Sunday, September 8, 2024

ಯಕ್ಷಗಾನ ಕಲಾ ಪ್ರೌಢಿಮೆಯ ಅಭಿಜಾತ ಅಭಿನೇತ್ರಿ ಪ್ರಿಯಾಂಕ ಕೆ.ಮೋಹನ್

 

ಕಲಾಮಾತೆ ಹಲವರನ್ನು ಕರ ಬೀಸಿ ಕರೆಯಬಹುದಾದರೂ ಬರಸೆಳೆದು ಆಲಂಗಿಸಿಕೊಳ್ಳುವುದು ಕೆಲವರನ್ನು ಮಾತ್ರ. ಎಳವೆಯಿಂದಲೇ ಕಲೆ ಬದುಕಿನಲ್ಲಿ ಸ್ಥಾಪಿತವಾಗುತ್ತಾ, ಮುಂದೆ ಹಂತ ಹಂತವಾಗಿಗುರು ಮುಖೇನ ಸಿದ್ಧಿಯಾಗುತ್ತದೆ. ಸ್ವಯಂ ಪರಿಶ್ರಮ ಪ್ರತಿಭೆಯಲ್ಲಿ ಪರಿಶೋಭಿಸುತ್ತದೆ. ಜನ್ಮಜಾತ ಪ್ರತಿಭಾಸಿದ್ಧಿಯ ಹಿನ್ನಲೆಯಿದ್ದರಂತೂ ಯಾವುದೇ ಕಲೆ ಬಾಳರಂಗದಲ್ಲಿ ಸಮೃದ್ಧವಾಗಿ ಕಳೆಗಟ್ಟುತ್ತದೆ. ಈ ಮಾತಿಗೆ ಯಕ್ಷಗಾನ ಕಲೆ ಹಾಗೂ ಅದರೊಳಗಿನ ಸಾಧಕಿ ಪ್ರಿಯಾಂಕ ಕೆ.ಮೋಹನ್ ಹೊರತಲ್ಲ.

ಪ್ರಿಯಾಂಕ ಕೆ.ಮೋಹನ್ ಎಂದಾಗ ಸ್ವಚ್ಛ, ಸುಂದರ ಯಕ್ಷಗಾನ ಕಲಾ ಪ್ರೌಢಿಮೆಯ ಅಭಿಜಾತ ಅಭಿನೇತ್ರಿಯ ಕಲಾತ್ಮಕ ಚಿತ್ರಣ ಯಕ್ಷ ರಸಿಕರ ಕಣ್ಮಣಿಗಳಲ್ಲಿ ಚಿತ್ರಿತವಾಗುತ್ತದೆ.

ಯಕ್ಷಗಾನ ಕಲೆ ಪ್ರಿಯಾಂಕ ಅವರಿಗೆ ಅನ್ಯಾದೃಶ ಆಸಕ್ತಿ ಆರಾಧನಾತ್ಮಕವಾದ ಶೃದ್ಧಾ ಬದ್ಧತೆಯಲ್ಲಿ ಮೈ ಮನಸ್ಸನ್ನು ಗಾಢವಾಗಿ ಆವರಿಸಿತು. ಮನೆಯ ಸುಸಂಸ್ಕೃತ ಕಲಾ ವಾತವರಣ ಸುಯೋಗ್ಯ ಸಾಧಕ ಕಲಾಭಿನೇತ್ರಿಯ ಶೃಂಗ ಸಾರ್ಥಕ್ಯದ ಪಯಣಕ್ಕೆ ಸುಪುಷ್ಠಿ ಕರುಣಿಸಿತು.

