನು ಗಳಿಸಿತ್ತು. ಮೊದಲ ಬಾರಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದ ಜೆಡಿಎಸ್ 7 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರೆ, ಕಾಂಗ್ರೆಸ್ 21 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ನಿಲ್ಲಿಸಿತ್ತು. ಕೆಲವು ಕ್ಷೇತ್ರಗಳ ಅಭ್ಯರ್ಥಿಗಳನ್ನು ಜೆಡಿಎಸ್‌ಗೆ ಎರವಲಾಗಿ ಕೊಟ್ಟು ಕಣಕ್ಕಿಳಿಸಿತ್ತು.

ಆದಾಗ್ಯೂ, ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ, ಜೆಡಿಎಸ್ ತೀವ್ರ ಸೋಲನ್ನು ಅನುಭವಿಸಿತು. ಹಿರಿಗೌಡರ ಪಕ್ಷ ಒಕ್ಕಲಿಗರಲ್ಲಿಯೂ ಸೇರಿದಂತೆ ಅಲ್ಪಸಂಖ್ಯಾತರ ಬೆಂಬಲವನ್ನು ಕಳೆದುಕೊಂಡಿರುವುದು ಸ್ಪಷ್ಟವಾಗಿ ಕಾಣಿಸಿತ್ತು. ಅಂತಿಮವಾಗಿ ಜೆಡಿಎಸ್ ಕಾಂಗ್ರೆಸ್‌ನಿಂದ ದೂರ ಸರಿಯಲು ಮತ್ತು ಬಿಜೆಪಿಯೊಂದಿಗೆ ಕೈಜೋಡಿಸಲು ನಿರ್ಧರಿಸಿತ್ತು.

ಟಿಕೆಟ್ ವಿತರಣೆಯ ನಂತರ ಅಸಮಾಧಾನ :

ಪ್ರಸ್ತುತ ಸೀಟು ಹಂಚಿಕೆ ಒಪ್ಪಂದದ ಪ್ರಕಾರ ಬಿಜೆಪಿ 25 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದು, ಜೆಡಿಎಸ್ ಮೂರರಲ್ಲಿ (ಕೋಲಾರ, ಹಾಸನ ಮತ್ತು ಮಂಡ್ಯ) ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಚಿತ್ರದುರ್ಗ ಹೊರತುಪಡಿಸಿ ಬಿಜೆಪಿ ತನ್ನ ಎಲ್ಲಾ ಕೋಟಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. 24 ಹೆಸರುಗಳು ಘೋಷಣೆಯಾಗಿದ್ದು, 12 ಹಾಲಿ ಸಂಸದರಿಗೆ ಟಿಕೆಟ್ ನಿರಾಕರಿಸಲಾಗಿದೆ. ಒಬ್ಬ ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಉಡುಪಿಯಿಂದ ಬೆಂಗಳೂರು ಉತ್ತರಕ್ಕೆ ಗೇಟ್‌ ಪಾಸ್ ನೀಡಲಾಗಿದೆ. ಟಿಕೆಟ್ ನಿರಾಕರಿಸಿದ 12 ಸಂಸದರ ಪೈಕಿ ಎಂಟು ಮಂದಿ ಎರಡು ಅವಧಿಗೆ ಸೇವೆ ಸಲ್ಲಿಸಿದ್ದರು ಎನ್ನುವುದು ಉಲ್ಲೇಖಾರ್ಹ.

ತಮ್ಮ ಪುತ್ರ ಕಾಂತೇಶ್ಗೆ ಬಿಜೆಪಿ ಟಿಕೇಟ್‌ ಸಿಕ್ಕಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅಸಮಾಧಾನಗೊಂಡು ಬಂಡಾಯ ಎದ್ದಿದ್ದಾರೆ. “ಕರ್ನಾಟಕದಲ್ಲಿ ವಂಶಾಡಳಿತ ರಾಜಕಾರಣ”ದ ವಿರುದ್ಧ ಪ್ರತಿಭಟನೆಯಾಗಿ, ಯಡಿಯೂರಪ್ಪ ಅವರ ಪುತ್ರ ಬಿ.ವೈ. ರಾಘವೇಂದ್ರ ವಿರುದ್ಧ ಶಿವಮೊಗ್ಗದಿಂದ ಚುನಾವಣೆ ಎದುರಿಸುವುದಕ್ಕೆ ಮುಂದಾಗಿದ್ದಾರೆ. ಹಿಂದುತ್ವ ಪ್ರತಿಪಾದಕರಾದ ಸಿ.ಟಿ. ರವಿ, ಪ್ರತಾಪ್‌ ಸಿಂಹ, ಅನಂತ ಕುಮಾರ್‌ ಹೆಗಡೆ, ಬಸನಗೌಡ ಪಾಟೀಲ್ ಯತ್ನಾಳ್, ಮಾಜಿ ಸಿಎಂ ಸದಾನಂದಗೌಡ ಸೇರಿ ಹಲವರಿಗೆ ಟಿಕೆಟ್ ನಿರಾಕರಿಸಿರುವ ಬಗ್ಗೆ ಹಲವಾರು ಬೆಂಬಲಿಗರು ಅಸಮಾಧಾನ ವ್ಯಕ್ತಪಡಿಸಿದ್ದರು. ಬಿಜೆಪಿಯಲ್ಲಿನ ಈ ಅಸಮಾಧಾನ ಹಾಗೂ ಗೊಂದಲವೂ ಒಂದಿಷ್ಟು ಡ್ಯಾಮೇಜ್‌ ಮಾಡಬಹುದು ಎನ್ನುವ ಲೆಕ್ಕಚಾರವಿದೆ.

