spot_img
Saturday, December 7, 2024
spot_img

ಉಡುಪಿ ಲೋಕಸಭಾ ಚುನಾವಣೆ : ಸಜ್ಜನ ಅಭ್ಯರ್ಥಿಗಳ ಮುಖಾಮುಖಿ ಕಣ

ಈ ಬಾರಿಯ ಉಡುಪಿ ಚಿಕ್ಕಮಗಳೂರು ಲೋಕಸಭಾ ಚುನಾವಣೆಯ ಕಣ ಭಾರಿ ದೊಡ್ಡ ಮಟ್ಟದ ಕುತೂಹಲವನ್ನು ಸೃಷ್ಟಿಸಿದೆ. ಕಾಂಗ್ರೆಸ್‌ ಹಾಗೂ ಬಿಜೆಪಿ ವಲಯದಲ್ಲಿ ಪಾಲಿಟಿಕಲ್‌ ವೈಬ್‌ ನಿರೀಕ್ಷೆಗೂ ಮೀರಿ ಇದ್ದು, ಉಭಯ ಪಕ್ಷಗಳ ಅಭ್ಯರ್ಥಿಗಳು ಚುನಾವಣೆಗೆ ಅಹರ್ನಿಶಿ ಪ್ರಯತ್ನದಲ್ಲಿದ್ದಾರೆ. ಉಡುಪಿ ಜಿಲ್ಲೆಯ ಐದು ವಿಧಾನ ಸಭಾ ಕ್ಷೇತ್ರಗಳ ಪೈಕಿ ಉಡುಪಿ, ಕುಂದಾಪುರ, ಕಾಪು ಹಾಗೂ ಕಾರ್ಕಳ ಹಾಗೂ ಬೈಂದೂರು ವಿಧಾನಸಭಾ ಕ್ಷೇತ್ರಗಳೂ ಕೂಡ ಬಿಜೆಪಿಯ ತೆಕ್ಕೆಯಲ್ಲಿದವೆ ಆದರೇ, ಬೈಂದೂರು ವಿಧಾನಸಭಾ ಕ್ಷೇತ್ರ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟರೇ, ಚಿಕ್ಕಮಗಳೂರಿನ ಐದಕ್ಕೆ ಐದು ವಿಧಾನಸಭಾ ಕ್ಷೇತ್ರಗಳು ಕಾಂಗ್ರೆಸ್‌ ವಶದಲ್ಲಿವೆ, ಇಲ್ಲಿಯೂ ಹಾಗೆ ಚಿಕ್ಕಮಗಳೂರು, ಶೃಂಗೇರಿ, ಮೂಡಿಗೆರೆ, ತರಿಕೆರೆ ವಿಧಾಸನಭಾ ಕ್ಷೇತ್ರಗಳು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಒಳಪಟ್ಟರೇ, ಕಡೂರು ವಿಧಾನಸಭಾ ಕ್ಷೇತ್ರ ಹಾಸನ ಲೋಕಸಭಾ ಕ್ಷೇತ್ರಕ್ಕೆ ಒಳಪಡುತ್ತವೆ. ಆ ಲೆಕ್ಕದಲ್ಲಿ ನೋಡುವುದಾದರೇ, ಉಡುಪಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳು ಬಿಜೆಪಿಯ ವಶದಲ್ಲಿದ್ದರೇ, ಚಿಕ್ಕಮಗಳೂರಿನ ನಾಲ್ಕು ವಿಧಾಸಸಭಾ ಕ್ಷೇತ್ರಗಳು ಕಾಂಗ್ರೆಸ್‌ ವಶದಲ್ಲಿವೆ.

ಅಭ್ಯರ್ಥಿಗಳ ಅಳೆದು ತೂಗಿ ಲೆಕ್ಕ ಹಾಕಿದರೂ ಮತ್ತು ವಿಧಾನಸಭಾ ಕ್ಷೇತ್ರಗಳನ್ನು ಅಳೆದು ತೂಗಿ ಲೆಕ್ಕ ಹಾಕಿದರೂ ಈ ಬಾರಿ ಜಿದ್ದಾಜಿದ್ದಿನ ಹಣಾಹಣಿಯನ್ನು ಉಡುಪಿ ಚಿಕ್ಕಮಗಳೂರು ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷಿಸಬಹುದು ಎಂದು ಹೇಳಲಾಗುತ್ತಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಕ್ಷೇತ್ರವನ್ನು ಪ್ರತಿಷ್ಠೆಯ ಕಣವಾಗಿಸಿಕೊಂಡಿದ್ದು ಈ ಚುನಾವಣೆ ಕೋಟ ಶ್ರೀನಿವಾಸ್ ಪೂಜಾರಿ ಮತ್ತು ಕೊರ್ಗಿ ಜಯಪ್ರಕಾಶ್‌ ಹೆಗ್ಡೆ ಅವರ ನಡುವಿನ ಮೂರನೇ ಚುನಾವಣ ಸಮರಕ್ಕೆ ಸಾಕ್ಷಿಯಾಗಲಿದೆ.