ನಿವೃತ್ತ ಕೆನರಾ ಬ್ಯಾಂಕ್‌ ಅಧಿಕಾರಿ ಬೆಂಗಳೂರಿನ ಪ್ರತಿಷ್ಠಿತ ಕಲಾಸಂಸ್ಥೆ ಯಕ್ಷದೇಗುಲದ ರೂವಾರಿ ಕೆ.ಮೋಹನ್ ಹಾಗೂ ವೀಣಾ ಮೋಹನ್ ದಂಪತಿಯ ಸುಕುಮಾರಿಯೇ ಈ ಪ್ರಿಯಾಂಕ. ಇವರು ಹುಟ್ಟಿ ಬೆಳೆದದ್ದು ಮಾಯಾನಗರಿ ಬೆಂಗಳೂರಿನಲ್ಲಾದರೂ ಇವರ ಜೀವ-ಭಾವದ ಚಾರುತಂತಿಯಲ್ಲಿ ಯಕ್ಷಗಾನವೆಂಬ ಕರಾವಳಿಯ ಕಲೆಯ ಗಂಧರ್ವ ಗುಣ ಅನುಗಾಲವೂ ಅನುರಣಿಸುತ್ತಿದೆ.

ಧಾವಂತದ ಬದುಕಿನ ಮಾಯಾಪುರಿ ಬೆಂಗಳೂರಿನಲ್ಲಿ ಅಪ್ಪಟ ದೇಸಿ ಕಲೆಯ ದೀವಿಗೆಯನ್ನು ನಾಲ್ಕು ದಶಕಗಳ ಹಿಂದೆಯೇ ಬೆಳಗಿದ ಮೋಹನ್ ಯಕ್ಷದೇಗುಲ ಸಂಸ್ಥೆಯ ಸಂಸ್ಥಾಪಕರಾಗಿ ಯಕ್ಷಗಾನಕ್ಕೊಂದು ಪ್ರತಿಷ್ಠಿತ ಮಾನ್ಯತೆ ನೀಡಿದ್ದು ಇತಿಹಾಸ. ಇಂತಹ ಯಕ್ಷದೇಗುಲದಲ್ಲಿ ಆಟವಾಡುತ್ತ ಬೆಳೆದ ಕಿಶೋರಿ ಪ್ರಿಯಾಂಕ ಕಲೆಯೊಂದರ ತಾಯಿ ಬೇರಿನ ಸತ್ವ-ತತ್ವಗಳಲ್ಲಿ ಬೆಳೆದು ಬೆಳಗಿದರು. ಯಕ್ಷಗಾನದ ಪಾರಂಪರಿಕ ಗುರು ಗರಡಿಯ ಹಿನ್ನಲೆಯಿಂದ ಹಾಗೂ ಹೆತ್ತವರ ನಿರಂತರ ಪ್ರೋತ್ಸಾಹದಿಂದ ಪ್ರಿಯಾಂಕ ಯಕ್ಷಗಾನದ ಒಳ-ಹೊರಗೂ ಎತ್ತರ-ಬಿತ್ತರಗಳನ್ನು ಹಾರ್ದಿಕವಾಗಿ ಗ್ರಹಿಸಿ, ಬಹುಬೇಗನೇ ಕಲಾವಿದೆಯಾಗಿ ಗುರುತಿಸಿಕೊಂಡು ಉಚ್ಛ ಯಕ್ಷಯಶಾದ್ರಿಯೇರುವಲ್ಲಿ ನಿಚ್ಚಳ ಗೆಲುವು ಕಂಡರು.