ಪ್ರಕ್ಷುಬ್ಧತೆಯಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ :

ಜೆಡಿಎಸ್ ಭದ್ರಕೋಟೆಯಾಗಿರುವ ಮಂಡ್ಯದಲ್ಲಿನ ಸೀಟು ಹಂಚಿಕೆಯ ಗೊಂದಲ. ತೊಡಕು ಹಾಗೂ ಹಾಲಿ ಸಂಸದೆ ಸುಮಲತಾ ಅವರಿಗೆ ಸಿಗದ ಬಿಜೆಪಿ ಟಿಕೇಟ್‌ ಎಲ್ಲವೂ ಇಲ್ಲಿ ಹೊಸದೊಂದು ರಾಜಕೀಯ ಚರ್ಚೆಯನ್ನೇ ಸೃಷ್ಟಿ ಮಾಡಿತ್ತು. ಸುಮಲತಾ ಈಗ ಕುಮಾರಸ್ವಾಮಿ ಅವರಿಗೆ ಬೆಂಬಲಿಸುವುದಾಗಿ ಘೋಷಿಸಿದ್ದಾರೆ. ಆದಾಗ್ಯೂ, ಇಲ್ಲಿ, ಜೆಡಿಎಸ್ ನಾಯಕರು ಬಿಜೆಪಿಯೊಂದಿಗೆ ಅಸಮಾಧಾನಗೊಂಡಿದ್ದಾರೆ. 2007ರಲ್ಲಿ ಅಧಿಕಾರ ಹಂಚಿಕೆ ಒಪ್ಪಂದದಲ್ಲಿ ಯಡಿಯೂರಪ್ಪಗೆ ಸಿಎಂ ಕುರ್ಚಿ ನೀಡಲು ಕುಮಾರಸ್ವಾಮಿ ನಿರಾಕರಿಸಿದ್ದರಿಂದ ಉಭಯ ಪಕ್ಷಗಳ ನಡುವಿನ ವೈಮನಸ್ಸಿನ ಇತಿಹಾಸ ಕೂಡ ಹಲವರ ಮನದಲ್ಲಿ ಇನ್ನೂ ಬೂದಿ ಮುಚ್ಚಿದ ಕೆಂಡದಂತಿದೆ.

ಬಿಜೆಪಿ ಮತ್ತು ಜೆಡಿಎಸ್ ಎರಡರಲ್ಲೂ, ಪಕ್ಷಾಂತರಗೊಂಡು ಜಿಗಿದ ಮತ್ತು ಪೈಪೋಟಿಯ ಇತಿಹಾಸವನ್ನು ಹಂಚಿಕೊಂಡ ಹಲವಾರು ನಾಯಕರು ಇದ್ದಾರೆ. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಮೂಲಕ ಬಿಜೆಪಿಯ ಗುರಿ ದಕ್ಷಿಣ ಕರ್ನಾಟಕ/ಹಳೆ ಮೈಸೂರು ಭಾಗದಲ್ಲಿ ತನ್ನ ಭವಿಷ್ಯವನ್ನು ಭದ್ರಗೊಳಿಸಿಕೊಳ್ಳುವುದೇ ಆಗಿದೆ, ಅಲ್ಲಿ ಎರಡನೆಯ ಪ್ರಭಾವಿ ಸಮುದಾಯ ಎನ್ನಿಸಿಕೊಂಡಿರುವ ಒಕ್ಕಲಿಗ ಸಮುದಾಯದಿಂದ ಹೆಚ್ಚಿನ ಬೆಂಬಲ ಗಳಿಸುವ ಲೆಕ್ಕಚಾರದಲ್ಲಿದೆ.