ಕ್ಷೇತ್ರ ಮರುವಿಂಗಡಣೆ ವೇಳೆ ಹಂಚಿ ಹೋಗಿದ್ದ ಹಿಂದಿನ ಬ್ರಹ್ಮಾವರ ವಿಧಾನಸಭಾ ಕ್ಷೇತ್ರದಲ್ಲಿ ಕೋಟ ಶ್ರೀನಿವಾಸ್ ಪೂಜಾರಿ ಹಾಗೂ ಜಯಪ್ರಕಾಶ್ ಹೆಗ್ಡೆ ಅವರು ಎರಡು ಬಾರಿ ಪರಸ್ಪರ ಎದುರಾಳಿಗಳಾಗಿದ್ದರು. 1999 ಮತ್ತು 2004 ರಲ್ಲಿ ಜಯಪ್ರಕಾಶ್ ಹೆಗ್ಡೆ ಅವರು ಪಕ್ಷೇತರ ಅಭ್ಯರ್ಥಿಯಾಗಿ ಬ್ರಹ್ಮಾವರ ವಿಧಾನಸಭಾ ಕ್ಷೇತ್ರದಿಂದ ಜಯಭೇರಿ ಬಾರಿಸಿದ್ದರು. ಎರಡೂ ಬಾರಿ ಕೋಟ ಶ್ರೀನಿವಾಸ್ ಪೂಜಾರಿ ಸ್ಪರ್ಧೆ ಕೊಟ್ಟಿದ್ದರಾದರೂ ಪರಾಜಿತಗೊಂಡು ಅವರು ಮೂರನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಗಿತ್ತು ಎನ್ನುವುದು ಇಲ್ಲಿ ಉಲ್ಲೇಖಾರ್ಹ.

ಇನ್ನು, 2004 ರಲ್ಲಿ ಈಗ  ಕಾಂಗ್ರೆಸ್‌ ನಿಂದ ಜಿಗಿದು ಬಿಜೆಪಿಗೆ ಸೇರ್ಪಡೆಗೊಂಡಿರುವ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಎರಡನೇ ಸ್ಥಾನ ಪಡೆದಿದ್ದರು. ಕ್ಷೇತ್ರ ಅಂದು ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗುತ್ತಿತ್ತು.  ಈಗ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಸುಮಾರು 20 ವರ್ಷಗಳ ನಂತರ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಕರಾವಳಿಯ ರಾಜಕೀಯ ಇತಿಹಾಸದಲ್ಲಿ ತಮ್ಮದೇ ಆದ ಹೆಜ್ಜೆಗುರುತುಗಳನ್ನು ಬಿಟ್ಟಿರುವ ರಾಜಕೀಯ ನಾಯಕರೀರ್ವರು ಮತ್ತೆ ಚುನಾವಣಾ ಕಣದಲ್ಲಿ ಮುಖಾಮುಖಿಯಾಗಿದ್ದಾರೆ.

ಉಡುಪಿ ಜಿಲ್ಲೆಯ ಸ್ಥಾಪನೆಗೆ ಮೂಲ ಕಾರಣೀಕರ್ತರಾದ ಕೊರ್ಗಿ ಜಯಪ್ರಕಾಶ್‌ ಹೆಗ್ಡೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಚುನಾವಣಾ ಕಣದಲ್ಲಿದ್ದರೇ, ಇನ್ನೊಂದೆಡೆ ಮಾಜಿ ಸಚಿವ ಹಾಗೂ ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಬಿಜೆಪಿಯಿಂದ ಸ್ಪರ್ಧೆಗೆ ಇಳಿದಿದ್ದಾರೆ.