ಕಲೆಯೊಂದರ ಪ್ರತಿಭೋನ್ನತಿಯ ಪ್ರಕಟಣೆಯೆಂದರೆ ವ್ಯಕ್ತಿ ನಿಷ್ಟವಾದ ಪ್ರಗತಿ, ಪುರೋಗತಿಯ ವಿಲಾಸವಾಗಿಯೇ ಕಾಣುವುದುಂಟು, ಆದರೆ ಅದೇ ಕಲೆಯನ್ನು ಅಕ್ಷಯವಾಗಿಸುವುದು ಗುರುತನದ ಗರಿಮೆಯಲ್ಲಿ. ಇದು ಕಲಾ ಮಾಧ್ಯಮವೊಂದರ ಮಹಾ ವಿಕಾಸಕ್ಕೆ ಕಾರಣ. ಪ್ರಿಯಾಂಕ ಕೆ.ಮೋಹನ್ ಕೇವಲ ತಾನು ಮಾತ್ರ ಕಲಾವಿದೆಯಾಗಿ ತನ್ನ ಕಲಾವಂತಿಕೆಗೆ ಸೀಮಾರೇಖೆ ಎಳೆದುಕೊಳ್ಳಲಿಲ್ಲ. ಕಲಿತಕಲೆಯು ಸಾವಿರ ಸಾವಿರ ಚಿಗುರೊಡೆಯಬೇಕೆಂಬ ಧ್ಯೇಯ ಅವರನ್ನು ಒಬ್ಬ ಸರ್ವಶ್ರೇಷ್ಠ ಗುರುವಾಗಿ ರೂಪಿಸಿತು. ಕುಬೇರತ್ವಕ್ಕೆ ವರವಾಗುವಂತಹ ನೂರಾರು ಅವಕಾಶಗಳು ಅವರನ್ನು ನಿರಂತರ ಕೈಬೀಸಿ ಕರೆಯುತ್ತಿದ್ದರೂ ಅವರಿಗೆ ಯಕ್ಷದೇಗುಲ ನಿಜಾರ್ಥದಲ್ಲಿ ಯಕ್ಷದೇಗುಲವೇ ಆಯಿತು. ಯಕ್ಷದೇಗುಲ ಸಂಸ್ಥೆಯನ್ನು ಮುನ್ನಡೆಸುವ ಮಾತೃ ಸ್ಥಾನವೇ ಬಹು ಪ್ರಿಯವಾಯಿತು.

ಕಲೆಯ ಚಿಗುರುಗಳಿಗೆ ಬೋಧನೆ, ಪ್ರೋತ್ಸಾಹ ರಂಗಾವಕಾಶಗಳಿಂದ ಪ್ರಿಯಾಂಕ ಸಾರ್ಥಕ ಫಲಕಂಡರು. ಮಹಾನಗರದ ಸಾವಿರಾರು ಚಿಣ್ಣರಿಗೆ, ಮಹಿಳೆಯರಿಗೆ ಯಕ್ಷಕಲೆಯನ್ನು ಕಲಿಸಿ, ಧನ್ಯತೆ ಪಡೆದ ಇವರು ತನ್ನ ದುಡಿಮೆಯ ಬಹುಪಾಲನ್ನು ವಿನಿಯೋಗಿಸಿ ಕಲಾಪ್ರಪಂಚದಲ್ಲಿ ಮಾದರಿ ಕಲಾ ಮಾನಿನಿಯಾದರು. ಯಕ್ಷಗಾನ ರಂಗಭೂಮಿಯ ಪಾರಂಪರಿಕ ವಿದ್ಯಾಬಲದ ಗಟ್ಟಿತನ ಇವರಲ್ಲಿ ಸಮರ್ಥವಾಗಿರುವುದರಿಂದ ಕಲಾಬೋಧನೆಯೆಂಬುದು ಸಂದರ್ಭಕ್ಕೆ ಸಂತೆಯಲ್ಲಿ ನೇಯ್ದ ಮೂರು ಮೊಳವಾಗದೆ, ಕಲಾಭ್ಯಾಸಿಗಳು ಒಬ್ಬ ಸುಸಮರ್ಥ ಗುರುವಿನಿಂದ ಏನನ್ನು ಪಡೆಯಬೇಕೋ ಅದನ್ನೇ ಅವರಿಂದ ಪಡೆದುಕೊಂಡರು.