ಸಿದ್ದರಾಮಯ್ಯ ಸರ್ಕಾರದ ʼಗ್ಯಾರಂಟಿʼಗಳು :

ಕಳೆದ ವರ್ಷ ವಿಧಾನಸಭಾ ಚುನಾವಣೆ ವೇಳೆ ನೀಡಿದ್ದ ಐದು ಭರವಸೆಗಳನ್ನು ಸಿದ್ದರಾಮಯ್ಯ ಸರ್ಕಾರ ಈಗಾಗಲೇ ಜಾರಿಗೊಳಿಸಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್,‌ ಯುವಕರಿಗೆ ನಿರುದ್ಯೋಗ ಭತ್ಯೆ, ಮಹಿಳೆಯರಿಗೆ ನಗದು ಬೆಂಬಲ ಮತ್ತು ಬಿಪಿಎಲ್ (ಬಡತನ ರೇಖೆಗಿಂತ ಕೆಳಗಿರುವ) ಕುಟುಂಬಗಳಿಗೆ ಪ್ರತಿ ತಿಂಗಳು ಉಚಿತ ಅಕ್ಕಿ. ಕಾಂಗ್ರೆಸ್ ಸರ್ಕಾರ ತನ್ನ ಪ್ರಸಕ್ತ ಬಜೆಟ್‌ನಲ್ಲಿ ಈ ಯೋಜನೆಗಳಿಗೆ 50,000 ಕೋಟಿ ಮೀಸಲಿಟ್ಟಿದೆ.

ಈ ಗ್ಯಾರಂಟಿಗಳು ಮಹಿಳೆಯರು ಮತ್ತು ಬಡವರಲ್ಲಿ ವಿಶೇಷವಾಗಿ ಎಸ್‌ಸಿ-ಎಸ್‌ಟಿ ಮತ್ತು ಒಬಿಸಿ ಸಮುದಾಯಗಳು ಮತ್ತು ಅಲ್ಪಸಂಖ್ಯಾತ ಅಥವಾ ‘ಅಹಿಂದ’ ಮತ ಬ್ಲಾಕ್‌ಗಳಲ್ಲಿ ಕಾಂಗ್ರೆಸ್‌ಗೆ ಗಣನೀಯ ಪ್ರಮಾಣದಲ್ಲಿ ಮತಗಳನ್ನು ತಂದುಕೊಡಬಹುದೆಂಬ ನಿರೀಕ್ಷೆ ಕಾಂಗ್ರೆಸ್‌ನಲ್ಲಿದೆ. ಈ ವರ್ಗದ ಮತಗಳು ಕಾಂಗ್ರೆಸ್‌ ಕಡೆಗೆ ವಾಲಿದರೇ ರಾಜ್ಯದಲ್ಲಿ ಹೆಚ್ಚು ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲಬಹುದು ಎನ್ನಲಾಗುತ್ತಿದೆ.

ಬಿಜೆಪಿ-ಜೆಡಿ(ಎಸ್) ವಿರುದ್ಧ ಅಹಿಂದ ಬಲವರ್ಧನೆ :

ಒಬಿಸಿ ವಿರೋಧಿ ಪ್ರಾಬಲ್ಯದ ಬೆಂಬಲವನ್ನು ಕ್ರೋಢೀಕರಿಸುವ ಮೂಲಕ ದೇಶದ ಹಿಂದಿ ಹೃದಯಭಾಗದಲ್ಲಿ ಬಿಜೆಪಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಉದಾಹರಣೆಗೆ, ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಯಾದವರ ವಿರುದ್ಧ ಯಾದವೇತರ ಒಬಿಸಿ ಮತದಾರರನ್ನು ಮತ್ತು ಹರಿಯಾಣ ಮತ್ತು ರಾಜಸ್ಥಾನದಲ್ಲಿ ಜಾಟ್‌ಗಳ ವಿರುದ್ಧ ಇತರೆ ಮತದಾರರನ್ನು ಒಟ್ಟುಗೂಡಿಸಿದೆ. ಈ ಹೆಚ್ಚಿನ ರಾಜ್ಯಗಳಲ್ಲಿ, ಬಿಜೆಪಿಯು ಪ್ರಬಲ ಗುಂಪುಗಳನ್ನು ಮೀರಿಸಿರುವ ಕೆಳ ಅಥವಾ ಅತ್ಯಂತ ಹಿಂದುಳಿದ ಒಬಿಸಿ ಮತದಾರರನ್ನು ಒಟ್ಟುಗೂಡಿಸುವಲ್ಲಿ ಯಶಸ್ವಿಯಾಗಿದೆ.