ಹೆಗ್ಡೆ ವರ್ಸಸ್‌ ಪೂಜಾರಿ : ಬಲಾಬಲ 

ಒಂದೆಡೆ 1997 ರಲ್ಲಿ ಅವಿಭಜಿತ ಮಂಗಳೂರು ಮತ್ತು ಚಿಕ್ಕಮಗಳೂರು ಉಸ್ತುವಾರಿ ಸಚಿವರಾಗಿ, ಅವರು ಅವಿಭಜಿತ ಮಂಗಳೂರು ಮತ್ತು ಉಡುಪಿಯಿಂದ ಉಡುಪಿ ಜಿಲ್ಲೆ ರಚನೆಗೆ ಕಾರಣರಾದ ಕೊರ್ಗಿ ಜಯಪ್ರಕಾಶ್‌ ಹೆಗ್ಡೆ.

2012-14 ರ ಸಂದರ್ಭದಲ್ಲಿ ಸಂಸದರಾಗಿದ್ದ ವೇಳೆ ಉಡುಪಿ ಹಾಗೂ ಚಿಕ್ಕಮಗಳೂರು  ಶೈಕ್ಷಣಿಕ ಕ್ಷೇತ್ರಗಳ ಪ್ರಗತಿಗೆ ಶ್ರಮಿಸಿದ ಕೀರ್ತಿ ಹೆಗ್ಡೆ ಅವರಿಗೆ ಸಲ್ಲುತ್ತದೆ. ಉಡುಪಿಯಲ್ಲಿ ಮಂಗಳೂರು ವಿವಿಉ ಉಪಕೇಂದ್ರಕ್ಕೆ ಪ್ರಸ್ತಾವನೆಯಿಂದ ಹಿಡಿದು ಉಡುಪಿಯಲ್ಲಿ ಕೇಂದ್ರೀಊಯ ವಿದ್ಯಾಲಯಕ್ಕೆ ಅನುಮೋದನೆ, ಮಂಗಳೂರಿನ ಮಂಗಳ ಗಂಗೋತ್ರಿ ವಿಶ್ವವಿದ್ಯಾಲಯದಲ್ಲಿ ನ್ಯಾನೋ ತಂತ್ರಜ್ಞಾನಕ್ಕೆ ಪ್ರಸ್ತಾವನೆ, ಕುವೆಂಪು ವಿವಿಯಲ್ಲಿ ಆಹಾರ ಸಂಸ್ಕರಣ ತಂತ್ರಜ್ಞಾನಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಜಯಪ್ರಕಾಶ್‌ ಹೆಗ್ಡೆ. ಮಾತ್ರವಲ್ಲದೇ, ಇಲ್ಲಿನ ಜನರು ಜಿಲ್ಲಾಮಟ್ಟದ ಸೇವೆಗಳಿಗಾಗಿ ದೂರದ ಮಂಗಳೂರಿಗೆ ತೆರಳಲು ಕಷ್ಟಪಡುತ್ತಿದ್ದನ್ನು ಅರಿತ ಜಯಪ್ರಕಾಶ್‌ ಹೆಗ್ಡೆ, ಉಡುಪಿಯನ್ನು ಪ್ರತ್ಯೇಕ ಜಿಲ್ಲೆಯನ್ನಾಗಿಸಬೇಕು ಎಂಬ ದೃಷ್ಟಿಯಲ್ಲಿ ರೂಪುರೇಷೆ ತಯಾರಿಸಿ ಅಂದಿನ ಮುಖ್ಯಮಂತ್ರಿ ಜೆ.ಎಚ್‌ ಪಟೇಲ್‌ ಅವರಿಗೆ ಮನವರಿಕೆ ಮಾಡಿ, ಕೆಲವು ನಾಯಕರ ವಿರೋಧದ ನಡುವೆಯೂ ಅನುಮೋದನೆ ಪಡೆದು ಆಗಸ್ಟ್‌ 25 1997ರಂದು ಉಡುಪಿ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಮೀನುಗಾರಿಕಾ ಸಚಿವರಾಗಿದ್ದ ಸಂದರ್ಭದಲ್ಲಿ ನೀಡಿದ ಕೊಡುಗೆ, ಸಂಸದರಾಗಿದ್ದಾಗ ಕೃಷಿ ಕ್ಷೆತ್ರಕ್ಕೆ ನೀಡಿದ ಕೊಡುಗೆ ಗಮನಾರ್ಹವಾದದ್ದು. ೨೦೨೩-೧೪ ನೇ ಸಾಲಿನಲ್ಲಿ ಕರ್ನಾಟಕ ನೀರಾವರಿ ನಿಗಮದಿಂದ ವಾರಾಹಿ ಜಲಾನಯನ ಪ್ರದೇಶಕ್ಕೆ ಅನುದಾನ ನೀಡಿರುವುದು ಸೇರಿ, ಉಭಯ ಜಿಲ್ಲೆಗಳ ಪ್ರಮುಖ ಬೆಳೆಯಾದ ಅಡಿಕೆ ಬೆಳೆಗೆ ಹೆಗ್ಡೆ ನೀಡಿದ ಕೊಡುಗೆ ಪಾರ. ೧೬,೦೦೪ ರೈತರಿಗೆ ಒಟ್ಟು ೭.೮೫ ಕೋಟಿ ರೂ ವಿಶೇಷ ಪ್ಯಾಕೇಜ್‌ ನಲ್ಲಿ ೨,೭೫೦ ರೈತರಿಗೆ ಒಟ್ಟು ೫೫ ಲಕ್ಷ ಕೊಳೆರೋಗ ಪರಿಹಾರ ಧನ ನೀಡಿರುವುದು ಮತ್ತು ಸುಸ್ತಿ ಸಾಲ ಮರುಪಾವತಿಯ ಅವಧಿಯನ್ನು ಮರುಪಶೀಲನೆ ಮಾಡಲು ಮನವಿ ಮಾಡಿಕೊಂಡು ದೀರ್ಘಾವಧಿ ಅವಕಾಶ ಮಾಡಿಕೊಟ್ಟಿರುವುದು ಇಲ್ಲಿನ ಅಡಿಕೆ ಬೆಳೆಗಾರರು ಮರೆತಿರಲಿಕ್ಕಿಲ್ಲ. ಜಿಲ್ಲೆಯಲ್ಲಿ ಸೇತುವೆಗಳನ್ನು ಕಟ್ಟಿಸಿದರು, ಸುಸಜ್ಜಿತ ರಸ್ತೆಗಳ ನಿರ್ಮಿಸಿದರು ಅಭಿವೃದ್ಧಿಗೆ ಹೊಸ ಭಾಷ್ಯ ಬರೆದ ನಾಯಕ ಎಂದು ಅವರು ಗುರುತಿಸಿಕೊಂಡರು. ಉಡುಪಿ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಮಹತ್ತರ ಸೇವೆ ಸಲ್ಲಿಸಿ ಉಭಯ ಜಿಲ್ಲೆಗಳಲ್ಲೂ ಜನಪ್ರೀತಿ ಗಳಿಸಿದ ಹೆಗ್ಡೆ ಅವರು ಮತ ತಂದು ಕೊಡಬಹುದು ಎನ್ನುವುದು ಕಾಂಗ್ರೆಸ್‌ ಲೆಕ್ಕಚಾರ.