ತನ್ನ ಏಳನೇ ವಯಸ್ಸಿನಲ್ಲಿಯೇ ಗೆಜ್ಜೆಕಟ್ಟಿ ಹೆಜ್ಜೆ ಹಾಕಿದ ಪ್ರಿಯಾಂಕ ಯಕ್ಷ ಮಣಿನೂಪುರವನ್ನು ಸಡಗರದಿಂದ ಅನುರಣಿಸುತ್ತ ಮನ್ನಡೆದರು. ರಂಗ ಮಂಟಪದ ಸುಯೋಗ್ಯ ರಂಗ ನಾಯಕಿಯಾಗಿ ಕಂಗೊಳಿಸಿದರು. ನಿರ್ವಹಣಾ ಭೂಮಿಕೆಗಳನ್ನು ಸಚೇತನ ರಂಗಶಿಲ್ಪಿಗಳನ್ನಾಗಿಸಿ, ಪ್ರಾಣಪ್ರತಿಷ್ಠೆಯೊಂದಿಗೆ ರಂಗಲೋಕದಲ್ಲಿ ಪ್ರತಿಷ್ಠಾಪಿಸಿದರು.

ಇಂಜಿನಿಯರ್ ಪದವಿ ಪಡೆದ, ಪ್ರಸ್ತುತ ವೃತ್ತಿ ಶಿಕ್ಷಣಕ್ಕೆ ಸಂಬಂಧಪಟ್ಟ ಶಿಕ್ಷಾಲೋಕಮ್ ಸಂಸ್ಥೆಯಲ್ಲಿ ಉದ್ಯೋಗಿಯಾದ ಪ್ರಿಯಾಂಕ, ಪತಿ ಸಹಾಯಕ ಆಯುಕ್ತರಾದ ಗಿರೀಶರೊಂದಿಗೆ, ಮಗಳು ಶಾರ್ವಿಯೊಂದಿಗೆ ಬಾಳರಥದಲ್ಲಿ ಸಾಗುತ್ತಿದ್ದರೂ ಯಕ್ಷದೇಗುಲ ಅವರ ಕಲೋಪಾಸನೆಯ ತಪೋ ಮಂದಿರವಾಗಿದೆ. ಬಿಡುವಿಲ್ಲದ ಬದುಕಿನಲ್ಲಿ ಕಲೆಗಾಗಿಯೇ ಜೀವನದ ಬಹುಪಾಲು ಸಮಯವನ್ನು ವ್ಯಯಿಸುತ್ತ ಈಗಲೂ ಅದೇ ಹಿಂದಿನ ಕೈಂಕರ್ಯದಲ್ಲಿ ನಡೆಯುತ್ತಿರುವುದು ಮಹಾನಗರದ ಕಲಾ ಜೀವವೊಂದರ ಜೀವನದ ಮಹಾ ಬೆರಗು ಎಂದರೆ ಅತಿಶಯದ ಮಾತಲ್ಲ.

ತನ್ನೊಳಗಿನ ಕಲೆಯನ್ನು ತನ್ನ ಮಗಳಿಗೂ ದಾಟಿಸುತ್ತಾ, ಮುಂದಿನ ತಲೆಮಾರಿಗೂ ವಿಸ್ತರಿಸುತ್ತಾ ಸಾಗುವ ಪ್ರಿಯಾಂಕ ಯಕ್ಷ ಮಾತೆಯ ಕೊರಳ ಹಾರದ ಮಣಿಪದಕವಾಗಿ ಕಂಗೊಳಿಸುತ್ತಾರೆ. ಯಕ್ಷಗಾನ ಕಲೆಯನ್ನು ಉಳಿಸಿ, ಬೆಳಸಿ ಎಂಬ ಧ್ಯೇಯಧೋರಣೆ ಕೇವಲ ಭಾಷಣ, ಪೋಷಣೆಗಳಷ್ಟೇ ಸೀಮಿತವಾಗಿ ಬಿಡುವ ಸಂದರ್ಭದಲ್ಲಿ ಪ್ರಿಯಾಂಕ ಕೆ.ಮೋಹನ್‌ರಂತಹ ಮೌನ ಸಾಧಕರ ಕಲೆಯೊಳಗಿನ ತಪಸ್ಸು ಕಂಡ ಕಣ್ಣುಗಳಿಗಷ್ಟೇ ಅರ್ಥವಾದೀತು.