ಆದರೆ, ಕರ್ನಾಟಕದಲ್ಲಿ ಅಹಿಂದ ಮತದಾರರು ಕಾಂಗ್ರೆಸ್‌ ಪರವಾಗಿ ನಿಂತಿದೆ. ಕಾರಣ, ಇಲ್ಲಿ ಬಿಜೆಪಿಯನ್ನು ಈಗಲೂ ಲಿಂಗಾಯತರು ಮತ್ತು ಪ್ರಭಾವಿ ಮೇಲ್ಜಾತಿ ವಿಭಾಗಗಳನ್ನು ಪ್ರತಿನಿಧಿಸುವ ಪಕ್ಷವಾಗಿ ನೋಡಲಾಗುತ್ತಿದೆ. ಆ ಸಂದರ್ಭದಲ್ಲಿ, ಜೆಡಿ (ಎಸ್) ಜೊತೆಗಿನ ಮೈತ್ರಿಯನ್ನು ಎರಡು ಪ್ರಬಲ ಸಮುದಾಯಗಳಾದ ಲಿಂಗಾಯತರು ಮತ್ತು ಒಕ್ಕಲಿಗರ ನಡುವಿನ ಹಸ್ತಲಾಘವ ಎಂದು ಗ್ರಹಿಸಲಾಗುತ್ತಿದೆ. ಇದು ಎಸ್‌ಸಿ/ಎಸ್‌ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತ ಮತದಾರರನ್ನು ಮತ್ತಷ್ಟು ದೂರವಿಡುವ ಅಪಾಯವನ್ನುಂಟುಮಾಡುತ್ತದೆ ಎಂಬ ಭಾವನೆ ಅಹಿಂದ ಮತದಾರರಲ್ಲಿ ಮೂಡಿದರೇ, ಆ ವರ್ಗದ ಅಷ್ಟೂ ಮತಗಳು ಕಾಂಗ್ರೆಸ್‌ನ ಕಡೆಗೆ ವಾಲಬಹುದು.

ಮೋದಿ ಮತ್ತು ರಾಮಮಂದಿರ :

ಒಂದು ಅಧ್ಯಯನ ವರದಿಯ ಪ್ರಕಾರ ರಾಜ್ಯದ ಪ್ರತಿ ಇಬ್ಬರು ಮತದಾರರಲ್ಲಿ ಒಬ್ಬರು ಬಿಜೆಪಿಯನ್ನು ಬೆಂಬಲಿಸುತ್ತಾರೆ ಎಂದು ಹೇಳಲಾಗಿದೆ. ಈ ಅಅಭಿಪ್ರಾಯ ಮೂಡಿರುವುದು ಸ್ಥಳೀಯ ನಾಯಕತ್ವದ ಕಾರಣಕ್ಕಾಗಿ ಅಲ್ಲ, ಮೋದಿಯ ಕಾರಣಕ್ಕೆ ಎನ್ನುವುದು ಇಲ್ಲಿ ಉಲ್ಲೇಖಾರ್ಹ. ಈ ಅಂಶವು ಮತ್ತೊಮ್ಮೆ ಕರ್ನಾಟಕದಲ್ಲಿ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಬಹುದು ಎಂಬ ನಿರೀಕ್ಷೆ ಬಿಜೆಪಿಯಲ್ಲಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ  28 ಕ್ಷೇತ್ರಗಳಲ್ಲಿ 25 ಕ್ಷೇತ್ರಗಳನ್ನು ಮತ್ತು ಶೇ.50 ರಷ್ಟು ಹೆಚ್ಚಿನ ಮತಗಳನ್ನು ಗಳಿಸುವ ಮೂಲಕ ಬಿಜೆಪಿ ಯಶಸ್ಸು ಸಾಧಿಸಿದೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ರಾಮ ಮಂದಿರ ಲೋಕಾರ್ಪಣೆ ಇಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಎಂದು ಪಕ್ಷ ವಿಶ್ವಾಸದಲ್ಲಿದೆ.

ಒಟ್ಟಿನಲ್ಲಿ, ಈ ಮೇಲಿನ ಎಲ್ಲಾ ಅಂಶಗಳನ್ನು ಗಣನೆಗಿರಿಸಿಕೊಂಡು ಹೆಚ್ಚಿನ ಸಮೀಕ್ಷೆಗಳು ಬಿಜೆಪಿ ಕೆಲವು ಕ್ಷೇತ್ರಗಳಲ್ಲಿ ಸೋಲನುಭವಿಸಬಹುದು ಎಂಬ ಭವಿಷ್ಯ ನುಡಿದಿವೆ. ಈ ಚುನಾವಣೆ  ಹಲವು ಕೌತುಕಗಳಿಗೆ ಕಾರಣವಾಗಬಹುದು, ಕೆಲವು ನಿರೀಕ್ಷೆಗಳು ಸುಳ್ಳಾಗಬಹುದು ಎಂಬ ಮಾತುಗಳಿವೆ. ಕಾದು ನೋಡುವ.

-ಶ್ರೀರಾಜ್‌ ವಕ್ವಾಡಿ 

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!