ಇನ್ನೊಂದೆಡೆ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸಮಾಜ ಕಲ್ಯಾಣ ಸಚಿವರಾಗಿ ಗಮನ ಸೆಳೆದಿದ್ದರು. ಮೂರು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದವರು. ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಸಾರಿಗೆ ಸಚಿವರಾಗಿದ್ದರು. ನ್ನ ನಿರರ್ಗಳ ಮಾತಿನಿಂದಲೇ ಜನಪ್ರಿಯರಾದವರು. ವಿಧಾನಪರಿಷತ್ ಸದಸ್ಯರಾಗಿದ್ದುಕೊಂಡೇ ಮಂತ್ರಿಯಾದ ಅದೃಷ್ಟಶಾಲಿ. ಹಾಗೆಯೇ ವಿಧಾನಪರಿಷತ್ ವಿಪಕ್ಷ ನಾಯಕರಾಗಿ ತನ್ನ ಜವಾಬ್ದಾರಿಯನ್ನು ಸಮರ್ಥವಾಗಿಯೇ ನಿರ್ವಹಿಸಿಕೊಂಡು ಬಂದವರು ಶ್ರೀನಿವಾಸ ಪೂಜಾರಿ. ವಿಧಾನಪರಿಷತ್ ಸದಸ್ಯರಾಗಿ ಸದನದಲ್ಲಿ ಪರಿಣಾಮಕಾರಿ ಚರ್ಚೆಗಳ ಮೂಲಕ ಗಮನ ಸೆಳೆಯುತ್ತಿದ್ದ ಅವರು, ಬುದ್ಧ್ದಿವಂತರ ಚಾವಡಿ ಎಂದು ಕರೆಸಿಕೊಳ್ಳುವ ವಿಧಾನ ಪರಿಷತಿನ ಪ್ರತಿಪಕ್ಷ ದ ನಾಯಕ ಸ್ಥಾನ ಅಲಂಕರಿಸುವವರೆಗೆ ಕೋಟ ಶ್ರೀನಿವಾಸ್‌ ಪೂಜಾರಿ ಭಾರತಿಯ ಜನತಾ ಪಕ್ಷ ಕ್ಕೆ ತೋರಿದ ನಿಷ್ಠೆ,ಅಸ್ಖಲಿತ ವಾಕ್‌ ಚಾತುರ್ಯದ ಜತೆಗೆ ಸಜ್ಜನ ರಾಜಕಾರಣ ಅವರನ್ನು ಎತ್ತರಕ್ಕೆ ಏರಿಸಿದೆ.