ಪ್ರಿಯಾಂಕ ಕೆ.ಮೋಹನ್ ಅಕ್ಷಯಕಲೆಯ ಮಹಾನ್ ಕಲಾವಿದೆ ಮಾತ್ರವಲ್ಲ ಅವರೊಬ್ಬ ಭರತನಾಟ್ಯದ ಸಶಕ್ತ ಕಲಾ ಪ್ರವೀಣೆಯೂ ಹೌದು. ಅದಮ್ಯ ಉತ್ಸಾಹದ ಕ್ರೀಯಾಶೀಲ, ಪಾದರಸ ಸದೃಶ ವ್ಯಕ್ತಿತ್ವದ ಇವರಿಗೆ ದೈವದತ್ತವಾದ ಕಲೆ ತನ್ನ ಬದುಕನ್ನು ಸರ್ವಕಾಲಿಕವಾಗಿ ಆವರಿಸಿಕೊಳ್ಳುತ್ತಿದ್ದರೂ ಅದಕ್ಕಿಂತ ಹೊರತಾದ ಬದುಕಿನ ಚಿತ್ರಣ ಕ್ಷಣಮಾತ್ರಕ್ಕೂ ಮೈ-ಮನಸ್ಸಿನಲ್ಲಿ ಚಿತ್ರಿತವಾಗಿಲ್ಲ.

ಇತ್ತ ಸಂಸಾರ, ಅತ್ತ‌ಉದ್ಯೋಗ, ಇವೆರಡರ ಮಧ್ಯೆ ಹೆಣ್ಣುಮಗಳೋರ್ವಳು ಇಕ್ಕೆಡೆಗಳಲ್ಲೂ ನ್ಯಾಯೋಚಿತ ನಿಭಾವಣೆಯಲ್ಲಿ ಸಾಗಬೇಕಾದ ಅನಿವಾರ್ಯತೆಯಲ್ಲಿಯೂ ಬದುಕಿಗಂಟಿದ ಯಕ್ಷಗಾನದಲ್ಲಿ ಸರ್ವಾಂಗೀಣ ಸಾಧಕಿಯಾಗಿ, ಸಂಘಟಕಿಯಾಗಿ ನಡೆಯುವುದಿದೆಯಲ್ಲ ಅದು ನಿಜಕ್ಕೂ ವಿಸ್ಮಯವೇ ಸರಿ.

ನಿಸ್ವಾರ್ಥ ಸಾಧಕಿಯಾಗಿ ಯಕ್ಷಲೋಕವನ್ನು ಬೆಳಗುತ್ತಿರುವ ಪ್ರಿಯಾಂಕ ಮೋಹನ್ ಅವರ ಕಲಾ ಕೈಂಕರ್ಯಕ್ಕೆ ನೂರಾರು ಪ್ರಶಸ್ತಿ, ಗೌರವಗಳು ಪ್ರಾಪ್ತಿಸಲಿ. ಕಲಾಗೌರವದಿಂದ ಕಲಾಮಾನಿನಿಯ ಸಿರಿಮುಡಿಯ ಸುಮಮಾಲೆ ಪರಿಮಳಿಸಲಿ. ನಿತ್ಯೋಲ್ಲಾಸದ ನವ್ವಾಲೆ ನವೋತ್ಸಾಹದಿಂದ ನುರ್ಗಾಲವೂ ನಲಿದಾಡಲಿ.

ಲೇಖನ-ಪ್ರಸಾದ್ ಕುಮಾರ್ ಮೊಗೆಬೆಟ್ಟು
ಯಕ್ಷಗಾನ ಪ್ರಸಂಗಕರ್ತರು, ಯಕ್ಷಗುರು

ಚಿತ್ರ:ಕೋಟ ಸುದರ್ಶನ ಉರಾಳ ಹಂದಟ್ಟು ಕೋಟ

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!