ಬಂಗಾರಪ್ಪ ಮುಖ್ಯಮಂತ್ರಿಯಾಗಿ ಜಿಲ್ಲೆಗೆ ಭೇಟಿ ನೀಡಿದಾಗಿ ಜಿಲ್ಲೆಯ ಮೂರ್ತೆದಾರರನ್ನು ಒಗ್ಗೂಡಿಸಿ ಮೂರ್ತೆದಾರರ ಸಮಸ್ಯೆಗಳ ವಿರುದ್ಧ ಮುಖ್ಯಮಂತ್ರಿಯ ಗಮನಸೆಳೆದದ್ದು ಅಂದು ಜಿಲ್ಲೆಯಲ್ಲಿ ದೊಡ್ಡ ಸುದ್ದಿಯಾಗಿ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಹೆಸರು ಬರುವುದರ ಜತೆಗೆ ಕೋಡಿ ಹೊಸಬೇಂಗ್ರೆ ಭಾಗದಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ತಲೆದೋರಿದಾಗ ಆ ಭಾಗದ ಮಹಿಳೆಯರನ್ನು ಸಂಘಟಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಕೊಡಪಾನ ತಂದು ರಾಶಿ ಹಾಕಿ ಆಡಳಿತದ ಬೆವರಿಳಿಸಿದ್ದರು. ಪಂಚಾಯಿತಿ ಸದಸ್ಯರ ಗೌರವಧನ ಹೆಚ್ಚಿಸುವಲ್ಲಿ ಶ್ರಮಿಸಿದವರು. ಸರಳ ವ್ಯಕ್ತಿತ್ವದ ಕೋಟ ಶ್ರೀನಿವಾಸ ಪೂಜಾರಿ ಬಿಲ್ಲವ ಸಮುದಾಯಕ್ಕೆ ಸೇರಿದವರು. ಉಡಪಿಯಲ್ಲಿ ಪ್ರಭಾವಿ ಸಮುದಾಯಗಳಲ್ಲಿ ಒಂದಾದ ಬಿಲ್ಲವ ಸಮುದಾಯದ ಮತಗಳನ್ನು ಕೋಟ ಶ್ರೀನಿವಾಸ ಪೂಜಾರಿ ಅವರು ಸೆಳೆಯಬಹುದು ಎನ್ನುವುದು ಬಿಜೆಪಿಯ ಲೆಕ್ಕಚಾರವಿದೆ.

ಇನ್ನು, ಇಬ್ಬರೂ ನಾಯಕರು ತಮ್ಮದೇ ಆದ ಜನಪ್ರೀಯತೆಯನ್ನು ಗಳಿಸಿಕೊಂಡಿದ್ದಾರೆ. ಜಯಪ್ರಕಾಶ್‌ ಹೆಗ್ಡೆ ಅವರಿಗೆ ಉಭಯ ಜಿಲ್ಲೆಗಳಲ್ಲೂ ಹೆಸರಿದೆ, ಆದರೇ ಶ್ರೀನಿವಾಸ ಪೂಜಾರಿ ಅವರಿಗೆ ಉಡುಪಿ ಬಿಟ್ಟರೇ, ಚಿಕ್ಕಮಗಳೂರು ಇಲ್ಲೆ ಅಷ್ಟೊಂದು ಪರಿಚಯವಿಲ್ಲ. ಉಡುಪಿ ಬಿಜೆಪಿ ವಲಯದಲ್ಲೂ ಶ್ರೀನಿವಾಸ ಪೂಜಾರಿ ಅಭ್ಯರ್ಥಿ ಆಗಿರುವುದಕ್ಕೆ ಅಷ್ಟೊಂದು ಸಮಾಧಾನದ ವಾತಾವರಣವಿಲ್ಲ. ಮೋದಿ, ರಾಮ ಮಂದಿರದ ಉನ್ಮಾದ, ಹಿಂದುತ್ವದ ಹೆಸರಿನಲ್ಲಿ ಶ್ರೀನಿವಾಸ ಪೂಜಾರಿ ಮತ ಪ್ರಚಾರದಲ್ಲಿದ್ದಾರೆ. ಹೆಗ್ಡೆ ಅವರು ಜಿಲ್ಲೆಗಾಗಿ ಹೆಚ್ಚು ಕೆಲಸ ಮಾಡಿದವರು. ತಾನು ಮಾಡಿದ ಅಭಿವೃದ್ಧಿ ಕೆಲಸಗಳನ್ನೇ ಮುಂದಿಟ್ಟುಕೊಂಡು ಪ್ರಚಾರದಲ್ಲಿ ಅವರು ತೊಡಗಿದ್ದಾರೆ. ಜೊತೆಗೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಪ್ರಭಾವ ಅವರ ಜೊತೆಗಿದೆ.

ಉಡುಪಿ ಚಿಕ್ಕಮಗಳೂರು ಎರಡೂ ಜಿಲ್ಲೆಗಳು ಹಿಂದುತ್ವದ ಅಲೆಯಲ್ಲಿ ಮುಳುಗಿದ ಜಿಲ್ಲೆಗಳು. ಉಡುಪಿಯಲ್ಲಿ ಆ ಅಲೆ ಇನ್ನೂ ಕಡಿಮೆ ಆಗಿಲ್ಲ. ಚಿಕ್ಕಮಗಳೂರಿನಲ್ಲಿ ಐದಕ್ಕೆ ಐದೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಬಂದಿರುವುದಿಂದ ಬಿಜೆಪಿ ಹಾಗೂ ಅದರ ಸಿದ್ದಾಂತ ತುಸು ದುರ್ಬಲಗೊಂಡಿದೆ ಎಂಬಂತೆ ಕಾಣಿಸುತ್ತಿದೆ. ಉಭಯ ಜಿಲ್ಲೆಗಳಲ್ಲಿ  ಉಭಯ ಪಕ್ಷಗಳಿಗೂ ನಿಷ್ಠಾವಂತ ಮತದಾರರಿದ್ದಾರೆ. ಉಡುಪಿಯಲ್ಲಿ ಈ ಭಾರಿ ಪಕ್ಷಕ್ಕಿಂತ ಅಭ್ಯರ್ಥಿಗಳನ್ನೇ ಆಯ್ಕೆ ಮಾಡುತ್ತಾರೆ ಎಂಬ ವಾತಾವರಣವಿದೆ. ಉಡುಪಿಯಲ್ಲಂತೂ ಬಂಟ್ಸ್‌ ವರ್ಸಸ್‌ ಬಿಲ್ಲವ ಎಂಬ ಹಾಗೆ ಆಗುವುದು ನಿಶ್ಚಿತ. ಚಿಕ್ಕಮಗಳೂರಿನಲ್ಲಿ ಗೆದ್ದ ಕಾಂಗ್ರೆಸ್‌ ಶಾಸಕರೆಲ್ಲರೂ ಭಾರಿ ದೊಡ್ಡ ಅಂತರದಲ್ಲಿ ಗೆದ್ದವರಲ್ಲವಾಗಿದ್ದರಿಂದ ಇನ್ನೂ ಸ್ವಲ್ಪ ಗೊಂದಲ ಎಂಬಂತೆ ಕಾಣಿಸುತ್ತಿದೆ. ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗಳು ಮತ್ತು ರಾಮ ಮಂದಿರ ಯಾವ ರೀತಿ ಪರಿಣಾಮಕಾರಿ ಆಗಿ ಫಲಿಸುತ್ತವೆ ಎನ್ನುವುದು ಕುತೂಹಲವಾಗಿದೆ.

-ಶ್ರೀರಾಜ್‌ ವಕ್ವಾಡಿ.

 

 

 

 

 

 

 

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!